ಅಂಕಣಗಳು

ಸಂಸದೀಯ ಪ್ರಜಾಪ್ರಭುತ್ವಕ್ಕೆ ಸಿಕ್ಕ ಹೊಸ ತಿರುವು

ಅಮೆರಿಕದಂತೆ ಭಾರತವೇನೂ ಅಧ್ಯಕ್ಷೀಯ ನಮೂನೆಯ ಪ್ರಜಾಪ್ರಭುತ್ವದ ಹಾದಿಯಲ್ಲಿ...

ಅಮೆರಿಕದಂತೆ ಭಾರತವೇನೂ ಅಧ್ಯಕ್ಷೀಯ ನಮೂನೆಯ ಪ್ರಜಾಪ್ರಭುತ್ವದ ಹಾದಿಯಲ್ಲಿ ಸಾಗುತ್ತಿಲ್ಲವಾದರೂ,  ಪ್ರಧಾನಿ ಮತ್ತು ಮುಖ್ಯಮಂತ್ರಿ ಅಭ್ಯರ್ಥಿಗಳ ಹೆಸರನ್ನು ಮೊದಲೇ ಘೋಷಿಸುವ ಹೊಸ ಸಂಪ್ರದಾಯದ ಮೂಲಕ ಸಂಸದೀಯ ಪ್ರಜಾಪ್ರಭುತ್ವಕ್ಕೆ ಹೊಸ ತಿರುವು ಕೊಟ್ಟಿರುವುದಂತೂ ನಿಜ. ಜನತೆ ಈ ನಡೆಯನ್ನು ಸ್ವಾಗತಿಸುತ್ತಿದ್ದಾರೆ. ರಾಜ್ಯದಲ್ಲೇ ಆಗಲಿ ಅಥವಾ ರಾಷ್ಟ್ರದಲ್ಲೇ ಆಗಲಿ, ಯಾವ ಪಕ್ಷದ ಅಭ್ಯರ್ಥಿ "ಮುಖ್ಯ" ಸ್ಥಾನದ ಆಕಾಂಕ್ಷಿ ಎಂಬುದು ಮೊದಲೇ ತಿಳಿಯುವುದು ಬಹಳ ಒಳ್ಳೆಯದೇ. ಇಂಥ ಸನ್ನಿವೇಶದಲ್ಲಿ ನಿರ್ಧಾರ ತೆಗೆದುಕೊಳ್ಳುವುದು ಸುಲಭವಾಗುತ್ತದೆ. ಬಹಳಷ್ಟು ಬಾರಿ ಸರ್ಕಾರವನ್ನು ಮುನ್ನಡೆಸಲು ಪಕ್ಷಗಳು ಆಯ್ಕೆ ಮಾಡುವ ವ್ಯಕ್ತಿಗಳನ್ನು ನೋಡಿ ಮತದಾರರು ಗೊಂದಲಗೊಳ್ಳುತ್ತಾರೆ. ಬಹುಮತ ಪಡೆದ ಪಕ್ಷದ ಸಚಿವರು ಅಥವಾ ಶಾಸಕರು ಪ್ರಧಾನಿ ಅಥವಾ ಮುಖ್ಯಮಂತ್ರಿಯಾಗಿ ಒಬ್ಬ ನಾಯಕನನ್ನು ಆರಿಸುವವರೆಗೂ ನಾವು ಅನುಮಾನದಲ್ಲೇ ಇರುತ್ತೇವೆ. ಅವರುಗಳ ಆಯ್ಕೆ ನಮಗೆ ಇಷ್ಟವಾಗದೇ ಇರಬಹುದು, ಆದರೆ ಬೇರೆ ದಾರಿಯೇ ನಮ್ಮ ಮುಂದೆ ಇರುವುದಿಲ್ಲವಲ್ಲ? ನಮ್ಮಿಂದ ಏನು ಮಾಡಲು ತಾನೆ ಸಾಧ್ಯ? ಆದರೆ ಅಮೆರಿಕದಲ್ಲಿನ ಮತದಾರ, ಸರ್ಕಾರವನ್ನು ಮುನ್ನಡೆಸುವುದು ಯಾರು ಎನ್ನುವುದನ್ನು ತಾನೇ ನಿರ್ಧರಿಸುತ್ತಾನೆ.  ಭಾರತದಲ್ಲಿನ ಪಕ್ಷಗಳು ತಮ್ಮ ನಾಯಕನನ್ನು ಆಯ್ಕೆ ಮಾಡುವ ಪ್ರಕ್ರಿಯೆ ಹೇಗಿದೆ ಎನ್ನುವುದನ್ನು ನೋಡಿದಾಗ...
-ಕೆಲವು ಪಕ್ಷಗಳಲ್ಲಿ ನಾಯಕರನ್ನು ಚುನಾವಣೆ ಮೂಲಕವಲ್ಲದೆ, ನೇರವಾಗಿಯೇ ಆಯ್ಕೆ ಮಾಡಲಾಗುತ್ತದೆ ಇದನ್ನು " not elected, but selected " ಎನ್ನಬಹುದು. ಪಕ್ಷದ ಪ್ರಮುಖ ನಾಯಕರು ಅಥವಾ ಹೈಕಮಾಂಡ್ ಯಾರ ಹೆಸರನ್ನು ಸೂಚಿಸುತ್ತದೋ, ಅವರೇ ಪಕ್ಷದ ಚುಕ್ಕಾಣಿ ಹಿಡಿಯುತ್ತಾರೆ.
-ಇನ್ನೂ ಕೆಲವು ಪಕ್ಷಗಳು ಚುನಾಯಿತ ಸದಸ್ಯರುಗಳನ್ನು ಕರೆದು, ಅವರ ಆಯ್ಕೆಯನ್ನು ಕೇಳುವ ಸಂಪ್ರದಾಯ ರೂಢಿಸಿಕೊಂಡಿವೆ. ಆದರೆ ಪಕ್ಷದ ಬಾಸ್‌ಗಳು ಒಪ್ಪಿಗೆ ನೀಡದಿದ್ದರೆ, ಬಹುಮತ ಪಡೆದ ವ್ಯಕ್ತಿಯೂ ಸುಮ್ಮನೆ ಕೂಡಬೇಕಾಗುತ್ತದೆ.
- ಇನ್ನು, ಒಬ್ಬ ವ್ಯಕ್ತಿಯ ಅಥವಾ ಕುಟುಂಬದ ಒಡೆತನದ ಪಕ್ಷಗಳಲ್ಲಿ, ಯಾರು ಪಕ್ಷದ ನೇತೃತ್ವ ವಹಿಸಲಿದ್ದಾರೆ ಎನ್ನುವುದು ಮೊದಲೇ ನಿಗದಿಯಾಗಿರುತ್ತದೆ. ಕುಟುಂಬದ ಸದಸ್ಯನೊಬ್ಬ ಅವಿರೋಧವಾಗಿ ಆಯ್ಕೆಯಾಗುತ್ತಾನೆ. ಅದನ್ನು ಪ್ರಶ್ನಿಸುವ ಧೈರ್ಯ ಯಾರಿಗೂ ಇರುವುದಿಲ್ಲ.
-ಕೆಲವು ಪಕ್ಷಗಳಲ್ಲಿ ಕಿಂಗ್‌ಮೇಕರ್‌ಗಳು ಪ್ರಧಾನ ಪಾತ್ರ ವಹಿಸುತ್ತಾರೆ. ಒಂದು ವೇಳೆ ತಮಗೆ ಪ್ರಧಾನ ಸ್ಥಾನದಲ್ಲಿ ಕೂರುವುದಕ್ಕೆ ಸಾಧ್ಯವಾಗಲಿಲ್ಲವೆಂದರೆ, ತಾವು ಆರಿಸಿದ ವ್ಯಕ್ತಿಯಾದರೂ ಆ ಸ್ಥಾನದಲ್ಲಿ ಆಸೀನನಾಗುವಂತೆ ನೋಡಿಕೊಳ್ಳುತ್ತಾರೆ.
ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ನಾಯಕನ ಆಯ್ಕೆಯೆಂಬುದು ಚುನಾಯಿತ ಸದಸ್ಯರುಗಳ ಅಥವಾ ಮತದಾರರ ಕೈಯಲ್ಲಿರದ ವಿಷಯ. ಇದರಿಂದಾಗಿ ಮತಭೇದ ಮತ್ತು ನಿರಾಶೆ ಉಂಟಾಗುತ್ತದೆ. ಕೊನೆಗೆ ಆಡಳಿತಕ್ಕೆ ಹೊಡೆತ ಬೀಳುವುದರಿಂದ, ಅಭಿವೃದ್ಧಿ ತೆವಳುತ್ತಾ ಸಾಗುತ್ತದೆ.
ಹಾಗಾಗೆ, ಪ್ರಧಾನಮಂತ್ರಿ ಅಥವಾ ಮುಖ್ಯಮಂತ್ರಿ ಅಭ್ಯರ್ಥಿಯ ಹೆಸರನ್ನು ಮುಂಚಿತವಾಗಿಯೇ ಘೋಷಿಸುವ ಈ ಹೊಸ ಟ್ರೆಂಡನ್ನು ಎಲ್ಲರೂ ಸ್ವಾಗತಿಸುತ್ತಿದ್ದಾರೆ. ಬಿಜೆಪಿ ನರೇಂದ್ರ ಮೋದಿಯವರ ಹೆಸರನ್ನು ಘೋಷಿಸಿದೆ. ಕಾಂಗ್ರೆಸ್ ತನ್ನ ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸಿಲ್ಲವಾದರೂ, ಹೆಚ್ಚು ಕಡಿಮೆ ರಾಹುಲ್‌ರ ಹೆಸರು ನಿಕ್ಕಿಯಾಗಿದೆ. ಇವರಿಬ್ಬರಲ್ಲಿ ದೇಶವನ್ನು ಮುನ್ನಡೆಸಲು ಯಾರು ಅರ್ಹರು ಎಂಬುದನ್ನು ನಾವು ನಿರ್ಧರಿಸಲಿದ್ದೇವೆ. ಪ್ರಾದೇಶಿಕ ಮತ್ತು ಚಿಕ್ಕ ಪಕ್ಷಗಳು ಈ ಎರಡು ದೊಡ್ಡ ಪಕ್ಷಗಳಲ್ಲಿ ಯಾವುದಾದರೊಂದರ ಜೊತೆ ಸೇರಿಕೊಳ್ಳುತ್ತವೆ. ಅಥವಾ ಅವೆಲ್ಲ ಸೇರಿ ತೃತೀಯ ರಂಗವನ್ನು ಸ್ಥಾಪಿಸಿ ತಮ್ಮ ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸಬಹುದು. ಹಾಗಾಗೇ ಈ ಬಾರಿ ನಾವು ಮತದಾನ ಮಾಡಲು ಹೋದಾಗ, ನಾವು ಕೇವಲ ಪಕ್ಷ ಮತ್ತು ಅದರ ಅಭ್ಯರ್ಥಿಯನ್ನಷ್ಟೇ ಅಲ್ಲದೆ, ಸರ್ಕಾರವನ್ನು ಮುನ್ನಡೆಸುವವನನ್ನೂ ಆಯ್ಕೆ ಮಾಡಲಿದ್ದೇವೆ. ತನ್ಮೂಲಕ ನಾವೇ "ಕಿಂಗ್‌ಮೇಕರ್‌" ಆಗಿ ಮಿಂಚಲಿದ್ದೇವೆ.  
ಮುಂದಿನ ತಿಂಗಳು ನಡೆಯಲಿರುವ ದೆಹಲಿಯ ವಿಧಾನಸಭಾ ಚುನಾವಣೆಗಳನ್ನೇ ತೆಗೆದುಕೊಳ್ಳಿ. ಈ ಬಾರಿ ಮತದಾರರಿಗೆ ಯಾವ ಪಕ್ಷದಿಂದ ಯಾರು ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದಾರೆ ಎನ್ನುವುದು ತಿಳಿದಿದೆ (ಕಾಂಗ್ರೆಸ್‌ನಿಂದ ಶೀಲಾ ದೀಕ್ಷಿತ್,  ಬಿಜೆಪಿಯಿಂದ ಹರ್ಷವರ್ಧನ್, ಆಮ್ ಆದ್ಮಿ ಪಕ್ಷದಿಂದ ಅರವಿಂದ್ ಕೇಜ್ರಿವಾಲ್). ಈ ಹಿನ್ನೆಲೆಯಲ್ಲಿ ದೆಹಲಿಯ ಮತದಾರರಿಗೆ ಯಾವ ಪಕ್ಷವನ್ನು ಬೆಂಬಲಿಸಬೇಕು ಎನ್ನುವುದು ಮೊದಲೇ ಗೊತ್ತಾಗಿದೆ.
ನಿಜ ಹೇಳಬೇಕೆಂದರೆ, ಅಮೆರಿಕದಂತೆ ಭಾರತದಲ್ಲಿಯೂ ಕೂಡ ಅಭ್ಯರ್ಥಿಗಳ ನಡುವೆ ಸಾರ್ವಜನಿಕವಾಗಿ ಚರ್ಚೆಗಳು ನಡೆಯಬೇಕು. ದೇಶ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲು ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ಮುಖಾಮುಖಿಯಾಗಲಿ. ಅವುಗಳನ್ನು ಅವರು ಹೇಗೆ ಎದುರಿಸಲಿದ್ದಾರೆ? ದೇಶದ ಭವಿಷ್ಯದ ಬಗ್ಗೆ ಅವರು ಯಾವ ದೃಷ್ಟಿಕೋನ ಹೊಂದಿದ್ದಾರೆ? ಎನ್ನುವುದರ ಬಗ್ಗೆ ಅವರ ಮುಂದೆ ನಾವೆಲ್ಲ ಪ್ರಶ್ನೆಯಿಡಬೇಕು. ಹಾಗಾದಾಗ ಮಾತ್ರ ಮತದಾರರು ಸರಿಯಾದ ವ್ಯಕ್ತಿಯ ಆಯ್ಕೆ ಮಾಡಬಲ್ಲರು. ದೆಹಲಿಯಲ್ಲಿ ಶೀಲಾ ದೀಕ್ಷಿತ್, ಅರವಿಂದ್ ಕೇಜ್ರಿವಾಲ್ ಮತ್ತು ಹರ್ಷವರ್ಧನ್ ಇಂಥ ಚರ್ಚೆಯಲ್ಲಿ ಪಾಲ್ಗೊಳ್ಳಬೇಕು. ಇದರಿಂದ ಲಾಭವಾಗುವುದು ಪ್ರಜಾಪ್ರಭುತ್ವಕ್ಕೇ!
ಕೊನೆಯ ಗುಟುಕು: ಕರ್ನಾಟಕದ ಶಾಸಕರು ಅಧ್ಯಯನದ ಹೆಸರಿನಲ್ಲಿ ವಿದೇಶಗಳಿಗೆ ತೆರಳಿ ಮಜಾ ಉಡಾಯಿಸುವುದರಲ್ಲಿ ಹೆಸರುವಾಸಿ. ಜನತೆಯ ತೆರಿಗೆ ಹಣದಲ್ಲಿ ನಡೆಯುವ ಈ ಪ್ರವಾಸಗಳು ಬಹುತೇಕ ಬಾರಿ ಶಾಸಕರ ಮೋಜು ಮಸ್ತಿಯ ಯಾತ್ರೆಗಳಾಗಿಯೇ ಇರುತ್ತವೆ. ಹಿಂತಿರುಗಿ ಬಂದ ನಂತರ ತಾವು ವಿದೇಶದಲ್ಲಿ ಏನು ನೋಡಿದರು ಅಥವಾ ಏನು ಕಲಿತರು ಎನ್ನುವ ಬಗ್ಗೆ ಅವರು ವರದಿ ಒಪ್ಪಿಸುವುದೇ ಇಲ್ಲ. ಇನ್ನು ಅನುಷ್ಠಾನಕ್ಕೆ ತರುವ ಮಾತು ದೂರವೇ ಉಳಿಯಿತು. ಹೊಸ ಸರ್ಕಾರ ಬಂದು ಇನ್ನೂ 5 ತಿಂಗಳು ಕಳೆದಿವೆಯಷ್ಟೆ. ಆದರೂ ಅದಾಗಲೇ 19 ಶಾಸಕರು ಜಪಾನ್ ಸೇರಿದಂತೆ 5 ಆಗ್ನೇಯ ಏಷ್ಯಾ ರಾಷ್ಟ್ರಗಳ ಪ್ರವಾಸ ಕೈಗೊಳ್ಳಲು ಅನುಮತಿ ಕೋರುತ್ತಿದ್ದಾರೆ. ಜನ ಇಂಥ ಪ್ರವಾಸಗಳನ್ನು ಅನುಮಾನದಿಂದಲೇ ನೋಡುತ್ತಾರೆ. ಪುಣ್ಯವಶಾತ್ ಸಭಾಪತಿಗಳು ಶಾಸಕರ ಬೇಡಿಕೆಯನ್ನು ತಡೆಹಿಡಿದಿದ್ದಾರೆ.

- ಎಚ್.ಎಸ್. ಬಲರಾಮ್
hsbalram@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!

'ಸ್ಪಾದಲ್ಲಿ ಅಕ್ರಮ ಚಟುವಟಿಕೆ' ಎಂದು ಆರೋಪಿಸಿ ದಾಂಧಲೆ; 5 ಲಕ್ಷ ರೂ ಗೆ ಬೇಡಿಕೆ, 1 ಲಕ್ಷ ವಸೂಲಿ! ಶಾಕಿಂಗ್ ಘಟನೆ

'ಇತಿಹಾಸ ನಿಮ್ಮನ್ನು ಇನ್ನಷ್ಟು ಗೌರವದಿಂದ ನೆನಪಿಸಿಕೊಳ್ಳಲಿದೆ'; Agarkarಗೆ ಗೇಟ್ ಪಾಸ್`, ಗಂಭೀರ್‌ ಭಾವುಕ ಸಂದೇಶ!