ಅಭಿಪ್ರಾಯ ಸ್ವಾತಂತ್ರ್ಯ ಗೌರವಿಸಲೇಬೇಕು
ವಾರಗಳ ಹಿಂದೆ ಪ್ರಧಾನಿ ಮನಮೋಹನ ಸಿಂಗ್ ಅವರು ಅಮೆರಿಕ ಪ್ರವಾಸ ಕೈಗೊಂಡಿದ್ದರು. ಅಲ್ಲಿ ದ್ವಿಪಕ್ಷೀಯ ಮಾತುಕತೆಗಳಾದವು. ಭಾರತ- ಅಮೆರಿಕ ನಡುವಿನ ಮಾತುಕತೆಯಲ್ಲಿ ಚರ್ಚೆಯಾದ ವಿಷಯಗಳೇನು ಎಂಬುದನ್ನು 'ಇಂಡಿಯಾ ಟುಡೆ' ನಿಯತಕಾಲಿಕವು ನಡೆಸಿದ ಪ್ರಧಾನಿ ಸಂದರ್ಶನದಲ್ಲಿ ತಿಳಿಯಬಹುದಾಗಿದೆ.
ಬರಾಕ್ ಒಬಾಮ ಅವರೊಂದಿಗೆ ಯಶಸ್ವಿ ಮಾತುಕತೆ ಮುಗಿಸಿದ್ದೀರಿ. ನೀವು ಒಬಾಮಾ ಅವರೊಂದಿಗೆ ಆಪ್ತ ಬಾಂಧವ್ಯ ಹೊಂದಿರುವಿರಿ ಎಂದೇ ಅಮೆರಿಕದಲ್ಲಿ ಹೆಚ್ಚಿನವರು ಅಭಿಪ್ರಾಯ ಹೊಂದಿದ್ದಾರೆ. ಹಾಗಾದರೆ ಅಮೆರಿಕ ಅಧ್ಯಕ್ಷರೊಂದಿಗಿನ ಮಾತುಕತೆಯ ಮುಖ್ಯ ಫಲಶೃತಿ ಏನು? ಮುಖ್ಯವಾಗಿ ರಕ್ಷಣಾ ಸಹಕಾರದ ವಲಯದಲ್ಲಿ?
ರಕ್ಷಣಾ ಸಹಕಾರ ಕ್ಷೇತ್ರದ ಬಗ್ಗೆ ಹೇಳುವುದಾದರೆ ಭಾರತವು ಗ್ರಾಹಕ-ಮಾರಾಟಗಾರ ಸಂಬಂಧದಿಂದ ಮುಂದಿನ ಹಂತಕ್ಕೆ ಕಾಲಿರಿಸುವುದಕ್ಕೆ ಉತ್ಸುಕವಾಗಿದೆ. ಉಭಯ ದೇಶಗಳು ಕಲೆತು ರಕ್ಷಣಾ ಪರಿಕರಗಳನ್ನು ಉತ್ಪಾದಿಸುವ, ಸಂಶೋಧನೆಯಲ್ಲೂ ಎರಡೂ ದೇಶಗಳು ತೊಡಗಿಸಿಕೊಳ್ಳುವ ಹಾಗೂ ಭಾರತೀಯ ವಿಚಾರಧಾರೆಯ ನಿಟ್ಟಿನಲ್ಲಿ ರಕ್ಷಣಾ ಸಂಶೋಧನೆಗಳು ರೂಪುಗೊಳ್ಳುವ ಹಂತವನ್ನು ತಲುಪುವ ಯತ್ನದಲ್ಲಿ ನಾವಿದ್ದೇವೆ. ನಮ್ಮದೇ ದೇಶೀಯ ಸಂಸ್ಥೆಗಳು ಸಂಪೂರ್ಣವಾಗಿ ರಕ್ಷಣಾ ಪರಿಕರಗಳನ್ನು ಉತ್ಪಾದಿಸುವಂತಾಗಬೇಕು ಎಂಬ ಗುರಿ ಇದೆ. ಈ ಕ್ಷೇತ್ರದಲ್ಲಿ ಶೇಕಡ 26ಕ್ಕೆ ಮೀರದ ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ನಾವು ಒಪ್ಪುತ್ತೇವೆ.
ಈ ಹಿನ್ನೆಲೆಯಲ್ಲಿ ನಾವು ದೃಢವಾಗಿಯೇ ಹೆಜ್ಜೆ ಇಟ್ಟಿದ್ದೇವೆ. ಅಮೆರಿಕದೊಂದಿಗಿನ ಇನ್ನೊಂದು ಮುಖ್ಯ ಸಹಯೋಗವು ನಾಗರಿಕ ಅಣುಶಕ್ತಿ ಸಹಕಾರದ್ದು. ಇದು ಪ್ರಾರಂಭಿಕ ಹಂತದಲ್ಲಿದ್ದು, ಸರ್ಕಾರಗಳ ಹಂತದಲ್ಲಿ ಇದನ್ನು ಅನುಷ್ಠಾನಕ್ಕೆ ತರುವುದಕ್ಕೆ ಯಾವ ಅಡ್ಡಿಗಳೂ ಇಲ್ಲ. ಜ್ಞಾನ ಉತ್ತೇಜಕ ವಲಯ, ಶಿಕ್ಷಣ, ಶಕ್ತಿ ಹಾಗೂ ಪರಿಸರ ವಿಷಯಗಳಿಗೆ ಸಂಬಂಧಿಸಿ ಸಹಕಾರದ ಹೆಜ್ಜೆಗಳನ್ನು ಇಡಲಾಗಿದೆ. ಈ ಎಲ್ಲ ವಲಯಗಳಲ್ಲಿನ ಬಾಂಧವ್ಯ ವೃದ್ಧಿ ಎಂಬುದು ಒಂದು ನಿರಂತರ ಪ್ರಕ್ರಿಯೆಯಾಗಿದ್ದು, ಈ ಬಗ್ಗೆ ಆಗಾಗ ಪರಾಮರ್ಶೆ ನಡೆಸುವುದಕ್ಕೆ ಉಭಯ ದೇಶಗಳೂ ಬದ್ಧವಾಗಿವೆ.
ಭಾರತ- ಅಮೆರಿಕದ ವ್ಯಾಪಾರ ಬಾಂಧವ್ಯ ಕಳೆಗುಂದುತ್ತಿದೆ. ಅಮೆರಿಕ ಸರ್ಕಾರದೊಂದಿಗೆ ಲಾಬಿ ಹೊಂದಿರುವ ಅಲ್ಲಿನ ಉದ್ಯಮಿಗಳು ಭಾರತದ ವ್ಯಾಪಾರ ಚಟುವಟಿಕೆ ದೋಷಪೂರಿತ ಎನ್ನುತ್ತಿದ್ದಾರೆ. ಅಮೆರಿಕದಲ್ಲಿ ಇಂಥ ನಿರಾಸೆ ವಾತಾವರಣ ರೂಪುಗೊಂಡಿರುವುದೇಕೆ ಎಂಬ ಬಗ್ಗೆ ನಿಮಗೇನಾದರೂ ಹೊಳೆಯಿತೇ? ಅಮೆರಿಕದ ಹೂಡಿಕೆದಾರರಿಗೆ ವಿಶ್ವಾಸ ಮೂಡಿಸುವ ಕ್ರಮಗಳನ್ನು ಭಾರತ ತೆಗೆದುಕೊಳ್ಳಲಿದೆಯೇ?
ಅಮೆರಿಕದ ಉದ್ಯಮಿಗಳಲ್ಲಿ ಕಳವಳವಿದೆ ಎಂಬುದು ಹೌದಾದರೂ ಇದು ಭಾರತದ ಅರ್ಥವ್ಯವಸ್ಥೆ ಮಂದಗತಿ ತಲುಪಿರುವುದರಿಂದ ಉಂಟಾಗಿರುವಂಥದ್ದು. ಭಾರತದ ಆರ್ಥಿಕತೆ ಶೇ,8-9ರ ದರದಲ್ಲಿ ಬೆಳೆಯುತ್ತಿರುವಾಗ ಎಲ್ಲರೂ ಖುಷಿಯಾಗಿಯೇ ಇದ್ದರು. ಆಗ ನಮ್ಮ ನೀತಿಗಳಲ್ಲಿ ದೋಷವಿದ್ದರೂ ಅದನ್ನು ಯಾರೂ ಹೇಳುತ್ತಿರಲಿಲ್ಲ. ಹೀಗಾಗಿ ವ್ಯಾಪಾರದ ರೂಢಿಗಳು ಸರಿ ಇಲ್ಲ ಎಂಬುದು ಒಂದು ನೆಪವಾಗಬಲ್ಲದು ಅಷ್ಟೆ. ಈ ಬಗ್ಗೆ ಅಮೆರಿಕ ಅಧ್ಯಕ್ಷರು ನನ್ನೊಂದಿಗೆ ಅತ್ಯಂತ ವಿವರವಾಗಿಯೇನೂ ಚರ್ಚಿಸಲಿಲ್ಲ. ಆದರೆ ಉಭಯ ದೇಶಗಳ ಸಿಇಒಗಳ ಮಟ್ಟದಲ್ಲಿ ವಿಚಾರ ವಿನಿಮಯಕ್ಕೆ ವೇದಿಕೆಯೊಂದು ರೂಪುಗೊಳ್ಳಬೇಕಿದೆ ಎಂಬುದನ್ನು ಹೇಳಿದರು.
ನೀವು ನವಾಜ್ ಷರೀಫ್ ಅವರನ್ನೂ ಭೇಟಿಯಾದಿರಿ. ನಿಮ್ಮಿಬ್ಬರ ನಡುವಿನ ಮಾತುಕತೆ ಆಶಾದಾಯಕ ಎಂದಿದ್ದೀರಿ. ಗಡಿಯಲ್ಲಿ ನಮ್ಮ ಯೋಧರ ಶಿರಚ್ಛೇದನವಾದ ನಂತರ ಭಾರತ-ಪಾಕ್ ಸಂಬಂಧ ಮೊದಲಿನಂತಿಲ್ಲ. ಪರಿಸ್ಥಿತಿ ಈಗೇನಾದರೂ ಬದಲಾಗಿದೆಯೇ?
ಉಭಯ ದೇಶಗಳ ಸಂಬಂಧದಲ್ಲಿ ಸಹಜತೆ ನೆಲೆಗೊಳ್ಳಬೇಕಾದರೆ ಗಡಿಯಲ್ಲಿ ಶಾಂತಿ ನೆಲೆಸುವುದು ಬಹಳ ಮುಖ್ಯವಾದದ್ದು. ಇದಕ್ಕಾಗಿ ಎರಡೂ ಕಡೆಯ ಡಿಜಿಎಮ್ಒಗಳು ಕಲೆತು ಮಾತುಕತೆ ನಡೆಸಿ ಸೂಕ್ತ ಸಿದ್ಧತೆ ರೂಪಿಸಬೇಕು ಎಂಬ ನಿರ್ಧಾರ ತೆಗೆದುಕೊಂಡಿದ್ದೇವೆ. ಸಹಜತೆ ನೆಲೆಸುವುದಕ್ಕೆ ದೀರ್ಘ ಅವಧಿ ಬೇಕಾಗುತ್ತದೆ. ಆದರೆ ಆ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಗಳು ಇವು.
ನೀವು ವಿದೇಶಕ್ಕೆ ತೆರಳಿದಾಗ ನಿಗದಿತ ಸಭೆಗಳನ್ನು ನಡೆಸಿದಿರಿ. ಆದರೆ ಅನಿರೀಕ್ಷಿತ ಹೇಳಿಕೆಗಳು ತೂರಿಬಂದವು. ನವಾಜ್ ಷರೀಫ್ ಅವರು ನಿಮ್ಮ ಭೇಟಿಗಿಂತ ಮೊದಲು ಗೇಲಿಯ ಮಾತುಗಳನ್ನಾಡಿದ ಬಗ್ಗೆ ವರದಿಯಾಯಿತು. ಇದು ಮಾತುಕತೆಯನ್ನು ಪ್ರಭಾವಿಸಲಿಲ್ಲವೇ?
ಎಲ್ಲವನ್ನೂ ಸಮಚಿತ್ತದಿಂದ ತೆಗೆದುಕೊಳ್ಳುವುದು ನನಗೆ ಗೊತ್ತು. ನವಾಜ್ ಷರೀಫ್ ಅವರು ಅಂಥ ಗೇಲಿಯ ಮಾತುಗಳನ್ನು ಆಡಿಲ್ಲ ಎಂದಿದ್ದಾರೆ.
ನೀವು ಅಮೆರಿಕದಲ್ಲಿದ್ದಾಗ ನಿಮ್ಮ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಸಂಪುಟವು ಅದಾಗ ತಾನೆ ಪಾಸು ಮಾಡಿದ್ದ ಸುಗ್ರೀವಾಜ್ಞೆ ಬಗ್ಗೆ ಮಾತನಾಡುತ್ತ, ಅದು ಹರಿದೆಸೆಯಲು ಯೋಗ್ಯವಾಗಿದ್ದು ಎಂದು ಹೇಳಿದರು. ಇದು ನಿಮ್ಮ ಅಧಿಕಾರವನ್ನು ತುಚ್ಛೀಕರಿಸಿದಂತಾಗಿಲ್ಲವೇ? ರಾಜೀನಾಮೆ ಕೊಡುವ ಬಗ್ಗೆ ಯೋಚಿಸಿದ್ದೀರಾ?
ನಾನು ರಾಹುಲ್ ಗಾಂಧಿಯವರ ಹೇಳಿಕೆ ಓದಿದ್ದೇನೆ. ಈ ಕುರಿತು ಅವರು ಈ ಮೊದಲು ನನಗೆ ಪತ್ರವನ್ನೂ ಬರೆದಿದ್ದರು. ಪ್ರಜಾಪ್ರಭುತ್ವದಲ್ಲಿ ಯಾರಾದರೂ ಇಂಥ ಭಿನ್ನಧ್ವನಿಯನ್ನು ಎತ್ತಿದಾಗ ಅವರ ಮನಸ್ಸಿನ ಕಾಳಜಿಯೇನು ಎಂಬುದನ್ನು ಅರ್ಥಮಾಡಿಕೊಳ್ಳುವುದಕ್ಕೆ ಪ್ರಯತ್ನಿಸಬೇಕು. ಇಲ್ಲಿ ರಾಜೀನಾಮೆ ಕೊಡುವ ಪ್ರಶ್ನೆ ಉದ್ಭವಿಸುವುದಿಲ್ಲ. ಈ ಎಲ್ಲ ವಿಷಯಗಳನ್ನೂ ನಾನು ಸಂಪುಟ ಸಹೋದ್ಯೋಗಿಗಳ ಮುಂದಿಡುತ್ತೇನೆ. ಈ ಬಗ್ಗೆ ಸಂಪುಟವು ಒಂದಲ್ಲ, ಎರಡು ಬಾರಿ ಚರ್ಚಿಸಿದೆ. ಆದರೆ ಮನಸ್ಸು ಬದಲಿಸುವ ಅವಕಾಶ ಇದ್ದೇ ಇರುತ್ತದೆ.
ನೀವೇ ಹೇಳುವ ಪ್ರಕಾರ ಕಾಂಗ್ರೆಸ್ನ ಕೋರ್ಗ್ರೂಪ್ ಹಾಗೂ ಸಂಪುಟಸಭೆ ಎರಡೆರಡು ಬಾರಿ ಚರ್ಚಿಸಿ ಸುಗ್ರೀವಾಜ್ಞೆ ಜಾರಿ ನಿರ್ಧಾರ ತೆಗೆದುಕೊಂಡಿದ್ದವು. ಇಲ್ಲಿ ಏಳುವ ಪ್ರಶ್ನೆ ಏನೆಂದರೆ, ಒಬ್ಬ ವ್ಯಕ್ತಿ ಎಷ್ಟೇ ದೊಡ್ಡವನಾದರೂ, ಪಕ್ಷದಲ್ಲಿ ಎಂಥದೇ ಪ್ರಭಾವಿ ಸ್ಥಾನದಲ್ಲಿದ್ದರೂ ಸಂಪುಟವು ನಿರ್ಧಾರ ತೆಗೆದುಕೊಂಡಮೇಲೆ ಅದನ್ನು ಪ್ರಶ್ನಿಸುವುದು ಸರಿಯೇ? ಇದು ಪ್ರಧಾನಿಯ ಹುದ್ದೆಯನ್ನು ತುಚ್ಛೀಕರಿಸಿದಂತೆ ಎಂದು ನಿಮಗನ್ನಿಸುವುದಿಲ್ಲವೇ?
ಇಲ್ಲ, ಹಾಗೇನೂ ಎನಿಸದು. ಅದೊಂದು ಪ್ರಮುಖ ದೃಷ್ಟಿಕೋನ. ಕಾಂಗ್ರೆಸ್ನ ಯಾವುದೇ ಸದಸ್ಯರು ಅಥವಾ ಸಂಪುಟ ಸಹೋದ್ಯೋಗಿಗಳು ನಿರ್ಧಾರಿತ ವಿಷಯವೊಂದರ ಪರಾಮರ್ಶೆ ಅಗತ್ಯವಿದೆ ಎಂದು ಕಂಡುಬಂದಾಗ ತಮ್ಮ ಅಭಿಪ್ರಾಯ ಹೇಳಬಹುದು. ನಾವೇನೂ ಸರ್ವಾಧಿಕಾರಿ ವ್ಯವಸ್ಥೆಯಲ್ಲಿಲ್ಲವಾದ್ದರಿಂದ ವ್ಯಕ್ತಿಯ ಅಭಿಪ್ರಾಯಭೇದವನ್ನು ಒಟ್ಟಾಗಿ ಚರ್ಚಿಸಬೇಕು ಎಂದು ನನಗನ್ನಿಸುತ್ತದೆ.
ಅರುಣಾಚಲ ಪ್ರದೇಶದಲ್ಲಿ 350 ಆಣೆಕಟ್ಟುಗಳ ನಿರ್ಮಾಣಕ್ಕೆ ಸಮ್ಮತಿ ನೀಡಲಾಗಿದೆ. ಜನ ಈ ಬಗ್ಗೆ ಆತಂಕಿತರಾಗಿದ್ದಾರೆ. ಈ ಸಂಖ್ಯೆಯನ್ನು ಪರಾಮರ್ಶೆಗೆ ಒಳಪಡಿಸಬಹುದೇ?
ನೀವು ಟಿಬೆಟ್ ಪ್ರಾಂತ್ಯದಲ್ಲಿ ನಿರ್ಮಾಣವಾಗುತ್ತಿರುವ ಆಣೆಕಟ್ಟುಗಳ ಬಗ್ಗೆ ಮಾತನಾಡುತ್ತಿರುವಿರಿ ಎಂದಾದರೆ ನನ್ನ ಚೀನಾ ಭೇಟಿ ಸಂದರ್ಭದಲ್ಲೆಲ್ಲ ಅಲ್ಲಿನ ಸರ್ಕಾರದೊಂದಿಗೆ ನಮ್ಮ ಕಳವಳ ತೋಡಿಕೊಂಡಿದ್ದೇನೆ. ಈಗಿರುವ ತಿಳಿವಳಿಕೆ ಪ್ರಕಾರ ಇವು ನೀರಿನ ಹರಿವಿನಲ್ಲಿ ಬಹಳ ವ್ಯತ್ಯಾಸವನ್ನು ಉಂಟುಮಾಡುತ್ತಿಲ್ಲ. ಆದಾಗ್ಯೂ ನದಿ ನಿರ್ವಹಣೆ ವಿಚಾರದಲ್ಲಿ ಚೀನಾದೊಂದಿಗೆ ನಡೆಸಿಕೊಂಡು ಬರುತ್ತಿರುವ ಲಾಗಾಯ್ತಿನ ಸಹಕಾರ ಮಾತುಕತೆಯನ್ನು ನಾವು ಮುಂದುವರಿಸುತ್ತೇವೆ.
ರಾಷ್ಟ್ರ ರಾಜಕೀಯದಲ್ಲಿ ನರೇಂದ್ರ ಮೋದಿಯವರ ಔನ್ನತ್ಯ ಸೆಕ್ಯುಲರ್ ರಾಜಕಾರಣಕ್ಕೆ ಆತಂಕ ತಂದಿದೆ ಎಂದು ನಿಮಗನ್ನಿಸುತ್ತಿದೆಯೇ?
ನರೇಂದ್ರ ಮೋದಿಯಂಥವರ ಆಕ್ರಮಣ ಎದುರಿಸಲು ಸೆಕ್ಯುಲರ್ ಶಕ್ತಿಗಳೆಲ್ಲ ಒಂದಾಗಬೇಕು ಎಂಬುದು ನನ್ನ ಪ್ರಾಮಾಣಿಕ ಹಾರೈಕೆ. ಅದಾಗಲಿದೆ ಎಂಬ ದೃಢ ನಂಬಿಕೆಯೂ ನನ್ನದು.
ಶೇಖ್ ಹಸೀನಾ ಅವರೊಂದಿಗೆ ನಿಮ್ಮ ಭೇಟಿ ಕುರಿತು ಕೇಳುವುದಾದಲ್ಲಿ... ಬಾಂಗ್ಲಾದೇಶದಲ್ಲಿ ನಾವು ತೀಸ್ತಾ ಹಾಗೂ ಭೂಗಡಿ ಒಪ್ಪಂದಕ್ಕೆ ಸಂಬಂಧಿಸಿದಂತೆ ನಿರ್ಧಾರಕ್ಕೆ ಬರುತ್ತಿಲ್ಲ ಎಂಬ ಬಗ್ಗೆ ಅಸಮಾಧಾನವಿದೆ. ಈ ವಿಷಯದಲ್ಲಿ ನಿಮ್ಮ ಚರ್ಚೆ ಮೇಲೆ ಬೆಳಕು ಚೆಲ್ಲುವಿರಾ?
ಬಾಂಗ್ಲಾದೇಶದ ಪ್ರಧಾನಿಯವರೊಂದಿಗೆ ನಮ್ಮ ಬಾಂಧವ್ಯವು ಅತ್ಯುತ್ತಮವಾಗಿದೆ. ಈ ಒಪ್ಪಂದಗಳು ಅಂತಿಮಗೊಳ್ಳುವುದಕ್ಕೆ ಇಷ್ಟೊಂದು ಕಾಲ ಹಿಡಿಯುತ್ತಿದೆಯಲ್ಲ ಎಂಬ ಬಗ್ಗೆ ನನಗೇ ಅಸಮಧಾನವಿದೆ. ಮುಂದಿನ ಅಧಿವೇಶನದಲ್ಲಾದರೂ ಪ್ರತಿಪಕ್ಷದ ಮನವೊಲಿಸಿ ಈ ಬಗ್ಗೆ ಸೂಕ್ತ ನಿರ್ಧಾರಕ್ಕೆ ಬರುವುದಾಗಿ ಅವರಿಗೆ ಭರವಸೆ ನೀಡಿದ್ದೇನೆ.
ಯುಪಿಎ-3 ಅಧಿಕಾರಕ್ಕೆ ಬರುವುದಕ್ಕೆ ನಿಮ್ಮ ಹತ್ತು ವರ್ಷಗಳ ಆಡಳಿತ ಪರಿಣಾಮಕಾರಿ ಆಗಬಲ್ಲದು ಎಂಬ ವಿಶ್ವಾಸ ನಿಮಗಿದೆಯೇ?
ಈಗಲೇ ಇಂಥ ಲೆಕ್ಕಾಚಾರ ಹಾಕುವುದು ಅವಸರವಾಗುತ್ತದೆ. ನಿರ್ಧಾರ ಹೇಳಬೇಕಿರುವುದು ಜನತೆ. ನನ್ನ ವಿಶ್ವಾಸ ಏನೆಂದರೆ, ನಾವು ಹಲವು ತಪ್ಪುಗಳನ್ನು ಮಾಡಿರಬಹುದಾದರೂ ಭಾರತೀಯರಿಗೆ ಒಳಿತನ್ನು ಉಂಟುಮಾಡಿರುವ ಸಾಕಷ್ಟು ಕೆಲಸಗಳನ್ನು ಮಾಡಿದ್ದೇವೆ. ಮತ ಹಾಕುವಾಗ ಜನರು ನಮ್ಮ ಒಳ್ಳೆಯ ಕೆಲಸಗಳನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಾರೆ.