ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ದೇಶದ ಕೃಷಿಗೆ ನಂಬಿಕೆಯೇ ಮೂಲ ಆಧಾರ

Vishwanath S
Updated On : 15 Nov 2013, 11:50 am

ನಮ್ಮ ಹೊಟ್ಟೆ-ಬಟ್ಟೆ-ಸೂರು ಮುಂತಾದ ಮೂಲಭೂತ ಬೇಡಿಕೆಗಳನ್ನು ಪೂರೈಸುವ ಕೃಷಿಯು ವೈಜ್ಞಾನಿಕ ತಳಹದಿಯ ಮೇಲೆಯೇ ಆಗಬೇಕಾಗಿದ್ದರೆ, ಕೃಷಿಯ ಇತಿಹಾಸ ಕೇವಲ ಸುಮಾರು 100 ವರ್ಷಗಳಷ್ಟೇ ಆಗಿರುತ್ತಿತ್ತು. ಆದರೆ, ನಮ್ಮ ಕೃಷಿಗೆ 5000 ವರ್ಷಗಳ ಇತಿಹಾಸ-ಪರಂಪರೆ ಇದೆ.  
ಕೃಷಿಯಲ್ಲಿ ಸಂಶೋಧನೆ-ಶಿಕ್ಷಣ ಇತ್ತೀಚಿನ ನೂರು ವರ್ಷಗಳಿಂದ ನಡೆಯುತ್ತಿದೆ. ಅಲ್ಲದೆ, ವೈಜ್ಞಾನಿಕ ಕೃಷಿಯ ಕುರಿತ ಮಾಹಿತಿ, ಕೌಶಲ್ಯ, ಪರಿಕರಗಳು ಇನ್ನೂ ಅನೇಕ ರೈತರನ್ನು ಸಮಗ್ರ ರೀತಿಯಲ್ಲಿ ತಲುಪಿಯೇ ಇಲ್ಲ. ಆದರೂ ಕೃಷಿಯು ಉತ್ತಮವಾಗಿಯೇ ನಡೆದು ಬರುತ್ತಿದೆ.
ನಮ್ಮ ದೇಶದಲ್ಲಿ ಈಗಲೂ ಸುಮಾರು ಶೇ. 60ರಷ್ಟು ಜನರು ಜೀವನೋಪಾಯಕ್ಕಾಗಿ ಕೃಷಿಯನ್ನೇ ಅವಲಂಬಿಸಿದ್ದಾರೆ. ಇವರಲ್ಲಿ ಸುಮಾರು ಶೇ. 80ರಷ್ಟು ಸಣ್ಣ ಹಾಗೂ ಅತಿ ಸಣ್ಣ ರೈತರು ಹಾಗೂ ಶೇ. 65ರಷ್ಟು ರೈತರು ಮಳೆಯಾಧಾರಿತ ಕೃಷಿಯಲ್ಲಿ ತೊಡಗಿದ್ದಾರೆ. ಕೃಷಿ ತಂತ್ರಜ್ಞಾನದ ಅಭಿವೃದ್ಧಿಯ ಪ್ರಯತ್ನಗಳು ಹೆಚ್ಚಿನದಾಗಿ ನೀರಾವರಿ ಕೃಷಿಗೇ ಅನುಕೂಲ ಮಾಡಿಕೊಟ್ಟಿದೆ. ಇಷ್ಟಾದರೂ ಪ್ರಪಂಚದ ಶೇ. 15ರಷ್ಟು ಜನಸಂಖ್ಯೆಯನ್ನು ಹೊಂದಿರುವ ನಮ್ಮ ದೇಶದಲ್ಲಿ ಆಹಾರಕ್ಕಾಗಿ ಮತ್ತು ಇತರ ಬೇಡಿಕೆಗಳಿಗಾಗಿ ನಾವು ಕೃಷಿ ಆಯಾತಗಳನ್ನು ಹೆಚ್ಚಾಗಿ ಅವಲಂಬಿಸಿಲ್ಲ. ಅಂದರೆ, ನಾವು ಒಂದು ಆಹಾರ-ಸುಭದ್ರ ದೇಶವಾಗಿದ್ದೇವೆ. ಇಂತಹ ಒಂದು ಅಪೂರ್ವ ಸಾಧನೆ ಸಾಧ್ಯವಾಗಿರುವುದು ಕೇವಲ ವಿಜ್ಞಾನದಿಂದ ಮಾತ್ರವಲ್ಲ. ಕೃಷಿಯಲ್ಲಿ ನಾವು ರೂಢಿಸಿಕೊಂಡು ಬಂದಿರುವ ಅನೇಕ, ಅಚಲ ನಂಬಿಕೆಗಳೂ ಇದಕ್ಕೆ ಕಾರಣ.
ನಂಬಿಕೆಗಳನ್ನು ಮೂಢನಂಬಿಕೆಗಳಿಂದ ಪ್ರತ್ಯೇಕಿಸುವಲ್ಲಿ ಕೆಲವೊಮ್ಮೆ ಸಂದಿಗ್ಧಗಳು-ಅಸ್ಪಷ್ಟತೆಗಳು ಇರಬಹುದು. ಆದರೆ, ಅನೇಕ ನಂಬಿಕೆಗಳು ಸಾರ್ವಜನಿಕ ಆಚರಣೆಯಲ್ಲಿ ಶತಮಾನಗಳ ಕಾಲ ಸುಖಾಸುಮ್ಮನೆ ಉಳಿದುಕೊಂಡು ಬರುವುದಿಲ್ಲ. ಅದರಲ್ಲೂ ಹೆಚ್ಚಿನ ನಂಬಿಕೆಗಳು ಲಿಖಿತ ರೂಪದಲ್ಲಿ ಪೀಳಿಗೆಯಿಂದ ಪೀಳಿಗೆಗೆ ಹಸ್ತಾಂತರಗೊಂಡಿಲ್ಲ. ಆದರೂ ಅವುಗಳು ಆಚರಣೆಯಲ್ಲಿ ಉಳಿದುಕೊಂಡಿರುವುದು ಜನರಿಗೆ ಇಂತಹ ನಂಬಿಕೆಗಳಿಂದಾಗುತ್ತಿರುವ ಉಪಯೋಗದಿಂದಲೇ ಅಲ್ಲವೆ? ಅವುಗಳ ಮೇಲಿರುವ ಶ್ರದ್ಧೆ ಹಾಗೂ ಇಂತಹ ನಂಬಿಕೆಗಳಿಂದ ನಾವು ಪಡೆಯುತ್ತಿರುವ ಭಾವನಾತ್ಮಕ ತೃಪ್ತಿಯನ್ನು ವೈಜ್ಞಾನಿಕ ಚೌಕಟ್ಟಿನಲ್ಲಿ ವಿಶ್ಲೇಷಿಸಲು ಸಾಧ್ಯವೆ?
ಕೆಲವು ಉದಾಹರಣೆಗಳನ್ನು ಗಮನಿಸಿ: ಯಾವುದೇ ಸಾಂಪ್ರದಾಯಕ ಕೃಷಿ ಕುಟುಂಬವು ಈಗಲೂ ಪ್ರಮುಖ ಕೃಷಿ ಚಟುವಟಿಕೆಯನ್ನು ಕೈಗೊಳ್ಳುವ ಮುನ್ನ ಪಂಚಾಂಗ-ಮಳೆ ನಕ್ಷತ್ರಗಳನ್ನು ಪರಿಗಣಿಸಿಯೆ ನಿರ್ಧಾರ ತೆಗೆದುಕೊಳ್ಳುತ್ತದೆಯೇ ಹೊರತು ಹವಾಮಾನ ಇಲಾಖೆ ಪ್ರಕಟಿಸುವ ವರದಿಯನ್ನು ಆಧರಿಸಿ ಅಲ್ಲ. ಚಂದ್ರನ ಸುತಕಣ (ಪ್ರಭಾವಲಯ) ಕಟ್ಟಿದಾಗ, ಕುಡು ನೊಣ ಕಾಲಿಗೆ ಕಚ್ಚಿದರೆ, ಇರುವೆಗಳು ಮೊಟ್ಟೆಗಳನ್ನು ಸಾಗಿಸುತ್ತಿದ್ದರೆ ಮಳೆ ಬರುತ್ತದೆ ಎಂಬ ನೂರಾರು ನಂಬಿಕೆಗಳು ಈಗಲೂ ಪ್ರಚಲಿತದಲ್ಲಿವೆ. ಕೃಷಿ ಕಾರ್ಯಗಳಿಗಾಗಿ ಏರು ಹೂಡಬೇಕಾದರೆ (ಎತ್ತುಗಳನ್ನು ನೇಗಿಲಿಗೆ ಕಟ್ಟುವುದು) ಎತ್ತುಗಳನ್ನು ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖ ಮಾಡಿ ನಿಲ್ಲಿಸಲಾಗುತ್ತದೆ. ಬೆಳೆಗಳ ಬೀಜಗಳನ್ನು ಬಿತ್ತಲು ಅಮವಾಸ್ಯೆ ಸೂಕ್ತ ಹಾಗೂ ಸಸಿಗಳನ್ನು ನಾಟಿ ಮಾಡಲು ಹುಣ್ಣಿಮೆಯು ಪ್ರಶಸ್ತ ಸಮಯ ಎಂಬ ನಂಬಿಕೆಯಿದೆ. ಪ್ರತಿ ಸೋಮವಾರ ರಾಜ್ಯದ ಯಾವುದೇ ರೈತರೂ ಕೃಷಿ ಚಟುವಟಿಕೆಯನ್ನು ಮಾಡುವುದಿಲ್ಲ. ವೈಜ್ಞಾನಿಕ ಕನ್ನಡಕದಿಂದ ಇದನ್ನು ನಾವು ವಾರದ ರಜೆ ಎನ್ನುವುದಾದರೆ, ರಾಜ್ಯದ ಉದ್ದಗಲಕ್ಕೂ ವಿಭಿನ್ನ ಬೆಳೆ ಬೆಳೆಯುವ, ಪರಸ್ಪರ ಸಂಪರ್ಕವೇ ಇರದ ಎಲ್ಲಾ ರೈತರೂ ಸೋಮವಾರವನ್ನೇ ಏಕೆ ರಜಾ ದಿವಸವಾಗಿ ಆಚರಿಸುತ್ತಾರೆ? ಎಲೆ ತೋಟಗಳಲ್ಲಿ ಉಗುಳಬಾರದು, ಪಾದರಕ್ಷೆ ಧರಿಸಿ ನಡೆದಾಡಬಾರದು ಎಂಬ ನಂಬಿಕೆಯಿದೆ. ಈ ನಂಬಿಕೆಯು ಕೃಷಿಯಲ್ಲಿ ಬ್ಯಾಕ್ಟೀರಿಯಾ, ವೈರಸ್, ಶಿಲೀಂಧ್ರ ಮುಂತಾದುವುಗಳ ಪಾತ್ರದ ಬಗ್ಗೆ ವಿಜ್ಞಾನಿಗಳು ವಿವರಿಸುವ ಮುಂಚಿನಿಂದಲೂ ಜಾರಿಯಲ್ಲಿದೆ! ಹೀಗೆ ರೈತರು ತಮ್ಮ ದಿನನಿತ್ಯದ ಚಟುವಟಿಕೆಗಳಿಗೆ ಲಕ್ಷಾಂತರ ನಂಬಿಕೆಗಳನ್ನೇ ಆಧರಿಸಿದ್ದಾರೆ. ಈ ನಂಬಿಕೆಗಳನ್ನೆಲ್ಲ ವೈಜ್ಞಾನಿಕವಾಗಿ ಪರಿಶೀಲಿಸಲು ಸಾಧ್ಯವಾಗಿಲ್ಲವೆಂದ ಮಾತ್ರಕ್ಕೆ ಅವೆಲ್ಲವೂ ಮೂಢನಂಬಿಕೆಗಳು ಎನ್ನಲಾದೀತೆ? ಹಾಗೂ, ಇಂತಹ ನಂಬಿಕೆಗಳ ಆಚರಣೆಯನ್ನು ಕಾನೂನಿನಿಂದ ತಡೆಯಬಹುದು ಎಂಬ ನಂಬಿಕೆಯೂ ಹಾಸ್ಯಾಸ್ಪದವಾದೀತು.
ಪಟ್ಟಿ ಮಾಡುತ್ತಾ ಹೋದರೆ ಪರಂಪರಾಗತ ಕೃಷಿ ಜ್ಞಾನ ಅಥವಾ ದೇಶೀಯ ತಂತ್ರಜ್ಞಾನಗಳೆಂದು ಪರಿಗಣಿಸಲಾಗುತ್ತಿರುವ ಇಂತಹ ಲಕ್ಷಾಂತರ ಉದಾಹರಣೆಗಳನ್ನು ದಾಖಲಿಸಬಹುದು. ಅಹಮದಾಬಾದಿನ ಪ್ರತಿಷ್ಠಿತ ಐಐಎಂ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿರುವ ಪ್ರೊ. ಅನಿಲ್ ಗುಪ್ತಾ ದೇಶದ ಮೂಲೆ ಮೂಲೆಗಳಿಂದ ಇಂತಹ ಕೃಷಿ ಆಚಾರ-ವಿಚಾರಗಳನ್ನು ಶೋಧಿಸಿ, ಸಂಗ್ರಹಿಸಿ "ಹನಿ ಬೀ" ಎಂಬ ತಮ್ಮ ಪತ್ರಿಕೆಯಲ್ಲಿ ರೈತರ ಹೆಸರಿನಲ್ಲೇ ಪ್ರಕಟಿಸುತ್ತಿದ್ದಾರೆ. ಅಲ್ಲದೆ, ಅನೇಕ ನಂಬಿಕೆಗಳ ಕುರಿತು ಚಿಂತಕರು, ಬುದ್ಧಿಜೀವಿಗಳು ಹಾಗೂ ವಿಜ್ಞಾನಿಗಳಿಗೆ ಚರ್ಚೆಯ ವೇದಿಕೆ ಕಲ್ಪಿಸಿಕೊಟ್ಟಿದ್ದಾರೆ. ಇಂತಹುದೇ ಒಂದು ಚರ್ಚೆ- "ರೈತರ ನಂಬಿಕೆಗಳಿಗೆ ವೈಜ್ಞಾನಿಕ ವಿಶ್ಲೇಷಣೆ ಅಗತ್ಯವೇ?" ಎಂಬ ವಿಷಯವಾಗಿ 20 ವರ್ಷಗಳ ಹಿಂದೆಯೇ ತುಂಬಾ ಆಸಕ್ತಿದಾಯಕವಾಗಿ ನಡೆದಿದೆ. ಸಾವಿರಾರು ವರ್ಷಗಳಿಂದ ಆಚರಿಸಿಕೊಂಡು ಬಂದಿರುವುದು ಮತ್ತು ಅವುಗಳಿಂದ ಉಪಯೋಗ ಪಡೆದಿರುವುದು ಅವುಗಳ ಪ್ರಸ್ತುತತೆಗೆ ಪುರಾವೆಯಲ್ಲವೆ? ರೈತರ ನಂಬಿಕೆಗಳಿಗೆ ವಿಜ್ಞಾನಿಗಳಿಂದ ಪ್ರತ್ಯೇಕ ಪ್ರಮಾಣ ಪತ್ರ ಇನ್ನೂ ಅವಶ್ಯವೇ? ಶತಮಾನಗಳ ಅಪಾರ ಅನುಭವಗಳು ಹಾಗೂ ಅಗಾಧ ಜ್ಞಾನದ ಆಧಾರದ ಮೇಲೆ ಅಭಿವೃದ್ಧಿಗೊಂಡಿರುವ ಅನೇಕ ಸಂಕೀರ್ಣ ನಂಬಿಕೆಗಳನ್ನು ವಸ್ತುನಿಷ್ಠವಾಗಿ ಪ್ರಯೋಗಕ್ಕೊಳಪಡಿಸಿ ಅರ್ಥೈಸಿಕೊಳ್ಳುವ ಮುಕ್ತ ಮನಸ್ಸು, ಸಾಮರ್ಥ್ಯ ವಿಜ್ಞಾನಿಗಳಿಗಿದೆಯೇ ಎಂಬ ಚರ್ಚೆಯಾಗಿದೆ. ರೈತರ ನಂಬಿಕೆಗಳಿಗೆ ವಿಜ್ಞಾನಿಗಳಿಂದ ಪ್ರಮಾಣ ಪತ್ರದ ಅವಶ್ಯಕತೆ ಇಲ್ಲದಿರಬಹುದು, ಆದರೆ, ನಂಬಿಕೆಗಳಲ್ಲಿರುವ ವೈಜ್ಞಾನಿಕ ತತ್ವಗಳನ್ನು ಅರಿತು, ಸರಿಯಾಗಿ ಬಳಸಿದರೆ ವೈಜ್ಞಾನಿಕ ಅವಲೋಕನ-ವಿಶ್ಲೇಷಣೆ ಸಹಾಯಕವಾಗಬಲ್ಲದು ಎಂಬುದು ಈ ಚರ್ಚೆಯ ಒಂದು ಸಂಕ್ಷಿಪ್ತ ಸಾರಾಂಶ ಮಾತ್ರ, ಸಂಪೂರ್ಣ ಸತ್ಯವಲ್ಲ.
ನಾಗರಿಕತೆಯ ಅಭಿವೃದ್ಧಿಯಲ್ಲಿ ನಂಬಿಕೆಗಳು, ಮೂಢನಂಬಿಕೆಗಳು, ಆಚರಣೆಗಳು, ಸಂಪ್ರದಾಯಗಳು ಮುಂತಾದುವು ನಿರಂತರ ಹುಟ್ಟು-ಸಾವುಗಳನ್ನು ಪಡೆಯುತ್ತಲೇ ಇರುತ್ತವೆ. ಉಪಯೋಗಕ್ಕೆ ಬರುವ ನಂಬಿಕೆಗಳು ತಮ್ಮದೇ ಆದ ಪರೀಕ್ಷೆಗೆ ಒಳಪಡುತ್ತಾ ಯಶಸ್ವಿಯಾದರೆ ಉಳಿಯುತ್ತವೆ, ಇಲ್ಲದಿದ್ದರೆ ನಶಿಸುತ್ತವೆ. ಇದು ಒಂದು ಕಾಲಘಟ್ಟಕ್ಕೆ, ಒಂದು ನಿರ್ದಿಷ್ಟ ಪೀಳಿಗೆಯ ಹರವಿಗೆ ಹಾಗೂ ಕಾನೂನಿನ ಚೌಕಟ್ಟಿಗೆ ಸೀಮಿತವಾಗದ ನಿರಂತರ ಪ್ರಕ್ರಿಯೆ. ಇದನ್ನು ಸಾಮಾನ್ಯ ಜನರು ಅನುಭವಿಸಬಹುದು, ಬುದ್ಧಿಜೀವಿಗಳು-ಸಾಹಿತಿಗಳು ತಮ್ಮದೇ ರೀತಿಯಲ್ಲಿ ವ್ಯಾಖ್ಯಾನಿಸಬಹುದು, ವಿಜ್ಞಾನಿಗಳು ವಿಶ್ಲೇಷಿಸಬಹುದು ಆದರೆ ಇವರ್ಯಾರಿಗೂ ಒಂದು ಅಂತಿಮ ನಿರ್ಣಯ ಕೊಡಲಾಗದು.
ಮೂಢನಂಬಿಕೆಗಳ ಪ್ರತಿಬಂಧಕ ಕಾಯ್ದೆಯು ಒಂದು ಉತ್ತಮ ಆಶಯ ಹೊಂದಿರಬಹುದು. ಆದರೆ ಇದೊಂದು ಅತ್ಯಂತ ಗಂಭೀರ ಹಾಗು ಅಗಾಧ ಜವಾಬ್ದಾರಿ. ಅದಕ್ಕಿಂತ ಮುಖ್ಯವಾಗಿ ಒಂದು ನಿರ್ದಿಷ್ಟ ಅಜೆಂಡಾ ಮನಸ್ಸಿನಲ್ಲಿರಿಸಿಕೊಂಡ ಸರ್ಕಾರ ಹಾಗೂ ಸೀಮಿತ ಮತ್ತು ಮುಕ್ತವಲ್ಲದ ಧೋರಣೆ ಹೊಂದಿರುವ ಸದಸ್ಯರ ತಂಡವು ಇಂತಹ ವಿಷಯಕ್ಕೆ ಕೈ ಹಾಕುವುದರಿಂದ ಅನುಕೂಲಕ್ಕಿಂತ ಅನಾಹುತಗಳೇ ಹೆಚ್ಚಾಗುವ ಸಾಧ್ಯತೆ ಇದೆ. ಹಾಗೆಯೇ, ಈ ವಿಷಯವೇ ಪ್ರಾಸಂಗಿಕವಲ್ಲ. ಆದ್ಯತೆ ನೀಡಬೇಕಾದ ಅನೇಕ ಗಂಭೀರ ಸಮಸ್ಯೆಗಳು ನಮ್ಮ ಮುಂದಿವೆ.
ಸರ್ಕಾರವು ಮೌಲ್ಯಾಧಾರಿತ, ಗುಣಮಟ್ಟದ ಶಿಕ್ಷಣ ನೀಡುವುದಕ್ಕೆ ಆದ್ಯತೆ ನೀಡಿದರೆ, ಬಡತನ ನಿರ್ಮೂಲನೆಗೆ ಗಂಭೀರ ಪ್ರಯತ್ನಗಳನ್ನು ಮಾಡಿದರೆ, ಬುದ್ಧಿಜೀವಿಗಳು ತಮ್ಮ ಕಾಳಜಿಯನ್ನು ಪ್ರಾಮಾಣಿಕವಾಗಿ ಜನರಿಗೆ ತಲುಪಿಸುವ ಪ್ರಯತ್ನ ಮಾಡಿದರೆ ಹಾಗೂ ವಿಜ್ಞಾನಿಗಳು ಸಮಾಜದ ಮುಂದಿರುವ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸಿದರೆ ಮೂಢನಂಬಿಕೆಗಳು ತಾವಾಗಿಯೇ ತೆರೆಮರೆಗೆ ಸರಿಯುತ್ತವೆ. ಅದಕ್ಕಾಗಿ ಕಾನೂನು ರಚಿಸುವ ಅವಸರವಿಲ್ಲ.
ಕೊನೆಯದಾಗಿ, ನಮ್ಮ ದೇಶದಲ್ಲಿ ಈಗಲೂ ಹೆಚ್ಚಿನ ಜನರು ಕೃಷಿಯನ್ನು ಅವಲಂಭಿಸಿದ್ದಾರೆ. ಆದರೆ, ಅವರಲ್ಲಿ ಅಗಾಧ ಹತಾಶೆ ಮಡುಗಟ್ಟಿದೆ, ಕೃಷಿಯೆಂಬ ಕಸುಬಿನಲ್ಲಿರುವ ಉತ್ಸಾಹ-ಸಂಭ್ರಮಗಳು ನಶಿಸಿ ಹೋಗಿವೆ, ಪ್ರಚಲಿತ ಸಮಸ್ಯೆಗಳನ್ನು ಸರ್ಕಾರವು ನಿವಾರಿಸಬಹುದು ಎಂಬ ನಂಬಿಕೆಯೇ ಕ್ಷೀಣವಾಗಿದೆ. ರೈತರ ಹೆಸರಿನಲ್ಲೆ ಹೆಚ್ಚೂ ಕಡಿಮೆ ಎಲ್ಲಾ ಪಕ್ಷಗಳೂ ಸರ್ಕಾರ ನಡೆಸುವ ಅವಕಾಶ ಪಡೆಯುತ್ತಿದ್ದರೂ ರೈತರ ಬಾಳನ್ನು ಹಸನು ಮಾಡುವ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡದೆ ಅವರ ಮೇಲೆ ಸವಾರಿ ಮಾಡುತ್ತಾ ಶೋಷಣೆ ಮುಂದುವರೆಸಬಹುದು ಎಂದು ನಂಬಿದರೆ ಅದೇ ನಿಜವಾದ ಮೂಢನಂಬಿಕೆಯಾಗಲಿದೆ!

- ಡಾ. ಅರುಣ್ ಬಳಮಟ್ಟಿ
ಮೈಸೂರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement