ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ವಿಚಾರವಾದಿಗಳಿಗೆ ಮಾದರಿಯಾಗಲಿ ಎಚ್ಚೆನ್

ಮೂಢನಂಬಿಕೆಯ ಕರಡೇ ಇಷ್ಟು ರಾದ್ಧಾಂತವನ್ನು ಎಬ್ಬಿಸಿದೆ. ಮಸೂದೆಯು ವಿಧಾನಸಭೆಯಲ್ಲಿ ಚರ್ಚೆಗೆ ಬಂದಾಗ ಏರಲಿರುವ ಕಾವನ್ನು ಈಗಲೇ...

Rashmi Kasaragodu
Updated On : 11 Nov 2013, 11:33 am

ಮೂಢನಂಬಿಕೆಯ ಕರಡೇ ಇಷ್ಟು ರಾದ್ಧಾಂತವನ್ನು ಎಬ್ಬಿಸಿದೆ. ಮಸೂದೆಯು ವಿಧಾನಸಭೆಯಲ್ಲಿ ಚರ್ಚೆಗೆ ಬಂದಾಗ ಏರಲಿರುವ ಕಾವನ್ನು ಈಗಲೇ ಊಹಿಸಿಕೊಳ್ಳಬಹುದು. ನಾಲ್ಕುದಿನಗಳಲ್ಲೇ ಸಾಮಾಜಿಕ ತಾಣಗಳಲ್ಲಿ, ಪತ್ರಿಕೆಗಳಲ್ಲಿ ಕಂಡುಬರುತ್ತಿರುವ ಪ್ರತಿಕ್ರಿಯೆಗಳನ್ನಷ್ಟು ಗಮನಿಸಿ. ಹಿಂದೂ ಧರ್ಮೀಯರನ್ನು ಹೊರತುಪಡಿಸಿದರೆ, ಅನ್ಯ ಧರ್ಮಾನುಯಾಯಿಗಳು ಈ ಬಗ್ಗೆ ಚಕಾರವೆತ್ತಿಲ್ಲ. ಶಾದಿ ಭಾಗ್ಯದ ಭಾವೀ ಫಲಾನುಭವಿಗಳಿಗೆ, ಆ ಭಾಗ್ಯ ದೊರೆಯುತ್ತದೋ ಇಲ್ಲವೋ ತಿಳಿಯದಾದರೂ ತಮಗಾಗಲಿರುವ ಲಾಭವನ್ನು ನೆನೆದೇ ಮೌನವಾಗಿದ್ದಾರೆ.
ನಂಬಿಕೆ, ಅಪನಂಬಿಕೆ, ಮೂಢನಂಬಿಕೆ - ಹೀಗೆ ಏನೆಲ್ಲ ಹೆಸರಿಸಿದರೂ, ಅದರ ಪ್ರಕ್ರಿಯೆಗಳು ನಡೆಯುವುದು ವ್ಯಕ್ತಿಗಳ ಮನದಲ್ಲಿ ಮಾತ್ರ. ಅದರ ಅನುಸರಣೆಗೆ ಅಂತಿಮವಾಗಿ ಉತ್ತರದಾಯಿಗಳು ಅವರೇ. ಆದರೆ ಸಾಮಾಜಿಕ ಸ್ವಾಸ್ಥ್ಯ ಕೆಡುವಂಥ ಆಚರಣೆಗಳ ಬಗ್ಗೆ ವಿರೋಧ ನ್ಯಾಯಸಮ್ಮತ. ಇದನ್ನು ಸರ್ಕಾರವೇ ನಿರ್ಣಯಿಸುವಂತಾದಾಗ, ಅದನ್ನು ಪ್ರಶ್ನಿಸುವ ಹಕ್ಕು ಎಲ್ಲರಿಗೂ ಇರುತ್ತದೆ. ತಾನು ಮಾಡಲಿರುವ ವಿಧೇಯಕವನ್ನು ಪ್ರಚುರ ಪಡಿಸಿ, ಜನಾಭಿಪ್ರಾಯ ಸಂಗ್ರಹಿಸಿ, ಅದರಂತೆ ನಡೆಯುವುದು ಸರ್ಕಾರದ ಕರ್ತವ್ಯವಾಗುತ್ತದೆ. ಈ ವಿಧೇಯಕದ ಕರಡನ್ನು ರಚಿಸುವ ಸಮಿತಿಯ ಬಗ್ಗೆ, ಅದರ ಸದಸ್ಯರ ವಿಶ್ವಾಸಾರ್ಹತೆ ಬಗ್ಗೆ ಸರ್ಕಾರವು ಪೂರ್ವಭಾವೀ ಪ್ರಕಟಣೆಗಳನ್ನು ನೀಡಿಲ್ಲ.    ವಿಧೇಯಕದ ಕರಡು ಸಮಿತಿಯ ಸದಸ್ಯರಲ್ಲಿ ಪ್ರಮುಖವಾಗಿ ಕೇಳಿಬರುವ ಹೆಸರುಗಳಿಗೆ ಒಂದೇ ಸರ್ವನಾಮ - ಅದು ಬುದ್ಧಿಜೀವಿಗಳು. ಬರಗೂರು ರಾಮಚಂದ್ರಪ್ಪ, ಜಿ. ಮರುಳಸಿದ್ಧಯ್ಯ, ಸಿದ್ಧಲಿಂಗಯ್ಯ, ನಟರಾಜರ ತಂಡವೂ ಸೇರಿದಂತೆ, ಸಮಿತಿಯಲ್ಲಿ ಇಲ್ಲದ, ಆದರೆ ಅವರ ವಿಚಾರಗಳನ್ನು ಬೆಂಬಲಿಸುವ ದೊಡ್ಡ ಪಡೆಯೇ ಇದೆ. ಅವರೆಲ್ಲರ ದೂರದರ್ಶಿತ್ವ, ವೈಜ್ಞಾನಿಕ ಮನೋಭಾವ, ಮೌಢ್ಯರಹಿತ ಸಮಾಜದ ಪರಿಕಲ್ಪನೆಗಳು ಮೆಚ್ಚುವಂಥವೇ. ಇಂಥದೊಂದು ಪ್ರಜ್ಞೆಯನ್ನು ಮೂಡಿಸಿದ ಡಾ. ಎಚ್ಚೆನ್ ಈ ಸಂದರ್ಭದಲ್ಲಿ ಸ್ಮರಣೀಯರಾಗುತ್ತಾರೆ. ಪ್ರಶ್ನಿಸದೇ ಯಾವುದನ್ನೂ ಒಪ್ಪಬಾರದು ಎನ್ನುವುದರ ಸಿದ್ಧಾಂತವಾಗಿತ್ತು. ಅವರೆಂದೂ ಕ್ರಾಂತಿಕಾರಿ ಭಾಷಣಮಾಡಿ, ಅಪಥ್ಯವಾದುದನ್ನು ಹೇಳಲಿಲ್ಲ. ತರ್ಕಬದ್ಧತೆಯಿಂದ ಚಿಂತಿಸುವುದನ್ನು ಹೇಳಿಕೊಟ್ಟರು. ಪ್ರಶ್ನಿಸದೇ ಒಪ್ಪಬೇಡಿ ಎಂಬ ಅವರ ಮಾತನ್ನು ಮಾತ್ರ ಶಿರಸಾವಹಿಸಿದರೇ ವಿನಾ, ಯಾವುದನ್ನು ಪ್ರಶ್ನಿಸಬೇಕೆಂಬ ವಿವೇಚನೆಯನ್ನು ಮರೆತದ್ದೇ ಈಗಿನ ರಾದ್ಧಾಂತಕ್ಕೆ ಕಾರಣ.
ವಿಧೇಯಕದ ಕರಡಿನಲ್ಲಿ ಸೂಚಿತವಾಗಿರುವ ಅಂಶಗಳಲ್ಲಿ ಯಾವುದೇ ನಿರ್ದಿಷ್ಟ ಧರ್ಮದ ಹೆಸರು ಇಲ್ಲದೇ, ಅದು ಸಾರ್ವತ್ರಿಕವಾಗಿರುವಂತೆ ನೋಡಿಕೊಂಡಿರಬಹುದು. ಅದು ಎಲ್ಲ ಧರ್ಮೀಯರಿಗೂ ಅನ್ವಯಿಸುತ್ತದೆಯೆಂದೂ ಇರಬಹುದು. ಆದರೆ ಬಹುತೇಕ ಆಚರಣೆಗಳು, ಸಂಪ್ರದಾಯಗಳು ಬಹುಸಂಖ್ಯಾತರಿಗೆ ಅನ್ವಯಿಸುವಂತಿರಲು ಕಾರಣ, ವಿಧೇಯಕ ಕರಡು ಸಮಿತಿಯಲ್ಲಿನ ಹೆಚ್ಚು ಸದಸ್ಯರು ಬಹುಸಂಖ್ಯಾತ ವರ್ಗಕ್ಕೆ ಸೇರಿರುವುದು. ತಮ್ಮ ಅನಿಸಿಕೆಗಳನ್ನು ಬಿಚ್ಚಿಡಲು ಇಲ್ಲಿ ಮುಕ್ತತೆಯಿದೆಯೆನ್ನುವುದು ಅವರಿಗೆ ಚೆನ್ನಾಗಿ ತಿಳಿದಿದೆ.
ವಿಧೇಯಕದಲ್ಲಿ ಪ್ರಸ್ತಾಪವಾಗಿರುವ ಎಲ್ಲ ಅಂಶಗಳೂ ಜನಸಾಮಾನ್ಯನ ದೈನಂದಿನ ಜೀವನವನ್ನು ಘಾಸಿಗೊಳಿಸಲಾರವಾದರೂ, ಕಾನೂನಿನ ಮೂಲಕ ಅವುಗಳನ್ನು ತಡೆಗಟ್ಟುತ್ತೇವೆನ್ನುವ ಭ್ರಮೆ ಇವರಿಗೆ ಹೇಗೆ ಉಂಟಾಯಿತು? ಬಾಲ ಕಾರ್ಮಿಕ ನಿಷೇಧ ಕಾನೂನು, ಕನ್ನಡದಲ್ಲೇ ಆಡಳಿತ, ಜೀತಪದ್ಧತಿ,  ಮಲಹೊರುವ ಪದ್ಧತಿ ಮುಂತಾದ ಕಾನೂನುಗಳಿಂದ ಸಮಾಜದಲ್ಲಿ ಸ್ವಲ್ಪವಾದರೂ ಪರಿವರ್ತನೆ ಬಂದಿದೆ, ನಿಜ. ಇವೆಲ್ಲವೂ ಸಾರ್ವಜನಿಕ ಹಿತಾಸಕ್ತಿಗಳನ್ನು ಒಳಗೊಂಡಿವೆ. ಅದೇ ರೀತಿ, ದೇವಾಲಯಗಳಿಗೆ ಹೋಗುವಂತಿಲ್ಲ, ಗುರು-ಹಿರಿಯರಿಗೆ ನಮಸ್ಕರಿಸುವಂತಿಲ್ಲ, ರಾಮಾಯಣ-ಮಹಾಭಾರತಗಳಿಗೂ ನಿಷೇಧ ಹಾಕುತ್ತಾರೆ, ಹೆಂಡತಿಗೆ ಕಟ್ಟಿದ ತಾಳಿಯನ್ನೂ ಕೀಳಲು ಹೇಳುತ್ತಾರೆ ಎಂದು ಕೇಳಿಬರುತ್ತಿರುವ ಅತಿರೇಕದ, ಪ್ರಚೋದನಾತ್ಮಕ ಹೇಳಿಕೆಗಳು ಪ್ರಬುದ್ಧರೆಂದು ಭಾವಿಸಿದ್ದ ರಾಜಕಾರಣಿಗಳಿಂದ ಬರುತ್ತಿರುವುದು ದುರಾದೃಷ್ಟ. ಸಮಿತಿಯ ಸದಸ್ಯರು, ಕರಡನ್ನು ಸಿದ್ಧಪಡಿಸುವುದು ಮಾತ್ರ ತಮ್ಮ ಜವಾಬ್ದಾರಿ, ಮುಂದಿನ ಕೆಲಸ ಸರ್ಕಾರದ್ದು ಎಂದು ಭಾವಿಸಿದ್ದು ಕೂಡ ಸರಿಯಾದ ನಿಲವಲ್ಲ. ಸಾಹಿತ್ಯ ಚರ್ಚೆಗಳಲ್ಲಿ ಭಾಗವಹಿಸುವ, ಸಾಮಾಜಿಕ ಚಳವಳಿಗಳಲ್ಲಿ ಪಾಲ್ಗೊಳ್ಳುವ ಈ ಮಂದಿ, ಸಮಿತಿಯ ಸದಸ್ಯರಾಗಿ ಬೇಡ, ವ್ಯಕ್ತಿಗಳಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದಿತ್ತು.

- ಶಂಕರ ಅಜ್ಜಂಪುರ
ಶಿವಮೊಗ್ಗ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement