ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಮೂಢನಂಬಿಕೆ ಪ್ರತಿಬಂಧಕ ಕಾಯ್ದೆ - ಜನಾಭಿಪ್ರಾಯ

Mainashree
Updated On : 9 Nov 2013, 12:43 pm

ಇದೇನಾ ಆದ್ಯತೆ?
ಪ್ರತಾಪಸಿಂಹರವರು ಇಂದಿನ ಲೇಖನದಲ್ಲಿ ತಾರ್ಕಿಕವಾಗಿ ಸಮರ್ಪಕವಾದ ಪ್ರಶ್ನೆಗಳನ್ನು ಎತ್ತಿದ್ದಾರೆ. ಜನರಿಗೆ ಯಾವ ವಿಷಯದಲ್ಲಾದರೂ ನಂಬಿಕೆ ಇರಲಿ ಅಥವಾ ಅದು ಮೂಢನಂಬಿಕೆ ಆಗಿರಲಿ, ಅದನ್ನು ಅದರ ಪಾಡಿಗೆ ಬಿಟ್ಟು ಬಿಡಬೇಕು. ಇಂತಹ ವಿಷಯಗಳಲ್ಲಿ ಸರ್ಕಾರವು ಹಸ್ತಕ್ಷೇಪ ಮಾಡುವುದು ಅನಗತ್ಯ. ಕೆಲಸವಿಲ್ಲದ ಬಡಗಿ ಮಗುವಿನ ಅಂಡು ಕೆತ್ತಿದಂತೆ, ಸರ್ಕಾರಕ್ಕೆ ಮಾಡಲು ಬೆಟ್ಟದಷ್ಟು ಕೆಲಸವಿರುವಾಗ ಸಮಾಜದಲ್ಲಿ ಧರ್ಮ- ಮತಗಳ ಆಧಾರದಲ್ಲಿ ಜನರನ್ನು ಬೆಸೆಯುವ ಪ್ರಯತ್ನಕ್ಕೆ ಕೈ ಹಾಕುವುದು ಶೋಭೆ ನೀಡುವುದಿಲ್ಲ. ಹಲವಾರು ಆಚರಣೆಗಳು, ಶ್ರದ್ಧೆಗಳು, ನಂಬಿಕೆಗಳು ಖಾಸಗಿಯೇ ಉಳಿಯಬೇಕು. ಸರ್ಕಾರವು ಈ ಬಗ್ಗೆ ವೃಥಾ ಕಾಲಕ್ಷೇಪ ಮಾಡದೆ ಸ್ವಚ್ಛ ಕುಡಿಯುವ ನೀರು, ಕೃಷಿಗೆ ಪ್ರೋತ್ಸಾಹ, ಆರ್ಥಿಕ ಅಭಿವೃದ್ಧಿ, ಬಡತನ ನಿರ್ಮೂಲನ, ಭ್ರಷ್ಟಾಚಾರ ರಹಿತ ಆಡಳಿತ ಇನ್ನಿತರ ಹಲವಾರು ಪ್ರಮುಖ ವಿಷಯಗಳ ಕಡೆಗೆ ಆದ್ಯತೆ ನೀಡಬೇಕು.
- ಬಿ.ಎನ್. ಭರತ, ಹುಬ್ಬಳ್ಳಿ

ವೈಚಾರಿಕತೆ ಹೆಸರಲ್ಲಿ...
ಮಾನ್ಯ ಮುಖ್ಯಮಂತ್ರಿಗಳೇ ನೀವು ವೈಚಾರಿಕ ನೆಲೆಗಟ್ಟಿನಿಂದ ಬಂದವರು ನಿಜ. ಆದರೆ ನೀವು ಕರ್ನಾಟಕದ ಆರು ಕೋಟಿ ಕನ್ನಡಿಗರ ಮುಖ್ಯಮಂತ್ರಿ ಎನ್ನುವುದನ್ನು ಮರೆತು ಕೇವಲ ಯಾರ್ಯಾರೋ "ಸೈಕೋ" ವಿಚಾರವಾದಿಗಳ ಮಾತಿಗೆ ಬೆಲೆಕೊಟ್ಟು ನೀವು ಮೂಢನಂಬಿಕೆಗಳ ಹೆಸರಿನಲ್ಲಿ ಹಿಂದೂ ಸಂಸ್ಕೃತಿಯನ್ನು ಒಡೆಯುವ, ನಾಶ ಮಾಡುವ ಕೃತ್ಯಕ್ಕೆ ಕೈ ಹಾಕಿರುವುದು ದುರಹಂಕಾರದ ಪರಮಾವಧಿ. ಹಿಂದೂ ಸಂಸ್ಕೃತಿಯ ಒಂದು ಭಾಗವಾಗಿರುವ ಜ್ಯೋತಿಷ್ಯ, ಫಲ ಜ್ಯೋತಿಷ್ಯ, ಸಂಖ್ಯಾ ಶಾಸ್ತ್ರ, ದೈವ ಪ್ರಶ್ನೆ, ತೀರ್ಥಕ್ಷೇತ್ರಗಳ ಪ್ರವಾಸ, ಮಠಾಧೀಶರ ಪಾದಪೂಜೆ, ಜಪಮಾಲೆ, ರುದ್ರಾಕ್ಷಿ, ಹರಳುಗಳ ಬಳಕೆ ಇವೆಲ್ಲವನ್ನು ಪ್ರಶ್ನಿಸುವ, ತಡೆ ಹಿಡಿಯುವ ಅಧಿಕಾರ ಆ "ಸೈಕೋ" ವಿಚಾರವಾದಿಗಳಿಗಾಗಲೀ ನಿಮಗಾಗಲಿ ಇಲ್ಲ ಮತ್ತು ಸಾಧ್ಯವಿಲ್ಲ.
- ದೀಪಕ್ ಕಾಂಚನ, ದಾವಣಗೆರೆ.

ಹಿಂದೂ ಧರ್ಮದ ಮೇಲೆ ಗದಾಪ್ರಹಾರ
ನವೆಂಬರ್ 7, 2013ರ ಕನ್ನಡಪ್ರಭದಲ್ಲಿ ಪ್ರತಾಪಸಿಂಹರ ಲೇಖನ ನೂರಕ್ಕೆ ನೂರು ಅರ್ಥಪೂರ್ಣ ಹಾಗೂ ಬೆಂಬಲ ನೀಡಲು ಯೋಗ್ಯವಾಗಿದೆ. ಪ್ರಸ್ತುತ ಸರ್ಕಾರದ ನಡೆಯನ್ನು ಗಮನಿಸಿದರೆ-ಇದೊಂದು ವಿಚಾರವಾದಿಗಳ ಸರ್ಕಾರವೇನೋ ಎಂಬಂತಿದೆ. ಹಿಂದೂ ನಂಬಿಕೆಗಳ ಮೇಲೆ ಗದಾಪ್ರಹಾರ ಮಾಡಲೇ ವಿಚಾರವಾದಿಗಳೆಂದು ಮುದ್ರೆ ಹೊಡೆಸಿಕೊಂಡವರನ್ನು ಆಯ್ಕೆ ಮಾಡಿ ಅವರಿಂದ ಕರಡು ವಿಧೇಯಕವನ್ನು ಬರೆಸಿ ತರಿಸಿ ಸರ್ಕಾರದ ನಿಲುವು ಗಮನಿಸಿದರೆ -ಪ್ರಸ್ತುತ ಸರ್ಕಾರ ಯಾವ ದಿಸೆಯಲ್ಲಿ ಮುಂದುವರಿಯುತ್ತಿದೆಯೆನ್ನುವುದು ಗೋಚರವಾಗುತ್ತಿದೆ. ನಮ್ಮ ಸಮಾಜದಲ್ಲಿ ಕೆಲವೊಂದು ಮೂಢನಂಬಿಕೆಗಳು 1970ರ ನಂತರದ ಟಿ.ವಿ.ಯ ದರ್ಶನವಾದ ನಂತರ ಹುಟ್ಟಿಕೊಂಡವುಗಳಾಗಿವೆ. ಭಾರತೀಯರ ಮೇಲೆ ಮೂಢನಂಬಿಕೆಗಳ ಪರ್ವತವನ್ನು ಹೊರಿಸಿದ ಕೀರ್ತಿ ಚೀನಿಯರಿಗೆ ಸಲ್ಲಬೇಕು. 60ರ ದಶಕದಿಂದ ಆರಂಭವಾದ ಅವರ ನಾಟಕದಂತೆ ಫೆಂಗ್ ಶ್ವುಯಿ ಶಾಸ್ತ್ರದ  ಹಿನ್ನೆಲೆ ತೋರಿಸಿ ವಿಧ ವಿಧದ ಹೊಟ್ಟೆ ಪಂಡಿತರ ಬೊಂಬೆಗಳನ್ನು ಭಾರತಕ್ಕೆ ಹಡಗಿನಲ್ಲಿ ಕಳುಹಿಸುವುದರೊಂದಿಗೆ ಮನೆಯಲ್ಲಿ ಆಮೆಯ, ಕಾಲೆತ್ತಿದ ಕುದುರೆ-ಆನೆಗಳು, ಡ್ರ್ಯಾಗನ್‌ಗಳ ಪ್ರತಿಮೂರ್ತಿಗಳನ್ನಿಟ್ಟುಕೊಂಡಿದ್ದಲ್ಲಿ ಅದೃಷ್ಟ ಒಲಿಯುವುದೆಂಬ ಪ್ರಚಾರವಾಯ್ತು. ಕಟ್ಟ ಕಡೆಗೆ ದುಡ್ಡು ಸಂಪಾದಿಸುವ ಕನಸು ಕಾಣುತ್ತಿರುವ ಸೋಮಾರಿಗಳು ಮುಗಿ ಬಿದ್ದು ಹೊಟ್ಟೆ ಪಂಡಿತರ ಗೊಂಬೆ ಖರೀದಿಸಿದ್ದೇ ಖರೀದಿಸಿದ್ದು. ಈ ವಿಧದಲ್ಲಿ ಭಾರತೀಯರ ತಲೆ ಸವರುವ ಕಾರ್ಯವನ್ನು ಇಂದಿಗೂ ಮಾಡುತ್ತಾ-ನಮ್ಮ ವಿದೇಶಿ ವಿನಿಮಯದ ಗುಡ್ಡೆಯನ್ನು ಕರಗಿಸುತ್ತಿರುವುದು ಸ್ಪಷ್ಟವಾಗಿದೆ. ಇನ್ನೊಂದು ವಿಧದ ಪಿಡುಗು ಟಿವಿಯಲ್ಲಿ ಬರುವ ನಾಟಕದ ಗುರೂಜಿಗಳು ಅವರ ಜ್ಯೋತಿಷ್ಯವಾಣಿ, ನಾಲ್ಕು ಸಂಸ್ಕೃತ ಶ್ಲೋಕ ಉರು ಹಾಕಿಕೊಂಡು ಢಾಳಾಗಿ ವಿಭೂತಿ-ರುದ್ರಾಕ್ಷಿ ಧರಿಸಿ ನಿರೂಪಕಿಯಿಂದ ಗುರೂಜಿಯೆಂದು ಪರಾಕ್ ಹೇಳಿಸಿಕೊಳ್ಳುತ್ತಾ ಬೊಗಳೆ ಬಿಡುವ ಚಂಡ ಮಾರ್ತಾಂಡ -ಬ್ರಹ್ಮಾಂಡ ಜ್ಯೋತಿಷ್ಯಕ್ಕೆ ನಿಬಂರ್ಧ ಬೇಕಾಗಿದೆ. ಇದರ ಹೊರತು ವಿಚಾರವಾದಿಗಳ ಸಮಿತಿ ತಯಾರಿಸಿದ ಮೂಢನಂಬಿಕೆಗಳ ನಿವಾರಣೆಯೆಂಬ ಕಾನೂನಿನ ಕರಡು ಪತ್ರ ನೇರವಾಗಿ ಕ.ಬು.ಗೆ ಕಳುಹಿಸಲು ಯೋಗ್ಯ. ಭಾರತದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಅವರವರ ಧರ್ಮಾಚರಣೆ ಮಾಡುವ ವಿಶಿಷ್ಟ ಹಕ್ಕನ್ನು ಸಂವಿಧಾನ ನೀಡಿದೆ. ಹಿಂದೂ ಜನಾಂಗದಲ್ಲಿ ದೈನಂದಿನ ಬದುಕಿನಲ್ಲಿ ಹಲ ಕೆಲವು ಸಂಪ್ರದಾಯಗಳನ್ನು ಶತಮಾನಗಳಿಂದ ಆಚರಿಸುವ ನೇರ ಸಂಪ್ರದಾಯವಿದೆ. ಆ ಸಂಪ್ರದಾಯದ ಆಚರಣೆಗೆ ಯಾವುದೇ ತೊಡಕನ್ನು ಸೃಷ್ಟಿಸಿದರೂ ನ್ಯಾಯಾಂಗ ಅದಕ್ಕೆ ತನ್ನ ಮುದ್ರೆ ಒತ್ತುವುದೇ ಇಲ್ಲ. ಈ ವಿಷಯವನ್ನು ಈ ವಿಚಾರವಾದಿಗಳೂ ಸರ್ಕಾರವೂ ಗಮನಿಸಬೇಕು. ಪ್ರಸ್ತುತ ಮಾನ್ಯ ಮುಖ್ಯಮಂತ್ರಿಗಳು ತಮ್ಮ ಆಡಳಿತ ನಡೆಸಲು ಪ್ರತಿ ಬಾರಿಯೂ ವಿಚಾರವಾದಿಗಳ ಮೊರೆ ಹೋಗುತ್ತಿರುವುದು ಇತ್ತೀಚೆಗೆ ಹೆಚ್ಚಾಗುತ್ತ್ತಿದೆ. ರಾಜ್ಯೋತ್ಸವ ಪ್ರಶಸ್ತಿ ಸಂದರ್ಭದಲ್ಲೂ ವಿಚಾರವಾದಿಗಳ ಒಲವಿನಂತೆ ಪ್ರಶಸ್ತಿಗಳಘೋಷಣೆಯಾಗಿರುವುದು ಸ್ಪಷ್ಟ. ಅಲ್ಲಿಗೆ ಸ್ವಂತಿಕೆ ಇಲ್ಲದ ರಾಜ್ಯಭಾರವಾಗುವುದು ಬೇಡ. ಪ್ರಸ್ತುತ ಬೆಳಗಾವಿ ಅಧಿವೇಶನದಲ್ಲಿ ಈ ಕರಡು ಪತ್ರ ಮಂಡಿಸದೆ ಅದನ್ನು ಧೂಳಿನ ಕೊಠಡಿಗೆ ಕಳಿಸುವುದು ಉತ್ತಮ.
- ಕೋಟೇಶ್ವರ ಸೂರ್ಯನಾರಾಯಣರಾವ್, ಬೆಂಗಳೂರು

ಭಾವನೆ ಕೆಣಕುವ ವಿಕೃತಿ
1956ರಲ್ಲಿ ಸಂವಿಧಾನಶಿಲ್ಪಿ ಡಾ. ಅಂಬೇಡ್ಕರ್‌ರವರು ವ್ಯಕ್ತಿ ಸ್ವಾತಂತ್ರ್ಯವನ್ನು ಕೊಟ್ಟಿದ್ದರೂ ಸಹ 2013ರಲ್ಲಿ ಮಾನ್ಯ ಮುಖ್ಯಮಂತ್ರಿಗಳು ಮೂಢನಂಬಿಕೆ ಪ್ರತಿಬಂಧಕ ಕಾಯಿದೆ ಮಾಡುವ ಮೂಲಕ ವಾಪಸ್ಸು ತೆಗೆದುಕೊಳ್ಳುತ್ತಿದ್ದಾರೆ ಎಂದು ಭಾವಿಸೋಣವೇ? ಭಾರತ ದೇಶ ಸಂಸ್ಕೃತಿ, ಸಂಸ್ಕಾರಗಳಿಂದ ಕೂಡಿದೆ. ಭಾರತ ದೇಶದ ಮಣ್ಣಿನಲ್ಲಿ ಹುಟ್ಟಿದ ಪ್ರತಿಯೊಂದು ಮಕ್ಕಳೂ ಸಹ ಹಿರಿಯರು, ಕಿರಿಯರು, ಜ್ಞಾನಿಗಳು, ಸನ್ಯಾಸಿಗಳು, ಮಠಾಧೀಶರು ಎಂಬ ಗೌರವ ಭಾವನೆಯಿಂದ ಬೆಳೆಯುತ್ತಾರೆ. ಉದಾಹರಣೆಗೆ ಡಾ. ಶಿವಕುಮಾರ ಸ್ವಾಮೀಜಿ, ಡಾ. ಬಾಲಗಂಗಾಧರನಾಥ ಸ್ವಾಮೀಜಿ ಇನ್ನಿತರ ಸ್ವಾಮಿಗಳು ಇಂದು ಸಾವಿರಾರು ಮಕ್ಕಳ ಜೀವನಾಧಾರವಾಗಿದ್ದಾರೆ. ಇಂತಹ ಮಹಾತ್ಮರ ಪಾದಪೂಜೆ ಮಾಡದೆ ಸಾವಿರಾರು ಜನರ ಹೊಟ್ಟೆ ಮೇಲೆ ಹೊಡೆದು ಸ್ವಾರ್ಥ ಸಾಧನೆ ಮಾಡುವವರ ಪಾದಪೂಜೆ ಮಾಡಬೇಕೆ? ಮೂಢನಂಬಿಕೆಗಳು ಯಾವುದೋ ಸಮಾಜಕ್ಕೋ, ಪಂಗಡಕ್ಕೋ ಅಥವಾ ವ್ಯಕ್ತಿಗೋ ತೊಂದರೆಯಾಗುತ್ತಿದ್ದರೆ ಅದನ್ನು ಬಹಿಷ್ಕರಿಸಬೇಕು. ಆದರೆ ನೀವು ಮಾಡಿರುವ ಮೂಢನಂಬಿಕೆ ಪ್ರತಿಬಂಧಕ ಕಾಯಿದೆಯಲ್ಲಿ ಪಟ್ಟಿ ಮಾಡಲಾಗಿರುವ ಹಲವು ಅಂಶಗಳು ಯಾರನ್ನೂ ತೊಂದರೆಗೊಳಪಡಿಸಿಲ್ಲ. ಆದರೆ ಕಾಯಿದೆಯಲ್ಲಿರುವ ಪ್ರಾಣಿಬಲಿ ತಡೆ ಎಂಬ ಒಂದಶವು ಸ್ವಾಗತಾರ್ಹವಾಗಿದೆ. ಇಂತಹ ಒಳ್ಳೆ ಅಂಶಗಳೇನಾದರೂ ಇದ್ದರೆ ಮಾಡಿ. ಅದನ್ನು ಬಿಟ್ಟು ವ್ಯಕ್ತಿಯ ಭಾವನೆಗಳನ್ನು ಕೆಣಕಬೇಡಿ.
-ಜಿ. ಪುಷ್ಪಲತಾ, ಬೆಂಗಳೂರು.
'ಹಿಂದೂ ಧರ್ಮ ಪ್ರತಿಬಂಧಕ ಕಾಯಿಲೆ'
ನಮ್ಮ ಊರಲ್ಲಿ ಮಧ್ಯ ಸೇವನೆ, ಧೂಮಪಾನ ರೇಸ್‌ಗಳಂತಹ ಚಟಗಳಿಂದ ಜನ ಸಾಯುತ್ತಿದ್ದಾರೆ ಹೊರತು ಆಚರಣೆ ನಂಬಿಕೆಗಳಿಂದಲ್ಲ. ಮದ್ಯ ಮತ್ತು ತಂಬಾಕು ಪ್ಯಾಕ್ ಮೇಲೆಯೇ ಆರೋಗ್ಯಕ್ಕೆ ಹಾನಿಕಾರಕ ಎಂದು ಬರೆದಿರುತ್ತದೆ. ಆದರೂ ಅದನ್ನು ಹಣ ಕೊಟ್ಟು ಕುಡಿದರೆ ಅವರವರ ಆಯ್ಕೆ. ಹಾಗಾದರೆ ನೀವು ನಿಷೇಧಿಸಲು ಹೊರಟ ಸಂಗತಿಗಳನ್ನು ಹೇಗೆ ಮೂಢ ನಂಬಿಕೆಗಳೆನ್ನುತ್ತೀರಿ? ಸರ್ಕಾರಕ್ಕೆ ಜನ ಸಾಯುವ ಚಟಕ್ಕಿಂತ  ಮನುಷ್ಯನನ್ನು ತಪ್ಪು ದಾರಿಗೆ ಇಳಿಯದಂತೆ ಮೃದು ಮಾಡುವ ಈ ನಂಬಿಕೆಗಳೇ ಸಮಾಜಕ್ಕೆ ಮಾರಕ ಎನಿಸಿದರೆ ನಿಷೇಧಿಸಿ. ಯಾವುದಕ್ಕೂ ಕಾಯ್ದೆ ಹೆಸರನ್ನು 'ಹಿಂದೂ ಧರ್ಮ ಪ್ರತಿಬಂಧಕ ಕಾಯಿಲೆ' ಅಂತ ಬದಲಾಯಿಸಿಬಿಡಿ.
-ನಂದನ ಎಚ್‌ಜಿ ಗೌಡ

ಸಂಸ್ಕಾರ ಒದಗಿಸುವ ನಂಬಿಕೆ
ಸಾಮಾಜಿಕವಾಗಿ ಅಥವಾ ವಯಕ್ತಿಕವಾಗಿ ಪ್ರೌಢರೆನಿಸಬೇಕಾದರೆ ನಂಬಿಕೆ ಬಹಳ  ಮುಖ್ಯ. ಇದು  ಹುಟ್ಟಿದಾರಭ್ಯ ರಕ್ತಗತವಾಗಿ ಸುಸಂಸ್ಕೃತ ಜನರಲ್ಲಿರುವ ಹುಟ್ಟುಸಂಸ್ಕಾರ. ಆ ಬೃಹತ್ ಸಂಸ್ಕಾರವೆಂಬ ವೃಕ್ಷದ  ಬುಡಕ್ಕೆ ಕೊಡಲಿ ಇಡಲು ಹೊಟಿರುವ ವಿಕೃತ ಮನಸ್ಸಿನ ಬುದ್ಧಿಜೀವಿಗಳು ಮುಂದಿನ ಯುವ ಪೀಳಿಗೆಗೆ ಯಾವ  ರೀತಿ ಆದರ್ಶಪ್ರಾಯರಾಗಿರುತ್ತಾರೆ? ಆದ ಕಾರಣ ಮಾನ್ಯ ಮುಖ್ಯಮಂತ್ರಿಗಳು ರಾಜ್ಯದ ಸರ್ವತೋಮುಖ ಬೆಳವಣಿಗೆಯ ಬಗ್ಗೆ ಮಾತ್ರ ಯೋಚಿಸಬೇಕೆಂಬುದು ನನ್ನ ಅನಿಸಿಕೆ.
- ಸುಮುಖ, ಮೈಸೂರು

ಇದೇನು ಮೂಲಭೂತ ಸಮಸ್ಯೆಯೇ ?
ಸರ್ಕಾರದ ನಡೆಯನ್ನು ಗಮನಿಸಿದರೆ ಜನಸಾಮಾನ್ಯರಲ್ಲಿ ಇದರ ಬಗ್ಗೆ ಅನುಮಾನಗಳು ಬರುವುದು ಸಹಜ.  ಮೂಢ ನಂಬಿಕೆ ಪ್ರತಿಬಂಧಕ ಕಾಯ್ದೆಯ ನೆಪದಲ್ಲಿ ಸರ್ಕಾರ ಹಿಂದೂಗಳ ಆಚರಣೆ ಹಾಗು ನಂಬಿಕೆಗಳ ಮೇಲೆ ಗದಾ ಪ್ರಹಾರ ಮಾಡಲು ಹೊರಟಿರುವಂತಿದೆ.  ಸರ್ಕಾರ ಕೇವಲ ಭಾನಾಮತಿ, ವಶೀಕರಣ, ಬೆತ್ತಲೆ ಪೂಜೆ, ನರಮೇಧ, ವಾಮಾಚಾರ ನಿಷೇಧಕ್ಕೆ ಮಾತ್ರ ಕಾನೂನು ತರಲಿಚ್ಛಿಸಿದ್ದರೆ ಯಾರ ತಕರಾರೂ ಇಲ್ಲ. ಆದನ್ನು ಬಿಟ್ಟು ವಿಚಾರವಾದಿಗಳ ಸಲಹೆಯಂತೆ, ಸರ್ಕಾರಿ ಕಟ್ಟಡಗಳನ್ನು ಕಟ್ಟುವಾಗ ಗುದ್ದಲಿ ಪೂಜೆ ಮಾಡಬಾರದು, ಜ್ಯೋತಿಷ್ಯ ಶಾಸ್ತ್ರ, ಸಂಖ್ಯಾ ಶಾಸ್ತ್ರ, ವಾಸ್ತು ಶಾಸ್ತ್ರ , ಜಪಮಾಲೆ ರುದ್ರಾಕ್ಷಿ ಬಳಕೆ ಮಾಡಬಾರದೆಂಬ ಇಂತಹ ಅನೇಕ ಶಿಫಾರಸ್ಸುಗಳನ್ನು ಒಪ್ಪಲು ಸಾಧ್ಯವಿಲ್ಲ.  ಸರ್ಕಾರ ಮೊದಲು ಮೂಲಭೂತ ಸಮಸ್ಯೆಗಳಾದ ನೀರು, ಆಹಾರ, ರಸ್ತೆ, ಶಿಕ್ಷಣ, ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸಲಿ.
- ಹರ್ಷ ಪಾಗಾ, ಗುಲ್ಬರ್ಗ

ನಂಬಿಕೆ ವ್ಯಕ್ತಿಗತ
ಮಾನ್ಯ ಮುಖ್ಯಮಂತ್ರಿಗಳೆ ಏನಾಗಿದೆ ನಿಮಗೆ? ಅಧಿಕಾರ ಇರುವುದು ಜನರ ಹಿತ ಕಾಪಾಡಲಿಕ್ಕೆ ಹೊರತು ಅವರ ನಂಬಿಕೆಗಳಿಗೆ ಕೊಡಲಿಪೆಟ್ಟು ಹಾಕುವುದಕ್ಕಲ್ಲ. ಕುಡಿತದ ಚಟ ಬಿಡಿ ಆರೋಗ್ಯಕ್ಕೆ ಹಾನಿಕರ ಅಂತ ಜಾಹೀರಾತನ್ನು ಸರ್ಕಾರ ಪ್ರಸಾರಿಸುತ್ತದೆಯೆ ಹೊರತು ಸಾರಾಯಿ ಮಾರುವ ಅಂಗಡಿಗಳಿಗೇಕೆ ಬೀಗ ಹಾಕುವುದಿಲ್ಲ? ಕುಡಿಯುವುದು ಅಥವಾ ಬಿಡುವುದು ವ್ಯಕ್ತಿಗತ ಅಂತಾಯಿತಲ್ಲವೆ? ಹಾಗೆಯೇ ನಂಬಿಕೆಗಳೂ ಸಹಿತ ವ್ಯಕ್ತಿಗತವೇ. ಅದಕ್ಕೆ ಪೆಟ್ಟು ಹಾಕುವ ಕಾನೂನೇಕೆ?  ಧರ್ಮ, ಪೂಜೆ, ಆಚಾರ, ನಂಬಿಕೆಗಳಿಗೂ ನಮ್ಮ ಜೀವನ ಶೈಲಿಗೂ ಬಹಳ ಹತ್ತಿರದ ಸಂಬಂಧವಿದೆ. ಈ ಕಾನೂನಿನ ಪರಿಣಾಮ ಭವಿಷ್ಯದ ಪೀಳಿಗೆಗಳ ಮೇಲೆ ಕರಿನೆರಳಾಗದಿರಲಿ. ನಮ್ಮತನ, ತನ್ನತನವಿಲ್ಲದ ಬರಡು ಸಮಾಜ ಏನನ್ನು ತಾನೆ ಸಾಧಿಸಲು ಸಾಧ್ಯ? ವಿಚಾರವಂತರೆನ್ನಿಸಿಕೊಂಡವರು ತಮ್ಮ ಆಲೋಚನೆಗಳನ್ನು ತಮ್ಮ ಮನೆಗಳಲ್ಲಿ ಪ್ರಯೋಗಿಸಿದರೆ ಸಾಕು ಸಮಾಜದ ಮೇಲೆ ದಯವಿಟ್ಟು ಹೇರಬೇಡಿ.  ಅಂದಹಾಗೆ ಇದು ಸಮಾಜದ ಗಮನವನ್ನು ಮೋದಿ ಮಂತ್ರದಿಂದ ಬೇರೆಡೆ ಸೆಳೆಯುವ ನೀಚ ರಾಜಕೀಯವಿರಬಹುದೇ?
- ಲಕ್ಷ್ಮೀ ಹೆಗಡೆ

ಆಚರಣೆಯ ಪ್ರತಿಬಂಧ ಮೂರ್ಖತನ
ರಾಜ್ಯ ಸರ್ಕಾರವು ಜಾರಿಗೊಳಿಸಲು ಇಚ್ಛಿಸಿರುವ ಮೂಡನಂಬಿಕೆ ಪ್ರತಿಬಂಧಕ ವಿಧೇಯಕ ಜಾರಿಗೆ ತರುವುದು ಉತ್ತಮವೇ ಸರಿ. ಆದರೆ ಮೂಢನಂಬಿಕೆ ಪ್ರತಿಬಂಧಿಸುವ ನೆಪದಲ್ಲಿ ಹಿಂದೂ ಧರ್ಮದ ಆಚರಣೆಗಳನ್ನು ನಿಷೇಧಿಸುವುದು ಮೂರ್ಖತನ. ಈ ಕಾಯ್ದೆಯು ಸಮಾಜಕ್ಕೆ ಮಾರಕವಾಗುವಂತಹ ಮೂಢ ಆಚರಣೆಗಳನ್ನು ಪ್ರತಿಬಂಧಿಸಬೇಕೆ ಹೊರತು ಹಿಂದೂ ಧರ್ಮದ ನಂಬಿಕೆ ಆಚರಣೆಗಳನ್ನಲ್ಲ. ಆಚರಣೆಗಳು ವ್ಯಕ್ತಿಗತವಾಗಿದ್ದು ಇತರರಿಗೆ ಯಾವುದೇ ತೊಂದರೆ ಉಂಟು ಮಾಡದಿದ್ದಲ್ಲಿ ಅವುಗಳನ್ನು ನಿಷೇಧಿಸುವುದು ವ್ಯಕ್ತಿ ಸ್ವಾತಂತ್ರದ ಹರಣವಾಗುತ್ತದೆ. ಆದ್ದರಿಂದ ಸರ್ಕಾರವು ವಿಧೇಯಕ ಜಾರಿಗೆ ಮುನ್ನ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಿ ಕ್ರಮ ಕೈಗೊಳ್ಳುವುದು ಉತ್ತಮವೆನಿಸುತ್ತದೆ.
- ರಘು ಎನ್., ಚಿಕ್ಕಮಗಳೂರು

ಉತ್ತಮ ಕ್ರಮ
ಮೂಢನಂಬಿಕೆಗಳು ಸುಳ್ಳು ಎಂದು ಹೇಳಿದರೆ ಮೂಢರು ಈ ಮಾತೇ ಮೂಢನಂಬಿಕೆ ಎಂದು ಹೇಳುವರು. ಯುವ ನಾಗರಿಕರೇ ನಮ್ಮ ದೇಶದ ಆಸ್ತಿ. ತಾವು ದುಡಿದು ದೇಶವನ್ನು ಅಭಿವೃದ್ಧಿಗೊಳಿಸುವ ಬದಲು ಉನ್ನತಿಗೆ ಇಂದು ಮಾರಕವಾಗಿದ್ದಾರೆ. ಮೂಢನಂಬಿಕೆಗಳಿಗೆ ಒಳಗಾಗಿ ದುಡಿಯುವ ದಿನಗಳನ್ನು ದೇವರನ್ನು ಒಲಿಸುವದರಲ್ಲೇ ಕಳೆಯುತ್ತಾರೆ. ದುಡಿಮೆಯಲ್ಲೇ ದೇವರನ್ನು ಹುಡುಕುವುದನ್ನು ಮರೆತಿದ್ದಾರೆ. ಇನ್ನು ನಮ್ಮಂತೆಯೇ ಜೀವ ಹೊಂದಿರುವ ಅನೇಕ ಪ್ರಾಣಿಗಳನ್ನು ಯಾರದ್ದೋ ಹೆಸರಿನಲ್ಲಿ ಬಲಿ ಕೊಡುತ್ತಿದ್ದಾರೆ. ಸರ್ಕಾರವು ಅತ್ಯುತ್ತಮವಾದ ಕ್ರಮ ಕೈಗೊಂಡಿದೆ.
-ಸುಷ್ಮಾ ಬಿರಾದಾರ, ವಿಜಾಪುರ

ಸಂಘರ್ಷಕ್ಕೆ ದಾರಿ
ಕರ್ನಾಟಕ ಸರ್ಕಾರ ಮೂಢ ನಂಬಿಕೆಗಳನ್ನು ನಿಷೇಧಿಸುವ ಬಗ್ಗೆ ಕಾನೂನು ಒಂದನ್ನು ಜಾರಿಗೆ ತರಲು ನಿರ್ಧರಿಸಿದೆ. ವಿಧೇಯಕ ರಚನೆ ಮಾಡಿದ ಸಮಿತಿ ಶಿಫಾರಸು ಮಾಡಿದ ವಿಷಯಗಳನ್ನು ನೋಡಿದರೆ ಇದು ಬಹುಸಂಖ್ಯಾತ ಹಿಂದೂಗಳನ್ನು ಗುರಿಯಾಗಿರಿಸಿಕೊಂಡು ಅನುಷ್ಠಾನಕ್ಕೆ ತರುವಂತಿದೆ. ತೀರಾ ಖಾಸಗಿಯಾಗಿ ನಂಬುವಂಥ ಆಚರಣೆಗಳ ಮೇಲೂ ಅಂಕುಶ ಹಾಕುವಂಥ ವಿಚಾರಗಳನ್ನು ಕರಡು ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ. ನನ್ನ ಪ್ರಕಾರ ರಾಜ್ಯ ಸರ್ಕಾರದ ಕೈಸೇರಿರುವ ವಿಧೇಯಕಕ್ಕೂ ಕೇಂದ್ರ ಸರ್ಕಾರ ಅಲ್ಪಸಂಖ್ಯಾತರಿಗಾಗಿ ಜಾರಿಗೊಳಿಸಲು ಉದ್ದೇಶಿಸಿರುವ ಸಾಚಾರ್ ಸಮಿತಿ ವರದಿ ಮತ್ತು ಕೋಮುಸಂಘರ್ಷ ಮಸೂದೆಗೂ ಯಾವುದೇ ವ್ಯತ್ಯಾಸವಿಲ್ಲ. ಇದೊಂದು ರೀತಿ ಜೇನುಗೂಡಿಗೆ ಕಲ್ಲೆಸೆದು ಕಚ್ಚಿಸಿಕೊಳ್ಳುವ ಕೆಲಸದಂತೆ ನನಗೆ ಕಾಣುತ್ತದೆ. ಸಾರ್ವಜನಿಕವಾಗಿ ಹಿಂಸೆಯಾಗುವಂಥ ಮಾಟ-ಮಂತ್ರ , ವಾಮಾಚಾರ, ಭಾನಾಮತಿ, ಪ್ರಾಣಿಗಳಿಗೆ ಹಿಂಸೆಯಾಗುವಂಥ ಕೆಲವು ಆಚರಣೆಗಳು ಇಂಥವುಗಳನ್ನು ಕಡ್ಡಾಯವಾಗಿ ನಿಷೇಧಿಸುವ ಯತ್ನವನ್ನು ರಾಜ್ಯ ಸರ್ಕಾರ ಮಾಡಲಿ. ಅದರ ಬದಲು ವಿಧೇಯಕದಲ್ಲಿ ಉಲ್ಲೇಖಿತವಾದಂತೆ ದೇವಸ್ಥಾನಗಳಿಗೆ ಹೋಗುವುದು ಮೂಢನಂಬಿಕೆ ಎಂದಾದಲ್ಲಿ ಅವುಗಳನ್ನೆಲ್ಲ ಮುಚ್ಚಬೇಕಷ್ಟೆ.  ಮಂಗಳಯಾನಕ್ಕೆ ಮುನ್ನ ಇಸ್ರೋ ಅಧ್ಯಕ್ಷ ಡಾ.ಕೆ.ರಾಧಾಕೃಷ್ಣನ್ ತಿರುಪತಿಗೆ ತೆರಳಿ ಉದ್ದೇಶಿತ ಕಾರ್ಯ ಯಶಸ್ವಿಯಾಗಲಿ ಎಂದು ಬೇಡಿಕೊಂಡಿದ್ದರು. ಇದನ್ನು 'ಮೂಢನಂಬಿಕೆ' ಎಂದು ಬ್ರಾಂಡ್ ಮಾಡಬಹುದೇ? ಇನ್ನು ಸಮಿತಿಯಲ್ಲಿ ಸದಸ್ಯರಾಗಿರುವವರಂತೂ ಶುದ್ಧ ನಾಸ್ತಿಕವಾದವನ್ನೇ ಬಲವಾಗಿ ಪ್ರತಿಪಾದನೆ ಮಾಡುವವರು. (ನಾವೇ ಬುದ್ಧಿವಂತರು. ಎಲ್ಲವೂ ನಮಗೇ ಗೊತ್ತಿರುವುದು ಎಂದು ಪ್ರತಿಪಾದಿಸುವ ವರ್ಗ). ಮಾನ್ಯ ಮುಖ್ಯಮಂತ್ರಿಗಳು ಈ ವಿಚಾರವನ್ನು ಸಮಗ್ರವಾಗಿ ಪರಿಶೀಲಿಸಬೇಕು. ಸಾರ್ವಜನಿಕ ಅಭಿಪ್ರಾಯಗಳನ್ನು ತಿಳಿದುಕೊಂಡು ಈ ಬಗ್ಗೆ ಮುಂದಡಿ ಇಡಬೇಕು. ಯಾವುದಾದರೊಂದು ನಂಬಿಕೆಯಿಂದ ಸಾರ್ವಜನಿಕ ಹಿತಾಸಕ್ತಿಗೆ ನಿಜಕ್ಕೂ ತೊಂದರೆ ಆಗುತ್ತಿದ್ದರೆ ಅದನ್ನು ನಿಯಂತ್ರಿಸುವ ಅಥವಾ ನಿಷೇಧ ಹೇರುವುದಕ್ಕೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿ. ಇಲ್ಲದಿದ್ದರೆ ಸಿದ್ದರಾಮಯ್ಯನವರು ಕೋಲು ಕೊಟ್ಟು ಪೆಟ್ಟುತಿಂದಂತೆ ಆದೀತು.
- ಮಿತ್ತಾಳ ನಾರಾಯಣ ಭಟ್,  ಬೆಂಗಳೂರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement