ಆಧಾರ್ನ ಉಪಯುಕ್ತತೆ ಅರಿವಾಗುತ್ತಿಲ್ಲವೇಕೆ?
ದಿನಾಂಕ 2-9-2013 ರ ಪತ್ರಿಕೆಯಲ್ಲಿ ಮಿತ್ತಾಳ ನಾರಾಯಣ ಭಟ್ ಎಂಬುವವರು ಆಧಾರ್ನ ಕುರಿತ ತಮ್ಮ ಲೇಖನದಲ್ಲಿ, "ವ್ಯಕ್ತಿಯನ್ನು ಗುರುತಿಸಲು ಪ್ಯಾನ್ಕಾರ್ಡ್, ಬ್ಯಾಂಕ್ ಪಾಸ್ಬುಕ್, ಚುನಾವಣಾ ಆಯೋಗದ ಗುರುತಿನ ಚೀಟಿ ಇವುಗಳಿಲ್ಲವೇ(ಇವೇ ಸಾಕಲ್ಲವೇ)?" ಎಂದು ಪ್ರಶ್ನಿಸಿದ್ದಾರೆ. ಲೇಖಕರು ಗ್ರಾಮಾಂತರ ಪ್ರದೇಶದ ಜನತೆಯ ಬಗ್ಗೆ ತಿಳಿದಿದ್ದಾರೋ, ಇಲ್ಲವೋ ಎಂಬುದೇ ಸಂಶಯವಾಗಿದೆ. ಏಕೆಂದರೆ ಎಷ್ಟು ಜನ ಗ್ರಾಮೀಣ ಜನತೆಯ ಬಳಿ ಪ್ಯಾನ್ಕಾರ್ಡ್ ಇರುತ್ತದೆ? ಕೂಲಿ ಮಾಡುವವನ ಬಳಿ ಕಷ್ಟಪಟ್ಟು ದುಡಿದ ಹಣದಲ್ಲಿ ಜೀವನ ಮಾಡುವುದೇ ದುಸ್ತರವಾಗಿರುವ ಸಮಯದಲ್ಲಿ ಖಾತೆ ತೆರೆದು ಪಾಸ್ಬುಕ್ ಪಡೆಯಲು ಸಾಧ್ಯವೇ? ಚುನಾವಣಾ ಆಯೋಗದ ಗುರುತಿನ ಚೀಟಿಯಂತೂ ಒಬ್ಬೊಬ್ಬರ ಬಳಿ 2- 3 ಗುರುತಿನ ಚೀಟಿಗಳಿವೆ. 3-4 ಊರುಗಳಲ್ಲಿ ವಿವಿಧ ವಿಳಾಸ ನೀಡಿ ಪಡೆದಂಥವು.
ಹಾಗಾದರೆ ಭಾರತೀಯರನ್ನೆಲ್ಲಾ ಗುರುತಿಸಲು ಒಂದು ವ್ಯವಸ್ಥೆ ಬೇಕು ಎಂದಾಯಿತು. ಆಧಾರ್ ಪ್ರತಿಯೊಬ್ಬ ನಾಗರಿಕನಿಗೂ ಭಾರತ ಸರ್ಕಾರ ನೀಡುತ್ತಿರುವ ಉಚಿತ ಗುರುತಿನ ಸಂಖ್ಯೆ. ಇದನ್ನು ಪಡೆಯಲು ಯಾವುದೇ ಶುಲ್ಕವನ್ನೂ ನೀಡಬೇಕಿಲ್ಲ.
ವ್ಯಕ್ತಿಗೆ ತಾನು ಭಾರತೀಯ ಎಂದು ತೋರಿಸಿಕೊಳ್ಳಲು ಆಧಾರ್ ಒಂದು ಗುರುತು. ಮತ್ತು ತನ್ನ ಎಲ್ಲಾ ವಿವರಗಳನ್ನೂ ಆಧಾರ್ನಲ್ಲಿ ನಮೂದಿಸಿದರೆ (ಲಿಂಕ್ ಕೊಡುವುದು) ಎಲ್ಲೇ ಹೋದರೂ ಅದೊಂದರಿಂದಲೇ ಎಲ್ಲಾ ವಿವರಗಳನ್ನೂ ಪಡೆಯಬಹುದು. ಉದಾಹರಣೆಗೆ: ವ್ಯಕ್ತಿ ನ್ಯಾಯ ಬೆಲೆ ಅಂಗಡಿಯಲ್ಲಿ ತನ್ನ ಆಧಾರ್ ಸಂಖ್ಯೆಯನ್ನು ನೀಡಿದರೆ ಅಂಗಡಿಯವರು ಆತನ ಆಧಾರ್ ಸಂಖ್ಯೆಗೆ ರೇಷನ್ ಕಾರ್ಡ್ನ ಸಂಖ್ಯೆಯನ್ನು ಲಿಂಕ್ ಕೊಡುತ್ತಾರೆ. ಇದೇ ನಿಯಮ ಗ್ಯಾಸ್ ಏಜೆನ್ಸಿ, ಬ್ಯಾಂಕ್, ಪಾಸ್ಪೋರ್ಟ್ ವಿಷಯಕ್ಕೂ ಸಂಬಂಧಿಸಿತ್ತದೆ. ವಿದ್ಯಾರ್ಥಿಯು ಶಾಲೆ/ಕಾಲೇಜಿಗೆ ದಾಖಲಾಗುವಾಗ, ಸ್ಕಾಲರ್ಷಿಪ್ ಪಡೆಯುವಾಗ, ಆತನ ಶೈಕ್ಷಣಿಕ ವಿವರಗಳನ್ನು ಆಧಾರ್ಗೆ ಲಿಂಕ್ ಕೊಡಬಹುದು. ಹಾಗೆಯೇ ಜಮೀನು, ಆಸ್ತಿ, ಚರ ಆಸ್ತಿ ಎಲ್ಲವನ್ನೂ ಕೂಡ.
ಹೀಗೆ ಒಬ್ಬ ವ್ಯಕ್ತಿಯ ಎಲ್ಲಾ ವಿವರಗಳೂ ಆಧಾರ್ನಲ್ಲಿ ನಮೂದಾದರೆ, ಆತನ ಆಧಾರ್ ಸಂಖ್ಯೆಯ ಮುಖಾಂತರ ಆತನ ಇತಿಹಾಸವನ್ನೇ ಪಡೆಯಬಹುದು (ಯಾರು ಬೇಕಾದರೂ). ಸರ್ಕಾರಕ್ಕೂ ಒಬ್ಬ ವ್ಯಕ್ತಿಯ ಎಲ್ಲಾ ವಿವರಗಳೂ ಆಧಾರ್ನಿಂದ ಸುಲಭವಾಗಿ ಸಿಗುತ್ತವೆ.
ಒಂದು ಸಾರಿ ಒಬ್ಬ ವ್ಯಕ್ತಿ ಆಧಾರ್ ಸಂಖ್ಯೆ ಪಡೆದರೆ, ಮತ್ತೊಮ್ಮೆ ಅದೇ ವ್ಯಕ್ತಿಗೆ ಮತ್ತೊಂದು ಆಧಾರ್ ಸಂಖ್ಯೆ ಸಿಗುವುದಿಲ್ಲ. (ಪ್ರಾರಂಭದ ಹಂತದಲ್ಲಿ ಒಬ್ಬನೇ ವ್ಯಕ್ತಿಗೆ 2-3 ಆಧಾರ್ ಸಂಖ್ಯೆಗಳು ಬಂದಿದ್ದವು. ದೂರುಗಳು ಹೋದ ಹಿನ್ನೆಲೆಯಲ್ಲಿ ಅದೇ ತಪ್ಪು ಮತ್ತೆ ಆಗುತ್ತಿಲ್ಲ. ಕಣ್ತಪ್ಪಿಸಿ ಹೊಸದಾಗಿ ಮತ್ತೊಂದು ಆಧಾರ್ ಸಂಖ್ಯೆ ಪಡೆಯಲು ಹೋದರೆ ರಿಜೆಕ್ಟ್ ಎಂದು ತೋರಿಸುತ್ತದೆ) ಇಂತಹ ಅಮೂಲ್ಯವಾದ ಆಧಾರ್ನ್ನು ಏಕೆ ದೂಷಿಸುತ್ತಾರೋ ತಿಳಿಯುತ್ತಿಲ್ಲ.
ಆದರೆ ಆಧಾರ್ನಲ್ಲೂ ಸಾಕಷ್ಟು ತಪ್ಪುಗಳಿವೆ. ಆಧಾರ್ ಸಂಖ್ಯೆ ಸಿಗಲು ಕನಿಷ್ಠ ಒಂದು ತಿಂಗಳು ಕಾಯಬೇಕು. ಆಗಲೂ ಸಿಗುವುದೆಂಬ ನಂಬಿಕೆಯಿಲ್ಲ. ಸಿಗುವ ತನಕ ಮತ್ತೆ, ಮತ್ತೆ ಓಡಾಡಬೇಕು. ಒಂದು ತಿಂಗಳ ನಂತರವೂ ಅದನ್ನು ಅಂತರ್ಜಾಲದಲ್ಲಿ ಪಡೆಯಬೇಕೇ ಹೊರತು ಅಂಚೆಯ ಮುಖಾಂತರ ಸಿಗುವುದಿಲ್ಲ. ಅಂತರ್ಜಾಲದ ಮುಖಾಂತರ ಪಡೆಯಲು ಹೋದರೆ ಕಡ್ಡಾಯವಾಗಿ ಮೊಬೈಲ್ ಹೊಂದಿರಬೇಕು. ಗ್ರಾಮಾಂತರ ಪ್ರದೇಶದ ಜನ ಮೊಬೈಲ್ ಎಲ್ಲಿಂದ ತರುತ್ತಾರೆ? ಮೊಬೈಲ್ ಇಲ್ಲದೇ ಇದ್ದಲ್ಲಿ ಅಂತರ್ಜಾಲದ ಮುಖಾಂತರ ಆಧಾರ್ ಕಾರ್ಡ್ ಪಡೆಯಲು ಸಾಧ್ಯವೇ ಇಲ್ಲ.
ಆಧಾರ್ ಸಂಖ್ಯೆಗಾಗಿ ಹೋದಾಗ ಹೆಸರು/ವಿಳಾಸ ಅಥವಾ ಯಾವುದೇ ತಪ್ಪುಗಳಾಗಿದ್ದರೂ ತಿದ್ದುಪಡಿಗಾಗಿ ಕಚೇರಿಗೆ ಕಳುಹಿಸಿದಾಗ ತಿದ್ದುಪಡಿಯಾದ ಆಧಾರ್ ಕಾರ್ಡ್ ಪಡೆಯಲು ಕನಿಷ್ಠ 3 ತಿಂಗಳು ಕಾಯಬೇಕು. ಆಧಾರ್ ಸಂಖ್ಯೆಯನ್ನು ಅಂತರ್ಜಾಲದ ಮುಖಾಂತರ ಪಡೆಯಲು ಹೋದರೆ ಅದರ ವೆಬ್ಸೈಟ್ ಓಪನ್ ಆಗುವುದೇ ಕಷ್ಟ. ಉಚಿತ ಕರೆ ಮಾಡಿ ಎಂದು (18003001947) ನಂಬರನ್ನು ಕೊಟ್ಟಿದ್ದಾರಾದರೂ, ಸಂಪರ್ಕ ಸಿಕ್ಕರೇ ಅದೃಷ್ಟ!
ಆದರೆ ಇವೆಲ್ಲಾ ನ್ಯೂನತೆಗಳನ್ನೂ ಸರಿಪಡಿಸಿಕೊಳ್ಳಲು ಕಷ್ಟವೇನಲ್ಲ. ಆದುದರಿಂದ ಆಧಾರ್ ಅತ್ಯಂತ ಅವಶ್ಯಕವಾದದ್ದು. ನೀಲೇಕಣಿಯವರು ನ್ಯೂನತೆಗಳನ್ನು ಸರಿಪಡಿಸಿದಲ್ಲಿ ಆಧಾರ್ ಅತ್ಯಂತ ಉಪಯುಕ್ತವಾಗುವುದರಲ್ಲಿ ಸಂಶಯವಿಲ್ಲ.
- ಕೆ.ಎನ್.ಉದಯಕುಮಾರ್
ಕುಣಿಗಲ್