ಸಾಯುವುದೋ ಅಥವಾ ಸಾಯಿಸುವುದೋ? ಆಯ್ಕೆ ನಮ್ಮದು!
'ಈ ಹೊತ್ತಿನ ಶಾಂತಿ, ದೊಡ್ಡ ಅಪಾಯದ ಮುನ್ಸೂಚನೆ'.
ಶನಿವಾರದಂದು ನಕ್ಸಲರ ದಾಳಿಗೆ ಮೃತಪಟ್ಟ ಸಲ್ವಾ ಜುಡುಂನ ಸ್ಥಾಪಕ ಮಹೇಂದ್ರ ಕರ್ಮಾ ಕೆಲವು ದಿನಗಳ ಹಿಂದೆ ಹೇಳಿದ ಮಾತಿದು. ಶನಿವಾರ ಅವರನ್ನು ಬುಲೆಟ್ಪ್ರೂಫ್ ಕಾರಿನಿಂದ ಹೊರಗೆಳೆದು ಕೊಂದ ಮಾವೋವಾದಿಗಳು, ನಂತರ ಎಮ್ಎಲ್ಎ ಕವಸಾಯ್ ಲಕ್ಮಾ ಮತ್ತು ಛತ್ತೀಸ್ಗಡದ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನಂದಕುಮಾರ್ ಪಟೇಲ್ ಅವರನ್ನೂ ಸಾಯಿಸಿದ್ದಾರೆ.
ಈಗಂತೂ ಭಾರತದ ಮುಂದೆ ಎರಡು ಮೂಲಭೂತ ಆಯ್ಕೆಗಳಿವೆ. ಯಾವುದಾದರೂ ಒಂದನ್ನು ನಾವು ಈಗಲೇ ಆರಿಸಿಕೊಳ್ಳಬೇಕು: ನಮ್ಮ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಲು ಉಗ್ರರನ್ನು ಕೊಲ್ಲಲು ಸಿದ್ಧರಿದ್ದೇವೆಯೇ? ಅಥವಾ ನಮ್ಮ ಜನರನ್ನು ಮಾವೋವಾದಿಗಳ ಕೈಯಲ್ಲಿ ಅನ್ಯಾಯವಾಗಿ ಸಾಯಲು ಬಿಡಬೇಕೇ?
ಒಂದೋ, ನಕ್ಸಲರನ್ನು ಪತ್ತೆಹಚ್ಚಲು ನಾವು ಖರೀದಿಸಿರುವ ನಾಲ್ಕು ಮಿಲಿಯನ್ ಡಾಲರ್ ವೆಚ್ಚದ ಇಸ್ರೇಲ್ ನಿರ್ಮಿತ 'ಹಿರಾನ್' ಕಣ್ಗಾವಲು ಡ್ರೋನ್ಗಳು ವಿಫಲವಾಗಿವೆ ಅಥವಾ ಅದು ಕಳುಹಿಸಿದ ಮಾಹಿತಿಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ನಮ್ಮ ರಾಷ್ಟ್ರೀಯ ತಾಂತ್ರಿಕ ಸ್ಥಳಾನ್ವೇಷಣಾ ಸಂಸ್ಥೆಗೆ ಸಫಲವಾಗಲಿಲ್ಲ.
ಕೊಲೆಗಡುಕರು ಅಷ್ಟೊಂದು ಸಂಖ್ಯೆಯಲ್ಲಿ ಹೊಂಚುಹಾಕಿ ಕುಳಿತಿದ್ದರೂ ಅದನ್ನು ಪತ್ತೆಹಚ್ಚಲು ತಮ್ಮ ಗುಪ್ತಚರ ಜಾಲಗಳಿಂದ ಏಕೆ ಸಾಧ್ಯವಾಗಲಿಲ್ಲ ಎನ್ನುವುದನ್ನು ಛತ್ತೀಸ್ಗಡ ಪೊಲೀಸರು ಮತ್ತು ಗುಪ್ತಚರ ದಳ ವಿವರಿಸಲೇಬೇಕು. ಎಂದಿನಂತೆ ಈ ಬಾರಿಯೂ ಹಲವಾರು ಪ್ರಶ್ನೆಗಳು ಉದ್ಭವವಾಗುತ್ತವಾದರೂ, ಬರೀ ಸುಳ್ಳು ಉತ್ತರಗಳೇ ನಮಗೆ ಎದುರಾಗುತ್ತವೆ ಎನ್ನುವುದಂತೂ ಸುಳ್ಳಲ್ಲ. 'ಎಲ್ಲವೂ ನಿಯಂತ್ರಣದಲ್ಲಿದೆ' ಎಂದು 6 ತಿಂಗಳ ಹಿಂದಷ್ಟೇ ಛತ್ತೀಸ್ಗಡ ಪೊಲೀಸ್ ಮಹಾನಿರ್ದೇಶಕ ರಾಮ್ನಿವಾಸ್ ಹೇಳಿದ್ದರು. ಆದರೂ ಈ ದುರ್ಘಟನೆ ನಡೆದುಹೋಗಿದೆ.
ಹಾಗೆ ನೋಡಿದರೆ ಏಪ್ರಿಲ್ ತಿಂಗಳಲ್ಲೇ ನಮ್ಮ ಗುಪ್ತಚರ ಸಂಸ್ಥೆಗಳು, ಮಾನ್ಸೂನ್ ಪೂರ್ವದಲ್ಲಿ ಹೈ ಪ್ರೊಫೈಲ್ ವ್ಯಕ್ತಿಗಳ ಮೇಲೆ ನಕ್ಸಲರು ದಾಳಿ ಮಾಡಬಹುದು ಎಂದು ಎಚ್ಚರಿಸಿದ್ದವು. ಏಕೆಂದರೆ 2010ರಲ್ಲೂ ಕೂಡ ಇದೇ ಸಮಯದಲ್ಲಿಯೇ ನಕ್ಸಲರ ದಾಳಿಗೆ ಸುಮಾರು 79 ಸಿಆರ್ಪಿಎಫ್ ಯೋಧರು ಸಾವನ್ನಪ್ಪಿದ್ದರು. ಈ ಘಟನೆಯ ನಂತರ ಸಿಆರ್ಪಿಎಫ್ ಛತ್ತೀಸ್ಗಡದಲ್ಲಿ ಸುಮಾರು 20 ಸೇನಾ ತುಕಡಿಗಳನ್ನು ನಿಯೋಜಿಸಿತು. ಎಲ್ಲದಕ್ಕಿಂತ ಮುಖ್ಯವಾಗಿ ಅರಣ್ಯ ಹೋರಾಟದ ಮೂಲಭೂತ ತಂತ್ರಗಳನ್ನೆಲ್ಲ ಅದು ಅರ್ಥಮಾಡಿಕೊಂಡಿತ್ತು. ಹಾಗಾಗೆ ತಿಂಗಳುಗಳಿಂದ ನಕ್ಸಲರು ಸೇನೆಯ ಮೇಲೆ ಬೃಹತ್ ದಾಳಿ ನಡೆಸಲು ಹಿಂಜರಿದಿದ್ದರು. ಈ ತಿಂಗಳ ಆದಿಯಲ್ಲಿ ರಗದಲ್ಪುರದ ಆಕಾಶವಾಣಿ ಕೇಂದ್ರದ ಮೇಲೆ ದಾಳಿ ಮಾಡಿ 3 ಪೊಲೀಸರನ್ನು ಬಲಿ ತೆಗೆದುಕೊಂಡರಾದರೂ, ತಮ್ಮ ಗುರಿಯನ್ನು ಸಾಧಿಸಲು ಅವರಿಗೆ ಸಾಧ್ಯವಾಗಿರಲಿಲ್ಲ. ನಿರಂತರ ಎಚ್ಚರಿಕೆಗಳ ನಂತರವೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆಶಾವಾದಿಯಾಗಿಯೇ ಉಳಿದವು. ದೇಶದ ವಿವಿಧ ರಾಜ್ಯಗಳಲ್ಲಿನಂತೆ ಛತ್ತೀಸ್ಗಡದಲ್ಲೂ ನಕ್ಸಲರ ಆರ್ಭಟ ಕಡಿಮೆಯಾಗಿತ್ತು. 2011ರಲ್ಲಿ 124 ನಾಗರಿಕರು, 80 ಪೊಲೀಸ್ ಸಿಬ್ಬಂದಿ ಮತ್ತು 34 ನಕ್ಸಲರು ಮೃತಪಟ್ಟರೆ, 2012ರಲ್ಲಿ 63 ನಾಗರಿಕರು, 46 ರಕ್ಷಣಾ ಸಿಬ್ಬಂದಿಗಳು ಮತ್ತು 38 ನಕ್ಸಲರು ಮೃತಪಟ್ಟಿದ್ದರು.
ಈ ಅಂಕಿ ಸಂಖ್ಯೆಯೇ ಅಲ್ಲಿನ ಪರಿಸ್ಥಿತಿಯ ತಪ್ಪು ಅವಲೋಕನಕ್ಕೆ ಕಾರಣವಾಯಿತು. ಪೊಲೀಸರು-ನಕ್ಸಲರ ನಡುವಿನ ಗುಂಡಿನ ಚಕಮಕಿ ಕಡಿಮೆಯಾಯಿತಾದರೂ 2011ರಲ್ಲಿ 75ರಷ್ಟಿದ್ದ ನಕ್ಸಲರ ದಾಳಿ ಸಂಖ್ಯೆ 2012ರಲ್ಲಿ 76ಕ್ಕೆ ಏರಿತ್ತು. ಇನ್ನು ನಕ್ಸಲರಿಂದ ಶಿಕ್ಷೆಗೆ ಗುರಿಯಾದ ಅನುಮಾನಾಸ್ಪದ ಮಾಹಿತಿದಾರರು ಮತ್ತು ಸೈದ್ಧಾಂತಿಕ ವಿರೋಧಿಗಳ ಸಂಖ್ಯೆ 13ರಿಂದ 16ಕ್ಕೇರಿತ್ತು. ಹಾಗಾಗೇ ಅಲ್ಲಿ ನಕ್ಸಲರ ಹಾವಳಿ ಇನ್ನೂ ಸಾಗಿತ್ತು ಎನ್ನುವುದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟದ ಕೆಲಸವೇನಾಗಿರಲಿಲ್ಲ.
ಸರಳವಾಗಿ ಹೇಳಬೇಕೆಂದರೆ, ಛತ್ತೀಸ್ಗಡದಲ್ಲಿ ಪೊಲೀಸರು ಉಗ್ರ ಕಾರ್ಯಾಚರಣೆಗಳಿಂದ ಹಿಂದೆ ಸರಿದಿದ್ದರು. ಇನ್ನು ನಕ್ಸಲ್ ವಿರೋಧಿ ಬಣಗಳಿಗೆ ರಾಜಕೀಯ ಬೆಂಬಲ ಕಡಿಮೆಯಾಗಿತ್ತು. ಕಳೆದ ವರ್ಷವಂತೂ ಜನರಿಗೆ ಅಪಾಯವಾಗಬಹುದು ಎಂಬ ಕಾರಣವೊಡ್ಡಿದ ಸರ್ಕಾರ ನಕ್ಸಲ್ ವಿರೋಧಿ ಕಾರ್ಯಾಚರಣೆಯನ್ನು ನಿಲ್ಲಿಸಲು ಆದೇಶ ನೀಡಿತ್ತು.
ಇದನ್ನು ದೆಹಲಿ ನಾಯಕತ್ವ 'ಗೆಲುವು' ಎಂದು ಕರೆಯಿತು!
ನಮ್ಮ ಸರ್ಕಾರದ ನೀತಿಯಲ್ಲಿ ಅತಿರೇಕದ ಕಲ್ಪನೆ ತೂರಿಕೊಂಡದ್ದು ಇದೇ ಮೊದಲೇನಲ್ಲ. 2009ರಲ್ಲಿ ನಕ್ಸಲ್ ನಿಗ್ರಹಕ್ಕಾಗಿ ಯುಪಿಎ ಸರ್ಕಾರ ಸಿಆರ್ಪಿಎಫ್ ಅನ್ನು ನಿಯೋಜಿಸಿತು. 'ಸಿಆರ್ಪಿಎಫ್ ಕಾರ್ಯಾಚರಣೆಗಿಳಿದ ಮೂವತ್ತು ದಿನಗಳಲ್ಲಿ ನಕ್ಸಲ್ ಪೀಡಿತ ಪ್ರದೇಶಗಳನ್ನೆಲ್ಲ ಬಂಧ ಮುಕ್ತಗೊಳಿಸಲಾಗುವುದು' ಎಂದು ಕೇಂದ್ರ ಗೃಹ ಕಾರ್ಯದರ್ಶಿ ಜಿ.ಕೆ. ಪಿಳ್ಳೈ ಹೇಳಿದ್ದರು. ಟಾರ್ಮೆಟ್ಲಾದಲ್ಲಿ ಸಿಆರ್ಪಿಎಫ್ ಯೋಧರ ಹತ್ಯೆಯಾದ 11 ವಾರಗಳ ಬಳಿಕ ಚಿದಂಬರಂ ಅವರು 'ಎಡಪಂಥೀಯ ತೀವ್ರವಾದ ಇನ್ನು ಮೂರು ವರ್ಷಗಳಲ್ಲಿ ಕೊನೆಯಾಗಲಿದೆ ಎಂಬ ಭರವಸೆ ನನಗಿದೆ' ಎಂದು ಹೇಳಿದ್ದರು. ಆದರೂ 2010ರಲ್ಲಿ ನಕ್ಸಲರ ಹಿಂಸಾಚಾರ ಉತ್ತುಂಗಕ್ಕೇರಿತು. ಆಗ ಕೇಂದ್ರ ಗೃಹ ಸಚಿವಾಲಯ, ತನ್ನ ಪ್ರಯತ್ನದಿಂದಾಗಿ 'ಉತ್ತಮ ಫಲಿತಾಂಶಗಳು' ಹೊರಬೀಳುತ್ತಿವೆ ಎಂದಿತು! ಹಿಂದೆ ಪೆಂಟಗಾನ್ನಲ್ಲಿ ಪ್ರಖ್ಯಾತಿ ಪಡೆದಿದ್ದ ಜನಸಂಖ್ಯಾ ಕೇಂದ್ರಿತ ಯುದ್ಧ ಸಿದ್ಧಾಂತಗಳನ್ನೇ ಯುಪಿಎ ಸರ್ಕಾರ ತನ್ನ ನೀತಿಯಲ್ಲಿ ಅಳವಡಿಸಿಕೊಂಡಿತು.
ಇದು 'ನಡೆಯುವುದಿಲ್ಲವೆಂದು' ಪರಿಣತರು ಸ್ಪಷ್ಟವಾಗಿ ಹೇಳಿದರು. 'ನಕ್ಸಲರ ಉಪಸ್ಥಿತಿ ಇಲ್ಲದ ಗ್ರಾಮೀಣ ಭಾಗಗಳಲ್ಲಿ ಸರ್ಕಾರ ತನ್ನ ಆಡಳಿತವನ್ನು ಚುರುಕುಗೊಳಿಸಬೇಕಿದೆ. ಆದರೆ ಅಲ್ಲಿ ಆಡಳಿತ ಯಂತ್ರವೇ ಇಲ್ಲವಾಗಿದೆ. ಇಂತಹ ಕೆಲವು ಸ್ಥಳಗಳು ದೆಹಲಿಯಿಂದ ಕೂಗಳತೆಯ ದೂರದಲ್ಲಿಯೇ ಇವೆ' ಎಂದು ರಕ್ಷಣಾ ಪರಿಣತ ಅಜಯ್ ಸಾಹ್ನಿ ಯುಪಿಎ ಸರ್ಕಾರಕ್ಕೆಸಲಹೆ ನೀಡಿದ್ದರು.
ಆದರೆ ಯುಪಿಎ ಯಾವುದನ್ನೂ ಕಿವಿಗೆ ಹಾಕಿಕೊಳ್ಳಲಿಲ್ಲ. ಹಾಗಾಗೇ ಪೆಂಟಗನ್ ಅಫ್ಘಾನಿಸ್ಥಾನದಲ್ಲಿ ಅವಾಂತರ ಎದುರಿಸಿ ಬುದ್ಧಿ ಕಲಿತಂತೆ ಈಗ ಅದು ಈ ಅವಗಢ ಎದುರಿಸಿ ಬುದ್ಧಿ ಕಲಿತಿದೆ.
2011ರಲ್ಲಿ ಛತ್ತೀಸ್ಗಡದ ಸುಮಾರು 1,92,000 ಚದರ ಕಿ.ಮಿ. ಪ್ರದೇಶದಲ್ಲಿ ನಿಯೋಜಿಸಲಾಗಿದ್ದ ಗಸ್ತು ಪೊಲೀಸ್ ಸಿಬ್ಬಂದಿಯ ಸಂಖ್ಯೆ 27,587. ಇನ್ನು ಅಜಮಾಸು ಇದರಷ್ಟೇ ವ್ಯಾಪ್ತಿಯಿರುವ ಗುಜರಾತ್ನಲ್ಲಿ ನಿಯೋಜಿತವಾದ ಪೊಲೀಸರ ಸಂಖ್ಯೆ 64, 200. ದೆಹಲಿ (69801). 2008ರಲ್ಲಿ ಮಾವೊವೋವಾದಿಗಳ ಉಪಟಳ ಹೆಚ್ಚಾದಾಗ ಛತ್ತೀಸಗಡದಲ್ಲಿ ಸರ್ಕಾರ ನಿಯೋಜಿಸಿದ್ದ ಪೊಲೀಸರ ಸಂಖ್ಯೆ ಕೇವಲ 25,716ರಷ್ಟಿದ್ದರೆ, ಅದರಲ್ಲಿ ಸೇವೆಯಲ್ಲಿದ್ದವರ ಸಂಖ್ಯೆ ಕೇವಲ 17,392!
ಅದರಲ್ಲೂ ಅತಿ ಹೆಚ್ಚು ಕೊರತೆ ಉದ್ಭವವಾಗಿರುವುದು ಉಪವರಿಷ್ಠಾಧಿಕಾರಿ ಮತ್ತು ಹಿರಿಯ ಅಧೀಕ್ಷಕರ ಹುದ್ದೆಗಳಲ್ಲಿ. ಛತ್ತೀಸ್ಗಡಕ್ಕೆ ಈ ಹುದ್ದೆಗಳ 370 ಅಧಿಕಾರಿಗಳ ಅಗತ್ಯವಿದೆ. ಆದರೆ ಅಲ್ಲಿರುವುದು ಕೇವಲ 288 ಅಧಿಕಾರಿಗಳಷ್ಟೇ.
ಅಂಕಿ ಅಂಶಗಳನ್ನು ನೋಡಿದಾಗ, ಕೇಂದ್ರ ಸರ್ಕಾರ ನಕ್ಸಲ್ ನಿಗ್ರಹಕ್ಕಾಗಿ ಸರಿಯಾದ ತಂತ್ರಗಳನ್ನೇ ರೂಪಿಸಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಇನ್ನು ನಿಯೋಜನೆಗೊಂಡ ಪೊಲೀಸರ ಕೌಶಲ್ಯ ವರ್ಧನೆ ಮತ್ತು ತರಬೇತಿಯ ವಿಷಯದ ಬಗ್ಗೆ ಮಾತನಾಡದಿರುವುದೇ ಒಳ್ಳೆಯದು! ಛತ್ತೀಸ್ಗಡ ನಕ್ಸಲರನ್ನು ಎದುರಿಸುವುದಕ್ಕಾಗಿ ಒಂದು ತರಬೇತಿ ಕೇಂದ್ರವನ್ನು ಅದ್ಧೂರಿಯಾಗಿ ತೆರೆದಿದ್ದು ಸತ್ಯ ಆದರೂ ಆದರೆ ಈಗ ಅಲ್ಲಿ ತರಬೇತಿ ಹೊಂದಿರುವ ಬಹುಪಾಲು ಪೊಲೀಸರು ವಿಐಪಿಗಳಿಗೆ ಬಾಡಿಗಾರ್ಡ್ಗಳಾಗಿ ನಿಯೋಜನೆಗೊಂಡಿದ್ದಾರೆ. ಇದು ಕೇವಲ ಸೈದ್ಧಾಂತಿಕ ಚರ್ಚೆಯಲ್ಲ. ಪ್ರತೀ ದಿನವೂ ನಕ್ಸಲರ ಕೈಯಲ್ಲಿ ಅಮಾಯಕರು ಸಾಯುತ್ತಿದ್ದಾರೆ. ನಮ್ಮ ಸರ್ಕಾರಗಳು ಜನತೆಯ ರಕ್ಷಣೆಗೆ ಮುಂದಾಗದಿರುವುದೇ ಹೀಗಾಗಲಿಕ್ಕೆ ಕಾರಣ. ಪ್ರತೀ ಹತ್ಯಾಕಾಂಡದ ನಂತರ ಕೊಂದವರೊಂದಿಗೆ ಮಾತುಕತೆ ನಡೆಸುವುದು, ಇಲ್ಲವೇ ಮಾತಿನಲ್ಲೇ ಬಾಂಬು ಸಿಡಿಸಿ ಸುಮ್ಮನಾಗುವುದು. ಮತ್ತೆ ಕೆಲವೇ ದಿನಗಳಲ್ಲಿ ಎಲ್ಲವೂ ಸಾಮಾನ್ಯ ಸ್ಥಿತಿಗೆ ಮರಳುತ್ತದೆ. ಮತ್ತೆ ಎಲ್ಲವೂ ಮರುಕಳಿಸುತ್ತದೆ.
ಆದರೆ ಈ ಬಾರಿ ಹಾಗಾಗುವುದಿಲ್ಲ.
3 ವರ್ಷದ ಹಿಂದೆ ಮಹೇಂದ್ರ ಕರ್ಮಾ ಹೇಳಿದ್ದರು: 'ನಾನೊಬ್ಬ ಪ್ರಜಾಪ್ರಭುತ್ವವಾದಿ ಮತ್ತು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಬದುಕುತ್ತಿದ್ದೇನೆ. ಒಂದು ವೇಳೆ ಅವರು(ನಕ್ಸಲರು) ನಮ್ಮ ವ್ಯವಸ್ಥೆಯನ್ನು ವಿರೋಧಿಸುತ್ತಾರೆಂದರೆ, ಅದು ಬಂಡಾಯವೆನಿಸಿಕೊಳ್ಳುತ್ತದೆ. ಆ ಬಂಡಾಯವನ್ನು ನಾವು ತುಳಿಯಲೇಬೇಕು. ನಮ್ಮಲ್ಲಿರುವ ಅತಿದೊಡ್ಡ ಕೊರತೆಯೆಂದರೆ ಪ್ರಜಾಪ್ರಭುತ್ವವಾದಿಗಳಿಗೆ ಪ್ರಜಾಪ್ರಭುತ್ವದೆಡೆಗೆ ನಿಷ್ಠೆ ಇಲ್ಲದಿರುವುದು'
ಆದರೆ ಈ ಮಾತು ಸತ್ಯವಲ್ಲ. 2003ರಲ್ಲಿ ಚಂದ್ರ ಬಾಬು ನಾಯ್ಡು ಅವರ ಮೇಲೆ ಯಾವಾಗ ನಕ್ಸಲರು ದಾಳಿ ಮಾಡಿದರೋ, ಆಗಲೇ ಆಂಧ್ರ ಪ್ರದೇಶ ಈ ಉಗ್ರವಾದಕ್ಕೆ ಹೆಡೆಮುರಿಕಟ್ಟಲು ಮುಂದಾಯಿತು. ಇದೇ ರೀತಿಯ ಉದಾಹರಣೆ ತ್ರಿಪುರಾ ಮತ್ತು ಪಂಜಾಬ್ನಲ್ಲೂ ಸಿಗುತ್ತದೆ.
ಒಟ್ಟಿನಲ್ಲಿ ನಮ್ಮ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಬೇಕಾದರೆ ನಾವು ನಕ್ಸಲರನ್ನು ಸದೆಬಡಿಯಲೇಬೇಕು. ಈ ಆಯ್ಕೆ ಮಾತ್ರ ನಮಗೆ ಗೆಲುವು ತಂದುಕೊಡಬಲ್ಲದು.
-ಪ್ರವೀಣ್ ಸ್ವಾಮಿ
anisikeprabha@gmail.com