ಬದುಕು ಭಾಗ್ಯವಾಗಿಸುವ ಯೋಜನೆ ಅನುಷ್ಠಾನವಾಗಲಿ
ಓಲೈಸುವಿಕೆ. ಅನುಮಾನವೇ ಬೇಡ, ಈ ದೇಶಕ್ಕೆ ಅಂಟಿಕೊಂಡ ದೊಡ್ಡ ಶಾಪವಿದು. ಇಲ್ಲಿ ಪ್ರತಿಯೊಂದು ರಾಜಕೀಯ ಪಕ್ಷಗಳು ಒಂದೊಂದು ಜಾತಿ, ಧರ್ಮದವರನ್ನು ಓಲೈಸುತ್ತಾ, ...
ಓಲೈಸುವಿಕೆ. ಅನುಮಾನವೇ ಬೇಡ, ಈ ದೇಶಕ್ಕೆ ಅಂಟಿಕೊಂಡ ದೊಡ್ಡ ಶಾಪವಿದು. ಇಲ್ಲಿ ಪ್ರತಿಯೊಂದು ರಾಜಕೀಯ ಪಕ್ಷಗಳು ಒಂದೊಂದು ಜಾತಿ, ಧರ್ಮದವರನ್ನು ಓಲೈಸುತ್ತಾ, ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡುವುದರೊಂದಿಗೆ ತನ್ನ ತೀರದ ಅಧಿಕಾರದ ದಾಹವನ್ನು ನೀಗಿಸಿಕೊಳ್ಳುತ್ತವೆ. ಇಂತಹ ದರಿದ್ರ ಸಂಪ್ರದಾಯವನ್ನು ದೇಶದಲ್ಲಿ ಹುಟ್ಟು ಹಾಕಿದ್ದೇ ಕಾಂಗ್ರೆಸ್. ಅದರ ಮುಂದುವರಿದ ಭಾಗವೆನ್ನುವಂತೆ ರಾಜ್ಯ ಸರ್ಕಾರ, ಮುಸ್ಲಿಂ ಯುವತಿಯರ ಮದುವೆಗೆ ರು. 50000 ಗಳನ್ನು ನೀಡಲು ಮುಂದಾಗಿದೆ. ಈ ಯೋಜನೆಯ ಉದ್ದೇಶವನ್ನು ಒಡೆದು ಹೇಳುವ ಅಗತ್ಯವಿಲ್ಲ. ಸಾಮಾನ್ಯವಾಗಿ ಈ ರೀತಿಯ ಜನಪ್ರಿಯ ಯೋಜನೆಗಳ ಉದ್ದೇಶ ಒಂದು ವರ್ಗವನ್ನು ಒಲೈಸಿಕೊಂಡು ಆ ಸಮುದಾಯದ ಮತಗಳನ್ನು ಪಕ್ಕಾ ಮಾಡಿಕೊಳ್ಳುವುದೇ ಆಗಿರುತ್ತದೆ. ಪ್ರಸ್ತುತ ರಾಜ್ಯ ಸರ್ಕಾರವು ಸಹ ಮುಂದಿನ ಲೋಕಸಭಾ ಚುನಾವಣೆಯ ಮೇಲೆ ಕಣ್ಣಿಟ್ಟೇ ಈ ಭಾರಿ ಯೋಜನೆಯನ್ನು ಘೋಷಿಸಿದೆ.
ಸರ್ಕಾರದ ಯಾವುದೇ ಯೋಜನೆ ಯಶಸ್ವಿಯಾಗಬೇಕಾದರೆ ಮುಖ್ಯವಾಗಿ ಘನವಾದ ಆಶಯವನ್ನು ಹೊಂದಿರುವುದರ ಜೊತೆಗೆ ಅನುಷ್ಠಾನದಲ್ಲಿ ಸ್ಪಷ್ಟತೆಯಿರಬೇಕು. ಆದರೆ ಪ್ರಸಕ್ತ ಶಾದಿ ಭಾಗ್ಯದಲ್ಲಿ ಆ ರೀತಿಯ ಗಂಭೀರ ಉದ್ದೇಶಗಳೇ ಕಾಣುತ್ತಿಲ್ಲ. ಇದರಿಂದ ಬಡ ಮುಸ್ಲಿಮರ ಬಾಳು ಹಸನಾಗುವುದೇ? ಅಕ್ಕಿ ಭಾಗ್ಯ ಯೋಜನೆಯ ಹಿಂದೆ, ಹಸಿವನ್ನು ಹೊಡೆದೊಡಿಸಬೇಕೆಂಬ ಆಶಯವಿತ್ತು. ಆದರೆ ಈ ಯೋಜನೆ ಹಿಂದೆ ಸರ್ಕಾರ ಮದುವೆಯನ್ನು ಪ್ರೋತ್ಸಾಹಿಸುತ್ತಿದೆಯಾ?
ಜಗತ್ತಿಗೇ ತಿಳಿದಿರುವಂತೆ ಮುಸ್ಲಿಂ ಸಮುದಾಯವನ್ನು ಇಂದು ಕಾಡುತ್ತಿರುವುದು ಮದುವೆಯ ಖರ್ಚು-ವೆಚ್ಚಗಳಲ್ಲ. ಬದಲಾಗಿ, ಅನಕ್ಷರತೆ, ನಿರುದ್ಯೋಗ. ಆರ್ಥಿಕವಾಗಿ ಪ್ರಬಲವಾಗಿರುವ ಕುಟುಂಬದ ಯುವತಿಯರೂ ಸಹ ಉನ್ನತ ವಿದ್ಯಾಭ್ಯಾಸದ ಸನಿಹದಲ್ಲಿ ಸುಳಿಯದಂತಹ ಅಂಧಕಾರದಲ್ಲಿ ಸಮುದಾಯ ಮುಳುಗಿದೆ. ಅದನ್ನು ಇಲ್ಲವಾಗಿಸಿ ಮುಸ್ಲಿಂ ಯುವತಿಯರ ಶಿಕ್ಷಣಕ್ಕೆ ಒತ್ತು ನೀಡಬೇಕಲ್ಲವೇ? ಮೆಡಿಕಲ್, ಇಂಜಿನಿಯರಿಂಗ್, ಸಿ.ಎ. ಮೊದಲಾದ ವೃತ್ತಿಪರ ಶಿಕ್ಷಣದಲ್ಲಿ ಮುಸ್ಲಿಂ ಯುವತಿಯರು ಯಾವ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ ಹೇಳಿ? ಇನ್ನು ಐ.ಎ.ಎಸ್, ಐ.ಪಿ.ಎಸ್, ಐ.ಎಫ್,ಎಸ್ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳಂತೂ ಗಗನ ಕುಸುಮವೇ ಸರಿ. ಸರ್ಕಾರ, ಮುಸ್ಲಿಂ ಸಮುದಾಯವನ್ನು ಮುಖ್ಯವಾಹಿನಿಗೆ ತರಬೇಕು. ಅವರ ಬಾಳು ಬೆಳಗಬೇಕಾದರೆ ಅವರಿಗೆ ಸದ್ಯದ ಅವಶ್ಯಕತೆಯಾಗಿರುವ ಶಿಕ್ಷಣವನ್ನು ನೀಡಬೇಕಲ್ಲವೇ? ಮುಸ್ಲಿಂ ವಿದ್ಯಾರ್ಥಿನಿಯರಿಗೆ ಅಗತ್ಯವೆನಿಸುವ ಸ್ಕಾಲರ್ಶಿಪ್, ಸ್ಟೈಫಂಡ್ಗಳನ್ನು ನೀಡಲಿ, ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ ತರಬೇತಿ ನೀಡಲಿ. ಈ ರೀತಿಯ ಯೋಜನೆಗಳಿಂದ ಒಬ್ಬರಿಗೆ ಮಾತ್ರವಲ್ಲ, ಇಡೀ ಸಮಾಜಕ್ಕೆ ಉಪಯೋಗವಾಗುತ್ತದೆ. ಸರ್ಕಾರ ಈ ರೀತಿಯ ದೂರದೃಷ್ಟಿಯುಳ್ಳ ರಚನಾತ್ಮಕ ಕಾರ್ಯಗಳತ್ತ ಗಮನ ಹರಿಸಬೇಕೇ ಹೊರತು, ಮದುವೆ, ಮುಂಜಿಗಳತ್ತ ಅಲ್ಲ.
ಮುಸ್ಲಿಂ ಸಮುದಾಯದ ಹಲವರಿಗೆ ಇದು ಲಾಭದಾಯಕ ಹಾಗೂ ಜನಪ್ರಿಯ ಘೋಷಣೆಯೆಂದು ತೋರಬಹುದು. ಆದರೆ ಇದು ಮುಸ್ಲಿಂ ಸಮುದಾಯವನ್ನೇ ಅಪಮಾನಿಸುವ ಹಾಗೂ ಅವರ ಸ್ವಾಭಿಮಾನಕ್ಕೆ ಕೊಡಲಿ ಪೆಟ್ಟನ್ನು ನೀಡುವ ಯೋಜನೆಯೆಂಬುದನ್ನು ಮೊದಲು ಅರಿಯಬೇಕು. ಸರ್ಕಾರ, ಮಂಚ, ಅಲ್ಮೇರಾ, ಮೊದಲಾದ ದಿನ ಬಳಕೆ ಸಾಮಗ್ರಿಗಳನ್ನು ನೀಡುತ್ತಿರುವುದಾದರೂ ಏತಕ್ಕಾಗಿ? ಅವರಿಗೆ ಕೊಳ್ಳುವ ಶಕ್ತಿಯಿಲ್ಲವೆಂದೆ? ಆಡಳಿತಾರೂಢ ಕಾಂಗ್ರೇಸ್ ಮುಸ್ಲಿಮರ ಬಡತನವನ್ನೇ ತನ್ನ ಬಂಡವಾಳವನ್ನಾಗಿಸಿಕೊಂಡಂತೆ ತೋರುವುದಿಲ್ಲವೇ? ಮುಸ್ಲಿಂ ಸಮುದಾಯದ ಮುಖಂಡರು, ತಮ್ಮ ಸಮುದಾಯ ಈ ರೀತಿಯ ಕ್ಷಣಿಕ ಸುಖದ ಬೆನ್ನುಬೀಳದಂತೆ ತಡೆದು, ಉನ್ನತ ಶಿಕ್ಷಣ, ಉದ್ಯೋಗ ಮೊದಲಾದ ಶಾಶ್ವತ ಪರಿಹಾರಗಳತ್ತ ಚಿಂತಿಸಬೇಕು.
ವಿವಾಹವೆಂಬುದು ಒಂದು ವೈಯಕ್ತಿಕ ಬದುಕಿಗೆ ಸಂಬಂಧಿಸಿದ ಖಾಸಗಿ ಕಾರ್ಯಕ್ರಮ. ಅಲ್ಲದೇ ಅದು ಬದುಕಿನ ಅಗತ್ಯವೂ ಅಲ್ಲ. ಹಾಗಿರುವಾಗ ಸರ್ಕಾರ ಅದಕ್ಕಾಗಿ ಕೋಟ್ಯಂತರ ಜನರ ತೆರಿಗೆ ಹಣವನ್ನು ಬಳಸಿಕೊಳ್ಳಬಹುದೇ? ಅದು ಮಂಗಳ ಕಾರ್ಯವೆನ್ನುವ ಭಾವನೆಯಿದ್ದಲ್ಲಿ, ಕಾಂಗ್ರೇಸ್ ಪಕ್ಷದ ನಿಧಿಯಿಂದಲೇ ನೀಡಲಿ. ಅಭಿನಂದಿಸೋಣ. ಬದುಕಿನ ಅಗತ್ಯವೆನಿಸಿರುವ ಆಹಾರ, ವಸತಿ, ಶಿಕ್ಷಣ, ನೀರು, ಆರೋಗ್ಯ ಮೊದಲಾದ ಸವಾಲುಗಳೇ ಬೆಟ್ಟದಂತಿರುವಾಗ ಸರ್ಕಾರದ ಈ ಯೋಜನೆಗೆ ಏನನ್ನಬೇಕೋ? ದಶಕದಿಂದ ಸಹಾಯಕ್ಕಾಗಿ ಅಂಗಲಾಚುತ್ತಿರುವ ಎಂಡೋ ಸಲ್ಫಾನ್ ಪೀಡಿತರ ನೆರವಿಗೆ ಸ್ಪಂದಿಸದ ಸರ್ಕಾರ, ಹೀಗೆ ನೀರಿನಂತೆ ಹಣವನ್ನು ವ್ಯಯಿಸುವುದರಲ್ಲಿ ಅರ್ಥವಿದೆಯೇ?
ಕಾಂಗ್ರೆಸ್ ನಾಯಕರು ನೀಡುತ್ತಿರುವ ಹೇಳಿಕೆಗಳು, ಯೋಜನೆಗಳ ಕುರಿತಾಗಿ ಚಿಂತಿಸಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಅಲ್ಪಸಂಖ್ಯಾತರ ಏಳಿಗೆಗಾಗಿಯೇ ಇಳೆಗಿಳಿದು ಬಂದಂತೆ ಆಡುವ ಕಾಂಗ್ರೆಸ್, ತನ್ನ ಆಡಳಿತದುದ್ದಕ್ಕೂ ಮಾಡಿದ್ದಾದರೂ ಏನನ್ನು? ಇಷ್ಟು ವರ್ಷದ ಕಾಂಗ್ರೆಸ್ ಆಡಳಿತದಲ್ಲಿ ಅಲ್ಪಸಂಖ್ಯಾತರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಎಷ್ಟು ಸಬಲೀಕರಣಗೊಂಡಿದ್ದಾರೆಂದು ಅಂಕಿ-ಅಂಶಗಳೇ ಸಾರಿ ಹೇಳುತ್ತವೆ. ಕಾಂಗ್ರೆಸ್ ಅಲ್ಪಸಂಖ್ಯಾತರನ್ನು ಒಂದು ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಂಡದ್ದನ್ನು ಬಿಟ್ಟರೆ, ಮುಖ್ಯವಾಹಿನಿಗೆ ತರುವ ಯಾವ ಪ್ರಮಾಣಿಕ ಕೆಲಸ ಮಾಡಿದೆ?
ದೇಶದಲ್ಲಿ ಬಾಂಬ್ ಸ್ಫೋಟಿಸಿ ಅಮಾಯಕರನ್ನು ಹತ್ಯೆಗೈದ ಭಯೋತ್ಪಾದಕರು ಮುಸ್ಲಿಂ ಧರ್ಮಕ್ಕೆ ಸೇರಿದವರೆಂಬ ಕಾರಣಕ್ಕೆ ಅವರನ್ನು ಗಲ್ಲಿಗೇರಿಸಲು ಹಿಂದೆ ಮುಂದೆ ನೋಡಿದ, ಅಮಾಯಕ ಮುಸ್ಲಿಂ ಯುವಕರ ಬಿಡುಗಡೆಗಾಗಿ ಸಮಿತಿ ರಚಿಸಬೇಕೆನ್ನುವ ಕಾಂಗ್ರೆಸ್ನ ನಿಲವನ್ನು ಪ್ರಜ್ಞಾವಂತ ಮುಸ್ಲಿಂ ಬಾಂಧವರಾದರೂ ಒಪ್ಪಿಯಾರೇ? ಇನ್ನೋರ್ವ ಮಂತ್ರಿವರ್ಯ ಖಾನ್ ಸಾಹೇಬರು ಮುಸ್ಲಿಮರಿಗಾಗಿಯೆ ಪ್ರತ್ಯೇಕ ವಿ.ವಿ. ಸ್ಥಾಪನೆಗೆ ಹೊರಟಿದ್ದಾರೆ! ಪ್ರತ್ಯೇಕ ವಿ.ವಿ ಸ್ಥಾಪನೆಯಾದ ಮಾತ್ರಕ್ಕೆ ಮುಸ್ಲಿಮರ ಶ್ರೇಯೋಭಿವೃದ್ಧಿ ಸಾಧ್ಯವೇ? ಚಿಕ್ಕ ವಯಸ್ಸಿನಲ್ಲಿಯೇ ಮನೆ ನಿರ್ವಹಣೆಗಾಗಿ ಗ್ಯಾರೆಜ್ನತ್ತ ಮುಖ ಮಾಡುವ ಮಕ್ಕಳನ್ನು ಮೊದಲು ಶಾಲೆಗಳಿಗೆ ಕರೆತರುವ ಪ್ರಯತ್ನವಾಗಬೇಕು. ಆರತಿಗೊಂದು, ಕೀರ್ತಿಗೊಂದು ಎಂಬ ನಿಯಮವನ್ನು ಮುಸ್ಲಿಮರು ಒಪ್ಪುವಂತಾಗಲಿ. ಈ ನಿಯಮ ಪಾಲಿಸುವವರಿಗೆ ಮಾತ್ರ ಸರ್ಕಾರದ ಸವಲತ್ತುಗಳು ಎಂದು ಘೋಷಣೆಯಾಗಲಿ. ಓಲೈಕೆ ನೀತಿ ಕೊನೆಗೊಳ್ಳಲಿ. ಆಗ ಮಾತ್ರ ಮುಸ್ಲಿಮರ ಬದುಕು ಬಂಗಾರವಾದೀತು.
- ಕಿರಣ್ ಜೋಶಿ
ಉಪನ್ಯಾಸಕರು, ಬೆಂಗಳೂರು