ರಹಸ್ಯ ಮಾಹಿತಿಗಳು ರಹಸ್ಯವಾಗೇ ಉಳಿದುಬಿಡಬೇಕು
ಗುಪ್ತಚರ ದಳಗಳು ರಾಜಕೀಯ ಪಕ್ಷಗಳಿಗೆ ಆರ್ಥಿಕ ಸಹಾಯ ಮಾಡುವುದು ಹೊಸ...
ಗುಪ್ತಚರ ದಳಗಳು ರಾಜಕೀಯ ಪಕ್ಷಗಳಿಗೆ ಮತ್ತು ಪ್ರಭಾವಿ ಗುಂಪುಗಳಿಗೆ ಆರ್ಥಿಕ ಸಹಾಯ ಮಾಡುವುದು ಹೊಸ ವಿಷಯವೇನಲ್ಲ. ಇದು ಪ್ರಪಂಚದಾದ್ಯಂತ ಎಂದಿನಿಂದಲೋ ನಡೆದುಕೊಂಡುಬಂದಿದೆ. ಉಗ್ರರ ವಿರುದ್ಧ ಹೋರಾಡಬಲ್ಲ, ಸಮಾನ ಮನಸ್ಕ ಗುಂಪುಗಳನ್ನು ಹುಟ್ಟುಹಾಕಬಲ್ಲ, ಪ್ರತೀಕೂಲ ಶಕ್ತಿಗಳ ಸದ್ದಡಗಿಸಬಲ್ಲ ಗುಂಪುಗಳಿಗೆ ಏಜೆನ್ಸಿಗಳು ಹಣ ಸಹಾಯ ಮಾಡುತ್ತವೆ. ಆದರೆ ಇದನ್ನೆಲ್ಲ ಅತ್ಯಂತ ರಹಸ್ಯವಾಗಿ ಮಾಡಲಾಗುತ್ತದೆ.
ಈ ದಿನಗಳಲ್ಲಿ ಸೇನೆಯ ಮಾಜಿ ಮುಖ್ಯಸ್ಥ ವಿ.ಕೆ. ಸಿಂಗ್ ಬಹಳ ಸುದ್ದಿಯಲ್ಲಿದ್ದಾರೆ. ಅದೂ ಬಹುತೇಕ ಕೆಟ್ಟ ಕಾರಣಗಳಿಗೇ. ಕಾಶ್ಮೀರಿ ರಾಜಕಾರಣಿಗಳಿಗೆ ಸೇನೆಯಿಂದ ಹಣ ಸಂದಾಯವಾಗಿತ್ತು ಎಂದು ಬಹಿರಂಗವಾದ ವರದಿಗಳಿಗೆ ಅವರು ನೀಡಿದ ಪ್ರತಿಕ್ರಿಯೆ ದೊಡ್ಡ ಗದ್ದಲವೆಬ್ಬಿಸಿದೆ. ನಿಜಕ್ಕೂ ಈ ಗದ್ದಲ ತಪ್ಪುಕಾರಣಗಳಿಗಾಗುತ್ತಿದೆ ಮತ್ತು ಅನವಶ್ಯಕವಾದದ್ದೂ ಕೂಡ. ಈ ಗದ್ದಲಕ್ಕೆ ತಟ್ಟನೆ ತಮ್ಮ ದನಿಗೂಡಿಸಿದ ಸೇವೆಯಲ್ಲಿರುವ ಮತ್ತು ನಿವೃತ್ತಿಯಾಗಿರುವ ಸೇನಾ ಮುಖ್ಯಸ್ಥರು, ವಿ.ಕೆ. ಸಿಂಗ್ ಅವರ ಹೇಳಿಕೆಯನ್ನು ಖಂಡಿಸುತ್ತಿರುವುದಲ್ಲದೆ, ಅಂಥ ಪಾವತಿಯನ್ನು ಸೇನೆ ಮಾಡಿಲ್ಲ ಎಂದು ವಾದಿಸುತ್ತಿದ್ದಾರೆ. ಆದರೆ ಅವರ ನಿರಾಕರಣೆಯನ್ನು ಕೇಳಿಸಿಕೊಳ್ಳುವವರಿಲ್ಲ.
ವಿವಾದಾಂಶದ ಜೊತೆಗೆ ನೀವು ನಿಮ್ಮ ದನಿಗೂಡಿಸಲಿಲ್ಲವೆಂದರೆ ಯಾರೂ ನಿಮ್ಮ ವಾದವನ್ನು ಕೇಳರು. ವಿವೇಕ ಹೇಳುವುದೇನೆಂದರೆ, ಅರ್ಧಂಬರ್ಧ ಸತ್ಯವನ್ನು ಹೇಳುವ ಬದಲು, ಲೈಮ್ಲೈಟ್ನಿಂದ ದೂರವಿರುವುದೇ ಒಳ್ಳೆಯದೆಂದು.
ಇನ್ನು ಆರೋಪಿತ ರಾಜಕಾರಣಿಗಳು ತುಸು ಆವೇಶದಿಂದಲೇ ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ತಳ್ಳಿಹಾಕಿರುವುದು ಆಶ್ಚರ್ಯವೇನೂ ಮೂಡಿಸದು. ಇನ್ನು ನ್ಯಾಷನಲ್ ಕಾನ್ಫರೆನ್ಸ್ ಪಕ್ಷ, ವಿಧಾನಸಭೆಯಲ್ಲಿ ಹಕ್ಕುಚ್ಯುತಿ ನಿರ್ಣಯ ಮಂಡಿಸಿ ವಿ.ಕೆ. ಸಿಂಗ್ ಅವರು ಮಾಡಿರುವ ಆರೋಪಗಳ ಬಗ್ಗೆ ವಿವರಣೆ ಪಡೆಯಲು ಅವರನ್ನು ಅಲ್ಲಿಗೆ ಬರಹೇಳಲು ನಿರ್ಧರಿಸಿದೆ. ಇನ್ನು ಕೆಲವರಂತೂ, ತನ್ನ ಓದುಗ ವರ್ಗವನ್ನು ಹೆಚ್ಚಿಸಿಕೊಳ್ಳುವ ತುಡಿತದಲ್ಲಿ ಪತ್ರಿಕೆಯೊಂದು ಸರ್ಕಾರದ ರಹಸ್ಯ ದಾಖಲೆಗಳನ್ನು ಈ ರೀತಿ ಬಹಿರಂಗ ಮಾಡಿದ್ದು ಅನೈತಿಕ ನಡೆ ಎಂದು ಬೊಬ್ಬಿಡುತ್ತಿದ್ದಾರೆ. ಆದರೆ, ಸುದ್ದಿ ಎಷ್ಟೇ ಸೂಕ್ಷ್ಮ ಸ್ವಭಾವದ್ದಾಗಿರಲಿ, ಅದನ್ನು ಹೊರತೆಗೆದು ಓದುಗರೊಂದಿಗೆ ಹಂಚಿಕೊಳ್ಳುವುದೇ ಪತ್ರಿಕೆಯ ಕೆಲಸವಲ್ಲವೇ? ಆ ಪತ್ರಿಕೆ ಮಾಡಬಾರದ್ದನ್ನೇನೂ ಮಾಡಿಲ್ಲ.
ಅದರ ಮೇಲೆ ಹರಿಹಾಯುವುದು ಮೂರ್ಖತನವಷ್ಟೆ. ಇನ್ನು ವಿ.ಕೆ. ಸಿಂಗ್ ಆ ರೀತಿ ಏಕೆ ಪ್ರತಿಕ್ರಿಯೆ ನೀಡಿದರು ಎನ್ನುವುದೂ ಅರ್ಥವಾಗುವಂಥದ್ದೆ. ಮತ್ತೆ ಅವರೇನು ಮಾಡಬೇಕೆಂದು ನಾವು ಆಶಿಸುತ್ತಿದ್ದೇವೆ. ಒಂದು ಅವರು ಗೋಚರವಾಗಿರುವ ಸತ್ಯವನ್ನು ಅಲ್ಲಗಳೆಯಲಾರರು ಅಥವಾ ಉಗ್ರವಾದದ ಜೊತೆಗಿನ ಹೋರಾಟದಿಂದಾದ ಧೀರ್ಘಕಾಲಿಕ ಪರಿಣಾಮಗಳು ಮತ್ತು ಕೆಲವು ವರ್ಗಗಳನ್ನು ಒಲಿಸಿ ಕಾಶ್ಮೀರವನ್ನು ಸಾಮಾನ್ಯ ಸ್ಥಿತಿಗೆ ತಂದ ಬಗ್ಗೆಯೂ ಕೆಲವು ಕಾರಣಗಳಿಂದಾಗಿ ಮಾತನಾಡಲಾರರು.
ಆರೋಪ-ಪ್ರತ್ಯಾರೋಪಗಳ ಕಟು ಸ್ವರಗಳ ನಡುವೆ, ನಿಜವಾದ ಸಮಸ್ಯೆ ಹಿನ್ನೆಲೆಗೆ ಸರಿದುಹೋಗುತ್ತಿದೆ.
ಇಂಥ ಅರ್ಥವಿಲ್ಲದ ಜಗಳಗಳು ಮತ್ತೊಮ್ಮೆ ಮರುಕಳಿಸಬಾರದೆಂದರೆ ಪ್ರಧಾನ ಮಂತ್ರಿ ಕಾರ್ಯಾಲಯ, ರಕ್ಷಣಾ ಸಚಿವಾಲಯ ಮತ್ತು ಸಶಸ್ತ್ರ ಸೇನೆಗಳಿಂದ ರಹಸ್ಯ ಮಾಹಿತಿಗಳು ಸೋರಿಹೋಗದಂತೆ ಎಚ್ಚರಿಕೆ ವಹಿಸಬೇಕು. ಅದು ಬಿಟ್ಟು ಅದನ್ನು ಪತ್ರಿಕೆಗಳ ಮೇಲೆ ಕೂಗಾಡುವುದರಲ್ಲಿ ಅರ್ಥವಿಲ್ಲ. ಹಾಗೆ ನೋಡಿದರೆ ವ್ಯವಸ್ಥೆಯ ಒಳಗಿರುವ ಮಾಹಿತಿದಾರನ ಬಳಿ ಹೊರ ಹಾಕುವುದಕ್ಕೆ ದಂಡಿಯಾದ ಮಾಹಿತಿಗಳಿರುತ್ತವೆ. ದಯವಿಟ್ಟೂ ಇಂಥ ಕಾರ್ಯಾಚರಣೆಗಳ ಮಾಹಿತಿಗಳು ಸೋರಿ ಹೋಗದಂತೆ ಎಚ್ಚರಿಕೆ ವಹಿಸುವುದನ್ನು ಕಲಿಯಿರಿ. ತಪ್ಪು ಯಾರ ಮೇಲೆ ಹೊರಿಸಬೇಕು ಎಂದು ಹರಕೆಯ ಕುರಿಗಳನ್ನು ಹುಡುಕುವುದನ್ನು ಮೊದಲು ಬಿಡಬೇಕು. ತನ್ನ ತಪ್ಪುಗಳನ್ನು ತಿದ್ದಿಕೊಳ್ಳಲು ಮುಂದಾಗದ, ಸ್ವವಿಮರ್ಷೆಯಲ್ಲಿ ತೊಡಗದ ಸಂಸ್ಥೆ ಅಥವಾ ನಾಯಕ ಇಡೀ ರಾಷ್ಟ್ರವನ್ನೇ ಮುಜುಗರಕ್ಕೆ ದೂಡಬಲ್ಲ.
ಗುಪ್ತಚರ ದಳ ಮತ್ತು 'ರಾ'(ರಿಸರ್ಚ್ ಆಂಡ್ ಅನಲೈಸಿಸ್ ವಿಂಗ್)ಸಂಸ್ಥೆಗಳು ಬೃಹತ್ ಹಣದ ವ್ಯವಹಾರವಿರುವ ಅನೇಕ ಕಾರ್ಯಾಚರಣೆಗಳನ್ನು ನಡೆಸುತ್ತವೆ. ಹಾಗಿದ್ದರೆ ಅದೇಕೆ ಅವುಗಳ ಕಾರ್ಯಾಚರಣೆಯ ಮಾಹಿತಿಗಳು ಸೋರಿಕೆಯಾಗುವುದಿಲ್ಲ? ಏಕೆಂದರೆ ಅವುಗಳ ಹಣಕಾಸಿನ ವ್ಯವಸ್ಥೆ ಅತ್ಯಂತ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುತ್ತದೆ. ಹಾಗಾಗೆ ಅಲ್ಲಿಂದ ಮಾಹಿತಿ ಪಡೆಯಲು ಎಷ್ಟು ಹೆಣಗಿದರೂ ಸಾಧ್ಯವಿಲ್ಲ. ಈ ಸಂಸ್ಥೆಗಳು ತಾವು ಕೈಗೊಂಡ ಕಾರ್ಯಾಚರಣೆಗಳ ಬಗ್ಗೆ ಎಂದಿಗೂ ಬಹಿರಂಗವಾಗಿ ಚರ್ಚೆ ಮಾಡವು. ಮತ್ತು ತಮ್ಮ ಪೇಮೆಂಟ್ ಶೀಟ್ಗಳನ್ನು ಅವು, ನೀತಿನಿಷ್ಠೆಗಳಿಲ್ಲದ ರಾಜಕಾರಣಿಗಳು ಮತ್ತು ಅತಿಆಸೆಯ ಅಧಿಕಾರಿಗಳ ಕೈಯಲ್ಲಿ ಹರಿದಾಡಲು ಬಿಡವು. ಒಂದು ಚಿಕ್ಕ ಮಾಹಿತಿ ಸೋರಿಕೆಯಾದರೆ ಸಾಕು, ಇಡೀ ಕಾರ್ಯಾಚರಣೆಗೆ ಊಹಿಸಲಾರದಷ್ಟು ಹಾನಿಯಾಗಿಬಿಡಬಹುದು. ಆದ ಹಾನಿಯನ್ನು ಸರಿಪಡಿಸಲು ವರ್ಷಗಳೇ ಹಿಡಿಯಬಹುದು.
ಗುಪ್ತಚರ ದಳಗಳು ರಾಜಕೀಯ ಪಕ್ಷಗಳಿಗೆ ಮತ್ತು ಪ್ರಭಾವಿ ಗುಂಪುಗಳಿಗೆ ಆರ್ಥಿಕ ಸಹಾಯ ಮಾಡುವುದು ಹೊಸ ವಿಷಯವೇನಲ್ಲ. ಇದೂ ಪ್ರಪಂಚದಾದ್ಯಂತ ಎಂದಿನಿಂದಲೋ ನಡೆದುಕೊಂಡುಬಂದಿದೆ. ಉಗ್ರರ ವಿರುದ್ಧ ಹೋರಾಡಬಲ್ಲ, ಸಮಾನ ಮನಸ್ಕ ಗುಂಪುಗಳನ್ನು ಹುಟ್ಟುಹಾಕಬಲ್ಲ, ಪ್ರತೀಕೂಲ ಶಕ್ತಿಗಳ ಸದ್ದಡಗಿಸಬಲ್ಲ ಗುಂಪುಗಳಿಗೆ ಏಜೆನ್ಸಿಗಳು ಹಣ ಸಹಾಯ ಮಾಡುತ್ತವೆ. ಆದರೆ ಇದನ್ನೆಲ್ಲ ಅತ್ಯಂತ ರಹಸ್ಯವಾಗಿ ಮಾಡಲಾಗುತ್ತದೆ. ಒಂದು ವೇಳೆ ಮಾಹಿತಿದಾರರೇನಾದರೂ ಸಿಕ್ಕಿಬಿದ್ದರೆ ಅವರ ಭವಿಷ್ಯ ಏನಾಗಬಹುದೋ ಯೋಚಿಸಿ, ಒಂದು ವೇಳೆ ಅವರು ರಾಜಕಾರಣಿಯಾಗಿದ್ದರೆ ಅವರ ರಾಜಕೀಯ ಭವಿಷ್ಯ ಹಳ್ಳ ಹಿಡಿಯುವುದರ ಜೊತೆಗೆ, ಹಲವು ವರ್ಷಗಳಿಂದ ರಚಿಸಿದ ತಂತ್ರಗಳೂ ಹಾಳಾಗಿ ಹೋಗುತ್ತವೆ. ಇವೆಲ್ಲ ದೇಶದ ಭದ್ರತೆಗಾಗಿಯೇ ರಚಿಸಿದ ತಂತ್ರಗಳೆನ್ನುವುದನ್ನು ನಾವು ಮರೆಯಬಾರದು. ಏಜೆನ್ಸಿಗಳು ಮತ್ತು ಅದು ನೇಮಿಸಿದ ಏಜೆಂಟರ ನಡುವೆ ಅಲಿಖಿತ ಒಪ್ಪಂದವೊಂದು ಆಗಿರುತ್ತದೆ. ಯಾವುದೇ ಕಾರಣಕ್ಕೂ ಯಾರ, ಮುಂದೆಯೂ ಮಾಹಿತಿ ಹೊರಗೆಡವಬಾರದು ಮತ್ತು ಕೈಗೊಂಡ ಕಾರ್ಯಾಚರಣೆಗಳು ಮುಂದಿನ ಪೀಳಿಗೆಯವರ ಮುಂದೆ ಕೊಚ್ಚಿಕೊಳ್ಳುವ ವಿಷಯವಾಗಬಾರದು. ಅವೇನಿದ್ದರೂ ಅವರೊಂದಿಗೇ ಮಣ್ಣಾಗಿ ಬಿಡಬೇಕು ಎಂಬುದು.
ಇನ್ನು ಹಣದ ದುರ್ಬಳಕೆಯಾಗಿರಬಹುದು ಮತ್ತು ಅವ್ಯವಹಾರ ನಡೆದಿರಬಹುದು ಎಂಬ ಬಗೆಗಿನ ಚರ್ಚೆಯೂ ಜೋರಾಗತೊಡಗಿದೆ. ಆದರೆ ಇಂಥ ವಿಷಯಗಳಲ್ಲಿ ನಾವು ಹಣ ವಿನಿಯೋಗ ಮಾಡುವವನನ್ನು ನಂಬಲೇಬೇಕು. ಆತ ಹೇಳುವುದೆಲ್ಲವನ್ನೂ ಸತ್ಯವೆಂದು ಒಪ್ಪಿಕೊಳ್ಳಲೇಬೇಕು. ಒಂದು ವೇಳೆ ಆತ ಪಾವತಿ ಪಟ್ಟಿಯನ್ನೋ ಅಥವಾ ಓಚರ್ಗಳನ್ನೋ ನೀಡಿದರೆ ನಾವದನ್ನು ಪರಿಶೀಲಿಸಿ ಪ್ರಶ್ನಿಸಬಾರದು. ಅನುಮಾನ ಪಡಬಾರದು. ಆತನ ಮೇಲಿನ ನಂಬಿಕೆ ನೂರಕ್ಕೆ ನೂರು ಪ್ರತಿಶತದಷ್ಟಿರಬೇಕು. ಒಂದು ವೇಳೆ ಎದುರಿಗಿನ ವ್ಯಕ್ತಿಯ ಮೇಲೆ ನಂಬಿಕೆಯಿಲ್ಲದಿದ್ದರೆ ಅಥವಾ ಚಿಕ್ಕ ಅನುಮಾನವಿದ್ದರೆ ಆತನ ಕೈಗೆ ಸರ್ಕಾರ ಹಣ ಕೊಡಬಾರದು. ಎರಡೂ ರೀತಿಯಲ್ಲಿ ನಡೆದುಕೊಳ್ಳುತ್ತೇವೆ ಎನ್ನುವುದು ಈ ವಿಷಯದಲ್ಲಿ ಸಾಧ್ಯವೇ ಇಲ್ಲ.
- ಅಮರ್ ಭೂಷಣ್
'ರಾ'ದ ಮಾಜಿ ವಿಶೇಷ ಕಾರ್ಯದರ್ಶಿ
anisikeprabha@gmail.com