ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಸರ್ಕಾರದ ಕೆಲಸ ದೇವರ ಕೆಲಸ ಆಗಬೇಕೆಂದರೆ...

ಎಲ್ಲರಿಗೂ ಸಮಾಜದಲ್ಲಿ ಸಾರ್ವಜನಿಕ ಸೇವೆ ಮಾಡುವ ಸದಾವಕಾಶ ಸಿಗುವುದಿಲ್ಲ. ಹುಟ್ಟಿನಿಂದ ಯಾರೂ ಅದಕ್ಕಾಗಿ ಹಂಬಲಿಸದಿದ್ದರೂ...

Rashmi Kasaragodu
Updated On : 28 May 2013, 12:43 pm

ಎಲ್ಲರಿಗೂ ಸಮಾಜದಲ್ಲಿ ಸಾರ್ವಜನಿಕ ಸೇವೆ ಮಾಡುವ ಸದಾವಕಾಶ ಸಿಗುವುದಿಲ್ಲ. ಹುಟ್ಟಿನಿಂದ ಯಾರೂ ಅದಕ್ಕಾಗಿ ಹಂಬಲಿಸದಿದ್ದರೂ ಜೀವನ ಕ್ರಮದಲ್ಲಿ ಅವರು ಬೆಳೆದ ವಾತಾವರಣ ಮತ್ತು ಅನುಭವಗಳು ಕೆಲವರನ್ನು ಸಮಾಜ ಸೇವಾ ಮನೋಭಾವನೆಗೆ ಪ್ರೇರೇಪಿಸುತ್ತದೆ. ಇನ್ನು ಕೆಲವರು ಸಮಾಜ ಸೇವಕರೆಂದು ಹೇಳಿಕೊಂಡು ಹೊಟ್ಟೆ ಹೊರೆಯುವುದನ್ನು ಸಾರ್ವಜನಿಕ ರಂಗದಲ್ಲಿ ಕಂಡಿದ್ದೇವೆ. ಆತ್ಮಸಾಕ್ಷಿಯಾಗಿ ಜನಹಿತ ಕಾಪಾಡುವ ಕೆಲಸಗಳನ್ನು ಕೈಗೊಳ್ಳುವುದರ ಜೊತೆಗೆ ವೈಯಕ್ತಿಕವಾಗಿ ಜನರ ಸಮಸ್ಯೆಗಳನ್ನು ಅರಿತು ಸಹಾಯಕ್ಕೆ ನಿಲ್ಲುವ ಎಷ್ಟೋ ಜನರಿದ್ದಾರೆ. ಅವರನ್ನು ಅಪ್ಪಟ ಸೇವಕರೆನ್ನಬಹುದು.
ಸಾರ್ವಜನಿಕ ಸೇವೆ ಎಂಬುದು ಸರ್ಕಾರಿ ನೌಕರರಿಗೆ ದೊರಕಿದ ಭಾಗ್ಯವೆನ್ನಬಹುದು. ಏಕೆಂದರೆ ಅವರು ಮಾಡುವ ಸೇವೆಗೆ ಪ್ರತಿಫಲವಾಗಿ ಪ್ರತಿ ತಿಂಗಳು ತಪ್ಪದೆ ಸರ್ಕಾರ ಸಂಬಳ ಕೊಡುತ್ತದೆ. ಪ್ರವಾಹ ಬರಗಾಲ ಯಾವುದೇ ಪ್ರಕೃತಿ ವಿಕೋಪಗಳಿದ್ದರೂ ಜೀವನ ನಿರ್ವಹಣೆಗೆ ತಿಂಗಳ ಸಂಬಳ ಬಂದೇ ಬರುತ್ತೆ. ಖಾಸಗಿ ಸಮಾಜ ಸೇವಕರು ಜನಸೇವೆ ಮಾಡುತ್ತಾರೆ ಆದರೆ ಅವರಿಗೆ ನಿಯತ ಪ್ರತಿಫಲ ಕಾಣಸಿಗುವುದಿಲ್ಲ. ಅವರು ಏನನ್ನೂ ಅಪೇಕ್ಷಿಸುವುದೂ ಇಲ್ಲ. ಅದಿರಲಿ ಅಂಥಹವರಿಗೆ ಎಷ್ಟೋ ಬಾರಿ ಕೃತಜ್ಞತೆ ಸೂಚಿಸದ ಜನರೂ ಇದ್ದಾರೆ. 'ಹೋಗಲಿ ಬಿಡಿ, ಪಾಪ ಅವರ ಕೆಲಸ ಆಯ್ತಲ್ಲ' ಅಂತ ಸಮಾಧಾನ ಪಡುವ ಉದಾತ್ತ ಮನೋಭಾವದ ಸೇವಕರೂ ಇದ್ದಾರೆ.
ನಾವೀಗ ಇಲ್ಲಿ ವಿಚಾರ ಮಾಡಬೇಕಾಗಿರುವುದು ಸಾರ್ವಜನಿಕ ಸೇವೆಯಲ್ಲಿರುವ ಸರ್ಕಾರಿ ನೌಕರರು ಎಷ್ಟರ ಮಟ್ಟಿಗೆ ತಮ್ಮನ್ನು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂಬುದು. ನಾವು ಕಂಡಹಾಗೆ ಬೆರಳೆಣಿಕೆಯಷ್ಟು ಸರ್ಕಾರಿ ನೌಕರರನ್ನು ಮಾತ್ರ ಜನ ಮೆಚ್ಚುತ್ತಾರೆ. ಜನರ ಮೆಚ್ಚುಗೆಗಳಿಸುವವರು ಕೇವಲ ಸರ್ಕಾರದ ನೌಕರರಾಗಿರದೆ ಜನರ ಸೇವಕರಾಗಿ ಅವರಲ್ಲಿ ಬೆರೆತು, ಅವರ ದುಃಖ ದುಮ್ಮಾನಗಳನ್ನು ಅರಿತು ಸ್ನೇಹ ಭಾವದಿಂದ ನಡೆದುಕೊಳ್ಳುತ್ತಾರೆ. ಅಂತಹವರಿಗೆ ಜನರು ತಮ್ಮ ಮೆಚ್ಚುಗೆಯನ್ನು ಮುಕ್ತವಾಗಿ ವ್ಯಕ್ತಪಡಿಸುತ್ತಾರೆ. ಪುಣ್ಯಾತ್ಮ ನಮಗೆ ಸಹಾಯ ಮಾಡಿಕೊಟ್ಟ ಅಂತ ಜೀವನವಡೀ ನೆನೆಸಿಕೊಳ್ಳುವವರನ್ನು ಕೇಳಿದ್ದೀವಿ. ಆದರೆ ಪ್ರಸ್ತುತ ಸಮಾಜದಲ್ಲಿ ಹೆಚ್ಚಾಗಿ 'ದುಡ್ಡಿಲ್ಲದೆ ಏನೂ ನಡಿಯೋದಿಲ್ಲ' ಎಂಬ ಮಾತು ಕೇಳಿಬರುತ್ತದೆ.  ಈ ರೀತಿ ಜನಜನಿತವಾಗಿರವ ವಾತಾವರಣದಲ್ಲಿ ಜನ ಸೇವೆ ಎಂಬುದು ಅರ್ಥಹೀನವಾಗಿದೆ. ವಾಸ್ತವವಾಗಿ ಸೇವೆ ಎಂಬುದರ ಅರ್ಥವೇ ಬದಲಾದಂತಾಗಿದೆ. ನಾನು ಸರ್ಕಾರದ ಸೇವಕನೂ ಹೌದು ಮಿಗಿಲಾಗಿ ಜನರ ಸೇವಕನೂ ಹೌದು ಎಂದು ನಾನು ಎಷ್ಟೋ ಬಾರಿ ಅಂದುಕೊಂಡಿದ್ದೇನೆ. ಸೇವಕನಿರುವುದು ಜನರಿಗೆ ಕೊಡುವುದಕ್ಕೆ, ಅವರಿಂದ ತೆಗೆದುಕೊಳ್ಳುವುದಕ್ಕಲ್ಲ. ಯಾವ ಭೇದವೂ ನಿಷ್ಠೆಯಿಂದ ದುಡಿಯುವುದಷ್ಟೇ ಸೇವಕನ ಕೆಲಸ. ಹಾಗೆ ಅರ್ಹರಿಗೆ ನೊಂದವರಿಗೆ ಸೇವೆ ಮಾಡಿದ್ದೆ ಆದರೆ ಸರ್ಕಾರಿ ನೌಕರನಾಗಿದ್ದಕ್ಕೂ, ಸೇವಕನಾಗಿದ್ದಕ್ಕೂ ಸಾರ್ಥಕತೆ ದೊರೆಯುತ್ತದೆ. ಇಲ್ಲಿ ಮುಖ್ಯವಾಗಿರಬೇಕಾದದ್ದು ನಿಸ್ವಾರ್ಥ ಸೇವೆ. ಗಾಂಧೀಜಿ, 'ನಿನ್ನನ್ನು ಅರಸಿ ಬಂದವನು ನಿನ್ನಲ್ಲಿಗೆ ಬಂದ ದೇವರು ಎಂದು ಪರಿಗಣಿಸಿ, ನಿನಗೆ ಮಾಡುತ್ತಿರುವ ಉಪಕಾರವೆಂದು ಬಗೆ' ಎನ್ನುತ್ತಾರೆ. ನಾವು ಕೊಡುವುದಕ್ಕಿಂತ ಮಿಗಿಲಾಗಿ, ಆತ ನಮ್ಮಿಂದ ಪಡೆಯಲು ಬಂದಿರುವುದು ದೇವಸದೃಷವೆಂದು ಭಾವಿಸಬೇಕು ಎಂದು ಸೇವಕನಾದವನು ಎಂದೂ ಮರೆಯಬಾರದು. ಈ ಮಹತ್ವವನ್ನು ಎತ್ತಿಹಿಡಿಯಲೆಂದೇ ಸೇವಾಸಕ್ತ ಮಹನೀಯರಾದ ಕೆಂಗಲ್ ಹನುಮಂತಯ್ಯನವರು ವಿಧಾನ ಸೌಧದ ಹಣೆಯ ಮೇಲೆ ಎಲ್ಲರಿಗೂ ಕಾಣಿಸುವಂತೆ 'ಸರ್ಕಾರದ ಕೆಲಸ ದೇವರ ಕೆಲಸ' ಎಂದು ಬರೆಸಿದ್ದಾರೆ. ಇಂದಿನ ಜನಸೇವಕರು ಇದನ್ನು ಅರಿಯಬೇಕು. ವಿಪರ್ಯಾಸವೆಂದರೆ, 'ಹೌದು ದೇವರೇ ಗತಿ. ದೇವರೇ ಬಂದು ಮಾಡಿಕೊಡಬೇಕು' ಎಂದು ಲೇವಡಿ ಮಾಡುವವರೂ ಇದ್ದಾರೆ.
ಮೇಲ್ಪಟ್ಟದಲ್ಲಿರುವವರು ಉಳಿದವರಿಗೆ ಮೇಲ್ಪಂಕ್ತಿ ಹಾಕುವ ಮೂಲಕ ಆದರ್ಶವಾಗಬೇಕು. 'ಯಥಾ ರಾಜಾ ತಥಾ ಪ್ರಜಾ' ಎಂಬಂತೆ ಮೇಲಿನ ಹಂತದಲ್ಲಿರುವವರು ಹೇಗೆ ನಡೆಸಿಕೊಳ್ಳುವರೋ ಹಾಗೆಯೇ ಕೆಳಹಂತದವರು ಇರುತ್ತಾರೆ ಎಂಬುದರಲ್ಲಿ ಸಂಶಯವಿಲ್ಲ.
ಗಾಂಧಿ ನಮ್ಮ ದೇಶ 'ಗ್ರಾಮ' ರಾಜ್ಯವಾಗಬೇಕೆಂದು ಕನಸು ಕಂಡರು. ಅದನ್ನೇ ರಾಮರಾಜ್ಯವೆಂದೂ ಹೇಳುವುದುಂಟು. ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಜನರಿಗೆ ನ್ಯಾಯಸಮ್ಮತವಾಗಿ ಸ್ಪಂದಿಸುವ ಇಚ್ಛಾಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಅಷ್ಟೆ ಅಲ್ಲದೆ ಚಿಕ್ಕವರಿಂದ ದೊಡ್ಡವರವರೆಗೂ ಮೌಲಿಕ ವಿದ್ಯಾಭ್ಯಾಸದ ಮೂಲಕ ಸಮಾಜದ ಬಗ್ಗೆ ಕಳಕಳಿ ಮೂಡಿಸಬೇಕಿದೆ.
'ಇಂದಿಗೂ ಹಳ್ಳಿಗಾಡಿನಲ್ಲಿ ನಿರ್ಲಕ್ಷ್ಯಕ್ಕೊಳಗಾದ ಮುಗ್ದ ಜನರಿದ್ದಾರೆ. ಅವರ ಸಾಮಾಜಿಕ ಭದ್ರತೆಯನ್ನು ಕಡೆಗಣಿಸಿ ಶೋಷಣೆ ಮಾಡುವ ಸ್ಥಳೀಯ ಮುಖಂಡರು ಮತ್ತು ಅದಕ್ಕೆ ಕೈ ಜೋಡಿಸುವ ಬಹುಪಾಲು ಅಧಿಕಾರಿಗಳೂ ಇದ್ದಾರೆ  ಎಂಬುದು ಅಧ್ಯಯನಗಳಿಂದ ಸಾಬೀತಾಗಿದೆ.
ಒಂದು ಉದಾಹರಣೆ: ಬಿಳಿಗಿರಿರಂಗನ ಬೆಟ್ಟದ ಸೋಲಿಗ ಕೇತಮ್ಮನಿಗೆ ವೃದ್ಧಾಪ್ಯವೇತನ ತಿಂಗಳಿಗೆ 250 ರುಪಾಯಿ ಬರುತ್ತದಂತೆ. ಪೋಸ್ಟಮನ್ ಅನ್ನು ತೆಗೆದು ಹಾಕಿ ಹೊಸ ವ್ಯವಸ್ಥೆಯಲ್ಲಿ ನೇಮಕಗೊಂಡ ಬಿಸಿನೆಸ್ ಕರೆಸ್ಪಾಂಡೆಂಟ್ ತನ್ನ ಜೇಬಿನಿಂದ ಕೊಟ್ಟಂತೆ 250 ಕೊಟ್ಟು ಇನ್ನುಳಿದ 250 ಗುಳುಂ ಮಾಡುತ್ತಾನೆ! ಹೀಗೆ ಬಡವರನ್ನು ಶೋಷಿಸುವುದನ್ನು ಗಮನಿಸದ ಮೇಲಧಿಕಾರಿಗಳಿದ್ದಾರೆ. ಕಾಡಾನೆ ತುಳಿತಕ್ಕೆ ಸಿಕ್ಕಿ ನಡು ಸ್ವಾದೀನ ಕಳೆದುಕೊಂಡ ನಂಜಮ್ಮನಿಗೆ ಹತ್ತು ವರ್ಷಗಳಾದರೂ ಅಂಗವಿಕಲ ವೇತನ ಸಿಕ್ಕಿಲ್ಲ. ಯಾವೊಬ್ಬ ಅಧಿಕಾರಿಯಾಗಲೀ ಮುಖಂಡರಾಗಲೀ ಬಂದು ನೋಡಿಕೊಂಡು ಹೋಗಿಲ್ಲ.
ಹುಟ್ಟಿನಿಂದಲೇ ಕುರುಡಾಗಿರುವ ಬೆಲ್ಲತ್ತ ಗ್ರಾಮದ ಸೋಲಿಗ ರಂಗಮ್ಮನಿಗೆ 26 ವರ್ಷಗಳಾದರೂ ಅಂಗವಿಕಲ ವೇತನ ಮಂಜೂರು ಮಾಡದೆ ಇರುವ ಅಧಿಕಾರ ವ್ಯವಸ್ಥೆಯನ್ನು ನೋಡಿದಾಗ ಇದೆಲ್ಲಾ ಸರಿಹೋಗುವುದು ಯಾವಾಗ? ಯಾರು ಮಾಡಬೇಕು? ಎಂಬ ಪ್ರಶ್ನೆಗಳು ಹುಟ್ಟುವುದು ಸಹಜ. ಏಕೆಂದರೆ ಇವರ್ಯಾರೂ ಸಕಾಲ ಯೋಜನೆಯ ಹತ್ತಿರ ಸುಳಿಯಲೂ ಆಗದೆ ಮೂಲೆಗುಂಪಾದ ಅಸಹಾಯಕರು. ಒಂದಲ್ಲ ಎರಡಲ್ಲ, ಹೆಜ್ಜೆ ಹೆಜ್ಜೆಗೂ ಅನೇಕ ಪ್ರಕಾರದ ನ್ಯೂನತೆಗಳನ್ನು ಆಡಳಿತ ವ್ಯವಸ್ಥೆಯಲ್ಲಿ ಕಾಣಬಹುದು. ಅನೇಕರು ದುಡ್ಡು ಮಾಡಲು ಆಯಕಟ್ಟಿನ ಜಾಗಗಳನ್ನು ಹುಡುಕುತ್ತಾರೆಯೇ ಹೊರತು ಜನರ ಸೇವೆ ಕಡೆ ಗಮನಹರಿಸದಿರುವುದು ಆಡಳಿತಕ್ಕೆ ನುಂಗಲಾಗದ ತುತ್ತಾಗಿದೆ.
ಯಾರಿಗೂ ಲೆಕ್ಕಿಸದೆ, ಭಯ-ಭಕ್ತಿ ಇಲ್ಲದೆ ಮನಸ್ಸಿಗ ಬಂದಂತೆ ವರ್ತಿಸುವ ನೌಕರರ ಬಗ್ಗೆ ಜನಮಾನಸದಲ್ಲಿ ಗೌರವಾದರ ಕಡಿಮೆಯಾಗುತ್ತದೆ. ಇನ್ನು ಎಲ್ಲೆಡೆಯೂ ಬ್ರಷ್ಟಾಚಾರ ಹೆಚ್ಚುತ್ತಿದೆ. ಕೆಲಸವಾಗಬೇಕೆಂದರೆ ದುಡ್ಡು, ಇಲ್ಲವೇ ಪ್ರಭಾವವಿರಬೇಕು. ಅನೇಕ ಬಾರಿ ಎರಡೂ ಇರಬೇಕು.
ನಾನು 2009ರಲ್ಲಿ ಕೈಗೊಂಡ ಅಧ್ಯಯನವೊಂದರ ಪ್ರಕಾರ ಸುಮಾರು ಶೇ 36ರಷ್ಟು ವೃದ್ಧರು, ನಿರ್ಗತಿಕ ವಿಧವೆಯರು ಮತ್ತು ವಿಕಲಚೇತನರು ತಮ್ಮದಲ್ಲದ ತಪ್ಪಿನಿಂದ ಸಾಮಾಜಿಕ ಭದ್ರತೆಯಿಂದ ವಂಚಿತರಾಗಿರುವುದು ತಿಳಿದುಬಂದಿದೆ. ಇದನ್ನು ನಿಷ್ಕ್ರಿಯ ನಾಗರಿಕ ಸೇವಕರಿಂದಾಗುವ ಘೋರ ದ್ರೋಹವೆನ್ನಬಹುದು. ಏಕೆಂದರೆ ಇದನ್ನು ಮಾನವ ಹಕ್ಕಿನ ಪರಿವಿಡಿಗೆ ಬರುವ ವಿಷಯವಾಗಿ ಸರ್ವೋಚ್ಚ ನ್ಯಾಯಾಲಯವು ಪರಿಗಣಿಸಿದೆ. ಸಾರ್ವಜನಿಕ ಸೇವೆ ದಿನೇ ದಿನೇ ರೋಗಗ್ರಸ್ಥವಾಗಿ  ಕ್ಷೀಣವಾಗುತ್ತಿದೆಯಲ್ಲದೆ, ಸರಿಪಡಿಸಲಾಗದ ಹಂತ ತಲುಪಿದೆ ಎಂದರೆ ಆಶ್ವರ್ಯಪಡಬೇಕಿಲ್ಲ. ಇದು ಯಾರಿಂದಲೂ ಸರಿಮಾಡಲು ಆಗುವುದಿಲ್ಲ ಎಂಬ ಅಭಿಪ್ರಾಯವೂ ಇದೆ. ನನ್ನ ಇಲಾಖೆ, ನನ್ನ ಕೆಲಸ, ನಾನು ಸರಿಯಾಗಿ ಮಾಡಬೇಕು ಎನ್ನುವುದನ್ನುಬಿಟ್ಟು ಬೇರೆಯವರು, ಬೇರೆ ಇಲಾಖೆಯವರು, ಮೇಲಿನವರು, ಕೆಳಗಿನವರು ಸರಿಯಿಲ್ಲವೆನ್ನುವ, ದೂರುವ ಅಭ್ಯಾಸ ಸಾಮಾನ್ಯವಾಗಿದೆ. ಅಧಿಕಾರಿಗಳ ಗುಣಮಟ್ಟ ಕಡಿಮೆಯಾದಂತೆಲ್ಲಾ ಆಡಳಿತ ಕುಸಿದು ಜನರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಇವೆಲ್ಲವನ್ನೂ ನೋಡುತ್ತಲೇ ಇರುವ ಸಮಾಜ ಎಚ್ಚೆತ್ತುಕೊಳ್ಳಬೇಕಿದೆ. ಆದ್ದರಿಂದ ಅಧಿಕಾರಿಗಳಷ್ಟೆ ಅಲ್ಲ ಜನ ಪ್ರತಿನಿಧಿಗಳಾದಿಯಾಗಿ ಜನರಿಗೆ ಅರಿವು ಮೂಡಿಸುವುದರ ಜೊತೆಗೆ ಸಾಮಾನ್ಯ ಜನರ ಸಮಸ್ಯೆಗಳಿಗೆ ಪ್ರೀತಿಯಿಂದ ಸ್ಪಂದಿಸುವ ಪ್ರಾಮಾಣಿಕ ನಿಸ್ವಾರ್ಥ ಪ್ರಯತ್ನ ಮಾಡಬೇಕಿದೆ.
ಸರ್ಕಾರಿ ನೌಕರರಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಸರ್ಕಾರ ಒದಗಿಸಿದೆಯಾದರೂ ನಿಷ್ಕ್ರಿಯತೆ ಎಂದರೆ ಆಶ್ಚರ್ಯವಾಗುವುದಲ್ಲವೆ? ಕರ್ನಾಟಕ ಸರ್ಕಾರ ದಿಟ್ಟವಾಗಿ ಸಕಾಲ ಯೋಜನೆ ಮುಖಾಂತರ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಿರುವುದು ಶ್ಲಾಘನೀಯ. ನಮ್ಮ ಜನ ಆರ್ಥಿಕ, ಸಾಮಾಜಿಕ ಸೌಲಭ್ಯ ಸಕಾಲದ ಮೂಲಕ ಪಡೆಯಬೇಕೆಂದರೆ ಜನರು ಅರ್ಜಿ ಹಾಕಲೇಬೇಕು. ಆದರೆ ಅರ್ಜಿ ಹಾಕಲಾಗದಿರುವವರನ್ನು ಗುರುತಿಸಿ ಸೌಲಭ್ಯ ಒದಗಿಸುವ ಕೆಲಸ ಯಾರು ಮಾಡಬೇಕು? ಈ ವರ್ಗದ ಜನರ ಬಗ್ಗೆ ತಲೆಕೆಡಿಸಿಕೊಳ್ಳಬೇಕಾದ ಅವಶ್ಯಕತೆಯಿದೆ. ಯಾವುದೇ ಯೋಜನೆ ಫಲಕಾರಿಯಾಗಬೇಕಾದಲ್ಲಿ ಅರ್ಹರೆಲ್ಲರನ್ನೂ ಒಳಗೊಳ್ಳುವಂತೆ ಮಾಡಬೇಕು.
ಬಹುಶಃ ಗಾಂಧಿಜೀಯವರು ಆಶಿಸಿದ ಸಮಾಜ ನಿರ್ಮಾಣವಾಗಬೇಕಾದಲ್ಲಿ ಪ್ರತಿಯೊಬ್ಬ ಜವಾಬ್ದಾರಿಯುತ ವ್ಯಕ್ತಿಯು ಇತರರ ಕಷ್ಟಗಳಿಗೆ ನೆರವಾಗಲು ಕ್ರಿಯಾಶೀಲ ಸೇವಾ ಮನೋಭಾವ ಬೆಳೆಸಿಕೊಳ್ಳುವುದು ಅವಶ್ಯ. ಇಲ್ಲವಾದರೆ ಈಗಿನ ಆಧುನಿಕತೆಯ ಬಿರುಸಿನಲ್ಲಿ ಬಡವರು ಅಶಕ್ತರು ಮೇಲೇಳಲಾರದೆ ಮೂಲೆಗುಂಪಾಗುತ್ತಲೇ ಇರುತ್ತಾರೆ. ಹೀಗಿರುವಾಗ ಆಡಳಿತದಲ್ಲಿ ಆಯ ತಪ್ಪಿರುವುದನ್ನು ಗುರುತಿಸಿ ಹದಕ್ಕೆ ತರಲು ಮತ್ತು ನಾಗರೀಕ ಸೇವೆಗೆ ಗೌರವ ತರಲು ಸೃಜನಶೀಲ ಸಾರ್ವಜನಿಕ ಸೇವಕರು ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಳ್ಳುತ್ತಾರೆ ನಿಜ.
ಆದರೆ ಸಾರ್ವಜನಿಕ ಸೇವೆ ಎಂಬುದು ಬೃಹತ್ ವ್ಯಾಪ್ತಿ ಹೊಂದಿರುವುದರಿಂದ ಅದಕ್ಕೆ ದೊಡ್ಡ ಪ್ರಮಾಣದ ಬಹುಮುಖ ನಿರಂತರ ಕಾರ್ಯೋಪಾಯಗಳು ಜಾರಿಗೆ ಬರಬೇಕಾಗಿದೆ. ಅದಕ್ಕಾಗಿಯೇ ನಾಗರೀಕ ಸೇವಕರು ಅದಕ್ಷರು, ಭ್ರಷ್ಟರು ಮತ್ತು ನಿಧಾನ ಪ್ರವೃತ್ತಿಯಿಂದಿರುವುದನ್ನು ತೊಡೆದು ಹಾಕುವ ಉದ್ದೇಶದಿಂದಲೇ ಕೇಂದ್ರ ಸರ್ಕಾರ ಮಹತ್ತರವಾದ ಬದಲಾವಣೆತರುವ ನಿಟ್ಟಿನಲ್ಲಿ ಡಾ. ಎಂ ವೀರಪ್ಪ ಮೊಯ್ಲಿ ಶಿಫಾರಸುಗಳು ಎರಡನೇ ಆಡಳಿತ ಸುಧಾರಣೆ ಆಯೋಗದ ವರದಿಯಲ್ಲಿ ಅಡಕವಾಗಿವೆ. ಈ ಮೇಲಿನ ಎಲ್ಲಾ ಅಂಶಗಳನ್ನು ಪರಿಶೀಲಿಸಿದೆ. ಆದ್ದರಿಂದ ನಾಗರಿಕ ಸೇವೆಯನ್ನು ಪ್ರಸ್ತುತ ಅವಶ್ಯಕತೆಗಳಿಗೆ ಹೇಗೆ ಚುರುಕು ಗೊಳಿಸಬಹುದೆಂಬ ಸುಧಾರಣಾ ಶಿಫಾರಸುಗಳನ್ನು ಮಾಡಿರುವುದನ್ನು ಸರ್ಕಾರವು ಗಣನೆಗೆ ತೆಗೆದುಕೊಳ್ಳಬೇಕಾಗಿದೆ ಪ್ರಸ್ತುತ.

- ಡಾ. ಬಿ.ಎಸ್.ಕೃಷ್ಣಪ್ರಸಾದ್
ಸದಸ್ಯರು, ಕರ್ನಾಟಕ ಲೋಕಸೇವಾ ಆಯೋಗ
krishnaprasadz@yahoo.co.in

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement