ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಯುವ ಭಾರತದ ಗಮನ ಭವಿಷ್ಯದತ್ತ, ಇತಿಹಾಸದ ಮೇಲಲ್ಲ

ಕಳೆದೊಂದು ವಾರದಲ್ಲಿ ಎಲ್ಲರೂ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯಿ ಪಟೇಲ್...

Mainashree
Updated On : 8 Nov 2013, 11:41 am

ಕಳೆದೊಂದು ವಾರದಲ್ಲಿ ಎಲ್ಲರೂ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯಿ ಪಟೇಲ್ ಮತ್ತು ಇಂದಿರಾ ಗಾಂಧಿಯವರನ್ನು ನೆನಪಿಸಿಕೊಂಡು ಚರ್ಚೆಮಾಡುತ್ತಿರುವಾಗ, ಪ್ರಶ್ನೆಯೊಂದು ನನ್ನ ತಲೆ ಹೊಕ್ಕು ಕೊರೆಯತೊಡಗಿತು. ಸರ್ದಾರ್ ಪಟೇಲರು ಬ್ರಿಟಿಷ್ ರಾಜಪ್ರಭುತ್ವದ ನಿಯಮಗಳನ್ನು ಭಾರತದಿಂದ ಕಿತ್ತೆಸೆದರಾದರೂ, ಅದರಿಂದಾಗಿಯೇ ಕುಟುಂಬ ರಾಜಕಾರಣ ಭಾರತದಲ್ಲಿ ತಲೆಯೆತ್ತಿತೇ ಎಂದು!
ಪಟೇಲ್ ಮತ್ತು ಇಂದಿರಾಗಾಂಧಿ ಪ್ರಬಲ ರಾಷ್ಟ್ರೀಯತಾವಾದಿಗಳಾಗಿದ್ದರು ಎಂಬುದರಲ್ಲಿ ಸಂಶಯವಿಲ್ಲ.  ಸರ್ದಾರ್ ಪಟೇಲರು ರಾಷ್ಟ್ರೀಯವಾದವೊಂದನ್ನು ಬಿಟ್ಟು ಬೇರೆ ಇಸಂಗಳಿಗೆ(ಸಿದ್ಧಾಂತಗಳಿಗೆ) ಅಂಟಿಕೊಂಡವರಲ್ಲ. ಆದರೆ ಇಂದಿರಾ ಗಾಂಧಿಯವರ ವಿಚಾರವಾಗಿ ಹೀಗೆ ಹೇಳಲಾಗದು. 1969ರಲ್ಲಿ ಯಾವಾಗ ಕಾಂಗ್ರೆಸ್ ತನ್ನ ಕಾವು ಕಳೆದುಕೊಂಡು ನಡುಗತೊಡಗಿತೋ, ಆಗ ಇಂದಿರಾ ಗಾಂಧಿಯವರು ಸಮಾಜವಾದದಿಂದ ತೆಳು ಚಾದರವೊಂದನ್ನು ಎಳೆದುಕೊಂಡು ಕಾಂಗ್ರೆಸ್ ಅನ್ನು ಬೆಚ್ಚಗಿರಿಸಲು ಪ್ರಯತ್ನಿಸಿದರು. ಸಮಾಜವಾದದ ಆ ತೆಳು ಚಾದರ ದೇಶಕ್ಕೆ ತಾತ್ಕಾಲಿಕವಾಗಿ ಹುಸಿ ಹಿತವನ್ನು ನೀಡಿತಷ್ಟೆ. ಇನ್ನು ಇಂದಿರಾಗಾಂಧಿಯವರ ಆಡಳಿತದ ಹೈಲೈಟ್ ಎಂದರೆ, 1947ರಲ್ಲಿ ಪಟೇಲರು ಭಾರತ ಒಕ್ಕೂಟವನ್ನು ಸೇರಲು ಒಪ್ಪಿಕೊಂಡು ರಾಜ ಕುಟುಂಬಗಳಿಗೆ ನೀಡಿದ ಭರವಸೆಗಳನ್ನೆಲ್ಲ ಇಂದಿರಾ ಕಸದ ಬುಟ್ಟಿಗೆ ಎಸೆದದ್ದು.
ಇಷ್ಟೆಲ್ಲಾ ಮಾಡಿದ ಇಂದಿರಾಗಾಂಧಿಯವರು 1975 ಮತ್ತು 76ರಲ್ಲಿ ತುರ್ತು ಪರಿಸ್ಥಿತಿ ಹೇರುವ ಮೂಲಕ ತಮ್ಮ ಪಕ್ಷವನ್ನೇ ರಾಜ ಕುಟುಂಬವನ್ನಾಗಿ ಮಾಡಿಬಿಟ್ಟರು! ನೆಹರು ಕಾಂಗ್ರೆಸ್ ಪಕ್ಷದ ಭಾಗವಾಗಿದ್ದರು, ಆದರೆ ಇಂದಿರಾ ಕಾಂಗ್ರೆಸ್ ಅನ್ನು ತಮ್ಮ ಕುಟುಂಬದ ಆಸ್ತಿಯಾಗಿಸಿಕೊಂಡರು.
ಈ ಕುಟುಂಬ ರಾಜಕಾರಣಕ್ಕೆ ಎಂಥ ವಿಚಿತ್ರ ಶಕ್ತಿಯಿತ್ತೆಂದರೆ ಅದರಿಂದಾಗಿ ರಾಮ್ ಮನೋಹರ್ ಲೋಹಿಯಾರ ಸಮಾಜವಾದದ ಶಾಲೆಗೂ ಹೊಡೆತ ಬಿದ್ದಿತು. ಒಂದೊಮ್ಮೆ ಲೋಹಿಯಾ ವಾದವನ್ನು ದೇವರಿಗಿಂತ ಹೆಚ್ಚಾಗಿ ನಂಬಿದ ಸಮಾಜವಾದಿಗಳೇ ತಮ್ಮ ದಿಕ್ಕು ಬದಲಿಸಿಬಿಟ್ಟರು. ಈ ಮಾತಿಗೆ ಸೂಕ್ತ ಉದಾಹರಣೆಯೆಂದರೆ ಸಮಾಜವಾದದ ಹೆಸರಿನಲ್ಲಿ ರಾಜಕೀಯ ಸೇರಿ, ನಂತರ ತಮ್ಮ ಪಕ್ಷದ ಮಾರ್ಗವನ್ನೇ ಕುಟುಂಬ ರಾಜಕಾರಣದ ದಿಕ್ಕಿಗೆ ತಿರುಗಿಸಿದ ಲಾಲೂ ಪ್ರಸಾದ್ ಯಾದವ್ ಮತ್ತು ಮುಲಾಯಂ ಸಿಂಗ್ ಯಾದವ್! ಇವರುಗಳ ಈ ನಡೆಯಿಂದಾಗಿ ಉತ್ತರ ಭಾರತದಲ್ಲಿ ಸಮಾಜವಾದ ತೀವ್ರ ಸಂಕಷ್ಟಕ್ಕೇ ಸಿಲುಕಿತು. ಈ ಸಮಾಜವಾದಿಗಳ ಮೇಲಿನ ವಿಶ್ವಾಸ ಜನರಿಗೆ ಯಾವಾಗ ಕಡಿಮೆಯಾಗುತ್ತಾ ಹೋಯಿತೋ, ಆಗ ಅವರ ಜಾಗದಲ್ಲಿ ಕಾಂಗ್ರೆಸ್ಸೇತರ ಪಕ್ಷಗಳು, ಅದರಲ್ಲೂ ಮುಖ್ಯವಾಗಿ ಬಿಜೆಪಿ ಬಂದು ಕುಳಿತಿತು. ಸಮಾಜವಾದಿಗಳು ಮೊದಲು ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಸೋತು ಮೆತ್ತಗಾದರು. ಈಗವರ ಸದ್ದು ಉತ್ತರಪ್ರದೇಶ ಮತ್ತು ಬಿಹಾರಕ್ಕಷ್ಟೇ ಸೀಮಿತವಾಗಿದೆ.
ತಾತ್ವಿಕವಾಗಿ ನೋಡಿದರೆ, ಪ್ರಜಾಪ್ರಭುತ್ವ ಅರ್ಹತೆಯ ಉನ್ನತಿಗೆ ಮತ್ತು ಅನರ್ಹತೆ ನಶಿಸುವುದಕ್ಕೆ ವೇದಿಕೆ ಕಲ್ಪಿಸಿಕೊಡುತ್ತದೆ. ಆದರೆ ಈಗಿನ ರಾಜವಂಶದ ಆಡಳಿತ, ಪ್ರಜಾಪ್ರಭುತ್ವದ ಮೇಲೆ ತನ್ನ ಅಧಿಕಾರವನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದೆ. ಒಂದು ವೇಳೆ ಅದನ್ನು ಪ್ರಶ್ನಿಸಲು ಮುಂದಾದರೆ, ಇತಿಹಾಸದ ಭಾವುಕ ಕಥೆಗಳನ್ನು ಹೇಳಿ ಅದರಲ್ಲಿ ಪ್ರಸ್ತುತತೆಯನ್ನು ಹುಡುಕಲು ಅದು ಯತ್ನಿಸುತ್ತಿದೆ. ರಾಹುಲ್ ಗಾಂಧಿಯವರು ತಮ್ಮ ಅಜ್ಜಿ ಇಂದಿರಾ ಗಾಂಧಿ ಮತ್ತು ತಂದೆ ರಾಜೀವ್ ಗಾಂಧಿಯವರ ಸಾವಿನ ವಿಷಯವನ್ನು ಮುಂದಿಟ್ಟು ತಮ್ಮ ರಾಜಕೀಯ ಇಚ್ಛೆಗಳನ್ನು ಈಡೇರಿಸಿಕೊಳ್ಳಲು ಪ್ರಯತ್ನಿಸಿದ್ದು ಇದಕ್ಕೊಂದು ಉದಾಹರಣೆ. ಒಂದು ವೇಳೆ ಪೂರ್ವಜರ ತ್ಯಾಗವೇ ಅವರ ಕುಡಿಗಳಿಗೆ ಅಧಿಕಾರ ಪಡೆಯುವ ಅರ್ಹತೆಯೆಂದರೆ, ಮಹಾತ್ಮಾ ಗಾಂಧೀಜಿಯ ಮರಿಮೊಮ್ಮಗ ಗೋಪಾಲ್ ಗಾಂಧಿಯವರಿಗೆ ನಾವು ಹೆಚ್ಚು ಪ್ರಾಮುಖ್ಯ ಕೊಡಬೇಕು ಎಂದಂತಾಯಿತಲ್ಲವೇ?
ಇಂದಿರಾ ಗಾಂಧಿ ಅಥವಾ ಪಟೇಲರ ವ್ಯಕ್ತಿತ್ವದ ಬಗ್ಗೆ ಚರ್ಚೆ ಮಾಡುತ್ತಿರುವವರು, ಇತಿಹಾಸವನ್ನು ಕೆದಕುತ್ತಿರುವವರು ಒಂದ ವಿಷಯವನ್ನು ಅರ್ಥಮಾಡಿಕೊಳ್ಳಬೇಕು- ಯುವ ಭಾರತದ ಗಮನವೇನಿದ್ದರೂ ಭವಿಷ್ಯದತ್ತ ನೆಟ್ಟಿದೆ. ದೇಶದ ಆರ್ಥಿಕ ಸ್ಥಿತಿ ನೋಡಿ ಅವರು ಕಂಗೆಟ್ಟಿದ್ದಾರೆ. ಹೆಚ್ಚುತ್ತಿರುವ ದರಗಳು, ಕಡಿಮೆಯಾಗುತ್ತಿರುವ ಆದಾಯ, ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಿವೆ. ಪೋಷಕರು ಅಸಹಾಯಕರಾಗಿದ್ದರೆ, ಅವರ  ಮಕ್ಕಳು ಆಶಾರಹಿತರಾಗುತ್ತಿದ್ದಾರೆ.  ಹಾಗಾಗೇ ಅವರನ್ನು ಅಸಡ್ಡೆ ಮೆರೆಯುತ್ತಿರುವ ಯುಪಿಎ ಸರ್ಕಾರ ತೀವ್ರವಾಗಿ ಕೆರಳಿಸಿದೆ. ಅವರ ಆಕ್ರೋಶದ ಕಾವು ದೇಶಾದ್ಯಂತ ತಟ್ಟುತ್ತಿದ್ದರೂ, ದೆಹಲಿಯ ಮೃಗಾಲಯದಲ್ಲಿ ಕುಳಿತಿರುವ ಜೀವಿಗಳಿಗೆ ಮಾತ್ರ ಅದರ ಅರಿವಾಗುತ್ತಿಲ್ಲ.
ನರೇಂದ್ರ ಮೋದಿ ಹೆಸರು ಈ ಸಮಯದಲ್ಲಿ ಸದ್ದು ಮಾಡುತ್ತಿರುವುದು, ಅವರು ಸರ್ದಾರ್ ಪಟೇಲರ ಬೃಹತ್ ಪ್ರತಿಮೆಯನ್ನು ನಿರ್ಮಿಸುತ್ತಿದ್ದಾರೆ ಎನ್ನುವ ಕಾರಣಕ್ಕಲ್ಲ. ಬದಲಾಗಿ ದೆಹಲಿ ದರ್ಬಾರಿನ ಮೇಲೆ ಮುತ್ತಿಗೆ ಹಾಕುತ್ತಿದ್ದಾರೆ ಎನ್ನುವ ಕಾರಣಕ್ಕೆ. ಜನತೆಯ ಆಕ್ರೋಶದ ಧ್ವನಿ ಮತ್ತು ಫಲಾನುಭವಿ ಆಗುತ್ತಿದ್ದಾರೆ ಮೋದಿ. ದೆಹಲಿಯ ಬುದ್ಧಿಜೀವಿಗಳು ತಿರಸ್ಕಾರದೊಂದಿಗೆ ಪ್ರತಿಕ್ರಿಯೆ ನೀಡಿದಾಗಲೆಲ್ಲ (ಕ್ಯಾಬೆನೆಟ್ ಸಚಿವರೊಬ್ಬರು ಮೋದಿಯನ್ನು ಚಾಯ್‌ವಾಲಾ ಎಂದು ಕರೆದಾಗ) ಮೋದಿಯ ಬೆಂಬಲಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಏಕೆಂದರೆ ಇಂದಿಗೂ ಎಷ್ಟೋ ಭಾರತೀಯರು ಚಾಯ್ ಮಾರಿಯೇ ಬದುಕುತ್ತಿದ್ದಾರೆ, ಎಲ್ಲರೂ ರಾಜಕಾರಣಿಗಳ ಮಕ್ಕಳಾಗುವುದಕ್ಕೆ ಸಾಧ್ಯವಿಲ್ಲವಲ್ಲ? ಯುಪಿಯ ಸರ್ಕಾರದಡಿಯಲ್ಲಿ ಆಡಳಿತದಲ್ಲಿ ಉದ್ಭವವಾಗಿರುವ ಖಾಲಿ ಜಾಗಕ್ಕೆ ಮೋದಿ ನುಗ್ಗಿದ್ದಾರೆ. ಆ ಖಾಲಿ ಜಾಗ ಈಗ ಅವರದ್ದು, ತಮ್ಮ ಕೈಲಾದ ಮಟ್ಟಿಗೆ ಅವರು ಅದನ್ನು ತುಂಬಬಲ್ಲರು.
ಜವಾಹರ್‌ಲಾಲ್ ನೆಹರು ಮತ್ತು ಪಟೇಲರ ನಡುವೆ ಯಾರು ಉತ್ತಮ ನಾಯಕರಾಗಿದ್ದರು ಎನ್ನುವ ಚರ್ಚೆಯಿಂದಾಗಿ ಮುಂದಿನ ಲೋಕಸಭಾ ಚುನಾವಣೆಗೆ ವ್ಯತ್ಯಾಸವೇನೂ ಆಗುವುದಿಲ್ಲ. ಈ ಚರ್ಚೆಯನ್ನು ಗಮನದಲ್ಲಿಟ್ಟುಕೊಂಡು ಜನತೆ ಮತದಾನ ಮಾಡುವುದಿಲ್ಲ. 2014ರಲ್ಲಿ ಯಾರು ದೇಶವನ್ನು ಮುನ್ನಡೆಸಲು ಅರ್ಹರು ಎಂಬ ಮಾನದಂಡದ ಮೇಲೆಯೇ ಮತದಾನ ನಡೆಯಲಿದೆ. ಮೋದಿಗೆ ಲಕ್ ಇದ್ದಂತಿದೆ. ಡಾ. ಮನಮೋಹನ್ ಸಿಂಗ್ ಅವರು ಎಂದೋ ಮೌನವಾಗಿದ್ದಾರೆ. ಇನ್ನೊಂದೆಡೆ ರಾಹುಲ್ ಗಾಂಧಿಯವರನ್ನು ಪಕ್ಷದ ಮುಖವನ್ನಾಗಿ ಮಾಡಲು ಕಾಂಗ್ರೆಸ್ ಈಗಲೂ ಹಿಂದೇಟು ಹಾಕುತ್ತಿದೆ. ಮೋದಿಯ ಸಾಮರ್ಥ್ಯದೊಂದಿಗೆ ರಾಹುಲ್‌ರನ್ನು ಎಲ್ಲಿ ಜನ ಹೋಲಿಕೆ ಮಾಡಿ ನೋಡುತ್ತಾರೋ ಎನ್ನುವ ಭಯ ಅದಕ್ಕಿದೆ. ಇನ್ನು ಚುನಾವಣೆಗಳಿಗೆ ಆರು ತಿಂಗಳ ಸಮಯವಿದೆ. ಮುಂದೇನು ಆಗಲಿದೆಯೋ ಎನ್ನುವುದಕ್ಕೆ ಈಗಲೇ ಸಣ್ಣ ಸುಳಿವು ಸಿಗತೊಡಗಿದೆ. ಇತ್ತೀಚೆಗೆ ನಡೆಸಿದ ಸಮೀಕ್ಷೆಯೊಂದರ ಪ್ರಕಾರ 57 ಪ್ರತಿಶತ ಜನರು ಈ ದೀಪಾವಳಿಯನ್ನು ಕಳೆದೊಂದು ದಶಕದಲ್ಲಿ ತಾವು ಎದುರಿಸಿದ ಅತಿ ಕೆಟ್ಟ ದೀಪಾವಳಿ ಎಂದು ಹೇಳುತ್ತಿದ್ದಾರೆ. ಇನ್ನೂ ಆರು ತಿಂಗಳವರೆಗೂ ಭಾರತದ ಆರ್ಥಿಕತೆ ಕೆಟ್ಟ ಪರಿಸ್ಥಿತಿಯಲ್ಲೇ ಮುಂದುವರಿಯಲಿದೆ ಅಥವಾ ಅದಕ್ಕಿಂತಲೂ ಹದಗೆಡಲಿದೆ ಎಂದು ಭಾವಿಸುವವರ ಸಂಖ್ಯೆ 77 ಪ್ರತಿಶತ! ಈ ರೀತಿ ಯೋಚಿಸುವವರ ಸಂಖ್ಯೆ ತುಸು ಕಡಿಮೆಯಾಗಬಹುದೇ ಹೊರತು, ಕಾಣೆಯಂತೂ ಆಗುವುದಿಲ್ಲ. ಭಾರತ ಹತಾಶ ದೇಶವಾಗಿದೆ. ಇದರಿಂದಾಗಿ ಆಡಳಿತ ನಡೆಸುತ್ತಿರುವ ಪಕ್ಷಗಳೂ ಹತಾಶೆಗೆ ಬೀಳಲಿವೆ!

- ಎಮ್ .ಜೆ. ಅಕ್ಬರ್
anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement