ರೈತರ ಉತ್ಪನ್ನಗಳಿಗೆ ಬೆಲೆ ನಿಗದಿ ಯಾಕಿಲ್ಲ?
ಯಾವುದೇ ವಸ್ತು ಖರೀದಿಸಲು ಮಾರುಕಟ್ಟೆಗೆ ತೆರಳಿ, ಅದರ ದರ ಮೊದಲೇ ನಿಗದಿಯಾಗಿರುತ್ತದೆ. ಶಾಲಾ ಶುಲ್ಕವೇ ಆಗಲಿ, ಆಸ್ಪತ್ರೆಯ ಶುಲ್ಕವೇ ಆಗಲಿ, ಕಬ್ಬಿಣದ ಬೆಲೆಯಾಗಲಿ, ಸಿಮೆಂಟಿನ ಬೆಲೆಯಾಗಲಿ, ಸ್ಕೂಟರ್ನ ಬೆಲೆಯಾಗಲಿ, ರಸ್ತೆ ಬದಿಯಲ್ಲಿ ಮಾರಾಟವಾಗುವ ಮಕ್ಕಳ ಆಟಿಕೆಯಾಗಲಿ, ಗೋಬಿ ಮಂಚೂರಿಯಾಗಲಿ, ಬೆಂಕಿಪೊಟ್ಟಣದಿಂದ, ಕರ್ಪೂರದವರೆಗೆ ಸರ್ಕಾರ ಮಾರಾಟ ಮಾಡುವ, ಖಾಸಗಿಯವರು ಮಾರಾಟ ಮಾಡುವ ವಸ್ತುಗಳ ದರ ಅವರವರ ಸ್ವಹಿತಾಸಕ್ತಿಗೆ ಅನುಗುಣವಾಗಿ ನಿಗದಿಯಾಗಿರುತ್ತದೆ. ಕ್ರಿಕೆಟ್ ಆಟಗಾರರ ಭತ್ಯೆ ಮತ್ತು ಸವಲತ್ತುಗಳಿಂದ ಹಿಡಿದು ಸರ್ಕಾರದ ಕಟ್ಟ ಕಡೆಯ ವ್ಯಕ್ತಿಯವರೆಗೆ ಅವರವರ ಅರ್ಹತೆಗೆ ಅನುಗುಣವಾಗಿ ಸಂಬಳ, ಇತರೆ ಭತ್ಯೆಗಳು, ನಿರ್ಧರಿಸಿರುತ್ತವೆ. ಆದರೆ ರೈತ ಬೆಳೆದ ಯಾವುದೇ ಬೆಳೆಗೆ ದರ ನಿರ್ಧರಿಸಲು ಸಾಧ್ಯವಾಗುತ್ತಿಲ್ಲ ಏಕೆ?
ಮಾನವ ಸಂಕುಲಕ್ಕೆ ಅನ್ನ ನೀಡುವ ರೈತನಿಗೆ ಅರ್ಹತೆ ಇಲ್ಲವೇ ಅಥವಾ ಅವನ ಶ್ರಮಕ್ಕೆ ಬೆಲೆ ಇಲ್ಲವೇ? ವರ್ಷಪೂರ್ತಿ ಬಂಡವಾಳ ಹೂಡಿ, ನೈಸರ್ಗಿಕ ವಿಕೋಪಗಳಿಂದ ಬೆಳೆಯನ್ನು ಸಂರಕ್ಷಿಸಿ (ಯಾವುದೇ ಜೀವ ವಿಮೆ ಇರುವುದಿಲ್ಲ), ಸರ್ಕಾರದಿಂದ ಮತ್ತು ಖಾಸಗಿಯವರಿಂದ ಸಾಲ ಪಡೆದು ಬಡ್ಡಿ ಕಟ್ಟಿ ಬೆಳೆದ ಬೆಳೆಗೆ ದರ ನಿಗದಿಯಾಗುತ್ತಿಲ್ಲ ಎಂದರೆ ಆಶ್ಚರ್ಯವಾದರೂ ಸತ್ಯ. ಬೆಲೆ ನಿಗದಿಯಾದರೂ ಅದು ಖಾಸಗಿಯವರ ನಿರ್ಧಾರದಂತೆ ನಡೆಯುತ್ತದೆ. ಅದೂ ಕೂಡ ರೈತನ ಬೆಳೆ ತನ್ನ ಸತ್ವವನ್ನು ಕಳೆದುಕೊಳ್ಳಲು ಪ್ರಾರಂಭಿಸಿದಾಗ. ಕಬ್ಬು ಬೆಳೆಯಲು ಸುಮಾರು 11 ರಿಂದ 13 ತಿಂಗಳ ಸಮಯ ಬೇಕಾಗುತ್ತದೆ. ತದನಂತರ ಸರ್ಕಾರ ಮತ್ತು ಖಾಸಗಿಯವರ ಹಗ್ಗ ಜಗ್ಗಾಟದಲ್ಲಿ ಮೂರ್ನಾಲ್ಕು ತಿಂಗಳು ಕಾಲ ವ್ಯಯ ಮಾಡಿ ರೈತರಿಗೆ ಅಲ್ಲೂ ಅನ್ಯಾಯವಾಗುತ್ತದೆ. ರೈತ ತಾನು ಬೆಳೆದ ಕಬ್ಬನ್ನು ಕಟಾವು ಮಾಡಿ, ಸಾಗಣೆ ಮಾಡಿ ಕಾರ್ಖಾನೆಗಳಿಗೆ ಸಾಗಿಸಿದ ನಂತರ ತಿಂಗಳುಗಟ್ಟಲೇ ಕಾದು, ಕಾರ್ಖಾನೆಯವರು ಕಂತಿನ ರೂಪದಲ್ಲಿ ದಾನ ನೀಡುವಂತೆ ನೀಡುವ ಹಣಕ್ಕಾಗಿ ಚಾತಕ ಪಕ್ಷಿಯಂತೆ ಕಾಯುವುದು ಇತ್ತೀಚಿನ ವರ್ಷಗಳಲ್ಲಿ ಸಾಮಾನ್ಯವಾಗಿದೆ. ಕಾರ್ಖಾನೆಯವರಾಗಲಿ ಅಥವಾ ಸರ್ಕಾರವಾಗಲಿ, ರೈತನ ಹಣಕ್ಕೆ ಈ ಅವಧಿಯಲ್ಲಿ ಬಡ್ಡಿ ನೀಡುತ್ತಾರೆಯೇ? ಆದರೆ ಅದೇ ರೈತ ಈ ಅವಧಿಯಲ್ಲಿ ಸರ್ಕಾರದಿಂದ ಪಡೆದ ಸಾಲಕ್ಕೆ ಮತ್ತೆ ಖಾಸಗಿಯಾಗಿ ಪಡೆದ ಸಾಲಕ್ಕೆ ಬಡ್ಡಿ ನೀಡಬೇಕಲ್ಲವೇ?
ರೈತನಿಗೆ ಅವಶ್ಯಕವಾದ ವಸ್ತುಗಳನ್ನು ಬಡ್ಡಿ ಇಲ್ಲದೆ ಅಥವಾ ರೈತ ನೀಡಿದಂತೆ ಯಾವುದೇ ಅಪೇಕ್ಷೆ ಇಲ್ಲದೇ ಸರ್ಕಾರವಾಗಲಿ, ಖಾಸಗಿಯವರಾಗಲಿ ನೀಡುತ್ತಾರೆಯೇ? ರೈತರ ಮಕ್ಕಳಿಗೆ ಶುಲ್ಕ ಕಟ್ಟಲು ಸರ್ಕಾರವಾಗಲಿ, ಖಾಸಗಿಯವರಾಗಲಿ ಅವಧಿ ಮೀರಿದ ನಂತರ ಅನುಮತಿ ನೀಡುತ್ತಾರೆಯೇ? ಸರ್ಕಾರಕ್ಕೆ ಯಾವುದೇ ಅರ್ಜಿ ಸಲ್ಲಿಸಬೇಕಾದರೂ ಇಂತಿಷ್ಟು ಅವಧಿಯೊಳಗೆ ಇಂತಿಷ್ಟು ಶುಲ್ಕವನ್ನು ನೀಡಬೇಕೆಂದು ನಿಗದಿಪಡಿಸಿದಾಗ ರೈತರ ಮಕ್ಕಳಿಗೆ ವಿನಾಯತಿ ನೀಡುತ್ತಾರೆಯೇ? ರೈತ ಹಣ ತರುವುದಾದರೂ ಎಲ್ಲಿಂದ?
ಉಳಿದೆಲ್ಲವಕ್ಕೂ ದರ ನಿಗದಿಪಡಿಸುವ ಸರ್ಕಾರ ರೈತರ ಬೆಳೆಗೆ ಬೆಲೆ ನಿಗದಿಪಡಿಸಲು ವರ್ಷ ವರ್ಷವೂ ಈ ನಾಟಕವಾಡಲು ಕಾರಣವಾದರೂ ಏನು? ಇಲ್ಲಿಯವರೆಗೆ ಯಾವುದೇ ಕಾರ್ಖಾನೆ ಮಾಲೀಕನಾಗಲಿ, ಖಾಸಗಿ ಸಂಸ್ಥೆಯ ಮಾಲೀಕರಾಗಲಿ ಆತ್ಮಹತ್ಯೆ ಮಾಡಿಕೊಂಡಿರುವ ಉದಾಹರಣೆಗಳುಂಟೆ? ಶ್ರೀಸಾಮಾನ್ಯರು ಕೂಡ ವೈದ್ಯರು, ಇಂಜಿನಿಯರ್ ಆಗಲು ಬಯಸುತ್ತಾರೆಯೇ ಹೊರತು, ರೈತರಾಗಲು ಯಾರೂ ಬಯಸುವುದಿಲ್ಲ. ರೈತರು ತಮ್ಮ ಮಕ್ಕಳು ರೈತರಾಗದಿರಲೆಂದು ಬಯಸುತ್ತಿರುವುದೇಕೆ? ಹಳ್ಳಿಗಳಿಂದ ಜನರು ಪಟ್ಟಣಗಳಿಗೆ ಗುಳೆ ಹೊಗುತ್ತಿರುವುದೇಕೆ? ಬುದ್ದಿಜೀವಿಗಳೆನಿಸಿಕೊಂಡವರು, ಪ್ರಗತಿಪರರು ರೈತರ ಬಗ್ಗೆ ಸೊಲ್ಲೆತ್ತದಿರುವುದು ಏತಕ್ಕೆ? ಪ್ರಚಾರ ದೊರೆಯುವುದಿಲ್ಲವೆಂದೇ?
ರೈತರಾಗಿ ಹುಟ್ಟಿ ಬೆಳೆದು ದೊಡ್ಡ ಸ್ಥಾನ ತಲುಪಿದ ನಂತರ ರೈತನ ಉದ್ಧಾರಕ್ಕೆ ರಾಜಕಾರಣಿಗಳು ಪ್ರಯತ್ನಿಸದಿರುವುದಾದರೂ ಏಕೆ?
ಪ್ರತಿಯೊಂದಕ್ಕೂ ದರ ನಿಗದಿಪಡಿಸಲು ವೈಜ್ಞಾನಿಕ ಪದ್ಧತಿಯನ್ನು ಅಳವಡಿಸುವಾಗ ರೈತ ಬೆಳೆದ ಬೆಳೆಗೆ ದರ ನಿಗದಿಪಡಿಸಲು ನಮ್ಮಲ್ಲಿ ಮಾನವ ಸಂಪನ್ಮೂಲದ ಕೊರತೆಯೇ ಅಥವಾ ಸ್ವಹಿತಾಸಕ್ತಿಯೇ? ಇದೆಲ್ಲಕ್ಕೂ ಉತ್ತರವೆಂಬಂತೆ ಅಸಂಘಟಿತ ರೈತ ವರ್ಗವೇ ಎಲ್ಲಿಯವರೆಗೆ ಮೂಲ ಗ್ರಾಮೀಣ ಹಿನ್ನೆಲೆಯಿಂದ ಬಂದವರು (ರಾಜಕಾರಣಿಗಳು / ಅಧಿಕಾರಿಗಳು) ರೈತರ ಬದುಕಿನ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಿಲ್ಲವೋ ಅಲ್ಲಿಯವರೆಗೆ ರೈತರ ಆತ್ಮಹತ್ಯೆಗಳು ನಡೆಯುತ್ತಲೇ ಇರುತ್ತವೆ.
- ಕೆ. ವಿ. ಮನೋಹರ, ಬಳ್ಳಾರಿ