ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಇವರ ಸಾಹಸಮಾರ್ಗ ಯುವಕರಿಗೆ ಸ್ಫೂರ್ತಿಯಾಗಲಿ

ನಮ್ಮ ನಡುವೆ ಅನೇಕ ಸಾಧಕರನ್ನು ಕಂಡಿದ್ದೇವೆ. ಅವರ ಸಾಧನೆ ನೋಡಿ...

ಗುರು(ಗುರುಪ್ರಸಾದ್)
Mainashree
Updated On : 3 Oct 2013, 11:58 am

ನಮ್ಮ ನಡುವೆ ಅನೇಕ ಸಾಧಕರನ್ನು ಕಂಡಿದ್ದೇವೆ. ಅವರ ಸಾಧನೆ ನೋಡಿ ಸಂತೋಷಪಟ್ಟಿದ್ದೇವೆ, ಹೆಮ್ಮೆ ಪಟ್ಟಿದ್ದೇವೆ, ಹುರಿದುಂಬಿಸಿದ್ದೇವೆ. ಕೆಲವರು ಹೊಟ್ಟೆಕಿಚ್ಚು ಪಟ್ಟಿರಲಿಕ್ಕೂ ಸಾಕು. ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸುವುದರಿಂದ ಹಿಡಿದು ಬಡತನದಿಂದ ಅತಿ ಎತ್ತರಕ್ಕೆ ಬೆಳೆದಿರುವ ವ್ಯಕ್ತಿಗಳು ನಮಗೆ ಕಾಣಸಿಗುತ್ತಾರೆ. 2 ವರ್ಷಗಳ ಹಿಂದೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಬಂಟ್ವಾಳದ ಆ ಬಾಲಕಿ ನವ್ಯ ನಾಡಿಗೆ ಮೊದಲ ರ್ಯಾಂಕ್ ಪಡೆದಿದ್ದನ್ನು ನಾನು ಹೋದ ಕಡೆಯಲ್ಲೆಲ್ಲ ಹೇಳಿ ವಿದ್ಯಾರ್ಥಿಗಳಿಗೆ ಹುರಿದುಂಬಿಸುವ ಪ್ರಯತ್ನ ಮಾಡಿದ್ದೇನೆ. ಹಳ್ಳಿಯ ಆ ಬಾಲಕಿ ಗಳಿಸಿದ ಅಂಕ 625 ಕ್ಕೆ 623! ಅಬ್ಬಾ, ನಿಜವಾದ ಸಾಧನೆ ಎಂದರೆ ಇದು. ಕ್ರೀಡಾ ಕ್ಷೇತ್ರದಲ್ಲಿ, ವಾಣಿಜ್ಯ ರಂಗದಲ್ಲಿ ಸಾಧನೆ ಮಾಡಿರುವವರು ಹಲವಾರು ಮಂದಿ. ಅಂತಹುದೇ, ಆದರೆ ವಿಶಿಷ್ಟ ರೀತಿಯಲ್ಲಿ ಸಾಧನೆ ಮಾಡಿ ತಮ್ಮ ಅಂತಃಶಕ್ತಿ ತೋರಿರುವ ಮೂವರು ವ್ಯಕ್ತಿಗಳ ಪರಿಚಯವಿದು.
ಮೊನ್ನೆ ನನ್ನ ಹಿರಿಯ ಸ್ನೇಹಿತರಾದ ಮಾಜಿ ಸಚಿವ ಪಿ. ಜಿ. ಆರ್ ಸಿಂಧ್ಯಾರವರು ಕಾರ್ಯಕ್ರಮವೊಂದಕ್ಕೆ ನನ್ನನ್ನು ಆಹ್ವಾನಿಸಿದ್ದರು. ಯಾವುದೇ ವಿಷಯವನ್ನು ವಸ್ತುನಿಷ್ಠವಾಗಿ, ರಾಜಕೀಯೇತರವಾಗಿ ಯೋಚಿಸಬಲ್ಲ ಕೆಲವು ರಾಜಕಾರಣಿಗಳಲ್ಲಿ ಅವರೊಬ್ಬರು. ಅಂದಿನ ಕಾರ್ಯಕ್ರಮದಲ್ಲಿ ಖ್ಯಾತ ಸಂಗೀತ ನಿರ್ದೇಶಕರಾದ ಹಂಸಲೇಖ, ಟಿ.ವಿ ಧಾರವಾಹಿಗಳ ಖ್ಯಾತ ನಿರ್ದೇಶಕರಾದ ಟಿ. ಎನ್. ಸೀತಾರಾಂ, ಮಾಜಿ ಸಚಿವರಾದ ಬಸವರಾಜ ರಾಯ ರೆಡ್ಡಿ ಹೀಗೆ ಹಲವು ಮಹನೀಯರು ಬಂದಿದ್ದರು. ಅಂದು ನನ್ನ ಗಮನವನ್ನು ಸೂಜಿಗಲ್ಲಿನಂತೆ ಸೆಳೆದಿದ್ದು ಆ ಕಾರ್ಯಕ್ರಮದ ಕೇಂದ್ರ ಬಿಂದುವಾದ ಮೂವರು ವ್ಯಕ್ತಿಗಳು. ಅವರನ್ನು ನಿಮಗೆ ಪರಿಚಯ ಮಾಡಿಕೊಡಲೇ ಬೇಕೆಂಬ ತುಡಿತ ನನ್ನದು.
ಗುರು(ಗುರುಪ್ರಸಾದ್), ಪುರುಷೋತ್ತಮ ಮತ್ತು ಪ್ರಸಾದ್ ಈ ಮೂವರೂ ಬಾಲ್ಯ ಸ್ನೇಹಿತರು. ಮೂರೂ ಜನ 70ರ ದಶಕದ ಬೆಂಗಳೂರಿನ ಕಾಲೇಜು ವಿದ್ಯಾರ್ಥಿ ರಾಜಕೀಯದಲ್ಲಿ ಸಕ್ರಿಯವಾಗಿ ಇದ್ದವರು. ಕೆಳ ಮಧ್ಯಮ ವರ್ಗದ ಈ ಗೆಳೆಯರು ತಮ್ಮ ವಿದ್ಯಾಭ್ಯಾಸದ ನಂತರ ಒಳ್ಳೆಯ ಕೆಲಸಕ್ಕೆ ಹಲವೆಡೆ ಪ್ರಯತ್ನ ಪಟ್ಟರೂ ಆ ದಿನಗಳಲ್ಲಿ ಯಶಸ್ವಿಯಾಗಲಿಲ್ಲ. ಏನಾದರೂ ಮಾಡಬೇಕು-ಸಾಧಿಸಬೇಕು ಎಂಬ ಛಲ ಇವರದು. ಸುಮಾರು 8 ತಿಂಗಳು ಗಂಭೀರವಾಗಿ ಯೋಚಿಸಿದರು. ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದರು. ಕೊನೆಗೆ 1979 ರ ಡಿಸೆಂಬರ್ ತಿಂಗಳಲ್ಲಿ ತೀರ್ಮಾನಕ್ಕೆ ಬಂದೇ ಬಿಟ್ಟರು. ಆ ತೀರ್ಮಾನ, ಅದರ ಅನುಷ್ಠಾನ ಒಂದು ರೋಮಾಂಚಕಾರಿ ಕಥನ. ದಿನಾಂಕ 01-01-1980 ರಂದು ಈ ಮೂವರು ಸ್ನೇಹಿತರು ಚೆನ್ನಾಗಿ ಯೋಚಿಸಿ ತೀರ್ಮಾನಿಸಿದಂತೆ ತಮ್ಮ ಸೈಕಲ್‌ಗಳನ್ನು ಏರಿದರು. ಅವರು ಹೊರಡಲು ಉದ್ದೇಶಿಸಿದ್ದಾದರೂ ಎಲ್ಲಿಗೆ? ಅಂದು ಅವರ ಆ ಆಲೋಚನೆ ಅನ್ಯರಿಗೆ ಹುಚ್ಚು ಸಾಹಸ ಎನಿಸಿರಬಹುದು. ಮಲ್ಲೇಶ್ವರದ ಈ ಮೂವರು ಯುವಕರು ಯೋಜಿಸಿದ್ದು, ಸೈಕಲ್ ಮೇಲೆ ವಿಶ್ವಪರ್ಯಟನೆಯ ಪರಿಕ್ರಮ. ಅವರ ಮನೆಯವರಿಗೇ ಇವರ ಸಾಹಸದ ಬಗ್ಗೆ ನಂಬಿಕೆ ಇರಲಿಲ್ಲ. ಹೊರಟವರು ಬೇಗ ವಾಪಸ್ಸು ಬಂದು ಬಿಡುತ್ತಾರೆ ಈ ಹುಂಬರು ಎಂದು ಉಪೇಕ್ಷಿಸಿದ್ದರು.
ಈ ಮೂರು ಜನ ಅಂದು ಮುಂಜಾನೆ ಮಲ್ಲೇಶ್ವರದ ಕೋದಂಡರಾಮಸ್ವಾಮಿ ದೇವಾಲಯಕ್ಕೆ ಹೋಗಿ ನಮನ ಸಲ್ಲಿಸಿದರು. ನಂತರ ಒಂದು ರೀತಿಯ ಅಜ್ಞಾತವಾಸಕ್ಕೆ-ವನವಾಸಕ್ಕೆ ಹೊರಟಿದ್ದೇವೆ, ಎಂಬುದರ ಸಂಕೇತ ಎಂಬಂತೆ ನಂತರ ವಿಧಾನ ಸೌಧದ ಮುಂದೆ ಹೋಗಿ ಆ ಶಕ್ತಿ ಕೇಂದ್ರಕ್ಕೆ ತಮ್ಮ ಗೌರವ ಸಲ್ಲಿಸಿ ಬೆಂಗಳೂರು ಬಿಟ್ಟು ಸಿದ್ದಗಂಗೆ ಕಡೆ ಹೊರಟರು. ಅಲ್ಲಿ ಸ್ವಾಮಿಜೀರವರ ಆಶೀರ್ವಾದ ಪಡೆದರು. ಅಲ್ಲಿಂದ ಆರಂಭವಾದದ್ದು, ಅವರ ಅಸೀಮ ಪಯಣ. ಅವರ ದೃಷ್ಟಿ ನೆಟ್ಟದ್ದು ಅಗಮ್ಯ ದಿಗಂತದೆಡೆಗೆ. ಮತ್ತೆ ಅವರ ಪಯಣದಲ್ಲಿ ಹಿಂದಡಿಯಿಡಲಿಲ್ಲ. ಇಡೀ ವಿಶ್ವವನ್ನೇ ಸುತ್ತಿಕೊಂಡು ಬಂದು ಬಿಡೋಣ ಎಂಬ ಆದಮ್ಯ ವಿಶ್ವಾಸದೊಂದಿಗೆ ಅವರು ಮೂವರು ಹೊರಟೇಬಿಟ್ಟರು. ಹಿಂದೆ ತಿರುಗಿ ನೋಡುವ ಪ್ರಸಂಗವೇ ಅವರಿಗೆ ಎದುರಾಗಲಿಲ್ಲ. ಅಂದ ಹಾಗೆ ಭೂಮಿ ಸುತ್ತುವ ಪರ್ಯಟನೆಗೆ ಹೊರಟ ಆ ಮೂವರ ಕಿಸೆಯಲ್ಲಿ ಅಂದು ಇದ್ದ ಹಣ ಕೇವಲ 38 ರುಪಾಯಿಗಳು.
ಹೀಗೆ ಹೊರಟ ಈ ವಿಶ್ವಪರ್ಯಟಕರು ಮೊದಲು ಭಾರತದಾದ್ಯಂತ ಪ್ರವಾಸ ಮಾಡಿದರು. ಸುಮಾರು 11 ತಿಂಗಳ ಕಾಲದ ನಿರಂತರ ಸೈಕಲ್ ಪಯಣದ ನಂತರ ಅವರು ತಲುಪಿದ್ದು ಮುಂಬೈ ಎಂಬ ಮಹಾನಗರಿ. ಅಲ್ಲಿಂದ ಮುಂದೆ, ಏನು ಹೇಗೆ ಮೂವರಿಗೂ ಗೊತ್ತಿಲ್ಲ. ಹಡಗಿನಲ್ಲಿ ಸೈಕಲ್ ಹಾಕಿಕೊಂಡು ಪ್ರಯಾಣ ಮುಂದುವರೆಸಲು ಅಗತ್ಯವಿದ್ದ ಹಣವೂ ಅವರಲ್ಲಿ ಇರಲಿಲ್ಲ. ಸರಿ, ಆ ಕಾಲಕ್ಕೆ ದೇಶದ ಸುಪ್ರಸಿದ್ದ ಕ್ರಿಕೆಟ್ ಆಟಗಾರರಾಗಿದ್ದ ವಿಜಯ್ ಮರ್ಚೆಂಟ್ ಅವರನ್ನು ಭೇಟಿ ಮಾಡುವ ಅವಕಾಶ ಗಿಟ್ಟಿಸಿಕೊಂಡು, ಅವರನ್ನು ಸಂಧಿಸಿದರು. ತಮ್ಮ ಬಗ್ಗೆ, ತಮ್ಮ ಆಸೆ, ಉದ್ದೇಶಗಳ ಬಗ್ಗೆ, ಅಲ್ಲಿಯವರೆಗಿನ ಯಾತ್ರೆಯ ಬಗ್ಗೆ, ಎಲ್ಲವನ್ನೂ ಅವರ ಮುಂದೆ ಹರವಿದರು. ಆ ಮೂರೂ ಜನ ಯುವಕರ ಸ್ಥೈರ್ಯವನ್ನು ಮೆಚ್ಚಿ ಸಂತಸಗೊಂಡ ವಿಜಯ್ ಮರ್ಚೆಂಟ್ ಅವರು ಹಡಗು ಪ್ರಯಾಣದ ಅರ್ಧವೆಚ್ಚವನ್ನು ತಾವು ಭರಿಸುವುದಾಗಿ ಭರವಸೆ ನೀಡಿ ಬೆನ್ತಟ್ಟಿದರು. ಸರಿ, ಇನ್ನರ್ಧ ವೆಚ್ಚಕ್ಕೆ ಮೂವರೂ ಟಾಟಾ ಚಾರೀಟೀಸ್ ಸಂಸ್ಥೆಗೆ ಹೋಗಿ ಅರ್ಜಿ ಸಲ್ಲಿಸಿದರು. ಇವರ ಸಾಮರ್ಥ್ಯದ ಬಗ್ಗೆ ವಿಶ್ವಾಸ ಬಂದ ಸಂಸ್ಥೆಯವರು ಇನ್ನರ್ಧ ಹಣ ಕೊಟ್ಟೇಬಿಟ್ಟರು. ಸರಿ ಹಣ ಹೊಂದಿಸಿದ್ದಾಯಿತು. ಮುಂದೆ  ಎದುರಾದದ್ದು ವೀಸಾ ಪ್ರಶ್ನೆ. ಮೊದಲಿಗೆ ಅರಬ್ ದೇಶಕ್ಕೆ ತೆರಳೋಣ ಎಂದು ನಿರ್ಧರಿಸಿ, ಯು.ಎ.ಇ ಕಚೇರಿಗೆ ಹೋಗಿ ವೀಸಾಗೆ ಬೇಡಿಕೆಯಿಟ್ಟರು. ಇವರ ಅದೃಷ್ಟಕ್ಕೆ ಅಲ್ಲಿದ್ದ ಅಧಿಕಾರಿ ಪುಟ್ಟಪರ್ತಿಯ ಸಾಯಿಬಾಬಾರವರ ಭಕ್ತನಂತೆ. ಇವರು ವೈಟ್‌ಫೀಲ್ಡ್ ಇರುವ ಬೆಂಗಳೂರಿನವರೆಂದು ಗೊತ್ತಾಗಿ ಯಾವುದೇ ಕಷ್ಟ ನೀಡದೇ ವೀಸಾ ದಯಪಾಲಿಸಿದ. ಆಗ ಶುರುವಾಯ್ತು ವಿಶ್ವ ಪರ್ಯಟನೆಯ ಎರಡನೇ ಮಜಲು.
ಹಡಗು ಹತ್ತಿದ ಈ ಧೀರರು, ಪ್ರಯಾಣ ಮುಂದುವರೆದಷ್ಟು ದಿನವೂ ಅಲ್ಲಿಯೇ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡು ಒಂದಷ್ಟು ಹಣ ಸಂಪಾದಿಸಿದರು. ತಮ್ಮ ಮುಂದಿನ ಯೋಜನೆಗಳಿಗೆ ಪೂರಕವಾಗುವಂತೆ ಒಂದಷ್ಟು ಹಣವನ್ನು ಕೂಡಿಟ್ಟುಕೊಂಡರು. ಆ ವಾಸ್ಕೋಡಗಾಮ, ಕೊಲಂಬಸ್ ದೇಶಗಳನ್ನು ಹುಡುಕಲು ಅನ್ವೇಷಣೆ ಮಾಡಲು ಹೊರಟ ಎಂಬ ಸಂಗತಿಯನ್ನು ನಾವು ಚರಿತ್ರೆಯಿಂದ ಓದಿ ಕಲಿತಿದ್ದೇವೆ. ಅದೇ ರೀತಿ ಈ ನಮ್ಮ ಗೆಳೆಯರು ಅರಸಿ ಹೋದ ಜಾಗಗಳು, ದೇಶಗಳ ಪಟ್ಟಿ ನೋಡಿದರೆ ಇವರುಗಳು ವಾಸ್ಕೋಡಗಾಮನಿಗಿಂತ ಏನೂ ಕಡಿಮೆ ಇಲ್ಲವೇನೋ ಎಂದೆನಿಸಿದರೆ ಆಶ್ಚರ್ಯವಿಲ್ಲ. ಸುಮಾರು ಮೂರು ವರ್ಷಗಳ ಕಾಲಾವಧಿಯಲ್ಲಿ ಅವರು ಪ್ರವೇಶ ಮಾಡಿದ ಖಂಡಗಳು, ದೇಶಗಳ ಹೆಸರುಗಳು ಒಂದೇ, ಎರಡೇ... ಮಧ್ಯ ಪ್ರಾಚ್ಯ, ಟರ್ಕಿ, ಬಲ್ಗೇರಿಯಾ, ರುಮೇನಿಯಾ, ಯುಗಾಸ್ಲಾವಿಯಾ, ಗ್ರೀಕ್, ಈಜಿಪ್ಟ್,  ಆಪ್ರಿಕಾ, ದಕ್ಷಿಣ ಅಮೇರಿಕಾದ ಅರ್ಜೈಂಟೀನಾ, ಬ್ರೆಜಿಲ್, ಚಿಲಿ, ಸೆಂಟ್ರಲ್ ಅಮೇರಿಕಾ, ಟ್ರಿನಿಡಾಡ್, ಟೋಬ್ಯಾಗೋ, ಕೆನಡಾ, ಅಮೆರಿಕ... ಅವರು ಸುತ್ತದ ದೇಶಗಳಿಲ್ಲ, ನಿತ್ಯ ಜೀವನಕ್ಕೆ ಎಡತಾಕದ ಕೆಲಸಗಳಿಲ್ಲ. ಮನೆಗಳಿಗೆ ಬಣ್ಣ ಹಚ್ಚುವುದು, ಹಂದಿ ಫಾರ್ಮ್‌ಗಳಲ್ಲಿ ಕೂಲಿ ಕೆಲಸ, ಕುರಿ ಮೇಯಿಸುವುದು, ಕಾರು ತೊಳೆಯುವುದು, ಯಾವುದೋ ಸಣ್ಣ ಕಚೇರಿಗಳಲ್ಲಿ ಗುಮಾಸ್ತ ಕೆಲಸ ಮಾಡುವುದು, ಯಾರದೋ ತೋಟಗಳಲ್ಲಿ ನೀರುಣಿಸುವುದು.. ಇಂತಹುದ್ದೇ ಅಂತಲ್ಲ, ಯಾವುದಾದರೂ ಸರಿಯೇ ಎಂಬಂತೆ ಕೆಲಸ ಮಾಡಿ ಹಣ ಸಂಪಾದಿಸುವ ಮಾರ್ಗ ಕಂಡುಕೊಂಡರು.
ಇಡೀ ಭಾರತದಲ್ಲಿ ಸಂಚರಿಸುವಾಗ ತಮ್ಮಿಂದ ಒಂದೇ ಒಂದು ಪೈಸೆ ಖರ್ಚಾಗಲಿಲ್ಲ ಎಂಬುದು ಅವರಿಗೆ ಸಂತಸದ ನೆನಪು.  ಡಾಬಾಗಳಲ್ಲಿ, ದೇವಸ್ಥಾನಗಳಲ್ಲಿ, ಅನೇಕ ಉದಾರದಾನಿಗಳು ಇವರ ಉದ್ದೇಶವನ್ನು ಅರಿತು ಇವರ ಸಾಹಸ ಗಾಥೆಯನ್ನು ಕೇಳಿ ಊಟ-ವಸತಿ ವ್ಯವಸ್ಥೆ ಮಾಡಿ ಕೊಟ್ಟಿದ್ದರು. ಒಮ್ಮೆ ಒಂದು ರಾತ್ರಿ ಎಲ್ಲಿ ತಂಗುವುದು ಎಂಬ ಸಮಸ್ಯೆ ಉಂಟಾಯಿತು. ಆಗ ಅಲ್ಲಿಗೆ ಬಂದ ವ್ಯಕ್ತಿ ಇವರನ್ನು ಕರ್ನಾಟಕದಿಂದ ಹೊರಟ ಪ್ರವಾಸಿಗರು ಎಂದು ತಿಳಿದ ತಕ್ಷಣ ಕೇಳಿದ ಮೊದಲ ಪ್ರಶ್ನೆ ಜನರಲ್ ಕಾರ್ಯಪ್ಪ ಗೊತ್ತಾ ಎಂದು. ಇವರು ಗೊತ್ತು ಎಂದ ಮೇಲೆ ತಾನು ಅವರಿಗೆ ವಾಹನ ಚಾಲಕನಾಗಿ ಕೆಲಸಮಾಡಿದ್ದೆ ಎಂದು ಹೆಮ್ಮೆಯಿಂದ ಸ್ಮರಿಸಿಕೊಂಡು ಅವರಿಗೆ ಊಟೋಪಚಾರ ಮಾಡಿರುವುದು ಒಂದು ಸ್ಮರಣೀಯ ಘಟನೆ. ರಾಜಸ್ಥಾನದಲ್ಲಿದ್ದಾಗ  ಒಂದು ಐಷಾರಾಮಿಕಾರಿನಲ್ಲಿ ಬಂದ ಶ್ರೀಮಂತ ವ್ಯಕ್ತಿಯೊಬ್ಬರು ಇವರ ಕಥೆಯನ್ನು  ಆಲಿಸಿ ಒಂದು ವಿಸಿಟಿಂಗ್ ಕಾರ್ಡ್ ನೀಡಿ ಜೈಪುರಕ್ಕೆ ಬಂದಾಗ ಆ ಹೋಟೆಲ್‌ನಲ್ಲಿ ಉಳಿದುಕೊಳ್ಳಬೇಕೆಂದು ಒತ್ತಾಯಿಸಿದರು. ಜೈಪುರದ ಆ ಹೋಟೆಲ್ ಪಂಚತಾರ ಸೌಲಭ್ಯವುಳ್ಳದಾಗಿತ್ತು. ಎಲ್ಲಾ ರೀತಿಯ ಸೌಕರ್ಯಗಳನ್ನು ಇವರಿಗೆ ಒದಗಿಸಲಾಯಿತು.  ಆಗ ಅವರಿಗೆ ತಿಳಿದು ಬಂದಿದ್ದು ಆ ವಿಸಿಟಿಂಗ್ ಕಾರ್ಡ್ ಕೊಟ್ಟ ವ್ಯಕ್ತಿ ನಮ್ಮ ರಾಜ್ಯದ ಈ ಹಿಂದೆ ರಾಜ್ಯಪಾಲರಾಗಿದ್ದ ಮೋಹನ್‌ಲಾಲ್ ಸುಖಾಡಿಯಾರವರ ಮಗ ಎಂದು. ತಮ್ಮ ಕುಟುಂಬಕ್ಕೆ ಕರ್ನಾಟಕ ರಾಜ್ಯ ಎಷ್ಟೊಂದು ಸುಖ ಸಂತೋಷ ಕೊಟ್ಟಿದೆ. ಆ ಋಣವನ್ನು  ಈ ರೀತಿ ತೀರಿಸಲಿಕ್ಕೆ ಪ್ರಯತ್ನಿಸುತ್ತಿದ್ದೇನೆ ಎಂದಿದ್ದರವರು.
ಇಂತಹ ಒಳ್ಳೆಯ ಘಟನೆಗಳ ಜೊತೆಗೆ ಕೆಟ್ಟ ಘಟನೆಗಳು ಅವರಿಗೆ ಅನುಭವ ಆಗಿರುವುದುಂಟು. ಮಧ್ಯ ಪ್ರದೇಶದ ಬಳಿ ಇವರು ನಿರ್ಜನ ರಸ್ತೆಯಲ್ಲಿ ನಡುರಾತ್ರಿ ಸೈಕಲ್‌ಗಳಲ್ಲಿ ಹೋಗುತ್ತಿದ್ದಾಗ ಪೊಲೀಸರು ಇವರ ಬಗ್ಗೆ ಗುಮಾನಿ ಹೊಂದಿ, ಕತ್ತಲಕೋಣೆಯೊಂದರಲ್ಲಿ ಕೂಡಿಹಾಕಿ, ರಾತ್ರಿ ಇಲ್ಲೇ ಇರಬೇಕು ಎಂದು ಹೇಳಿ ಬಿಟ್ಟರು. ಅಲ್ಲಿ ವಿದ್ಯುತ್ ಇರಲಿಲ್ಲ. ಇದ್ದದ್ದು ಕೇವಲ ಮಲ, ಮೂತ್ರದ ದುರ್ವಾಸನೆ. ಬೆಳಗ್ಗೆ ಎದ್ದ ಮೇಲೆ ತಿಳಿಯಿತು, ತಮ್ಮನ್ನು ರಾತ್ರಿ ಇಟ್ಟಿದ್ದು ಒಂದು ಪೋಲಿಸ್ ಠಾಣೆಯ ಲಾಕಪ್ ರೀತಿಯ ಒಂದು ಜಾಗದಲ್ಲಿ ಎಂದು. ಪೊಲೀಸರಿಂದ ಎಚ್ಚರಿಕೆ ಪಡೆದು ಅವರು ಮುನ್ನಡೆದರು. ಲಕ್ನೋದಲ್ಲಿ ಅಲ್ಲಿನ ಉಪ ವಿಭಾಗೀಯ ಅಧಿಕಾರಿಗಳ ಬಳಿ ಅಂದು ರಾತ್ರಿ ಮಲಗಲು ಜಾಗದ ಸಹಾಯ ಕೇಳಲು ಹೋದಾಗ ಈ ಮೂವರನ್ನು ಕೆಲಸಕ್ಕೆ ಬಾರದ ಸೋಮಾರಿಗಳೆಂದು ಜರೆದು ತಮ್ಮ ಕಣ್ಣೆದುರಿಗೆ ಒಂದು ಕ್ಷಣವೂ ಇರಬಾರದೆಂದು ಅರಚಿ ತನ್ನ ಕಚೇರಿಯಿಂದ ಹೊರದಬ್ಬಿದ್ದರು. ಇರಾನ್‌ನಲ್ಲಿ ಹೋಗುತ್ತಿದ್ದಾಗ ಈ ಮೂವರನ್ನು ಗೂಡಾಚಾರಿಗಳೆಂದು ಬಗೆದು 10 ದಿನಗಳ ಕಾಲ ಜೈಲಿಗೆ ಹಾಕಲಾಗಿತ್ತು. ರುಮೇನಿಯಾದಲ್ಲಿ ಸೈಕಲ್‌ಗಳನ್ನು ಕಳೆದುಕೊಂಡ ದುಃಖ.
1983 ನವೆಂಬರ್‌ನಲ್ಲಿ ಅಂದರೆ ಒಂದು ರೀತಿಯಿಂದ ಭಾರತ ಬಿಟ್ಟು ಮೂರು ವರ್ಷಗಳ ನಂತರ ಅವರು ಅಮೆರಿಕದ ಬೃಹತ್ ನಗರವಾದ ನ್ಯೂಯಾರ್ಕ್ ಸೇರಿದರು. ಅಲ್ಲಿ ಯಾವ ರೀತಿ ಕೆಲಸ ಮಾಡಬೇಕೆಂದು ಯೋಚಿಸುತ್ತಿರುವಾಗ ಅಂದು ಹೆಚ್ಚು ಪ್ರಚಲಿತವಾದ ಕ್ಯಾಸೆಟ್‌ಗಳನ್ನು ಮಾರುವ ಯೋಚನೆಗೆ ಬಂದರು. ಅಂಗಡಿಯೊಂದರಲ್ಲಿ ಕಡಿಮೆ ದರಕ್ಕೆ ಕ್ಯಾಸೆಟ್‌ಗಳನ್ನು ಕೊಂಡು ರೈಲ್ವೆ ಸ್ಟೇಷನ್ ಬಳಿ ಸ್ವಲ್ಪ ಹೆಚ್ಚಿನ ದರಕ್ಕೆ ಮಾರಾಟ ಮಾಡಿ ಹಣ ಸಂಪಾದಿಸಿದರು. ಹೀಗೆ ಅನಧಿಕೃತವಾಗಿ ಯಾವುದೇ ಪರವಾನಗಿ ಇಲ್ಲದೇ ಮಾರಾಟ ಮಾಡುವಾಗ ಪೊಲೀಸರ ಕೈಯಲ್ಲಿ ಎರಡು ಬಾರಿ ಸಿಕ್ಕಿಬಿದ್ದರು. ಹೀಗೆ ಮಾರಾಟ ಮಾಡುವಾಗ ಕಮಲ ದಿಂಡೋರ ಎಂಬ ವ್ಯಕ್ತಿ ಪರಿಚಯವಾಗಿ (ಇವರು ದಿವಂಗತ ರಾಜೀವ್ ಗಾಂಧಿ ಜೊತೆ ವಿಮಾನ ಚಾಲಕರಾಗಿ ಕೆಲಸ ಮಾಡಿದವರು) ಈ ಮೂವರು ಸ್ನೇಹಿತರ ಪರಿಶ್ರಮ ನಡವಳಿಕೆ ಕಂಡು ವಿಶ್ವಾಸ ಬಂದ ನಂತರ ಕಮಲ ದಿಂಡೋರಾ ತನ್ನ ಸ್ವಂತ ಉದ್ಯಮದಲ್ಲಿಯೇ ಈ ಮೂವರಿಗೂ ನೌಕರಿ ಕೊಟ್ಟರು. ಅಂದಿನ ಕಾಲದಲ್ಲಿ ವಾರಕ್ಕೆ 150 ಡಾಲರ್ ಸಂಬಳ ನೀಡುತ್ತಿದ್ದರು. ತನ್ನ ಉದ್ಯಮ ಬೃಹತ್ತಾಗಿ ಬೆಳೆದು ವರ್ಷಕ್ಕೆ 10-12 ಮಿಲಿಯನ್ ಡಾಲರ್‌ಗಳಷ್ಟು ವ್ಯವಹಾರ ಹೆಚ್ಚಾದಾಗ ಈ ಸಾಧನೆಯಲ್ಲಿ ಈ ಮೂವರ ಅಪಾರ ಪರಿಶ್ರಮ ಸೇರಿದೆ ಎಂದು ಅರಿತ ಕಮಲ್ ದಿಂಡೋರ ಈ ಮೂವರಿಗೆ ಗ್ರೀನ್ ಕಾರ್ಡ್ ಕೊಡಿಸಿದ್ದು ಅಲ್ಲದೇ ನ್ಯೂಯಾರ್ಕ್‌ನಲ್ಲೇ ಶಾಶ್ವತವಾಗಿ ನೆಲೆಸಲು ಎಲ್ಲಾ ರೀತಿಯ ಅನುಕೂಲ ಮಾಡಿಕೊಟ್ಟರು.
ಗುರು ಪ್ರಸಾದ್ ಈಗ ನ್ಯೂಯಾರ್ಕ್ ಭಾರತೀಯರ, ಅದರಲ್ಲಿಯೂ ವಿಶೇಷವಾಗಿ ಕನ್ನಡಿಗರ ಆಪದ್ಭಾಂದವರಾಗಿ ಬೆಳೆದಿದ್ದಾರೆ. ನ್ಯೂಯಾರ್ಕ್ ಕನ್ನಡ ಕೂಟದ ಬೆಳವಣೆಗೆಯಲ್ಲಿ ಗುರುಪ್ರಸಾದ್ ಪ್ರಮುಖ ಪಾತ್ರವಹಿಸಿದ್ದಾರೆ. ನಮ್ಮಿಂದ ಯಾರೇ ಕನ್ನಡಿಗರು ಹೋದರೂ ಅವರಿಗೆ ತಮ್ಮಿಂದಾಗುವ ಸಹಾಯ ಮಾಡಲು ಒಬ್ಬ ನಿಜವಾದ ಬಂಧು, ಗುರುವಿನ ರೂಪದಲ್ಲಿ ನ್ಯೂಯಾರ್ಕ್‌ನಲ್ಲಿ ಇದ್ದಾರೆ ಎಂಬುದು ಅವರ ಆತಿಥ್ಯದ ಸವಿಯಿಂದ ಎಲ್ಲರ ಅನುಭವ. ನ್ಯೂಯಾರ್ಕ್‌ನಲ್ಲಿ ಕನ್ನಡ ಭವನವನ್ನು ನಿರ್ಮಿಸಲೇಬೇಕೆಂಬ ಮುಂದಿನ ಗುರಿ ಹೊಂದಿರುವ ಗುರುಪ್ರಸಾದ್ ಕನ್ನಡ ಸಮುದಾಯದ ಆಶಾದೀಪ. ಯಾವುದೋ ಹುಂಬ ವಿಶ್ವಾಸದ ಮೇಲೆ ಸೈಕಲ್ ಹತ್ತಿ ಗೋಳ ಸುತ್ತಲು ಹೊರಟ ಆ ಯುವಕರು, ಅವರ ಸಾಹಸ, ಅವರ ಜೀವನ ಪ್ರೇಮ, ಆತ್ಮಸ್ಥೈರ್ಯಗಳಿಂದ ನಮ್ಮೆಲ್ಲ ಯುವಕರಿಗೆ ಪ್ರೇರಣೆ, ದಾರಿದೀಪವಾಗಿದ್ದಾರೆ. ಅವರ ಯಶೋಗಾಥೆ ಹೀಗೇ ಮುಂದುವರೆಯಲಿ ಎನ್ನುವುದು ನನ್ನ ಮನತುಂಬಿದ ಹಾರೈಕೆ. ಗುರುಪ್ರಸಾದ್ ಅವರನ್ನು  guruchakra@yahoo.com ಮೂಲಕ ಸಂಪರ್ಕಿಸಬಹುದು.

- ಎಸ್. ಸುರೇಶ್ ಕುಮಾರ್
ಮಾಜಿ ಸಚಿವರು, ಕರ್ನಾಟಕ ಸರ್ಕಾರ
nimmasuresh.2009@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement