ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ವಿಜ್ಞಾನದ ಸ್ಪರ್ಧೆಯಲ್ಲಿ ಅಜ್ಞಾನದ ಮೆರವಣಿಗೆ

Mainashree
Updated On : 10 Oct 2013, 11:30 am

ಅದೊಂದು ರಾಜ್ಯಮಟ್ಟದ ಸ್ಫರ್ಧಾ ಕಾರ್ಯಕ್ರಮ. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ನವದೆಹಲಿ, ರಾಜ್ಯ ಶಿಕ್ಷಣ ಸಂಶೋಧನಾ ಇಲಾಖೆ ಬೆಂಗಳೂರು, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಶಿವಮೊಗ್ಗ ಇವರುಗಳು ಜಂಟಿಯಾಗಿ ಶಿವಮೊಗ್ಗದ ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆ ಆವರಣದಲ್ಲಿ ಆಯೋಜಿಸಿದ್ದ 'ಸೈನ್ಸ್ ಇನ್ಸ್‌ಪೈರ್ ಅವಾರ್ಡ್‌' ಸ್ಫರ್ಧಾ ಕಾರ್ಯಕ್ರಮ ಅಲ್ಲಿ ಕಳೆಗಟ್ಟಿತ್ತು. ವಿದ್ಯಾರ್ಥಿನಿಯೊಬ್ಬಳು ತನ್ನ ಮಧುರವಾದ ಧ್ವನಿಯಲ್ಲಿ ಸ್ವಲ್ಪ ಆವೇಶಕ್ಕೊಳಗಾಗಿದ್ದಾಳೋ ಎಂಬಂತಿದ್ದರೂ, ಅತ್ಯಂತ ಸ್ಪಷ್ಟವಾಗಿ, ಅಷ್ಟೇ ನಿಖರತೆಯಿಂದ ತನ್ನ ಹೊಸ ವೈಜ್ಞಾನಿಕ ಅನ್ವೇಷಣೆಯನ್ನು ವಿವರಿಸುತ್ತಿದ್ದಳು:
"ಈಗ ನೋಡಿ ಸರ್. ಇಂದಿನ ಜಗತ್ತಿನಲ್ಲಿ ಜನಸಂಖ್ಯೆ ಎಷ್ಟೊಂದು ತೀವ್ರಗತಿಯಲ್ಲಿ ಏರುತ್ತಾ ಇದೆ. ಭಾರತದ ಜನಸಂಖ್ಯೆ 120 ಕೋಟಿ ದಾಟಿ, ಕರ್ನಾಟಕ 6 ಕೋಟಿ ಮೀರಿ, ಅಷ್ಟೇಕೆ ಬೆಂಗಳೂರಿನಲ್ಲಿಯೇ 1 ಕೋಟಿಗೂ ಮಿಗಿಲು Population ದಾಖಲಾಗಿದೆ. ಅದಕ್ಕೆ ಸಮಾನಾಂತರವಾಗಿ ತುಸು ಹೆಚ್ಚೇ ಎಂಬಂತೆ ಜನರು ಐಷಾರಾಮಿ ಜೀವನದತ್ತ ಆಕರ್ಷಿತರಾಗುತ್ತಿದ್ದಾರೆ. ಅದರ ಒಂದು ಪ್ರಧಾನ ಅಂಗವಾಗಿ, ಕಾರು, ಬೈಕುಗಳು, ವ್ಯಾನುಗಳು ಹೀಗೆ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ ಅಲ್ವಾ? ಇತ್ತೀಚಿನ ಒಂದು ವಿಶ್ವಾಸಾರ್ಹ ಅಂಕಿ ಅಂಶದ ಪ್ರಕಾರ ನಮ್ಮ ಬೆಂಗಳೂರು ನಗರ ಒಂದರಲ್ಲೇ ಪ್ರತಿದಿನ 1200ಕ್ಕೂ ಹೆಚ್ಚು ವಾಹನಗಳು ಬೀದಿಗಿಳಿಯುತ್ತಿವೆ. ಅಂದರೆ ತಿಂಗಳಿಗೆ ಬರೋಬ್ಬರಿ ಮೂರುವರೆ ಲಕ್ಷ! ವರ್ಷಕ್ಕೆ ಹೆಚ್ಚು ಕಡಿಮೆ ಅರ್ಧಕೋಟಿ!!
ಈ ಪಾಟಿ ವಾಹನಗಳು ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋದಲ್ಲಿ ಅವಕ್ಕೆಲ್ಲಾ ಓಡಾಡಲು ರಸ್ತೆಯೆಲ್ಲಿ? ಇದರ ಪರಿಣಾಮವೇ ಪ್ರತಿನಿತ್ಯ ಟ್ರಾಫಿಕ್ ಜಾಮ್ ಎಂಬ ಬಾಧೆ. ಇದರ ದುಷ್ಪರಿಣಾಮವಂತೂ ನಮಗೆಲ್ಲಾ ಗೊತ್ತೇ ಇದೆ. ಸಮಯಕ್ಕೆ ಸರಿಯಾಗಿ ಯಾವ ಕೆಲಸವೂ ಆಗೋಲ್ಲ. ಮಕ್ಕಳ ಶಾಲೆಗೆ, ಅಪ್ಪ-ಅಮ್ಮಂದಿರ ಆಫೀಸಿಗೆ, ನೌಕರರ ಫ್ಯಾಕ್ಟರಿಗೆ ಎಲ್ಲೆಲ್ಲ್ಲೂ ತೊಡರುಗಾಲು. ಅಲ್ಲಲ್ಲಿ ಪ್ರಾಣ ಹೀರುವ ಆಕ್ಸಿಡೆಂಟ್ ಬೇರೆ.
ಹಿಂದೆಲ್ಲಾ ವಾಹನಗಳ ಸಂಖ್ಯೆ ಕಡಿಮೆ ಇತ್ತು. ಟ್ರಾಫಿಕ್ ಪೊಲೀಸ್‌ಗಳೇ ಸುಲಭವಾಗಿ ನಿಯಂತ್ರಿಸುತ್ತಿದ್ದರು. ಬರಬರುತ್ತಾ ವಾಹನಗಳ ದಟ್ಟಣೆ ಹೆಚ್ಚಿದಂತೆಲ್ಲಾ ಅವರ ಬದಲಿಗೆ ಟ್ರಾಫಿಕ್ ಸಿಗ್ನಲ್‌ಗಳು ಬಂದವು. ವಾಹನಗಳ ಮೊರೆತ ಇನ್ನಷ್ಟು ಹೆಚ್ಚಾದಾಗ ಈ ಟ್ರಾಫಿಕ್ ಸಿಗ್ನಲ್‌ಗಳನ್ನು ಆಟೋಮ್ಯಾಟಿಕ್ ಮಾಡಿ ಸಮಯ ನಿಗದಿಗೊಳಿಸಿ clockwise (ಪ್ರದಕ್ಷಿಣಾಕಾರದಲ್ಲಿ ತಿರುಗುವ)ನಲ್ಲಿ ಒಂದೊಂದೇ ರಸ್ತೆಗೆ ಗ್ರೀನ್ ಸಿಗ್ನಲ್ ಬರುವಂತೆ ಅಳವಡಿಸಲಾಗಿದೆ. ಆದರೆ ಸಮಸ್ಯೆ ಇರುವುದು ಇಲ್ಲಿ. ಒಂದು ವೇಳೆ ಈಗಷ್ಟೇ 'ಎ' ರಸ್ತೆ ಕ್ಲಿಯರ್ ಆಗಿ 'ಬಿ' ಅಥವಾ 'ಸಿ'ಗೆ ಹಸಿರು ದೀಪ ಬದಲಾಗಿದೆ ಅಂತಿಟ್ಟುಕೊಳ್ಳೋಣ. ಇನ್ನು 'ಎ' ಸರದಿ ಬರುವುದಕ್ಕೆ ಕನಿಷ್ಟ 15 ರಿಂದ 20 ನಿಮಿಷ ಕಾಯಬೇಕಾಗುತ್ತೆ ಅಂತ ಭಾವಿಸಿಕೊಳ್ಳಿ. ಆಗ ಅಕಸ್ಮಾತ್ತಾಗಿ 'ಎ' ರಸ್ತೆಯಲ್ಲಿ ಒಂದು ಅಂಬುಲೆನ್ಸ್ ಬಂದಿದೆ ಎಂದು ಭಾವಿಸಿ. ಅದರಲ್ಲಿ ಅಪಘಾತಕ್ಕೊಳಗಾದ ಒಂದು ಪುಟ್ಟ ಮಗುವಿನ ಪ್ರಾಣ ಒದ್ದಾಡುತ್ತಿದೆ. ಇನ್ನೈದು ನಿಮಿಷದಲ್ಲಿ ಆಸ್ಪತ್ರೆಗೆ ಹೋಗಿ ತುರ್ತು ಚಿಕಿತ್ಸೆ -ರಕ್ತ ಕೊಡಲಾಗದಿದ್ದರೆ ಅದು ಶಾಶ್ವತವಾಗಿ ಕತ್ತಲಲ್ಲಿ ಲೀನವಾಗುತ್ತೆ ಅಂತ ಭಾವಿಸಿ. ಈಗೇನು ಮಾಡಬಹುದು? ನನ್ನ ಮಾಡೆಲ್ Traffic Signal for Next Generation ನ ಪ್ರಧಾನ ಸತ್ವ ಇರುವುದೇ ಇಲ್ಲಿ! ಇಲ್ಲಿ ನೋಡಿ ಸರ್. ನಾನು ರೇಡಿಯೋ Frequency Technology ಬಳಸಿ ಈ ಮಾಡೆಲ್ ತಯಾರಿಸಿದ್ದೇನೆ. ಅಂಬುಲೆನ್ಸ್‌ನಲ್ಲಿ RF Transmitter ನ್ನು ಅಳವಡಿಸಿ ಅದಕ್ಕೆ 10.00 ಮೀ ದೂರ ನಿಗದಿಮಾಡಲಾಗಿದೆ. ಹಾಗೆಯೇ ಮುಂದಿರುವ ಟ್ರಾಫಿಕ್ ದೀಪಗಳಿಗೆ RF Receive ಅಳವಡಿಸಲಾಗಿದೆ.  ಈಗ ನೋಡಿ ಈ ಆ್ಯಂಬುಲೆನ್ಸ್ ಟ್ರಾಫಿಕ್ ರೇಂಜ್‌ನಲ್ಲಿ ಬರುತ್ತಿದ್ದಂತೆ ಆಟೋಮ್ಯಾಟಿಕ್ ಆಗಿ  RF transmitter ನಿಂದ ಅಂದರೆ ಅಂಬುಲೆನ್ಸ್‌ನಿಂದ ಹೊರಟ ತರಂಗಗಳು ಸರ್ಕಲ್‌ನಲ್ಲಿರುವ ರಿಸೀವರ್‌ಗಳಿಗೆ ತಲುಪಿ ಅಂಬುಲೆನ್ಸ್ ಹೋಗಬೇಕಾದ ದಿಕ್ಕಿಗೆ ತಂತಾನೆ ಗ್ರೀನ್ ಸಿಗ್ನಲ್ ಚೇಂಜ್ ಆಗುತ್ತೆ. ಯಾರಿಗೂ ಕಾಯಬೇಕಾಗಿಲ್ಲ. ನೋಡಿ ಸರ್ ಹೇಗೆ ಗ್ರೀನ್ ಬಂತು! ಹಾಗೇ ನೋಡಿ, ಆ್ಯಂಬುಲೆನ್ಸ್ ತನ್ನ ನಿಗದಿತ ವ್ಯಾಪ್ತಿಯಿಂದ ಹೊರಹೋಗುತ್ತಿದ್ದಂತೆ ಪುನಃ ಸಿಗ್ನಲ್‌ಗಳು ಮೊದಲಿನಂತೆ ಬದಲಾದವು ಹೌದಾ? ಈ ತಂತ್ರಜ್ಞಾನದಲ್ಲಿ ನಾನು 8 bit decode ಮತ್ತು Encoder ಬಳಕೆ ಮಾಡಿದ್ದೀನಿ. ಆದ್ದರಿಂದ ಇದನ್ನು ಯಾರೂ ದುರುಪಯೋಗ ಮಾಡ್ಕೊಳ್ಳೋ ಹಾಗಿಲ್ಲ. ಇದರಲ್ಲಿ 433 Megahertez Antenna 9 ವೋಲ್ಟ್ಸ್ ಬ್ಯಾಟರಿ ಇದೆ."
ಎಂಟನೆ ತರಗತಿಯ ಬಾಲೆ ಹೀಗೆ ಅರಳು ಹುರಿದಂತೆ ವಿಜ್ಞಾನದ ಆವಿಷ್ಕಾರವನ್ನು ವಿವರಿಸುತ್ತಿರುವುದನ್ನು ಕಂಡು ನಾವೆಲ್ಲಾ ಕಣ್ಣು ಬಾಯಿ ಬಿಟ್ಟು ನಿಂತೆವು. ಇವಳಿಗೆ ರಾಷ್ಟ್ರಮಟ್ಟಕ್ಕೆ ಆಯ್ಕೆ ಗ್ಯಾರಂಟಿ ಎಂದು ಭಾವಿಸಿದೆವು.
ಯಾಕೆಂದರೆ ಈ "ಇನ್ಸ್‌ಪೈರ್ ಅವಾರ್ಡ್‌" ಯೋಜನೆಯ ಉದ್ದೇಶವೇ ಅದು. ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಹೊಸ ಆವಿಷ್ಕಾರ ಭಾವವನ್ನು ಪ್ರಚೋದಿಸಿ ಅವರು ಸ್ವತಃ ಅರ್ಥಮಾಡಿಕೊಳ್ಳುವಂತೆ ಮಾಡುವುದು.
ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ 22/3/2013ರಲ್ಲಿ ಹೊರಡಿಸಿದ ಸುತ್ತೋಲೆಯ ಕಲಂ (19)ರಲ್ಲಿ ಹೀಗೆ ವಿವರಣೆ ಇದೆ- "ವಿದ್ಯಾರ್ಥಿಗಳು ತಯಾರಿಸುವ ಮಾದರಿಗಳು ನಾವೀನ್ಯತೆಯಿಂದ ಕೂಡಿರಬೇಕು. ಹೊಸ ಪರಿಕಲ್ಪನೆಯಾಗಿದ್ದು, ಜನೋಪಯೋಗಿ ಆಗಿರಬೇಕು. ತಂತ್ರಜ್ಞಾನದ ಅನ್ವಯ ತಿಳಿದಿರಬೇಕು. ಸಮುದಾಯಕ್ಕೆ ಉಪಯಕ್ತವಾಗಿರಬೇಕು. ಅಲ್ಲದೇ ಜೀವಂತ ಪ್ರಾಣಿ, ಪಕ್ಷಿ, ಕೀಟಗಳನ್ನು ಬಳಸಬಾರದು" ಇತ್ಯಾದಿ. 30 ಅಂಶಗಳ ನಿರ್ದೇಶನಗಳಿವೆ.
ಆದರೆ ಶಿವಮೊಗ್ಗದಲ್ಲಿ ನಡೆದ ರಾಜ್ಯ ಮಟ್ಟದ ತೀರ್ಪುಗಾರರು ಮೇಲಿನ ನಿರ್ದೇಶನಗಳನ್ನು ಓದಿದಂತೆ, ಅರ್ಥ ಮಾಡಿಕೊಂಡಂತೆ ಕಾಣಲಿಲ್ಲ. ಅವರ ಅವೈಜ್ಞಾನಿಕ ತೀರ್ಪುಗಳು ನಿಜಕ್ಕೂ ಖೇದಕರ.
ಅವರ ಆಯ್ಕೆಯ ಮಾದರಿಗಳಲ್ಲಿ ಒಂದೆರಡನ್ನು ಇಲ್ಲಿ ಉದಾಹರಿಸಬಯಸುತ್ತೇನೆ...

(1) ಒಂದು ಕಬ್ಬಿಣದ ಟೇಬಲ್‌ನ ಕೆಳಗೆ ಫ್ಯಾನೊಂದನ್ನು ಇರಿಸಿ ಟೇಬಲ್ ಮೇಲಿಂದ ಫ್ಯಾನ್ ಮುಂದೆ ಭತ್ತವನ್ನು ಬೀಳಿಸುವುದು. ಆಗ ಭತ್ತ ತೂರಿದಂತಾಗುತ್ತದೆ ಎಂಬುದೊಂದು ರಾಷ್ಟ್ರಮಟ್ಟಕ್ಕೆ ನಮ್ಮ ರಾಜ್ಯದಿಂದ ಆಯ್ಕೆಯಾದ ಹೊಸ ಆವಿಷ್ಕಾರ!
(2) ಕಬ್ಬಿಣದ ಮೆಷ್ (ಜಲ್ಲೆ)ಯನ್ನು ಸಿಲಿಂಡರ್ ಆಕಾರವಾಗಿ ಸುತ್ತಿ ಅದನ್ನು ಒಂದು ಬದಿಯಲ್ಲಿ ಇಳಿಜಾರಾಗಿಸಿಕೊಂಡು ಅದರೊಳಗೆ ಮರಳು ಹಾಕಿ ಕೈಯಿಂದ ತಿರುಗಿಸುವುದು. ಸಣ್ಣ ಮರಳು ಅಲ್ಲಿಯೇ ಕೆಳಗೆ ಬಿದ್ದರೆ ಕಲ್ಲ ಹರಳುಗಳು ಇಳಿಜಾರಿನತ್ತ ಜಾರುತ್ತದೆ. ಅದು ಮತ್ತೊಂದು ಆಯ್ಕೆಯಾದ ಅನ್ವೇಷಣೆ!
(3) ಮೂರನೆಯದು ಇನ್ನೂ ವಿಶೇಷ. ಕಿತ್ತಲೆ ಹಣ್ಣಿನ ಸಿಪ್ಪೆಗಳನ್ನು ನೀರು ಹಾಕಿ ಕುದಿಸಿ. ಸೋಸಿ ತೆಗೆದ ರಸಕ್ಕೆ ಸ್ವಲ್ಪ ಉಪ್ಪು ಸೇರಿಸಿ ಬಾಟಲಿಯಲ್ಲಿ ತುಂಬಿ ಸ್ಪ್ರೇ ಮಾಡಿದರೆ ಸೊಳ್ಳೆಗಳು ನಿರ್ನಾಮವಾಗುತ್ತವಂತೆ! ತಕ್ಷಣದ ಉದಾಹರಣೆಗಾಗಿ ಇರುವೆಗಳನ್ನು ಹಿಡಿದು ತಂದು ಅವುಗಳ ಮೇಲೆ ಈ ದ್ರಾವಣ ಹಾಕಿ ಅವು ಚಡಪಡಿಸುವುದನ್ನು ಪ್ರದರ್ಶಿಸಲಾಯಿತು. ಇದನ್ನು ಆಯ್ಕೆ ಮಾಡಿದ ತೀರ್ಪುಗಾರರಿಗೆ ಪ್ರದರ್ಶನದಲ್ಲಿ ಜೀವಂತ ಕೀಟಗಳನ್ನು ಬಳಸಬಾರದು ಎಂಬ ಸುತ್ತೋಲೆಯ ಪ್ರಾಥಮಿಕ ಜ್ಞಾನವೂ ಇಲ್ಲವಾಗಿತ್ತು.
ಅಲ್ಲದೇ ಇದರಲ್ಲಿ ಅದಾವ  ಇನ್ಸ್‌ಪಿರೇಷನ್ ಇದೆ? ಅಲ್ಲದೇ ಈ ದ್ರಾವಣದಲ್ಲಿ ಯಾವ ವಿಷ ಉತ್ಪತ್ತಿಯಾಗಿದೆ? ಅದು ಸೊಳ್ಳೆಗಳನ್ನು ಕೊಲ್ಲಬಲ್ಲಷ್ಟು ಸಮರ್ಥವಾಗಿದೆಯೇ ಎಂಬ ಲ್ಯಾಬ್ ವರದಿಯನ್ನು ನೋಡಬೇಕೆಂಬ ತಿಳಿವು ಬರಲೇ ಇಲ್ಲ.
ಫ್ಯಾನ್ ಮುಂದೆ ಭತ್ತ ತೂರುವುದು ಈಗಾಗಲೇ ಹಳ್ಳಿ ಹಳ್ಳಿಯಲ್ಲಿಯೂ ಚಾಲ್ತಿಯಲ್ಲಿದೆ. ಮರಳು ಜರಡಿಗಳಂತೂ ನಾವು ಹುಟ್ಟುವ ಮೊದಲೇ ಕೆಲಸ ಆರಂಭಿಸಿವೆ. ಹಾಗೂ ಕಿತ್ತಳೆಯ ಸಿಪ್ಪೆಯ ಒಳಗಿನ ಆ್ಯಸಿಡ್ ಮತ್ತು ಉಪ್ಪುಗಳು ಜೀವಿಗೆ ಕಿರಿಕಿರಿ ಉಂಟು ಮಾಡಬಲ್ಲವೇ ಹೊರತು ಸಾಮೂಹಿಕವಾಗಿ ಕೊಲ್ಲಲಾರವು ಎಂಬ ಅರಿವು ತೀರ್ಪುಗಾರರಿಗೆ ಮೂಡಲೇ ಇಲ್ಲ.
ಕೇಂದ್ರ ಸರ್ಕಾರ ಕೋಟ್ಯಂತರ ಹಣ ಖರ್ಚು ಮಾಡಿ ನಡೆಸುತ್ತಿರುವ ರಾಜ್ಯ ಮಟ್ಟದ ಬಹುನಿರೀಕ್ಷಿತ ಸ್ಪರ್ಧೆಗೆ ತೀರ್ಪುಗಾರರಾಗಿ ವಿಜ್ಞಾನಿಗಳು, ಕಡೇ ಪಕ್ಷ ವಿಶ್ವವಿದ್ಯಾನಿಲಯಗಳ ಪ್ರೊಫೆಸರ್‌ಗಳ್ಯಾರು ಸಿಗಲಿಲ್ಲವೇಕೆ ಎಂಬುದೊಂದು ಯಕ್ಷಪ್ರಶ್ನೆಯೇ ಸರಿ. ಅವರು ಕರೆಸಿದ್ದು ಸ್ಥಳೀಯ ತಲೆನೆರೆತ ಶಿಕ್ಷಕರನ್ನು! ಇನ್ನೊಂದೆರಡು ವರ್ಷದಲ್ಲಿ ಸೇವೆಯಿಂದ ನಿವೃತ್ತರಾಗಲಿರುವ ಅವರುಗಳು ಕಳೆದ 30-35 ವರ್ಷಗಳಿಂದ ಯಾವುದೇ ಪುಸ್ತಕ ಹಿಡಿದು ಓದಿದಂತೆ, ಅಧ್ಯಯನ ಮಾಡಿದಂತೆ ಕಾಣಲಿಲ್ಲ. ಆದರೆ ರಾಜ್ಯದಲ್ಲಿ ವಿಜ್ಞಾನತಜ್ಞರ ಕೊರತೆ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿದೆಯೇ ಎಂಬುದು ಆಶ್ಚರ್ಯಕರವಾದರೂ ಸತ್ಯ.
ಈ ಪ್ರಶ್ನೆಗಳಿಗೆಲ್ಲ ಉತ್ತರ ಹೇಳುವವರಾರು? ನಿಜವಾಗಿಯೂ ಹೊಸ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಕಡೆಗಣಿಸಿದಾಗ ಅವರ ಮನಸ್ಸಿಗಾಗುವ ಗಾಯಕ್ಕೆ ಚಿಕಿತ್ಸೆ ಏನು? ಇದನ್ನು ಅರ್ಥ ಮಾಡಿಕೊಳ್ಳುವ ವ್ಯವಧಾನ ನಮ್ಮ ಕೇಂದ್ರ ಮತ್ತು ರಾಜ್ಯ ಸರ್ಕಾರದ ಇಲಾಖೆಗಳಿಗಿದೆಯೇ?
ಏನಾದರಾಗಲೀ, ಅಂತು ಸ್ಪರ್ಧೆ ಮುಗಿಯಿತು. ಸರಿ ಸುಮಾರು 125 ಮರಿ ವಿಜ್ಞಾನಿಗಳು ಆಯ್ಕೆಯಾಗಿ ಕರ್ನಾಟಕದ ಪ್ರತಿನಿಧಿಗಳಾಗಿ ಅಕ್ಟೋಬರ್ 8ರಿಂದ 15ರವರೆಗೆ ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಅವರು ಬಹುಮಾನ ತರದಿದ್ದರೂ ಪರವಾಗಿಲ್ಲ. ದೆಹಲಿಯಲ್ಲಿ, 'ರಾಜ್ಯದ(ಕರ್ನಾಟಕದ) ವೈಜ್ಞಾನಿಕ ಅರಿವು ಇಷ್ಟೇ' ಎಂದು ಮಾನ ಹರಾಜಾಗದಿದ್ದರೆ ಸಾಕು ಎಂದು ಹಾರೈಸೋಣ.

- ಸೊನಲೆ ಶ್ರೀನಿವಾಸ್
ಪ್ರಾಚಾರ್ಯರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement