ಸಮೀಕ್ಷೆ ನಿಷೇಧ ಸಭ್ಯವೂ ಅಲ್ಲ, ಸಾಧುವೂ ಅಲ್ಲ!
ಸರ್ಕಾರದಿಂದ ಅಥವಾ ಚುನಾವಣಾ ಆಯೋಗದಿಂದ ವಾಕ್ ಸ್ವಾತಂತ್ರ್ಯದ ಮೇಲೆ...
ಭಾರತದ ಸಂವಿಧಾನದಲ್ಲಿ ಪ್ರತಿಷ್ಠಾಪಿತವಾಗಿರುವ ಮೂಲಭೂತ ಹಕ್ಕುಗಳು ಸಂವಿಧಾನದ ಮೂಲರಚನೆಯ ಅವಿಭಾಜ್ಯ ಭಾಗವಾಗಿವೆ. ಸಂವಿಧಾನದ ಅನುಚ್ಛೇದ 19ರಲ್ಲಿ ಸೇರಿಸಲಾಗಿರುವ ಸ್ವಾತಂತ್ರ್ಯಗಳಲ್ಲಿ ಅತಿ ವಿಭಿನ್ನವಾದ ಮತ್ತು ಸರ್ವಶ್ರೇಷ್ಠವಾದ ಸ್ವಾತಂತ್ರ್ಯವೆಂದರೆ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ. ಇದನ್ನು ಸರ್ವಶ್ರೇಷ್ಠ ಎಂದೇಕೆ ಕರೆಯಲಾಗುತ್ತದೆ ಎಂದರೆ, ಸಂವಿಧಾನದ ಉಳಿದ ಮೂಲಭೂತ ಹಕ್ಕುಗಳನ್ನು ಕೆಲವು ನಿರ್ದಿಷ್ಟ ಕಾರಣಗಳನ್ನು ನೀಡಿ ನಿರ್ಬಂಧಿಸಬಹುದಾಗಿದೆ. ಆದರೆ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಿರ್ಬಂಧ ಹೇರುವುದು ಅಷ್ಟು ಸುಲಭವಲ್ಲ. ಒಂದು ವೇಳೆ ಈ ಹಕ್ಕುಗಳಿಂದಾಗಿ ಭಾರತದ ಐಕ್ಯತೆ ಮತ್ತು ಸಮಗ್ರತೆಗೆ, ದೇಶದ ಭದ್ರತೆಗೆ, ವಿದೇಶಗಳೊಂದಿಗಿನ ಸ್ನೇಹಕ್ಕೆ, ಸಾರ್ವಜನಿಕ ವ್ಯವಸ್ಥೆಗೆ ಧಕ್ಕೆಯಾದರೆ ಮತ್ತು ನ್ಯಾಯ್ಯಾಂಗ ನಿಂದನೆಯಾದರೆ ಮಾತ್ರ ಅನುಚ್ಛೇದ 19ರ ಅಡಿಯಲ್ಲಿ ವಾಕ್ ಸ್ವಾತಂತ್ರ್ಯದ ಮೇಲೆ ನಿರ್ಬಂಧ ಹೇರಬಹುದಾಗಿದೆ.
ಸರ್ಕಾರದಿಂದ ಅಥವಾ ಚುನಾವಣಾ ಆಯೋಗದಿಂದ ವಾಕ್ ಸ್ವಾತಂತ್ರ್ಯದ ಮೇಲೆ ನಿರ್ಬಂಧ ಹೇರುವುದಕ್ಕೆ ಸಾಧ್ಯವಿಲ್ಲ. ಏಕೆಂದರೆ ಮೇಲೆ ತಿಳಿಸಿದ ಸಂದರ್ಭಗಳೆಲ್ಲ ಇವುಗಳ ವ್ಯಾಪ್ತಿಯಿಂದ ಹೊರಗೇ ಇರುವಂಥವು. ಆದರೆ ಯುಪಿಎ ಸರ್ಕಾರದಡಿಯಲ್ಲಿ ವಾಕ್ ಸ್ವಾತಂತ್ರ್ಯಕ್ಕೆ ಹಾನಿ ಮಾಡಿದ ಅಥವಾ ಅದನ್ನು ಹತ್ತಿಕ್ಕಲು ಪ್ರಯತ್ನಿಸಿದ ಮೂರು ನಿದರ್ಶನಗಳು ಜನತೆಯ ಗಮನಕ್ಕೆ ಬಂದಿವೆ.
ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಅವರಿಗೆ ವಿರುದ್ಧವಾದ ನಿಲವುಗಳು: ಮಾಹಿತಿ ಮತ್ತು ಪ್ರಸಾರ ಸಚಿವಾಲಯವು 30-10-2013ರಂದು ಆದೇಶವೊಂದನ್ನು ಹೊರಡಿಸಿತು. ಈ ಆದೇಶ ಹೇಳುವುದೇನೆಂದರೆ, ಪ್ರಧಾನ ಮಂತ್ರಿ ದೇಶದ ನಾಯಕನೇ ಹೊರತು ಪಕ್ಷವೊಂದರ ನಾಯಕನಲ್ಲ. ರಾಷ್ಟ್ರೀಯ ದಿನಾಚರಣೆಗಳಂದು ಪ್ರಧಾನ ಮಂತ್ರಿ ಮಾತನಾಡಿದರೆ, ಆ ಸಮಯದಲ್ಲಿ ಅವರೊಂದಿಗೆ ಇನ್ನೊಬ್ಬರ ಭಾಷಣವನ್ನೋ ಅಥವಾ ಅವರೊಂದಿಗೆ "ಕೃತಕ ಸ್ಪರ್ಧೆಯನ್ನೋ" ಏರ್ಪಡಿಸುವುದು ಸರಿಯಲ್ಲ. ಇದರಿಂದಾಗಿ ಪ್ರಧಾನ ಮಂತ್ರಿ ಹುದ್ದೆಯ ವರ್ಚಸ್ಸಿಗೆ ಹಾನಿಯಾಗುವುದಷ್ಟೇ ಅಲ್ಲದೆ, ಇದು ಪತ್ರಿಕೋದ್ಯಮದ ನೈತಿಕತೆಗೂ ವಿರುದ್ಧವಾದದ್ದು ಎಂದು ಹೇಳಿದೆ.
ಮುಂದುವರಿಯುತ್ತಾ, "ದೇಶದ ಸಾಮಾಜಿಕ/ ಸಾರ್ವಜನಿಕ ಮತ್ತು ನೈತಿಕ ಜೀವನಕ್ಕೆ ಹಾನಿಯುಂಟು ಮಾಡುವ ಕೆಟ್ಟ ಅಭಿರುಚಿಯ, ವಿನಯಶೀಲವಲ್ಲದ ಸುದ್ದಿಗಳನ್ನು ಪ್ರಸಾರ ಮಾಡುವುದನ್ನು ಕೇಬಲ್ ನೆಟ್ವರ್ಕ್ ಕಾಯ್ದೆ ನಿಷೇಧಿಸಿದೆ. ಪ್ರಧಾನ ಮಂತ್ರಿಯನ್ನು ಸ್ಪರ್ಧೆಯಲ್ಲಿರುವಂತೆ ಬಿಂಬಿಸುವ ವಾಹಿನಿಗೆ ಕೇಬಲ್ ನೆಟ್ವರ್ಕ್(ನಿಯಂತ್ರಣ) ಕಾಯ್ದೆಯಡಿಯಲ್ಲಿ ಶಿಕ್ಷೆ ವಿಧಿಸಲಾಗುವುದು." ಎಂದು ಹೇಳಿದೆ.
ನಿಜಕ್ಕೂ ಇದು ಮೋದಿಯ ಹೆದರಿಕೆಯಿಂದಾಗಿ ಇಡಲಾಗುತ್ತಿರುವ ಅಸಂವಿಧಾನಿಕ ನಡೆ! ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಪ್ರಧಾನಿ ದೇಶವನ್ನು ಉದ್ದೇಶಿಸಿ ಮಾತನಾಡುತ್ತಿರುವ ಸಂದರ್ಭಗಳಲ್ಲಿ, ಬೇರೇ ಯಾವುದೇ ಸುದ್ದಿಯನ್ನು ಪ್ರಸಾರ ಮಾಡಬಾರದು ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹೇಳುತ್ತಿದೆ.
ಅಂದರೆ ರಾಜ್ಯದ ಮುಖ್ಯಮಂತ್ರಿಗಳನ್ನು ಕಡೆಗಣಿಸಬೇಕು ಮತ್ತು ವಿರೋಧ ಪಕ್ಷದ ನಾಯಕರ ಟೀಕೆಗಳನ್ನು ಬಿತ್ತರಿಸಬಾರದು ಎಂದು! ಒಂದು ವೇಳೆ ಈ ನಿಯಮ ಲಾಗೂ ಆದರೆ ಮುಂದಿನ ಕೆಲವೇ ದಿನಗಳಲ್ಲಿ ಇದನ್ನು ವಿತ್ತ ಸಚಿವರ ಬಜೆಟ್ ಭಾಷಣ ಮತ್ತು ದೇಶದ ಭದ್ರತೆಯ ಬಗ್ಗೆ ರಕ್ಷಣಾ ಮಂತ್ರಿಗಳ ಹೇಳಿಕೆಗಳಿಗೂ ಅನ್ವಯಿಸಲು ಮುಂದಾಗುತ್ತಾರೇನೋ?! ಪ್ರಜಾಪ್ರಭುತ್ವದಲ್ಲಿ ಸೆನ್ಸಾರ್ಶಿಪ್ಗೆ ಜಾಗವೇ ಇಲ್ಲ. ನೇರವಾಗಿ ಅಥವಾ ಪರೋಕ್ಷವಾಗಿ ಸೆನ್ಸಾರ್ಶಿಪ್ ಅನ್ನು ಹೇರಲೂ ಮುಂದಾಗಬಾರದು. ಟೀಕೆ ಮತ್ತು ಪ್ರತಿಕ್ರಿಯೆಗಳು ಜೀವನದ
ಪ್ರಮುಖ ಭಾಗ. ಹಾಗೆ ನೋಡಿದರೆ, ಉಚ್ಚ ನ್ಯಾಯಾಲಯಗಳ ತೀರ್ಪುಗಳನ್ನೂ ಕೂಡ ಟೀಕಿಸಬಹುದು. ಸಾರ್ವಜನಿಕ ಜೀವನದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯನ್ನೂ ಸೂಕ್ಷ್ಮ ಪರಿಶೀಲನೆಯಲ್ಲಿಟ್ಟಿರಬೇಕು. ಆತ ಎಷ್ಟೇ ಬಲಶಾಲಿಯಾಗಿರಲಿ, ತಪ್ಪು ಮಾಡಿದಾಗ ಆತನನ್ನು ಟೀಕಿಸುವ ಹಕ್ಕು ಎಲ್ಲರಿಗೂ ಇರಬೇಕು. ಸಾಮಾನ್ಯವಾಗಿ ಒಬ್ಬ ವ್ಯಕ್ತಿ ಪಾರದರ್ಶಕವಾಗಿಲ್ಲದಿರುವಾಗ ಆತನನ್ನು ಟೀಕಿಸಲಾಗುತ್ತದೆ. ಅನುಚ್ಛೇದ 19(2)ಕ್ಕೆ ವಿರುದ್ಧವಲ್ಲದ ಯಾವುದೇ ಕೆಲಸವನ್ನೂ ನಿರ್ಬಂಧಿಸುವಂತಿಲ್ಲ. ಕೇಬಲ್ ನಿರ್ವಹಣೆ ಎನ್ನುವ ಹೆಸರಿನಲ್ಲಿ ಸಂವಿಧಾನ ವಿರೋಧಿಯಾದ ಕೆಲಸವನ್ನು ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಮಾಡುವಂತಿಲ್ಲ. ಏಕೆಂದರೆ ಕೇಬಲ್ ನಿಯಂತ್ರಣ ಕಾಯ್ದೆಯಲ್ಲಿ ಬರುವ ನಿರ್ಬಂಧಗಳನ್ನೆಲ್ಲ ಅನುಚ್ಛೇದ 19(2)ರ ಅಡಿಯಲ್ಲೇ ಓದಿಕೊಳ್ಳಬೇಕಾಗುತ್ತದೆ.
ಶಬ್ದ ತರಂಗಗಳು ಸಾರ್ವಜನಿಕ ಸ್ವತ್ತು. ಅವು ಭಾರತದ ನಾಗರಿಕರಿಗೆ ಸಂಬಂಧಪಟ್ಟಿರುತ್ತವೆಯೇ ಹೊರತು ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕಲ್ಲ. ಇದನ್ನು ಕೇವಲ ಎರಡು ತಳಹದಿಯ ಮೇಲೆ ಮಾತ್ರ ನಿರ್ಬಂಧಿಸಲು ಸಾಧ್ಯ. ಒಂದು, ಶಬ್ದ ತರಂಗಗಳು ಅಲಭ್ಯವಿದ್ದರೆ(ಸದ್ಯದಲ್ಲಿ ಪರಿಸ್ಥಿತಿಯಂತೂ ಹಾಗಿಲ್ಲ), ಎರಡು ಶಬ್ದತರಂಗಗಳಿಂದಾಗಿ ಭಾರತದ ಐಕ್ಯತೆ ಅಥವಾ ಸಮಗ್ರತೆಗೆ ಧಕ್ಕೆಯಾದರೆ. ಆದರೆ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಲವನ್ನು ಪ್ರಶ್ನಿಸುವುದು ಅಥವಾ ಟೀಕಿಸುವುದರಿಂದ ಭಾರತದ ಏಕತೆಗೆ ಅಥವಾ ಭದ್ರತೆಗೆ ತೊಂದರೆಯಂತೂ ಇಲ್ಲವಲ್ಲ?
ಅಮೆರಿಕದ ಅಧ್ಯಕ್ಷರು ಪ್ರತಿ ವರ್ಷವೂ 'ಸ್ಟೇಟ್ ಆಫ್ ದಿ ನೇಷನ್"(ದೇಶದ ಸ್ಥಿತಿ) ಎನ್ನುವ ವಿಷಯದ ಮೇಲೆ ಭಾಷಣ ಮಾಡುತ್ತಾರೆ. ಅವರ ಭಾಷಣ ಮುಗಿಯುತ್ತಿದ್ದಂತೆಯೇ ವಿರೋಧ ಪಕ್ಷದ ಪ್ರತಿನಿಧಿಯೊಬ್ಬ ಮುಂದೆ ಬಂದು ತಮ್ಮದೇ ಆದ ರೀತಿಯಲ್ಲಿ "ದೇಶದ ಸ್ಥಿತಿ"ಯನ್ನು ವಿವರಿಸುತ್ತಾನೆ. ಅಲ್ಲದೆ ಇದನ್ನು ಪ್ರಪಂಚದಾದ್ಯಂತ ಬಿತ್ತರಿಸಲಾಗುತ್ತದೆ. ಒಂದು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಅಭಿಪ್ರಾಯ ಭೇದಗಳಿರುವುದು ಸಹಜ. ಅದರಲ್ಲೂ ಭಾರತದಂಥ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಎಲ್ಲರ ಅಭಿಪ್ರಾಯವೂ ಒಂದೇ ಲಹರಿಯಲ್ಲಿರುತ್ತದೆ ಎಂದು ಭಾವಿಸುವುದಕ್ಕೆ ಸಾಧ್ಯವಿಲ್ಲ. ಹಾಗಾಗೇ ರಾಷ್ಟ್ರೀಯ ದಿನಾಚರಣೆಯಂದು ಪ್ರಧಾನಿಗಳಿಗೆ ಎಷ್ಟು ಮಾತನಾಡುವ ಹಕ್ಕಿದೆಯೋ ಅದೇ ರೀತಿ, ಮುಖ್ಯಮಂತ್ರಿಗಳಿಗೆ ಮತ್ತು ವಿರೋಧ ಪಕ್ಷದ ನಾಯಕರಿಗೆ ಮಾತನಾಡುವ ಹಕ್ಕಿದೆ. ಮತ್ತು ಅದನ್ನು ಪ್ರಸಾರ ಮಾಡುವ ಹಕ್ಕು ಸುದ್ದಿ ವಾಹಿನಿಗಳಿಗಿದೆ.
ಜಾಹೀರಾತು ಸಮಯವನ್ನು ನಿರ್ಬಂಧಿಸುವುದು: ಟಿಆರ್ಎಐನ ಸಲಹೆಯ ಮೇರೆಗೆ ಕೆಲವು ದಿನಗಳ ಹಿಂದೆ ಕೇಂದ್ರ ಸರ್ಕಾರ, 1 ಗಂಟೆಯಲ್ಲಿ ಇಷ್ಟೇ ಜಾಹೀರಾತುಗಳು ಪ್ರಸಾರವಾಗಬೇಕು ಎಂದು ನಿರ್ಬಂಧ ಹೇರಿದೆ. ಇದರಿಂದಾಗಿ ಸುದ್ದಿ ವಾಹಿನಿಗಳಿಗೆ ಹೊಡೆತ ಬಿದ್ದೇ ಬೀಳುತ್ತದೆ. ಆದರೆ ಅವಕ್ಕಿಂತಲೂ ಹೆಚ್ಚು ಹೊಡೆತ ಬೀಳುವುದು ವಾಕ್ ಸ್ವಾತಂತ್ರ್ಯಕ್ಕೆ. ಬಹು ವರ್ಷಗಳ ಹಿಂದೆಯೇ ಮಾಧ್ಯಮ ದಿಗ್ಗಜ ರಾಮ್ನಾಥ್ ಗೋಯೆಂಕ ಅವರು ಸಂಸತ್ತಿನಲ್ಲಿ ಮಾತನಾಡುತ್ತಾ ಹೇಳಿದ್ದು ಹೀಗೆ: "ಮುಂದೊಂದು ದಿನ ಭಾರತದಲ್ಲಿ ವಾಕ್ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗುತ್ತದೆ. ಆದರೆ ಸೆನ್ಸರ್ಶಿಪ್ ಮೂಲಕವಲ್ಲ ಬದಲಾಗಿ ಜಾಹೀರಾತುಗಳ ಮೇಲೆ ನಿರ್ಬಂಧ ಹೇರಿ ಮಾಧ್ಯಮ ಮನೆಗಳ ಶಕ್ತಿಯನ್ನು ಅಡಗಿಸುವ ಮೂಲಕ. ಒಂದು ವೇಳೆ ಪತ್ರಿಕೆಗಳು ಮತ್ತು ಟಿ.ವಿ. ಮಾಧ್ಯಮಗಳಿಗೆ ಜಾಹೀರಾತುಗಳೇ ಸಿಗದಿದ್ದರೆ ಅವು ಅಸ್ತಿತ್ವದಲ್ಲಿ ಉಳಿಯುವುದೇ ಕಷ್ಟ. ವಾಕ್ ಸ್ವಾತಂತ್ರ್ಯಕ್ಕೆ ಜಾಹೀರಾತುಗಳು ಪರೋಕ್ಷವಾಗಿ ಕಾರಣವಾಗುತ್ತವೆ(ಮಾಧ್ಯಮಗಳಿಗೆ ಶಕ್ತಿ ಒದಗಿಸುವ ಮೂಲಕ)." ಎಂದಿದ್ದರು. ಉದ್ದುದ್ದ ಜಾಹೀರಾತುಗಳಿಂದಾಗಿ ವೀಕ್ಷಕರಿಗೆ/ ಓದುಗರಿಗೆ ಬೇಜಾರಾಗುತ್ತದೆ ಎನ್ನುವ ಕಾರಣ ನೀಡಿ ಜಾಹೀರಾತುಗಳನ್ನು ನಿರ್ಬಂಧಿಸುವುದು ಅನುಚ್ಛೇದ 19(2)ಕ್ಕೆ ಸಂಪೂರ್ಣ ವಿರುದ್ಧವಾದ ನಡೆ. ಅಮೆರಿಕ ಮತ್ತು ಭಾರತದ ನ್ಯಾಯಾಲಯಗಳು ಮೊದಲಿನಿಂದಲೂ ಮಾಧ್ಯಮಗಳ ವಾಕ್ ಸ್ವಾತಂತ್ರ್ಯವನ್ನು ಬೆಂಬಲಿಸುತ್ತಲೇ ಬಂದಿವೆ. ಒಂದು ವೇಳೆ ಪತ್ರಿಕೆಯೊಂದರ ಅಳತೆಯನ್ನು ಕತ್ತರಿಸಿದರೆ ಅಥವಾ ಜಾಹಿರಾತುಗಳ ಸಂಖ್ಯೆಯನ್ನು ನಿರ್ದಿಷ್ಟಗೊಳಿಸಿದರೆ, ಅದರಿಂದಾಗಿ ಅವು ಬದುಕುಳಿಯುವುದೇ ಕಠಿಣವಾಗುತ್ತದೆ. ಅಲ್ಲದೆ ಪತ್ರಿಕೆಯ ಸರ್ಕುಲೇಷನ್ನಲ್ಲಿ ಏರುಪೇರಾಗುತ್ತದೆ. ಇದರಿಂದಾಗಿ ಪರೋಕ್ಷವಾಗಿ ಹೊಡೆತ ಬೀಳುವುದು ಮಾಹಿತಿ ಪ್ರಸಾರಕ್ಕೆ, ಅಂದರೆ ವಾಕ್ ಸ್ವಾತಂತ್ರ್ಯಕ್ಕೆ. ಇನ್ನು ಅತಿ ಹೆಚ್ಚು ತೆರಿಗೆ ವಿಧಿಸಿ ಮಾಧ್ಯಮಗಳ ಶಕ್ತಿಯನ್ನು ಅಡಗಿಸುವ ಪ್ರಯತ್ನವೂ ನಡೆಯತೊಡಗಿದೆ. ಯಾವುದೇ ಸಕಾರಣಗಳಿಲ್ಲದೆ ಈ ರೀತಿಯ ನಿರ್ಬಂಧಗಳನ್ನು ಹೇರುವುದು ನಮ್ಮ ಸಂವಿಧಾನಕ್ಕೆ, ಪ್ರಜಾಪ್ರಭುತ್ವ ರಾಷ್ಟ್ರದ ಮೂಲಭೂತ ಹಕ್ಕಿಗೆ ಅವಮಾನ ಮಾಡಿದಂತೆಯೇ ಸರಿ.
ಚುನಾವಣಾ ಪೂರ್ವ ಸಮೀಕ್ಷೆಗಳನ್ನು ನಿಷೇಧಿಸುವುದು: ಭಾರತದಲ್ಲಿ ರಾಜಕೀಯವಿನ್ನು ಪ್ರಬುದ್ಧ ಸ್ಥಿತಿಯನ್ನು ಮುಟ್ಟಿಲ್ಲ. ಚುನಾವಣಾ ಪೂರ್ವ ಸಮೀಕ್ಷೆಗಳು ನಡೆಯುತ್ತವೆ. ಅದರಲ್ಲಿ ಕೆಲವನ್ನು ಜನ ನಂಬುತ್ತಾರೆ, ಕೆಲವರು ನಂಬುವುದಿಲ್ಲ. ಆದರೆ ಸಮೂಹದ ಒಟ್ಟಾರೆ ಭಾವವನ್ನು ಪ್ರತಿನಿಧಿಸುತ್ತವೆ ಎನ್ನುವುದಂತೂ ಸುಳ್ಳಲ್ಲ. ಅವುಗಳಲ್ಲಿ ಎಷ್ಟು ಪ್ರತಿಶತ ಸತ್ಯವಡಗಿರುತ್ತದೋ, ಸುಳ್ಳಿರುತ್ತದೋ ತಿಳಿಯದು. ಆದರೆ ಆ ಕಾರಣಕ್ಕೆ ಸಮೀಕ್ಷೆಗಳನ್ನೇ ನಿಷೇಧಿಸಿಬಿಡಬೇಕೇ? ಅಮೆರಿಕದಲ್ಲಿ ಗಾಲೂಪ್ನಂಥ ಸಮೀಕ್ಷೆಗಳು ಬಹಳ ಪ್ರಸಿದ್ಧಿ ಪಡೆದಿವೆ.
ಆಯ್ದ ಕೆಲವೇ ಕೆಲವು ಸಂಖ್ಯೆ ಜನರ ಅಭಿಪ್ರಾಯದ ಮೇಲೆ ಈ ಸಮೀಕ್ಷೆ ರೂಪುತಾಳುತ್ತದಾದರೂ ಇದುವರೆಗೂ ಗಾಲೂಪ್ ಸಮೀಕ್ಷೆ ಸರಿಯಾಗಿಯೇ ರುಜುವಾತಾಗಿದೆ. ಯಾವಾಗ ಚುನಾವಣಾ ಪೂರ್ವ ಸಮೀಕ್ಷೆಗಳು ತಮ್ಮ ಪಕ್ಷಗಳಿಗೆ ವಿರುದ್ಧವಾಗಿ ಬೆರಳು ತೋರಿಸುತ್ತವೆಯೋ ಆಗ ಕಡಿಮೆ ಅಂಕ ಗಳಿಸಿದ ಪಕ್ಷಗಳು ಈ ಸಮೀಕ್ಷೆಗಳೇ ಪೊಳ್ಳು ಎಂದು ವಾದಿಸಲಾರಂಭಿಸುತ್ತವೆ. ಇಂಥ ಅಭಿಪ್ರಾಯ ಸಂಗ್ರಹಗಳನ್ನೆಲ್ಲ ನಿಷೇಧಿಸಬೇಕೆಂದು ಆರ್ಭಟಿಸುತ್ತವೆ. ಸೋಲುವ ಭಯವಿರುವವನು ಮಾತ್ರವೇ ನಿಷೇಧ, ನಿಷೇಧ ಎಂದು ಕೂಗಾಡುವುದು! ನಿಷೇಧ ಹೇರುವುದೇ ಆದರೂ, ಯಾವ ಕಾರಣಕ್ಕೆ ಹೇರಬೇಕು ಎನ್ನುವುದನ್ನೂ ನೋಡಬೇಕಾಗುತ್ತದೆ. ಮತ್ತು ನಿಷೇಧ ಹೇರಲು ಯಾರು ಒತ್ತಾಯಿಸುತ್ತಿದ್ದಾರೆ ಎನ್ನುವುದನ್ನೂ ಕೂಡ! ಚುನಾವಣಾ ಪೂರ್ವಸಮೀಕ್ಷೆ ಕೂಡ ವಾಕ್ಸ್ವಾತಂತ್ರ್ಯದ ಪ್ರಮುಖ ಭಾಗವೇ. ಸಂವಿಧಾನದಲ್ಲಿ ಇಂಥ ಸಮೀಕ್ಷೆಗಳನ್ನು ನಿಷೇಧಿಸುವುದಕ್ಕೆ ಅವಕಾಶವಿಲ್ಲ. ಚುನಾವಣಾ ಆಯೋಗ ಈಗ ಎದ್ದಿರುವ ವಿವಾದದಿಂದ ದೂರವೇ ಉಳಿಯಬೇಕು. ಜನರು ತಮಗೇನು ಇಷ್ಟವೋ ಅದನ್ನು ಮಾಡುತ್ತಾರೆ. ಅವರು ಈ ಸಮೀಕ್ಷೆಗಳನ್ನು ನಂಬುತ್ತಾರೋ ಬಿಡುತ್ತಾರೋ ಎನ್ನುವುದು ಅವರಿಗೆ ಬಿಟ್ಟ ವಿಷಯ. ಒಂದು ವೇಳೆ ಇಂಥ ಸಮೀಕ್ಷೆಗಳನ್ನು ಬ್ಯಾನ್ ಮಾಡಿದರೆಂದರೆ ಮುಂದಿನ ದಿನಗಳಲ್ಲಿ ರಾಜಕೀಯ ವಿಶ್ಲೇಷಕರನ್ನೂ ನಿಷೇಧಿಸಬೇಕು ಎಂಬ ಕೂಗು ಕೇಳಿಬರಬಹುದೇನೋ? ಸೋಲುತ್ತೇನೆಂದು ಖಚಿತವಾಗಿರುವ ಹೇಡಿಗಳು ವಾಕ್ ಸ್ವಾತಂತ್ರ್ಯದ ಮೇಲೆ ನಿರ್ಬಂಧ ಹೇರಲು ಹೇಗೆ
ಪ್ರಯತ್ನಿಸುತ್ತಿದ್ದಾರೋ ನೋಡಿ!
-ಅರುಣ್ ಜೇಟ್ಲಿ
ಮಾಜಿ ಸಚಿವರು