ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಅವೈಜ್ಞಾನಿಕ ಎತ್ತಿನಹೊಳೆ ಯೋಜನೆಗೆ ಪರ್ಯಾಯವೇನು?

Mainashree
Updated On : 3 Oct 2013, 11:53 am

ಬೆಂಗಳೂರು ಹಾಗು ಸುತ್ತಮುತ್ತಲಿನ ಬರಪೀಡಿತ ಜಿಲ್ಲೆಗಳಿಗೆ ಕುಡಿಯುವ ನೀರು ಹಾಗು ಅಂತರ್ಜಲ ಸಮಸ್ಯೆಯನ್ನು ನಿವಾರಿಸುವ ಸಲುವಾಗಿ ಪ್ರಸ್ತುತ ಸರ್ಕಾರದ ಮುಂದೆ ಮೂರು ಯೋಜನೆಗಳ ವರದಿಗಳಿವೆ. ಪರಮಶಿವಯ್ಯ ವರದಿ ಹಾಗೂ ಎತ್ತಿನಹೊಳೆ ಯೋಜನೆ ನೇತ್ರಾವತಿ ನದಿಯ ಪಾತ್ರದಿಂದ ನೀರು ತರುವುದರ ಬಗ್ಗೆ ಪ್ರಸ್ತಾಪಿಸಿದರೆ, ಡಾ.ಮಧುಸೀತಪ್ಪನವರ ವರದಿ ಶರಾವತಿ-ಅಘನಾಶಿನಿ ನದಿ ಪಾತ್ರದಿಂದ ನೀರು ಪೂರೈಸುವುದರ ಬಗ್ಗೆ ಪ್ರಸ್ತಾಪಿಸಿದೆ. ನಾನು ಈ ಲೇಖನದಲ್ಲಿ ಈ ಮೂರು ಯೋಜನೆಗಳನ್ನು ತಾಂತ್ರಿಕ ದೃಷ್ಟಿಯಿಂದ ಮಾತ್ರ ವಿಮರ್ಶಿಸುತ್ತೇನೆ. ಪರಮಶಿವಯ್ಯನವರ ವರದಿಯನ್ನು ಯಥಾವತ್ತಾಗಿ ಅನುಷ್ಠಾನ ಮಾಡಲು ಸಾಧ್ಯವಿಲ್ಲ ಎಂದು ಅರಿತಿರುವ ಸರ್ಕಾರ, ಎತ್ತಿನಹೊಳೆ ಅಲ್ಪಾವಧಿ ಯೋಜನೆ ಹಾಗೂ ಪರಮಶಿವಯ್ಯನವರ ವರದಿ ದೀರ್ಘಕಾಲಿಕ ಯೋಜನೆಯೆಂದು ಬರಪೀಡಿತ ಜಿಲ್ಲೆಗಳ ಜನತೆಗೆ ಸುಳ್ಳು ಆಶ್ವಾಸನೆ ಕೊಡುತ್ತಾ ಬಂದಿದ್ದಾರೆ. ತಾಂತ್ರಿಕ ದೃಷ್ಟಿಯಲ್ಲಿ ಈ ಎರಡು ಯೋಜನೆಗಳು ಅಸಮರ್ಪಕ.  
ಪರಮಶಿವಯ್ಯನವರ ವರದಿ ಜಾರಿ ಮಾಡಬೇಕಾದಲ್ಲಿ ಪಶ್ಚಿಮ ಘಟ್ಟಗಳ ಇಳಿಜಾರಿನಲ್ಲಿ ನೂರಾರು ಕಿಮಿ ಉದ್ದದ ಕಾಲುವೆ ನಿರ್ಮಿಸಬೇಕಾಗುತ್ತದೆ. ಪಶ್ಚಿಮ ಘಟ್ಟಗಳ ಪಶ್ಚಿಮ ಇಳಿಜಾರು ಸಾಮಾನ್ಯವಾಗಿ 45 ಡಿಗ್ರಿಗಳಿಂದ ಕೆಲವು ಭಾಗಗಳಲ್ಲಿ 70 ಡಿಗ್ರಿಗಳವರೆಗೆ ಇದೆಯೆಂಬುದನ್ನು ಗಮನಿಸಬೇಕು. ಈ ಪ್ರದೇಶದ ಭೂ ಸ್ತರದಲ್ಲಿ ಗಡಸು ಶಿಲೆಗಳು ಮೇಲಿನ ಮೇಲ್ಮೈನಲ್ಲಿರುವುದರಿಂದ ಗಾರ್ಲೆಂಡ್ ಅಥವಾ ಮಾಲಾ ಕಾಲುವೆಗಾಗಿ 20 ಮೀ.ಆಳ ಮತ್ತು ಸುಮಾರು 3 ಮೀ. ನೀರಿನ ಹರಿವೆಗೆ ಶಿಲೆಯನ್ನು ಬ್ಲಾಸ್ಟ್ ಮಾಡಬೇಕಾಗಬಹುದು. ಇದರಿಂದಾಗಿ ಸ್ಥಿರ ಶಿಲಾ ಪದರದಲ್ಲಿ ಬಿರುಕುಗಳುಂಟಾಗಿ ಇಳಿಜಾರಿನಲ್ಲಿ ಬೃಹತ್ ಪ್ರಮಾಣದಲ್ಲಿ ಅಸ್ಥಿರತೆ ಉಂಟಾಗಬಹುದು ಹಾಗೂ ಇದರ ಪರಿಣಾಮಗಳನ್ನು ಪ್ರಸ್ತುತ ಅಂದಾಜು ಮಾಡಲಾಗದು. ಕಾಲುವೆಯ ಗುಡ್ಡಗಳ ಕಡೆಗೆ ಇಳಿಜಾರಿನಲ್ಲಿ 30 ಮೀ.ಗಿಂತ ಹೆಚ್ಚಿನ ತಡೆಗೋಡೆ ನಿರ್ಮಿಸುವುದು ಅಸಾಧ್ಯವಲ್ಲದಿದ್ದರೂ ತುಂಬಾ ಕಷ್ಟಕರವಾದ ಕೆಲಸ. ಸಮುದ್ರ ಮಟ್ಟಕ್ಕಿಂತ 930 ಮೀಟರುಗಳ ಎತ್ತರ ಹಾಗೂ 70ಡಿಗ್ರಿ ಇಳಿಜಾರಿನಲ್ಲಿ ಮಾಲಾಕಾಲುವೆಗೆ ಕಾಮಗಾರಿ ಕೈಗೊಳ್ಳುವುದು ಅಸಾಧ್ಯದ ಕೆಲಸ. ಎತ್ತಿನಹೊಳೆ ಯೋಜನೆಯಲ್ಲಿ ನೇತ್ರಾವತಿಯ ಉಪನದಿಗಳಾದ ಎತ್ತಿನಹೊಳೆ, ಹೊಂಗದಹೊಳೆ, ಕೇರಿ ಹೊಳೆ, ಕಾಡುಮನೆಹೊಳೆ ಅಡ್ಡಲಾಗಿ ಸಮುದ್ರ ಮಟ್ಟಕ್ಕಿಂತ 800 ಮೀಟರುಗಳು ಹಾಗೂ 750 ಮೀಟರುಗಳ ಎತ್ತರದಲ್ಲಿ ಈ ಹೊಳೆಗಳ ಅಡ್ಡಲಾಗಿ 8 ಚೆಕ್ ಡ್ಯಾಮಗಳನ್ನು ನಿರ್ಮಿಸಿ, ಸಂಗ್ರಹಿಸಿದ ನೀರನ್ನು 960 ಮೀಟರುಗಳ ಎತ್ತರಕ್ಕೆ ಪಂಪ್ ಮಾಡಿ ಪಶ್ಚಿಮಘಟ್ಟಗಳ ಶಿಖರದ ತುದಿ ಏರಿ ಹರವನಹಳ್ಳಿಯ ಬ್ಯಾಲೆನ್ಸಿಂಗ್ ಚೇಂಬರ್‌ಗೆ ಹಾಕಿ ಅಲ್ಲಿಂದ ಪೂರ್ವಕ್ಕೆ ಸಾಗಿಸುವುದು.
ಈ ಎತ್ತಿನಹೊಳೆ ಯೋಜನೆಯಿಂದ ಎತ್ತಿನ ಗಂಜಲದಷ್ಟು ನೀರು ಸಹ ಈ ಬರಪೀಡಿತ ಜಿಲ್ಲೆಗಳ ಜನರಿಗೆ ದೊರಕುತ್ತದೆ ಎಂಬ ಭರವಸೆ ನನಗಿಲ್ಲ. ಏಕೆಂದರೆ ನೀರಿನ ಪ್ರಮಾಣವನ್ನು ಅವೈಜ್ಞಾನಿಕವಾಗಿ ಲೆಕ್ಕಹಾಕಲಾಗಿದೆ. ಈ ಯೋಜನೆಯಲ್ಲಿ ಬರುವ ಯಾವುದೆ ಹೊಳೆಗಳಲ್ಲಿ ನದಿಯ ನೀರಿನ ಮಾಪನಗಳಿಲ್ಲದೆಯಿರುವುದರಿಂದ, ನೀರಿನ ಲಭ್ಯತೆಯನ್ನು ಪ್ರತಿ ಗಂಟೆ, ಪ್ರತಿ ದಿನ ಹಾಗೂ ಪ್ರತಿ ತಿಂಗಳಲ್ಲಾಗುವ ಮಳೆಯ ಮೂಲಕ ಕಂಡು ಹಿಡಿಯಬೇಕಾಗುತ್ತದೆ.  ಖಾಸಗಿ ಕಾಫಿ ಎಸ್ಟೇಟಿನಲ್ಲಿರುವ ಮಳೆಯ ಮಾಪನದ ರೀಡಿಂಗನ್ನು ಪರಿಗಣನೆಗೆ ತೆಗೆದುಕೊಂಡು ದೂರದಲ್ಲಿರುವ ಬಂಟ್ವಾಳದ ಹವಾಮಾನ ಇಲಾಖೆಯ ಮಳೆಯ ಮಾಪನಗಳ ರೀಡಿಂಗ್‌ಗೆ ಹೋಲಿಸಿ ನೀರಿನ ಲಭ್ಯತೆಯನ್ನು ಕಂಡು ಹಿಡಿದಿರುವುದು ಅವೈಜ್ಞಾನಿಕ. ಖಾಸಗಿ ಮಾಪನಗಳ ಗುಣಮಟ್ಟವನ್ನು ಪರೀಕ್ಷಿಸದೆ ಈ ಜಲಾಯನ ಪ್ರದೇಶದಲ್ಲಿ ವಾರ್ಷಿಕ 6250ಮಿಮಿ ಮಳೆಯಾಗುತ್ತದೆ ಎಂಬ ನಿರ್ಣಯಕ್ಕೆ ಬಂದಿದ್ದಾರೆ. ಎತ್ತಿನಹೊಳೆ ಯೋಜನೆಯ ಎಲ್ಲಾ ಹೊಳೆಗಳು ಕೆಂಪು ಹೊಳೆಗೆ 350ಮಿ(ಸಮುದ್ರ ಮಟ್ಟಕ್ಕಿಂತ) ಎತ್ತರದಲ್ಲಿ ಸೇರುತ್ತದೆ. ಈ ಜಾಗದಲ್ಲಿ ಕಳೆದ 10 ವರ್ಷಗಳಿಂದ ಐ.ಪಿ.ಸಿ.ಎಲ್. ಎಂಬ ಖಾಸಗಿ ಸಂಸ್ಥೆ 70ಮೆವ್ಯಾಟನ್ ಜಲವಿದ್ಯುತ್ ಘಟಕವನ್ನು ನಡೆಸುತ್ತಿದೆ. ಇಲ್ಲಿ ಪ್ರತಿವರ್ಷ 200 ಮಿಲಿಯನ್ ಯೂನಿಟ್ ವಿದ್ಯುತ್ತನ್ನು ಉತ್ಪಾದಿಸಿ ಕೆ.ಪಿ.ಟಿ.ಸಿ.ಎಲ್‌ಗೆ ಮಾರಾಟ ಮಾಡುತ್ತಿದೆ. ಈ ಜಾಗದಲ್ಲಿ ಕೆಂಪು ಹೊಳೆಗೆ ಅಡ್ಡಲಾಗಿ ಡ್ಯಾಂ ನಿರ್ಮಿಸಲಾಗಿದೆ. ಈ ಘಟಕದಲ್ಲಿ ಪ್ರತಿ ಗಂಟೆಗೆ ಬರುವ ಒಳಹರಿವಿನ ಅಂಕಿ ಅಂಶಗಳಿವೆ. 200 ಮಿಲಿಯನ್ ಯೂನಿಟ್ ವಿದ್ಯುತ್ತನ್ನು ಉತ್ಪಾದಿಸಲು 16.55 ಟಿಎಂಸಿ ನೀರು ಬೇಕಾಗುತ್ತದೆ. ಪ್ರವಾಹ ಬಂದರೆ ಈ ಡ್ಯಾಂನ ಗೇಟುಗಳನ್ನು ತೆಗೆಯುತ್ತಾರೆ. ವರ್ಷಕ್ಕೆ ಸರಾಸರಿ ಶೇ.30 ಮಳೆಯ ನೀರು ಪ್ರವಾಹದಲ್ಲಿ ಬರಬಹುದು. ಅಂದರೆ ಈ ಡ್ಯಾಂ ಮೂಲಕ ಹಾದು ಹೋಗುವ ನೀರಿನ ಪ್ರಮಾಣ 21 ಟಿಎಂಸಿ ಗಿಂತ ಹೆಚ್ಚಿಲ್ಲ. ಸಮುದ್ರ ಮಟ್ಟಕ್ಕಿಂತ 350ಮೀಟರುಗಳ ಎತ್ತರದಲ್ಲೇ 21 ಟಿಎಂಸಿ ನೀರಿದ್ದರೆ 750 ಮಿಟರುಗಳ ಎತ್ತರದಲ್ಲಿ 24 ಟಿಎಂಸಿ ನೀರು ಲಭ್ಯವಿರುವುದು ಸಾಧ್ಯವಿಲ್ಲ. ಯೋಜನೆಯನ್ನು ರೂಪಿಸಿದ ತಜ್ಞರು ಡ್ಯಾಂ ನ ಅಂಕಿ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳದೆ ಇರುವುದು ಆಶ್ಚರ್ಯ.
ಸಕಲೇಶಪುರದಿಂದ ತುಮಕೂರು ಮಾರ್ಗವಾಗಿ ಸೇವಾ ಕಾಲುವೆಯು ಬರಪೀಡಿತ ಜಿಲ್ಲೆಗಳಿಗೆ ತಲುಪಬೇಕಾದಲ್ಲಿ ಗುಬ್ಬಿ ಬಳಿಯಿರುವ ಸ್ಯಾಡಲ್ ದಾಟಬೇಕು. ಸ್ಯಾಡಲ್ ಅಂದರೆ ತಗ್ಗು ಪ್ರದೇಶ. ನಿರ್ದಿಷ್ಟ ಎತ್ತರದಲ್ಲಿ ಗುರತ್ವಾಕರ್ಷಣೆಯ ಮೂಲಕ ಸಾಗಬೇಕಾದ ಸೇವಾ ಕಾಲುವೆ ಗುಬ್ಬಿ ಬಳಿಯಿರುವ 100 ಮೀಟರುಗಳ ತಗ್ಗು ಪ್ರದೇಶವನ್ನು ದಾಟಲೇ ಬೇಕು. ಒಮ್ಮೆ ನೀರು ಕೆಳಗಿಳಿದರೆ ಮತ್ತೇ ಆ ನೀರನ್ನು 100 ಮೀಟರುಗಳ ಎತ್ತರಕ್ಕೆ ಪಂಪ್ ಮೂಲಕ ಎತ್ತಬೇಕಾಗುತ್ತದೆ. ಅಂದರೆ 100 ಮೆಗಾವ್ಯಾಟ್ ಹೆಚ್ಚು ವಿದ್ಯುತ್ ಬೇಕಾಗುತ್ತದೆ. ಎತ್ತಿನಹೊಳೆ ವರದಿಯಲ್ಲಿ ನೀರು ಕೆಳಗಿಳಿಯುವ ಲಾಭ ಪಡೆದು 120 ಮೆಗಾವ್ಯಾಟ್ ಉತ್ಪಾದನೆ ಮಾಡ ಬಹುದು ಎಂದು ಹೇಳಿದ್ದಾರೆ. ಇದರಿಂದ ಯೋಜನೆಗೆ ಬೇಕಾಗುವ 350 ಮೆಗಾವ್ಯಾಟ್‌ಗಳ ಬದಲು ಕೇವಲ ಒಟ್ಟು 230 ಮೆಗಾವ್ಯಾಟುಗಳು ಸಾಕು ಎಂದಿದ್ದಾರೆ. ನಿಜ, ತಗ್ಗು ಪ್ರದೇಶಕ್ಕೆ ಇಳಿಯುವಾಗ ವಿದ್ಯುತ್ ಉತ್ಪಾದಿಸಬಹುದು, ಆದರೆ ಬರಪೀಡಿತ ಜಿಲ್ಲೆಗಳಿಗೆ ನೀರು ತಲುಪಬೇಕಾದರೆ ನೀರು ತಗ್ಗು ಪ್ರದೇಶದಿಂದ ಮತ್ತೇ 100 ಮೀಟರುಗಳ ಎತ್ತರಕ್ಕೆ ಬರಲೇ ಬೇಕು. ಆದುದುರಿಂದ ವಿದ್ಯುತ್‌ನಲ್ಲಿ ಯಾವುದೇ ಉಳಿತಾಯವಾಗುವುದಿಲ್ಲ. ಎತ್ತಿನಹೊಳೆ ಯೋಜನೆಯಲ್ಲಿ ಬರುವ ಹೊಳೆಗಳಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ಖಾಸಗಿ ಜಲವಿದ್ಯುತ್ ಸ್ಥಾವರಗಳಿಂದ ಒಟ್ಟು 160 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಈ ಯೋಜನೆ ಅನುಷ್ಠಾನವಾದಲ್ಲಿ ಈ 160ಮೆಗಾವ್ಯಾಟ್‌ನ ಈ ಸ್ಥಾವರಗಳನ್ನು ಮುಚ್ಚಬೇಕಾಗುತ್ತದೆ. ಇಷ್ಟೆಲ್ಲಾ ಸರ್ಕಸ್ ಮಾಡಿದರೂ 10,000 ಕೋಟಿ ರುಪಾಯಿಗಳ ಈ ಯೋಜನೆಯಿಂದ 8ಟಿಎಂಸಿ ಗಿಂತ ಹೆಚ್ಚು ನೀರು ಸಿಗುವುದಿಲ್ಲ. ಅಂದರೆ ಪ್ರತಿ ಟಿಎಂಸಿ ನೀರಿಗೆ 1250 ಕೋಟಿ ರುಪಾಯಿಗಳು.
ಡಾ.ಮಧುಸೀತಪ್ಪನವರು ಸಲ್ಲಿಸಿರುವ ಇನ್ನೊಂದು ವರದಿಯ ಮುಖ್ಯಾಂಶಗಳು: ಯಾವುದೇ ಹೊಸ ಸರೋವರವರಗಳನ್ನು ನಿರ್ಮಿಸದೇ, ಅರಣ್ಯ ನಾಶ ಮಾಡದೆ, ಪರಿಸರಕ್ಕೆ ಹಾಗೂ ವಿದ್ಯುತ್‌ಗೆ ತೊಂದರೆಯಾಗದೆ 50 ಟಿಎಂಸಿ ಯಷ್ಟು ನೀರನ್ನು ಪ್ರತಿ ವರ್ಷ 27 ಬರಪೀಡಿತ ತಾಲೂಕುಗಳು ಹಾಗೂ ಬೆಂಗಳೂರಿಗೆ ಹರಿಸುವುದು. ಶರಾವತಿ, ಅಘನಾಶಿನಿ ಹಾಗೂ ಭೇಡ್ತಿ ನದಿಗಳಿಂದ ಪ್ರತಿ ವರ್ಷ 550 ಟಿಎಂಸಿ ಯಷ್ಟು ನೀರು ಅರಬ್ಬಿ ಸಮುದ್ರ ಸೇರುತ್ತಿದೆ. ಲಿಂಗನಮಕ್ಕಿ ಜಲಾಶಯದಿಂದ ಪ್ರತಿ ವರ್ಷ ಸರಾಸರಿ 180 ಟಿಎಂಸಿ ಯಷ್ಟು ನೀರು, ವಿದ್ಯುತ್ ಉತ್ಪಾದನೆಯಾದ ನಂತರ ಸಮುದ್ರ ಸೇರುತ್ತಿದೆ. ಲಿಂಗನಮಕ್ಕಿ ನೀರು ವಿದ್ಯುತ್ ಉತ್ಪಾದನೆ ಬಿಟ್ಟರೆ ಕುಡಿಯುವುದಕ್ಕೆ ಅಥವಾ ನೀರಾವರಿಗಾಗಲಿ ಬಳಕೆಯಾಗುತ್ತಿಲ್ಲ. ಆದರೆ ಲಿಂಗನಮಕ್ಕಿಗೆ ಹತ್ತಿರದಲ್ಲೇ ಇರುವ ಆಘನಾಶಿನಿ ನದಿಯ 160 ಟಿಎಂಸಿ ನೀರು ಹಾಗೂ ಭೇಡ್ತಿ ನದಿಯ 180 ಟಿಎಂಸಿ ನೀರು ಸಮುದ್ರ ಸೇರುತ್ತಿದೆ. ಅಘನಾಶಿನಿ ನದಿಯಿಂದ 35ಟಿಎಂಸಿ ಯಷ್ಟು ನೀರನ್ನು ಲಿಂಗನಮಕ್ಕಿ ಜಲಾಶಯದಲ್ಲಿ ಸಂಗ್ರಹಿಸಿ, ಲಿಂಗನಮಕ್ಕಿಯ 15 ಟಿಎಂಸಿ ಯನ್ನು ಸೇರಿಸಿ ಒಟ್ಟು 50ಟಿಎಂಸಿ ಯಷ್ಟು ನೀರನ್ನು ಏತ ನೀರಾವರಿಯ ಮೂಲಕ ಶಿವಮೊಗ್ಗ, ಚಿತ್ರದುರ್ಗ, ತುಮಕೂರು ಜಿಲ್ಲೆಗಳ ಮೂಲಕ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಹಾಗೂ ರಾಮನಗರ ಜಿಲ್ಲೆಗಳಿಗೆ ಸರಬರಾಜು ಮಾಡಲಾಗುವುದು. ಈ  ಜಿಲ್ಲೆಗಳ 27 ತಾಲೂಕುಗಳ 5415 ಕೆರೆಗಳನ್ನು ಹಾಗೂ ಹೆಸರಘಟ್ಟ, ತಿಪ್ಪಗೊಂಡನ ಸರೋವರಗಳನ್ನು ಪ್ರತಿವರ್ಷ ತುಂಬಲಾಗುವುದು. ಡಾ.ಮಧುಸೀತಪ್ಪನವರು ಲಿಂಗನಮಕ್ಕಿಯ ಪಕ್ಕದಲ್ಲೇ ಹಾದು ವ್ಯರ್ಥವಾಗಿ ಸಮುದ್ರ ಸೇರುತ್ತಿರುವ ಅಂಜಕ್ಕಿ ಹಳ್ಳ ಹಾಗೂ ಮಾವಿನಗುಂಡಿ ಹಳ್ಳದಿಂದ 15ಟಿಎಂಸಿ ಯಷ್ಟು ನೀರನ್ನು ಲಿಂಗನಮಕ್ಕಿ ಜಲಾಶಯಕ್ಕೆ ತಿರುಗಿಸಲು ಸೂಚಿಸಿದ್ದಾರೆ. ಇದಲ್ಲದೆ ಭೇಡ್ತಿ ನದಿಯ 180 ಟಿಎಂಸಿ ಯಷ್ಟು ನೀರಿನಲ್ಲಿ 25 ಟಿಎಂಸಿ ಯಷ್ಟು ನೀರನ್ನು ಗುರುತ್ವಾಕರ್ಷಣೆಯ ಮೂಲಕ ಕಾಳಿ ನದಿಯ ವಿದ್ಯುತ್ ಕಾಂಪ್ಲೆಕ್ಸ್‌ನ ಅಂಗವಾದ ತಟ್ಟಿಹಳ್ಳಿ ಜಲಾಶಯಕ್ಕೆ ತಿರುಗಿಸಲು ಸೂಚಿಸಿದ್ದಾರೆ. ಈ ಕ್ರಮದಿಂದ ವಿದ್ಯುತ್ ಉತ್ಪಾದನೆಗೆ ಯಾವುದೆ ತೊಂದರೆಯಾಗುವುದಿಲ್ಲ. ಅದಲ್ಲದೆ ಬರಪೀಡಿತ ಜಿಲ್ಲೆಗಳಿಗೆ ನೀರನ್ನು ಸಾಗಿಸಲು ಬೇಕಾದ ಹೆಚ್ಚುವರಿ ವಿದ್ಯುತ್ತನ್ನು ಸಹ ಉತ್ಪಾದನೆ ಮಾಡಬಹುದು.
ಪೂರ್ವ ಜಿಲ್ಲೆಗಳಿಗೆ ನೀರನ್ನು ಸಾಗಿಸುವ ಸೇವಾ ಕಾಲುವೆಯ ಹಾದಿಯು ತರಿಕೆರೆ, ಹೊಸದುರ್ಗ ಮತ್ತು ಚಿಕ್ಕನಾಯಕನಹಳ್ಳಿ ತಾಲ್ಲೂಕುಗಳ ಮೂಲಕ ಹಾಗೂ ಅಲ್ಲಿಂದ ಕೊರಟಗೆರೆ, ಮಧುಗಿರಿ, ಪಾವಗಡ, ಗೌರಿಬಿದನೂರು ಮತ್ತು ಬಾಗೇಪಲ್ಲಿ ತಾಲ್ಲೂಕುಗಳ ಮೂಲಕ ಹಾದುಹೋಗುತ್ತದೆ. ಸೇವಾ ಕಾಲುವೆಯು ಗುಬ್ಬಿಯ ಸ್ಯಾಡಲ್ ಅಥವಾ ತಗ್ಗು ಪ್ರದೇಶದ ಮೂಲಕ ಹಾದುಹೋಗುವುದಿಲ್ಲ. ಗುರುತ್ವಾಕರ್ಷಣೆಯ ಕಾಲುವೆಯನಂತರ ಸುಮಾರು ಹರಿವಿನ ಒಂದನೇ ಮೂರು ಭಾಗದಷ್ಟು ನೀರನ್ನು ಒಂದು ಕೊನೆಯ ಹಂತದ ಏತದ ಮೂಲಕ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಸಾಗಿಸಲಾಗುವುದು. ಉಳಿದ ಎಲ್ಲಾ ಕಾಲುವೆಯು ಗುರುತ್ವಾಕರ್ಷಣೆಯ ಹರಿವಾಗಿರುತ್ತದೆ. ಸೇವಾ ಕಾಲುವೆಯ 2/3ರಷ್ಟು ಭಾಗ ಭದ್ರಾ ಮೇಲ್ದಂಡೆ ಸೇವಾ ಕಾಲುವೆಯ ಹಾದಿಯಲ್ಲೇ ಸಾಗುವುದರಿಂದ ಈ ಎರಡು ಯೋಜನೆಗಳಿಗೆ ಒಂದೇ ಸೇವಾ ಕಾಲುವೆಯನ್ನು ಮಾಡಬಹುದು. ಗುರುತ್ವಾಕರ್ಷಣೆ ಕಾಲುವೆ ಮತ್ತು ಪಂಪಿಂಗ್ ವ್ಯವಸ್ಥೆಯ ಒಟ್ಟು ಉದ್ದವು ಸುಮಾರು 450 ಕಿ.ಮೀ.ಗಳಷ್ಟಿರುತ್ತದೆ. ಲಿಂಗನಮಕ್ಕಿಯಿಂದ ಪಂಪ್ ಮಾಡಲು ವಾಸ್ತವ ಗರಿಷ್ಠ ವಿದ್ಯುತ್ ಕೂಡ ಗಮಮನಾರ್ಹವಾಗಿ ಕಡಿಮೆಯಾಗುತ್ತದೆ. ಏಕೆಂದರೆ ನೀರನ್ನು ಜಲಾಶಯದಿಂದ 8ರಿಂದ 9 ತಿಂಗಳುಗಳಿಗೂ ಹೆಚ್ಚು ಕಾಲ ಪಂಪ್ ಮಾಡಬಹುದು. ಅಂದರೆ, ಅವಶ್ಯಕತೆ 50 ಟಿ.ಎಂ.ಸಿ. ಅಡಿಗೆ ಸುಮಾರು 500 ಮೆ.ವ್ಯಾ. ಎಂದು ಅಂದಾಜು ಮಾಡಲಾಗಿದೆ. ವರ್ಷವೊಂದರಲ್ಲಿ 8ರಿಂದ 9 ತಿಂಗಳುಗಳ ಕಾಲ ನೀರನ್ನು ಪಂಪ್ ಮಾಡುವುದರಿಂದ ಪೈಪ್‌ನ ಗಾತ್ರ ಸಹ ಕಡಿಮೆಯಾಗುತ್ತದೆ. ಈ ಯೋಜನೆಯಲ್ಲಿ ನೀರಿನ ಲಭ್ಯತೆಯ ಬಗ್ಗೆ ಯಾವುದೇ ಸಂದೇಹವಿಲ್ಲ. 50 ಟಿಎಂಸಿ ತರುವ ಈ ಯೋಜನೆಯ ವೆಚ್ಚ 10,000 ಕೋಟಿ ರೂಗಳೆಂದು ಅಂದಾಜುಮಾಡಲಾಗಿದೆ. ತಾಂತ್ರಿಕತೆಯ ದೃಷ್ಟಿಯಿಂದ ಸರಳವಾಗಿರುವ ಈ ಯೋಜನೆ ಅನುಷ್ಠಾನ ಯೋಗ್ಯ.

- ಪ್ರೊ.ಬಿ.ಆರ್.ಶ್ರೀನಿವಾಸಮೂರ್ತಿ
ನಿವೃತ್ತ ಪ್ರಾಧ್ಯಾಪಕರು, ಐಐಎಸ್ಸಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement