ಸಮಾಜದ ನೆಮ್ಮದಿಗೆ ಶಾದಿಭಾಗ್ಯದ ಕೊಳ್ಳಿ
ಕರ್ನಾಟಕದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಘೋಷಿಸಿದ 'ಶಾದಿಭಾಗ್ಯ' ಯೋಜನೆಯು ವಿವಿಧ ಕೋನಗಳಿಂದ ವಿಚಾರ ಮಾಡಬೇಕಾದಂಥದಾಗಿದ್ದು, ಸರಕಾರವು ವಿವೇಚನೆಯಿಂದ ನಿರ್ಧಾರ ತೆಗೆದುಕೊಂಡಿದೆಯೇ ಎಂಬುದು ಪರಿಶೀಲನಾರ್ಹವಾಗಿದೆ. ಬಜೆಟ್ ಮಂಡನೆಯಾದಾಗ ಯಾವ ಪತ್ರಿಕೆಗಳಲ್ಲೂ ಇದಕ್ಕೆ ಸಂಬಂಧಿಸಿದ ವಿಷಯ ಪ್ರಮುಖ ಶೀರ್ಷಿಕೆಯಾಗಿ ಪ್ರಕಟವಾಗಿಲ್ಲ. ಬಜೆಟ್ ಪ್ರತಿಯ ಮುಖ್ಯ ಅಂಶಗಳಲ್ಲಿ ಅಲ್ಪಸಂಖ್ಯಾತ ಹೆಣ್ಣುಮಕ್ಕಳ ಮದುವೆಗೆ ಆರ್ಥಿಕ ಸಹಾಯದ ಹೊಸ ಯೋಜನೆಯ ಪ್ರಸ್ತಾಪವಿದ್ದು ಅದಕ್ಕೆ ನಿಗದಿಪಡಿಸಿದ ಮೊತ್ತವನ್ನು ಕಾಣಿಸಿಲ್ಲ. ಅಲ್ಪಸಂಖ್ಯಾತರೆಂದರೆ ಮುಸ್ಲಿಮರಷ್ಟೇ ಎಂಬಂತೆ ಈಗ ಯೋಜನೆ ಪ್ರಕಟಿಸಿದ್ದು ಮತ್ತು ಅದಕ್ಕೆ 'ಶಾದಿಭಾಗ್ಯ' ಎಂದು ಹೆಸರಿಸಿದ್ದುದು ಏಕೆಂಬುದು ತಿಳಿಯುತ್ತಿಲ್ಲ. ಯೋಜನೆಗೆ ಪೂರ್ತಿ ಕನ್ನಡದ ಶಬ್ದವನ್ನೇ ಉಪಯೋಗಿಸಬಹುದಾಗಿತ್ತಲ್ಲವೆ? ಈ ಯೋಜನೆಗೆ ಅನೇಕರು ವ್ಯಕ್ತಪಡಿಸಿದ ಪ್ರತಿಕ್ರಿಯೆಗಳನ್ನು ಗಮನಿಸಿ ಇದೀಗ ಮಾನ್ಯ ಮುಖ್ಯಮಂತ್ರಿಗಳು ಈ ಯೋಜನೆಯನ್ನು ಇತರ ಧಾರ್ಮಿಕ ಅಲ್ಪಸಂಖ್ಯಾತರಿಗೂ ವಿಸ್ತರಿಸುವುದಾಗಿ ಹೇಳಿದ್ದಾರೆ.
ಜಾತ್ಯತೀತ ಪಕ್ಷವೆಂದು ಕರೆದುಕೊಳ್ಳುವ ಕಾಂಗ್ರೆಸ್ ಪಕ್ಷದ ಈ ನೀತಿಯಲ್ಲಿ ಜಾತ್ಯತೀತ-ಧರ್ಮನಿರಪೇಕ್ಷ ಖಜ್ಛ್ಡಟಛ್ಠ ವಿಚಾರಧಾರೆಯಿಲ್ಲವೆನಿಸುತ್ತದೆ. ಸಂವಿಧಾನದಲ್ಲಿ ಅಲ್ಪಸಂಖ್ಯಾತರ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಿತಾಸಕ್ತಿಗಳನ್ನು ರಕ್ಷಿಸುವ ಬಗ್ಗೆ ಉಲ್ಲೇಖವಿದೆ. ಪರಿಚ್ಛೇದ 29(1)ರಲ್ಲಿ ಪ್ರತ್ಯೇಕ ಭಾಷೆ, ಲಿಪಿ ಮತ್ತು ಸಂಸ್ಕೃತಿಗಳನ್ನು ಸಂರಕ್ಷಿಸುವ ಹಕ್ಕು ಆಯಾ ನಾಗರಿಕರಿಗಿರುವುದಾಗಿ ಹೇಳುತ್ತದೆ. ಅಲ್ಪಸಂಖ್ಯಾತರೆಂದರೆ ಯಾರೆಂಬುದನ್ನು ಸಂವಿಧಾನದಲ್ಲಿ ಹೇಳಿಲ್ಲ. ಸರ್ವೋಚ್ಚ ನ್ಯಾಯಾಲಯವು ಒಂದು ಪ್ರಕರಣದಲ್ಲಿ ಅಲ್ಪಸಂಖ್ಯಾತರು ಯಾರೆಂಬುದನ್ನು ನಿರ್ಧರಿಸಲು ಸರ್ಕಾರಗಳಿಗೆ ಬಿಟ್ಟಿದೆ. 1992ರ ನ್ಯಾಷನಲ್ ಕಮಿಷನ್ ಫಾರ್ ಮೈನಾರಿಟೀಸ್ ಕಾಯಿದೆಯ ಕಲಮು 9(1)ರಲ್ಲಿ ಕಮೀಷನ್ನಿನ ಕಾರ್ಯವ್ಯಾಪ್ತಿಯ ಕುರಿತು ವಿವರಣೆಯಿದ್ದು ಅದರಲ್ಲಿಯಾಗಲೀ ಅದು ನೀಡುವ ಸಲಹೆಗಳಲ್ಲಿಯಾಗಲೀ ಶಾದಿಭಾಗ್ಯದಂತಹ ಯೋಜನೆಗಳ ಪ್ರಸ್ತಾಪವಿಲ್ಲ. ಆದರೂ ಸರ್ಕಾರ ಇಂತಹ ಯೋಜನೆಯನ್ನೇಕೆ ರೂಪಿಸಿತು ಎಂಬುದನ್ನು ಪ್ರಜೆಗಳೊಂದಿಗೆ ಹಂಚಿಕೊಳ್ಳುವದು ಅದರ ಕರ್ತವ್ಯದ ಭಾಗವಾಗಿದೆ. ಬಜೆಟ್ನಲ್ಲಿ ಪ್ರಸ್ತಾಪವಿದ್ದುದಕ್ಕಿಂತ ವಿಭಿನ್ನ ರೀತಿಯಲ್ಲಿ ಯೋಜನೆ ಜಾರಿಗೆ ತಂದದ್ದು, ಬಜೆಟ್ನಲ್ಲಿ ತನ್ನ ಪ್ರಸ್ತಾಪದ ಕುರಿತು ಆದ ಚರ್ಚೆಯ ವಿವರಗಳನ್ನು -ಯಾರ್ಯಾರು ಏನೇನು ವಿಚಾರಗಳನ್ನು ವ್ಯಕ್ತಪಡಿಸಿದರು - ಪ್ರಸ್ತಾಪಿಸದೆ ತನ್ನನ್ನು ತಾನು ಸಮರ್ಥಿಸಿಕೊಳ್ಳುವುದು ಪ್ರಜೆಗಳ ಅಭಿಪ್ರಾಯವನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲವೆಂದು ಸಂಕೇತಿಸಿದಂತೆಯೇ. ಬಜೆಟ್ಟಿನಲ್ಲಿರುವ ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸದೇ ಇರುವ ಅಥವಾ ಸಂದರ್ಭಾನುಸಾರ ಹೊಸದನ್ನು ರೂಪಿಸಿದ್ದೂ ಉಂಟು.
ವಿವಾಹವು ಎಲ್ಲ ಧರ್ಮೀಯರಲ್ಲಿ ಕೌಟುಂಬಿಕ ಹೊಣೆಗಾರಿಕೆಯಾಗಿತ್ತು. ಸಾಮಾಜಿಕವೆನ್ನಿ, ಧಾರ್ಮಿಕವೆನ್ನಿ, ಈ ಕಾರ್ಯದಲ್ಲಿ ಸರ್ಕಾರ ಕೈಹಾಕುತ್ತಿದೆ. ಇದರಿಂದ ವಿವಾಹವಾಗುವವರಿಗೆ ಕುಟುಂಬದೊಡನೆಯ ಒಲವಿನ ಬಂಧನ ಕಡಿಮೆಯಾಗುವ ಸಂಭವವಿದೆ. ಈ ಯೋಜನೆಯಲ್ಲಿ ಕೊಡುವ ವಸ್ತುಗಳನ್ನು ನೋಡಿದಾಗ ಲಗ್ನವಾದ ಕೂಡಲೇ ನವವಿವಾಹಿತರು ಬೇರೆ ಮನೆಯನ್ನು ಮಾಡಲು ಪ್ರೋತ್ಸಾಹಧನ ಕೊಡುತ್ತಿದೆಯೇನೋ ಎಂದು ಅನಿಸುತ್ತದೆ. ಬೇರೆ ಮನೆ ಮಾಡದಿದ್ದರೆ ಆ ಸಾಮಾನುಗಳ ಅವಶ್ಯಕತೆ ಅವರಿಗಿದೆಯೋ ಅಥವಾ ಅವರ ಮನೆಯಲ್ಲಿ ಅವುಗಳನ್ನು ಇಡಲು ಜಾಗ ಇದೆಯೋ ಅಥವಾ ಬೇರೆ ಮನೆ ಮಾಡಲು ಅವರು ಸಮರ್ಥರಿದ್ದಾರೆಯೋ ಎಂಬುದನ್ನು ಸರ್ಕಾರ ಯೋಚಿಸಿದಂತಿಲ್ಲ. ಇದರಿಂದ ಕುಟುಂಬದ ವಿದಳನ ಇನ್ನಷ್ಟು ತೀವ್ರಗೊಳ್ಳಲಿದೆ.
ಅರ್ಹತೆಗೆ ಮಾನದಂಡವಾಗಿರುವ ಆದಾಯದ ಮಿತಿಯನ್ನು ಫಲಾಪೇಕ್ಷಿಗಳು ಹೊಂದಿರುವರೋ ಹೇಗೆ ಎಂಬುದನ್ನು ನಿರ್ಧರಿಸುವದು ಹೇಗೆ? ಸರ್ಕಾರಿ ಅಥವಾ ದೊಡ್ಡ ಖಾಸಗಿ ಸಂಸ್ಥೆಗಳಲ್ಲಿರುವವರನ್ನು ಹೊರತುಪಡಿಸಿ ಉಳಿದವರ ಆದಾಯ ಸರಿಯಿರುವುದರ ಬಗ್ಗೆ ಅಧಿಕಾರಿಗಳು ಹೊಣೆಗಾರರೆ? ಲಕ್ಷಗಟ್ಟಲೇ ಬಿ.ಪಿ.ಎಲ್. ಕಾರ್ಡುಗಳು ಹೆಚ್ಚಿಗೆ ಇರುವುದು ಪತ್ರಿಕೆಗಳಲ್ಲಿ ವರದಿಯಾಗಿದೆ. ಅದಕ್ಕೆ ಹೊಣೆಗಾರರನ್ನಾಗಿ ಮಾಡಿ ಯಾರ ಮೇಲೆ ಯಾವ ಕ್ರಮವನ್ನು ಸರಕಾರ ಕೈಗೊಂಡಿದೆಯೋ ಗೊತ್ತಿಲ್ಲ. ಮನೆ, ವಾಹನ, ಹೊಲ ಇತ್ಯಾದಿ ಎಲ್ಲ ಇದ್ದವರೂ ಇಂತಹ ಯೋಜನೆಗಳ ಲಾಭ ಪಡೆಯಲು ಕಡಿಮೆ ಆದಾಯ ತೋರಿಸುತ್ತಿರುವುದು ಸಾಮಾನ್ಯ. ಆದಾಯದ ಜೊತೆಗೆ ಅವರ ಆಸ್ತಿ, ಜೀವನದ ಇರುವಿಕೆಯ ಶೈಲಿಯನ್ನು ಪರಿಗಣಿಸಬೇಕು. ಸುಳ್ಳು ಮಾಹಿತಿ ಕೊಟ್ಟವರ ಅರ್ಜಿಯನ್ನು ತಿರಸ್ಕರಿಸುವುದು, ಭ್ರಷ್ಟತೆಯಲ್ಲಿ ವಿಶ್ವದಲ್ಲಿ ಉನ್ನತ ಸ್ಥಾನ ಪಡೆದಿರುವ ಮತ್ತು ತೋಳ್ಬಲಕ್ಕೂ ಸ್ಥಾನವಿರುವ ನಮ್ಮಲ್ಲಿ ಸಾಧ್ಯವೇ? ಸಬ್ಸಿಡಿ ಯೋಜನೆಗಳಲ್ಲಿ ಫಲಾಪೇಕ್ಷಿಗಳಿಗೆ ಸೂಕ್ತ ಲಾಭ ತಲುಪದಿರುವ ಬಗ್ಗೆ ರಾಜೀವ ಗಾಂಧಿಯವರ ಕಾಲದಿಂದಲೂ ಚರ್ಚೆ ನಡೆದಿದೆ.
ಸರ್ಕಾರದ ಬಜೆಟ್ನಲ್ಲಿ ಅಭಿವೃದ್ಧಿ ಕಾರ್ಯ, ಮೆಂಟೆನೆನ್ಸ್ಗಾಗಿ ಮಾಡುವ ಖರ್ಚು, ಸಿಬ್ಬಂದಿ ಪಗಾರ, ಕೆಲವೇ ಜನರಿಗೆ ಲಾಭ ಒದಗಿಸುವ ಯೋಜನೆ, ಎಲ್ಲರಿಗೂ ಲಾಭ ಒದಗಿಸುವ ಯೋಜನೆಗಳು- ಇವುಗಳಿಗಾಗಿ ಮಾಡುವ ಖರ್ಚನ್ನು ಒಟ್ಟು ಖರ್ಚಿನ ಎಷ್ಟು ಭಾಗವೆಂಬುದರ ಬಗ್ಗೆ ಸ್ಪಷ್ಟನೆ ಬೇಕು. ಪ್ರಜೆಗಳ ಮೇಲೆ ವಿಧಿಸುತ್ತಿರುವ ತೆರಿಗೆ ಏರುತ್ತಲೇ ಹೋಗುತ್ತಿದೆ. ಉದಾಹರಣೆಗೆ ವ್ಯಾಟ್ ತೆರಿಗೆ ದರ 2005 ರಿಂದ 2013ರ ವರೆಗೆ ಕೆಲವು ಸಾಮಗ್ರಿಗಳ ಗುಂಪಿನ ಮೇಲೆ ಶೇ.4 ರಿಂದ ಶೇ.5.5 (ಅಂದರೆ ಶೇ. 37.5 ಹೆಚ್ಚಳ), ಕೆಲವು ಸಾಮಗ್ರಿಗಳ ಗುಂಪಿನ ಮೇಲೆ ಶೇ.12.5 ರಿಂದ ಶೇ.14.5 ಹೆಚ್ಚಳ ಆಗಿದೆ. ಈ ರೀತಿ ಕರದ ದರ ಏರುತ್ತ ಹೋದರೆ ಮುಂದಿನ ವರ್ಷಗಳಲ್ಲಿ ಭಯಾನಕ ಪರಿಸ್ಥಿತಿ ಉಂಟಾಗುತ್ತದೆ. ಆದ್ದರಿಂದ ಆಡಳಿತಗಾರರಿಗೆ ತೆರಿಗೆ ಏರಿಸುವುದರ ಮೇಲೆ ಮತ್ತು ಒಟ್ಟು ಬಜೆಟ್ನಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸಬೇಕಾದ ಕನಿಷ್ಠ ಪ್ರಮಾಣ ನಿಗದಿಪಡಿಸಲು ಪ್ರಜೆಗಳು ಒತ್ತಾಯ ಪಡಿಸಬೇಕಾದುದು ಅವಶ್ಯ.
ಸರ್ಕಾರಿ ನೌಕರರ ಅನೇಕ ಹುದ್ದೆಗಳು ಖಾಲಿ ಇರುವುದಾಗಿಯೂ ನ್ಯಾಯಾಂಗ ಇಲಾಖೆಯಲ್ಲಿ ಶೇ.50 ಹುದ್ದೆಗಳು ಖಾಲಿ ಇರುವುದಾಗಿಯೂ ಇತ್ತೀಚೆಗೆ ಮಂತ್ರಿಗಳೊಬ್ಬರು ಹೇಳಿಕೆ ಕೊಟ್ಟಿದ್ದರು. ಅವಶ್ಯವಿರುವ ಹುದ್ದೆಗಳ ಸಂಖ್ಯೆಯನ್ನು ಪುನಃ ನಿಗದಿಪಡಿಸಿ, ಮತ್ತು ಅವುಗಳನ್ನು ತುಂಬದಿದ್ದರೆ ಪ್ರಜೆಗಳಿಗೆ ಸರ್ಕಾರ ತಾನು ಕೊಡಬೇಕಾದ ಸೇವೆಯ ಪ್ರಥಮ ಕರ್ತವ್ಯದಲ್ಲಿ ವಿಫಲವಾದಂತೆಯೇ. ಆದ್ದರಿಂದ ಇಂತಹ ಕೆಲಸಗಳಿಗೆ ಮತ್ತು ಅಭಿವೃದ್ಧಿಯ ಕೆಲಸಗಳಿಗೆ ಆದ್ಯತೆ ಕೊಡದೆ ಬೇರೆ ಕಾರ್ಯಗಳತ್ತ ಲಕ್ಷ್ಯ ಹರಿಸುತ್ತಿರುವುದು ಸರಿಯಲ್ಲ. ಸಮಾಜದ ಒಂದು ಭಾಗಕ್ಕೆ ಆದ್ಯತೆ ಕೊಡುವುದಕ್ಕಿಂತ ಇಡೀ ಸಮಾಜಕ್ಕೆ ಸೌಕರ್ಯ ನೀಡುವ ಕಾರ್ಯಗಳಲ್ಲಿ ಸರ್ಕಾರ ನಿಗದಿತ ಅವಧಿಯನ್ನು ಗಮನದಲ್ಲಿಟ್ಟುಕೊಂಡು ತೀವ್ರ ಆಸಕ್ತಿಯಿಂದ ತೊಡಗಿದೆ ಎಂಬುದನ್ನು ಜನರಲ್ಲಿ ಬಿಂಬಿಸುವುದು ಅವಶ್ಯವಿದೆ.
ಶಾದಿ ಭಾಗ್ಯದಂಥ ಯೋಜನೆಗಳು ಸಮಾಜದಲ್ಲಿ ಇರುವ ಇತರ ಜಾತಿಗಳ ಬಡವರಲ್ಲಿ ತಾರತಮ್ಯ ಕಲ್ಪಿಸುವುದಲ್ಲದೇ ಆಡಳಿತಗಾರರಿಗೆ ಮಾನವೀಯತೆಗಿಂತ ಇತರ ಕಾರಣಗಳೇ ಹೆಚ್ಚಿಗಿರುವವೇನೋ ಎಂಬ ಭಾವನೆಯನ್ನು, ಅಸಹಾಯಕತೆಯನ್ನು, ಅತೃಪ್ತಿಯನ್ನು ಉಂಟು ಮಾಡುತ್ತವೆ. ಸಹಾಯ ಮಾಡಬೇಕಾದರೆ ಫಲಾಪೇಕ್ಷಿಗಳಿಗೆ ಇರುವ ಅವಶ್ಯಕತೆ ಮಾನದಂಡವಾಗಬೇಕೇ ವಿನಃ ಸಂವಿಧಾನ ಅಥವಾ ಇತರ ಕಾನೂನುಗಳಲ್ಲಿಯೂ ಇಲ್ಲದಂತಹ ಹೊಸ ಮಾನದಂಡಗಳನ್ನು ಹುಡುಕಬೇಕಾಗಿಲ್ಲ. ಇಂತಹ ಯೋಜನೆಗಳು ಜನಸಮುದಾಯದಲ್ಲಿ ಒಡಕನ್ನೂ ಮತ್ತು ಮುಂದಿನ ದಿನಗಳಲ್ಲಿ ತಮ್ಮ ಅವಗಣನೆ ಇನ್ನೂ ಹೆಚ್ಚಾಗುತ್ತಿದೆಯೇನೋ ಎಂಬ ಭಾವನೆಯನ್ನು ಅನೇಕರಲ್ಲಿ ಉಂಟು ಮಾಡಬಾರದು. ಅನೇಕ ಸರ್ಕಾರಗಳು - ಕೇಂದ್ರ, ರಾಜ್ಯ, ವಿವಿಧ ಪಕ್ಷಗಳು - ಜನರಲ್ಲಿ ದುಡಿಯುವ ಪ್ರವೃತ್ತಿ ಹೆಚ್ಚುವಂಥ ಸಾಕಷ್ಟು ಕ್ರಮಗಳನ್ನು ಕೈಗೊಂಡಿಲ್ಲ. ಜನರು ಸರ್ಕಾರದಿಂದ ಸೌಲಭ್ಯ ಪಡೆಯಲು ಹಿಂದುಳಿದವರಲ್ಲಿ ಒಬ್ಬರಾಗಬೇಕೆಂದು ಆಶಿಸುವ ಪ್ರವೃತ್ತಿ ಬೆಳೆಯುತ್ತಿದೆ. ಸುಲಭ ಹಣ ಪಡೆಯುವ ಪ್ರವೃತ್ತಿ ಹೆಚ್ಚಾಗುತ್ತಿದೆ. ದೇಶದ ಭವ್ಯ ಭವಿಷ್ಯ ರೂಪಿಸುವ ಹೊಣೆ ಹೊತ್ತಿರುವ ಸರ್ಕಾರಗಳು ಜನರಲ್ಲಿ ದುಡಿಯುವ ಪ್ರವೃತ್ತಿಯನ್ನು ಮೈಗೂಡಿಸುವ ಸಾಮಾಜಿಕ ಕಲ್ಯಾಣದ ಯೋಜನೆಗಳನ್ನು ರೂಪಿಸಲಿ ಎಂದು ಆಶಿಸುವೆ.
- ರವೀಂದ್ರ ಆಕಳವಾಡಿ
ಧಾರವಾಡ