ಆಹಾರ ಭದ್ರತಾ ಯೋಜನೆಯ ಒಳಉದ್ದೇಶವೇನು?
ಭಾರತದ ರಾಜಕಾರಣಿಗಳು ಚುನಾವಣಾ ಸಮಯದಲ್ಲಿ ಮತದಾರರನ್ನು ಒಲಿಸಿಕೊಳ್ಳಲು ಬಳೆ, ಸೀರೆ, ಎಲೆಕ್ಟ್ರಾನಿಕ್ ಉಪಕರಣಗಳು, ಕೊನೆಗೆ ಲ್ಯಾಪ್ಟಾಪ್ ಕೂಡಾ ಕೊಡುತ್ತಾರೆ. ...
ಭಾರತದ ರಾಜಕಾರಣಿಗಳು ಚುನಾವಣಾ ಸಮಯದಲ್ಲಿ ಮತದಾರರನ್ನು ಒಲಿಸಿಕೊಳ್ಳಲು ಬಳೆ, ಸೀರೆ, ಎಲೆಕ್ಟ್ರಾನಿಕ್ ಉಪಕರಣಗಳು, ಕೊನೆಗೆ ಲ್ಯಾಪ್ಟಾಪ್ ಕೂಡಾ ಕೊಡುತ್ತಾರೆ. ಆದರೆ ಸೋನಿಯಾ ಗಾಂಧಿಯವರು ಈ ಎಲ್ಲಾ ತಂತ್ರಗಳನ್ನು ಹಿಂದಿಕ್ಕಿ ಆಹಾರ ಭದ್ರತಾ ಮಸೂದೆಯ ಮೂಲಕ ದೊಡ್ಡ ಓಟ್ ಬ್ಯಾಂಕ್ ಕನ್ನಕ್ಕೆ ಮನಸ್ಸು ಮಾಡಿದ್ದಾರೆ. ಭಾರತದ ಕುಸಿಯುತ್ತಿರುವ ಆರ್ಥಿಕತೆಯನ್ನು ಹತೋಟಿಗೆ ತರಲು, ಪಿ. ಚಿದಂಬರಂ ಅವರು ಪ್ರಯತ್ನಿಸುತ್ತಿರುವ ವೇಳೆಯಲ್ಲೇ ಇಂಥದ್ದೊಂದು ಮತ ಮಸೂದೆ ಕಾನೂನಾಗಿಬಿಟ್ಟಿತು.
ಸೋನಿಯಾ ಗಾಂಧಿಯವರು ಲೋಕಸಭೆಯಲ್ಲಿ ಈ ಕರಡನ್ನು ನೂಕಿದ್ದು, ಬಡವರಿಗೆ ಉಪಯೋಗವಾಗುತ್ತದೆ ಎನ್ನುವ ಕಾರಣಕ್ಕಿಂತಲೂ ಹೆಚ್ಚಾಗಿ, ಬಡವರಿಂದ ತಮ್ಮ ಕುಟುಂಬ ಮತ್ತು ಪಕ್ಷಕ್ಕೆ ಉಪಯೋಗವಾಗಲಿ ಎನ್ನುವುದಕ್ಕಾಗಿ. ಮುಂದಿನ ಮಾರ್ಚ್/ ಏಪ್ರಿಲ್ನಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗಳತ್ತಲೇ ಸೋನಿಯಾರ ಚಿತ್ತ ನೆಟ್ಟಿದೆ. ಅಕ್ಕಿಯ ಮೂಟೆಗಳು ಖಂಡಿತವಾಗಿಯೂ ಮತದ ಜೋಳಿಗೆಗಳಾಗುತ್ತವೆ ಎನ್ನುವ ಭರವಸೆಯಲ್ಲಿ ಅವರಿದ್ದಾರೆ. ನಿಧಾನ ಬೆಳವಣಿಗೆ, ಏರುತ್ತಿರುವ ದರಗಳು, ತೀವ್ರ ಭ್ರಷ್ಟಾಚಾರ, ತೂಕಡಿಸುತ್ತಿರುವ ಸರ್ಕಾರ ಮತ್ತು ಕಾಲು ಎಳೆಯುತ್ತಾ ಸಾಗಿರುವ ಆರ್ಥಿಕತೆಯನ್ನೆಲ್ಲ ಕಡೆಗಣಿಸಿ, ಧಾನ್ಯಗಳ ಮೂಟೆಗಳತ್ತಲೇ ಜನ ಮುಖ ಮಾಡಲಿದ್ದಾರೆ ಎಂದು ಸೋನಿಯಾ ನಂಬಿದ್ದಾರೆ.
ಈ ಯೋಜನೆಯಿಂದಾಗಿ ರುಪಾಯಿ ಮೌಲ್ಯ ಇನ್ನಷ್ಟು ಕುಸಿಯಿತು. ಪಿ. ಚಿದಂಬರಂ ಅವರು ಹಾಕಿದ್ದ ಲೆಕ್ಕಾಚಾರಗಳೆಲ್ಲ ತಲೆಕೆಳಗಾಗಿ, ಒಂದು ಡಾಲರ್ಗೆ ರುಪಾಯಿ ಮೌಲ್ಯ 67.5ಕ್ಕೆ ಏರಿದರೆ, 1 ಪೌಂಡ್ ಸ್ಟೆರ್ಲಿಂಗ್ಗೆ ರುಪಾಯಿ ಬೆಲೆ 106.5 ಕ್ಕೆ ಬಂದು ತಲುಪಿತು!
ಇದರಿಂದಾಗಿ ಆಯಾತ ನಿರ್ಯಾತಗಳ ನಡುವಿನ ಅಂತರ ಎಷ್ಟು ಏರುಪೇರಾಗುತ್ತದೆ ಮತ್ತು ಮಧ್ಯಮ ವರ್ಗಕ್ಕೆ ಎಷ್ಟು ಹೊಡೆತ ಬೀಳುತ್ತದೆ ಎನ್ನುವುದನ್ನು ಲೆಕ್ಕ ಹಾಕದೆ, 'ಬಡವರಿಗಾಗಿ'(?) ಈ ದಿಟ್ಟ ಹೆಜ್ಜೆಯಿಟ್ಟ ಸೋನಿಯಾರ ಗಟ್ಟಿ ಗುಂಡಿಗೆಯನ್ನು ಮೆಚ್ಚಲೇಬೇಕು!
ಈ ರಾಜಕುಟುಂಬ ತನ್ನ ಅಧಿಪತ್ಯವನ್ನು ನಿರಂತರವಾಗಿ ಮುಂದುವರಿಸಲು, ಬಡವರನ್ನು ಬಡವರನ್ನಾಗಿಯೇ ಉಳಿಸುತ್ತಿದೆ ಎನ್ನುವ ವಾದದಲ್ಲಿ ಅರ್ಥವಿಲ್ಲ ಎಂದು ಸಿನಿಕರು ಹೇಳುತ್ತಾರೆ. ಆದರೆ ಸೋನಿಯಾ ಗಾಂಧಿಯವರು ಪ್ರಜ್ಞಾಪೂರ್ವಕವಾಗಿ ಹೀಗೆ ಮಾಡುತ್ತಿಲ್ಲವೆಂದರೂ, ಅವರು ಸಾಗುತ್ತಿರುವ ಹಾದಿ ಇದೇ ತೆರನಾಗಿದೆ. ಬಹುತೇಕ ಬುದ್ಧಿಜೀವಿಗಳು ತಮ್ಮನ್ನು ಪ್ರಚಾರದಲ್ಲಿರುವಂತೆ ಮಾಡುವ ವಾತಾವರಣವನ್ನಷ್ಟೇ ಕಾಪಾಡಿಕೊಂಡು ಹೋಗುತ್ತಾರಲ್ಲ, ಇದೂ ಹಾಗೇ! ಇದೇನೇ ಇದ್ದರೂ ಈ ಮಸೂದೆಯನ್ನು ಸಿದ್ಧಪಡಿಸಿದ ರಾಷ್ಟ್ರೀಯ ಸಲಹಾ ಸಮಿತಿ, ಇದರ ಬದಲು, ಸಬ್ಸಿಡಿಯಲ್ಲಿ ಕಡಿತ ಮತ್ತು ಸುಧಾರಣೆಗಳನ್ನು ತಂದರೆ ದೇಶದ ಆರ್ಥಿಕತೆಯಲ್ಲಿ ಉತ್ತಮ ಬದಲಾವಣೆಯಾಗುತ್ತದೆ ಎಂದು ಸೋನಿಯಾರಿಗೆ ಹೇಳಬಹುದಿತ್ತು.
ಸೋನಿಯಾರ ಈ ನಡೆ ಪ್ರಜ್ಞಾಪೂರ್ವಕವಾಗಿ ಅಲ್ಲದಿದ್ದರೂ ಹುಟ್ಟುಗುಣದಿಂದಾಗಿ ಹೊರಹೊಮ್ಮಿರಬಹುದು ಎಂದು ನಾನೇಕೆ ಹೇಳುತ್ತಿದ್ದೇನೆಂದರೆ, ಅವರ ಮಗ ರಾಹುಲ್ರಲ್ಲೂ ಇದೇ ಗುಣವಿರುವುದರಿಂದ! 'ಅಭಿವೃದ್ಧಿ ಕೇಂದ್ರಿತ ಆರ್ಥಿಕ ಸುಧಾರಣೆಗಳ ಹಿಂದೆ ಬಿದ್ದರೆ ಕಾಂಗ್ರೆಸ್ನ 'ಬಡವರ ಪರ' ಇಮೇಜಿಗೆ ಹಾನಿಯಾಗುತ್ತದೆ. ಹಾಗಾಗೇ ದೇಶದ ಸಂಪತ್ತು ಎಷ್ಟೇ ವ್ಯರ್ಥವಾದರೂ ಪರವಾಗಿಲ್ಲ ಸಬ್ಸಿಡಿಗಳನ್ನು ಕೊಡುತ್ತಲೇ ಇರಬೇಕು' ಎಂದು ರಾಹುಲ್ ತಮ್ಮ ಆಪ್ತವಲಯದಲ್ಲಿ ಹೇಳಿದ್ದರು.
ಈ ಯೋಜನೆಯ ಅಡಿಯಲ್ಲಿ ಪ್ರತಿ ಬಡ ಕುಟುಂಬಕ್ಕೆ ಪ್ರತೀ ತಿಂಗಳು 5 ಕೆ.ಜಿ. ಅಕ್ಕಿ, ಗೋದಿ ಮತ್ತು ಇತರೆ ಧಾನ್ಯಗಳನ್ನು ನೀಡಲಾಗುತ್ತದೆ. ಸರ್ಕಾರದ ಅಂದಾಜಿನ ಪ್ರಕಾರ ಇದರಿಂದಾಗಿ ಬೊಕ್ಕಸಕ್ಕೆ ಪ್ರತಿವರ್ಷ ತಗುಲುವ ಖರ್ಚು 1,24, 723 ಕೋಟಿ ರುಪಾಯಿಗಳು. ಆದರೆ ಇನ್ನುಳಿದ ಅಂದಾಜುಗಳು ಬೇರೆಯದ್ದೇ ಕಥೆಯನ್ನು ಹೇಳುತ್ತವೆ. ಸುರ್ಜಿತ್ ಭಲ್ಲ ಎಂಬ ಖ್ಯಾತ ಆರ್ಥಿಕ ವಿಶ್ಲೇಷಕರು, ಈ ಮೊತ್ತ 3,14,000 ಕೋಟಿ ರುಪಾಯಿಗಳಿಗೆ ಹೋಗಿ ತಲುಪಲಿದೆ ಎಂದು ಹೇಳುತ್ತಾರೆ. ಅಂದರೆ ನಮ್ಮ ದೇಶದ ಜಿಡಿಪಿಯ 3 ಪ್ರತಿಶತದಷ್ಟು ಹಣ! ಇದೆಲ್ಲದರ ನಡುವೆ ಈ ಸರ್ಕಾರ ಸಬ್ಸಿಡಿಗಳು, ವಿತರಣೆ ಎಂಬ ಹೆಸರಲ್ಲಿ ದೇಶದ ಆರ್ಥಿಕತೆಗೆ ಹೊಡೆತ ಕೊಡುತ್ತಲೂ ಇದೆ. ಆದರೆ ಈ ಕಾರ್ಯಗಳಿಗೆ ಬಿಡುಗಡೆಯಾಗುವ ಹಣದ ಬಹುಪಾಲು ಗ್ರಾಮಗಳನ್ನು ತಲುಪುವ ಮುನ್ನವೇ ಭ್ರಷ್ಟ ಅಧಿಕಾರಿಗಳ ಕಿಸೆಗೆ ಸೇರಿರುತ್ತದೆ. ಇನ್ನು ಸಾರ್ವಜನಿಕ ವಿತರಣಾ ವ್ಯವಸ್ಥೆಯ ವೇಳೆ 20 ರಿಂದ ಮೂವತ್ತು ಪ್ರತಿಶತ ಆಹಾರ ಅದಾಗಲೇ ಪೋಲಾಗುತ್ತದೆ ಎನ್ನುವುದನ್ನು ಸರ್ಕಾರವೇ ಸಂಸತ್ತಿನಲ್ಲಿ ಒಪ್ಪಿಕೊಂಡಿದೆ.
ರಾಜಕಾರಣಿಗಳು ಒಂದು ಯೋಜನೆಯನ್ನು ಜಾರಿಗೆ ತರುವ ಮುನ್ನ ಅದರ ಆಗುಹೋಗುಗಳನ್ನು, ಉಪಯುಕ್ತತೆಯನ್ನು, ಖರ್ಚನ್ನು, ಅದು ಯಶಸ್ವಿಯಾಗಿ ಅನುಷ್ಠಾನಕ್ಕೆ ಬರಬಹುದೇ ಎಂಬುದನ್ನು, ಬಂದರೆ ಅದರ ನಿರ್ವಹಣೆ ಹೇಗೆ ನಡೆಯುತ್ತದೆ ಎನ್ನುವುದನ್ನು ಯೋಚಿಸುವುದಕ್ಕೇ ಹೋಗುವುದಿಲ್ಲ. ಬಡವರನ್ನು ನಿಜಕ್ಕೂ ಕಾಡುತ್ತಿರುವ ಸಮಸ್ಯೆಯೇನು ಎನ್ನುವುದನ್ನು ಪತ್ತೆಹಚ್ಚಿ ಪರಿಹರಿಸಲು ಮಾತ್ರ ಯಾರೂ ಮುಂದಾಗುತ್ತಿಲ್ಲ. ಇಂದು ಗ್ರಾಮೀಣ ಭಾರತ ಅಪೌಷ್ಠಿಕತೆಯಿಂದ ಸೊರಗಿದೆ. ಸ್ವಚ್ಛ ಕುಡಿಯುವ ನೀರಿಲ್ಲದೆ ಜನ ಬಾಯಿ ಬಾಯಿ ಬಿಡುತ್ತಿದ್ದಾರೆ. ಶೌಚಾಲಯ ವ್ಯವಸ್ಥೆಯಿಲ್ಲದೆ ರೋಗ ರುಜಿನಗಳಿಗೆ ತುತ್ತಾಗುತ್ತಿದ್ದಾರೆ. ಸರಿಯಾದ ಮೂಲಭೂತ ಸೌಕರ್ಯಗಳಿಗಾಗಿ ವರ್ಷಗಳಿಂದ ಸರ್ಕಾರಗಳತ್ತ ಆಸೆಯ ಕಣ್ಣುಗಳಿಂದ ನೋಡುತ್ತಲೇ ಇದ್ದಾರೆ. ಆದರೆ ಇವ್ಯಾವುದೂ ಆಳುವವರ ಗಮನಕ್ಕೆ ಬರುವುದೇ ಇಲ್ಲ. ಅವರಿಗೇನಿದ್ದರೂ ಬಡವರೆಂದರೆ ಮತ ಬ್ಯಾಂಕ್ಗಳಾಗಿಯಷ್ಟೇ ಕಾಣಿಸುತ್ತಾರೆ.
ಆಹಾರ ಯೋಜನೆಗಳನ್ನು ಹೇಗೆ ಯಶಸ್ವಿಯಾಗಿ ಜಾರಿ ಮಾಡಬಹುದೆಂಬುದಕ್ಕೆ ಛತ್ತೀಸ್ಗಡ ರಾಜ್ಯ ಮಾದರಿಯಾಗಿ ನಿಲ್ಲುತ್ತದೆ. ಅಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆಯ ರೇಷನ್ ಅಂಗಡಿಗಳ ಮೇಲಿನ ನಿರ್ವಹಣೆಯನ್ನು ಖಾಸಗಿ ವ್ಯಕ್ತಿಗಳಿಂದ, ಸಮುದಾಯ ಆಧರಿತ ಸಂಸ್ಥೆಗಳಾದ ಗ್ರಾಮ ಪಂಚಾಯಿತಿ, ಮಹಿಳಾ ಸ್ವ ಸಹಾಯ ಸಂಘಗಳು ಮತ್ತು ಕೋ- ಆಪರೇಟಿವ್ ಮಂಡಳಿಗಳಿಗೆ ನೀಡಲಾಯಿತು. "ನಾವು ಪ್ರತಿ ತಿಂಗಳ ಮೊದಲ ವಾರದಂದು ಎಲ್ಲಾ ರೇಷನ್ ಅಂಗಡಿಗಳ ಮುಂದೆ 'ಅಕ್ಕಿ ಉತ್ಸವ' ನಡೆಸುತ್ತೇವೆ. ಇದರಿಂದಾಗಿ ಹಿಂದಿನ ತಿಂಗಳ ಕೊನೆಯ ದಿನದಂದು ಎಲ್ಲಾ ಅಂಗಡಿಗಳಲ್ಲೂ ಸಮೃದ್ಧವಾಗಿ ಧಾನ್ಯಗಳ ಸಂಗ್ರಹವಾಗಿದೆಯೋ ಇಲ್ಲವೋ ಎನ್ನುವುದು ನಮಗೆ ಗೊತ್ತಾಗುತ್ತದೆ' ಎಂದು ಹೇಳುತ್ತಾರೆ ಆ ರಾಜ್ಯದ ಮುಖ್ಯಮಂತ್ರಿ ರಮಣ್ ಸಿಂಗ್. ಆಹಾರ ಪದಾರ್ಥಗಳನ್ನು ನೇರವಾಗಿ ಅಂಗಡಿಗಳಿಗೆ ತಲುಪಿಸಲಾಗುವುದರಿಂದ ಸೋರಿಕೆ ಕಡಿಮೆಯಾಗುತ್ತದೆ. ಆದರೆ ಛತ್ತೀಸ್ಗಡ ಸರ್ಕಾರ ಈ ನೀತಿಯನ್ನು ಅಳವಡಿಸಿಕೊಂಡಿದ್ದು ಆರ್ಥಿಕ ಬದಲಾವಣೆಗಾಗಿನ ವಿಶಾಲ ದೃಷ್ಟಿಕೋನದ ಭಾಗವಾಗಿಯೇ ಹೊರತು, ಸೋನಿಯಾರಂತೆ ಆರ್ಥಿಕ ಪರಿಸ್ಥಿತಿಯನ್ನು ಕಡೆಗಣಿಸಿ ಅಲ್ಲ. ಸೋನಿಯಾ ಗಾಂಧಿಯವರು ಆಹಾರ ಭದ್ರತಾ ಮಸೂದೆಯನ್ನು ಅವರ ಪತಿ ದಿ. ರಾಜೀವ್ ಗಾಂಧಿಯವರ ಹುಟ್ಟು ಹಬ್ಬದ ದಿನ ಜಾರಿ ಮಾಡಿದರು. ಆದರೆ ರಾಜೀವ್ ಗಾಂಧಿ, ಪ್ರಧಾನಿಯಾಗಿದ್ದಾಗ ಹೆಚ್ಚು ಒತ್ತುಕೊಟ್ಟದ್ದು ರಚನಾತ್ಮಕ ಆರ್ಥಿಕ ಬೆಳವಣಿಗೆಯ ನೀತಿಗಳಿಗೆ ಎನ್ನುವುದನ್ನು ಸೋನಿಯಾ ಮರೆತಂತಿದೆ. ಹಾಗಾಗೇ ಈ ಯೋಜನೆಯನ್ನು ರಾಜೀವ್ರಿಗೆ ಅರ್ಪಿಸುವುದರಲ್ಲಿ ಅರ್ಥವಿಲ್ಲ. ಬಹುಶಃ ರಾಜೀವ್ ಇದ್ದರೆ ಇದನ್ನು ಒಪ್ಪುತ್ತಿದ್ದರೋ, ಇಲ್ಲವೋ!?
- ಜಾನ್ ಎಲಿಯಟ್