ಧಿಕ್ಕಾರದ ಮತದೊಂದಿಗೆ ಕಡ್ಡಾಯ ಮತದಾನವೂ ಬೇಕು
1947ರಲ್ಲಿ ಭಾರತ ಸ್ವತಂತ್ರವಾಯಿತಷ್ಟೆ. ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದುಕೊಂಡಿದ್ದು ನಮ್ಮ ದೇಶದ ಮಟ್ಟಿಗೆ ಸಾಧನೆಯ ಮೈಲಿಗಲ್ಲು...
1947ರಲ್ಲಿ ಭಾರತ ಸ್ವತಂತ್ರವಾಯಿತಷ್ಟೆ. ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದುಕೊಂಡಿದ್ದು ನಮ್ಮ ದೇಶದ ಮಟ್ಟಿಗೆ ಸಾಧನೆಯ ಮೈಲಿಗಲ್ಲು. ಆದರೆ ಲಕ್ಷಾಂತರ ಮಂದಿಗೆ ಈ ಸಂಭ್ರಮವನ್ನು ಆಚರಿಸುವ ಅವಕಾಶವೇ ಒದಗಲಿಲ್ಲ. ಅವರೆಲ್ಲ ದೇಶವಿಭಜನೆಯ ಪರಿಣಾಮವಾಗಿ ಉಂಟಾದ ದಳ್ಳುರಿಯಲ್ಲಿ ಬೇಯುತ್ತಿದ್ದರು.
ವೈಯಕ್ತಿಕವಾಗಿ ನಾನು ನನ್ನ ಜೀವನದ ಮೊದಲ 20 ವರ್ಷಗಳನ್ನು ಕರಾಚಿಯಲ್ಲಿ ಕಳೆದೆ. ಸಿಂಧ್ ಪ್ರಾಂತ್ಯದ ರಾಜಧಾನಿ ಆಗಿತ್ತದು. ಪಾಕಿಸ್ತಾನದ ರಚನೆ ಆಗುತ್ತಲೇ ಕರಾಚಿಯೇ ರಾಜಧಾನಿ ಆಯಿತು. ಆನಂತರ ರಾವಲ್ಪಿಂಡಿ ಬಳಿಯ ಇಸ್ಲಾಮಾಬಾದ್ ಅನ್ನು ರಾಜಧಾನಿಯನ್ನಾಗಿ ಮಾಡುವವರೆಗೆ ಕರಾಚಿಯೇ ಪಾಕಿಸ್ತಾನದ ರಾಜಧಾನಿ ಆಗಿತ್ತು.
1942ರಲ್ಲಿ ಹೈಸ್ಕೂಲ್ ಪಾಸಾಗುತ್ತಲೇ ನಾನು ಆರೆಸ್ಸೆಸ್ನ ಸ್ವಯಂಸೇವಕನಾದೆ. ನನ್ನ ಜೀವನದ ಬಹುಮುಖ್ಯ ತಿರುವೇ ಅದಾಗಿತ್ತು. ಅದು ನನ್ನ ಬದುಕಿನ ವಿಚಾರಗಳನ್ನು ಪ್ರಭಾವಿಸಿ ರೂಪಿಸಿತು. 1947ರಲ್ಲಿ ನಾನು ಆರೆಸ್ಸೆಸ್ನ ಪೂರ್ಣಾವಧಿ ಪ್ರಚಾರಕನಾದೆ. ದೇಶ ವಿಭಜನೆ ಆಗುತ್ತಲೇ ಸಿಂಧ್ ಪ್ರಾಂತ್ಯದ ಹೆಚ್ಚಿನ ಪ್ರಚಾರಕರಿಗೆ ರಾಜಸ್ಥಾನದ ಜವಾಬ್ದಾರಿಯನ್ನು ನೀಡಲಾಯಿತು. ಹೀಗಾಗಿ 1947ರಿಂದ 1957ರವರೆಗೆ ನಾನು ರಾಜಸ್ಥಾನದಲ್ಲಿದ್ದೆ. ಮೊದಲು ಅಳ್ವಾರ್ನಲ್ಲಿ, ನಂತರ ಭರತಪುರ, ಆನಂತರ ಕೋಟಾ ಹಾಗೂ ಕೊನೆಯಲ್ಲಿ ಜೈಪುರ. ಸ್ವಾತಂತ್ರ್ಯದ ಮೊದಲ ದಶಕದಲ್ಲಿಯೇ, ಭಾರತದ ಸಂವಿಧಾನ ಅಂಗೀಕಾರವಾದ ವರ್ಷದ ನಂತರ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರು ಭಾರತೀಯ ಜನಸಂಘವನ್ನು ಸ್ಥಾಪಿಸಿದರು. ಅದೇ ಈಗ ಭಾರತೀಯ ಜನತಾ ಪಕ್ಷವಾಗಿದೆ.
1951ರಲ್ಲಿ ಮುಖರ್ಜಿ ಅವರು ತೆಗೆದುಕೊಂಡ ಆ ನಡೆಯೇ ಇವತ್ತು ಪಕ್ಷವನ್ನು ಅದಿರುವ ಬಲಶಾಲಿ ಜಾಗದಲ್ಲಿ ತಂದು ನಿಲ್ಲಿಸಿದೆ. ಪಂಡಿತ್ ದೀನದಯಾಳ್ ಉಪಾಧ್ಯಾಯ, ನಾನಾಜಿ ದೇಶ್ಮುಖ್, ಅಟಲ್ ಬಿಹಾರಿ ವಾಜಪೇಯಿ, ಕುಶಭಾವು ಠಾಕ್ರೆ, ಜಗನ್ನಾಥರಾವ್ ಜೋಶಿ, ಸುಂದರ್ ಸಿಂಗ್ ಭಂಡಾರಿ, ಕೈಲಾಸಪತಿ ಮಿಶ್ರಾ, ಪಿ. ಪರಮೇಶ್ವರನ್, ವಿಷ್ಣುಕಂಠ ಶಾಸ್ತ್ರಿ, ಜಗದೀಶ್ ಪ್ರಸಾದ್ ಮಾಥೂರ್ ಮುಂತಾದ ದೇಶಭಕ್ತರ ಪಡೆಯಿಂದಾಗಿ ಪಕ್ಷವು ಬೆಳೆದುಕೊಂಡುಬಂತು. ಇವರೆಲ್ಲರಿಗೂ ಭಾರತವನ್ನು ಶ್ರೇಷ್ಠತೆಗೆ ಏರಿಸುವುದು ಪ್ರೇರಣಾದಾಯಿ ಆಗಿತ್ತೇ ಹೊರತು ರಾಜಕೀಯ ಬಲಾಬಲದ ಲೆಕ್ಕಾಚಾರ ಅಲ್ಲ.
ಈ ಮೇಲೆ ಹೆಸರಿಸಿದ ಹೆಚ್ಚಿನವರೆಲ್ಲ ಆರೆಸ್ಸೆಸ್ ಪ್ರಚಾರಕರೇ ಆಗಿದ್ದವರು. ಆಯಾ ಕಾಲಘಟ್ಟದಲ್ಲಿ ಅವರಿಗೆ ರಾಜಕೀಯ ಜವಾಬ್ದಾರಿಯನ್ನು ಕೊಡುವುದಕ್ಕೆ ಕಾರಣವಾಗಿದ್ದು ಜನಸಂಘವನ್ನು ಪ್ರಾರಂಭಿಸಿದ ಮುಖರ್ಜಿ ಅವರು ಆಗಿನ ಸರಸಂಘಚಾಲಕರಾದ ಗುರೂಜಿ (ಎಂ. ಎಸ್. ಗೋಳ್ವಾಲ್ಕರ್) ಅವರ ಜತೆ ನಡೆಸಿದ್ದ ಮಾತುಕತೆ.
1957ರಲ್ಲಿ ರಾಜಸ್ಥಾನದಿಂದ ದೆಹಲಿಗೆ ಬಂದು ವಾಜಪೇಯಿ ಅವರಿಗೆ ಸಹಕರಿಸುವಂತೆ ನನಗೆ ಪಂಡಿತ್ ದೀನ್ದಯಾಳ್ ಉಪಾಧ್ಯಾಯ ಅವರಿಂದ ಕರೆಬಂತು. ವಾಜಪೇಯಿ ಅವರು ಸಂಸತ್ತಿಗೆ ಚುನಾಯಿತರಾಗಿ ಪಕ್ಷದ ಸಂಸದೀಯ ವಿಭಾಗವನ್ನು ಬಲಪಡಿಸುವ ಕಾರ್ಯದಲ್ಲಿದ್ದರು. ಅವರಿಗೆ ಸಹಕರಿಸುತ್ತ, ಜಗತ್ತಿನ ನಾನಾ ಕಡೆಗಳ ಪ್ರಜಾಪ್ರಭುತ್ವದಲ್ಲಿರುವ ಚುನಾವಣಾ ವ್ಯವಸ್ಥೆಯನ್ನೂ ಅಧ್ಯಯನ ಮಾಡುವಂತೆ ದೀನ್ದಯಾಳರು ನನಗೆ ಸೂಚಿಸಿದ್ದರು. ಭಾರತದ ಪ್ರಜಾಪ್ರಭುತ್ವವನ್ನು ಬೆಳಗುವಂತೆ ಮಾಡಬಲ್ಲ ಚುನಾವಣಾ ಸುಧಾರಣೆ ಕುರಿತೂ ಗಮನ ಹರಿಸುವಂತೆ ಹೇಳಿದ್ದರು. ಆಗಿನಿಂದಲೇ ನಾನು ಚುನಾವಣೆ ಸುಧಾರಣೆ ಬಗ್ಗೆ ಚಿಂತನೆ ನಡೆಸಿಕೊಂಡಿದ್ದೆ.
ಕಳೆದ ವಾರ, 'ಪೀಪಲ್ಸ್ ಯೂನಿಯನ್ ಆಫ್ ಸಿವಿಲ್ ಲಿಬರ್ಟಿಸ್' ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪರಿಗಣಿಸಿದ ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಸದಾಶಿವಂ ಅವರಿದ್ದ ನ್ಯಾಯಪೀಠವು ಜನರಿಗೆ ನೇತ್ಯಾತ್ಮಕ ಮತ ಚಲಾವಣೆಗೆ ಅವಕಾಶ ಮಾಡಿಕೊಡಬೇಕು ಎಂದು ನಿರ್ದೇಶಿಸಿತು. ವಿದ್ಯುನ್ಮಾನ ಮತಯಂತ್ರವು ಎಲ್ಲ ಅಬ್ಯರ್ಥಿಗಳ ಹೆಸರನ್ನು ಹೊಂದಿರುವುದರ ಜತೆಗೆ ಕೊನೆಯಲ್ಲಿ, ಇವರ್ಯಾರೂ ಅಲ್ಲ ಎಂಬ ಬಟನ್ ಅನ್ನೂ ಒಳಗೊಂಡಿರಬೇಕು ಎಂದು ಸುಪ್ರೀಂಕೋರ್ಟ್ ಸೂಚಿಸಿದೆ. ಈ ನಿರ್ಧಾರ ವ್ಯಾಪಕವಾಗಿ ಸ್ವಾಗತ ಪಡೆದುಕೊಂಡಿದೆ. ಹೀಗೊಂದು ಹೆಚ್ಚುವರಿ ಒತ್ತುಗುಂಡಿಯನ್ನು ಅಳವಡಿಸುವುದಕ್ಕೆ ತನಗೆ ಯಾವ ಸಮಸ್ಯೆಯೂ ಇಲ್ಲ ಎಂದು ಕೇಂದ್ರ ಚುನಾವಣಾ ಆಯೋಗವೂ ಹೇಳಿದೆ.
ಆದರೆ ಇವತ್ತಿನ ಪರಿಸ್ಥಿತಿಯಲ್ಲಿ ಭಾರತ ಸಂವಿಧಾನ ತಮಗೆ ಕೊಡಮಾಡಿರುವ ಮತದಾನದ ಹಕ್ಕನ್ನು ಬಲವಾದ ಕಾರಣಗಳು ಇಲ್ಲದಿದ್ದಾಗಿಯೂ ಬಳಸದಿರುವವರ ಸಂಖ್ಯೆ ಹೆಚ್ಚಿದೆ. ಹೀಗಾಗಿ ನೇತ್ಯಾತ್ಮಕ ಮತದಾನದ ಹಕ್ಕು ಅರ್ಥಪೂರ್ಣವಾಗುವುದು ಕಡ್ಡಾಯ ಮತದಾನ ಜಾರಿಗೆ ಬಂದಾಗ ಮಾತ್ರ. ಈ ನಿಟ್ಟಿನಲ್ಲಿ ಗಂಭೀರ ಹೆಜ್ಜೆಗಳನ್ನು ಇಟ್ಟಿರುವ ಏಕಮೇವ ರಾಜ್ಯವೆಂದರೆ ಗುಜರಾತ್. ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕಡ್ಡಾಯ ಮತದಾನ ಮಸೂದೆಯನ್ನು ಎರಡು ಬಾರಿ ಮಂಡಿಸಲಾಯಿತಾದರೂ ಅದಕ್ಕೆ ರಾಜ್ಯಪಾಲರ ಸಮ್ಮತಿಯೂ ಸಿಗಲಿಲ್ಲ, ದೆಹಲಿಯ ಅಂಕಿತವೂ ಲಭಿಸಲಿಲ್ಲ.
ಕೇಂದ್ರ ಚುನಾವಣಾ ಆಯೋಗದ ಮಾಜಿ ಆಯುಕ್ತ ಎಸ್. ವೈ. ಖುರೇಷಿ ಅವರು ಈ ವಾರ ಎರಡು ಒಳ್ಳೆಯ ಲೇಖನಗಳನ್ನು ಬರೆದಿದ್ದಾರೆ. ಅಕ್ಟೋಬರ್ 2ರ ಎಕನಾಮಿಕ್ಸ್ ಟೈಮ್ ಹಾಗೂ ಅಕ್ಟೋಬರ್ 3ರ ಇಂಡಿಯನ್ ಎಕ್ಸ್ಪ್ರೆಸ್ಗಳಲ್ಲಿ ಈ ಲೇಖನಗಳು ಪ್ರಕಟವಾಗಿವೆ. ತೀರ್ಪಿನ ಪರಿಣಾಮಗಳನ್ನು ವಿಶ್ಲೇಷಣೆಗೆ ಹಚ್ಚಿರುವ ಅವರು, ಇದರಿಂದ ಉಂಟಾಗಬಹುದಾದ ಸಮಸ್ಯೆಗಳ ಬಗ್ಗೆ ಗಮನ ಸೆಳೆದಿದ್ದಾರೆ. ಅದೇನೆ ಇದ್ದರೂ ಸುಪ್ರೀಂಕೋರ್ಟ್ನ ತೀರ್ಪು ಸ್ವಾಗತಾರ್ಹ ಚರ್ಚೆಯೊಂದನ್ನು ಹುಟ್ಟುಹಾಕಿರುವ ಬಗ್ಗೆ ಅವರು ಉಲ್ಲೇಖಿಸಿದ್ದಾರೆ. ಖುರೇಷಿ ಅವರ ಅಭಿಪ್ರಾಯದಂತೆ ಸುಪ್ರೀಂಕೋರ್ಟ್ನ ಆದೇಶವು ಧಿಕ್ಕಾರದ ಮತದಾನಕ್ಕೆ ಅವಕಾಶ ಕಲ್ಪಿಸಿಲ್ಲ, ಬದಲಿಗೆ ಮತದ ಗೈರಿಗೆ ಅನುಕೂಲ ನೀಡಿರುವಂತಾಗಿದೆ.
ಇವತ್ತು ಜಗತ್ತಿನ 31 ದೇಶಗಳಲ್ಲಿ ಕಡ್ಡಾಯ ಮತದಾನಕ್ಕೆ ಕಾಯ್ದೆಗಳು ಜಾರಿಯಲ್ಲಿವೆ. ಆದರೆ ಆ ಕಾಯ್ದೆಗಳ ವಿವರಗಳನ್ನು ಅಭ್ಯಸಿಸಿದವರು ಹೇಳುವಂತೆ- ಪ್ರಜೆಗಳು ಸಕಾರಣವಿಲ್ಲದೇ ಮತದಾನದಿಂದ ದೂರ ಉಳಿಯದಂತೆ ಅವರನ್ನು ಪ್ರೇರೇಪಿಸುವ ಕೆಲಸವನ್ನು ಈ ಕಾಯ್ದೆಗಳು ಮಾಡುತ್ತಿವೆ.
ಬ್ಯಾಲಟ್ ಪೇಪರ್ ಅಥವಾ ವಿದ್ಯುನ್ಮಾನ ಮತಯಂತ್ರಗಳಲ್ಲಿ 'ಮೇಲಿನವರು ಯಾರೂ ಬೇಡ' ಎಂಬ ಒತ್ತುಗುಂಡಿ ಇರುವ ಏಳು ರಾಷ್ಟ್ರಗಳು ಹಾಗೂ ಅಮೆರಿಕದ ಒಂದು ರಾಜ್ಯದ ಉದಾಹರಣೆಯನ್ನು ಸುಪ್ರೀಂಕೋರ್ಟ್ ತನ್ನ ತೀರ್ಪಿನ ಸಂದರ್ಭದಲ್ಲಿ ನೀಡಿದೆ. ಫ್ರಾನ್ಸ್, ಬೆಲ್ಜಿಯಂ, ಬ್ರೆಜಿಲ್, ಗ್ರೀಸ್, ಚಿಲಿ, ಬಾಂಗ್ಲಾದೇಶ ಮತ್ತು ಉಕ್ರೇನ್ ದೇಶಗಳ ಉದಾಹರಣೆ ಹಾಗೂ ಅಮೆರಿಕದ ನೆವಡಾ ರಾಜ್ಯದ ಉದಾಹರಣೆಯನ್ನು ತೀರ್ಪು ಉಲ್ಲೇಖಿಸಿದೆ. ಈ ಪೈಕಿ ಮೇಲೆ ಉದಾಹರಿಸಿದ ಕ್ರಮವಾಗಿ ಐದು ರಾಷ್ಟ್ರಗಳಲ್ಲಿ ಕಡ್ಡಾಯ ಮತದಾನವೂ ಇದೆ.
ಕಡ್ಡಾಯ ಮತದಾನವನ್ನು ಪ್ರೇರೇಪಿಸುವ ನಿಟ್ಟಿನಲ್ಲಿ ಹಲ ಬಗೆಯ ಕಾನೂನುಗಳನ್ನು ಹೊಂದಿರುವ ಇತರ ರಾಷ್ಟ್ರಗಳೆಂದರೆ- ಆಸ್ಟ್ರಿಯಾ, ಅರ್ಜೆಂಟೀನಾ, ಆಸ್ಟ್ರೇಲಿಯ, ಬೊಲಿವಿಯ, ಕೋಸ್ಟಾರಿಕಾ, ಸೈಪ್ರಸ್, ಡೊಮಿನಿಕನ್ ರಿಪಬ್ಲಿಕ್, ಇಕ್ವೆಡಾರ್, ಈಜಿಪ್ತ್, ಫಿಜಿ, ಗಬಾನ್, ಗ್ವಾಟೆಮಾಲಾ, ಹೊಂಡುರಾಸ್, ಇಟಲಿ, ಲಿಂಚಸ್ಟೈನ್, ಲುಕ್ಸೆಂಬರ್ಗ್, ಮೆಕ್ಸಿಕೊ, ನೌರು, ಪೆರುಗ್ವೆ, ಪೆರು, ಫಿಲಿಪ್ಪೈನ್ಸ್, ಸಿಂಗಾಪುರ, ಸ್ವಿಡ್ಜರ್ಲೆಂಡ್, ಥೈಲ್ಯಾಂಡ್, ಟರ್ಕಿ, ಉರುಗ್ವೆ.
ನನಗನ್ನಿಸುವುದೇನೆಂದರೆ, ಚುನಾವಣಾ ಆಯೋಗವು ಎಲ್ಲ ಪಕ್ಷಗಳ ಸಭೆ ಕರೆದು ಸುಪ್ರೀಂಕೋರ್ಟ್ನ ತೀರ್ಪನ್ನು ಮತ್ತು ಮೇಲಿನ ಸುಮಾರು 30 ದೇಶಗಳಲ್ಲಿ ಇರುವ ಚುನಾವಣಾ ಕಾನೂನುಗಳ ಸಮಗ್ರ ವರದಿಯನ್ನೂ ನೀಡಿದರೆ ಈ ಒಟ್ಟಾರೆ ವಿಷಯದ ತಳಸ್ಪರ್ಶಿ ಚರ್ಚೆಗೆ ಅವಕಾಶವಾಗಬಹುದು.
- ಎಲ್. ಕೆ. ಆಡ್ವಾಣಿ