ಸನ್ನಡತೆಯ ಕೈದಿಗಳಿಗೆ ಬಿಡುಗಡೆ ಭಾಗ್ಯವೆಂದು?
ಬದಲಾವಣೆ ಜಗದ ನಿಯಮ. ಬದಲಾವಣೆ ಇಲ್ಲದಿದ್ದರೆ ಸಮಾಜವನ್ನು ಊಹಿಸಿಕೊಳ್ಳಲು ಅಸಾಧ್ಯ. ಕ್ರೂರಿಗಳು ಕ್ರೂರಿಯಾಗಿಯೇ ಇರುತ್ತಿದ್ದರು. ವಾಲ್ಮೀಕಿ ಎಂದೂ ರಾಮಾಯಣ ಬರೆಯುತ್ತಿರಲ್ಲ, ರಾಮಾಯಣ ಮಹಾಗ್ರಂಥವು ನಮ್ಮ ಭಾರತೀಯರಿಗೆ ಸಿಗುತ್ತಿರಲಿಲ್ಲವೇನೋ? ಅಂತೆಯೇ ನಾಲ್ಕು ಗೋಡೆಗಳ ಮಧ್ಯೆ ಇರುವ ಕೈದಿಗಳು ಕೂಡ ಬದಲಾವಣೆ ಜಗದ ನಿಯಮ ಎಂಬ ವ್ಯಾಪ್ತಿಗೆ ಒಳಪಡುವುದಿಲ್ಲವೇ?
ಎಲ್ಲಾ ಸಂದರ್ಭದಲ್ಲಿ ಮನುಷ್ಯನ ಮನಸ್ಥಿತಿ ಸ್ಥಿಮಿತ ಕಳೆದುಕೊಳ್ಳುವುದಿಲ್ಲ. ಮನುಷ್ಯ ಸ್ಥಿಮಿತ ಕಳೆದುಕೊಂಡಾಗ ಮಾತ್ರ ಸಮಾಜದಲ್ಲಿ ಅಪರಾಧಗಳು ಮರುಕಳಿಸುತ್ತವೆ. ಅಂತೆಯೇ ಅದೆಷ್ಟೋ ಕೈದಿಗಳು ಸಿಟ್ಟಿಗೆ ಅಥವಾ ಪರಿಸ್ಥಿತಿಯ ಒತ್ತಡಕ್ಕೆ ಮನಸ್ಸನ್ನು ಕೊಟ್ಟು ಅಪರಾಧ ಎಸಗಿ ಬಂಧಿಗಳಾಗುತ್ತಾರೆ. ಶಿಕ್ಷೆಯಾದಾಗಲೇ ಅವರಿಗೆ ತಪ್ಪಿನ ಅರಿವಾಗಿರುತ್ತದೆ. ಅಂತಹವರು ಸಮಾಜದಲ್ಲಿ ಉತ್ತಮವಾಗಿ ಬಾಳಲು ಸಾಧ್ಯ ಎಂಬುದನ್ನು ಅರಿತು ಹಿಂದಿನವರು ಸನ್ನಡತೆಯ ಕೈದಿಗಳನ್ನು ರಾಷ್ಟ್ರೀಯ ಹಬ್ಬಗಳಂದು ಬಿಡುಗಡೆ ಮಾಡುವ ಸಂಪ್ರದಾಯ ಹುಟ್ಟುಹಾಕಿದರು. ಅದು ಈಗಲೂ ಇದೆ.
ಶಿಕ್ಷೆ ಅಪರಾಧಿಯ ಮನಃಪರಿವರ್ತನೆಗೆ ಪೂರಕವಾಗಿರಬೇಕು, ಅವನನ್ನು ಮಾನಸಿಕ ಖಿನ್ನತೆ ಉಳ್ಳವನನ್ನಾಗಿ ಮಾಡುವಷ್ಟರ ಮಟ್ಟಿಗೆ ಇದ್ದರೆ, ಶಿಕ್ಷೆಯ ಉದ್ದೇಶವೇ ಈಡೇರುವುದಿಲ್ಲ. ಗಾಂಧೀಜಿ ಅವರು ಒಂದು ಕಡೆ ಹೇಳುತ್ತಾರೆ- "ಸನ್ನಡತೆ ಹೊಂದಿದ ವೃತ್ತಿಪರ ಅಪರಾಧಿಗಳಲ್ಲದ ಜೀವಾವಧಿ ಶಿಕ್ಷಾ ಬಂಧಿಗಳನ್ನು 7 ವರ್ಷಕ್ಕಿಂತ ಹೆಚ್ಚು ಅವಧಿ ಕಾರಾಗೃಹದಲ್ಲಿ ಇಟ್ಟರೆ ಮಾನಸಿಕ ಅಸ್ವಸ್ತರಾಗುತ್ತಾರೆ ಅಥವಾ ಮತ್ತಷ್ಟು ಕ್ರೂರಿಗಳಾಗುತ್ತಾರೆ ಹಾಗಾಗಿ ಅಕಾಲಿಕ ಬಿಡುಗಡೆ ಇರಬೇಕು". ಹಲವು ವಿಷಯಗಳಲ್ಲಿ ಗಾಂಧೀಜಿ ತತ್ವ ಆದರ್ಶ ಅನುಸರಿಸುವ ನಮಗೆ ಕೈದಿಗಳ ವಿಷಯದಲ್ಲಿ ಗಾಂಧೀಜಿ ಅವರ ತತ್ವವನ್ನು ಅನ್ವಯಿಸಿದರೆ, ಸನ್ನಡತೆಯ ಕೈದಿಗಳ ಬಾಳು ಕೂಡ ಉತ್ತಮವಾಗಬಹುದಲ್ಲವೇ?
ವ್ಯಕ್ತಿಯೊಬ್ಬ ಯಾವುದೋ ಒಂದು ಕೆಟ್ಟ ಘಳಿಗೆಯಲ್ಲಿ ಮಾಡಿದ ತಪ್ಪಿನಿಂದ ಜೈಲಿಗೆ ಸೇರಿದಾಗ, ದುಡಿಯುವವರು ಮನೆಯಲ್ಲಿ ಇಲ್ಲದೆ ಆತನ ಕುಟುಂಬ ವರ್ಗ ತುತ್ತು ಅನ್ನಕ್ಕಾಗಿ ಪರದಾಡುತ್ತದೆ. ವಯಸ್ಸಾದ ತಂದೆ-ತಾಯಿಗಳು ಖಾಯಿಲೆ ಪೀಡಿತರಾಗಿ ಹಾಸಿಗೆ ಹಿಡಿದಿರಬಹುದು, ಮದುವೆ ಕಾಣದ ಅಕ್ಕ-ತಂಗಿಯರ ವಯಸ್ಸು ಮೀರಿರಬಹುದು, ಮಕ್ಕಳ ವಿದ್ಯಾಭ್ಯಾಸವು ಆರ್ಥಿಕ ಸಂಕಷ್ಟದಿಂದ ಅರ್ಧಕ್ಕೆ ನಿಂತಿರಲೂಬಹುದು.
ವ್ಯಕ್ತಿಯೊಬ್ಬ ಕಾರಾಗೃಹದಲ್ಲಿದ್ದಾಗ ಆತನ ಕುಟುಂಬ ಸಾಮಾಜಿಕ ನಿಂದನೆ ಎದುರಿಸಿ ಮಾನಸಿಕವಾಗಿ ಕುಗ್ಗಿ ಹೋಗಿರುತ್ತದೆ. ಹಾಗಾಗಿ ಅವರು ಸಾಕಷ್ಟು ಬಾರಿ ಆತ್ಮಹತ್ಯೆಗೆ ಪಯತ್ನ ಪಟ್ಟಿರುವ ನಿದರ್ಶನಗಳಿವೆ. ಕೈದಿಗಳ ಹೊಲ-ಗದ್ದೆಗಳು ಉಳುಮೆ ಮಾಡದೇ ಬೀಳು ಬಿದ್ದಿವೆ, "ಕ್ಷಣಾರ್ಧದಲ್ಲಿ ನಡೆದ ಘಟನೆಗಳಿಂದಾಗಿ ಕುಟುಂಬದವರೆಲ್ಲ ಅನುಭವಿಸಿರುವ ನೋವಿನಿಂದ ನಾವು ನೊಂದಿದ್ದೇವೆ.ಬದಲಾಗಿದ್ದೇವೆ, ಸಾಮಾಜದ ಮುಖ್ಯ ವಾಹಿನಿಯಲ್ಲಿ ಸತ್ಪ್ರಜೆಗಳಾಗಿ ಜೀವನ ಸಾಗಿಸಲು ಆಸೆಯಿಂದ ಕಾಯುತ್ತಿದ್ದೇವೆ" ಎನ್ನುವ ಮಾತು ಸನ್ನಡತೆ ಕೈದಿಗಳ ಮನದಾಳದ ಮಾತಾಗಿದೆ. ಅಪರಾಧ ಮಾಡುವ ಪೂರ್ವ ಇದನ್ನು ಆಲೋಚಿಸಲಿಲ್ಲವೇ ಎಂದು ಕೇಳಬಹುದಾದರೂ, ಕೆಲ ಸಂದರ್ಭದಲ್ಲಿ ವ್ಯಕ್ತಿಯ ಸಿಟ್ಟು, ದುಡುಕಿನ ಸ್ವಭಾವ ಅವನ ಆಲೋಚನಾ ಶಕ್ತಿಯನ್ನು ಮರೆಮಾಚಿಬಿಡುತ್ತದೆ.
ರಾಷ್ಟ್ರೀಯ ಹಾಗೂ ರಾಜ್ಯ ಮಾನವ ಹಕ್ಕುಗಳ ಆಯೋಗ ಕೂಡ ಜೀವಾವಧಿ ಶಿಕ್ಷಾ ಬಂಧಿಗಳ ಅವಧಿ ಪೂರ್ವ ಕ್ಷಮಾದಾನ ಬಿಡುಗಡೆಗಾಗಿ ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದು, ನಾಗರಿಕ ಸಮಾಜ, ಸಾಮಾಜಿಕ ನ್ಯಾಯ, ಕೈದಿಗಳ ಕುಟುಂಬಗಳ ಕಲ್ಯಾಣಕ್ಕಾಗಿ ಜೀವಾವಧಿ ಶಿಕ್ಷಾ ಬಂಧಿಗಳ ಅಕಾಲಿಕ ಬಿಡುಗಡೆ ಮಾಡಬೇಕೆಂದು, ಕಾಲಕಾಲಕ್ಕೆ ಶಿಫಾರಸ್ಸು ಮಾಡುತ್ತಾ ಬಂದಿರುತ್ತದೆ. ಆದರೆ, ಶಿಫಾರಸಿನ ನಡುವೆಯೂ 2006 ರಿಂದ ರಾಜ್ಯದ ಕಾರಾಗೃಹದಲ್ಲಿರುವ ಸಾವಿರಕ್ಕೂ ಹೆಚ್ಚು ಸನ್ನಡತೆಯ ಕೈದಿಗಳಿಗೆ ಬಿಡುಗಡೆ ಭಾಗ್ಯ ಲಭಿಸಿಲ್ಲ.
ಭಾರತೀಯ ಸಂವಿಧಾನದ ಪರಿಚ್ಛೇದ 161ರ ಅಡಿ ಕ್ಷಮಾದಾನ ನೀಡಿ ಬಿಡುಗಡೆ ಮಾಡುವ ಮಾನವೀಯ ಸಂಪ್ರದಾಯ ಅನುಸರಿಸುತ್ತಾ ಬರಲಾಗುತ್ತಿದೆ. 1998ರಿಂದ ಪ್ರತಿ ವರ್ಷವು 10 ವರ್ಷ ಶಿಕ್ಷೆ ಪೂರೈಸಿದ ಜೀವಾವಧಿ ಶಿಕ್ಷಾ ಬಂಧಿಗಳನ್ನು ರಾಷ್ಟ್ರೀಯ ಹಬ್ಬಗಳಂದು ಬಿಡುಗಡೆ ಮಾಡುವ ಸಂಪ್ರದಾಯವಿದೆ. ಜೀವಾವಧಿ ಶಿಕ್ಷೆಗೆ ಒಳಪಟ್ಟ, 8 ವರ್ಷ ಶಿಕ್ಷೆಯನ್ನು ಪೂರೈಸಿದ 309 ಬಂಧಿಗಳನ್ನು 2006ರಲ್ಲಿ ಅಂದಿನ ಸಮ್ಮಿಶ್ರ ಸರ್ಕಾರ ಬಿಡುಗಡೆ ಮಾಡಿದ್ದು ಬಿಟ್ಟರೆ, ಕಳೆದ ಏಳು ವರ್ಷಗಳಿಂದ ರಾಜ್ಯ ಸರ್ಕಾರ ಒಬ್ಬೇ ಒಬ್ಬ ಕೈದಿಯನ್ನೂ ಬಿಡುಗಡೆ ಮಾಡಿಲ್ಲ. ಆದರೆ, ನೆರೆ ರಾಜ್ಯಗಳಾದ ಆಂಧ್ರಪ್ರದೇಶ ಸರ್ಕಾರವು 2010, 2011ರಲ್ಲಿ, ತಮಿಳುನಾಡು ಸರ್ಕಾರವು ಅಣ್ಣಾ ದೊರೈ ಜನ್ಮದಿನದ ಅಂಗವಾಗಿ 2009-2010ರಲ್ಲಿ, ಕೇರಳ ಸರ್ಕಾರವು 2010ರಲ್ಲಿ ಪ್ರೊಬೇಷನರಿ ಹಾಗೂ ಆಬ್ಜರ್ವೇಷನ್ ಮೇಲೆ ಅಕಾಲಿಕವಾಗಿ ಸನ್ನಡತೆಯ ಕೈದಿಗಳನ್ನು ಬಿಡುಗಡೆ ಮಾಡಿದವು.
ನಮ್ಮ ರಾಜ್ಯದಲ್ಲಿ 1998ರಲ್ಲಿ ಸ್ವಾತಂತ್ರ್ಯೋತ್ಸವದ ಸುವರ್ಣ ಮಹೋತ್ಸವದ ಅಂಗವಾಗಿ 136 ಕೈದಿಗಳನ್ನು, 2000ರಲ್ಲಿ ಗಣರಾಜ್ಯೋತ್ಸವದ ಸುವರ್ಣ ಮಹೋತ್ಸವದ ಅಂಗವಾಗಿ 63 ಪುರುಷ ಕೈದಿ, 4 ಮಹಿಳಾ ಕೈದಿಗಳನ್ನು, 2001ರಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು 108 ಪುರುಷ ಹಾಗೂ 5 ಮಹಿಳಾ ಕೈದಿಗಳು, 2002ರ ಗಾಂಧಿ ಜಯಂತಿ ಅಂಗವಾಗಿ 65 ಪುರುಷ ಹಾಗೂ 6 ಮಹಿಳಾ ಕೈದಿಗಳನ್ನು, 2004ರಲ್ಲಿ ಗಣರಾಜ್ಯೋತ್ಸವದ ಅಂಗವಾಗಿ 91 ಪುರುಷ ಹಾಗೂ 4 ಮಹಿಳಾ ಕೈದಿಗಳನ್ನು, 2005ರಲ್ಲಿ ಎರಡು ಬಾರಿ ಸನ್ನಡತೆಯ ಕೈದಿಗಳನ್ನು ಬಿಡುಗಡೆ ಮಾಡಲಾಗಿದ್ದು, ಗಣರಾಜ್ಯೋತ್ಸವ ಅಂಗವಾಗಿ 102 ಪುರುಷ, 4 ಮಹಿಳೆಯರು, ಇನ್ನು ಸ್ವಾತಂತ್ರ್ಯ ದಿನಾಚರಣೆ ದಿನದಂದು 51 ಪುರುಷ, 6 ಮಹಿಳಾ ಕೈದಿಗಳನ್ನು ಬಿಡುಗಡೆ ಮಾಡಲಾಗಿತ್ತು. 2006ರಲ್ಲಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕೂಡ ಎರಡು ಬಾರಿ ಬಿಡುಗಡೆ ಮಾಡಲಾಗಿತ್ತು. ಗಣರಾಜ್ಯೋತ್ಸವದಂದು 57 ಪುರುಷ, 4 ಮಹಿಳಾ ಕೈದಿಗಳು, ಸ್ವಾತಂತ್ರ್ಯ ದಿನಾಚರಣೆಯಂದು 297 ಪುರುಷ, 12 ಮಹಿಳಾ ಕೈದಿಗಳನ್ನು ಬಿಡುಗಡೆ ಮಾಡಲಾಗಿತ್ತು. 1998ರಿಂದ 2006ರ ವರೆಗೆ 970 ಪುರುಷ ಹಾಗೂ 45 ಮಹಿಳಾ ಕೈದಿಗಳನ್ನೊಳಗೊಂಡಂತೆ ಒಟ್ಟು 1015 ಮಂದಿಯನ್ನು ಸನ್ನಡತೆಯ ಆಧಾರದ ಮೇಲೆ ಬಿಡುಗಡೆ ಮಾಡಲಾಯಿತು.
ಮಾಜಿ ಪ್ರಧಾನಿ ಇಂದಿರಾಗಾಂಧಿ 1984ರಲ್ಲೇ ಕಾರಾಗೃಹಗಳ ಸುಧಾರಣೆಗಾಗಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಆನಂದ್ ನರೇನ್ ಮುಲ್ಲಾರ ನೇತೃತ್ವದಲ್ಲಿ ಆಯೋಗ ರಚಿಸಿದ್ದು, ಈ ಆಯೋಗದ ಪ್ರಮುಖ ವರದಿಗಳಲ್ಲಿ 7 ವರ್ಷ ಶಿಕ್ಷೆ ಪೂರೈಸಿದ ಜೀವಾವಧಿ ಶಿಕ್ಷಾ ಬಂಧಿಗಳನ್ನು ಬಿಡುಗಡೆ ಮಾಡುವ ಶಿಫಾರಸು ಮಾಡಿತ್ತು.
ಇದನ್ನೇ ಆಗಿನ ಕೇಂದ್ರ ಕಾನೂನು ಮಂತ್ರಿಗಳಾದ ಎಂ. ವೀರಪ್ಪ ಮೊಯಿಲಿ ನೇತೃತ್ವದ 2ನೇ ಆಡಳಿತ ಸುಧಾರಣಾ ಆಯೋಗವು ಪ್ರತಿಪಾದಿಸಿತ್ತು. ಈಗಾಗಲೇ ಭಾರತೀಯ ದಂಡ ಪ್ರಕ್ರಿಯಾ ಸಂಹಿತೆ(ಐಪಿಸಿ) ಕಲಂ 366, 366ಎ, 366ಬಿ, 367, 372, 373,392ಸ 354, 307, 498(ಎ), 511, 397, 395 ಮುಂತಾದ ಕಲಂ ಅಡಿಯಲ್ಲಿ ಅಪರಾಧಿಗಳನ್ನು ಹೊರತುಪಡಿಸಿ, ಅಕಾಲಿಕ ಬಿಡುಗಡೆಗೆ ಈಗಾಗಲೇ ಬಂಧಿಖಾನೆ ಇಲಾಖೆ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಸಂವಿಧಾನದ 161ನೇ ಪರಿಚ್ಛೇದದ ಪ್ರಕಾರ ರಾಜ್ಯದ ರಾಜ್ಯಪಾಲರು ಮತ್ತು 72ನೇ ಪರಿಚ್ಛೇದದ ಪ್ರಕಾರ ರಾಷ್ಟ್ರಪತಿಗಳು ಅಪರಾಧಿಗಳಿಗೆ ಕ್ಷಮಾದಾನ ಕೊಡುವ ಅಧಿಕಾರ ಹೊಂದಿರುತ್ತಾರೆ. ಸದರಿ ಸಂವಿಧಾನದ ಪರಿಚ್ಛೇದದ ಅಡಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಂಬಂಧಿಸಿದ ಬಂಧಿಗಳ ಪಟ್ಟಿಯನ್ನು ತಯಾರಿಸಿ, ಸರ್ಕಾರದ ಮಟ್ಟದಲ್ಲಿ ಅವಧಿ ಪೂರ್ವ ಬಿಡುಗಡೆಗೆ ರಾಜ್ಯಪಾಲರಿಗೆ(161ನೇ ವಿಧಿ ಪ್ರಕಾರ) ಮತ್ತು ರಾಷ್ಟ್ರಪತಿಗಳಿಗೆ(72ನೇ ವಿಧಿ ಪ್ರಕಾರ) ಶಿಫಾರಸು ಮಾಡುವ ಅಧಿಕಾರ ಹೊಂದಿರುತ್ತಾರೆ. ಸನ್ನಡತೆಯ ಕೈದಿಗಳನ್ನು ಅವಧಿ ಪೂರ್ವ ಬಿಡುಗಡೆಯ ಸಂಪ್ರದಾಯ ಕೇವಲ ರಾಜ್ಯಕ್ಕೆ ಸಿಮೀತವಾಗದೆ ದೇಶದ ಹಲವಾರು ರಾಜ್ಯಗಳಲ್ಲಿ ಜಾರಿಯಲ್ಲಿದೆ.
ಸನ್ನಡತೆಯ ಕೈದಿಗಳನ್ನು ವಿಶೇಷ ದಿನಗಳಂದು ಬಿಡುಗಡೆಗೆ ಪರಿಗಣಿಸುತ್ತೇವೆಂದು ಸರ್ಕಾರವು ಹೇಳಿರುವುದರಿಂದ ನವಂಬರ್ 1 ಕರ್ನಾಟಕ ರಾಜ್ಯೋತ್ಸವ ದಿನದಂದಾದರೂ ತಮಗೆ ಬಿಡುಗಡೆ ಭಾಗ್ಯ ಸಿಗುವುದೇ ಎಂದು ರಾಜ್ಯದ ಕಾರಾಗೃಹದಲ್ಲಿರುವ ಸನ್ನಡತೆಯ ಕೈದಿಗಳು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.
- ಶಶಿಧರ ಮೇಟಿ
kpshashibellary@gmail.com