ಕಾನೂನಿನ ಆಶಯವನ್ನೇ ಬರ್ಬಾದ್ ಮಾಡುವ ಶಾದಿಭಾಗ್ಯ
ಮುಸ್ಲಿಂ ಯುವತಿಯರ ಮದುವೆಗೆ ಕರ್ನಾಟಕ ಸರ್ಕಾರ ಇದೀಗ ಘೋಷಿಸಿರುವ...
ಜನಸಾಮಾನ್ಯರನ್ನು ಓಲೈಸುವ ಸರ್ಕಾರಿ ಯೋಜನೆಗಳು ಈ ದೇಶಕ್ಕೇನು ಹೊಸತಲ್ಲ. ಒಂದು ರುಪಾಯಿಗೆ ಅಕ್ಕಿ ಕೊಡುವುದನ್ನು ಕೆಲವರು ವೈಚಾರಿಕವಾಗಿ ಖಂಡಿಸಿದರೂ, ಅದರಲ್ಲಿ ಇರುವ ಮೂಲ ಯೋಚನೆ- ಹಸಿದ ಬಡಹೊಟ್ಟೆಯನ್ನು ತುಂಬಿಸುವ ತರ್ಕದಲ್ಲಿ ನನಗೆ ಒಪ್ಪಿಗೆಯಿದೆ. ಆದರೆ, ಮುಸ್ಲಿಂ ಯುವತಿಯರ ಮದುವೆಗೆ ಕರ್ನಾಟಕ ಸರ್ಕಾರ ಇದೀಗ ಘೋಷಿಸಿರುವ 50ಸಾವಿರ ರುಪಾಯಿ ಮೌಲ್ಯದ ಜೀವನಾವಶ್ಯಕ ಸಾಮಗ್ರಿಗಳು ಅಥವಾ ನಗದಿನ ಕೊಡುಗೆ, ಈವರೆಗೆ ನಾವು ಕಂಡರಿಯದ ಮತ ಬ್ಯಾಂಕ್ ರಾಜಕಾರಣದ ಅತ್ಯದ್ಭುತ 'ಗೂಗ್ಲಿ'!
ನಮ್ಮ ಸಂಸ್ಕೃತಿಯಲ್ಲಿ ಡೌರಿ ಅಥವಾ ವರದಕ್ಷಿಣೆಯ ಮೂಲವನ್ನು ಹುಡುಕುತ್ತಾ ಹಿಂದಕ್ಕೆ ಚಲಿಸಿದಾಗ, ಕಣ್ಣಿಗೆ ಕಾಣುವುದು, ಸ್ತ್ರೀಯರು ತಮ್ಮ ಭಾವಿ ಪತಿಯನ್ನು ಆಯ್ಕೆ ಮಾಡಿಕೊಳ್ಳುವ, 'ಸ್ವಯಂವರ' ವೇ ವಿನಃ, 'ಸ್ವಯಂವಧು' ಅಲ್ಲ. ನಂತರದ ಸಾವಿರಾರು ವರ್ಷಗಳಲ್ಲಿ 'ಸ್ತ್ರೀಧನ' ದ ರೂಪದಲ್ಲಿ, ಪುತ್ರಿಯರಿಗೆ ಅವರ ಭವಿಷ್ಯಕ್ಕಾಗಿ, ಆಪತ್ಕಾಲಕ್ಕಿರಲಿ ಎಂದ ಭೂಮಿ, ಬಂಗಾರ, ಜವಳಿ, ವಸ್ತು ಇತ್ಯಾದಿಗಳನ್ನು ಇಷ್ಟಾನುಸಾರ, ಶಕ್ತ್ಯಾನುಸಾರ ಉಡುಗೊರೆಯಾಗಿ ಕೊಡಲಾಗುತಿತ್ತು. ಯಾವಾಗ ಬ್ರಿಟಿಷರು 1870ರ ಸಮಯದಲ್ಲಿ, ಸ್ತ್ರೀಯರ ಸ್ಥಿರಾಸ್ತಿ ಹೊಂದುವ ಹಕ್ಕನ್ನು ರದ್ದುಗೊಳಿಸಿದರೋ, ಉಡುಗೊರೆ ಹೊರೆಯಾಯಿತು. ಡೌರಿಯೆಂಬ ಸಾಂಸ್ಕೃತಿಕ ಅಪರಾಧದ ನಾಂದಿಯಾಯಿತು. ಅಂದಿನವರೆಗೆ ತನ್ನ 'ಸ್ತ್ರೀಧನ' ಕ್ಕೆ ತಾನೊಬ್ಬಳೆ ಒಡತಿಯಾಗಿದ್ದ ಸ್ತ್ರೀ, ಬ್ರಿಟಿಷರ ಕಾನೂನಿಗೆ ಕಟ್ಟುಬಿದ್ದು ತನ್ನ ಸಂಪೂರ್ಣ ಹಕ್ಕನ್ನು ಗಂಡನಿಗೆ ಬಿಟ್ಟುಕೊಡಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು. ಬೆರಳನ್ನು ಕೊಟ್ಟರೆ ಕೈಯನ್ನೇ ನುಂಗುವ ಪುರುಷ ಸಮಾಜ, ಡೌರಿಯನ್ನು ತನ್ನ ವರ್ಚಸ್ಸಿಗೆ ತಕ್ಕಂತೆ ಡಿಮ್ಯಾಂಡ್ ಮಾಡಲಾರಂಭಿಸಿತು. 1956ರಲ್ಲಿ ಜಾರಿಗೆ ಬಂದ ಕಾನೂನಿನಡಿ ಸ್ತ್ರೀಯರಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕಿದ್ದರೂ ಸಮನಾದ ಹಕ್ಕು ಪಡೆಯಲು ಹಿಂದೂ ಸ್ತ್ರೀಯರು 2005ರ ವರೆಗೆ ಕಾಯಬೇಕಾಯಿತು.
ಇಸ್ಲಾಂ ಒಂದು ಹೆಜ್ಜೆ ಮುಂದಕ್ಕೆ ಹೋಗಿ, ಸ್ತ್ರೀಯರ ಹಕ್ಕನ್ನು ಸಂರಕ್ಷಿಸುತ್ತದೆ. ಅವರ ಮದುವೆ ಕಾನೂನಿನ ಪ್ರಕಾರ 'ಒಪ್ಪಂದ'ದ ಸ್ವರೂಪ ಹೊಂದಿರುವ ಕಾರಣ, ಮೆಹರ್ ಅನ್ನು ಗಂಡಿನ ಕುಟುಂಬ ಕೊಟ್ಟು ಹೆಣ್ಣನ್ನು ಮನೆ ತುಂಬಿಸಿಕೊಳ್ಳುವ ಅದ್ಭುತವಾದ ಪದ್ಧತಿಯನ್ನು ಹುಟ್ಟುಹಾಕಿದೆ. ಆದರೆ, ಬ್ರಿಟಿಷರು ಸ್ಥಿರಾಸ್ತಿ ಹೊಂದುವ ಹಕ್ಕನ್ನು ಕಸಿದುಕೊಂಡ ಕಾರಣ, ಇಸ್ಲಾಮಿಯ ಸ್ತ್ರೀಯರೂ ಅನ್ಯಾಯಕ್ಕೆ ತುತ್ತಾದರು. ಮೆಹರ್ ಹೆಸರಿಗೆ ಮಾತ್ರವಷ್ಟೆ ಸೀಮಿತವಾಗಿದ್ದು, ಹಿಂದೂ ಸಮಾಜದ ಚಾಳಿಯನ್ನೇ ಇಸ್ಲಾಮಿಯರೂ ಮೈಗೂಡಿಸಿಕೊಂಡರು. ಡೌರಿಯ ಡಿಮ್ಯಾಂಡ್ ಅಲ್ಲಿಯೂ ತಲೆಯೆತ್ತಿತು.
ಹುಡುಗಿಯ ಕುಟುಂಬಕ್ಕೆ ಮದುವೆ ಎಂಬ ಶಬ್ದವೇ ಗಾಬರಿ ಮೂಡಿಸಲು ತೊಡಗಿತು. ಸ್ತ್ರೀ ಸಂತಾನ ಹುಟ್ಟಿದರೆ, ಮದುವೆ ಮಾಡಬೇಕು, ಡೌರಿ ಹೊಂದಿಸಬೇಕೆಂಬ ಕಾರಣಕ್ಕೆ, ಹುಟ್ಟುವ ಮುಂಚೆಯೆ ಪರೀಕ್ಷಿಸಿ, ಸ್ತ್ರೀಯಾದರೆ ಕೊಂದು ಹಾಕುವ, 'ಸ್ತ್ರೀಭ್ರೂಣ ಹತ್ಯೆ' ಎಂಬ ಭಯಾನಕ ಪ್ರಕ್ರಿಯೆಯೂ ಪ್ರಾರಂಭವಾಯಿತು. ಹೇಗೂ ಇನ್ನೊಬ್ಬರ ಮನೆ ಸೇರುವವಳು ಎಂದು ಸ್ತ್ರೀ ಸಂತಾನಕ್ಕೆ ವಿದ್ಯಾಭ್ಯಾಸ ನಿರಾಕರಿಸಲಾಯಿತು.
ಮದುವೆಗೆ ಮುಂಚೆ ಶಕ್ತ್ಯಾನುಸಾರ, ಹಣ, ಮದುವೆಯಲ್ಲಿ, ಎಲ್ಲಾ ಖರ್ಚನ್ನು ವಹಿಸಿಕೊಂಡು ಹುಡುಗಿಗೆ ಭಾರಿ ಸೀರೆಗಳು, ಮೈತುಂಬ ಒಡವೆ, ಹುಡುಗನಿಗೆ ಸೂಟ್, ವಾಚ್, ಉಂಗುರ, ಫಾರಿನ್ ಕಾರ್ವರೆಗೆ ವರೋಪಚಾರ, ಮದುವೆಯ ನಂತರ ಕೇಳಿದಾಗಲೆಲ್ಲಾ(ಹೋಗೇ, ನಿಮ್ಮಪ್ಪನ ಮನೆಯಿಂದ ಈಸ್ಕೊಂಡು ಬಾರೆ) ದಂಡ ಭರಿಸಬೇಕು. ಇಲ್ಲವಾದಲ್ಲಿ ನಿಮ್ಮ ಮಗಳನ್ನು ಹೊಡೆದು, ಅವಮಾನಿಸಿ, ಬೆಂಕಿಗೆ ಕೊಟ್ಟೆವಾದರೂ ಸರಿ. ಇಲ್ಲವೇ ಕೊಂದು ನೇಣಿಗೆ ತೂಗುಹಾಕುತ್ತೀವಿ, ಹುಶಾರ್! ನಮ್ಮಲ್ಲಿ ಸ್ತ್ರೀಯರಿಗೆ ಅನ್ಯಾಯ ಮಾಡುವುದರಲ್ಲಿ ಜಾತಿ, ಧರ್ಮದ ಭೇದವಿಲ್ಲ. 'ಸಬ್ ಭಾಯಿ ಭಾಯಿ'! ಹಿಂದು, ಮುಸ್ಲಿಂ, ಕ್ರೈಸ್ತರು, ಸಿಖ್ಖರು ಎಲ್ಲರೂ ನಾ ಮುಂದು ತಾ ಮುಂದು ಎಂದು ಡೌರಿ ಡಿಮ್ಯಾಂಡ್ ಮಾಡುವುದೇ...
ಹೀಗಿದ್ದ ಪರಿಸ್ಥಿತಿಯನ್ನು ನಿಯಂತ್ರಿಸಲು ಸಾವಿರಾರು ಸ್ತ್ರೀಯರು, ಸಮಾಜ ಸೇವಕರು, ಸಂಘ ಸಂಸ್ಥೆಗಳ ಹೋರಾಟದ ಫಲವಾಗಿ, 1961ರಲ್ಲಿ ವರದಕ್ಷಿಣೆ ನಿಷೇಧ ಕಾನೂನು ವರಪ್ರಸಾದವಾಗಿ ಜಾರಿಗೆಬಂತು. 1983ರಲ್ಲಿ ಭಾರತೀಯ ದಂಡ ಸಂಹಿತೆಯ ತಿದ್ದುಪಡಿಯ ಮೂಲಕ ಸೇರ್ಪಡೆಯಾದ 498ಛ (ಗಂಡ ಮತ್ತು ಕುಟುಂಬದವರಿಂದ ಕಿರುಕುಳ), 1986ರಲ್ಲಿ ಜೋಡಿತವಾದ 304ಛಿ (ಡೌರಿ ಮರಣಗಳಿಗೆ ಸಂಬಂಧಿಸಿದಂತೆ) ಮತ್ತು 2005ರಲ್ಲಿ ಜಾರಿಗೆ ಬಂದು 2006ರಲ್ಲಿ ತಿದ್ದುಪಡಿಯಾದ ಗೃಹ ಹಿಂಸೆಯಿಂದ ಸ್ತ್ರೀಯರಿಗೆ ರಕ್ಷಣೆ ಕೊಡುವಂಥ ಕಾನೂನು, ಎಲ್ಲವೂ ಡೌರಿಯೆಂಬ ಮಹಾಮಾರಿಯ ವಿರುದ್ಧದ ಹೋರಾಟದ ಪರಿಣಾಮ. ಹೋರಾಟ ಇಂದಿಗೂ ನಿರಂತರವಾಗಿ ಸಾಗುತ್ತಿದೆ. ಇಷ್ಟೆಲ್ಲಾ ಇದ್ದು, ಕಾನೂನು ಎಷ್ಟೇ ಕಠಿಣವಾಗಿದ್ದರೂ ಸಹಿತ, 'ಬದುಕು ಜಟಕ ಬಂಡಿ'ಗೆ, ಈ ಸಂಬಂಧ ಪ್ರಕರಣಗಳು ಇಂದಿಗೂ ಬರುತ್ತವೆ.
ಅಲ್ಪಸಂಖ್ಯಾತರಿಗೆ ಒಳಿತು ಮಾಡಬೇಕು ಎಂಬ ಸದ್ಭಾವನೆಯಿಂದ ಕರ್ನಾಟಕ ಸರ್ಕಾರ, ಮುಸ್ಲಿಂ ಕುಟುಂಬದ ಆರ್ಥಿಕವಾಗಿ ಹಿಂದುಳಿದವರು, ವಿಚ್ಛೇದಿತ ಅಥವಾ ವಿಧವೆಯರ ಹೆಣ್ಣು ಮಕ್ಕಳ ಮದುವೆಗೆ ಸರ್ಕಾರದಿಂದ ರು.50000 ಮೌಲ್ಯದ ಮಂಚ, ಹಾಸಿಗೆ, ಅಡುಗೆ ಪಾತ್ರೆ, ಅಲ್ಮೆರಾ ಸೇರಿದಂತೆ ಜೀವನಾವಶ್ಯಕ ಸಾಮಗ್ರಿಗಳು ಇಲ್ಲವೇ 'ನಗದು' ನೀಡಲಾಗುತ್ತದೆ ಎಂದು ಘೋಷಿಸಿದೆ. ವೈಯಕ್ತಿಕ ಮಾತ್ರವಲ್ಲದೆ ಸಾಮೂಹಿಕ ವಿವಾಹದವರಿಗೂ ಈ ಯೋಜನೆ ಅನ್ವಯ.
ಅಲ್ಲಾ ಸ್ವಾಮಿ, ತಾಯಿ ವಿಧವೆ, ಬಡವಿ, ವಿಚ್ಚೇದಿತೆಯಾಗಿದ್ದರೆ ಅಡುಗೆ ಪಾತ್ರೆ, ಅಲ್ಮೆರ ಅವಳಿಗೆ ಕೊಡಿ. ಮನೆಯ ಸಾಮಗ್ರಿಯನ್ನೂ ಕೊಳ್ಳಲಾಗದ ಗಂಡ ಅವಳ ಮಗಳನ್ನು ಸಾಕಬಲ್ಲನೇ? ಇನ್ನು 'ನಗದ'ನ್ನು ಕುರಿತು ಏನು ವಿಶ್ಲೇಷಣೆ ಮಾಡೋಣ? ಬಡವರು, ವಿಚ್ಚೇದಿತರು, ವಿಧವೆಯರು ಬೇರೆ ಜನಾಂಗಗಳಲ್ಲಿಲ್ಲವೇ? ತನ್ನ ಮನೆಗೆ, ತನ್ನ ಪತ್ನಿಗೆ ಮಂಚ, ಹಾಸಿಗೆ, ಅಡುಗೆ ಪಾತ್ರೆ ಹೊಂದಿಸುವ ಜವಾಬ್ದಾರಿ ಮುಸ್ಲಿಂ ಗಂಡಂದಿರಿಗೆ ಇಲ್ಲವಾದಲ್ಲಿ, ಬೇರೆ ಜನಾಂಗದ ಗಂಡಂದಿರಿಗೆ ಮಾತ್ರ ಏಕಿರಬೇಕು? ಹೇಗೂ ಅವೆಲ್ಲವನ್ನು ಒದಗಿಸುವ ಜವಾಬ್ದಾರಿ ಹುಡುಗಿಯ ಮನೆಯವರದು ತಾನೆ? ವರದಕ್ಷಿಣೆ ಕೊಡುವುದನ್ನು ಮತ್ತು ಪಡೆಯುವುದನ್ನು ಡೌರಿ ಮತ್ತಿತರ ಎಲ್ಲಾ ಕಾನೂನುಗಳು ನಿಷೇಧಿಸುತ್ತವೆ. ಆದರೆ ಇಲ್ಲಿ ಬೇಲಿಯೇ ಎದ್ದು ಹೊಲವನ್ನು ಮೇಯುತ್ತಿದೆ! ಆ ಸಾಮಗ್ರಿಗಳನ್ನು ಒದಗಿಸಲು ಗುತ್ತಿಗೆದಾರರಿಂದ ಟೆಂಡರ್ ಬೇರೆ ಕರೆಯಲಾಗುತ್ತಿದೆ. 'ಗುಣಮಟ್ಟವನ್ನು ಕಾಪಾಡಲು'.. ವಾರೆವಾಹ್!
ಈಗ, ತಮ್ಮ ಸಾಂವಿಧಾನಿಕ ಸಮಾನತೆಯ ಹಕ್ಕುಗಳನ್ನು ಪ್ರತಿಪಾದಿಸಿ ನಮಗೂ ಮಂಚ, ಹಾಸಿಗೆ, ಅಡುಗೆ ಪಾತ್ರೆ ಕೊಡಿ, ಎಂದು ಉಳಿದ ಜನಾಂಗಗಳೂ ಕೋರ್ಟ್ ಮೆಟ್ಟಲು ಹತ್ತಬೇಕೋ ಅಥವಾ ಡೌರಿ ನಿಷೇಧ ಕಾಯ್ದೆಯ ನೇರವಾದ ಉಲ್ಲಂಘನೆ ಮಾಡುತ್ತಿರುವ ಸರ್ಕಾರವನ್ನು ನ್ಯಾಯಾಲದಲ್ಲಿ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಬೇಕೋ? ಇಲ್ಲವೇ ಈ ಹಿಂದೆ, ಮುಸ್ಲಿಮರು ಸರ್ಕಾರಕ್ಕೆ ಪಡೆದ ಸಾಲವನ್ನು ಹಿಂತಿರುಗಿಸದೆ ಮೋಸ ಮಾಡಲಿ ಬಿಡಿ ಎಂದು ಸಾರ್ವಜನಿಕವಾಗಿ ಭಾಷಣ ಮಾಡಿದ, ಕಾಂಗ್ರೆಸ್ ರಾಜ್ಯಾಧ್ಯಕ್ಷರು, 'ಹಾಗಲ್ಲದಿದ್ದರೂ ಹೀಗಾದರೂ ಮಾಡೋಣ' ಎಂದುಕೊಂಡಿರಬಹುದು, ಎಂದು ತಿಳಿದು ಸುಮ್ಮನಾಗಬೇಕೋ?
ಓದೊ ಮಕ್ಕಳಿಗೆ ಹಾಲು, ಬಿಸಿಯೂಟ, ಸೈಕಲ್ ಕೊಡ್ತೀರಿ. ಲ್ಯಾಪ್ಟಾಪ್ ಕೊಡ್ತೀರಿ ಸಂತೋಷ. ಆದರೆ ನಮ್ಮಂತಹ ಮಧ್ಯಮ ವರ್ಗದವರ ಟ್ಯಾಕ್ಸ್ ಹಣವನ್ನು ಮಂಚ, ಹಾಸಿಗೆ, ಅಡುಗೆ ಪಾತ್ರೆ, ಅಲ್ಮೆರಾ ಕೊಡುವುದಕ್ಕೆ ಬಳಸುತ್ತೀರಲ್ಲ, ಯಾವ ನ್ಯಾಯಾರೀ ಇದು? ಇಂತಹ ಯೋಜನೆಗಳು ಸಮಾಜ ಘಾತಕ, ಸ್ತ್ರೀಯರ ಹತ್ತಾರು ವರ್ಷಗಳ ಹೋರಾಟಕ್ಕೆ ಮಸಿ ಬಳೆಯುವುದು ಮಾತ್ರವಲ್ಲ. ಮೆಹರ್ನಂತಹ ಸ್ತ್ರೀಪರ ಧೋರಣೆಗಳನ್ನು ಪ್ರತಿಪಾದಿಸುವ 'ಇಸ್ಲಾಂ'ಗೆ ಧಕ್ಕೆ ತರುವ ನಡೆಯಲ್ಲವೇ?
- ಮಾಳವಿಕ ಅವಿನಾಶ್
ರಾಜ್ಯ ಬಿಜೆಪಿ ನಾಯಕಿ