ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಹಿಗ್ಸ್ ಬೋಸಾನ್ ಸೃಷ್ಟಿಯ ಉಗಮದ ರಹಸ್ಯ

Mainashree
Updated On : 12 Oct 2013, 12:43 pm

ದೇವಕಣ(ಹಿಗ್ಸ್ ಬೋಸಾನ್) ಕಂಡುಹಿಡಿದ ಭೌತವಿಜ್ಞಾನಿಗಳಾದ ಪೀಟರ್ ಹಿಗ್ಸ್ ಮತ್ತು ಫ್ರಾಂಕ್ವಾಸ್ ಎಂಗ್ಲರ್ಟ್‌ಗೆ ಈ ವರ್ಷದ ನೊಬೆಲ್ ಪ್ರಶಸ್ತಿ ಸಂದಿದೆ. ಸೃಷ್ಟಿಯ ಉಗಮದಲ್ಲಿ ದೇವಕಣದ ಪಾತ್ರವೇನು ಎನ್ನುವುದನ್ನು ನೋಡೋಣ..
ಅದು 1970ರ ಕಾಲ.  ಈ ಬ್ರಹ್ಮಾಂಡದ ಉಗಮಕ್ಕೆ ನಾಲ್ಕು ಮೂಲಭೂತ ಬಲಗಳಾದ ಗುರುತ್ವಬಲ, ವಿದ್ಯುತ್ಕಾಂತೀಯಬಲ, ಸಬಲ ಹಾಗೂ ದುರ್ಬಲ ಬೀಜಾನು ಬಲಗಳೇ ಕಾರಣವೆಂದು ಭೌತವಿಜ್ಞಾನಿಗಳು ಬಲವಾಗಿ ಪ್ರತಿಪಾದಿಸಿದ್ದರು. ಈ ನಾಲ್ಕು ಮೂಲಭೂತ ಬಲಗಳನ್ನು ಒಟ್ಟುಗೂಡಿಸಿ ಹೊಸ ಸಿದ್ಧಾಂತವನ್ನು ಮಂಡಿಸಿದರು. ಈ ಹೊಸ ಸಿದ್ಧಾಂತದ ಪ್ರಕಾರ ಯಾವ ಮೂಲಕಣವೂ ದ್ರವ್ಯರಾಶಿಯನ್ನು ಹೊಂದಿರುವುದಿಲ್ಲ. ಆದರೆ ಇದಕ್ಕೆ ತದ್ವಿರುದ್ಧವಾಗಿ ಎಲೆಕ್ಟ್ರಾನ್, ಪ್ರೋಟಾನ್, ನ್ಯೂಟ್ರಾನ್ ಸೇರಿದಂತೆ ಎಲ್ಲ ಮೂಲಕಣಗಳು ನಿರ್ದಿಷ್ಟವಾದ ದ್ರವ್ಯರಾಶಿಯನ್ನು ಹೊಂದಿರುವುದನ್ನು ಕಂಡುಹಿಡಿಯಲಾಗಿತ್ತು. ದ್ರವ್ಯರಾಶಿಯನ್ನು ಈ ಕಣಗಳು ಎಲ್ಲಿಂದ ಪಡೆದವು, ಬ್ರಹ್ಮಾಂಡ ಹೇಗೆ ಉದಯವಾಯಿತು ಎಂಬಿತ್ಯಾದಿ ಪ್ರಶ್ನೆಗಳು ಹಾಗೇ ಉಳಿದುಬಿಟ್ಟವು.
ಇದಕ್ಕೂ ಮುಂಚೆ 1964 ರಲ್ಲಿ ಪ್ರಸಿದ್ಧ ಭೌತವಿಜ್ಞಾನಿಗಳಾದ ಪೀಟರ್ ಹಿಗ್ಸ್, ರಾಬರ್ಟ್ ಬ್ರೌಟ್ ಮತ್ತು ಇಂಗ್ಲರ್ ಅವರೊಂದು ಸಿದ್ಧಾಂತವನ್ನು ಮಂಡಿಸಿದ್ದರು. ಅವರ ಪ್ರಕಾರ ಮಹಾಸ್ಫೋಟದ ನಂತರ ಯಾವ ಕಣಗಳೂ ದ್ರವ್ಯರಾಶಿಯನ್ನು ಹೊಂದಿರಲಿಲ್ಲ. ಕಾಲಕ್ರಮೇಣ ತಾಪಮಾನ ಕಡಿಮೆಯಾದಂತೆ ವಿಶಿಷ್ಟ ಸ್ಥಿತಿಯೊಂದು ನಿರ್ಮಾಣವಾಯಿತು. ಈ ಸ್ಥಿತಿಗೆ  ಹಿಗ್ಸ್ ಸ್ಥಿತಿ ಎಂದು ಹೆಸರು. ಈ ಸ್ಥಿತಿಯಲ್ಲಿ  ಹಿಗ್ಸ್ ಬೋಸಾನ್‌ಗಳು ಹುಟ್ಟಿಕೊಂಡವು. ಮುಂದಿನ ಆಗುಹೋಗುಗಳಿಗೆ  ಇವೇ ಮೂಲಕಾರಣ. ಯಾವ ಕಣಗಳು ಹಿಗ್ಸ್ ಸ್ಥಿತಿಯೊಂದಿಗೆ ಸಂಪರ್ಕಕ್ಕೆ ಬಂದು ಸಂಯೋಗ ಹೊಂದುತ್ತವೆಯೋ, ಅವೆಲ್ಲವೂ ಹಿಗ್ಸ್ ಬೋಸಾನ್‌ಗಳ ಸಹಾಯದಿಂದ ದ್ರವ್ಯರಾಶಿಯನ್ನು ಪಡೆಯುತ್ತವೆ. ಯಾವ ಕಣಗಳು ಸಂಯೋಗ ಹೊಂದುವುದಿಲ್ಲವೋ ಅವು ದ್ರವ್ಯರಾಶಿರಹಿತವಾಗಿ ಉಳಿದುಬಿಡುತ್ತವೆ. ಇದಕ್ಕೆ ಒಂದು ಉದಾಹರಣೆ ಫೋಟಾನ್ ಕಣ. ಹೀಗೆ ದ್ರವ್ಯರಾಶಿಯನ್ನು ಹೊಂದುವ ಕ್ರಿಯೆಯಲ್ಲಿ ಹಿಗ್ಸ್ ಬೋಸಾನ್ ಪಾತ್ರ ಬಹುಮುಖ್ಯವಾದುದು. ಹೀಗೆ ದ್ರವ್ಯರಾಶಿಯನ್ನು ಪಡೆದ ಕಣಗಳ ಸಮೂಹದಿಂದ ಮುಂದೆ ಸೃಷ್ಟಿಯ ನಿರ್ಮಾಣವಾಯಿತು.
ಈ ಎಲ್ಲ ಕಾರಣಗಳಿಂದ ಸೃಷ್ಟಿಯ ಉಗಮದ ಬಗ್ಗೆ ತಿಳಿದುಕೊಳ್ಳಬೇಕಾದರೆ ಮೊದಲು ಹಿಗ್ಸ್ ಬೋಸಾನ್‌ಗಳ ಇರುವಿಕೆಯನ್ನು ಖಚಿತಪಡಿಸಿಕೊಳ್ಳವುದು ಮುಖ್ಯವಾಗಿತ್ತು. ಇದರ ಆಸ್ತಿತ್ವದ ಬಗ್ಗೆ ತಿಳಿಯಬೇಕಾದರೆ ಬ್ರಹ್ಮಾಂಡ ಉಗಮವಾದಾಗಿನ ಸ್ಥಿತಿಯನ್ನು ಸೃಷ್ಟಿಸುವುದು ಮುಖ್ಯವಾಗಿತ್ತು. ಈ ಸ್ಥಿತಿಯನ್ನು ನಿರ್ಮಾಣಮಾಡುವುದು ಸುಲಭವಿರಲಿಲ್ಲ. ಆದರೂ ವಿಜ್ಞಾನಿಗಳು ಹತಾಶರಾಗದೇ ಆಮೆರಿಕದ ಫಮರ್ ಪ್ರಯೋಗಾಲಯದಲ್ಲಿ ಅತೀ ವೇಗದ ಕಣಗಳನ್ನು ಢಿಕ್ಕಿ ಹೊಡೆಸಿ ಇದನ್ನು ಸೃಷ್ಟಿಸಲು ಪ್ರಯತ್ನಿಸಿದರು. ಮಹಾಸ್ಫೋಟದ ನಂತರದ ಸ್ಥಿತಿಯನ್ನು ನಿರ್ಮಾಣ ಮಾಡಲು ಯುರೋಪಿನ ವಿಜ್ಞಾನಿಗಳು 2008 ರಲ್ಲಿ ಜಿನೇವಾ ಸಮೀಪ ನೂರು ಮೀಟರ ಆಳದಲ್ಲಿ ಒಂದು ಪ್ರತ್ಯೇಕ ಪ್ರಯೋಗಶಾಲೆಯನ್ನೇ ಪ್ರಾರಂಭಿಸಿದರು. ಈ ಪ್ರಯೋಗಶಾಲೆಯಲ್ಲಿ ವಿಶ್ವದ ಅತೀ ದೊಡ್ಡ  ಹೆಡ್ರಾನ್ ಕೊಲೈಡರನ್ನು ಸ್ಥಾಪಿಸಿ ಕೃತ್ರಿಮವಾಗಿ ಮಹಾಸ್ಫೋಟವನ್ನು ನಡೆಸಿ ಹಿಗ್ಸ್ ಬೋಸಾನ್‌ಗಾಗಿ ಸಂಶೋಧನೆಯನ್ನು ನಡೆಸಿದರು. ಇದನ್ನು ಕಂಡು ಹಿಡಿಯುವುದು ಅಷ್ಟೇನೂ ಸುಲಭದ ಕೆಲಸವಾಗಿರಲಿಲ್ಲ. ಬೇರೆ ಕಣಗಳೊಂದಿಗೆ ಸಂಯೋಗ ಹೊಂದುವ ಕ್ರಿಯೆಯಿಂದ ಅದನ್ನು ಗುರುತಿಸಬೇಕಾಗಿತ್ತು. ಹಿಗ್ಸ್ ಬೋಸಾನ್‌ನ ದ್ರವ್ಯರಾಶಿ ಪ್ರೋಟಾನ್‌ದ ದ್ರವ್ಯರಾಶಿಗಿಂತ ಹೆಚ್ಚು. ಇಷ್ಟೆಲ್ಲ ಕಷ್ಟಸಾಧ್ಯವಾದ ಸಂಶೋಧನೆಯಿಂದ ಯುರೋಪಿನ ವಿಜ್ಞಾನಿಗಳ ತಂಡ ಜುಲೈ 4, 2012 ರಂದು ಈ ಕಣಗಳ ಅಸ್ತಿತ್ವದ ಬಗ್ಗೆ ಪುರಾವೆ ಸಹಿತ ಧೃಡಪಡಿಸಿದರು.              
ದಶಕಗಳಿಂದ ಯಾವ ಕಣಕ್ಕಾಗಿ ವಿಜ್ಞಾನಿಗಳು ಹುಡುಕಾಟ ನಡೆಸಿದ್ದರೋ ಆ ಕಣ ಈಗ ಸಿಕ್ಕಿದೆ. ದೇವರೇ ಪ್ರತ್ಯಕ್ಷವಾದಷ್ಟು ಸಂತೋಷವಾಗಿದೆ. ಈ ಶತಮಾನದ ಮಹತ್ವದ ಸಂಶೋಧನೆ ಇದಾಗಿದೆ. ಆದರೂ ಬ್ರಹ್ಮಾಂಡದ ಉಗಮದ ಬಗ್ಗೆ ನಿಖರವಾಗಿ ತಿಳಿಯಬೇಕಾದರೆ ಇನ್ನಷ್ಟು ಮಾಹಿತಿಯ ಅಗತ್ಯವಿದೆ. ಆ ಮಾಹಿತಿಯೂ ಇಂದಲ್ಲ ನಾಳೆ ನಮ್ಮ ವಿಜ್ಞಾನಿಗಳಿಗೆ ಸಿಗುತ್ತದೆ ಎಂದು ಆಶಿಸೋಣ.

- ಶಶಿಧರ ಡಿ ಮರಡಿ
ಗುಲಬರ್ಗ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement