ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಸಂತ ಲಕ್ಷ್ಮಣಾನಂದರನ್ನು ನೆನೆಯುತ್ತ...

ಅದು 23 ಆಗಸ್ಟ್ 2008ರ ಕರಾಳ ರಾತ್ರಿ. ಕ್ರಿಶ್ಚಿಯನ್ ಮತಾಂಧರ ಭಾರೀ ಶಸ್ತ್ರ ಸಜ್ಜಿತ ಗುಂಪೊಂದು 80 ವರ್ಷದ ಸ್ವಾಮಿ ಲಕ್ಷ್ಮಣಾನಂದ ಸರಸ್ವತಿ ಅವರನ್ನು...

Mainashree
Updated On : 4 Oct 2013, 12:14 pm

ಒರಿಸ್ಸಾದ ಸಂತ ಲಕ್ಷ್ಮಣಾನಂದ ಸರಸ್ವತಿಯವರನ್ನು ಹತ್ಯೆಗೈದವರಿಗೆ ಶಿಕ್ಷೆ ಪ್ರಕಟವಾಗಿದೆ. ಈ ಹತ್ಯೆಯ ಹಿಂದಿದ್ದ ಸಂಚು- ಮನಸ್ಥಿತಿಗಳ ವಿಶ್ಲೇಷಣೆ ಅಗತ್ಯವಿದೆ.

ಅದು 23 ಆಗಸ್ಟ್ 2008ರ ಕರಾಳ ರಾತ್ರಿ. ಕ್ರಿಶ್ಚಿಯನ್ ಮತಾಂಧರ ಭಾರೀ ಶಸ್ತ್ರ ಸಜ್ಜಿತ ಗುಂಪೊಂದು 80 ವರ್ಷದ ಸ್ವಾಮಿ ಲಕ್ಷ್ಮಣಾನಂದ ಸರಸ್ವತಿ ಅವರನ್ನು ಕೊಂದು ಕೇಕೆ ಹಾಕಿತು. ಅದಾದ ಮರುದಿನ ನಾನು ಬರೆದಿದ್ದೆ-"ಲಕ್ಷಣಾನಂದ ಸರಸ್ವತಿ ಅವರು ಗ್ರಾಹಂ ಸ್ಟೇನ್ಸ್ ಅಲ್ಲ" ಎಂದು (ಗ್ರಾಹಂ ಸ್ಟೇನ್ಸ್ ಎಂಬ ಕ್ರಿಶ್ಚಿಯನ್ ಮಿಷನರಿಯನ್ನು 1999ರಲ್ಲಿ ಒಡಿಶಾದ ಮನೋಹರ್‌ಪುರ ಗ್ರಾಮದಲ್ಲಿ ಕೊಲೆ ಮಾಡಲಾಗಿತ್ತು). ಸರಸ್ವತಿಯವರ ಸಾವನ್ನು ನೋಡಿ ನಮ್ಮ ಜಾತ್ಯತೀತ ಸ್ಥಾಪನೆ ಮರುಗಲಿಲ್ಲ.  
ಅವರ ಸಾವಿಗಾಗಿ ಕಣ್ಣೀರು ಹಾಕದ ವಿಷಯ ಒತ್ತಟ್ಟಿಗಿರಲಿ, ಆ ವಿಷಯವನ್ನು ಅರ್ಥವಾಗದ ಅಸ್ಪಷ್ಟತೆಯಲ್ಲೇ ಮೆಲ್ಲಗೆ ಕರಗಿಹೋಗುವಂತೆ ಮಾಡಲಾಯಿತು. ಆದರೆ, ಯಾವಾಗ ಸ್ವಾಮೀಜಿಯ ಭೀಕರ ಕೊಲೆಯ ನಂತರ ಕೋಮುಗಲಭೆಯ ಜ್ವಾಲೆ ಎದ್ದು ನಿಂತಿತೋ, ಆಗ ನಮ್ಮ ಸೆಕ್ಯುಲರ್ ವ್ಯವಸ್ಥೆ ಕಾರ್ಯಪ್ರವೃತ್ತವಾಗಿ, ಕ್ರಿಶ್ಚಿಯನ್ನರ ವಿರುದ್ಧ ತಿರುಗಿ ಬಿದ್ದ ಹಿಂದುಗಳು ಮತ್ತು ಹಿಂದು ಗುಂಪುಗಳ ಮೇಲೆ ಬುಸುಗುಟ್ಟತೊಡಗಿತು! ಲಕ್ಷಣಾನಂದರು ಮೃತರಾದ ಎರಡೇ ದಿನಗಳಲ್ಲಿ ಸೋಮಿನಿ ಸೇನ್ ಗುಪ್ತಾ ಎಂಬ ಪತ್ರಕರ್ತೆ, "ಕ್ರೂರ ಅವಸ್ಥೆಯನ್ನು ತಾವಾಗೇ ಮೈಮೇಲೆ ಎಳೆದುಕೊಂಡ ಹಿಂದುಗಳು" ಎಂಬ ಧಾಟಿಯಲ್ಲಿ ನ್ಯೂಯಾರ್ಕ್‌ಟೈಮ್ಸ್ ಪತ್ರಿಕೆಯಲ್ಲಿ  ಬರೆದರು. ಈಗ ಅಸ್ತಿತ್ವದಲ್ಲಿಲ್ಲದ 'ನ್ಯೂಸ್‌ವೀಕ್‌' ಎನ್ನುವ ಅಮೆರಿಕದ  ನಿಯತಕಾಲಿಕವೊಂದು ಈ ಘಟನೆಯ ಕುರಿತು, "ಭಾರತೀಯ ಹಿಂದುಗಳಿಂದ ಬೆದರಿಕೆ ಎದುರಿಸುತ್ತಿರುವ ಕ್ರಿಶ್ಚಿಯನ್ನರು" ಎಂಬ ದೊಡ್ಡ ಶಿರೋನಾಮೆಯಲ್ಲಿ ವರದಿಯೊಂದನ್ನು ಪ್ರಕಟಿಸಿತ್ತು. ಸೋಕಾಲ್ಡ್ ಅಲ್ಪಸಂಖ್ಯಾತರು ಗಲಭೆಗಳಿಗೆ ಪ್ರಚೋದನೆ ನೀಡಿ, ನಂತರ ಅವರ ವಿರುದ್ಧ ಯಾರಾದರೂ ತಿರುಗಿಬಿದ್ದಾಗಲೆಲ್ಲ ಇದೇ ಧಾಟಿಯ ವರದಿಗಳನ್ನು, ಸಂಪಾದಕೀಯಗಳನ್ನು, ಲೇಖನಗಳನ್ನು ನಮ್ಮಲ್ಲಿನ ಪತ್ರಿಕೆಗಳೂ ಪ್ರಕಟಿಸುತ್ತವೆ. ಹೀಗೆ ತಿರುಗಿ ಬಿದ್ದವರ ಮೇಲೆಯೇ ತಪ್ಪು ಹೊರಿಸಿ, ಕಳಂಕ ಹಚ್ಚಲಾಗುತ್ತದೆ.
1968ರಲ್ಲಿ ಒಡಿಶಾಗೆ ಬಂದ ಸ್ವಾಮಿ ಲಕ್ಷ್ಮಣಾನಂದರು, ದಲಿತರ, ಬುಡಕಟ್ಟು ಜನರ ಮತ್ತು ತುಳಿತಕ್ಕೊಳಗಾದವರ ಏಳಿಗೆಗಾಗಿ ಚೆಕಪಾಡಾದಲ್ಲಿ ಆಶ್ರಮವನ್ನು ಸ್ಥಾಪಿಸಿದರು. ಆದರೊಟ್ಟಿಗೆ, ಇಂಥ ದುರ್ದೈವಿ ಜನರ ಬವಣೆಯನ್ನೇ ಬಂಡವಾಳವಾಗಿಟ್ಟುಕೊಂಡು ಮತಾಂತರದಲ್ಲಿ ತೊಡಗಿದ್ದ ಕ್ರಿಶ್ಚಿಯನ್ ಮಿಷನರಿಗಳ ಹಾವಳಿಯನ್ನು ತಪ್ಪಿಸುವಲ್ಲೂ ಸ್ಮಾಮೀಜಿ ದುಡಿದರು. ಮತಾಂತರದ ತೀವ್ರ ಬಿರುಗಾಳಿಗೆ ಸಿಲುಕಿ ಸಾಮಾಜಿಕ ಹಂದರಕ್ಕೆ ಯಾವ ಪರಿಯ ಪೆಟ್ಟುನೀಡುತ್ತಿದೆಯೆಂದರೆ, ಬಹುತೇಕ ಬಾರಿ ಅದು ಪ್ರತ್ಯೇಕತೆಯ ಭಾವನೆಯನ್ನು ಜನರಲ್ಲಿ ಮೂಡಿಸಿಬಿಡುತ್ತದೆ. ಇದಕ್ಕೆ ಸೂಕ್ತ ಉದಾಹರಣೆಯೆಂದರೆ ಕೇವಲ ಹೆಸರಿಗಷ್ಟೇ ಭಾರತದ ಭಾಗವಾಗಿರುವ ಈಶಾನ್ಯ ರಾಜ್ಯಗಳು. ವಿಧಿಯ ಕ್ರೂರ ಆಟ ಹೇಗಿತ್ತೆಂದರೆ, ಯಾವುದರ ವಿರುದ್ಧ ಸ್ವಾಮೀಜಿ ಹೋರಾಡಿದ್ದರೋ, ಅದೇ ಬಿರುಗಾಳಿಗೆ ಅವರು ಬಲಿಯಾದರು. ಅವರನ್ನು ಕೊಂದದ್ದು ಕ್ರಿಶ್ಚಿಯನ್ನರಾಗಿ ಮತಾಂತರವಾಗಿದ್ದ ಹಿಂದುಗಳು.
ಫುಲಬನಿ ನ್ಯಾಯಾಲಯದ ನ್ಯಾಯಾಧೀಶರು, ಆಶ್ರಮವನ್ನು ಸ್ಫೋಟಿಸಿ, ಅಂದಾದುಂಧಿ ಗುಂಡು ಹಾರಿಸಿ ಸ್ವಾಮೀಜಿಯ ಜೊತೆಗೆ ಹಲವಾರು ಜನರನ್ನು ಕೊಂದ ಆರೋಪ ಹೊತ್ತಿದ್ದ 7 ಜನರನ್ನು (ಇವರೆಲ್ಲರೂ ಕ್ರಿಶ್ಚಿಯನ್ನರಾಗಿ ಮತಾಂತರವಾದವರು) ಆರೋಪಿಗಳೆಂದು ತೀರ್ಪಿತ್ತಿದೆ. ಈ ತೀರ್ಪು ಒಡಿಶಾದಲ್ಲಿನ ಮಾವೋವಾದಿಗಳ ಮತ್ತು ಮಿಷನರಿ ನಡುವಿನ ಅಕ್ರಮ ಮೈತ್ರಿಯನ್ನು ಮತ್ತೊಮ್ಮೆ ಹೊರಗೆಡವಿದೆ.
ಈ ಮತಾಂತರದ ಉದ್ಯಮ ಎಷ್ಟು ಅಪಾಯಕಾರಿಯಾಗಿ ಬೇರೂರಿದೆ ಎನ್ನುವುದನ್ನು, ಗ್ರಾಹಂ ಸ್ಟೇನ್‌ರ ಕೊಲೆಯ ಕುರಿತು ತಯಾರಾದ ಜಸ್ಟಿಸ್ ವಾಧ್ವಾ ಅವರ ವರದಿಯಲ್ಲೇ ನೋಡಬಹುದು. ಮಾಧ್ಯಮಗಳು ಮತ್ತು ಸೆಕ್ಯುಲರ್ ವ್ಯವಸ್ಥೆಯ ಕಿವಿಗಡಚಿಕ್ಕುವ ಅಳು ಕೊನೆಗೆ ಸ್ಟೇನ್‌ರನ್ನು ಹುತಾತ್ಮರನ್ನಾಗಿ ಬಿಂಬಿಸಲು ಸಫಲವಾಯಿತು. ಆದರೆ ಇವರುಗಳು ಹುತಾತ್ಮನೆಂದು ಬಿಂಬಿಸುತ್ತಿರುವ ವ್ಯಕ್ತಿ, ನಿಜಕ್ಕೂ ಕ್ರೈಸ್ತೇತರರ ಪೈರು ತೆಗೆಯುವವನಾಗಿದ್ದ. ಹಿಂದುಗಳ ಪರಿಭಾಷೆಯಲ್ಲಿ ಹೇಳುವುದಾದರೆ, ಸಾಮಾಜಿಕ ಸಾಮರಸ್ಯವನ್ನು ಛಿದ್ರಮಾಡುವ ವ್ಯಕ್ತಿಯಾಗಿದ್ದ ಗ್ರಾಹಂ ಸ್ಟೇನ್! ಕೆಲವೇ ವರ್ಷಗಳಲ್ಲಿ ಮತಾಂತರದ ಕ್ರೂರ ಬೇರುಗಳು ಅರಿವಿಗೂ ನಿಲುಕದಷ್ಟು ಆಳದಲ್ಲಿ ಪಸರಿಸಿಬಿಟ್ಟವು. ಗ್ರಾಹಂ ಸ್ಟೇನ್‌ರ ಭಂಡ ಮಿಷನರಿಯ ಚಟುವಟಿಕೆಗಳಿಂದ ರೋಸಿ ಹೋಗಿ ಹಿಂದುವೊಬ್ಬ ಅವರನ್ನು ಕೊಂದನೆಂದರೆ, ಕೇವಲ ಹತ್ತೇ ವರ್ಷಗಳಲ್ಲಿ ಅದೇ ಮಿಷನರಿಗಳು ಹಿಂದು ಸಂತ ಮತ್ತವರ ಅನುಯಾಯಿಗಳ ಮೇಲೆ ಕಮಾಂಡೋ ಮಾದರಿಯ ದಾಳಿ ನಡೆಸಿದವು.
ಆದರೆ ಈ ಅಧ್ಯಾಯದಲ್ಲಿ ಕೇವಲ ಮಿಷನರಿಗಳಷ್ಟೇ ಭಾಗವಹಿಸಿರಲಿಲ್ಲ! ಆದರೆ ಮೊದಲು ಮಿಷನರಿಗಳ ಬಗ್ಗೆ ಮಾತನಾಡೋಣ. ಈ ಹತ್ಯಾಕಾಂಡದ ಹಿನ್ನೆಲೆಯನ್ನು ಅರ್ಥ ಮಾಡಿಕೊಳ್ಳಲು ಒಡಿಶಾ ಸರ್ಕಾರದ ವಿಶೇಷ ತನಿಖಾ ತಂಡ ಮುಂದಾದಾಗ ಅದಕ್ಕೆ ದೊರಕಿದ ಪ್ರಮುಖ ಹಾದಿಯೆಲ್ಲವೂ ಹೋಗಿ ತಲುಪಿದ್ದು World vision ಎಂಬ ಸಂಘಟನೆಯತ್ತ. ಆದರೆ ಇದು ಪ್ರಪಂಚದ ಅತಿದೊಡ್ಡ ಕ್ರಿಶ್ಚಿಯನ್ ಮಿಷನ್ ಏಜೆನ್ಸಿ ಎಂಬುದು ಕಾಕತಾಳೀಯವೇನೂ ಅಲ್ಲ! 'ಪ್ರದೇಶ ಅಭಿವೃದ್ಧಿ ಕಾರ್ಯಕ್ರಮಗಳ' ಹೆಸರಿನಲ್ಲಿ ಆರೋಗ್ಯ, ಶಿಕ್ಷಣ ಮತ್ತು ಆದಾಯ ತರುವ ಯೋಜನೆಗಳನ್ನು ನಡೆಸುತ್ತೇವೆ ಎಂದು ಅದು ಹೇಳುತ್ತದಾದರೂ, ಅಭಿವೃದ್ಧಿಯ ಹೆಸರಿನಲ್ಲಿ ಅದು  ನಡೆಸುವುದು ಬೈಬಲ್ ಪ್ರವಚನಗಳನ್ನು! ಭಾರತದಲ್ಲಿ ಈ ಸಂಸ್ಥೆ "Christian relief and development agency' ಎಂಬ ಪೋಷಾಕಿನಲ್ಲಿ ಕಾಣಿಸಿಕೊಂಡರೂ, ಅಮೆರಿಕದ ಆಂತರಿಕ ಆದಾಯ ಸೇವೆ ಅದನ್ನು "Christian Church Ministry' ಎಂದೇ ಗುರುತಿಸುತ್ತದೆ. ಇನ್ನು ಅದೇ ಸಂಸ್ಥೆ ಘಂಟಾಘೋಷವಾಗಿ ಸಾರಿರುವ ತನ್ನ ಜಾಹಿರಾತಿನಲ್ಲಿ "World vision ಕ್ರಿಶ್ಚಿಯನ್ನರ ಅಂತಾರಾಷ್ಟ್ರೀಯ ಪಾಲುದಾರಿಕೆಯಾಗಿದ್ದು, ಅದರ ಉದ್ದೇಶ ನಮ್ಮ ಪ್ರಭು ಮತ್ತು ರಕ್ಷಕ ಏಸು ಕ್ರಿಸ್ತನನ್ನು ಹಿಂಬಾಲಿಸುವುದು, ಬಡವರು ಮತ್ತು ತುಳಿತಕ್ಕೊಳಗಾದವರಿಗಾಗಿ ಕೆಲಸ ಮಾಡುವುದು, ಮಾನವ ರೂಪಾಂತರವನ್ನು ಪ್ರೋತ್ಸಾಹಿಸುವುದು, ದೇವರ ಸಾಮ್ರಾಜ್ಯದಲ್ಲಿ ಉತ್ತಮ ಸುದ್ದಿಗೆ ಸಾಕ್ಷಿಯಾಗುವುದು" ಎಂದು ಹೇಳಿಕೊಳ್ಳುತ್ತದೆ. ಸರಳವಾಗಿ ಹೇಳಬೇಕೆಂದರೆ World vision ಎಂಬುದು ಒಂದು ಮಿಷನರಿಯಾಗಿದ್ದು, ಅದರ ಮೂಲ ಉದ್ದೇಶ ಅನ್ಯ ಧರ್ಮೀಯರನ್ನು ಮತಾಂತರಿಸುವುದು.
ಇನ್ನು ಸ್ವಾಮಿ ಲಕ್ಷ್ಮಣಾನಂದರ ಮೇಲೆ ನಡೆದ ಹಲವಾರು ದಾಳಿಗಳ ಹಿಂದಿದ್ದದ್ದು ಕಾಂಗ್ರೆಸ್‌ನ ರಾಜ್ಯ ಸಭಾ ಎಂಪಿ, ರಾಧಾಕಾಂತ್ ನಾಯಕ್, ಎನ್ನುವ ಸಂಗತಿ ವಿಶೇಷ ತನಿಖಾ ತಂಡಕ್ಕೆ ತಿಳಿಯಿತು. ಈ ರಾಧಾಕಾಂತ್ ನಾಯಕ್ ಕೂಡ ಕ್ರಿಶ್ಚಿಯನ್ನರಾಗಿ ಮತಾಂತರವಾದ ಹಿಂದುವಾಗಿದ್ದು, ಈತ ಆ ಸಮಯದಲ್ಲಿ World vision ನ ಒಡಿಶಾ ಘಟಕದ ಮುಖ್ಯಸ್ಥನಾಗಿದ್ದ. ಇದೂ ಕಾಕತಾಳೀಯವಲ್ಲ! ಲಕ್ಷ್ಮಣಾನಂದರ ಸಾವಿಗೆ 8 ತಿಂಗಳ ಹಿಂದೆ, ಅಂದರೆ ಅವರಿದ್ದ ವಾಹನದ ಮೇಲೆ 2007 ಡಿಸೆಂಬರ್‌ನಲ್ಲಿ ದಾಳಿಯೊಂದು ನಡೆದಿತ್ತು. ಆಗ ಸ್ವಾಮೀಜಿ ಕೊಟ್ಟ ದೂರಿನಲ್ಲಿ ರಾಧಾಕಾಂತ್ ನಾಯಕ್‌ನ ಹೆಸರಿತ್ತು. ಇಷ್ಟೇ ಅಲ್ಲ, ಪ್ರದೀಪ್ ಕುಮಾರ್ ದಾಸ್ ಎಂಬ World visionನ ಕಾರ್ಯಕರ್ತನೊಬ್ಬನನ್ನೂ ಪೊಲೀಸರು ಈ ಪ್ರಕರಣದಲ್ಲಿ ಬಂಧಿಸಿದರು. ಸ್ವಾಮೀಜಿಯ ಕೊಲೆಯಲ್ಲಿ ಕ್ರಿಶ್ಚಿಯನ್ ಮಿಷನರಿಗಳ ಪಾತ್ರವಿದೆ ಎಂಬ ಸಂಶಯ ಇದರಿಂದ ದಟ್ಟವಾಗುವುದಿಲ್ಲವೇ?
ನಂತರದ ದಿನಗಳ ತನಿಖೆಗಳು, ಲಕ್ಷ್ಮಣಾನಂದರ ಹತ್ಯೆಯಲ್ಲಿ ಮಿಷನರಿಗಳೊಂದಿಗೆ ಮಾವೋಗಳೂ(ನಕ್ಸಲರು) ಕೈಜೋಡಿಸಿದ್ದರು ಎನ್ನುವುದನ್ನು ಹೊರಗೆಡವಿದವು. ಆದರೆ ನಕ್ಸಲರು, ಈ ಹತ್ಯೆಯಲ್ಲಿ ತಮ್ಮ ಪಾತ್ರವಿಲ್ಲ ಎಂದು ಹೇಳಿದರಾದರೂ, ಕೆಲವು ನಕ್ಸಲ್ ಕೇಡರ್‌ಗಳು ತಪ್ಪೊಪ್ಪಿಕೊಂಡು ಪೊಲೀಸರಿಗೆ ಶರಣಾದರು. ಇನ್ನು ಪೊಲೀಸರು ಲಕ್ಷ್ಮಣಾನಂದರ ಕೊಲೆ ಪ್ರಕರಣದಲ್ಲಿ ಸಭ್ಯಸಾಚಿ ಪಾಂಡಾ ಎನ್ನುವ ಸಿಪಿಐ(ಮಾವೋಯಿಸ್ಟ್)ನ ನಾಯಕನ ವಿರುದ್ಧವೂ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಹೇಗೆ ನೋಡಿದರೂ ಕೂಡ, ಈ ಹತ್ಯೆಯನ್ನು ನಕ್ಸಲರು ಮತ್ತು ಮಿಷನರಿಗಳೇ ನಡೆಸಿವೆ ಎನ್ನುವುದು ಸ್ಪಷ್ಟವಾಗುತ್ತದೆ.  
ದೇಶದ ಜಾತ್ಯತೀತವಾದಿಗಳು ಮತ್ತು ಮಾಧ್ಯಮಗಳು ಸ್ವಾಮಿಲಕ್ಷ್ಮಣಾನಂದರ ಹತ್ಯೆಯೆಸಗಿದವರಿಗೆ ಶಿಕ್ಷೆಯಾಗಿರುವ ಸುದ್ದಿಯನ್ನು ಮುಚ್ಚಿಹಾಕಿವೆ. ಒಂದು ವೇಳೆ ಸ್ವಾಮಿ ಲಕ್ಷ್ಮಣಾನಂದರ ಬದಲಾಗಿ ಗ್ರಾಹಂ ಸ್ಟೇನ್‌ರಂಥ ಇನ್ನೊಬ್ಬ ವ್ಯಕ್ತಿಯೇನಾದರೂ ಸತ್ತಿದ್ದರೆ, ಕಥೇಯೇ ಬೇರೆಯಾಗುತ್ತಿತ್ತು. ಆ ಕಥೆಯನ್ನು ಇಂದಿಗೂ ಜೀವಂತವಾಗಿ ಉಳಿಸಿಕೊಂಡು ಬರಲಾಗುತ್ತಿತ್ತು. ಈ ದೇಶವನ್ನು ಬಿಗಿಯಾಗಿ ಜೋಡಿಸಿರುವ ಸಾಂಸ್ಕೃತಿಕ ಮತ್ತು ನಾಗರಿಕತೆಯ ಕೊಂಡಿಗಳನ್ನು, ಮತಾಂಧತೆಯಿಂದ ರಕ್ಷಿಸಲು ಹೋರಾಡಿದರು ಸ್ವಾಮೀಜಿ. ಅವರು ವೀರನಂತೆ ಬದುಕಿದರು ಕೊನೆಗೆ ವೀರಮರಣವನ್ನಪ್ಪಿದರು. ಈಗಲೂ ಅವರಂಥವರಿಂದಾಗಿಯೇ ಭಾರತ ಪಾಕಿಸ್ತಾನದಂಥ ನರಕ ಕೂಪವಾಗಿಲ್ಲ ಅಥವಾ ಮತಾಂಧ ಮಧ್ಯಯುಗೀಯ ಯುರೋಪ್ ಆಗಿಲ್ಲ.
ಅವರನ್ನು ಬದುಕಿಸುವುದಕ್ಕಂತೂ ಸಾಧ್ಯವಿಲ್ಲ. ಆದರೂ ನಾವು ಅವರು ತೋರಿಸಿಹೋದ ಮಾರ್ಗದಲ್ಲಿ ನಡೆದು ಅವರ ಶ್ರೇಷ್ಠತೆಯನ್ನು ಚಿರಸ್ಥಾಯಿಯಾಗಿಸಬಹುದು. ಅದೂ ಕಷ್ಟಕರ ಕೆಲಸವೆಂದರೆ, ಕೊನೆಪಕ್ಷ ಆ ಪವಿತ್ರ ಚೇತನದ ನೆನಪಲ್ಲಿ ಒಂದೆರಡು ಕಣ್ಣಹನಿಯನ್ನಾದರೂ ಹರಿಸೋಣ.

- ಸಂದೀಪ್ ಬಾಲಕೃಷ್ಣ
deepu.sandeep@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement