'ಕನ್ನಡ ಸಮಗ್ರ ಸಾಹಿತ್ಯ' ರಿಯಾಯ್ತಿ ದರದಲ್ಲಿ ಒದಗಿಸಿ
ಕನ್ನಡ ಸಾಹಿತ್ಯ ಪರಿಷತ್ ಶತಮಾನೋತ್ಸವ ಸಂದರ್ಭದಲ್ಲಿ ನೂರು ಆಯ್ದ ಪುಸ್ತಕಗಳನ್ನು ಪ್ರಕಟಿಸುವ ಮೂಲಕ ಶತಮಾನೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಮುಂದಾಗಿರುವುದು ಸ್ವಾಗತಾರ್ಹ.
ಸಾವಿರ ವರ್ಷಗಳಿಂದ ಕನ್ನಡ ಸಾಹಿತ್ಯ ರಂಗವನ್ನು ಆಳಿದ ಪದ್ಯ ಪ್ರಕಾರವನ್ನು ಬದಿಗಿರಿಸಿ 20ನೇ ಶತಮಾನದಲ್ಲಿ ಗದ್ಯ ಪ್ರಕಾರದ ಸಾಹಿತ್ಯ ಸೃಷ್ಟಿ ಪ್ರಾರಂಭವಾಗಿದ್ದು ಗದ್ಯಯುಗವನ್ನು ಆಳಿದುದು ಕಾದಂಬರಿಗಳು. ಹೀಗಾಗಿ 20ನೇ ಶತಮಾನವನ್ನು 'ಕಾದಂಬರಿ ಪ್ರಧಾನ ಯುಗ' ವೆಂದು ಅದರ ಶತಮಾನೋತ್ಸವ ಸಂದರ್ಭದಲ್ಲಿ ಕಾದಂಬರಿ ಸಾಹಿತ್ಯ, ಧಾರ್ಮಿಕ ಸಾಹಿತ್ಯ, ನಿಬಂಧ ಸಾಹಿತ್ಯ ನೆಲೆಗಳಲ್ಲಿ ದುಡಿದ ಶಿಕ್ಷಕರಾಗಿದ್ದ ಗಳಗನಾಥರು 1898ರಿಂದ 1938ರ ಅವಧಿಯಲ್ಲಿ ರಚಿಸಿದ 22 ಕಾದಂಬರಿಗಳನ್ನು 1999ರಲ್ಲಿ ಹಂಪಿಯ ಕನ್ನಡ ವಿಶ್ವವಿದ್ಯಾಲಯ, ಸಂಯುಕ್ತ ಕರ್ನಾಟಕ ಪತ್ರಿಕೆಯ ಸಹಯೋಗದಲ್ಲಿ ಆರು ಸಂಪುಟಗಳಲ್ಲಿ ಪ್ರಕಟಿಸುವ ಮೂಲಕ ಕಾದಂಬರಿ ಪಿತಾಮಹರಾಗಿರುವ ಗಳಗನಾಥರೆಂದರೆ ಕಾದಂಬರಿ, ಕಾದಂಬರಿ ಎಂದರೆ ಗಳಗನಾಥರು. ಉನ್ನತ ಕಾದಂಬರಿಗಳ ಸಂಕಲನವನ್ನು ಕೇವಲ ಆರು ನೂರು ರುಪಾಯಿಗಳ ಬೆಲೆಯಲ್ಲಿ ಕೊಂಡು ಓದುವ ಕನ್ನಡಿಗರಿಗೆ ಒದಗಿಸಿದೆ. ಅದೇ ಪ್ರಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಖ್ಯಾತ ಸಮಾಜವಾದಿ ರಾಮ ಮನೋಹರಲೋಹಿಯಾರವರ ಬದುಕು -ಬರಹ ಕುರಿತು ಆರು ಸಂಪುಟಗಳನ್ನು ಪ್ರತಿ ಸಂಪುಟಕ್ಕೆ ಕೇವಲ 25 ರುಪಾಯಿ ಬೆಲೆಯಲ್ಲಿ 2003ರಲ್ಲಿ ಹಾಗೂ ಭಾರತ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ರವರ ಬದುಕು, ಚಿಂತನೆಗಳ ಕುರಿತು ಕೈಗೆಟಕುವ ಬೆಲೆಯಲ್ಲಿ ಸಂಪುಟಗಳಲ್ಲಿ ಪ್ರಕಟಿಸುವ ಮೂಲಕ ಅವರುಗಳ ಸಮಾಜವಾದಿ, ವ್ಯವಹಾರಿಕ ಚಿಂತನೆಯನ್ನು ರಾಷ್ಟ್ರದ ಜನತೆ ಅರಿತು ಪಾಲಿಸುವ ಮೂಲಕ ಸ್ವಸ್ಥ ಸಮಾಜದ ಕಲ್ಪನೆ ಸಾಕಾರ ಮಾಡಲು ಅವಕಾಶ ಮಾಡಿಕೊಟ್ಟಿದೆ.
ಕನ್ನಡ ಸಾಹಿತ್ಯ ನಡೆದು ಬಂದ ದಾರಿಯನ್ನು ಅವಲೋಕನ ಮಾಡಿದಾಗ ಹಳೆಗನ್ನಡ, ನಡುಗನ್ನಡ ಹಾಗೂ ಹೊಸಗನ್ನಡದ ರೂಪದಲ್ಲಿ ಪದ್ಯ, ಗದ್ಯ ಸಾಹಿತ್ಯ ಸಮೃದ್ಧವಾಗಿ ಬೆಳೆದು ಬಂದಿರುವುದನ್ನು ಕಾಣಬಹುದಾಗಿದೆ. ಹಳೆಗನ್ನಡದಲ್ಲಿ ಮೂಡಿ ಬಂದ ಮಹಾಕವಿಗಳು, ರಂಜಿಸಿದ ಮಹಾಕಾವ್ಯಗಳು, ರಗಳೆಗಳು, ಶತಕಗಳು, ವಚನ ಸಾಹಿತ್ಯ, ದಾಸಸಾಹಿತ್ಯ, ಭಕ್ತಿ ಗೀತೆಗಳು, ಗೀತೆಗಳೂ ಚುಟುಕಗಳು ಪದ್ಯ ಸಂಸ್ಕೃತಿಯನ್ನು ಬೆಳೆಳಿಸಿಕೊಂಡು ಬಂದಿವೆ. ಜನಪದ ಸಾಹಿತ್ಯದಲ್ಲಿ ದೊಡ್ಡಾಟ, ಸಣ್ಣಾಟ, ಬಯಲಾಟ, ಯಕ್ಷಗಾನ, ಗೊರವರ ಕುಣಿತ, ಚಾಮರಾಜನಗರ ಜಿಲ್ಲೆಯ ಬುಡಕಟ್ಟುಗಳ ಜನಪದ ಪ್ರಾಕಾರಗಳು, ಕೊಡಗಿನ ಉತ್ತರಿ ಹಬ್ಬ ಮುಂತಾದ ಪ್ರಾಕಾರಗಳನ್ನು ಕಾಣಬಹುದಾಗಿದೆ. ಗದ್ಯ ಸಾಹಿತ್ಯದಲ್ಲಿ ಕಾದಂಬರಿ, ಪ್ರಹಸನ, ವ್ಯಕ್ತಿ ಚಿತ್ರಣ, ನಾಟಕಗಳು ಅದರಲ್ಲಿ ಕಾದಂಬರಿಗಳ ಲೋಕದಲ್ಲಿ ಸಾಮಾಜಿಕ ಕಾದಂಬರಿಗಳು, ಪೌರಾಣಿಕ, ಐತಿಹಾಸಿಕ, ಹಾಸ್ಯ, ವೈಜ್ಞಾನಿಕ, ವೈದ್ಯಕೀಯ, ಮನೋವಿಜ್ಞಾನ, ಪರಿಸರ, ಪಕ್ಷಿಸಂಕುಲಗಳ ಕುರಿತಾದ ಕಾದಂಬರಿಗಳನ್ನು ವಿವಿಧ ಕಾದಂಬರಿಕಾರರು ರಚಿಸಿರುವುದನ್ನು ಗಮನಿಸಬಹುದಾಗಿದೆ.
ಕನ್ನಡ ಸಾಹಿತ್ಯ ಪರಿಷತ್ನ ಶತಮಾನೋತ್ಸವ ಸಂದರ್ಭದಲ್ಲಿ ಕೇವಲ 100 ಪುಟಗಳ ಪ್ರಶಂಸೆಗೆ ಬದಲಾಗಿ ಕಾವ್ಯ ಸಾಹಿತ್ಯ ಸಂಪುಟ, ಕಾದಂಬರಿಗಳಲ್ಲಿ ಆಯ್ದ ಮೌಲಿಕ ಸಂದೇಶ ನೀಡುವ ಸಾಮಾಜಿಕ ಕಾದಂಬರಿಗಳ ಸಂಪುಟ, ಪೌರಾಣಿಕ ಕಾದಂಬರಿ ಸಂಪುಟ, ಐತಿಹಾಸಿಕ ಕಾದಂಬರಿ ಸಂಪುಟ, ಹಾಸ್ಯ, ವೈಜ್ಞಾನಿಕ, ಮನೋವಿಜ್ಞಾನ ಹಾಗೂ ಪರಿಸರ ಕುರಿತಾದ ವಿವಿಧ ಕಾದಂಬರಿಕಾರರು ರಚಿಸಿದ ಉತ್ತಮ ಕಾದಂಬರಿಗಳನ್ನು ಗಳಗನಾಥರ ಕಾದಂಬರಿ ಸಂಪುಟದ ರೀತಿಯಲ್ಲಿ ನಾಟಕಗಳು, ಸಣ್ಣಕಥೆಗಳು, ಜನಪದ ಸಾಹಿತ್ಯ ಸಂಪುಟ, ಕನ್ನಡಭಾಷೆ-ವ-ವ್ಯಾಕರಣ, ನಿಘಂಟುಗಳ ಸಂಪುಟಗಳನ್ನು ಸರ್ಕಾರದಿಂದ ಸಹಾಯಧನ ಪಡೆದು ಪ್ರತಿಯೊಂದು ಪ್ರಾಕಾರದಲ್ಲಿ ನೂರು ಸಂಪುಟಗಳನ್ನು ಮುದ್ರಿಸಿ ಓದುಗರಿಗೆ ಒದಗಿಸುವ ಮೂಲಕ ಸಮೃದ್ಧ ಕನ್ನಡದ ವಿವಿಧ ಆಯಾಮಗಳ ಅರಿವನ್ನು ಕೊಂಡು ಓದುವ ಕನ್ನಡಿಗರಿಗೆ ಒದಗಿಸುವ ಮೂಲಕ ಸಮಗ್ರ ಕನ್ನಡ ಸಾಹಿತ್ಯವನ್ನು ಜೀವಂತವಾಗಿಟ್ಟು "ಕನ್ನಡ ಸಾಹಿತ್ಯ ಪರಿಷತ್" ತನ್ನ ನಾಮಧೇಯವನ್ನು ಅರ್ಥಪೂರ್ಣವಾಗಿಸಬೇಕಾಗಿದೆ.
ಕಾರಣ ಕರ್ನಾಟಕ ಹೆಮ್ಮೆಯ ಸಾಹಿತ್ಯಿಕ ಸಂಸ್ಥೆ ಸಾಹಿತ್ಯ ಪರಿಷತ್ ಮೇಲೆ ಹೇಳಿದ ವಿವಿಧ ಆ ಪ್ರಕಾರದ ಸಾಹಿತ್ಯದ ಅತ್ಯಮೂಲ್ಯವಾದ ಪುಸ್ತಕಗಳನ್ನು ಆಯ್ದುಕೊಂಡು ಪ್ರತಿಯೊಂದು ಸಂಪುಟದಲ್ಲಿ ಐದು ಲೇಖಕರ ಪುಸ್ತಕಗಳನ್ನು, ಕವಿಗಳ ಲೇಖಕರ ಕಿರುಪರಿಚಯ ಮಾಡಿಕೊಟ್ಟು ಪ್ರತಿಯೊಂದು ಸಂಪುಟದಲ್ಲಿ ಸುಮಾರು ಏಳುನೂರು ಪುಟಗಳಲ್ಲಿ ಸಂಗ್ರಹಿಸಿ ಕೊಡಬೇಕು. ಇದರಿಂದಾಗಿ ಪ್ರತಿಯೊಂದು ಕಾದಂಬರಿ ಅಥವಾ ಪುಸ್ತಕದ ಬೈಂಡಿಂಗ್ ಮುಂತಾದ ಪ್ರಕ್ರಿಯೆಗೆ ತಗುಲುವ ವೆಚ್ಚವನ್ನು ಕಡಿಮೆ ಮಾಡಬಹುದಾಗಿದೆ. ಈ ಪುಸ್ತಕ ಸಂಪುಟಗಳಿಗೆ "ಶತಮಾನೋತ್ಸವ ಜನಸಾಮಾನ್ಯರಿಗೆ ಸಾಹಿತ್ಯ ಮಾಲಿಕೆ"ಯೆಂದು ಹೆಸರಿಟ್ಟು ರಿಯಾಯ್ತಿ ದರದಲ್ಲಿ ಪ್ರಕಟಿಸಲು ಕ್ರಮ ಜರುಗಿಸುವಂತೆ ಕನ್ನಡ ಸಾಹಿತ್ಯ ಪರಿಷತ್ ಅನ್ನು ಕೊಂಡು ಓದುವ ಕನ್ನಡಿಗರ ಪರವಾಗಿ ಕೋರುತ್ತೇನೆ.
ಈ ಕುರಿತು ಕನ್ನಡದ ಸಾಹಿತ್ಯದಿಗ್ಗಜರು, ಕನ್ನಡಾಭಿಮಾನಿಗಳು ಸಕಾರಾತ್ಮಕ ಚಿಂತನೆ ಮಾಡಿ ಸಮಗ್ರ ಸಾಹಿತ್ಯವನ್ನು ಕೈಗೆಟಕುವ ಬೆಲೆಯಲ್ಲಿ ಸಂಪುಟ ರೂಪದಲ್ಲಿ ಪ್ರಕಟಿಸಿ ಒದಗಿಸುವ ಕುರಿತು ಕನ್ನಡ ಸಾಹಿತ್ಯ ಪರಿಷತ್ಗೆ ಸಲಹೆ ನೀಡಿ "ಕನ್ನಡ ಸಾಹಿತ್ಯ ಪರಿಷತ್" ಶತಮಾನೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವಂತಾಗಲಿ ಎಂದು ಹಾರೈಸುವೆನು.
-ಬಸವರಾಜ ಹುಡೇದಗಡ್ಡಿ