ಕರ್ನಾಟಕದ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಗಲಿಗೆ ಕಠಿಣ ಕೆಲಸಗಳೇ ಬಿದ್ದಿವೆ. ಇಷ್ಟು ವರ್ಷಗಳಿಂದ ಅತ್ಯಂತ ಕೆಟ್ಟ ಸಮಯವನ್ನೆದುರಿಸಿದ ರಾಜ್ಯವನ್ನು ಅವರು ಸರಿದಾರಿಗೆ ತರುವುದು ದೊಡ್ಡ ಸವಾಲೇ ಸರಿ. ಅಲ್ಲದೆ ಸಹಾಯಕ್ಕಾಗಿ ಅಂಗಲಾಚುತ್ತಿರುವ ರಾಜ್ಯ ರಾಜಧಾನಿ ಬೆಂಗಳೂರಿನ ನಿರ್ವಹಣೆಯಂತೂ ಇನ್ನೂ ಕಠಿಣ ಸವಾಲು. ಸಾಫ್ಟ್‌ವೇರ್ ತಂತ್ರಜ್ಞಾನದ ಮೂಲಕ ರಾಜ್ಯಕ್ಕೆ ಹಿರಿಮೆ ಮತ್ತು ಹಣವನ್ನು ತಂದುಕೊಟ್ಟ ಬೆಂಗಳೂರು ಈಗ ಬಣ್ಣ ಕಳೆದುಕೊಳ್ಳುತ್ತಿದೆ. ನಗರದ ವೇಗಕ್ಕೆ ತಕ್ಕಂತೆ ಮೂಲಸೌಕರ್ಯಗಳ ಅಭಿವೃದ್ಧಿಯಾಗುತ್ತಿಲ್ಲ. ಇಕ್ಕಟ್ಟಿನ ರಸ್ತೆಗಳಲ್ಲಿ ದಿನದ 24 ಗಂಟೆಯೂ ಕಿಕ್ಕಿರಿದು ತುಂಬಿರುವ ಟ್ರಾಫಿಕ್, ವಿದ್ಯುತ್ ಮತ್ತು ನೀರಿನ ಅಭಾವ, ಅಸಮರ್ಪಕ ಸಾರ್ವಜನಿಕ ಸಾರಿಗೆ, ಕುಸಿದ ಕಾನೂನು ವ್ಯವಸ್ಥೆ ಮತ್ತು ಘನ ತ್ಯಾಜ್ಯ ವಿಲೇವಾರಿಯಲ್ಲಿನ ವೈಫಲ್ಯಗಳೆಲ್ಲವೂ ಐಟಿ ಸಿಟಿಗೆ ಶಾಪವಾಗಿವೆ. ಇದು ಸಾಲದೆಂಬಂತೆ ನಾಗರಿಕ ಸಂಸ್ಥೆಗಳ ನಡುವಿನ ಸಮನ್ವಯದ ಕೊರತೆ ಬೇರೆ.
ಅದಾಗ್ಯೂ, ಹಿಂದೆ ಬಹುತೇಕ ರಾಜಕಾರಣಿಗಳಿಗೆ ಬೆಂಗಳೂರನ್ನು ಬೈಯುವುದೇ ಒಂದು ಚಟವಾಗಿಬಿಟ್ಟಿತ್ತು. ಹೀಗೆ ಮಾಡುವ ಮೂಲಕ ರಾಜ್ಯದ ಉಳಿದ ಭಾಗಗಳ, ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಪ್ರದೇಶದ ಜನರ ವಿಶ್ವಾಸ ಗಳಿಸಬಹುದು ಎನ್ನುವುದು ಅವರ ಮೌಢ್ಯವಾಗಿತ್ತು. ಸಿದ್ದರಾಮಯ್ಯ ಈ ಹಳ್ಳಕ್ಕೆ ಬೀಳದಂತೆ ಎಚ್ಚರಿಕೆ ವಹಿಸಬೇಕಿದೆ. ಸಿದ್ದರಾಮಯ್ಯನವರಿಗೆ ಯಾವ ಕಾರಣಕ್ಕಾಗಿ ಬೆಂಗಳೂರನ್ನು ನಿರ್ಲಕ್ಷಿಸುವುದು ಸಾಧ್ಯವಿಲ್ಲ ಎಂಬುದಕ್ಕೆ ಇಲ್ಲೆರಡು ಕಾರಣಗಳಿವೆ:
- ರಾಜ್ಯದ ಒಟ್ಟಾರೆ ಆದಾಯದಲ್ಲಿ 50 ಪ್ರತಿಶತ ಪಾಲು ಬೆಂಗಳೂರಿನಿಂದ ಉದ್ಭವವಾಗುತ್ತದೆ. ಈಗಂತೂ ರಾಜ್ಯದ ಆರ್ಥಿಕ ಸ್ಥಿತಿ ತುಸು ಹದಗೆಟ್ಟಿದೆ. ಹಾಗಾಗೇ 'ಚಿನ್ನದ ಮೊಟ್ಟೆಯಿಡುವ ಕೋಳಿಯನ್ನು ಅಷ್ಟು ಸುಲಭವಾಗಿ ಕಡೆಗಣಿಸುವುದಕ್ಕೆ ಸಾಧ್ಯವಿಲ್ಲ' ಎಂದಿದ್ದಾರೆ ಸಿದ್ದು. ಬಂಡವಾಳ ಹೂಡಿಕೆದಾರರ, ಅದರಲ್ಲೂ ಐಟಿ ದೈತ್ಯರ ಗಮನವನ್ನು ನಾವು ಬೆಂಗಳೂರಿನತ್ತ ಸೆಳೆಯಬೇಕಾಗಿದೆ. ಉತ್ತಮ ಮೂಲಭೂತ ಮತ್ತು ಪೌರ ಸೌಕರ್ಯಗಳು ಹೂಡಿಕೆದಾರರನ್ನು ಆಕರ್ಷಿಸುತ್ತವೆ. ಬೆಂಗಳೂರಿನಿಂದ ಒಳ್ಳೆಯ ಆದಾಯ ಉದ್ಭವವಾಗುತ್ತಿದೆಯೆಂದರೆ, ಕರ್ನಾಟಕಕ್ಕೂ ಲಾಭವಾಗುತ್ತಿದೆ ಎಂದರ್ಥ.
- ಬೆಂಗಳೂರಿನ ಮೇಲೆ ಹೆಚ್ಚು ದೃಷ್ಟಿ ನೆಟ್ಟರೆ ಮಾಧ್ಯಮಗಳು ಅವರ ಮೇಲೆ ಹೆಚ್ಚು ದೃಷ್ಟಿ ನೆಡುತ್ತವೆ. ಈ ನಗರಕ್ಕೆ ಹೆಚ್ಚು ಸೌಕರ್ಯಗಳನ್ನು ಒದಗಿಸಿದಂತೆಲ್ಲ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾಧ್ಯಮಗಳಿಂದ ಅವರಿಗೆ ಒಳ್ಳೆಯ ಪಬ್ಲಿಸಿಟಿ ದೊರೆಯುತ್ತದೆ. ಈ ಸುದ್ದಿ ದೆಹಲಿಯಲ್ಲಿರುವ ಹೈಕಮಾಂಡ್‌ನ ಕಿವಿಗೂ ನಿಸ್ಸಂಶಯವಾಗಿ ಬೀಳುತ್ತದೆ. ಪಕ್ಷದ ಬಾಸ್‌ಗಳು ಸಿದ್ದರಾಮಯ್ಯ ಅವರ ಕಾರ್ಯದಿಂದ ತೃಪ್ತರಾದರೆ, ಅವರ ಕುರ್ಚಿಯೂ ಗಟ್ಟಿಯಾಗಿ ಉಳಿಯುತ್ತದೆ. ಸ್ಥಿರ ಮುಖ್ಯಮಂತ್ರಿ ಇದ್ದರೆ, ಸ್ಥಿರ ಸರ್ಕಾರ ನಿಶ್ಚಿತ. ಇದರಿಂದಾಗಿ ರಾಜ್ಯಕ್ಕೆ ಬಹಳಷ್ಟು ಲಾಭವಾಗುತ್ತದೆ.
ಬೆಂಗಳೂರಿನ ನಿರ್ವಹಣೆಗಾಗಿ ಸಿದ್ದರಾಮಯ್ಯ ಅವರು ಮೊದಲು ಒಳ್ಳೆಯ ತಂಡವನ್ನು ನಿಯೋಜಿಸಬೇಕು. ನಿಷ್ಕಳಂಕ ಅಧಿಕಾರಿಗಳನ್ನು ಪ್ರಮುಖ ಹುದ್ದೆಯಲ್ಲಿ ಕೂರಿಸಬೇಕು. ದೂರದೃಷ್ಟಿಯುಳ್ಳ ಮಂತ್ರಿಯೊಬ್ಬರನ್ನೂ ಈ ಕೆಲಸಕ್ಕಾಗಿ ಬಿಡಬೇಕು. ಹಳಿ ತಪ್ಪಿದ ಬೆಂಗಳೂರನ್ನು ಮತ್ತೆ ಯಥಾಸ್ಥಿತಿಗೆ ತರಬೇಕು. ಯೋಜನೆ ಮತ್ತು ಆಡಳಿತದಲ್ಲಿ ಆಗಬೇಕಿರುವ ಸುಧಾರಣೆಗಳಿಗಾಗಿ ನಗರದ 28 ಎಮ್‌ಎಲ್‌ಎಗಳ ಸಾಮರ್ಥ್ಯವನ್ನು ಬಳಸಿಕೊಳ್ಳಬೇಕು. ನಗರದ ಹಲವಾರು ಸಮಸ್ಯೆಗಳಿಗೆ ಸರಳ ಪರಿಹಾರ ಮಾರ್ಗಗಳನ್ನು ನೀಡಬಲ್ಲ ಪರಿಣತರ ಜೊತೆ ಚರ್ಚೆಯಾಗಬೇಕು. ಒಂದು ಡೆಡ್‌ಲೈನ್ ಹಾಕಿಕೊಂಡು, ಆಡಳಿತದಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಮೆರೆಯುವಂತೆ ಮಾಡಬೇಕು. ಹೊಸ ಐಡಿಯಾಗಳಿಗಾಗಿ ಸಿದ್ದರಾಮಯ್ಯ ಅವರು ಅತ್ತಿತ್ತ ಅಲೆದಾಡುವ ಅವಶ್ಯಕತೆಯಿಲ್ಲ. ಹಲವಾರು ಪರಿಣತರ ವರದಿಗಳು ಇಂದಿಗೂ ವಿಧಾನ ಸೌಧದಲ್ಲಿ ಧೂಳು ಹಿಡಿದು ಬಿದ್ದಿವೆ. ನಗರದ ಸಮಸ್ಯೆಗಳ ಪರಿಹಾರಕ್ಕಾಗಿ ದೀರ್ಘಾವಧಿ ಮತ್ತು ಅಲ್ಪಾವಧಿ ಯೋಜನಾ ಸೂತ್ರಗಳು ಅವುಗಳಲ್ಲಿವೆ. ಕೆಲವೊಂದು ಸಲಹೆಗಳನ್ನು ಕೂಡಲೇ ಅನುಷ್ಠಾನಕ್ಕೆ ತರಬಹುದು. ಇನ್ನೂ ಕೆಲವಕ್ಕೆ ಶಾಸಕಾಂಗ ತಿದ್ದುಪಡಿಗಳ ಅವಶ್ಯಕತೆಯಿದೆ. ಇಲ್ಲೇ ಸಿದ್ದು ಅವರಿಗೆ ನಗರದ ಎಮ್‌ಎಲ್‌ಎಗಳ ಬೆಂಬಲ ಬೇಕಾಗುತ್ತದೆ ಮತ್ತು ಕ್ಯಾಬಿನೆಟ್ ಅನ್ನು ಒಪ್ಪಿಸುವ ಅಗತ್ಯ ಎದುರಾಗುತ್ತದೆ.
'ಅಜೆಂಡಾ ಫಾರ್ ಬೆಂಗಳೂರು ಇನ್ಫ್ರಾಸ್ಟ್ರಕ್ಚರ್ ಆ್ಯಂಡ್ ಡೆವಲಪ್‌ಮೆಂಟ್' (ಎಬಿಐಡಿಇ) ಟಾಸ್ಕ್ ಫೋರ್ಸ್‌ನ 'ಪ್ಲ್ಯಾನ್ ಬೆಂಗಳೂರು 2020' ಅನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಿ. ನಗರದ ಸಮಸ್ಯೆಗಳನ್ನು ಮತ್ತು ನಗರ ವಾಸಿಗಳ ಹಲವಾರು ತೊಂದರೆಗಳಿಗೆ ಪರಿಹಾರವಾಗಬಲ್ಲ ಮಾರ್ಗಗಳ ನೀಲನಕ್ಷೆ 'ಪ್ಲ್ಯಾನ್ ಬೆಂಗಳೂರು 2020'.
ಎಬಿಐಡಿಇಯ ಕೆಲವು ಶಿಫಾರಸುಗಳು ಈ ರೀತಿ ಇವೆ:
- ನಾಗರಿಕ ಕೇಂದ್ರಿತ ಆಡಳಿತ: ನಿವಾಸ ಕಲ್ಯಾಣ ಸಂಘಗಳು ಮತ್ತು ನಿವಾಸಿಗಳನ್ನು ವಾರ್ಡ್ ಸಮಿತಿಗಳನ್ನು ನಿಯೋಜಿಸುವುದು. ಆ ಮೂಲಕ ಅವರು ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗೆ ಸೇರಿ ತಮ್ಮ ಸುತ್ತಮುತ್ತಲಿನ ಸಮಸ್ಯೆಗಳಿಗೆ ಸ್ಪಂದಿಸುವುದು.
- ಬೆಂಗಳೂರು ರೀಜನ್ ಗವರ್ನೆನ್ಸ್ ಆಕ್ಟ್(ಬಿಆರ್‌ಜಿಎ) ಅನ್ನು ಕಾನೂನನ್ನಾಗಿಸುವುದು. ಇದರೊಳಗೆ ಬೆಂಗಳೂರಿನ ಎಲ್ಲಾ ಮುನ್ಸಿಪಲ್ ಸಂಸ್ಥೆಯ ಶಾಸನಗಳು ಒಳಪಡುತ್ತವೆ. ಬೆಂಗಳೂರು ಮೆಟ್ರೋಪಾಲಿಟನ್ ಪ್ರದೇಶ ಸುಮಾರು 8000 ಚದರ ಕಿ.ಮಿ. ಸ್ಥಳವನ್ನು ಒಳಗೊಂಡರೆ, ಬೃಹತ್ ಬೆಂಗಳೂರಿನಡಿಯಲ್ಲಿ 800 ಚದರ ಕಿ.ಮಿ. ಪ್ರದೇಶ ಬರುತ್ತದೆ.
- ನೇರವಾಗಿ ಚುನಾಯಿತನಾದ ಮೇಯರ್ 5 ವರ್ಷಗಳವರೆಗೆ ಆಡಳಿತ ನಡೆಸುವುದು ಅಥವಾ ಪರ್ಯಾಯವಾಗಿ ಮೇಯರ್ ಇನ್ ಕೌನ್ಸಿಲ್‌ರನ್ನು 5 ವರ್ಷಗಳ ವರೆಗೆ ನೇಮಕ ಮಾಡುವುದು. ಇದರ ಉದ್ದೇಶವಿಷ್ಟೆ. ಪ್ರತಿ ಪ್ರಾಂತದ ಸಮಸ್ಯೆಗಳನ್ನು, ಅಭಿವೃದ್ಧಿಯನ್ನು, ಭವಿಷ್ಯತ್ತಿನಲ್ಲಿ ಅಲ್ಲಿನ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಅವಶ್ಯಕತೆಗಳನ್ನು ಅರಿಯುವುದು ಮತ್ತು ಆ ನಿಟ್ಟಿನಲ್ಲಿ ಕೆಲಸ ಮಾಡುವುದು. ಅಲ್ಲದೆ ಈ ಎಲ್ಲಾ ಕೆಲಸಗಳಲ್ಲೂ ನಾಗರಿಕರೂ ಭಾಗಿಯಾಗುವಂತೆ ನೋಡಿಕೊಳ್ಳುವುದು.
ಇನ್ನು ನಾಗರಿಕ ಸಂಸ್ಥೆಗಳಲ್ಲಿ, ರಸ್ತೆಗಳ ಮತ್ತು ಟ್ರಾಫಿಕ್ ನಿರ್ವಹಣೆಯಲ್ಲಿ, ಪರಿಸರ ಮತ್ತು ಕೆರೆಗಳ ಅಭಿವೃದ್ಧಿಯಲ್ಲಿ, ವಿದ್ಯುತ್ ಮತ್ತು ನೀರಿನ ಬೇಡಿಕೆಯಲ್ಲಿ, ಸರ್ಕಾರಿ ಶಾಲೆಗಳ ಸುಧಾರಣೆಯಲ್ಲಿ, ಏರ್‌ಪೋರ್ಟ್ ಮತ್ತು ರೇಲ್ವೇ ಸ್ಟೇಷನ್ನುಗಳ ನಿರ್ವಹಣೆಯಲ್ಲಿ, ಆರ್ಥಿಕ ಸ್ಥಿತಿಯನ್ನು ಏರಿಸುವಲ್ಲಿ ಆಗುತ್ತಿರುವ ವಿಳಂಬವನ್ನು ಬಗೆಹರಿಸುವ ನಿಟ್ಟಿನಲ್ಲಿ ಹಲವಾರು ಪರಿಹಾರ ಮಾರ್ಗಗಳೂ ಈ ವರದಿಯಲ್ಲಿವೆ.
ಸಿದ್ದರಾಮಯ್ಯ ಅವರು ಮೊದಲು ಈ ವರದಿಯನ್ನು ಕೈಗೆತ್ತಿಕೊಂಡು, ಅದರ ಮೇಲಿನ ಧೂಳನ್ನು ಜಾಡಿಸಿ, ಅದರಲ್ಲಿನ ಅಂಶಗಳನ್ನೆಲ್ಲ ಅನುಷ್ಠಾನಕ್ಕೆ ತರಲು ಮುಂದಾಗಬೇಕು. ಸರಿಯಾದ ಯೋಜನೆಗಳಿಂದ, ಸಾರ್ವಜನಿಕರ ಒಲವು ಗಳಿಸುವುದಷ್ಟೇ ಅಲ್ಲದೆ ಆಡಳಿತದಲ್ಲೂ ಅದ್ಭುತ ಅನ್ನಿಸುವಂತಹ ಬದಲಾವಣೆ ತರಬಹುದು. ರಾಜ್ಯದ ಒಳಿತಿಗಾಗಿ, ಬೆಂಗಳೂರನ್ನು ಬೆಳೆಸುವುದು ಅಗತ್ಯವಿದೆ.
ಕೊನೆಯ ಗುಟುಕು: ಆಡ್ವಾಣಿಯವರು ಸರಿಯಾಗೇ ಹೇಳಿದ್ದಾರೆ-'ಬಿಜೆಪಿ ಕರ್ನಾಟಕದಲ್ಲಿ ಸೋಲುಂಡದ್ದನ್ನು ನೋಡಿ ನಿಜಕ್ಕೂ ಬೇಸರವಾಗಿದೆ. ಆದರೆ ನನಗೆ ಆಶ್ಚರ್ಯವಾಗಿಲ್ಲ. ಒಂದು ವೇಳೆ ಅದು ಗೆದ್ದಿದ್ದರೆ ಆಶ್ಚರ್ಯವಾಗುತ್ತಿತ್ತು! ಸಾಮಾನ್ಯ ಜನತೆಯನ್ನು ಲಘುವಾಗಿ ಪರಿಗಣಿಸಬಾರದು ಎನ್ನುವ ಪಾಠ ನಮ್ಮಿಬ್ಬರಿಗೂ (ಕಾಂಗ್ರೆಸ್ ಮತ್ತು ಬಿಜೆಪಿ) ಎದುರಾಗಿದೆ'
(ಈ ಲೇಖನದ ಇಂಗ್ಲಿಷ್ ಅವತರಣಿಕೆ www.namma-bengaluru.org ಹಾಗೂ www.suvarnanews.tv/features ನಲ್ಲಿ ಕನ್ನಡ ಅಂಕಣ ಲಭ್ಯ)
-ಎಚ್.ಎಸ್. ಬಲರಾಮ್
hsbalram@gmail.com