ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ವಿಚ್ಛೇದನ ಕಾನೂನು ಪುರುಷ ಶತ್ರು!

ವಿಚ್ಛೇದನ ಕಾನೂನು ಈಗ ಮಹಿಳಾ ಸ್ನೇಹಿಯಾಗಿದ್ದು ಪುರುಷನ ಪಾಲಿಗೆ ದೊಡ್ಡ ಶತ್ರುವೆಂದೇ ಹೇಳಬೇಕಾಗಿದೆ. ಈ ಕಾನೂನು ಸ್ತ್ರೀ ಪುರುಷರಿಬ್ಬರ...

Rashmi Kasaragodu
Updated On : 8 Oct 2013, 11:49 am

ವಿಚ್ಛೇದನ ಕಾನೂನು ಈಗ ಮಹಿಳಾ ಸ್ನೇಹಿಯಾಗಿದ್ದು ಪುರುಷನ ಪಾಲಿಗೆ ದೊಡ್ಡ ಶತ್ರುವೆಂದೇ ಹೇಳಬೇಕಾಗಿದೆ. ಈ ಕಾನೂನು ಸ್ತ್ರೀ ಪುರುಷರಿಬ್ಬರ ಸ್ನೇಹಿಯಾಗಬೇಕೇ ಹೊರತು ಹೀಗೆ ಪುರುಷರನ್ನು ಸಂಪೂರ್ಣವಾಗಿ ಕಡೆಗಣಿಸಿ ಸ್ತ್ರೀ ವರ್ಗವನ್ನು ಓಲೈಸುವ ಸ್ತ್ರೀ ಪಕ್ಷಪಾತಿ ಕಾನೂನಾಗಬಾರದಿತ್ತು. ಈ ಕಾನೂನು ಪುರುಷರನ್ನು ಅಬಲರನ್ನಾಗಿಸುವ ಮೂಲಕ ಮಹಿಳೆಯರನ್ನು ಸಬಲರನ್ನಾಗಿಸಲು ಹೊರಟಿರುವುದು ದುರದೃಷ್ಟದ ಸಂಗತಿ.
ಈ ವಿಚ್ಛೇದನ ಕಾನೂನು ಅದ್ಹೇಗೆ ಗಂಡ-ಹೆಂಡತಿಯರ ನಡುವಣ ಸಮಾನತೆಗೆ ಪೂರಕವಾಗುತ್ತದೆ? ಪ್ರಸ್ತುತ ಗಂಡು ಮಕ್ಕಳಂತೆಯೇ ಹೆಣ್ಣುಮಕ್ಕಳಿಗೂ ತಂದೆತಾಯಿಯರು ಸಮನಾಗಿ ಆಸ್ತಿ ಪಾಲು ಕೊಡುತ್ತಾರೆ. ಗಂಡನ ಮನೆಗೆ ಹೋಗುವವಳೆಂದು ಮಗಳಿಗೆ ತುಸು ಹೆಚ್ಚೇ ಪಾಲು ಕೊಡುವ ತಂದೆ ತಾಯಿಯರೂ ಇದ್ದಾರೆ. ಗಂಡು ಮಕ್ಕಳಂತೆಯೇ ಹೆಣ್ಣು ಮಕ್ಕಳಿಗೂ ಸಮನಾದ ವಿದ್ಯಾಭ್ಯಾಸ ಮಾಡಿಸುತ್ತಾರೆ. ಪುರುಷರಂತೆ ಮಹಿಳೆಯರಿಗೂ ಕೂಡ ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ಮೂಲಕ ಸರ್ಕಾರ ಉದ್ಯೋಗ ನೀಡುತ್ತಿದೆ. ತಮ್ಮ ದುಡಿಮೆಯಿಂದ ಮಹಿಳೆಯರು ತಮ್ಮ ಹೆಸರಿನಲ್ಲಿಯೇ ಆಸ್ತಿ ಗಳಿಸಿಕೊಳ್ಳುತ್ತಾರೆ. ಹೆಂಡತಿ ಹೊರಗಡೆ ದುಡಿಯುತ್ತಾಳೆಂದು ಗಂಡನೂ ಹೆಂಡತಿಗೆ ಎಲ್ಲಾ ವಿಧದಲ್ಲಿಯೂ ಇಂದು ನೆರವು ನೀಡುತ್ತಿದ್ದಾನೆ. ವಸ್ತುಸ್ಥಿತಿ ಹೀಗಿದ್ದಾಗ, ಅನಿವಾರ್ಯ ಪರಿಸ್ಥಿತಿಯಲ್ಲಿ ಗಂಡ-ಹೆಂಡತಿಯರ ನಡುವೆ ವಿಚ್ಛೇದನ ಎದುರಾದಾಗ ಹೆಂಡತಿಯ ಉದ್ಯೋಗ, ತಂದೆ ತಾಯಿಯಿಂದ ಆಕೆ ಪಡೆದುಕೊಂಡ ಆಸ್ತಿ, ಆಕೆ ವೈಯಕ್ತಿಕವಾಗಿ ಗಳಿಸಿರುವ ಆಸ್ತಿ ಇದ್ಯಾವುದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೆ ಗಂಡನೇ ತನ್ನ ಸ್ವಯಾರ್ಜಿತ ಮತ್ತು ಪಿತ್ರಾರ್ಜಿತ ಆಸ್ತಿಯಲ್ಲಿ ಹೆಂಡತಿಗೆ ಸಮಪಾಲು ನೀಡಬೇಕೆನ್ನುವುದು ಎಷ್ಟರಮಟ್ಟಿಗೆ ಸರಿ? ವಿಚ್ಛೇದನದ ನಂತರ ಹೆಂಡತಿಯ ಬಳಿ ಆಗುವ ಒಟ್ಟು ಆಸ್ತಿ, ಗಂಡನ ಬಳಿ ಉಳಿಯುವ ಆಸ್ತಿ ಇವೆರಡರ ನಡುವೆ ಸಮಾನತೆ ಇರುತ್ತದೆಯೇ?
ಈ ಬಗ್ಗೆ ಕಾನೂನು ನಿರ್ಮಾಪಕರು ಚಿಂತಿಸಿದ್ದಾರೆಯೇ? ವಿಚ್ಛೇದನದ ನಂತರ ಇಬ್ಬರಿಗೂ ಮರುಮದುವೆಯಾಗುವ ಅವಕಾಶ ಇದ್ದೇ ಇದೆ. ಹೆಂಡತಿ ಮತ್ತೊಬ್ಬರನ್ನು ಮದುವೆಯಾಗಿ ಆ ಗಂಡನ ಆಸ್ತಿಗೂ ಪಾಲುದಾರಳಾಗುತ್ತಾಳೆ. ಬದಲಾಗಿ ಗಂಡನಾದವನು ಮತ್ತೊಬ್ಬಳನ್ನು ಮದುವೆಯಾಗಿ ಅನಿವಾರ್ಯ ಪರಿಸ್ಥಿತಿಯಲ್ಲಿ ಅವಳಿಗೂ ವಿಚ್ಛೇದನ ನೀಡುವ ಪ್ರಸಂಗ ಬಂದರೆ ಆಗ ಅವನ ಬಳಿ ಉಳಿಯುವ ಆಸ್ತಿ ಎಷ್ಟು? ಇದಕ್ಕೆ ವ್ಯತಿರಿಕ್ತವಾಗಿ ಹೆಣ್ಣಾದವಳು ಎರಡನೇ ಗಂಡನಿಂದಲೂ ಅನಿವಾರ್ಯ ಪರಿಸ್ಥಿತಿಯಲ್ಲಿ ವಿಚ್ಛೇದನ ಪಡೆದುಕೊಂಡರೆ ಅವಳ ಬಳಿಯಲ್ಲಿನ ಆಸ್ತಿ ಎಷ್ಟಾಗುತ್ತದೆ? ಸ್ತ್ರೀ ಪುರುಷರಿಬ್ಬರ ನಡುವಣ ಇಂತಹ ಕಟ್ಟ ಕಡೆಯ ಪರಿಸ್ಥಿತಿಯ ಅವಲೋಕನವನ್ನು ಸರ್ಕಾರ ಮಾಡಿದೆಯೇ?
ಯಾವುದೇ ಕಾರಣವಿಲ್ಲದೆ ಗಂಡನಿಂದ ಹೆಂಡತಿ ವಿಚ್ಛೇದನ ಬಯಸಿದರೆ ಅಂತಹ ಸಂದರ್ಭಗಳಲ್ಲಿ ಹೆಂಡತಿಯಿಂದ ಗಂಡನಿಗೆ ಪರಿಹಾರ ಕೊಡಿಸುವುದು ನ್ಯಾಯಸಮ್ಮತವಲ್ಲವೇ? ಯಾವಾಗ ಬೇಕಾದರೂ ಯಾವುದೇ ಕಾರಣ ನೀಡದೆಯೂ ಹೆಂಡತಿ ತನ್ನ ಗಂಡನಿಂದ ವಿಚ್ಛೇದನ ಪಡೆಯಬಹುದು. ಜೊತೆಗೆ ಗಂಡನಿಂದ ಪರಿಹಾರವನ್ನೂ ಪಡೆಯಬಹುದು. ಆದರೆ ಹೆಂಡತಿಯ ಒಪ್ಪಿಗೆಯಿಲ್ಲದೆ ಗಂಡನಿಗೆ ವಿಚ್ಛೇದನ ದೊರೆಯುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಅವಳು ಎಂತಹ ವರ್ತನೆಯುಳ್ಳವಳಾದರೂ ತುಟಿ ಬಿಚ್ಚದೆ ಅವಳೊಂದಿಗೆ ಬಾಳುವೆ ಮಾಡಬೇಕಾದ ದುಸ್ಥಿತಿ ಗಂಡನದಾಗುತ್ತದೆ. ಈ ರೀತಿ ಪುರುಷರನ್ನೂ ಅಬಲರನ್ನಾಗಿಸುವ ಮೂಲಕ ಮಹಿಳೆಯರನ್ನು 'ಅತ್ಯಂತ ಪ್ರಬಲೆಯರನ್ನಾಗಿ ಮಾಡುವ' ಈ ಕಾನೂನು ಪುರುಷರ ಪಾಲಿಗೆ ಶತ್ರುವಲ್ಲದೆ ಮತ್ತೇನು?
ಒಟ್ಟಿನಲ್ಲಿ ಭಾರತೀಯ ಸಮಾಜದಲ್ಲಿ ಗಂಡಾಗಿ ಹುಟ್ಟುವುದು ತಪ್ಪು ಅಥವಾ ತಮ್ಮನ್ನು ಇಕ್ಕಟ್ಟಿಗೆ ಸಿಲುಕಿಸುವ ಮದುವೆಯ ಈ ಬಂಧನವೇ ಬೇಡ ಎಂಬ ಭಾವನೆ ಪುರುಷವರ್ಗದಲ್ಲಿ ಬೆಳೆಯುವುದಕ್ಕೆ ಮುನ್ನ ಸರ್ಕಾರ ಎಚ್ಚೆತ್ತುಕೊಂಡು ಪುರುಷರ ಹಕ್ಕು ಮತ್ತು ಹಿತರಕ್ಷಣೆಯ ಬಗ್ಗೆಯೂ ಆಲೋಚಿಸುವಂತಾಗಲಿ.

-  ಪಿ.ಎಂ. ಸುರೇಶ್
ಸುಳ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement