ದಿಗ್ವಿಜಯ್ ರಿಗೇನು ಗೊತ್ತು ನಕ್ಸಲ್ ಸಮಸ್ಯೆ?
'ಎಕನಾಮಿಕ್ ಟೈಮ್ಸ್' ಪತ್ರಿಕೆಗೆ ದಿಗ್ವಿಜಯ್ ಸಿಂಗ್ ಅವರು ಬರೆದ ಲೇಖನದಿಂದಾಗಿ ಪಕ್ಷದ ಹೊರಗಿನವರಷ್ಟೇ ಅಲ್ಲದೆ, ಒಳಗಿನವರೂ ಕೂಡ ಕುದಿಯುತ್ತಿದ್ದಾರೆ.
14 ಏಪ್ರಿಲ್ 2010ರಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ನ ನಾಯಕ ದಿಗ್ವಿಜಯ್ ಸಿಂಗ್, ಛತ್ತೀಸ್ಗಡದ ಬಿಜೆಪಿ ಸರ್ಕಾರ ನಕ್ಸಲ್ ನಿಗ್ರಹಕ್ಕಾಗಿ ಕೈಗೊಂಡ ಕಾರ್ಯಾಚರಣೆಯನ್ನು 'ಎಕನಾಮಿಕ್ ಟೈಮ್ಸ್' ಪತ್ರಿಕೆಗೆ ಬರೆದ ಲೇಖನದಲ್ಲಿ ಕಟುವಾಗಿ ಟೀಕಿಸಿದ್ದರು. ಇದಕ್ಕೆ ಪ್ರತಿಯಾಗಿ ಛತ್ತೀಸ್ಗಡದ ಮುಖ್ಯಮಂತ್ರಿ ಡಾ. ರಮಣ್ ಸಿಂಗ್ ಅವರ ಲೇಖನವೊಂದು ಮೇ.3, 2010ರಂದು ಸ್ಥಳೀಯ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಪ್ರಸ್ತುತ ಸನ್ನಿವೇಶಕ್ಕೆ ಕನ್ನಡಿ ಹಿಡಿದಂತಿರುವ ರಮಣ್ ಸಿಂಗ್ ಅವರ ಲೇಖನದ ಆಯ್ದ ಭಾಗ ಇಲ್ಲಿದೆ...
'ಎಕನಾಮಿಕ್ ಟೈಮ್ಸ್' ಪತ್ರಿಕೆಗೆ ದಿಗ್ವಿಜಯ್ ಸಿಂಗ್ ಅವರು ಬರೆದ ಲೇಖನದಿಂದಾಗಿ ಪಕ್ಷದ ಹೊರಗಿನವರಷ್ಟೇ ಅಲ್ಲದೆ, ಒಳಗಿನವರೂ ಕೂಡ ಕುದಿಯುತ್ತಿದ್ದಾರೆ. ಕ್ಷಣಕ್ಕೊಂದು ಮಾತನಾಡುವುದು ಮತ್ತು ಪುಕ್ಕಲುತನವನ್ನೇ ತಮ್ಮ ಸ್ಟೈಲ್ ಮಾಡಿಕೊಂಡಿರುವ(ಬಾಟ್ಲಾ ಹೌಸ್ ಎನ್ಕೌಂಟರ್ ಪ್ರಕರಣ ನೆನಪಿದೆಯೇ?) ದಿಗ್ವಿಜಯ್ ತಮ್ಮ ಲೇಖನದ ಕೊನೆಗೆ, 'ಇವೆಲ್ಲ ನನ್ನ ಅಭಿಪ್ರಾಯವಾಗಿದ್ದು, ಪಕ್ಷಕ್ಕೆ ಸಂಬಂಧಿಸಿದ್ದಲ್ಲ' ಎಂದಿದ್ದಾರೆ. ಆದರೆ ಲೇಖನದಲ್ಲಿ ನಕ್ಸಲ್ರ ಬದಲಾಗಿ ಬರೀ ಕಾಂಗ್ರೆಸ್ನ ಚಟುವಟಿಕೆ ಮತ್ತು ಒಳ ರಾಜಕಾರಣವೇ ತುಂಬಿಕೊಂಡಿದೆ.
ದಿಗ್ವಿಜಯ್ ಅವರ ಲೇಖನ ಛತ್ತೀಸ್ಗಡದಲ್ಲಿ, ಅದರಲ್ಲೂ ಮುಖ್ಯವಾಗಿ ಬಸ್ತಾರ್ನಲ್ಲಿ ಪ್ರಬಲ ಪ್ರತಿಕ್ರಿಯೆಯನ್ನು ಹುಟ್ಟುಹಾಕಿದೆ. ಸ್ಥಳೀಯ ಮಾಧ್ಯಮಗಳು ಮತ್ತು ಬುದ್ಧಿಜೀವಿಗಳು ದಿಗ್ವಿಜಯ್ ಸಿಂಗ್ ಅವರ ಇಬ್ಬಗೆ ದೃಷ್ಟಿಯನ್ನು ಖಂಡಿಸಿದ್ದಾರೆ.
ಮಧ್ಯಪ್ರದೇಶ ಮತ್ತು ಛತ್ತೀಸ್ಗಡ(ಮೊದಲು ಇದು ಮಧ್ಯಪ್ರದೇಶದ ಭಾಗವಾಗಿತ್ತು)ವನ್ನು ವ್ಯವಸ್ಥಿತವಾಗಿ ನಾಶ ಮಾಡಿ, ಈಗವರು ದೆಹಲಿಗೆ ಹೋಗಿ ಕುಳಿತಿದ್ದಾರೆ. ಸದ್ಯಕ್ಕೆ ಅವರು ರಾಹುಲ್ ಗಾಂಧಿಗೆ ರಾಜಕೀಯ ಕಸರತ್ತುಗಳನ್ನು ಕಲಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಮಧ್ಯಪ್ರದೇಶ ಮತ್ತು ಛತ್ತೀಸ್ಗಡದ ಮಾನಸದಿಂದ ದಿಗ್ವಿಜಯ್ ಸಿಂಗ್ ಎಂದೋ ಮರೆಯಾಗಿದ್ದಾರೆ ಎನ್ನುವುದು ಬೇರೇ ಮಾತು. ಚರಣ್ ದಾಸ್ ಮಹಂತ್ರಂತಹ ಕೆಲವು ಪರಮ ಭಕ್ತರು ಅವರಿಗಿದ್ದಾರಾದರೂ, ಛತ್ತೀಸ್ಗಡದ ಜನತೆ ಚರಣ್ ದಾಸ್ ಅವರನ್ನೇ ಈಗ ಸೀರಿಯಸ್ ಆಗಿ ತೆಗೆದುಕೊಳ್ಳುತ್ತಿಲ್ಲ!
ಒಂದು ಸಮಸ್ಯೆಯಾಗಿ ನಕ್ಸಲಿಸಂಗೆ ಹಲವಾರು ಆಯಾಮಗಳಿವೆ. ಹಾಗಾಗೇ ನಾನು ಸದ್ಯಕ್ಕೆ, ನಕ್ಸಲ್ ನಿಗ್ರಹದಲ್ಲಿ ದಿಗ್ವಿಜಯ್ ಸಿಂಗ್ ಅವರ ಪಾತ್ರವೇನಿತ್ತು ಎನ್ನುವುದರ ಬಗ್ಗೆ ಮಾತನಾಡುತ್ತೇನಷ್ಟೆ.
ಅವಿಭಜಿತ ಮಧ್ಯಪ್ರದೇಶದಲ್ಲಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ದಿಗ್ವಿಜಯ್ ಈ ನೆಲದಲ್ಲಿ ಏನನ್ನೂ ಬಿತ್ತಲಿಲ್ಲವಾದರೂ, ನೈಸರ್ಗಿಕ ಸಂಪತ್ತನ್ನು ಮಾತ್ರ ತಮ್ಮ ಕೈಲಾದಷ್ಟು ಕೊಳ್ಳೆ ಹೊಡೆದರು. ಛತ್ತೀಸ್ಗಡದ ಪಾಡಂತೂ ಹೇಳತೀರದು. ಆದರೆ ಆ ಪ್ರದೇಶಕ್ಕೆ ಇದ್ದ ಒಂದೇ ಒಂದು ಸಮಾಧಾನವೆಂದರೆ, ತನ್ನಂತೆ ಮಧ್ಯಪ್ರದೇಶದ ಇನ್ನುಳಿದ ಪ್ರದೇಶಗಳೂ ದಿಗ್ವಿಜಯರ ದಾಳಿಗೆ ಮೆತ್ತಗಾಗಿವೆ ಎನ್ನುವುದು.
ಅವರು ಮುಖ್ಯಮಂತ್ರಿಯಾಗಿದ್ದಾಗ ಜೋಕೊಂದು ಪ್ರಚಲಿತದಲ್ಲಿತ್ತು: 'ಮಧ್ಯಪ್ರದೇಶಕ್ಕೆ ಗಡಿ ಸಮಸ್ಯೆ ಉದ್ಭವವಾಗುವುದೇ ಇಲ್ಲ, ಏಕೆಂದರೆ ಗಡಿ ಭಾಗದ ರಸ್ತೆಗಳಲ್ಲಿರುವ ತಗ್ಗುಗಳು ಸ್ಪಷ್ಟವಾಗಿ ನಮ್ಮನ್ನು ಅಕ್ಕಪಕ್ಕದ ರಾಜ್ಯಗಳಿಗಿಂತ ಭಿನ್ನವಾಗಿಸಿವೆ'!
ಮುಖ್ಯಮಂತ್ರಿಯಾಗಿದ್ದಾಗ ಅವರೊಮ್ಮೆ 'ಅಭಿವೃದ್ಧಿಯಿಂದ ಓಟು ಗಿಟ್ಟಿಸುವುದು ಸಾಧ್ಯವಿಲ್ಲ' ಎಂದು ಹೇಳಿದ್ದರು ಎಂದರೆ ನಂಬುತ್ತೀರಾ? ಹಾಗೆ ನೋಡಿದರೆ ದಿಗ್ವಿಜಯ್ ನನ್ನ ಒಳ್ಳೆಯ ಸ್ನೇಹಿತರೇ, ಆದರೂ ಅಭಿವೃದ್ಧಿ ಮಾಡದೆ ಹೇಗೆ ಓಟು ಗಿಟ್ಟಿಸಿಕೊಳ್ಳಬಹುದು ಎನ್ನುವ ಗುಟ್ಟನ್ನು ಮಾತ್ರ ಅವರು ನನಗೆ ಬಿಟ್ಟುಕೊಟ್ಟಿಲ್ಲ. 2003ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನ ಅಧ್ಯಾಯ ನಮ್ಮ ರಾಜ್ಯದಲ್ಲಿ ಅಂತ್ಯವಾಯಿತು. ಆದರೆ ದಿಗ್ವಿಜಯ್ ಆಡಳಿತ ನಡೆಸಿದ ಸಮಯವನ್ನು ಇಂದಿಗೂ ಮಧ್ಯಪ್ರದೇಶದಲ್ಲಿ 'ಕರಾಳ ಸಮಯ'ವೆಂದು ಕರೆಯಲಾಗುತ್ತದೆ. ಅವರು ಮಾಡಿಟ್ಟು ಹೋದ ಮಹಾನ್ ಕಾರ್ಯಕ್ಕೆ ಮಧ್ಯಪ್ರದೇಶ ಮತ್ತು ಛತ್ತೀಸ್ಗಡದ ಜನತೆ ಇಂದಿಗೂ ಬೆಲೆ ತೆರುತ್ತಿದ್ದಾರೆ.
ಇನ್ನು ಅವರು ಬಸ್ತಾರ್ನ ಉಸ್ತುವಾರಿ ಸಚಿವರೂ ಆಗಿದ್ದರು ಎನ್ನುವುದು ವಿಶೇಷ. ಆದರೆ ತಮ್ಮ 7 ವರ್ಷಗಳ ಆಡಳಿತದಲ್ಲಿ ಬಸ್ತಾರ್ಗಾಗಿ ಅವರಿಂದ ಒಂದಾದರೂ ಕೊಡುಗೆಯಿಲ್ಲ ಎನ್ನುವುದು ಬೇರೇ ಮಾತು ಬಿಡಿ. ಅವರ ಆಡಳಿತದಿಂದಾಗಿ ಬಸ್ತಾರನ್ನು ಆಗ ಮಧ್ಯಪ್ರದೇಶದ 'ಕಾಲಾಪಾನಿ' ಎಂದು ಕರೆಯಲಾಗುತ್ತಿತ್ತು. ಅಧಿಕಾರಿಗಳನ್ನು ಶಿಕ್ಷಿಸುವುದಕ್ಕೆ, ಬೆದರಿಸುವುದಕ್ಕೆ ಬಸ್ತಾರ್ ಉಪಯೋಗಕ್ಕೆ ಬರತೊಡಗಿತು. 'ಸರಿಯಾಗಿ ಕೆಲಸ ಮಾಡದಿದ್ದರೆ ಬಸ್ತಾರ್ಗೆ ವರ್ಗಾವಣೆ ಮಾಡುತ್ತೇವೆ' ಎಂದು ಆಗ ಅಧಿಕಾರಿಗಳನ್ನು ಹೆದರಿಸಲಾಗುತ್ತಿತ್ತು! ನಕ್ಸಲರು ಆ ಪ್ರದೇಶದಲ್ಲಿ ನುಸುಳುತ್ತಿದ್ದಾರೆ ಎಂಬ ಎಚ್ಚರಿಕೆ ನೀಡಿದರೂ ದಿಗ್ವಿಜಯ್ರ ಸರ್ಕಾರಕ್ಕೆ ಆಗ ಎಚ್ಚರವಾಗಲಿಲ್ಲ. ಪೊಲೀಸ್ ಮೂಲಸೌಕರ್ಯಗಳನ್ನು ಉತ್ತಮ ಪಡಿಸುವ, ಅವರಿಗೆ ತರಬೇತಿ ನೀಡುವ ಕೆಲಸಗಳು ಆಗಲೇ ಇಲ್ಲ. ಅದರ ಫಲವನ್ನು ಮುಂದಿನ ಸರ್ಕಾರಗಳು ಮತ್ತು ಪೊಲೀಸರು ಉಣ್ಣಬೇಕಾಯಿತು.
ವ್ಯಂಗ್ಯವೆಂದರೆ, ತಾವು ಅಧಿಕಾರದಲ್ಲಿದ್ದಾಗ ಅಭಿವೃದ್ಧಿ ಎನ್ನುವ ಪದವನ್ನು ತಮ್ಮ ಅಜೆಂಡಾದಲ್ಲಿಟ್ಟುಕೊಳ್ಳದೆ ಬಸ್ತಾರ್ನಲ್ಲಿ ನಕ್ಸಲರು ಹೆಚ್ಚುವುದಕ್ಕೆ ಕಾರಣವಾದ ವ್ಯಕ್ತಿ, ಈಗ ದೆಹಲಿಯಲ್ಲಿ ಕುಳಿತು 'ಅಭಿವೃದ್ಧಿಯೇ ಪರಿಹಾರ' ಎಂದು ಹೇಳುತ್ತಿದ್ದಾರೆ!
90ರ ದಶಕದಲ್ಲಿ ದಿಗ್ವಿಜಯ್ ಸಿಂಗ್ ಅವರಿಂದಾಗಿಯೇ ಬಸ್ತಾರ್ನಲ್ಲಿ ನಕ್ಸಲರು ಬಲಿಷ್ಠರಾಗುತ್ತಾ ಹೋದರು. ಪುಣ್ಯವಶಾತ್ ಅಟಲ್ ಬಿಹಾರಿ ವಾಜಪೇಯಿ ಅವರಿಂದಾಗಿ ಛತ್ತೀಸ್ಗಡ ಮಧ್ಯಪ್ರದೇಶದಿಂದ ವಿಭಜಿತವಾಗಿ ಬಚಾವಾಯಿತು. ಕಳೆದ 7 ವರ್ಷಗಳಿಂದ ನಕ್ಸಲರನ್ನು ಕೊನೆಗಾಣಿಸಲು ನಾವು ಶತಪ್ರಯತ್ನ ಮಾಡುತ್ತಿದ್ದೇವೆ. ಅದಾಗಲೇ ದಕ್ಷಿಣ ಛತ್ತೀಸ್ಗಡದಿಂದ ಈ ಉಪಟಳವನ್ನು ಕಿತ್ತೆಸೆದಿದ್ದೇವೆ. ಇಲ್ಲದಿದ್ದರೆ ಇಷ್ಟುಹೊತ್ತಿಗಾಗಲೇ ಇಡೀ ರಾಜ್ಯವೇ ನರಳಾಡುತ್ತಾ ಮಲಗಬೇಕಿತ್ತು.
'ಈಗಿನ ಮುಖ್ಯ ಮಂತ್ರಿಗಳಿಂದ ನಕ್ಸಲರ ಉಪದ್ವಾಪ ಹೆಚ್ಚಾಗಿದೆ' ಎಂದು ತಮ್ಮ ಲೇಖನದಲ್ಲಿ ದಿಗ್ವಿಜಯ್ ಹೇಳಿದ್ದಾರೆ. ಮಿ. ದಿಗ್ವಿಜಯ್, ಸಾರಿಗೆ ಸಚಿವ ಕವೇರೆ ಅವರು ನಕ್ಸಲರ ದಾಳಿಗೆ ಬಲಿಯಾಗಿದ್ದಾಗ ಸಿಎಂ ಸ್ಥಾನದಲ್ಲಿದ್ದವರು ಯಾರು? ನೀವೇ ಅಲ್ಲವೇ! ಕವೇರೆ ಅವರ ಅಂತ್ಯಸಂಸ್ಕಾರಕ್ಕೂ ನೀವು ಹೋಗಲು ಹಿಂದೇಟು ಹಾಕಿದಾಗ ನಿಮ್ಮವರೇ ಒತ್ತಾಯ ಮಾಡಿ ಕಳುಹಿಸಿಕೊಟ್ಟರೆಂದು ಕೇಳಿದ್ದೇನೆ, ನಿಜವೇ?
ಸಾರಿಗೆ ಸಚಿವರ ಸಾವಿನ ಹಿಂದೆಯೂ ಹಲವಾರು ಊಹಾಪೋಹಗಳಿವೆ. ದಿಗ್ವಿಜಯ್ ಸಿಂಗ್ ಅವರು ನಕ್ಸಲರೊಂದಿಗೆ ನಡೆದುಕೊಂಡ ರೀತಿಯೇ ಇದಕ್ಕೆ ಕಾರಣ. ಇನ್ನು ಬಸ್ತಾರ್ನ ಶಾಸಕ ಬಲಿರಾಮ್ ಕಶ್ಯಪ್ ಅವರ ಬಗ್ಗೆಯೂ ದಿಗ್ವಿಜಯ್ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಆದರೆ ಬಲಿರಾಮ್ ಬಸ್ತಾರ್ನ ಸಮಸ್ಯೆ ಬಗೆಹರಿಸಲು ಅನವರತ ಹೊರಾಡಿದ್ದಾರೆ. ಅವರಂತೆಯೇ ಕಾಂಗ್ರೆಸ್ ನಾಯಕ ಮಹೇಂದ್ರ ಕರ್ಮಾ ಅವರೂ ಕೂಡ ಜೀವ ಬೆದರಿಕೆಗೆ ಜಗ್ಗದೆ ನಕ್ಸಲ್ರ ವಿರುದ್ಧ ಹೋರಾಟ ನಡೆಸಿದ್ದಾರೆ.
ಇನ್ನು, 'ಛತ್ತೀಸ್ಗಡದ ಚುನಾವಣೆಯಲ್ಲಿ ಅತಿ ಹೆಚ್ಚು ಬಿಡ್ ಮಾಡಿದವರನ್ನು ನಕ್ಸಲರು ಬೆಂಬಲಿಸುತ್ತಾರೆ ಎನ್ನುವ ಮಾತಿದೆ' ಎಂದು ದಿಗ್ವಿಜಯ್ ಹೇಳುತ್ತಾರೆ. ಇದನ್ನು ಸಾಬೀತು ಪಡಿಸುವುದಕ್ಕೆ ಅವರ ಬಳಿ ಪುರಾವೆ ಏನಾದರೂ ಇದೆಯೇ?
ಬಹುಶಃ ಅವರು 1998ರ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ನ 'ಅನುಮಾನಾಸ್ಪದ' ಅಮೋಘ ವಿಜಯದ ಬಗ್ಗೆ ಹೇಳುತ್ತಿದ್ದಾರೇನೋ? ಆಗ ಬಸ್ತಾರ್ ಪ್ರದೇಶದ 12 ಸ್ಥಾನಗಳಲ್ಲಿ 11 ಸ್ಥಾನಗಳನ್ನು ಕಾಂಗ್ರೆಸ್ ಗೆದ್ದುಕೊಂಡಿತ್ತು. ಆದರೆ 2003ರ ಚುನಾವಣೆಯಲ್ಲಿ ಬಿಜೆಪಿ ಬಸ್ತಾರ್ನ 12ರಲ್ಲಿ 9 ಸ್ಥಾನಗಳನ್ನು ಗೆದ್ದು ಕಾಂಗ್ರೆಸ್ನಲೆಕ್ಕಾಚಾರವನ್ನು ಉಲ್ಟಾ ಮಾಡಿತು. 2008ರ ಚುನಾವಣೆಯಲ್ಲಿ ಆ ಭಾಗದಲ್ಲಿ ಬಿಜೆಪಿ ಗೆದ್ದ ಸ್ಥಾನಗಳು 11! 1998ರಲ್ಲಿ ಹೇಗೆ ಕಾಂಗ್ರೆಸ್ ಬಸ್ತಾರ್ನಲ್ಲಿ ಯಶಸ್ವಿಯಾಗಿತ್ತು ಎನ್ನುವುದರ ರಹಸ್ಯ ಉತ್ತರ ದಿಗ್ವಿಜಯ್ ಸಿಂಗ್ ಅವರ ಬಳಿಯೇ ಇದೆ. ದಿಗ್ವಿಜಯ್ ಅವರ ಮಿಥ್ಯಾರೋಪಗಳು ಪ್ರಜಾಪ್ರಭುತ್ವಕಷ್ಟೇ ಅಲ್ಲದೆ, ಬಸ್ತಾರ್ನ ಜನತೆಗೆ ಮತ್ತು ಚುನಾವಣಾ ಆಯೋಗಕ್ಕೆ ಮಾಡಿದ ಅಪಮಾನವಲ್ಲವೇ?
ವರ್ಷಗಳಿಂದ ನಕ್ಸಲರು ಆಸ್ಪತ್ರೆ, ಶಾಲೆ ಮತ್ತು ಪಂಚಾಯತಿಗಳ ಕಟ್ಟಡಗಳನ್ನು ನಾಶ ಮಾಡುತ್ತಲೇ ಬಂದಿದ್ದಾರೆ. ಸರ್ಕಾರದ ಎಲ್ಲಾ ಅಭಿವೃದ್ಧಿ ಕಾರ್ಯಗಳು ಮತ್ತು ರಸ್ತೆಗಳೇ ಅವರ ಮುಖ್ಯ ಗುರಿಯಾಗಿವೆ. ನಕ್ಸಲರ ಹಿಂಸಾಚಾರವನ್ನು ನೋಡಿದರೆ ಅವರೊಂದಿಗೆ ಕುಳಿತು ಮಾತನಾಡಿ ಉಪಯೋಗವಿಲ್ಲವೆಂದು ಸ್ಪಷ್ಟವಾಗಿ ಅರಿವಾಗುತ್ತದೆ. ಕೇವಲ ಅಭಿವೃದ್ಧಿಯಿಂದ ನಕ್ಸಲರ ನಿಗ್ರಹ ಸಾಧ್ಯವಿಲ್ಲ. ಅವೆರಡೂ ಪ್ರತ್ಯೇಕವಾಗಿ ಆಗಬೇಕಾದ ಕೆಲಸಗಳು. ನಮ್ಮ ಪೊಲೀಸರ ಸ್ಥೈರ್ಯ ಇನ್ನೂ ಕುಗ್ಗಿಲ್ಲ, ನಮ್ಮ ಸರ್ಕಾರ ಅವರನ್ನು ಇನ್ನಷ್ಟು ಶಕ್ತಿವಂತಗೊಳಿಸಲು ಸಾಧ್ಯವಾದಷ್ಟು ಪ್ರಯತ್ನ ಪಡುತ್ತಿದೆ. ನಕ್ಸಲರನ್ನು ನಾಶ ಮಾಡಲು ಛತ್ತೀಸ್ಗಡ ಕಂಕಣ ತೊಟ್ಟಿದೆ. ನಕ್ಸಲ್ ದಾಳಿಗೆ ಬಲಿಯಾದವರ ಸಾವನ್ನು ನಾವು ವ್ಯರ್ಥವಾಗಲು ಬಿಡುವುದಿಲ್ಲ. ನಿಧಾನವಾದರೂ ಅಡ್ಡಿಯಿಲ್ಲ, ಆದರೆ ಕೊನೆಗೆ ನಾವೇ ಗೆಲ್ಲುತ್ತೇವೆ. ಪ್ರಜಾಪ್ರಭುತ್ವಕ್ಕೇ ವಿಜಯ ದೊರಕಿಸಿಕೊಡುತ್ತೇವೆ.
ನಮಗೆದುರಾಗಿರುವ ಅತಿ ದೊಡ್ಡ ಸಮಸ್ಯೆಯೆಂದರೆ ಎಡಪಂಥೀಯರಿಗೆ ಪೂಸಿ ಹೊಡೆಯುತ್ತಾ ಬದುಕುವವರದ್ದು ಮತ್ತು ದಿಗ್ವಿಜಯ್ರಂಥ ಬೌದ್ಧಿಕ ಅಪ್ರಾಮಾಣಿಕರದ್ದು. ಮಾನ್ಯ ದಿಗ್ವಿಜಯ್ ಸಿಂಗ್ ಅವರೊಂದಿಗೆ ನಕ್ಸಲ್ ಸಮಸ್ಯೆಯ ಬಗ್ಗೆ ಚರ್ಚೆ ಮಾಡಲು ನಾನು ಸಿದ್ಧನಿದ್ದೇನೆ.
- ರಮಣ್ ಸಿಂಗ್
ಛತ್ತೀಸ್ ಗಡ ಮುಖ್ಯಮಂತ್ರಿ