ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ನಿರಂತರ, ವ್ಯಾಪಕ ಮೌಲ್ಯಮಾಪನ -ಶಿಕ್ಷಣದ ಕಾಯಕಲ್ಪ

Vishwanath S
Updated On : 16 Oct 2013, 12:12 pm

ಶಿಕ್ಷಣದಲ್ಲಿ ಕಾಯಕಲ್ಪ ತರಲೆಂದೇ ಅನೇಕ ವಿಷಯಗಳು ಜಾರಿಯಾಗುತ್ತಿವೆ. ಜಡ್ಡುಗಟ್ಟಿದ ವ್ಯವಸ್ಥೆ ಹಳೆಯದಕ್ಕೆ ಜೋತು ಬಿದ್ದಾಗ  ಹೊಸತು ಹೊರೆಯೆನಿಸುತ್ತದೆ. ಯಾವುದೇ ಕಾಯಕಲ್ಪ ತರುವ ವಿಷಯ ಹೊಸತರಲ್ಲಿ ಪ್ರಯೋಗವೆಂದೇ ಎನಿಸಿಕೊಳ್ಳುತ್ತದೆ. ಅದನ್ನು ಗಟ್ಟಿಯಾಗಲು ಬಿಡದೇ ಹಳೆಯ ಕಂಫರ್ಟ್‌ಝೋನ್ ಅನುಭವಿಸಿದವರು ಮತ್ತೆ ಹಳೆಯದಕ್ಕೆ ತೆರಳಿ ಪ್ರಸ್ತುತವನ್ನು ಅಪ್ಪಿಕೊಳ್ಳದಿರುವುದು ಅಪಾಯಕಾರಿ ಬೆಳವಣಿಗೆ. ನಂತರ ಇರುವ ವ್ಯವಸ್ಥೆಯನ್ನೇ ಟೀಕಿಸುತ್ತಾ ಶಪಿಸುತ್ತಾ ಇರುವುದೂ ಆಗುತ್ತದೆ.
ಶಿಕ್ಷಣ ಕ್ಷೇತ್ರದಲ್ಲಿ ಜಾರಿಯಾದ ನಿರಂತರ ಹಾಗೂ ವ್ಯಾಪಕ ಮೌಲ್ಯಮಾಪನ ಜಾರಿಯಾದಾಗಿನಿಂದ ವ್ಯಾಪಕವಾಗಿ ಚರ್ಚೆಗೆ ಒಳಗಾಗುತ್ತಿದೆ. ಲೇಖನಗಳು ನಿತ್ಯ ಒಂದಲ್ಲಾ ಒಂದು ದಿನ ಪತ್ರಿಕೆಯಲ್ಲಿ ಬರುತ್ತಿವೆ. ಕನ್ನಡ ಪ್ರಭದ ಅಕ್ಟೋಬರ್ 10ರ ಸಂಚಿಕೆಯಲ್ಲಿ ರಮಾಕಾಂತ ಕ.ಕಮತಗಿ ಅವರು 'ಶಿಕ್ಷಣದಲ್ಲಿ ಪ್ರಯೋಗ ಸಾಕು, ಕಾಯಕಲ್ಪ ಬೇಕು'ಎಂಬ ಲೇಖನವನ್ನು ಬರೆದಿರುತ್ತಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ಆಭಿಪ್ರಾಯ ಭೇದದ ಹಕ್ಕಿದೆ. ಅದನ್ನು ಗೌರವಿಸುತ್ತಾ ಸಿಸಿಇ ಬಗ್ಗೆ ಒಂದಷ್ಟು ತಾತ್ವಿಕ ಅಂಶಗಳನ್ನು ಇಲ್ಲಿ ಚರ್ಚಿಸಿದೆ.  
ಒಮ್ಮೆ ಯೋಚಿಸೋಣ. ತಂದೆ ತಾಯಿಯರಾಗಿ ನಮ್ಮ ಮನೆಯಲ್ಲಿರುವ ಮಕ್ಕಳನ್ನು ನಾವು ಅರ್ಥೈಸಿಕೊಳ್ಳಲು ಎಷ್ಟು ಪ್ರಯತ್ನಿಸಿದ್ದೇವೆ? ಶಿಕ್ಷಣದ ಕಾರಣಕ್ಕೆ ಹಾಸ್ಟೆಲ್‌ನಲ್ಲಿ ಹನ್ನೆರಡು ವರ್ಷದ ಮಗು ಹೇಳಿದ್ದು ಹೀಗಿತ್ತು. 'ಮನೆಯಿಂದ ಫೋನ್ ಬಂದರೆ ಭಯವಾಗುತ್ತದೆ. ಕಾರಣ ಪೋಷಕರಿಬ್ಬರೂ ಫೋನ್ ರಿಸೀವರ್ ಎತ್ತಿಕೊಂಡ ತಕ್ಷಣ ಕೇಳುವ ಮೊದಲನೇ ವಿಷಯ- ಹೇಗ್ ಒದ್ತಾ ಇದ್ದೀಯ ಚಿನ್ನೂ....  ಮತ್ತು ಕೊನೆಯ ಮಾತು ಚೆನ್ನಾಗಿ ಓದಿಕೋ ಎಂಬುದು'. ಒಮ್ಮೆಯಾದರೂ ನನ್ನ ಆಕಾಂಕ್ಷೆ, ಸ್ನೇಹಿತರು, ಸುತ್ತಾಟ, ಜೀವನ ಅಥವ ಒತ್ತಡಗಳಿಲ್ಲದ ಮಾತಾಡಿಲ್ಲ ಎಂದು ನೊಂದುಕೊಂಡು ಹೇಳುವಾಗ ಮಕ್ಕಳೆಂದರೆ ಹಿರಿಯರಿಗೆ ಇಷ್ಟೇ ಎನಿಸಿ ಪಿಚ್ಚೆನಿಸಿತು.
ಇನ್ನು ಶಿಕ್ಷಕರಾಗಿ ಶಾಲೆಯಲ್ಲಿರುವ ಮಗುವನ್ನು ನಾವು ಅರ್ಥೈಸಿಕೊಳ್ಳಲು ಏನೆಲ್ಲಾ ಪ್ರಯತ್ನಿಸುತ್ತೇವೆ? ಓದು-ಬರೆ. ಓದಿದ್ದನ್ನು ನೆನಪಿಟ್ಟುಕೊಂಡು ಅದನ್ನು ಉತ್ತರ ಪತ್ರಿಕೆಯಲ್ಲಿ ವಾಂತಿ ಮಾಡಿದರೆ ಮಗು ಜ್ಞಾನ ಕಲಿತಂತೆಯೇ? ಖಂಡಿತವಾಗಿಯೂ ಇಲ್ಲ. ಮಗು ಕಲಿಯುವುದು ಮುಖ್ಯ. ಈ ಕಲಿಕಾ ಪ್ರಕ್ರಿಯೆಯಲ್ಲಿ ಮಗುವನ್ನು ವಿವಿಧ ಆಯಾಮಗಳಲ್ಲಿ ಅರ್ಥೈಸಿಕೊಳ್ಳುವುದು ಮುಖ್ಯ. ಮಗುವನ್ನು ಮನುಷ್ಯನನ್ನಾಗಿ ನೋಡುವುದು ಮುಖ್ಯ. ಇದಕ್ಕೆ ಯಾವ ಅರ್.ಟಿ.ಇ ಬೇಡ. ಮಕ್ಕಳ ಅಗತ್ಯತೆ ಮತ್ತು ಭಾವನೆಗಳಿಗೆ ಶಿಕ್ಷಕರ ಸಂವೇದನಾ ಶೀಲತೆಯೇ ಸಾಕು.  
ಇಲ್ಲಿಯವರೆಗೆ ಮಗುವಿನ ಪ್ರಗತಿಯನ್ನು ಕೇವಲ ಜ್ಞಾನ ವಲಯಕ್ಕೆ ಸೀಮಿತಗೊಳಿಸಿ ಸ್ಮರಣೆಗೆ ನಿಲ್ಲಿಸಿ ಬಿಟ್ಟಿದ್ದೇವೆ. ಮಗುವಿನ ಅಭಿವ್ಯಕ್ತಿ, ಆಸಕ್ತಿ, ಮನೋಧೋರಣೆ, ಮೌಲ್ಯಗಳು ಮತ್ತು ಸಹಪಠ್ಯ ಚಟುವಟಿಕೆಗಳಿಂದ ಅವರನ್ನು ಅರ್ಥೈಸಿಕೊಳ್ಳುವ ಪ್ರಯತ್ನ ನಮ್ಮಲ್ಲಿ ಆಗಿಲ್ಲ. ನಿಜವಾಗಿಯೂ ಮಕ್ಕಳನ್ನು ಮನುಷ್ಯರನ್ನಾಗಿ ಮಾಡುವ, ಅವರನ್ನು ಮನುಷ್ಯರನ್ನಾಗಿ ಅರ್ಥೈಸಿಕೊಳ್ಳುವ ಆಯಾಮಗಳು ಇವೇ ಆಗಿವೆ. ನಮ್ಮ ಪರೀಕ್ಷೆಗಳು ಇವುಗಳನ್ನು ಗಮನಿಸುತ್ತಿಲ್ಲ. ವಿದ್ಯಾರ್ಥಿಯ ಕಲಿಕಾ ಮಟ್ಟವನ್ನು ಪರೀಕ್ಷಾಧಾರಿತವಾಗಿ, ವರ್ಷಾಂತ್ಯದಲ್ಲಿ ಮಾಡಿದ ಮೌಲ್ಯಮಾಪನದ ಫಲಿತಾಂಶದಿಂದ ಮಾತ್ರ ನಿರ್ಧರಿಸಿ ಅಂಕಗಳ ಹಣೆಪಟ್ಟಿ ಹಾಕಿಬಿಡುತ್ತೇವೆ. ಮಗು ಏಕೆ ಕಲಿಯಲಿಲ್ಲ, ಕಲಿಯದಿರಲು ನಾವೆಷ್ಟು ಕಾರಣ, ಹೋಗಲಿ ಕಲಿಯದೇ ಇರುವ ಅಂಶಗಳಿಗೆ ಹಿಮ್ಮಾಹಿತಿ ನೀಡಿದ್ದೇವೆಯೇ ಎಂಬ ಈ ವಿಷಯಗಳೆಲ್ಲಾ ಹಿಂದೆ ಇದ್ದ ಪರೀಕ್ಷಾ ಪದ್ಧತಿಯಲ್ಲಿ ಸಿಗುತ್ತಿರಲಿಲ್ಲ. ಪ್ರತಿ ಮಗುವಿನ ಕಲಿಕಾ ವೇಗವು ಅದರ ಬೌದ್ಧಿಕ, ಸಾಮಾಜಿಕ ಹಿನ್ನೆಲೆಯನ್ನು ಆಧರಿಸಿರುವುದರಿಂದ ಪ್ರತಿ ಮಗುವೂ ಭಿನ್ನ ಚೈತನ್ಯವನ್ನು ಹೊಂದಿರುತ್ತದೆ. ಪ್ರತಿ ಮಗುವೂ ವಿಶಿಷ್ಟವಾಗಿ ಕಲಿಯುತ್ತದೆ. ಶಿಕ್ಷಕರಾಗಿ ನಾವು ಹಾಕಿದ ಪ್ರಶ್ನೆಗೆ ನಮ್ಮ ಮನಸ್ಸಿನಲ್ಲಿರುವಂತೆಯೇ ಉತ್ತರ ಕೊಡಬೇಕೆಂದು ಪ್ರತಿ ಮಗುವಿನಿಂದ ಬಯಸಿದರೆ ನಾವು ಅಷ್ಟರ ಮಟ್ಟಿಗೆ ಪ್ರಜಾಸತ್ತಾತ್ಮಕವಾಗಿಲ್ಲವೆಂದಾಗುತ್ತದೆ. ಇಲ್ಲಿ ನಿಖರವಾದ ಉತ್ತರವಿದೆಯೆಂದಾಕ್ಷಣ ಅದೇ ಉತ್ತರ ಮಕ್ಕಳು ಏಕೆ ಬರೆಯಲಿಲ್ಲ ಎಂಬ ಚಿಂತನೆ-ಸ್ವಾವಲೋಕನ ಶಿಕ್ಷಕರಾದ ನಮ್ಮಲ್ಲಿ ಏಳಬೇಕು ಎಂಬ ಕಾರಣದಿಂದ  ಈ ಎಲ್ಲಾ ವಿಷಯ ಬರೆಯಬೇಕಾಯಿತು.  ನಿರಂತರ ಹಾಗೂ ವ್ಯಾಪಕ ಮೌಲ್ಯಮಾಪನ ಇವುಗಳಿಗೆ ಉತ್ತರ ನೀಡುತ್ತದೆ.
ಇನ್ನು ನಿರಂತರ ಹಾಗೂ ವ್ಯಾಪಕ ಮೌಲ್ಯಮಾಪನಕ್ಕೆ ಸಂಬಂಧಿಸಿದ ದಾಖಲೆಗಳ ವಿಷಯ. ಇನ್ನೊಬ್ಬರಿಗೆ, ಅಧಿಕಾರಿಗಳಿಗೆ ತೋರಿಸಲು ದಾಖಲೆಗಳನ್ನು ಇಡಬೇಕು ಎನ್ನುವ ಮನಸ್ಥಿತಿ ನಮ್ಮ ಶಿಕ್ಷಕರಲ್ಲಿದ್ದರೆ ಅಂತಹಾ ದಾಖಲೆಗಳನ್ನು ಖಂಡತವಾಗಿಯೂ ಇಡುವುದು ಬೇಡ. ದಾಖಲೆಗಳು ನಮ್ಮ ಕೆಲಸದ ಕನ್ನಡಿಯಾಗಿ ನಮ್ಮನ್ನು ಅವಲೋಕಿಸಿಕೊಳ್ಳಲು ಇಟ್ಟರೆ ಅದಕ್ಕೆ ಅರ್ಥವಿರುತ್ತದೆ. ಇಂತಹ ಪ್ರಯತ್ನಗಳು ನಮ್ಮನ್ನು ವೃತ್ತಿಪರರನ್ನಾಗಿಸುತ್ತದೆ. ಪ್ರಸ್ತುತ 2013-14ರ ಸಾಲಿನಲ್ಲಿ ದಾಖಲೆಗಳಿಗೆ ಸಂಬಂಧಿಸಿದಂತೆ ಎರಡು ದಿನಗಳ ತರಬೇತಿಯನ್ನು ಶಿಕ್ಷಣ ಇಲಾಖೆ ನೀಡುತ್ತಿದ್ದು ಇಲ್ಲಿ ಇಡಬೇಕಾದ ದಾಖಲೆಗಳು ಎರಡು ಮಾತ್ರ. ಒಂದು ಮಕ್ಕಳ ಫೈಲ್. ಇಲ್ಲಿ ಮಗುವಿನ ವಿವಿಧ ಅಭಿವ್ಯಕ್ತಿಗಳನ್ನು ಹಾಕಲಾಗುತ್ತದೆ. ಇದೂ ಹೊರೆಯೆನಿಸಿದರೆ ಅವರ ಫೈಲ್‌ನಲ್ಲಿ ಅವರ ದಾಖಲೆಗಳನ್ನು ಹಾಕಲು ಮಕ್ಕಳಿಗೆ ತರಗತಿ ಶಿಕ್ಷಕರು ಹೇಳಿದರೆ ಸಾಕು.
ಹಿಂದಿನ ಪಧ್ಧತಿಯಲ್ಲಿ ವಿದ್ಯಾಥಿಗಳು ಒಮ್ಮೆ ಟೆಸ್ಟ್ ಬರೆದರೆ ಮುಗಿಯಿತು. ತಿದ್ದಿಕೊಳ್ಳಲು ಅವಕಾಶವಿರುತ್ತಿರಲಿಲ್ಲ. ಹಿಮ್ಮಾಹಿತಿಯೂ ಇರುತ್ತಿರಲಿಲ್ಲ. ಇದನ್ನು ಹೋಗಲಾಡಿಸಲು ಇರುವ ಮತ್ತೊಂದು ದಾಖಲೆ ಮಗುವಿನ ವೈಯಕ್ತಿಕ ನಮೂದು ದಾಖಲೆ. ಸದರಿ ದಾಖಲೆಯು ಮಗುವಿಗೆ ಹಿಮ್ಮಾಹಿತಿ ನೀಡಲು ಸಾಕಷ್ಟು ಸಹಾಯ ಮಾಡುವುದಲ್ಲದೇ, ತಿದ್ದಿಕೊಳ್ಳಲು ಅವಕಾಶ ನೀಡುತ್ತದೆ. ಇದನ್ನೂ ಸಹ ತರಗತಿ ನಡೆಯುವಾಗ ಶಿಕ್ಷಕರಿಂದ, ಮಕ್ಕಳಿಂದ, ಮಕ್ಕಳ ಸ್ನೇಹಿತರಿಂದ ಸಾಧ್ಯವಾದರೆ ಪೋಷಕರಿಂದಲೂ (ಪೇರೆಂಟಲ್ ಅಸೆಸ್ಮೆಂಟ್) ಅಗತ್ಯಕ್ಕೆ, ಸಂದರ್ಭಕ್ಕೆ ತಕ್ಕಂತೆ ನಮೂದಿಸಬಹುದು. ಈ ದಾಖಲೆಗಳು ಹೊರೆಯಲ್ಲ. ಇವೆಲ್ಲವೂ ಸಿಸಿಇ ತತ್ವದ ವಿಷಯಗಳಲ್ಲ, ಆಚರಣೆಗಳಷ್ಟೇ. ಇವುಗಳನ್ನು ಸರಳಗೊಳಿಸಲು ತಜ್ಞರಿಂದ, ಶಿಕ್ಷಕರಿಂದ ಇಲಾಖೆ ಸಹಾಯ ಕೋರುತ್ತದೆ. ಆಚರಣೆಗಾಗಿ ತತ್ವವನ್ನೇ ತಿರಸ್ಕರಿಸಿದರೆ ನಮ್ಮ ಮಕ್ಕಳಿಗೆ ಅನ್ಯಾಯ ಮಾಡಿದಂತಾಗುತ್ತದೆ. ಕಳೆದ ವರ್ಷ ಸಿಸಿಇ ಸರಿಯಾಗಿ ಅರ್ಥ ಮಾಡಿಕೊಳ್ಳದೇ, ತರಬೇತಿಯಾಗದೇ ಪಿಯುಸಿ ವಿದ್ಯಾರ್ಥಿಗಳಿಗೆ ಜಾರಿಯಾಗಿ ನಂತರ ಅದನ್ನು ರದ್ದು ಮಾಡಿದ್ದರಿಂದ ಗ್ರಾಮೀಣ ವಿದ್ಯಾರ್ಥಿಗಳಿಗೆ ಆದ ನಷ್ಟ ಅತಿ ಹೆಚ್ಚು ಎಂದು ಪದವಿ ಪೂರ್ವ ಶಿಕ್ಷಕರು ಅಭಿಪ್ರಾಯ ಪಡುತ್ತಾರೆ.
ಪ್ರಪಂಚ ಬದಲಾಗುತ್ತಿದೆ. ಜ್ಞಾನವೂ ಬದಲಾಗುತ್ತಿದೆ. ಇಲ್ಲಿ ಚರ್ಚೆ ಜ್ಞಾನದ ಸ್ವರೂಪದ ಬಗ್ಗೆ ಅಲ್ಲ. ಜ್ಞಾನವನ್ನು ಗಳಿಸುವ, ಕಲಿಯುವ ಪ್ರಕ್ರಿಯೆಯ ಬಗ್ಗೆ. ಈ ಜ್ಞಾನ ಶಿಕ್ಷಕರು ಕಲಿಸುವ ಪ್ರಕ್ರಿಯೆಯಲ್ಲಿ ಸ್ವಾವಲೋಕನ ಅತಿ ಮುಖ್ಯ. ಈ ಸ್ವಾವಲೋಕನಕ್ಕೆ ಕೇವಲ ಮಕ್ಕಳು ಬರೆದ ಉತ್ತರ ಪತ್ರಿಕೆಗಳು ಸಾಲುವುದಿಲ್ಲ. ಆದ್ದರಿಂದ ನಿರಂತರ ಹಾಗೂ ವ್ಯಾಪಕ ಮೌಲ್ಯಮಾಪನ ಅಗತ್ಯವಾಗುತ್ತದೆ. ಇದು ಮಕ್ಕಳಿಗೆ, ಶಿಕ್ಷಕರಿಗೆ ಹಾಗೂ ಪೋಷಕರಿಗೆ ಸ್ವಾವಲೋಕನ ಸಾಧನವಾಗಿ ಸಹಾಯ ಮಾಡುತ್ತದೆ. ಈ ಸಾಧನವು ಕಾರ್ಯನಿರತರನ್ನು ಹೆಚ್ಚು ವೃತ್ತಿಪರರನ್ನಾಗಿ ಮಾಡುತ್ತದೆ. ಮಕ್ಕಳು ತಮ್ಮ ಜ್ಞಾನವನ್ನು ಪುನಾರಚಿಸಿಕೊಳ್ಳುವ ಪ್ರಕ್ರಿಯೆ ವ್ಯಕ್ತಿಗತ. ಇಂಥ ಕಲಿಕೆಗೆ ಅನುಕೂಲಿಸುವ ಶಿಕ್ಷಕರಾದ ನಾವು ನಮ್ಮ ಸ್ವಾವಲೋಕನ ಅಭ್ಯಾಸಗಳಿಂದ ವೃತ್ತಿಪರರಾಗಬೇಕಿದೆ. 

- ಜಿ. ವಿ. ಹರಿಪ್ರಸಾದ್
ಹಿರಿಯ ಉಪನ್ಯಾಸಕರು,
ಚಿಕ್ಕಮಗಳೂರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement