ಜನರಿಗೆ ಭ್ರಷ್ಟ ಕಾಂಗ್ರೆಸ್ ಮತ್ತು ಬಿಜೆಪಿ ಬೇಕಿಲ್ಲ
ಇದುವರೆಗೂ ದೆಹಲಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ನಡುವೆಯೇ ಪೈಪೋಟಿ ನಡೆಯುತ್ತಿತ್ತು. ಆದರೆ ಈಗ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವೂ ಅಲ್ಲಿ ಸದ್ದು ಮಾಡುತ್ತಿದೆ. ಮುಂದಿನ ಚುನಾವಣೆಗಳಲ್ಲಿ ದೆಹಲಿಯ ಮುಖ್ಯಮಂತ್ರಿ ಹುದ್ದೆಗಾಗಿ ಆಮ್ ಆದ್ಮಿ ಪಕ್ಷದಿಂದ ಅಖಾಡಕ್ಕೆ ಇಳಿಯಲಿರುವ ಅರವಿಂದ್ ಕೇಜ್ರಿವಾಲ್ ಅವರೊಂದಿಗೆ "ಔಟ್ಲುಕ್" ಪತ್ರಿಕೆಯ ಅನುರಾಧಾ ರಾಮನ್ ಮಾತಿಗಿಳಿದಾಗ...
ಅರವಿಂದ್ ಕೇಜ್ರಿವಾಲ್ ಮುಖ್ಯಮಂತ್ರಿ ಹುದ್ದೆಗೆ ಆಕಾಂಕ್ಷಿಯಾದದ್ದು ಹೇಗೆ? ಇದು ಒಂದು ಸೀಮಿತ, ನಿರ್ದಿಷ್ಟ ಜವಾಬ್ದಾರಿ. ಒಂದು ಚಳವಳಿಯ ನೇತೃತ್ವ ವಹಿಸುವುದಕ್ಕಿಂತಲೂ ಅತ್ಯಂತ ಭಿನ್ನವಾದದ್ದು.
ನಮ್ಮ ಕಾರ್ಯಕರ್ತರನ್ನೆಲ್ಲ ಕರೆದು ಒಂದು ಸಭೆಯನ್ನು ನಡೆಸಿದೆವು. ಅವರ ಮುಂದೆ ನಾವು ಎರಡು ಪ್ರಶ್ನೆಗಳನ್ನು ಇಟ್ಟೆವು. ಮೊದಲನೆಯದು, ನಾವು ಚುನಾವಣೆಯನ್ನು ಎದುರಿಸಬೇಕೇ? ಎಂಬುದು, ಇನ್ನು ಎರಡನೆಯದು ಎಲ್ಲಿಂದ ಎಂದು. ಕೆಲವರು ಬೇಡ ಎಂದರು. ಬಹುತೇಕರು, ಚುನಾವಣೆಯನ್ನು ಎದುರಿಸುವುದೇ ಸರಿಯಾದ ಮಾರ್ಗವೆಂದೂ ಮತ್ತು ದೆಹಲಿಯಲ್ಲಿ ಶೀಲಾ ದೀಕ್ಷಿತ್ ಅವರ ವಿರುದ್ಧ ಸ್ಪರ್ಧಿಸಬೇಕೆಂದು ಅಭಿಪ್ರಾಯಪಟ್ಟರು.
ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಭ್ರಷ್ಟ ಪಕ್ಷಗಳು ಎಂದು ನೋಡಲಾಗುತ್ತಿದೆ. ನಿಮ್ಮನ್ನು ಹೇಗೆ ಬಿಂಬಿಸಿಕೊಳ್ಳುತ್ತೀರಿ?
ಒಂದು ಪ್ರಾಮಾಣಿಕ ಆಯ್ಕೆಯಾಗಿ. ಈ ವಿಷಯದ ಬಗ್ಗೆ ನಮಗೆ ಸ್ಪಷ್ಟತೆ ಇದೆ. ಹರ್ಯಾಣಾದ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾರ ಮಗ ದೀಪೆಂದರ್ ಹೂಡಾ ಸುದ್ದಿ ವಾಹಿನಿಯೊಂದರಲ್ಲಿ ನನಗೆ ಹೇಳಿದ ಮಾತು ನಿಜಕ್ಕೂ ಆಶ್ಚರ್ಯವುಂಟುಮಾಡಿತು: "ನೀವು ನಮ್ಮ ವಿರೋಧಿಗಳು, ಆದರೆ ನಿಮ್ಮ ಪಕ್ಷದಲ್ಲಿರುವ ಪ್ರಮುಖರು ಬಹಳ ಪ್ರಾಮಾಣಿಕರು ಮತ್ತು ನಿಮ್ಮ ಪಕ್ಷಕ್ಕೆ ಒಳ್ಳೆಯ ಉದ್ದೇಶವಿದೆ" ಎಂದರು. ಇಂದು ನಮ್ಮ ಪಕ್ಷದ ಅತಿ ಪ್ರಬಲ ಟೀಕಾಕಾರರೂ ಕೂಡ, ನಾವು ಪ್ರಮಾಣಿಕರು ಎನ್ನುವುದನ್ನು ಒಪ್ಪುತ್ತಾರೆ. ಇದೇ ವ್ಯತ್ಯಾಸ ನಮ್ಮ ಮತ್ತು ಉಳಿದ ಪಕ್ಷಗಳ ನಡುವಿದೆ ನಾವು ನಂಬಿದ್ದೇವೆ.
ನೀವು ರಾಷ್ಟ್ರೀಯ ಮಟ್ಟದಲ್ಲಿ ಭ್ರಷ್ಟಾಚಾರ ವಿರೋಧಿ ಭಾವನೆಯನ್ನು ಹುಟ್ಟುಹಾಕಿದಿರಿ. ಆದರೆ ಈಗ ಕೇವಲ ದೆಹಲಿಯ ಚುನಾವಣೆಗಷ್ಟೇ ಸೀಮಿತಗೊಳಿಸಿಕೊಂಡದ್ದೇಕೆ?
ದೆಹಲಿಯಿಂದ ನಾವು ರಾಷ್ಟ್ರೀಯ ಮಟ್ಟಕ್ಕೆ ಸಾಗುತ್ತೇವೆ.
ಹಾಗಿದ್ದರೆ ದೆಹಲಿ ಚುನಾವಣೆ ನಿಮ್ಮ ಪಕ್ಷದ ಪರೀಕ್ಷಾ ಸಂದರ್ಭವೇ?
ದೆಹಲಿ ನಮ್ಮ ಯಾತ್ರೆ ಶುರುವಾಗಲಿರುವ ಜಾಗವಷ್ಟೆ. ಇದನ್ನು ನಾನು ಪರೀಕ್ಷಾ ವೇದಿಕೆ ಎಂದು ಭಾವಿಸುವುದಿಲ್ಲ. ಎಲ್ಲಿಂದಲಾದರೂ ಶುರು ಮಾಡಲೇಬೇಕಲ್ಲ?
ಶೀಲಾ ದೀಕ್ಷಿತ್ರ ವಿರುದ್ಧ ಸಮರವನ್ನೇನೋ ಸಾರಿದ್ದೀರಿ, ಆದರೆ ಬಿಜೆಪಿಯ ವಿರುದ್ಧ?
ನಮ್ಮ ಹೋರಾಟವೇನಿದ್ದರೂ ಭ್ರಷ್ಟಾಚಾರದ ವಿರುದ್ಧವಷ್ಟೆ. ಇದು ಶೀಲಾ ದೀಕ್ಷಿತ್ ಅಥವಾ ಬಿಜೆಪಿಯ ವಿಜಯ್ ಗೋಯಲ್ರ ವಿರುದ್ಧದ ವೈಯಕ್ತಿಕ ಹೋರಾಟವಲ್ಲ.
ಎರಡು ವರ್ಷದ ಹಿಂದೆ ರಾಜಕೀಯ ಮತ್ತು ರಾಜಕಾರಣದ ಬಗ್ಗೆ ನಿಮ್ಮದು ತಿರಸ್ಕಾರದ ದೃಷ್ಟಿಯಾಗಿತ್ತು. ಈಗ ರಾಜಕಾರಣಕ್ಕೆ ಧುಮುಕಿದ್ದೇಕೆ?
ಹೌದು, ನಿಮ್ಮ ಮಾತನ್ನು ಒಪ್ಪುತ್ತೇನೆ. ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ಅಣ್ಣಾ ಹಜಾರೆಯವರೊಂದಿಗಿದ್ದಾಗ, ಅವರು ತಾವೆಂದೂ ರಾಜಕೀಯ ಪ್ರವೇಶ ಮಾಡುವುದಿಲ್ಲವೆಂದು ಹೇಳುತ್ತಿದ್ದರು. ಈಗ ಭಾರತದಲ್ಲಿನ ರಾಜಕೀಯ ಹೇಗೆ ನಡೆಯುತ್ತಿದೆಯೋ ನೋಡಿ. ಇಡೀ ದೇಶವೇ ರಾಜಕಾರಣವನ್ನು ತಿರಸ್ಕಾರದಿಂದ ನೋಡುತ್ತದೆ. ಬಿಜೆಪಿ ಮತ್ತು ಕಾಂಗ್ರೆಸ್, ಶಿಕ್ಷೆಗೊಳಗಾದ ರಾಜಕಾರಣಿಗಳನ್ನು ಬಚಾವು ಮಾಡಲು ಸಿದ್ಧವಾಗಿದ್ದ ಸುಗ್ರೀವಾಜ್ಞೆಯ ವಿಷಯದಲ್ಲಿ ಆಡಿದ ನಾಟಕವನ್ನು ನಾವು ನೋಡಿದ್ದೇವೆ. ಆದರೆ ರಾಜಕಾರಣಿಗಳಾಗಿ ಅವರೆಲ್ಲರೂ ಒಂದೇ. ಎಲ್ಲರೂ ಇಂಥ ವಿಷಯಗಳಲ್ಲಿ ಜೊತೆಯಾಗಿಬಿಡುತ್ತಾರೆ. ರಾಜಕೀಯವನ್ನು ಸ್ವಚ್ಛಮಾಡುವುದು ಇಂಥ ರಾಜಕಾರಣಿಗಳಿಂದ ಅದ್ಹೇಗೆ ಸಾಧ್ಯ? ಈ ಕೆಲಸವನ್ನೇನಿದ್ದರೂ ಜನರು ಮಾಡಬೇಕು. ನಮಗೆ ಸಚಿವರಾಗಬೇಕು ಎಂಬ ಗುರಿಯಿಲ್ಲ. ನಾವು ಭ್ರಷ್ಟಾಚಾರದ ವಿರುದ್ಧ ರೋಸಿ ಹೋಗಿರುವ ಸಾಮಾನ್ಯ ಜನತೆಯನ್ನು ಪ್ರತಿನಿಧಿಸುತ್ತಿದ್ದೇವಷ್ಟೆ. ನಾವೆಲ್ಲರೂ ಸೇರಿ ಈ ಕೊಳಕು ವ್ಯವಸ್ಥೆಯನ್ನು ಸ್ವಚ್ಛಗೊಳಸಬೇಕಿದೆ.
-ಆದರೆ ಕೆಲವು ಸಾರ್ವಜನಿಕ ಸಂಘಟನೆಗಳು, ನಿಮ್ಮದು ರಾಜಕೀಯ ಪಕ್ಷವಾಗಿರದೆ ಕೇವಲ ಒಂದು ಹೋರಾಟದ ಗುಂಪು ಆಗಿದ್ದಿದ್ದರೇ ಒಳ್ಳೆಯದಿತ್ತು ಎಂದು ಹೇಳುತ್ತವೆ...
ಹಾಗಿದ್ದರೆ ರಾಜಕೀಯವನ್ನು ಸ್ವಚ್ಛಗೊಳಿಸುವವರು ಯಾರು? ನಾವೆಲ್ಲರೂ ಬದಲಾವಣೆ ಬೇಕು, ಬದಲಾವಣೆ ಬೇಕು ಎಂದು ಮತ್ತೆ ಈ ರಾಜಕಾರಣಿಗಳ ಬಳಿಯೇ ಓಡಬೇಕಾಗುತ್ತದೆ. ಇಂದು ಸಂಸತ್ತಿನಲ್ಲಿ ಕ್ರಿಮಿನಲ್ಗಳು ಕುಳಿತಿದ್ದಾರೆ. ಅವರಿಂದ ಯಾವ ಬದಲಾವಣೆಯೂ ಸಾಧ್ಯವಿಲ್ಲ. ಹಾಗಿದ್ದರೆ ವ್ಯವಸ್ಥೆಯನ್ನು ಹೇಗೆ ಬದಲಾಯಿಸಬೇಕೆಂದು ನೀವೇ ಹೇಳಿ?
ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳಿಗೆ ಟಿಕೆಟ್ ಕೊಡುವ ವಿಷಯದಲ್ಲಿ ಅನುಸರಿಸುವ ಮಾನದಂಡವೇನು?
ಆತ ಪ್ರಾಮಾಣಿಕನಾಗಿರಬೇಕು. ಈ ಬಗ್ಗೆ ನಾವು ರಹಸ್ಯವಾಗಿ ಮಾಹಿತಿ ಸಂಗ್ರಹಿಸುತ್ತೇವೆ. ಉತ್ತಮ ನಡೆತೆಯುಳ್ಳವನಾಗಿರಬೇಕು. ಆತನಿಗೆ ವಿವಾಹೇತರ ಸಂಬಂಧವಿರಬಾರದು. ಆತನ ವಿರುದ್ಧ ಯಾವುದೇ ಕ್ರಿಮಿನಲ್ ಕೇಸುಗಳಿರಬಾರದು. ಈ ರೀತಿ ಆಯ್ಕೆಯಾದ ವ್ಯಕ್ತಿಗಳ ಪಟ್ಟಿಯನ್ನು ನಾವು ತಯಾರಿಸುತ್ತೇವೆ, ನಮ್ಮ ಕಾರ್ಯರ್ತರು ಮತದಾನದ ಮೂಲಕ ಅಭ್ಯರ್ಥಿಗಳನ್ನು ಆರಿಸುತ್ತಾರೆ. ಇನ್ನು ಸಾಮಾನ್ಯ ಜನರಿಂದಲೂ ನಾವು ಅರ್ಜಿಗಳನ್ನು ಆಹ್ವಾನಿಸುತ್ತೇವೆ.
ನೀವು ಅಣ್ಣಾ ಹಜಾರೆಯವರ ಆಶೀರ್ವಾದ ಪಡೆದಿದ್ದೀರಾ? ಅವರನ್ನು ಮಿಸ್ ಮಾಡಿಕೊಳ್ಳುತ್ತೀರಾ?
ಖಂಡಿತ. ಅವರು ನಮ್ಮ ಜೊತೆಗಿದ್ದಿದ್ದರೆ ನಮ್ಮ ಹೋರಾಟದ ಗತಿ ಇನ್ನಷ್ಟು ತೀವ್ರವಾಗಿರುತ್ತಿತ್ತು, ಬಲಿಷ್ಠವಾಗಿರುತ್ತಿತ್ತು.
ನಿಮ್ಮ ಪಕ್ಷವನ್ನು ಸೇರಿಕೊಳ್ಳಲು ಅಣ್ಣಾ ಅವರನ್ನು ಆಹ್ವಾನಿಸಿದ್ದೀರಾ?
ಅವರು ರಾಜಕೀಯಕ್ಕೆ ಬರುವುದಿಲ್ಲ. ಆದರೆ ಅವರೊಂದಿಗೆ ನಾನು ಸಂಪರ್ಕದಲ್ಲಂತೂ ಇದ್ದೇನೆ.
ಕಿರಣ್ ಬೇಡಿಯವರ ಬಗ್ಗೆ ನಿಮಗೇನನಿಸುತ್ತದೆ?
ಆಕೆ ಶ್ರೇಷ್ಠ ವ್ಯಕ್ತಿತ್ವದ ಮಹಿಳೆ. ಕಿರಣ್ ಬೇಡಿಯವರೂ ನಮ್ಮ ಪಕ್ಷದೊಂದಿಗಿರಬೇಕಿತ್ತು.
ಇನ್ನು ಜನರಲ್ ವಿ.ಕೆ. ಸಿಂಗ್ ಅವರು ಹೇಗೆ? ನಿಮ್ಮ ಪಕ್ಷವನ್ನು ಇನ್ನೇನು ಸೇರಿಕೊಂಡೇ ಬಿಡುತ್ತಾರೆ ಎಂದು ಸುದ್ದಿಯಾಗಿತ್ತಲ್ಲ?
ಅವರು ಒಂದೇ ಬಾರಿ ನಮ್ಮ ಬಳಿ ಬಂದದ್ದು. ಅವರು ನಡೆದುಕೊಂಡ ರೀತಿಯಿಂದ ನನಗೆ ತುಂಬಾ ನೋವಾಗಿದೆ, ಸಿಟ್ಟೂ ಬಂದಿದೆ. ಮೊದಲಿನಿಂದಲೂ ನಾನು ಅವರ ಅಭಿಮಾನಿಯಾಗಿದ್ದೆ. ಟೆಟ್ರಾ ಟ್ರಕ್ ಹಗರಣವನ್ನು ಅವರು ಹೊರಗೆ ಹಾಕಿದ್ದು, ಸೇನೆಯಲ್ಲಿನ ಭ್ರಷ್ಟಾಚಾರವನ್ನು ಬಯಲು ಮಾಡಿದ್ದನ್ನೆಲ್ಲಾ ನೋಡಿ ತುಂಬಾ ಮೆಚ್ಚಿಕೊಂಡಿದ್ದೆ. ಆದರೆ ಅವರು ಇದನ್ನೆಲ್ಲ ಮಾಡಿದ್ದು ಕೇವಲ ಬಿಜೆಪಿಯಲ್ಲಿ ಸೇರಿಕೊಳ್ಳುವುದಕ್ಕಾಗಿಯೇನೋ ಅನಿಸುತ್ತಿದೆ. ಈಗ ಅವರು ದೇಶಾದ್ಯಂತ ಅಣ್ಣಾ ಹಜಾರೆಯವರೊಂದಿಗೆ ಸಂಚರಿಸುತ್ತಿದ್ದಾರೆ. ಅಣ್ಣಾ ಯುಪಿಎ ಸರ್ಕಾರದ ವಿರುದ್ಧ ಮಾತನಾಡುತ್ತಾರೆ ಎಂಬ ಕಾರಣಕ್ಕೆ. ಹಾಗಿದ್ದರೆ ವಿ.ಕೆ. ಸಿಂಗ್ ಬಿಜೆಪಿ ಸೇರುವ ಅವಕಾಶಕ್ಕಾಗಿ ಹೀಗೆಲ್ಲಾ ಮಾಡಿದರೆ? ಅವರು ಅಣ್ಣಾ ಹಜಾರೆಯವರನ್ನು ದುರ್ಬಳಕೆ ಮಾಡುತ್ತಿಲ್ಲವೇ? ಹೀಗಾದರೆ ಜನರಿಗೆ ನಂಬಿಕೆ ಹೊರಟು ಹೋಗುತ್ತದೆ. ಇಂಥ ವ್ಯಕ್ತಿಗಳು ಮೋಸ ಮಾಡುತ್ತಾರೆ. ಇದು ಅವರ ಭ್ರಷ್ಟಾಚಾರ ವಿರೋಧಿ ಹೋರಾಟವೇ? ಅಥವಾ ಅವರು ಕೇವಲ ಅಧಿಕಾರ ದಾಹಿಯೇ? ನನಗೆ ನಿಜಕ್ಕೂ ಸಿಟ್ಟು ಬರುತ್ತಿದೆ.
ಚುನಾವಣಾ ಪೂರ್ವ ಸಮೀಕ್ಷೆಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಮಾದರಿ ನೀತಿ ಸಂಹಿತೆ ಜಾರಿಯಾದ ನಂತರ ಈ ಚುನಾವಣಾ ಪೂರ್ವ ಸಮೀಕ್ಷೆಗಳನ್ನು ನಿಷೇಧಿಸಬೇಕು.
ಭ್ರಷ್ಟಾಚಾರ ವಿರೋಧಿ ಆಕ್ರೋಶ ಮತಗಳಾಗಿ ಬದಲಾಗುತ್ತವೆ ಎಂದು ಭಾವಿಸುತ್ತೀರಾ?
ಜನರು ಬಿಜೆಪಿ ಮತ್ತು ಕಾಂಗ್ರೆಸ್ನ ವಿರುದ್ಧ ಆಕ್ರೋಶಗೊಂಡಿದ್ದಾರೆ. ಅವರ ದೃಷ್ಟಿಯಲ್ಲಿ ಆಮ್ ಆದ್ಮಿ ಪಕ್ಷವೇ ವಿಶ್ವಾಸಾರ್ಹ ಪರ್ಯಾಯವಾಗಿದೆ.
ಇನ್ನು ಮತಯಂತ್ರಗಳಲ್ಲಿನ "ನೋಟಾ" ಆಯ್ಕೆಯ ಬಗ್ಗೆ ನಿಮಗೇನನ್ನಿಸುತ್ತದೆ?
ದೆಹಲಿಯಲ್ಲಿ ಆ ಆಯ್ಕೆಯನ್ನು ಒತ್ತುವ ಅಗತ್ಯವೇ ಇರುವುದಿಲ್ಲ. ಏಕೆಂದರೆ ದೆಹಲಿಗರಿಗೆ ಪರ್ಯಾಯವೊಂದು ದೊರೆತಿದೆ!
ಮತ್ತೆ ಉಪವಾಸ ಕೂಡುತ್ತೀರಾ?
ನಾವೀಗ ಯಾವ ಒತ್ತಾಯವನ್ನೂ ಮಾಡುವುದಿಲ್ಲ. ವ್ಯವಸ್ಥೆಯ ಒಳಹೊಕ್ಕು ಅದನ್ನು ಬದಲಿಸುತ್ತೇವೆ. ಡಿಸೆಂಬರ್ 29ರಂದು ನಾವು ರಾಮ್ಲೀಲಾ ಮೈದಾನದಲ್ಲಿ ಸಮಾವೇಷ ನಡೆಸಲಿದ್ದೇವೆ. ಅಂದು ಜನಲೋಕಪಾಲ್ ಮಸೂದೆಯನ್ನು ಅನುಮೋದಿಸುತ್ತೇವೆ. ನಾವು ಈ ದಿನವನ್ನು ಆಯ್ಕೆಮಾಡಿಕೊಂಡಿದ್ದೇಕೆಂದರೆ, ಎರಡು ವರ್ಷಗಳ ಹಿಂದೆ ಇದೇ ದಿನದಂದು ರಾಜನೀತಿ ಪ್ರಸಾದ್ ಅವರು ರಾಜ್ಯಸಭೆಯಲ್ಲಿ ಈ ಮಸೂದೆಯನ್ನು ಹರಿದುಹಾಕಿದ್ದರು. ನಾವೀಗ ಜನರ ಬೆಂಬಲ ಪಡೆದು ಸರ್ಕಾರ ರಚಿಸಿ, ಈ ಮಸೂದೆಯನ್ನು ಜಾರಿಗೊಳಿಸುತ್ತೇವೆ.
ಒಂದು ವೇಳೆ ಸೋತರೆ?
ಸೋತರೂ ನಮ್ಮ ಹೋರಾಟ ಮುಂದುವರಿಯುತ್ತದೆ.