ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಮಗಳ ಮದುವೆ ಮಾಡಲು ಓಡಾಡುವಂತಿದೆ...

2008 ಅಕ್ಟೋಬರ್. ಅಂದಿನ ಮುಖ್ಯಮಂತ್ರಿಗಳು ಹಿಂದುಳಿದ ಪ್ರದೇಶವೆಂದು ಗುರುತಿಸಲ್ಪಟ್ಟ ಗುಲ್ಬರ್ಗಾದಲ್ಲಿ ಸಚಿವ ಸಂಪುಟ ಸಭೆಯನ್ನು ನಡೆಸಬೇಕೆಂದು ಧಿಡೀರನೆ ...

Rashmi Kasaragodu
Updated On : 11 Nov 2013, 11:32 am

2008 ಅಕ್ಟೋಬರ್. ಅಂದಿನ ಮುಖ್ಯಮಂತ್ರಿಗಳು ಹಿಂದುಳಿದ ಪ್ರದೇಶವೆಂದು ಗುರುತಿಸಲ್ಪಟ್ಟ ಗುಲ್ಬರ್ಗಾದಲ್ಲಿ ಸಚಿವ ಸಂಪುಟ ಸಭೆಯನ್ನು ನಡೆಸಬೇಕೆಂದು ಧಿಡೀರನೆ ತೀರ್ಮಾನಿಸಿದರು. ಆದರೆ ಗುಲ್ಬರ್ಗಾ ವಿಭಾಗದಲ್ಲಿ ಯಾರೂ ಹಿರಿಯ ಅಧಿಕಾರಿಗಳು ಇರಲಿಲ್ಲ. ಆಗಿನ ಜಿಲ್ಲಾಧಿಕಾರಿಗಳಿಗೆ ಐ.ಎ.ಎಸ್. ಬಡ್ತಿ ಸಿಕ್ಕಿದ್ದರಿಂದ ಅವರು ಒಂದು ತಿಂಗಳ ಕಡ್ಡಾಯ ತರಬೇತಿಗೆಂದು ಮಸ್ಸೂರಿಗೆ ಹೋಗಬೇಕಾಗಿತ್ತು. ಸಹಾಯಕ ಆಯುಕ್ತರಾಗಿದ್ದ ಯುವ ಅಧಿಕಾರಿಯಾದ ಜಗದೀಶ್ ಎಂಬುವರು ಪ್ರಭಾರ ಜಿಲ್ಲಾಧಿಕಾರಿಯಾಗಿದ್ದರು. ಬೃಹತ್ ಸಿದ್ಧತೆಯ ಪ್ರಶ್ನೆ ಬಂದಾಗ, ನಾನು ಬೆಳಗಾವಿಯ ಜಿಲ್ಲಾಧಿಕಾರಿಯಾಗಿದ್ದಾಗ 15 ದಿವಸದೊಳಗೆ ಬೆಳಗಾವಿಯ ಅಧಿವೇಶನಕ್ಕಾಗಿ ತಯಾರಿ  ನಡೆಸಿದ್ದರಿಂದ, ಗುಲ್ಬರ್ಗಾದ ಜವಾಬ್ದಾರಿಯನ್ನು ನನಗೆ ವಹಿಸಲು ನಿರ್ಧರಿಸಲಾಯಿತ್ತು. ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿಗಳು ನನಗೆ ಎರಡು ದಿವಸದೊಳಗೆ ಪ್ರಾದೇಶಿಕ ಆಯುಕ್ತರಾಗಿ ಗುಲ್ಬರ್ಗಾದಲ್ಲಿ ಅಧಿಕಾರ ಸ್ವೀಕರಿಸುವಂತೆ ಸೂಚಿಸಿದರು. ಏಕೆಂದರೆ, ಒಂದು ವಾರದ ನಂತರ ಸಚಿವ ಸಂಪುಟ ಸಭೆಯ ದಿನಾಂಕವನ್ನು ನಿಗದಿಪಡಿಸಲಾಗಿತ್ತು.  
ಎರಡು ದಶಕಗಳು ಕಾರ್ಯಕ್ಷೇತ್ರದಲ್ಲಿ ಕೆಲಸ ಮಾಡಿ ಈಗ ಕಾರ್ಯದರ್ಶಿ ಹಂತಕ್ಕೆ ಬಂದಿದ್ದೇನೆ, ಇನ್ನು ಬೆಂಗಳೂರಿನಿಂದ ವರ್ಗಾವಣೆಗಳು ಇರುವುದಿಲ್ಲ ಎಂದು ಭಾವಿಸಿದ್ದೆ. ಒಂದು ಎರಡು ವರ್ಷಕ್ಕೊಂದು ಬಾರಿಯಂತೆ ಇಪ್ಪತ್ತು ವರ್ಷಗಳಲ್ಲಿ ಸುಮಾರು ಹತ್ತು ಊರುಗಳಲ್ಲಿ ಜವಾಬ್ದಾರಿಯನ್ನು ನಿಭಾಯಿಸಿದ್ದೆ. ಒಂದು ಹೊಸ ಹುದ್ದೆಯಲ್ಲಿ ಕೆಲಸ ಮಾಡಲು ಆರಂಭಿಸಿದ ಮೇಲೆ ಆ ಇಲಾಖೆ ಬಗ್ಗೆ ತಿಳಿದುಕೊಳ್ಳಲು, ಕಲಿಯಲು ಸುಮಾರು ಆರು ತಿಂಗಳು ಬೇಕಾಗುತ್ತದೆ. ಅಲ್ಲೆಲ್ಲ ಕಲಿತು ಇನ್ನೇನು ಆ ಕ್ಷೇತ್ರದಲ್ಲಿ ನಿರಾತಂಕವಾಗಿ ಕೆಲಸ ಮಾಡಲು ಪ್ರಾರಂಭ ಮಾಡಿದಾಗಲೇ ಹೊಸ ಹುದ್ದೆಗೆ ವರ್ಗಾವಣೆ ಆಗುತ್ತದೆ. ಆದರೆ ಪ್ರತಿಯೊಂದು ಹುದ್ದೆ ತನ್ನದೇ ಆದಂಥ ಸವಾಲುಗಳು ಮತ್ತು ಅವಕಾಶಗಳನ್ನು ನೀಡುತ್ತದೆ. ಇದೇ ಐ.ಎ.ಎಸ್. ಅಧಿಕಾರದಲ್ಲಿರುವ ವಿಶೇಷತೆ. ಬೇರೆ ಸೇವೆಗಳಲ್ಲಿ ಒಂದೇ ಕೆಲಸವನ್ನು ಮಾಡುತ್ತಾ ಬೇಸರ ಮತ್ತು ವೈವಿಧ್ಯತೆಯಿಲ್ಲದೆ ಏಕತಾನತೆ ಬಂದು ಬಿಡುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಎಲ್ಲಾದರೇನು, ಯಾವ ಕೆಲಸವಾದರೆ ಏನು, ಸರ್ಕಾರದ ಕೆಲಸ ದೇವರ ಕೆಲಸ ಎಂದುಕೊಂಡು ಎಲ್ಲಾ ವರ್ಗಾವಣೆಗಳನ್ನೂ ಆದರದಿಂದಲೇ ಸ್ವೀಕರಿಸುವುದು ರೂಢಿಯಾಗಿತ್ತು. ಆದ್ದರಿಂದ ಯಾವಾಗಲೂ ಮಾಡುವ ಹಾಗೆ ನಮ್ಮ ಸಾಮಾನುಗಳನ್ನು ಗಂಟು ಕಟ್ಟಿ ರೈಲಿನಲ್ಲಿ ಟಿಕೆಟ್ಟನ್ನು ಕಾದಿರಿಸಿದೆ. ಮಗಳನ್ನು ಹೊಸದಾಗಿ "ನ್ಯೂ ಪಬ್ಲಿಕ್‌" ಶಾಲೆಗೆ ಸೇರಿಸಿದ್ದೆ. ಈಗ ಅವಳು ಇನ್ನೊಂದು ಶಾಲೆಯಲ್ಲಿ ಹೊಂದಿಕೊಳ್ಳಬೇಕಲ್ಲಾ ಎಂದು ಯೋಚಿಸಿದಾಗ, ನಾನೂ ಸಹ ಪ್ರತಿ ವರ್ಷ ಹೊಸ ನಗರದಲ್ಲಿ ಹೊಸ ಶಾಲೆಗೆ ಹೋಗುತ್ತಿದ್ದುದನ್ನು ನೆನೆಪಿಸಿಕೊಂಡೆ. ಏಕೆಂದರೆ ನನ್ನ ತಂದೆಗೂ ಸಹ ಹರ್ಯಾಣ ಸರ್ಕಾರದಲ್ಲಿ ಪ್ರತಿ ವರ್ಷ ವರ್ಗಾವಣೆ ಆಗುತ್ತಿತ್ತು. ಈ ಕಾರಣದಿಂದಲೇ ನನ್ನಲ್ಲಿ 'ಎಲ್ಲಿ ಬೇಕಾದರೂ ಹೊಂದಿಕೊಳ್ಳಬಲ್ಲೆ' ಎನ್ನುವ ಅಭ್ಯಾಸ, ಭರವಸೆ ಬೆಳೆದದ್ದು.
ನಾನು ಜಗದೀಶ್ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿ ನನ್ನ ಪ್ರಯಾಣದ ಯೋಜನೆಯನ್ನು ತಿಳಿಸಿದೆ. ಅಲ್ಲಿ ಮನೆ ಇದೆಯೇ ಎಂದು ಕೇಳಿದಾಗ, ಅವರು ಹೇಳಿದರು, "ಇಲ್ಲ ಮೇಡಂ, ಸುಮಾರು ವರ್ಷಗಳಿಂದ ಇಲ್ಲಿ ಯಾರೂ ಪ್ರಾದೇಶಿಕ ಆಯುಕ್ತರಾಗಿ ನೇಮಕವಾಗಿಲ್ಲ. ಹಾಗಾಗಿ ಅವರ ಬಂಗಲೆಯನ್ನು ಅತಿಥಿ ಗೃಹವಾಗಿ ಬದಲಾಯಿಸಲಾಗಿದೆ." "ಹಾಗಾದರೆ ನಾನೆಲ್ಲಿ ಉಳಿದುಕೊಳ್ಳುವುದು?" ಎಂದು ಪ್ರಶ್ನಿಸಿದಾಗ ಅವರು ಜಿಲ್ಲಾಧಿಕಾರಿಗಳ ಅನುಮತಿಯನ್ನು ಪಡೆದು ಅವರ ಮನೆಯಲ್ಲಿ ಕೆಲವು ದಿನಗಳು ಇರಬಹುದು ಎಂದು ತಿಳಿಸಿದರು.
ಗುಲ್ಬರ್ಗಾ ವಿಭಾಗದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಎಷ್ಟಿದೆ ಎನ್ನುವುದು ಅರಿವಾಯಿತು. ಆದರೆ ಐತಿಹಾಸಿಕ ಸಚಿವ ಸಂಪುಟ ಸಭೆಯ ಸದವಕಾಶವನ್ನು ಬಳಸಿಕೊಂಡು 6 ಜಿಲ್ಲೆಗಳ ಎಲ್ಲಾ ಕೊರತೆಗಳನ್ನು ಸರ್ಕಾರದ ಮುಂದೆ ಇಟ್ಟು ಸ್ಥಳೀಯರಿಗಾಗಿ ಹೆಚ್ಚಿನ ಸಹಾಯ ಏಕೆ ಪಡೆಯಬಾರದು ಎಂದು ಯೋಚಿಸಿ ಎಲ್ಲಾ ಇಲಾಖೆಗಳ ಅಧಿಕಾರಿಗಳನ್ನು ಕರೆಸಿ ಅವರಿಂದ ಬೇಡಿಕೆ ಪಟ್ಟಿಯನ್ನು ಪಡೆದೆ. ಎಲ್ಲಕ್ಕಿಂತ ಅಲ್ಲಿ ಅಧಿಕಾರಿಗಳ ಕೊರತೆ ಹೆಚ್ಚಾಗಿತ್ತು. ಒಬ್ಬೊಬ್ಬರೂ ಎರಡು  ಮೂರು ಜವಾಬ್ದಾರಿಗಳನ್ನು ವಹಿಸಿಕೊಂಡಿದ್ದರು. ಸರ್ಕಾರದಿಂದ ಅನುದಾನ ಬಂದರೂ ಸಹ ಅದನ್ನು ಸರಿಯಾಗಿ ಖರ್ಚು ಮಾಡಲು ಸಿಬ್ಬಂದಿ ಇರಲಿಲ್ಲ. ಆದರೆ ಆಗ ಸ್ಥಳೀಯ ಸಂಘ ಸಂಸ್ಥೆಗಳು ತುಂಬಾ ಸಕ್ರಿಯವಾಗಿದ್ದವು. ವಿಶೇಷವಾಗಿ ಗುಲ್ಬರ್ಗಾದ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯವರು ಒಳ್ಳೆಯ ನಿವೇದನಾ ಪತ್ರವನ್ನು ತಯಾರು ಮಾಡಿ ಕೊಟ್ಟರು. ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿಯು ತಮ್ಮ ಬೇಡಿಕೆಗಳನ್ನು ಕೊಟ್ಟಿತು. ತಕ್ಷಣ ಎಲ್ಲಾ ಬೇಡಿಕೆಗಳನ್ನೂ ಮುಖ್ಯ ಕಾರ್ಯದರ್ಶಿಗಳಿಗೆ ಹಾಗೂ ಸಂಬಂಧ ಪಟ್ಟ ಇಲಾಖೆಯ ಕಾರ್ಯದರ್ಶಿಗಳಿಗೆ ಫ್ಯಾಕ್ಸ್ ಮಾಡಿ, ಅವರುಗಳೊಂದಿಗೆ ಮಾತನಾಡಿದೆ.
ಊರಿನ ಒಂದು ಪ್ರದಕ್ಷಿಣೆ ಮಾಡಿ ನೋಡಿದಾಗ ರಸ್ತೆಗಳು ತುಂಬಾ ಹಾಳಾಗಿದ್ದುದು ಕಂಡು ಬಂತು. ನಗರದ ಮಧ್ಯೆ ಒಂದು ಕೆರೆ ಇತ್ತು. ಅದರ ಸುತ್ತ ಮುತ್ತ ತುಂಬಾ ಹುಲ್ಲು ಮತ್ತಿತರ ಗಿಡಗಂಟೆಗಳು ಬೆಳೆದು ಅಸಹ್ಯವಾಗಿ ಕಾಣಿಸುತ್ತಿತ್ತು. ಆಗ ಸಹಾಯಕ ಆಯುಕ್ತರಿಗೆ ಹೇಳಿ ಸುಮಾರು ನೂರು ಜನ ಕೂಲಿ ಕಾರ್ಮಿಕರನ್ನು ಅಕ್ಕ ಪಕ್ಕದ ಹಳ್ಳಿಗಳಿಂದ ಕರೆಸಿ ಎರಡು ದಿವಸದಲ್ಲಿ ಆ ಭಾಗವನ್ನು ಸ್ವಚ್ಛ ಹಾಗೂ ಸುಂದರಗೊಳಿಸಲಾಯಿತು. ಜಗದೀಶ್‌ರವರು ನನಗೆ ತುಂಬಾ ಸಹಕರಿಸಿದರು.
ಮೂವತ್ತು ಜನ ಮಂತ್ರಿಗಳು, ಅವರೊಂದಿಗೆ ಅವರ ಹಿರಿಯ, ಕಿರಿಯ ಅಧಿಕಾರಿಗಳು ಸೇರಿ ಎಲ್ಲರೂ ಉಳಿದುಕೊಳ್ಳಲು ಸುಮಾರು ನೂರು ಕೋಣೆಗಳ ಅವಶ್ಯಕತೆ ಇತ್ತು. ಅತಿಥಿ ಗೃಹವನ್ನು ವೀಕ್ಷಿಸಲು ಹೋದರೆ ನಾಲ್ಕು ಗಣ್ಯ ವ್ಯಕ್ತಿಗಳ ಕೊಠಡಿಗಳನ್ನು ಬಿಟ್ಟರೆ ಸರಿಯಾದ ಸೌಕರ್ಯಗಳು ಇರಲಿಲ್ಲ. ಹೋಟೆಲ್ ಮಾಲೀಕರ ಸಂಘದ ಸದಸ್ಯರನ್ನು ಕರೆದು ಆದಷ್ಟೂ ಉತ್ತಮ ಕೊಠಡಿಗಳನ್ನು ಹುಡುಕಲು ಸೂಚಿಸಿದೆ. ಸ್ವತಃ ಹೋಗಿ ಪರೀಕ್ಷಿಸಿದೆ. ಸರ್ಕಾರಿ ಅತಿಥಿ ಗೃಹವನ್ನು ಸುಧಾರಿಸಲು, ಸುಣ್ಣ ಬಣ್ಣ ಹಾಗೂ ಕುರ್ಚಿ, ಸೋಫಾ ಇತ್ಯಾದಿ ಪರಿಕರಗಳನ್ನು ಖರೀದಿಸಲು ಹಾಗೂ ನಗರದ ಮುಖ್ಯ ರಸ್ತೆಗಳನ್ನು ತಕ್ಷಣ ಸರಿಪಡಿಸಲು ಸ್ವಲ್ಪ ಹಣವನ್ನು ಕೇಳಿದಾಗ, ತಕ್ಷಣವೇ ಆದೇಶ ದೊರಕಿತು. ಇಂಜಿನಿಯರುಗಳನ್ನು ಕರೆದು ಕೆಲಸಕ್ಕೆ ಹಚ್ಚಿದೆ. ಕಾರ್ಪೊರೇಷನ್ನಿನ ಆಯುಕ್ತರನ್ನು ಕರೆಸಿ ನಗರದ ಸ್ವಚ್ಛತೆಯನ್ನು ಸುಧಾರಿಸಲು ಸೂಚಿಸಿದೆ. ನಗರದಲ್ಲಿ ದೀಪಗಳ ಅಲಂಕಾರದಿಂದ ಸಂಪುಟ ಸದಸ್ಯರ ಸ್ವಾಗತಕ್ಕೆ ಎಲ್ಲಾ ಸಂಘ ಸಂಸ್ಥೆಗಳ ಸಹಕಾರವನ್ನು ಕೋರಿದೆ. ಮಿನಿ ವಿಧಾನ ಸೌಧದಲ್ಲಿ ಪ್ರಾದೇಶಿಕ ಆಯುಕ್ತರ ಕಚೇರಿಯನ್ನು ಮುಖ್ಯಮಂತ್ರಿಗಳ ಕಚೇರಿಯಾಗಿ ಪರಿವರ್ತಿಸಲಾಯಿತು. ಸಭಾಂಗಣವನ್ನು ಸಚಿವ ಸಂಪುಟ ಸಭೆಗಾಗಿ ಸಜ್ಜುಗೊಳಿಸಲಾಯಿತು. ಒಳ ವಿನ್ಯಾಸಕಾರರಾದ ನಳಿನಿ ಮಹಗಾವಂಕರ್‌ರವರು ಕಚೇರಿಗೆ ಒಂದು ಹೊಸ ರೂಪವನ್ನು ಕೊಟ್ಟರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯದಿಂದ ಅತಿಥಿಗಳ ಸ್ವಾಗತಕ್ಕೆ ಜಾನಪದ ಕಲಾವಿದರನ್ನು ಆಹ್ವಾನಿಸಲಾಯಿತು. ಒಟ್ಟು ಎಲ್ಲರೂ ಸೇರಿ ಊರಿನಲ್ಲಿ ಒಂದು ಉತ್ಸವದ ವಾತಾವರಣವನ್ನು ನಿರ್ಮಾಣ ಮಾಡಿದೆವು.
ಬೆಳಗ್ಗೆ ಐದು ಗಂಟೆಗೆ ರೈಲಿನಲ್ಲಿ ಮುಖ್ಯಮಂತ್ರಿಗಳೂ ಸೇರಿದಂತೆ ಎಲ್ಲಾ ಅತಿಥಿಗಳೂ ಆಗಮಿಸಿದರು. ರೈಲು ನಿಲ್ದಾಣದಿಂದ ಇವಾನ್-ಎ-ಶಾಹಿ ಅತಿಥಿ ಗೃಹದವರೆಗೆ ಮೆರವಣಿಗೆಯ ಮೂಲಕ ಅತಿಥಿಗಳ ಸ್ವಾಗತ ಮಾಡಲಾಯಿತು. ಬೆಳಗ್ಗೆ ಒಂಭತ್ತು ಗಂಟೆಯಿಂದ ಪ್ರಾರಂಭವಾಗಿ ಮಧ್ಯಾಹ್ನದವರೆಗೂ ಸಭೆ ನಡೆಯಿತು. ಗುಲ್ಬರ್ಗಾ ವಿಭಾಗದ ವ್ಯಾಪಕ ಅಭಿವೃದ್ಧಿಗಾಗಿ ಸುಮಾರು ಯೋಜನೆಗಳಿಗೆ ಆ ದಿವಸ ಅನುಮೋದನೆ ನೀಡಲಾಯಿತು. ಮುಂಬರುವ ದಿನಗಳಲ್ಲಿ ಖಂಡಿತವಾಗಿ ಈ ಭಾಗ ಹಿಂದುಳಿಯುವುದಿಲ್ಲ ಎಂದು ಭಾವಿಸಿದೆ.
ಊಟದ ವ್ಯವಸ್ಥೆಯನ್ನು ಅತಿಥಿ ಗೃಹವಾದ ಇವಾನ್-ಎ-ಶಾಹಿಯಲ್ಲಿ ಮಾಡಲಾಯಿತು. ಜೋಳದ ರೊಟ್ಟಿ, ಬದನೆ ಸಾರು, ಶೇಂಗಾ ಹೋಳಿಗೆ, ಗೋದಿ ಪಾಯಸ, ಇತ್ಯಾದಿ, ರುಚಿಯಾದ ಉತ್ತರ ಕರ್ನಾಟಕದ ಖಾದ್ಯಗಳನ್ನು ಎಲ್ಲರೂ ತುಂಬಾ ಇಷ್ಟ ಪಟ್ಟರು. ಸಂಜೆ 6.30ರ ರೈಲಿಗೆ ಬಹುತೇಕ ಎಲ್ಲರೂ ಬೆಂಗಳೂರಿಗೆ ವಾಪಸ್ಸು ಹೋದರು. ನನ್ನ ಸಂಭ್ರಮದ ಓಡಾಟವನ್ನು ನೋಡಿ ಮುಖ್ಯಮಂತ್ರಿಗಳು ಹೇಳಿದರು, "ನೀವು ಬೆಳಗಾವಿಯಲ್ಲಿಯೂ, ಇಲ್ಲಿಯೂ, ಮಗಳ ಮದುವೆ ಮಾಡುವ ಹಾಗೆ ಓಡಾಡುತ್ತಿದ್ದೀರಿ, ಅಲ್ಲವೇ?"

(ಮುಂದುವರೆಯುವುದು)

- ಶಾಲಿನಿ ರಜನೀಶ್, ಐಎಎಸ್
anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement