ಇನ್ನೂ ಬೇಕೇ ನಮಗೆ ಈ ಮೂಢ ನಂಬಿಕೆಗಳು?
ಬಹಳಷ್ಟು ಸಂದರ್ಭಗಳಲ್ಲಿ ನಮ್ಮ ಜನ ಜೀವನ 'ನಂಬಿಕೆ'ಗಳ ಆಧಾರದ ಮೇಲೆಯೇ ನಡೆಯುತ್ತಿರುತ್ತದೆ. ಮನೆಯ ಮಗು 'ಇವರೇ ನಿನ್ನ ಅಪ್ಪ' ಎಂಬ ಅಮ್ಮ ಹೇಳಿದ ಮಾತಿನ ನಂಬಿಕೆಯ ಮೇಲೆ ಅಪ್ಪನ ಬಳಿ ಓಡಿ ಹೋಗುತ್ತದೆ. ಹೆತ್ತವರು ಎಂದೂ ನಮ್ಮ ಕೈ ಬಿಡಲಾರರು ಎಂಬ ನಂಬಿಕೆಯ ಮೇಲೆ ಮಕ್ಕಳು ಬಾಳಿ ಬೆಳೆದರೆ, ಮಕ್ಕಳು ವೃದ್ಧಾಪ್ಯದಲ್ಲಿ ಕೈ ಬಿಡಲಾರರು ಎಂಬ ನಂಬಿಕೆ ಹೆತ್ತವರದ್ದು. ದಾಂಪತ್ಯ ಜೀವನದಲ್ಲಿ ಗಂಡನಿಗೆ ಹೆಂಡತಿಯ ಮೇಲೆ, ಹೆಂಡತಿಗೆ ಗಂಡನ ಮೇಲೆ ನಂಬಿಕೆ. ಗುರುಗಳಿಗೆ ವಿದ್ಯಾರ್ಥಿಯ ಮೇಲೆ, ವಿದ್ಯಾರ್ಥಿಗಳಿಗೆ ಗುರುಗಳ ಮೇಲೆ, ರೋಗಿಗೆ ವೈದ್ಯರ ಮೇಲೆ, ಕಕ್ಷಿದಾರನಿಗೆ ತಮ್ಮ ಲಾಯರ್ ಹಾಗೂ ನ್ಯಾಯಾಧೀಶರ ಮೇಲೆ, ಅಂತೆಯೇ ಪ್ರಯಾಣಿಕರಿಗೆ ವಾಹನ ಚಾಲಕನ ಮೇಲೆ ನಂಬಿಕೆ. ಈ ನಂಬಿಕೆಗಳಿಗೆ ಯಾವ ಲಿಖಿತ ದಾಖಲಾತಿಗಳೂ, ಪುರಾವೆಗಳೂ ಇಲ್ಲ. ನ್ಯಾಯ ಧರ್ಮವನ್ನಾಧರಿಸಿ ಒಬ್ಬರಿನ್ನೊಬ್ಬರ ಮೇಲೆ ಇಟ್ಟುಕೊಂಡ ನಂಬಿಕೆಯಷ್ಟೆ. ಒಪ್ಪಂದವಷ್ಟೆ. ಈ ನಂಬಿಕೆಯ ಭದ್ರಕೋಟೆ ಒಡೆದಾಗ ಇದನ್ನೇ ಮೋಸ, ವಂಚನೆ ಎಂದು ಬಣ್ಣಿಸಿ ಜನ ಪರಿತಪಿಸುತ್ತಾರೆ.
ಇಂತಹ ಅನುಭವ ಹಾಗೂ ಭಯಗಳ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮದ ಫಲವಾಗಿ ಅಪನಂಬಿಕೆಯೆಂಬ ಕೂಸು ಹುಟ್ಟಿಕೊಳ್ಳುತ್ತೆ. ಮಾತ್ರವೇ ಅಲ್ಲ. ಈ ನಂಬಿಕೆ, ಅಪನಂಬಿಕೆಗಳ ಹೊರತಾಗಿ ಬಹಳಷ್ಟು ಸಲ ಕೆಲವು 'ಮೂಢನಂಬಿಕೆ'ಗಳು ಕೂಡಾ ತೂರಿಕೊಳ್ಳುತ್ತವೆ. ಮೂಢನಂಬಿಕೆಗಳಿಗೆ ಯಾವ ವೈಜ್ಞಾನಿಕ ಸಮರ್ಥನೆಯೂ ಇರುವುದಿಲ್ಲ. ವೈಚಾರಿಕತೆಯ ಮುದ್ರೆಯೂ ಇರುವುದಿಲ್ಲ. ಎಷ್ಟೋ ಬಾರಿ ಇದು ಮೂಢನಂಬಿಕೆ ಎಂದು ತಿಳಿದಿದ್ದರೂ, ಅದನ್ನು ಪ್ರಶ್ನಿಸುವ, ನಿರಾಕರಿಸುವ ಧೈರ್ಯ, ಎದೆಗಾರಿಕೆ ಬಹಳ ಜನರಲ್ಲಿ ಇರುವುದಿಲ್ಲ. ಇಂತಹ ದುಸ್ಸಾಹಸಕ್ಕೆ ವಿಚಾರವಂತರೂ ಕೈ ಹಾಕೋದಿಲ್ಲ. ಇವುಗಳಿಂದ ಬಿಡಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಇವುಗಳಿಂದ ಯಾರಿಗೂ ಹೇಳುವಂತಹ ಅಪಾಯಗಳೂ ಇಲ್ಲ, ಕಷ್ಟ-ನಷ್ಟಗಳೂ ಇಲ್ಲ.
ಆದರೆ ಕೆಲವೊಮ್ಮೆ ಅಪನಂಬಿಕೆಗಳು ಬಲವಾದ ಸಂಶಯದ ಘಟ್ಟವನ್ನು ತಲುಪಿ, ಸಂಬಂಧಗಳನ್ನೇ ಸರ್ವನಾಶ ಮಾಡಬಲ್ಲವು. ಇಲ್ಲವೇ ಅಚಾತುರ್ಯಗಳಲ್ಲಿ ಪರ್ಯಾವಸನಗೊಳ್ಳಬಹುದು. ಅಂತೆಯೇ ಮೂಢನಂಬಿಕೆಗಳು ಅತಿಯಾಗಿದ್ದಲ್ಲಿ ಇಲ್ಲವೇ ತೀವ್ರ ಸ್ವರೂಪ ಉಳ್ಳದಾಗಿದ್ದಲ್ಲಿ ನಮ್ಮ ಆರೋಗ್ಯವನ್ನೂ, ಮನಃಶಾಂತಿಯನ್ನು ಕೆಡಿಸಬಹುದು. ಮಾತ್ರವೇ ಅಲ್ಲ, ಮೂಢನಂಬಿಕೆಗಳು ಸಾಮಾಜಿಕ ಸ್ವಾಸ್ಥಕ್ಕೂ, ಪ್ರಗತಿಗೂ ಧಕ್ಕೆಯನ್ನು ತರಬಹುದು. ಆಚರಣೆಯಲ್ಲಿರುವ ಮೂಢನಂಬಿಕೆಗಳ ಪಟ್ಟಿ ಬಹಳ ದೊಡ್ಡದಾಗಿದೆ. ಇವುಗಳ ಪೈಕಿ ಕೆಲವು ಮೂಢನಂಬಿಕೆಗಳನ್ನಷ್ಟೇ ಇಲ್ಲಿ ಕೈಗೆತ್ತಿಕೊಳ್ಳಲಾಗಿದೆ.
ಸಸ್ಯಾಹಾರದಲ್ಲೂ ಭೇದಭಾವವ ತರವೇ?: ಸಸ್ಯಾಹಾರವನ್ನೇ ಅವಲಂಬಿಸಿ, ಆರೋಗ್ಯವಂತರಾಗಿ ಬಾಳಬಲ್ಲ ಸಸ್ಯಹಾರಿ/ಶಾಖಾಹಾರಿ ಪ್ರಾಣಿಗಳಿಗೆ ಮತ್ತು ಮನುಷ್ಯರಿಗೆ ಎಲ್ಲಾ ತರಹದ ಸಸ್ಯಾಹಾರಗಳೂ ಸ್ವಾಗತಾರ್ಹ ಹಾಗೂ ಉಪಯುಕ್ತ. ಮತ್ತೆ, ತರಕಾರಿಗಳಲ್ಲಿ, ಹಣ್ಣು ಹಂಪಲುಗಳಲ್ಲಿ ಭೇದ ಭಾವಗಳನ್ನು ಕಲ್ಪಿಸಿಕೊಂಡರೆ, ಅದು ಅವೈಜ್ಞಾನಿಕ ಮಾತ್ರವಲ್ಲ ಅಪೌಷ್ಠಿಕತೆಗೂ ಕಾರಣವಾಗಬಹುದು. ಉದಾಹರಣೆಗೆ ಎಷ್ಟೋ ಸಂಪ್ರದಾಯಸ್ಥರಿಗೆ ಈರುಳ್ಳಿ, ಬೆಳ್ಳುಳ್ಳಿ, ನುಗ್ಗೇಕಾಯಿ, ಟೊಮೆಟೋ, ಕ್ಯಾರೆಟ್, ಕೋಸು, ಮೂಲಂಗಿ, ಕ್ಯಾಬೇಜ್, ಬೀಟ್ರೂಟ್ ಮುಂತಾದ ಉತ್ತಮ ಪೋಷಕಾಂಶಗಳನ್ನೂ, ಖನಿಜಾಂಶಗಳನ್ನು, ಜೀವಸತ್ವಗಳನ್ನೂ ಹೊಂದಿರುವ ತರಕಾರಿಗಳು ವರ್ಜ್ಯ. ಕಾರಣ ಕೇಳಿದರೆ, ಅವುಗಳೆಲ್ಲಾ ಇಂಗ್ಲೀಷ್ ಮೂಲದ ತರಕಾರಿಗಳೆಂಬ ಆರೋಪ. ತಾಮಸಗುಣಗಳನ್ನೊಳಗೊಂಡ ತರಕಾರಿಗಳನ್ನಾಗಲಿ, ಹಣ್ಣುಗಳನ್ನಾಗಲೀ, ಗೆಡ್ಡೆ ಗೆಣಸುಗಳನ್ನಾಗಲಿ ತಿರಸ್ಕರಿಸೋದು, ಸಾತ್ವಿಕ ಗುಣಗಳನ್ನು ಬೆಳೆಸಿಕೊಳ್ಳಬೇಕೆನ್ನುವವರ ವಿಚಾರದಲ್ಲಿ ಒಪ್ಪತಕ್ಕ ಮಾತಾದೀತು. ಆದರೆ ವಿಟಮಿನ್ ಸಿ ಹೇರಳವಾಗಿರುವ ಟೊಮೆಟೋ, ವಿಟಮಿನ್ ಎ ಅಧಿಕವಾಗಿರುವ ಕ್ಯಾರೆಟ್, ಸಕ್ಕರೆಯ ಅಂಶವನ್ನು ಇಳಿಸಬಲ್ಲ ನವಿಲುಕೋಸು, ಕಬ್ಬಿಣದ ಅಂಶ ಹೆಚ್ಚಾಗಿರುವ ಬಸಳೆಸೊಪ್ಪು, ಹೃದಯವನ್ನು ರಕ್ಷಿಸಬಲ್ಲ ಬೆಳ್ಳುಳ್ಳಿ ಮುಂತಾದ ನಿರಪರಾಧೀ, ಉಪಯುಕ್ತ ತರಕಾರಿಗಳನ್ನು ವರ್ಜ್ಯವೆಂದರೆ, ಅದು ಅವೈಜ್ಞಾನಿಕ ಮಾತ್ರವಲ್ಲ, ಅಜ್ಞಾನವೂ ಹೌದಲ್ಲವೇ?
ಕಲುಷಿತಗೊಂಡಿರುವ ನದೀ ಸ್ನಾನಗಳು ನಿಜಕ್ಕೂ ನಮ್ಮ ಪಾಪ ತೊಳೆದಾವೇ?: ಗಂಗೆ, ತುಂಗೆ, ಕಾವೇರಿ, ಮುಂತಾದ ಪವಿತ್ರ ನದಿಗಳನ್ನು ನಾವು ಪೂಜಿಸುತ್ತಲೇ ಬಂದಿರುತ್ತೇವೆ. ಕಾರಣ ಈ ಪುಣ್ಯ ನದಿಗಳು ನಮಗೆ ಪ್ರಾಣಜಲವಾಗಿ, ನಮ್ಮ ಬೆಳೆಗಳಿಗೂ ಕಾರಣವಾಗಿ ಜನಜೀವನಕ್ಕೆ ಆಧಾರವಾಗಿರುವ ಜೀವನದಿಗಳು. ಇಂತಹ ನದಿಗಳಲ್ಲಿ ಮುಖ್ಯವಾಗಿ ಅವುಗಳ ಸಂಗಮ ಕ್ಷೇತ್ರದಲ್ಲಿ ಸ್ನಾನ ಮಾಡಿದರೆ, ಗೈದ ಪಾಪಗಳ ಪರಿಹಾರವಾದೀತೆಂಬುದು ಜನರ ನಂಬಿಕೆ. ಇಂತಹ ನಂಬಿಕೆಗಳಿಂದ ಅವರಲ್ಲಿ ಒಳ್ಳೆಯ ಪರಿವರ್ತನೆಗಳಾಗುವಂತಿದ್ದರೆ ಅಂತಹ ನಂಬಿಕೆಗಳಿರಲಿ. ಆದರೆ ಸ್ನಾನ ಮಾಡುವ ನದಿ ನೀರೂ ಕೂಡ ಅಷ್ಟೇ ಸ್ವಚ್ಛವಾಗಿರಬೇಕಲ್ಲವೇ? ಅರೆಬೆಂದ ಹೆಣಗಳು ತೇಲಾಡುತ್ತಿರುವ, ಶವಸಂಸ್ಕಾರದ ಸಾಮಗ್ರಿಗಳು ತುಂಬಿ ಕೊಳೆತು ನಾರುತ್ತಿರುವ, ತರತರದ ಕಲ್ಮಶಗಳಿಂದಲೂ, ಕೆಟ್ಟ ವಸ್ತುಗಳಿಂದ ಕಲುಷಿತಗೊಂಡಿರುವ ಗಂಗಾನದಿಯಂಥ ನದಿಗಳ ಸ್ವಚ್ಛತೆಗೆ ಅಲ್ಲಿಯ ರಾಜ್ಯ ಸರ್ಕಾರ ಕೋಟ್ಯಂತರ ರೂಪಾಯಿಗಳನ್ನು ವ್ಯಯ ಮಾಡುತ್ತಿದೆ. ಅಂದ ಮೇಲೆ ಪವಿತ್ರತೆಯ ಜೊತೆ ಸ್ವಚ್ಛತೆಯೂ ಅಷ್ಟೇ ಮುಖ್ಯವಲ್ಲವೇ? ಶುಚಿಯಾದ, ನಿರ್ಮಲವಾದ ನೀರಿನಿಂದ ಹರಿಯುವ ಹೊಳೆಗಳಲ್ಲಿ, ನದಿಗಳಲ್ಲಿ ಮಾಡುವ ಸ್ನಾನ, ಆರೋಗ್ಯದ ದೃಷ್ಟಿಯಿಂದ ನೋಡಿದರೂ ತುಂಬಾ ಒಳಿತು. ಕಾರಣ ಅದು ಸ್ವಚ್ಛವಾದ ನೀರಿನಿಂದ ಕೂಡಿರೋದು ಮಾತ್ರವಲ್ಲದೇ, ಬೆಟ್ಟಗುಡ್ಡಗಳಿಂದ ಉಗಮಗೊಂಡು ಕೆಳಕ್ಕೆ ಹರಿದು ಬರೋದರಿಂದ, ಖನಿಜಾಂಶಗಳು, ಗಿಡಮೂಲಿಕೆಗಳೇ ಮುಂತಾದ ಔಷಧೀಯ ಗುಣಗಳುಳ್ಳ ಅಂಶಗಳನ್ನು ಹೊಂದಿರುತ್ತದೆ. ಆದರೆ ಹರಿಯದೇ ನಿಂತ ನೀರಲ್ಲಿ ನೂರಾರು ಜನ ಸ್ನಾನ ಮಾಡಿದ ಕೊಳೆತು ನಾರುತ್ತಿರುವ ಎಣ್ಣೆ ಜಿಡ್ಡನ್ನು ಹೊಂದಿ ಎಲ್ಲಾ ರೀತಿಯಲ್ಲೂ ಕಲುಷಿತಗೊಂಡಿರುವ ಕ್ರಿಮಿಕೀಟಗಳ, ರೋಗಾಣುಗಳ ಉಗಮ ಸ್ಥಾನವಾಗಿರುವ ಕೆರೆಗಳಲ್ಲಿ, ಹೊಳೆಗಳಲ್ಲಿ ಸ್ನಾನ ಮಾಡಿದರೆ ಇಲ್ಲದ ಚರ್ಮರೋಗಗಳನ್ನು, ವ್ಯಾಧಿಗಳನ್ನು ಆಹ್ವಾನಿಸಿಕೊಂಡಂತಾಗಲಾರದೆ?
ಮಡೇಸ್ನಾನಗಳು ನಮ್ಮನ್ನು ಮಡಿ ಮಾಡಬಲ್ಲವೇ?: ಯಾರೋ ತಿಂದುಂಡು ಬಿಸಾಡಿದ ಎಂಜಲು ಎಲೆಗಳ ಮೇಲೆ ಉರುಳಿದರೆ, ತಮ್ಮ ಪಾಪ ಪರಿಹಾರವಾದೀತು, ದೋಷ ನಿವಾರಣೆಯಾದೀತು, ತಮ್ಮ ರೋಗಗಳು ವಾಸಿಯಾದಾವು ಎಂಬುದು ಕೆಲವರ ನಂಬಿಕೆಯಾದರೂ ಅವೆಲ್ಲವೂ ಅವೈಜ್ಞಾನಿಕ ಆಚರಣೆಯ, ಮೂಢನಂಬಿಕೆಯ ಪರಮಾವಧಿ. ಇದಕ್ಕೆ ಯಾವುದೇ ಧರ್ಮಗಳ, ಶಾಸ್ತ್ರಗಳ ಮನ್ನಣೆಯೂ ಇಲ್ಲ. ಇವೆಲ್ಲ ಅಂಧಶ್ರದ್ಧೆಗಳುಳ್ಳ ಕೆಲವು ಮಾನವ ನಿರ್ಮಿತ ಆಚರಣೆಗಳು. ಆದರೆ ಪುರೋಹಿತಶಾಹಿ ವರ್ಗದವರು ಮಾತ್ರ ಮಡೆಸ್ನಾನವನ್ನು ಪ್ರಜ್ಞಾಪೂರ್ವಕವಾಗಿ ಆಚರಣೆಗೆ ತರುವ ಮೂಲಕ, ಶೋಷಿತ ವರ್ಗಗಳನ್ನು ಮೂಢನಂಬಿಕೆಯತ್ತ ತಳ್ಳುತ್ತಿದ್ದಾರೆ ಎಂಬ ಕೆಲ ವಿಚಾರವಾದಿಗಳ ಆಪಾದನೆ ಮಾತ್ರ ಸತ್ಯಕ್ಕೆ ದೂರವಾದುದು. ಕಾರಣ. ಮಡೆಸ್ನಾನವನ್ನು ಜನರು ತಮ್ಮ ಇಚ್ಛೆಯಿಂದ ಮಾಡುತ್ತಾರೆ. ಮೇಲಾಗಿ ಮಡೆಸ್ನಾನವನ್ನು ಮಾಡುವವರಲ್ಲಿ ಕೆಲ ಬ್ರಾಹ್ಮಣರೂ ಸೇರಿಕೊಂಡಿದ್ದಾರೆ ಎಂಬ ಸತ್ಯಾಂಶವನ್ನು ಅಲ್ಲಗಳೆಯುವಂತಿಲ್ಲ. ಒಟ್ಟಿನಲ್ಲಿ ಮಡೆಸ್ನಾನವೆಂಬುದು ಒಂದು ಕೆಟ್ಟ ಮೂಢನಂಬಿಕೆ. ಇದಕ್ಕೆ ಇತಿಶ್ರೀ ಆಗಲೇ ಬೇಕಲ್ಲವೇ? ದೇವಸ್ಥಾನದ ಸುತ್ತ ಉರುಳಾಡಿದರೆ ಮಾಡಿದ ಪಾಪ ಕಳೆಯುವುದಿಲ್ಲ. ಪಾಪ ಕಳೆಯಬೇಕಾದರೆ ಪುಣ್ಯದ ಕೆಲಸ ಮಾಡಬೇಕು. ಎಂಜಲೆಲೆ ಮೇಲೆ ಹೊರಳಿದರೆ ರೋಗ ವಾಸಿಯಾಗುವುದಿಲ್ಲ. ರೋಗ ವಾಸಿಯಾಗಬೇಕಾದರೆ ವೈದ್ಯರ ಬಳಿ ಹೋಗಬೇಕು!
ಷರತ್ತುಗಳು ಷರತ್ತುಬದ್ಧವಾಗಿರಬೇಕೇ?: ನಾನು ಪರೀಕ್ಷೆಯಲ್ಲಿ ಪಾಸಾದರೆ ನಿನಗೊಂದು ಕಾಯಿ ಒಡೆಸುವೆ ಇಲ್ಲವೇ ನನ್ನ ತಲೆಕೂದಲನ್ನಿತ್ತು ಮುಂಡನ ಮಾಡಿಸಿಕೊಳ್ಳುವೆ, ಕೃಪೆ ತೋರಿ ನಾನು ಪಾಸಾಗುವಂತೆ ಅನುಗ್ರಹಿಸು ದೇವರೇ ಎಂಬ ವಿದ್ಯಾರ್ಥಿಗಳಿಂದ ಹಿಡಿದು, "ಈ ಬಾರಿ ನಾನು ಚುನಾವಣೆಯಲ್ಲಿ ಗೆದ್ದರೆ ನಿನ್ನ ತಲೆಗೊಂದು ಬೆಳ್ಳಿ ಕಿರೀಟ" ಎಂಬ ರಾಜಕಾರಣಿಗಳವರೆಗೆ ಎಲ್ಲಾ ದೇವರುಗಳ ಎದುರು ಹರಕೆಗಳ ಅರ್ಜಿಗಳೇ ಬಂದು ಬಿದ್ದಿರುತ್ತವೆ. ಹರಕೆ, ಭಕ್ತರ ಆತ್ಮವಿಶ್ವಾಸವನ್ನು ಹೆಚ್ಚಿಸುವಂತಿದ್ದರೆ ಒಳ್ಳೆಯ ಪರಿಪಾಠವೇ ಹೌದು. ದೇವರ ಅನುಗ್ರಹವನ್ನು ಮಾನವರಾದವರು ಯಾಚಿಸಲೇಬೇಕು. ಆದರೆ ಹೆಚ್ಚಿನ ಹರಕೆಗಳು ಷರತ್ತುಬದ್ಧವಾದ ಹರಕೆಗಳು. ಭಗವಂತನು ಭಕ್ತರಿಂದ ಕೇಳಿಕೊಂಡದ್ದಲ್ಲ- ಇವರೇ ಹೇಳಿಕೊಂಡದ್ದು. ಒಂದು ತರಹ ಏಕ ಮುಖೀ ವ್ಯವಹಾರವಿದ್ದಂತೆ. ನೀನು ಇಷ್ಟನ್ನು ಕೊಟ್ಟರೆ ನಾನು ನಿನಗೆ ಅಷ್ಟನ್ನು ನೀಡುತ್ತೇನೆ ಎಂಬ ವ್ಯಾವಹಾರಿಕ ಭಕ್ತಿಗಳನ್ನು ಮುಂದಿಡಲು, ದೇವರೇನು ವ್ಯಾಪಾರಿಯೇ? ಪರೀಕ್ಷೆಗಳಿಗೆ ಪರಿಶ್ರಮ ಪಟ್ಟು ಓದಿ ಪ್ರಾಮಾಣಿಕವಾಗಿ ಪ್ರಯತ್ನಿಸಿದರೆ, ಜಯ ಕಟ್ಟಿಟ್ಟ ಬುತ್ತಿಯಲ್ಲವೇ? "ಎ್ಟಜ ಜಟಠಡ ಝ್ಟಿಡಜ ಝ್ಟಿ ಜಟಠಡ ಝಿಜಟಡಜಟಢಜಡ" ಎಂಬ ಮಾತಿನಂತೆ ಪರಿಶ್ರಮವಿದ್ದಲ್ಲಿ ದೇವರ ಅನುಗ್ರಹವೂ ಇದ್ದೇ ಇರುತ್ತದೆಯಲ್ಲವೇ! ಅಂತೆಯೇ ಚುನಾವಣೆಯಲ್ಲಿ ಗೆದ್ದರೆ, ನಿನ್ನ ಹೆಸರಲ್ಲಿ ಇನ್ನಷ್ಟು ಸತ್ಕಾರ್ಯಗಳನ್ನು ಸಮಾಜ ಸೇವೆಯನ್ನು ಮಾಡುವೆ- ಎಂಬ ಮೊರೆಗೆ ದೇವರು ಬೇಗನೆ ಓಗೊಟ್ಟಾನಲ್ಲವೇ? ಒಟ್ಟಿನಲ್ಲಿ ನಮ್ಮ ಹರಕೆಗಳು, ಷರತ್ತುಬದ್ಧವಾಗದಿರಲಿ. ಅಂತೆಯೇ ನಮ್ಮ ಭಕ್ತಿ ಸೇವಾಕೈಂಕರ್ಯಗಳು ನಿಷ್ಕಾಮವಾಗಿರಲಿ. ಯಾರಿಗೆ ಏನನ್ನು ದಯಪಾಲಿಸಬೇಕೆಂಬುದು ದೇವರಿಗೆ ಚೆನ್ನಾಗಿ ಗೊತ್ತು! ಎಲ್ಲವನ್ನೂ ನೀಡುವವನು ನೀನೇ ಎಂಬ ಭಾವನೆ ಭಕ್ತಿ ಮಾರ್ಗ. ಆದರೆ ಎಲ್ಲವನ್ನು ಮಾಡಿಸುವವನು ನೀನೇ ಮಾಡುವವನು ನಾನೇ ಎಂಬುದು ಕರ್ಮಮಾರ್ಗ. ಎರಡೂ ಇದ್ದಾಗ ಮಾತ್ರ ಜಯಕ್ಕೆ ಸುಲಭ ಮಾರ್ಗ!
ಮೂಢನಂಬಿಕೆಗಳ ಪಟ್ಟಿ ಇನ್ನೂ ದೊಡ್ಡದಾಗಿದೆ ಮಾತ್ರವೇ ಅಲ್ಲ ಬೆಳೆಯುತ್ತಲೇ ಇದೆ. ಈ ಗುಂಪಲ್ಲಿ ವಿದ್ಯಾವಂತರೂ ಸೇರಿಕೊಂಡಿರೋದು ಆತಂಕಕಾರಿ ವಿಷಯವೂ ಹೌದು. ಮೂಢನಂಬಿಕೆಗಳಿಂದ ಎಲ್ಲರಿಗೂ ಮುಕ್ತಿ ದೊರೆಯಬೇಕು. ನಾವು ಪ್ರಗತಿಯತ್ತ ಸಾಗಬೇಕಾದರೆ, ಮಾನವೀಯತೆಯನ್ನು ಮೆರೆಯಬೇಕಾದರೆ, ನಮ್ಮ ಮೌಲ್ಯಗಳು ಪುರಾತನವಾಗಿರಲಿ ಆದರೆ ಆಚರಣೆಗಳು, ನಂಬಿಕೆಗಳು ವೈಜ್ಞಾನಿಕವಾಗಿರಲಿ, ಮಾನವೀಯತೆಯನ್ನು ಮೆರೆಯಲಿ!
- ಡಾ. ಕೆ.ಪಿ. ಪುತ್ತೂರಾಯ