ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಆಚರಣೆಗೂ ಶೋಷಣೆಗೂ ವ್ಯತ್ಯಾಸವಿಲ್ಲವೇ?

Mainashree
Updated On : 12 Oct 2013, 12:42 pm

ಇತ್ತೀಚೆಗೆ ಅತಿಯಾದ ಒಂದು ಬೆಳವಣಿಗೆ ನಡೆಯುತ್ತಿದೆ. ಕೆಲವು ಆಚರಣೆ ಹಾಗೂ ಪದ್ಧತಿಗಳನ್ನು ವಿರೋಧಿಸಿ ಆ ಮೂಲಕ ತಾವು ಪ್ರಗತಿಪರರು, ಚಿಂತಕರು, ಬುದ್ಧಿಜೀವಿಗಳು ಎನ್ನುವುದನ್ನು ಸಾಬೀತು ಮಾಡಿಕೊಳ್ಳುತ್ತಿರುವ ಅಪಾಯಕಾರಿ ಬೆಳವಣಿಗೆ ಅದು. ಬಹುಶಃ ಇಂಥವರ ಅಸ್ತಿತ್ವವೇ ಇಂಥ ಕೆಲಸಗಳಲ್ಲಿದೆ ಎನ್ನಿಸುತ್ತದೆ. ಮಡೆಸ್ನಾನ ಆಯಿತು, ಅಡ್ಡಪಲ್ಲಕ್ಕಿ ಆಯಿತು, ಆಮೇಲೆ ಮೈಸೂರು ದಸರಾದಲ್ಲಿ ಆನೆಗಳ ಬಳಕೆ, ಪಾದಪೂಜೆ ಮುಂತಾದ ಆಚರಣೆಗಳ ಬಗ್ಗೆ ಮಾತಾಡತೊಡಗಿದ್ದಾರೆ. ಪರೋಕ್ಷವಾಗಿ ಇದು ಒಂದು ಧರ್ಮದ ಮೇಲೆ ಹತೋಟಿ ಸಾಧಿಸುವ ಹುಂಬ ಹುನ್ನಾರವಲ್ಲದೆ ಮತ್ತೇನೂ ಅಲ್ಲ.
ಮೊದಲನೆಯದಾಗಿ ಇನ್ನೊಬ್ಬರ ನಂಬಿಕೆ ಹಾಗೂ ಅವರು ತಾವಾಗಿ ಇಷ್ಟಪಟ್ಟು ಆಚರಿಸುವ ಪದ್ಧತಿಯನ್ನು ವಿರೋಧ ಮಾಡುವುದಕ್ಕೆ ಇವರೆಲ್ಲ ಯಾರು? ದೇಶಕ್ಕೆ ಸಮಾಜಕ್ಕೆ ಮಾರಕವಲ್ಲದ ಒಬ್ಬರ ಬದುಕನ್ನು, ಬದುಕಿನ ರೀತಿಯನ್ನು ಹಾಗೂ ನಂಬಿಕೆಯನ್ನು ವಿರೋಧಿಸುವ ಅಥವಾ ಹತ್ತಿಕ್ಕುವ ಹಕ್ಕು ಮತ್ತೊಬ್ಬರಿಗಿಲ್ಲ. ಆದರೆ ಇವರು ಮಾತೆತ್ತಿದರೆ "ಹಿಂದೆ ಮಲ ಹೊರುವ ಪದ್ಧತಿ ಇತ್ತು, ಅದನ್ನೂ ಹೀಗೆ ವಿರೋಧ ಮಾಡಿ ನಿಲ್ಲಿಸಬೇಕಾಯಿತು" ಎನ್ನುತ್ತಾರೆ. ಆದರೆ ಮಲ ಹೊರುವುದು ಆಚರಣೆಯಲ್ಲ ಅದೊಂದು ಶೋಷಣೆ. ಅದು ಯಾರದೇ ಭಾವನಾತ್ಮಕ ನಂಬಿಕೆಯಲ್ಲ. ಅದನ್ನು ಖಂಡಿಸುವುದರಲ್ಲಿ ನಿಲ್ಲಿಸುವುದರಲ್ಲಿ ಅರ್ಥವಿದೆ. ಆದರೆ ಎಲ್ಲ ಧಾರ್ಮಿಕ ನಂಬಿಕೆಗಳು, ಆಚರಣೆಗಳು ಹಾಗಲ್ಲ. ಅದರ ಹಿಂದೆ ಅದರದ್ದೇ ಆದ ನಂಬಿಕೆಯಿದೆ, ಭಾವನಾತ್ಮಕ ಸಂಬಂಧವಿದೆ. ಅದು ಸರಿಯೋ ತಪ್ಪೋ ಅನ್ನುವುದು ಬೇರೆ ಮಾತು. ಆದರೆ ಯಾರದೇ ಒತ್ತಡ, ಬಲವಂತವಿಲ್ಲದೆ ಆಚರಿಸುತ್ತಾರೆಂದರೆ ಈ ದೇಶದಲ್ಲಿ ಆ ಹಕ್ಕು ಪ್ರತಿಯೊಬ್ಬರಿಗೂ ಇದೆ. ಹಾಗೆ ಆಚರಣೆ ಮಾಡದೆ ಇರುವ ಹಕ್ಕೂ ಇದೆ. ಬೇಡವಾದವರು ಅದರಿಂದ ದೂರವಿದ್ದರಾಯಿತು. ಅವರನ್ನು ಯಾರೂ ಬಲವಂತ ಮಾಡುವುದಿಲ್ಲ. ಆದರೆ ವಿರೋಧ ಮಾಡುವುದು, ನಿಲ್ಲಿಸುವುದು ಇದಕ್ಕೆ ಇವರಿಗೆ ಯಾರು ಅಧಿಕಾರ ಕೊಟ್ಟಿದ್ದಾರೆ?
ಉದಾಹರಣೆಗೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ಮಡೆಸ್ನಾನದ ವಿಚಾರ ತೆಗೆದುಕೊಂಡರೆ ಅಲ್ಲಿಯೂ ಅದು ಕೆಲವರ ವೈಯಕ್ತಿಕ ನಂಬಿಕೆ ಹಾಗೂ ಆಚರಣೆ. ಯಾರೋ ಉಂಡೆದ್ದ ಎಂಜಲೆಲೆಯ ಮೇಲೆ ಮತ್ತಾರೋ ಉರುಳುತ್ತಾರೆ. ಇದೊಂದು ಆದರ್ಶಯುತವಾದ ಆಚರಣೆ ಎನ್ನುವುದಕ್ಕೆ ಕಾರಣವಿಲ್ಲದಿರಬಹುದು. ಈ ಕಾಲಘಟ್ಟದಲ್ಲಿ ಅದು ಪೂರ್ಣಪ್ರಮಾಣದಲ್ಲಿ ಸರಿಯೆಂದು ವಾದ ಮಾಡುವುದಕ್ಕೂ ಸಾಧ್ಯವಿಲ್ಲದಿರಬಹುದು. ಆದರೆ ಇಲ್ಲಿ ಗಮನಿಸಬೇಕಾಗಿರುವುದು ಯಾರೂ ಯಾರನ್ನೂ ಶೋಷಣೆ ಮಾಡುತ್ತಿಲ್ಲ ಎನ್ನುವುದು. ದೇವರ ಮೇಲಿನ ನಂಬಿಕೆ ಹಾಗೂ ಹರಕೆ ತೀರಾ ವೈಯಕ್ತಿಕವಾದದ್ದು. ಹೀಗೇ ಪೂಜೆ ಮಾಡಬೇಕು, ಹೀಗೆ ಆಚರಣೆ ಮಾಡಬೇಕು, ಇಂಥದ್ದೇ ಹರಕೆ ಹೊರಬೇಕು ಎನ್ನುವ ಯಾವ ನಿಯಮವೂ ಇಲ್ಲ.
ಇಷ್ಟಾಗಿಯೂ ಮಡೆಸ್ನಾನದ ಬಗ್ಗೆ ಹೇಳಬೇಕಾದ ಸಂಗತಿಯೊಂದಿದೆ. ಮನುಷ್ಯ ಗುಣ ಸ್ವಭಾವಗಳಲ್ಲಿ ಅಪಾಯಕಾರಿಯಾದ ಗುಣವೊಂದಿದ್ದರೆ ಅದು ಅಹಂಕಾರ. ಈ ಅಹಂಕಾರವನ್ನು ಅಳಿಸಿ ಹಾಕುವುದಕ್ಕೆ ಹಿಂದಿನ ಕಾಲದಲ್ಲಿ ದೇವರ ಹೆಸರಿನಲ್ಲಿ ನಂಬಿಕೆ, ಆಚರಣೆಗಳನ್ನು ಮಾಡಿದ್ದಾರೆ. ಅದರಲ್ಲಿ ಮಡೆಸ್ನಾನವೂ ಒಂದಾಗಿರಬಹುದು. ಯಾರೋ ಊಟ ಮಾಡಿದ ಎಂಜಲು ಎಲೆಯ ಮೇಲೆ ಸಾರ್ವಜನಿಕ ಜಾಗದಲ್ಲಿ ಉರುಳುವುದೆಂದರೆ ಅದು ಅಷ್ಟು ಸುಲಭವಾಗಿ ಸಾಧ್ಯವಿಲ್ಲ. ಅವನು ತನ್ನ ಅಹಂ ಅನ್ನೋ ಕಿರೀಟವನ್ನು ಕಳಚಿಟ್ಟರೆ ಮಾತ್ರ ಇಂಥ ಒಂದು ಆಚರಣೆಯಲ್ಲಿ ಪಾಲ್ಗೊಳ್ಳುವುದು ಸಾಧ್ಯ. ಹಾಗೆ ಹಂತ ಹಂತವಾಗಿ ಬೇರೆ ಬೇರೆ ಪದ್ಧತಿಗಳ ಮೂಲಕ ಅಹಂಕಾರವನ್ನು ತೊರೆಯಲಿ ಎನ್ನುವುದು ಉದ್ದೇಶವಾಗಿರಬಹುದು. ಸಾಕಷ್ಟು ಆಚರಣೆಗಳ ಹಿಂದೆ ಒಂದಲ್ಲ ಒಂದು ಸಕಾರಣವಿದ್ದೇ ಇರುತ್ತದೆ. ಹಾಗೆಂದು ಇದು ಈ ಕಾಲಕ್ಕೂ ಪೂರ್ಣಪ್ರಮಾಣದಲ್ಲಿ ಸೂಕ್ತವೆಂದು ಹೇಳಲು ಹೊರಟಿಲ್ಲ. ಇಂಥ ಪದ್ಧತಿ ಪ್ರಾರಂಭವಾದಾಗ ಜನರಲ್ಲಿ ತಿಳಿವಳಿಕೆ, ಜ್ಞಾನ ಕಡಿಮೆ ಇತ್ತು. ಆದರೆ ಇದೆಲ್ಲ ಬಂದಂತೆ ಮನುಷ್ಯನ ಅಹಂಕಾರ ಕಡಿಮೆಯಾಗಿಲ್ಲ ಎನ್ನುವುದೂ ಬೇರೆ ಮಾತು. ಎಷ್ಟೋ ಹರಕೆಗಳು, ಆಚರಣೆಗಳು ಕಾಲಕ್ಕೆ ತಕ್ಕಂತೆ ಇಂಥ ಉದ್ದೇಶಗಳನ್ನು ಹೊಂದಿವೆ. ಕೆಲವು ದೇಹದಂಡನೆಯ ಆಚರಣೆಗಳೂ ಇದಕ್ಕೆ ಹೊರತಾಗಿಲ್ಲ. ಬರೆ ಹಾಕುವಂಥ ಅಮಾನವೀಯ ಪದ್ಧತಿ ಈಗ ಶಾಕ್‌ಟ್ರೀಟ್‌ಮೆಂಟ್ ಆಗಿ ಬದಲಾಗಿದೆ. ಆಗ ಈಗಿನಂತೆ ಆಧುನಿಕ ಚಿಕಿತ್ಸೆಗಳನ್ನಾಗಲಿ, ಕೌನ್ಸಿಲಿಂಗ್ ನಂಥ ತಿಳಿವಳಿಕೆಯನ್ನಾಗಲಿ ಕೊಡುವುದು ಸಾಧ್ಯವಿರಲಿಲ್ಲ. ಅವರ ನಂಬಿಕೆ ಹಾಗೂ ಬದುಕಿನ ರೀತಿಗನುಗುಣವಾಗಿ ಒಳ್ಳೆಯದಾಗುವುದಕ್ಕೆ ಏನು ಮಾಡಬೇಕೋ ಅದನ್ನು ಮಾಡುತ್ತಿದ್ದರು. ಅದೂ ಒಂದು ಪ್ರಯತ್ನದ ದಾರಿ ಅಷ್ಟೇ. ಈಗ ವೈದ್ಯಕೀಯ ವಿಜ್ಞಾನ ಇಷ್ಟು ಮುಂದುವರಿದಿದ್ದರೂ ಎಲ್ಲ ಕಾಯಿಲೆಗಳನ್ನು ನೂರಕ್ಕೆ ನೂರು ವಾಸಿ ಮಾಡುತ್ತೇವೆಂದು ಹೇಳುವುದಿಲ್ಲ. ಇವರದೂ ಒಂದು ಪ್ರಯತ್ನ ಅಷ್ಟೇ. ಇನ್ನು ಅಡ್ಡಪಲ್ಲಕ್ಕಿಯಾದರೂ ಅಷ್ಟೇ. ವರ್ಷದ ಯಾವುದೋ ಒಂದು ದಿನ ಜನ ಖುಷಿಯಿಂದ ಭಾಗವಹಿಸಿ ಪಲ್ಲಕ್ಕಿ ಹೊತ್ತರೆ ಅದು ಶೋಷಣೆಯಾಗುವುದಿಲ್ಲ. ಹಾಗೆ ಹೊರಬೇಕೆಂದು ಯಾರನ್ನಾದರೂ ಬಲವಂತ ಮಾಡಿದರೆ ಆಗ ಅದು ತಪ್ಪಾಗುತ್ತದೆ. ಮೊಸರು ಕುಡಿಕೆ ಒಡೆಯುವಾಗ ಒಬ್ಬರ ಮೇಲೊಬ್ಬರು ಹತ್ತುತ್ತಾರೆ. ಒಬ್ಬರನ್ನೊಬ್ಬರು ತುಳಿಯುತ್ತಾರೆಂದು ವಿರೋಧ ಮಾಡುತ್ತೀರಾ? ಇಲ್ಲಿ ಮೇಲ್ನೋಟದ ಕ್ರಿಯೆಗಿಂತ ಅದರಲ್ಲಿ ಪಾಲ್ಗೊಳ್ಳುವವರ ಭಾವ ಮುಖ್ಯವಾಗುತ್ತದೆ. ಇಷ್ಟಕ್ಕೂ ಇಂಥ ಆಚರಣೆಗಳು ಅಥವಾ ಪದ್ಧತಿಗಳು ಅವೈಜ್ಞಾನಿಕವೋ, ಅನಾಗರಿಕವೋ ಆದಲ್ಲಿ ಅವು ಕಾಲಕ್ರಮೇಣ ತಂತಾನೇ ಬದಲಾಗುತ್ತವೆ ಅಥವಾ ನಾಶವಾಗುತ್ತವೆ. ಹಾಗೆಯೇ ಎಷ್ಟೊಂದು ಪದ್ಧತಿಗಳು ಬದಲಾಗಿರುವ ಉದಾಹರಣೆಗಳು ನಮ್ಮ ಮುಂದಿವೆ. ಇನ್ನು ಬೇಗ ಬದಲಾಗಬೇಕೆಂದರೆ ಈ ಪ್ರಗತಿಪರರು ಅಥವಾ ಚಿಂತಕರೆನಿಸಿಕೊಂಡವರು ಅವರಿಗೆ ನಿಜವಾಗಿಯೂ ಕಾಳಜಿ ಇದ್ದದ್ದೇ ಹೌದಾದಲ್ಲಿ ಅವುಗಳ ಬಗ್ಗೆ ಸದಾ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಅದು ಬಿಟ್ಟು ಯಾವಾಗಲೋ ಕಾರ್ಯಕ್ರಮ ನಡೆಯುವ ಸಮಯದಲ್ಲಿ ಬಂದು ವಿರೋಧ ಮಾಡ್ತೀನಿ ಎನ್ನುವುದಲ್ಲ.  
ಪ್ರತಿಯೊಬ್ಬರ ಬದುಕು ಅವರದ್ದೇ ಆದ ಒಂದಷ್ಟು ವಿಧಾನಗಳಿಂದ ಕೂಡಿರುತ್ತದೆ. ಇನ್ಯಾರೋ ಅದನ್ನು ನಿಯಂತ್ರಣ ಮಾಡುವುದಕ್ಕೆ ಬಂದರೆ ವ್ಯಕ್ತಿತ್ವ ಹರಣವಾಗುತ್ತದೆ. ನಿಯಂತ್ರಣ ಮಾಡಬೇಕಾದರೆ ಅದು ಮತ್ತೊಬ್ಬರಿಗೆ ತೊಂದರೆಯಾಗದಿಂತಿರಬೇಕು. ಅದೇ ರೀತಿ ಒಂದು ಕುಟುಂಬಕ್ಕೆ ಅವರದೇ ಆದ ಬದುಕಿನ ರೀತಿ ರಿವಾಜುಗಳಿರುತ್ತವೆ. ಮತ್ತೊಬ್ಬರಿಗೆ ತೊಂದರೆಯಾಗದಂತೆ ಬದುಕುವ ಹಕ್ಕು ಎಲ್ಲರಿಗೂ ಇರುತ್ತದೆ. ಇಂಥ ಪದ್ಧತಿಗಳನ್ನು ತಡೆಯುತ್ತೇವೆ ಎಂದು ಮನುಷ್ಯತ್ವದ ಹರಿಕಾರರಂತೆ ಬರುವಂಥವರು ತಮ್ಮ ಮನೆಯವರಿಗೆ, ತಮ್ಮ ಕೆಲಸದವರಿಗೆ ಎಷ್ಟು ವ್ಯಕ್ತಿ ಸ್ವಾತಂತ್ರ್ಯ ಕೊಟ್ಟು ಬದುಕುತ್ತಾರೆನ್ನುವುದನ್ನು ಯೋಚಿಸಬೇಕಾಗುತ್ತದೆ. ಇದೇ ಜನಗಳ ನಡವಳಿಕೆಯ ಬಗ್ಗೆ, ಅವರ ವೈಯಕ್ತಿಕ ಬದುಕಿನ ಪದ್ಧತಿಗಳ ಬಗ್ಗೆ ವಿರೋಧ ಮಾಡಿದರೆ ಅವರಿಗೆಷ್ಟು ಹಿಂಸೆ ಆಗುವುದಿಲ್ಲ? ತಪ್ಪು ಹುಡುಕುವುದೇ ಉದ್ದೇಶವಾದರೆ ಕುಂತಿದ್ದು, ನಿಂತಿದ್ದು ಎಲ್ಲದಕ್ಕೂ ತಪ್ಪು ಹುಡುಕಬಹುದು.
ಬದಲಾವಣೆಗಳು ಕಾಲಕ್ಕೆ ತಕ್ಕಂತೆ ಆಗುತ್ತವೆ. ಇನ್ನು ನಾವು ಸ್ವತಃ ಪ್ರಯತ್ನ ಮಾಡುವುದೆಂದರೆ ವಿರೋಧ ಮಾಡಿ ಪ್ರಚಾರ ಪಡೆಯುವುದಲ್ಲ. ಆ ಘಳಿಗೆ ಮಾತ್ರ ಬಂದು ಮಾತಾಡಿ ಮೌನವಾಗುವುದಲ್ಲ. ಸದಾ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಈ ಬೌದ್ಧಿಕ ಭಯೋತ್ಪಾದನೆ ಹೀಗೇ ಮುಂದುವರಿದರೆ ನಾಳೆ ದೇವರಿಗೆ ಪೂಜೆ ಮಾಡುವುದೂ ತಪ್ಪು, ಕೈ ಮುಗಿಯುವುದೂ ತಪ್ಪು, ಕರ್ಪೂರ ಹಚ್ಚುವುದೂ ತಪ್ಪು, ತೆಂಗಿನ ಕಾಯಿ ಒಡೆಯುವುದು ತಪ್ಪು, ಆರತಿ ಬೆಳಗುವುದೂ ತಪ್ಪು ಎಂದು ಪ್ರತಿಯೊಂದು ನಂಬಿಕೆಯ ಮೇಲೂ ಆಕ್ರಮಣ ಮಾಡುತ್ತಾರೆ.  ಈ ಪ್ರಗತಿಪರರ ವಿರೋಧಗಳು ಎಲ್ಲ ಧರ್ಮಗಳ ಮೇಲೂ ಸಮನಾಗಿದೆಯೇ? ಆಚರಣೆ ಅಥವಾ ಪದ್ಧತಿಯ ಹೆಸರಿನಲ್ಲಿ ಮನುಷ್ಯರ ಶೋಷಣೆ ನಡೆದರೆ, ಮನುಷ್ಯತ್ವದ ಶೋಷಣೆ ನಡೆದರೆ ಅದು ಖಂಡಿತ ತಪ್ಪು. ಚುನಾವಣೆಯಲ್ಲಿ ಗೆದ್ದಾಗಲೋ, ಪಂದ್ಯದಲ್ಲಿ ಗೆದ್ದಾಗಲೋ ನಾಯಕನನ್ನು ಉಳಿದವರು ಎತ್ತಿಕೊಂಡು ಕುಣಿಯುತ್ತಾರೆ. ಅದು ಆ ಕ್ಷಣದ ಹರ್ಷ ಅಥವಾ ಸಂತೋಷದ ಆಚರಣೆ. ಎಲ್ಲದಕ್ಕೂ ವಿರೋಧ ಮಾಡುತ್ತಾ ಹೋದರೆ ಮನುಷ್ಯ ನಾಳೆ ಯಾರ ಕೆಲಸವನ್ನು ಯಾರೂ ಮಾಡದ ಪರಿಸ್ಥಿತಿ ಬರುತ್ತದೆ. ಮನೆ ಕಟ್ಟುವಾಗ ಇಟ್ಟಿಗೆ ಹೊರಿಸುವುದು ತಪ್ಪು. ಮಣ್ಣು ಹೊರಿಸುವುದು ತಪ್ಪು ಅನ್ನುವುದಕ್ಕೂ ಕಾರಣಗಳನ್ನು ಕೊಡಬಹುದು. ಆದರೆ ವಿರೋಧಿಸುವ ಜನಗಳಿಗೆ ತಮ್ಮ ಇತಿಮಿತಿ ಗೊತ್ತಿರಬೇಕು. ವಿರೋಧಿಸುವ ಹಕ್ಕು, ಅಧಿಕಾರ ಎಷ್ಟಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಕೇವಲ ಪ್ರಚಾರಕ್ಕಾಗಿ ಹಾಗೂ ಅಸ್ತಿತ್ವಕ್ಕಾಗಿ ಇಂಥ ರಂಪ ಮಾಡುವುದು ಎಷ್ಟು ಸರಿ?

 ಚಂದ್ರ ಬಾರ್ಕೂರ್
ಪತ್ರಕರ್ತ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement