ಎಲ್ಲ ಪಾಳಯಗಳಲ್ಲಿರುವ ಪಾಂಡವರು ಬಲಗೊಳ್ಳಬೇಕಿದೆ
ಮಹಾಭಾರತದ ಯುದ್ಧ ಮುಗಿದಿತ್ತು. ಕೌರವರ ಅಧಿಕಾರ ವ್ಯಾಮೋಹಕ್ಕೆ ಉತ್ತರವೆಂಬಂತೆ ಪಾಂಡವರು ಸಮರವನ್ನು ಗೆದ್ದಿದ್ದರು. ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಸಾರಿದಂತೆ ಕೆಟ್ಟದ್ದರ ವಿರುದ್ಧ ಒಳ್ಳೆತನದ ವಿಜಯ ಆಗಬೇಕು. ಹಾಗೆಯೇ ಆಯಿತು ಸಹ. ಪಾಂಡವರಲ್ಲಿ ಅತ್ಯಂತ ಹಿರಿಯನೂ ವಿನಮ್ರನೂ ಆದ ಯುಧಿಷ್ಠಿರನು ಸನ್ಯಾಸ ಸ್ವೀಕರಿಸಬೇಕು ಎಂಬ ತನ್ನ ಆಸೆಯ ಹೊರತಾಗಿಯೂ ಸಿಂಹಾಸನವನ್ನು ಅಲಂಕರಿಸುತ್ತಾನೆ. ಮಹಾಭಾರತವೆಂಬ
ಮಹಾಗ್ರಂಥದಲ್ಲಿ ಅತ್ಯುತ್ತಮ ಮಾರ್ಗದರ್ಶಿ ಅಧ್ಯಾಯವು ತೆರೆದುಕೊಳ್ಳುವುದು ಯುಧಿಷ್ಠಿರನು ಉತ್ತಮ ಆಡಳಿತದ ಪಾಠಗಳನ್ನು ಹೇಳಿಸಿಕೊಳ್ಳಲು ಭೀಷ್ಮ ಪಿತಾಮಹನನ್ನು ಭೇಟಿ ಮಾಡಿದ ಸಂದರ್ಭದಲ್ಲಿ.
ಆಗ ಮರಣಶಯ್ಯೆಯಲ್ಲಿ ಮಲಗಿದ್ದ ಭೀಷ್ಮನು ಯುಧಿಷ್ಠಿರನಿಗೆ ಹೇಳುತ್ತಾನೆ: 'ಓ ರಾಜನೇ, ಆನೆಯ ಕಾಲುಗಳು ಹೇಗೆ ಉಳಿದ ಕಾಲುಗಳನ್ನೆಲ್ಲ ಆವರಿಸುವವೋ ಹಾಗೆಯೇ ರಾಜಧರ್ಮವೆಂಬುದು ಎಲ್ಲ ಸನ್ನಿವೇಶಗಳಲ್ಲೂ ಧರ್ಮದ ಎಲ್ಲ ಆಯಾಮಗಳನ್ನು ಒಳಗೊಂಡಿರುವಂಥದ್ದು. ಎಲ್ಲ ಧರ್ಮಗಳ ಪೈಕಿ ರಾಜಧರ್ಮವೇ ಹಿರಿದಾದದ್ದು. ಅದು ಸಮಾಜದ ಸರ್ವಾಂಗೀಣ ಕಲ್ಯಾಣ ಮತ್ತು ಭದ್ರತೆಯನ್ನು ನೆರವೇರಿಸುತ್ತದೆ.'
ಧರ್ಮದ ನಿಜವಾದ ಅರ್ಥ ಧಾರ್ಮಿಕ ನಂಬಿಕೆ ಎಂದಲ್ಲ. ಹಾಗೆಂದೇ ಅದನ್ನು ಸಾರ್ವತ್ರಿಕವಾಗಿ ತಪ್ಪರ್ಥ ಮಾಡಿಕೊಳ್ಳಲಾಗುತ್ತಿದೆ. ತನ್ನ ಕರ್ತವ್ಯಗಳನ್ನು ಸರಿಯಾಗಿ ನಿಭಾಯಿಸುವುದೇ ಧರ್ಮ. ಹೀಗಾಗಿ ರಾಜನಾದವನು ತನ್ನ ಧರ್ಮವನ್ನು ಸರಿಯಾಗಿ ಪಾಲಿಸಿದ್ದೇ ಆದರೆ ಸಮಾಜದ ಎಲ್ಲ ವರ್ಗದವರಿಗೂ ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನೆರವೇರಿಸುವ ನಿಟ್ಟಿನಲ್ಲಿ ಅದು ಪ್ರೇರಣಾದಾಯಿ ಆಗುತ್ತದೆ. ಅಂತೆಯೇ ರಾಜನಾದವನು ಅಧರ್ಮಕ್ಕೆ ಎಳಸಿದರೆ ಉಳಿದವರು ಇನ್ನಷ್ಟು ರಾಜಾರೋಷವಾಗಿ ಅನೈತಿಕತೆಯ ಪಥದಲ್ಲಿ ನಡೆಯುತ್ತಾರೆ.
ಮಹಾಭಾರತದ ಉಪದೇಶವು ಪ್ರಸ್ತುತ ಭಾರತದಲ್ಲಿ ಏನಾಗುತ್ತಿದೆ ಎಂಬುದನ್ನು ಚಿಂತಿಸುವಂತೆ ಮಾಡುತ್ತದೆಯಲ್ಲವೇ?
ಯುಧಿಷ್ಠಿರನಿಗೆ ಭೀಷ್ಮ ಪಿತಾಮಹನು ಹೇಳುವ ಮುಂದಿನ ನುಡಿಗಳು ಇನ್ನಷ್ಟು ಸಮಕಾಲೀನವಾಗಿ ಕಾಣುತ್ತವೆ. 'ರಾಜನ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಪ್ರತಿಯಾಗಿ ಆತ ಸತ್ಯವನ್ನಲ್ಲದೇ ಮತ್ತೇನನ್ನೂ ಪುರಸ್ಕರಿಸದಂತೆ ನಡೆದುಕೊಳ್ಳಬೇಕು.'
'ವಿಶ್ವಾಸಕ್ಕೆ ಮರ್ಮಾಘಾತವಾಗಿದೆ' ಎಂದು ಸುಪ್ರೀಂಕೋರ್ಟ್, ಸಿಬಿಐ ಅನ್ನು ತರಾಟೆಗೆ ತೆಗೆದುಕೊಂಡ ಸುದ್ದಿ ಕೇಳುತ್ತಲೇ ಈ ಮೇಲಿನ ಭೀಷ್ಮನ ಉವಾಚ ನೆನಪಾಯಿತು. ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿ ಸರ್ಕಾರವು ಹಸ್ತಕ್ಷೇಪಗೊಳಿಸಿ ತಿರುಚಿರುವ ಹಾಗೂ ಸತ್ಯವನ್ನು ಸಾಯಿಸಿರುವ ವರದಿಯನ್ನೇ ಸಿಬಿಐ ಸಲ್ಲಿಸಿರುವುದಕ್ಕೆ ಸುಪ್ರೀಂಕೋರ್ಟ್ ಹೊರಹಾಕಿದ ಆಕ್ರೋಶ ಅದಾಗಿತ್ತು. ಅದರೊಂದಿಗೇ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವು ಆಚರಿಸಿದ ಅಧರ್ಮದ ಹಿನ್ನೆಲೆಯಲ್ಲೂ ಈ ಮಾತುಗಳನ್ನು ನೆನಪಿಸಿಕೊಂಡೆ. ಈ ಕಾರಣಕ್ಕಾಗಿಯೇ ಇತ್ತೀಚಿನ ವಿಧಾನಸಭೆ ಚುನಾವಣೆಯಲ್ಲಿ ಅದಕ್ಕೆ ಮುಖಭಂಗವಾಯಿತು.
ಸುಪ್ರೀಂಕೋರ್ಟ್ನ ಟೀಕೆ ಪರೋಕ್ಷವಾಗಿ ಹೇಳಿದಂತೆ, ಸಿಬಿಐ ಸಂಸ್ಥೆಯು ಕಲ್ಲಿದ್ದಲು ಹಗರಣದ ವರದಿಯ 'ಹೃದಯ ಭಾಗ'ವನ್ನೇ ಬದಲಿಸುವುದಕ್ಕೆ ಕಾನೂನು ಸಚಿವರಿಗೆ ಅವಕಾಶ ಮಾಡಿಕೊಟ್ಟಿತು. ಈ ಸಚಿವರು ವರದಿಯನ್ನು ತಮಗೆ ತೋರಿಸಬೇಕು ಎಂದು ಆದೇಶಿಸಿದ್ದರು. ಇದಕ್ಕಿಂತ ಕೆಟ್ಟ ಸಂಗತಿ ಏನೆಂದರೆ, ಸಿಬಿಐ ಪರವಾಗಿ ನ್ಯಾಯಾಲಯದ ಎದುರು ಹಾಜರಾಗಿದ್ದ ಸರ್ಕಾರದ ಹಿರಿಯ ಕಾನೂನು ಅಧಿಕಾರಿಯು ವರದಿಯನ್ನು ಯಾರಿಗೂ ತೋರಿಸಲಾಗಿಲ್ಲ ಎಂದು ಸುಳ್ಳು ಹೇಳಿದ್ದರು. ಕಲ್ಲಿದ್ದಲು ಘಟಕಗಳ ಬೇಕಾಬಿಟ್ಟಿ ಹಂಚಿಕೆ ಯಾರ ಮೂಗಿನ ನೇರಕ್ಕೆ, ಯಾರಿಗೆ ಲಾಭವಾಗುವಂತೆ ನಡೆಯಿತು ಎಂಬ ಸಂಗತಿಗಳು ಬೆಳಕಿಗೆ ಬರಲೇಬೇಕು. ಆದರೆ ತುಂಬ ಆಘಾತಕಾರಿ ಸಂಗತಿ ಎಂದರೆ ಅಕ್ರಮಗಳನ್ನು ತನಿಖೆ ಮಾಡುವ ಸಂಸ್ಥೆಯೇ ಸುಪ್ರೀಂಕೋರ್ಟ್ ಹೇಳಿದಂತೆ, 'ತನ್ನ ಒಡೆಯನ ಮಾತನ್ನೇ ಅನುಕರಿಸುವ ಪಂಜರದ ಗಿಣಿ'ಯಂತೆ ಆಗಿಬಿಟ್ಟಿದೆ.
ಅಷ್ಟು ಧಿಮಾಕಿನಿಂದ ಕಾನೂನು ಸಚಿವರೊಬ್ಬರು ಸಿಬಿಐನ ತನಿಖೆಯಲ್ಲಿ ಹಸ್ತಕ್ಷೇಪ ಮಾಡುತ್ತಾರೆಂದರೆ? ಅದು ಕಲ್ಲಿದ್ದಲು ಹಂಚಿಕೆ ಸಂದರ್ಭದಲ್ಲಿ ಆ ಖಾತೆಯನ್ನು ನಿರ್ವಹಿಸುತ್ತಿದ್ದ ಪ್ರಧಾನಿ ಮನಮೋಹನ್ ಸಿಂಗ್ ಅವರ ರಕ್ಷಣೆಗೆ ಎಂಬುದು ನಿಚ್ಚಳವಾಗುವುದಿಲ್ಲವೇ? ಆದರೆ ಮನಮೋಹನ್ ಸಿಂಗ್ ಇಂಥ ರಕ್ಷಣೆಯನ್ನು ಬಯಸುತ್ತಿರುವುದಾದರೂ ಏಕೆ? ಅವರ ಕಟು ಟೀಕಾಕಾರರೂ ಅವರ ವಿರುದ್ಧ ಭ್ರಷ್ಟತೆಯನ್ನು ಆರೋಪಿಸಿಲ್ಲವಲ್ಲ?
ಕಟುವಾಸ್ತವ ಎಂದರೆ ಇದು: ಪ್ರಧಾನಿ ವೈಯಕ್ತಿಕ ನೆಲೆಯಲ್ಲಿ ಶುದ್ಧ ಹಸ್ತರೇ ಆಗಿದ್ದಿರಬಹುದು. ಆದರೆ ಸಿಬಿಐ ವಿಶ್ವಾಸಾರ್ಹತೆ, ಕಾನೂನು ಸಚಿವಾಲಯ, ರೈಲ್ವೆ ಸಚಿವಾಲಯ ಮತ್ತು 2ಜಿ ಹಗರಣವನ್ನು ತನಿಖೆ ಮಾಡುತ್ತಿದ್ದ ಜೆಪಿಸಿ ಹಾಗೂ ಇನ್ನೂ ಹಲವು ಸಂಸ್ಥೆಗಳು ಅಧೋಗತಿಗೆ ಇಳಿದಾಗಲೂ ಆ ಬಗ್ಗೆ ಬೇಕೆಂದೇ ಕುರುಡುಗಣ್ಣು ಮೆರೆದವರು. ಪ್ರಜಾಪ್ರಭುತ್ವ ಭಾರತದಲ್ಲಿ 'ರಾಜ'ನ ಸ್ಥಾನ ನಿಭಾಯಿಸುವಲ್ಲಿ ಅವರು ದಯನೀಯವಾಗಿ ಸೋತಿದ್ದಾರೆ. ರಾಜನು ತನ್ನ ಕರ್ತವ್ಯವನ್ನು ಸರಿಯಾಗಿ ನಿಭಾಯಿಲಾಗದೇ ಇದ್ದಾಗ ಏನು ಮಾಡಬೇಕೆಂಬುದಕ್ಕೆ ಭೀಷ್ಮನು ಹೇಳುವುದು: 'ಹುದ್ದೆಯನ್ನು ತ್ಯಜಿಸು, ಅದನ್ನು ಅಪವಿತ್ರಗೊಳಿಸಬೇಡ.' ಮನಮೋಹನ್ ಸಿಂಗ್ ಅವರು ಈ ಉಪದೇಶವನ್ನು ಕೇಳಿಸಿಕೊಳ್ಳುವುದಿಲ್ಲ. ಪರಿಣಾಮವಾಗಿ ಆಡಳಿತದಲ್ಲಿ ಮತ್ತು ಸಮಾಜದಲ್ಲಿ ಇನ್ನಷ್ಟು ಅಧರ್ಮವು ಹರಡುತ್ತದೆ.
ಕೇವಲ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ತಪ್ಪುಗಳ ಬಗ್ಗೆ ಮಾತನಾಡುವುದೇಕೆ? ಕರ್ನಾಟಕದಲ್ಲಿದ್ದ ಬಿಜೆಪಿ ಸರ್ಕಾರದ ಕೆಟ್ಟ ಕಾರ್ಯಗಳು ಯುಪಿಎ ಭ್ರಷ್ಟಾಚಾರವನ್ನು ಟೀಕಿಸುವುದಕ್ಕೆ ಪ್ರತಿಪಕ್ಷ ಬಿಜೆಪಿಯಲ್ಲಿದ್ದ ನೈತಿಕತೆಯನ್ನೇ ಉಡುಗಿಸಿದ್ದಾಗಿದೆ. ಗಣಿ ಹಗರಣವು ನೈಸರ್ಗಿಕ ಸಂಪನ್ಮೂಲದ ಲೂಟಿಯಷ್ಟೇ ಅಲ್ಲ, ಪರಿಸರದ ಮೇಲೆ ಅಗಾಧ ಹೊಡೆತವನ್ನೂ ನೀಡಿ ಒಳ್ಳೆಯ ಆಡಳಿತಕ್ಕೆ ಬದ್ಧ ಎನ್ನುವ ಬಿಜೆಪಿಯ ವರ್ಚಸ್ಸಿನ ಮೇಲೆ ಕಪ್ಪುಚುಕ್ಕೆಯಾಗಿ ಪರಿಣಮಿಸಿತು. ಅಧಿಕಾರಿಗಳ ಹುದ್ದೆಗಳನ್ನು ಮಾರಿ ಬಿಜೆಪಿಯ ಕೆಲ ಸಚಿವರು ಕಾಸು ಮಾಡಿಕೊಂಡರು. ಬೆಂಗಳೂರು ಮತ್ತು ಇತರ ನಗರಗಳಲ್ಲಿ ಭೂ ಸಂಬಂಧಿ ಹಗರಣಗಳಂತೂ ನಿತ್ಯದ ವಿದ್ಯಮಾನ ಎಂಬಂತೆ ಆಗಿತ್ತು. ಇದು ಯಾರಿಂದಲೂ ಮರೆಮಾಚಿದ್ದಲ್ಲ. ದೆಹಲಿಯಲ್ಲಿರುವ ಬಿಜೆಪಿ ವರಿಷ್ಠರಿಗೂ ಇವೆಲ್ಲವೂ ಮನದಟ್ಟಾಗಿದ್ದವು. ಈ ಹಿನ್ನೆಲೆಯಲ್ಲಿ ಚುನಾವಣಾ ಪ್ರಚಾರ ಸಂದರ್ಭದಲ್ಲಿ, 'ಬಿಜೆಪಿಯು ಹಿಂದಿನ ಎಲ್ಲ ಲೂಟಿ ದಾಖಲೆಗಳನ್ನು ಮುರಿದಿದೆ' ಎಂದು ರಾಹುಲ್ ಗಾಂಧಿ ಹೇಳಿದ ಮಾತು ಸರಿ ಎಂದೇ ಅನಿಸುತ್ತದೆ. ಆದರೆ ಪರ್ಯಾಯವಾಗಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಭ್ರಷ್ಟಾಚಾರ ಇರಲಿಲ್ಲ ಎಂದು ಹೇಳುವ ಆಯ್ಕೆ ಮಾತ್ರ ಅವರೆದುರು ಇದ್ದಿರಲಿಲ್ಲ.
ಇವೆಲ್ಲವನ್ನೂ ಗಮನಿಸಿದಾಗ ಒಂದು ಈಗ ಯಾವ ರಾಜಕೀಯ ಪಕ್ಷವೂ ಕೇವಲ ಪಾಂಡವರ ಅಥವಾ ಕೌರವರ ಪಾಳಯವಾಗಿ ಉಳಿದಿಲ್ಲ ಎಂಬುದು ನಿಚ್ಚಳವಾಗುತ್ತದೆ. ಎಲ್ಲರೂ ಒಂದೊಂದು ಹಂತದಲ್ಲಿ ಕಳಂಕಿತರೇ. ಆದರೆ ದಿನಚರಿ ಎಂಬಷ್ಟು ಸರಾಗವಾಗಿ ಪ್ರಜಾತಾಂತ್ರಿಕ ಸಂಸ್ಥೆಗಳನ್ನು ತನ್ನ ಅಧಿಕಾರದ ಆಸೆಗೆ ದುರ್ಬಳಕೆ ಮಾಡಿಕೊಂಡ ಹೊಣೆಯನ್ನು ಕಾಂಗ್ರೆಸ್ ಹೊರಬೇಕಾಗುತ್ತದೆ. ಇದು ಹೀಗೆಯೇ ಮುಂದುವರಿದರೆ ನಮ್ಮ ಪ್ರಜಾಪ್ರಭುತ್ವ ಪದ್ಧತಿ ಮಾತ್ರವಲ್ಲದೇ ಭಾರತದ ಅಭಿವೃದ್ಧಿ ಹಾಗೂ ಭದ್ರತೆಗಳು ಗಂಡಾಂತರಕ್ಕೆ ಸಿಲುಕಿಕೊಳ್ಳುತ್ತವೆ. ಈ ದುರ್ನೀತಿ ಕೊನೆಗೊಳ್ಳಲೇಬೇಕು. ರಾಜನೀತಿಗೆ ಬದ್ಧರಾದ ವ್ಯಕ್ತಿಗಳಿಂದ ಮಾತ್ರವೇ ಇಂಥ ಬದಲಾವಣೆ ಸಾಕಾರವಾಗುತ್ತದೆ. ಇಂಥವರೆಲ್ಲ ತಮ್ಮದೇ ಪಕ್ಷದಲ್ಲಿರುವ ಅನಾಚಾರಗಳನ್ನು ಪ್ರಶ್ನಿಸುತ್ತ ಸಾಗಬೇಕು. ಅಲ್ಲದೇ ತಮ್ಮ ಹುದ್ದೆ- ಸವಲತ್ತು ಲೋಪವಾಗುವ ಅಪಾಯವಿದ್ದರೂ ಪರವಾಗಿಲ್ಲವೆಂದು ಭಾವಿಸಿ, ರಾಜಕೀಯ ನಿಷ್ಠೆಗಳನ್ನು ಬದಿಗಿರಿಸಿ ಎಲ್ಲ ಪಕ್ಷಗಳಲ್ಲಿರುವ ಸಮಾನ ಮನಸ್ಕರತ್ತ ಕೈಚಾಚಿ ಬೆರೆಯಬೇಕು.
- ಸುಧೀಂದ್ರ ಕುಲಕರ್ಣಿ
anisikeprabha@gmail.com