ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಸಾಧಕರ ಸಾಧನೆಗಳು ಅಮರವಾಗಬೇಕಾದರೆ...

Mainashree
Updated On : 31 Oct 2013, 11:01 am

ಕನ್ನಡನಾಡು ಸಾವಿರಾರು ವರ್ಷಗಳ ಇತಿಹಾಸ ಹೊಂದಿದ್ದು ಆಳ್ವಿಕೆಯಲ್ಲಿ, ಸಾಹಿತ್ಯದಲ್ಲಿ, ಕಲೆಯಲ್ಲಿ, ವಿಜ್ಞಾನದಲ್ಲಿ, ರಾಜಕೀಯದಲ್ಲಿ, ಕ್ರೀಡೆಯಲ್ಲಿ, ಹೀಗೆ ಹಲವಾರು ಕ್ಷೇತ್ರಗಳಲ್ಲಿ ಬೆರಗು ಹುಟ್ಟಿಸುವಂಥ ಸಾಧನೆ ಮಾಡಿರುವ ಮಹಾನ್ ವ್ಯಕ್ತಿಗಳು ಸಮಾಜದಲ್ಲಿ ಇಂದು ನಮಗೆ ಉತ್ತಮ ಅಡಿಪಾಯ ಹಾಕಿಕೊಟ್ಟು ಹೋಗಿದ್ದಾರೆ. ಅವರ ತ್ಯಾಗ, ಪರಿಶ್ರಮ, ಹೋರಾಟದ ಫಲವನ್ನು ನಾವು ಇಂದು ಅನುಭವಿಸುತ್ತಿದ್ದೇವೆ. ಆದರೆ ಇಂದಿನ ಪೀಳಿಗೆಗೆ ಅಂಥ ಹಿರಿಯ ಸಾಧಕರ ಬಗ್ಗೆ ಅಷ್ಟೊಂದು ವಿಷಯಗಳು ತಿಳಿದಿರುವುದೇ ಇಲ್ಲ ಅಥವಾ ತಿಳಿಯಲು ಸಾಧ್ಯವಾಗುತ್ತಿಲ್ಲ. ಕಾರಣವೇನೆಂದರೆ ನಮ್ಮ ಪಠ್ಯಗಳಲ್ಲಿ ನಾವು ಓದುವುದು ಕೆಲವು ವಿಷಯಗಳನ್ನಷ್ಟೆ. ಎಲ್ಲಾ ಸಾಧಕರ ಬಗ್ಗೆ ಪಠ್ಯಗಳಲ್ಲಿ ಸೇರಿಸುವುದು ಅಸಾಧ್ಯವೂ ಹೌದು ಮತ್ತು ಅಷ್ಟೊಂದು ಓದುವುದು ಶೈಕ್ಷಣಿಕವಾಗಿ ಸಾಧ್ಯವೂ ಅಲ್ಲ. ಒಂದೊಮ್ಮೆ ಓದಿದರೂ ಪರೀಕ್ಷೆಯನ್ನು ಗುರಿಯಾಗಿಸಿಕೊಂಡು ಓದಿ ಉತ್ತೀರ್ಣರಾಗಿ ಮುಂದಿನ ತರಗತಿಗಳಿಗೆ ತೆರಳಿದಂತೆ ಹಿಂದೆ ಓದಿರುವುದು ಸದಾ ಸ್ಮೃತಿಪಟಲದಲ್ಲಿರುವುದು ಕಷ್ಟಸಾಧ್ಯ.
ಆದರೂ ಇಂದಿನ ಮಕ್ಕಳಿಗೆ ಆಲೂರು ವೆಂಕಟರಾಯರು, ಮ.ರಾಮಮೂರ್ತಿ, ರಾಣಿ ಅಬ್ಬಕ್ಕ, ಕಿತ್ತೂರು ಚೆನ್ನಮ್ಮ, ಹರ್ಡೀಕರ್ ಮಂಜಪ್ಪ, ಗಂಗಾಧರ ದೇಶಪಾಂಡೆ, ಪಂಜೆ ಮಂಗೇಶರಾಯರು, ಗೋವಿಂದ ಪೈ, ಕಾಳಿಂಗರಾವ್, ಶಿವಮೊಗ್ಗ ಸುಬ್ಬಣ್ಣ, ದಿವಾನ್ ಶೇಷಾದ್ರಿ ಅಯ್ಯರ್, ದಿವಾನ್ ಸರ್. ಮಿರ್ಜಾ ಇಸ್ಮಾಯಿಲ್, ಮಲ್ಲಿಕಾರ್ಜುನ ಮನ್ಸೂರ್, ಬಾಳಪ್ಪ ಹುಕ್ಕೇರಿ, ಎಸ್. ನಿಜಲಿಂಗಪ್ಪ, ತ್ರಿವೇಣಿ, ನಾಗರತ್ನಮ್ಮ, ಗಂಗೂಬಾಯಿ, ಹಾನಗಲ್, ಭೀಮಸೇನ್ ಜೋಷಿ, ನಾಲ್ವಡಿ ಕೃಷ್ಣರಾಜ ಒಡೆಯರ್, ಉದಯಕುಮಾರ್, ನರಸಿಂಹರಾಜು, ಬಾಲಕೃಷ್ಣ, ಜಿ.ಕೆ.ವೆಂಕಟೇಶ್ ಹೀಗೆ ಇನ್ನೂ ಅಂಕಿಗೆ ಸಿಗದಷ್ಟು ವಿವಿಧ ಕ್ಷೇತ್ರಗಳಲ್ಲಿ ಸೇವೆ ಮಾಡಿ ತಮ್ಮದೇ ಛಾಪು ಮೂಡಿಸಿರುವ ಮಹಾನ್ ಚೇತನಗಳ ಬಗ್ಗೆ ಅಷ್ಟಾಗಿ ಗೊತ್ತಿರುವುದಿಲ್ಲ ಎನ್ನುವುದು ಬೇಸರದ ಸಂಗತಿ. ಈಗಿನ ದೂರದರ್ಶನ ವಾಹಿನಿಗಳಲ್ಲಿ ರಿಯಾಲಿಟಿ ಶೋಗಳು, ರಬ್ಬರ್‌ನಂತೆ ಎಳೆಯುವ ಅತ್ತೆ-ಸೊಸೆ ಧಾರಾವಾಹಿಗಳು, ಸಿನೆಮಾ ಗೀತೆಗಳು, ವಿಚಿತ್ರ ಹೆಸರಿನ ಚಲನಚಿತ್ರಗಳು, ಅತಿರಂಜಿತ ಸುದ್ದಿಗಳು ಹೀಗೆ ಬರೀ ಮನರಂಜನೆಗೆ ಮಾತ್ರ ಒತ್ತುಕೊಡಲಾಗುತ್ತಿದೆ. ಎಫ್.ಎಂ. ರೇಡಿಯೋಗಳಲ್ಲೂ ಬರೀ ಸಿನೆಮಾ ಗೀತೆಗಳದ್ದೇ ಕಾರುಬಾರು. ಸಾರ್ವಜನಿಕ ಸ್ಥಳಗಳೆಲ್ಲಡೆಯೂ ಜಾಹೀರಾತು ಫಲಕಗಳ (ಹೆಚ್ಚಾಗಿ ಆಂಗ್ಲಭಾಷೆಯ) ಅಬ್ಬರವೇ ಹೆಚ್ಚು. ಹೀಗಿರುವಾಗ ಇವನ್ನೇ ನಾವು ಉಪಯೋಗಿಸಿಕೊಂಡು ನಮ್ಮ ನೆಲದ ಸಾಧಕರ ಸಾಧನೆಗಳನ್ನು ಎಂದೆಂದಿಗೂ ಅಮರವಾಗುವಂತೆ ಮಾಡಬಾರದೇಕೆ? ಹೇಗೆಂದರೆ...
-ನಮ್ಮ ರಾಜ್ಯದ ವಿಮಾನ ನಿಲ್ದಾಣಗಳಲ್ಲಿ, ರೇಲ್ವೆ ನಿಲ್ದಾಣಗಳಲ್ಲಿ, ಪ್ರಮುಖ ಬಸ್ ನಿಲ್ದಾಣಗಳಲ್ಲಿ ನಮ್ಮ ಹೆಮ್ಮೆಯ ಶ್ರೇಷ್ಠ ವ್ಯಕ್ತಿಗಳ ಭಾವಚಿತ್ರದೊಂದಿಗೆ, ಜನನ-ಮರಣದ ದಿನಾಂಕ, ಯಾವ ಕ್ಷೇತ್ರಕ್ಕೆ ಸಂಬಂಧಿಸಿದವರು, ಸಮಾಜಕ್ಕೆ-ಜಗತ್ತಿಗೆ ಅವರು ನೀಡಿದ ಕೊಡುಗೆಯೇನು, ಅವರ ಸಾಧನೆಯೇನು, ಅವರಿಗೆ ಸಂದ ಪ್ರಶಸ್ತಿ-ಪುರಸ್ಕಾರಗಳೇನು...ಇವೆಲ್ಲ ಮಾಹಿತಿಗಳನ್ನು ಸಂಕ್ಷಿಪ್ತವಾಗಿ ತ್ರಿಭಾಷಾ ಸೂತ್ರದಡಿಯಲ್ಲಿ ಕನ್ನಡ, ಹಿಂದಿ ಮತ್ತು ಆಂಗ್ಲ ಭಾಷೆಗಳಲ್ಲಿ ಮುದ್ರಿಸಿ ಆಕರ್ಷಕವಾಗಿರುವಂತೆ ಮತ್ತು ಒಂದೇ ರೀತಿಯಲ್ಲಿ ಎಲ್ಲೆಡೆಯೂ ಈ ತೆರನಾದ ಫಲಕಗಳನ್ನು ಪ್ರದರ್ಶನಕ್ಕೆಂದು ಖಾಯಂ ಆಗಿ ಅಳವಡಿಸಿದರೆ ಆಗ ನಮ್ಮ ಹಲವಾರು ಸಾಧಕರ ಬಗ್ಗೆ ಸಾಮಾನ್ಯ ಜನರು ತಿಳಿಯುವುದಕ್ಕೆ ಸಾಧ್ಯವಾಗುತ್ತದೆ. ನಮ್ಮ ಜನರಷ್ಟೇ ಅಲ್ಲ ಬೇರೆ ರಾಜ್ಯಗಳಿಂದ, ದೇಶಗಳಿಂದ ಬರುವವರೂ ಕೂಡ ಕುತೂಹಲಕ್ಕಾದರೂ ಭಾವ ಚಿತ್ರವನ್ನು ನೋಡಿ ಅವರ ಬಗ್ಗೆ ತಿಳಿದುಕೋಳ್ಳಲು ಓದುತ್ತಾರೆ. ಅವರ ಸಾಧನೆ ತಿಳಿದು ನಮ್ಮ ರಾಜ್ಯದ ಬಗ್ಗೆ ಹೆಮ್ಮೆ ಮತ್ತು ಮೆಚ್ಚುಗೆ ಮೂಡುತ್ತದೆ. ಸಾಮಾನ್ಯ ನಾಗರಿಕರಿಗೂ ಸ್ಫೂರ್ತಿ ದೊರೆಯುವಂತಾಗುತ್ತದೆ.  
-  ಇದೇ ರೀತಿಯಲ್ಲಿ ಪ್ರತಿ ಚಿಕ್ಕ ಚಿಕ್ಕ ಬಸ್ ನಿಲ್ದಾಣಗಳಲ್ಲಿ, ಉದ್ಯಾನವನಗಳಲ್ಲಿ ಆಯಾ ಜಿಲ್ಲೆ ಅಥವಾ ತಾಲೂಕಿನ ಸಾಧಕರ ಪರಿಚಯ ಫಲಕಗಳನ್ನು ಅಳವಡಿಸಿದರೆ ಅಲ್ಲಿ ಓಡಾಡುವ ಜನರಿಗೆ ಅವರ ಬಗ್ಗೆ ತಿಳಿದು ಅಭಿಮಾನ ಮೂಡುತ್ತದೆ.
-  ನೋಟ್ ಪುಸ್ತಕಗಳ ಹೊದಿಕೆಯ ಮೇಲೂ ಇದೇ ರೀತಿ ವ್ಯಕ್ತಿ ಪರಿಚಯ ಮುದ್ರಿಸಬಹುದು. ಹೆಸರಿನ ಚೀಟಿಯಲ್ಲೂ ಭಾವಚಿತ್ರವನ್ನು ಮೂಡಿಸಬಹುದು.
-ದೂರದರ್ಶನದ ವಾಹಿನಿಗಳಲ್ಲಿ, ಎಫ್.ಎಂ. ರೇಡಿಯೋಗಳಲ್ಲಿ ಮತ್ತು ದಿನ ಪತ್ರಿಕೆಗಳಲ್ಲಿ ಒಂದೊಂದು ತಿಂಗಳು ಒಂದು ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರತೀ ಭಾನುವಾರದಂದು ಒಬ್ಬ ಮಹಾನ್ ಚೇತನದ ಬಗ್ಗೆ ಸವಿವರ ನೀಡುವ ಕಾರ್ಯಕ್ರಮ ಏರ್ಪಡಿಸಬಹುದು.
-   ಕ್ಯಾಲೆಂಡರ್ ಹಾಗೂ ದಿನಚರಿಪುಸ್ತಕಗಳಲ್ಲೂ ಕನ್ನಡನಾಡಿನ ಪ್ರಸಿದ್ಧ ವ್ಯಕ್ತಿಗಳ ವಿವರಗಳನ್ನಾಗಲೀ ಅಥವಾ ಅವರ ಜನಪ್ರಿಯ ಹಿತನುಡುಗಳನ್ನಾಗಲೀ ಮುದ್ರಿಸಬಹುದು.
ಒಟ್ಟಾರೆಯಾಗಿ ಕೇವಲ ನವೆಂಬರ್‌ನಲ್ಲಿ ಮಾತ್ರ ಅಥವಾ ಜನ್ಮದಿನಗಳಂದು ಮಾತ್ರ ನಮ್ಮ ಹಿರಿಯ ಸಾಧಕರನ್ನು ನೆನೆದು, ಮಾತನಾಡಿ, ಸುಮ್ಮನಾಗುವ ಬದಲು ಪ್ರತಿನಿತ್ಯವೂ ಒಂದಿಲ್ಲೊಂದು ರೀತಿಯಲ್ಲಿ ಅವರನ್ನು ಸ್ಮರಿಸುವಂತಾಗಬೇಕು. ಸಂಬಂಧಪಟ್ಟ ಇಲಾಖೆಗಳು, ಸಮೂಹ ಮಾಧ್ಯಮಗಳು, ಕನ್ನಡಪರ ಸಂಘಟನೆಗಳು ಹಾಗೂ ಸಂಘ-ಸಂಸ್ಥೆಗಳು ಈ ನಿಟ್ಟಿನಲ್ಲಿ ಕಾಳಜಿವಹಿಸಿ ಕಾರ್ಯಪ್ರವೃತ್ತವಾದರೆ ಕನ್ನಡನಾಡಿನ ದಿಗ್ಗಜರು ನಮಗೆ ಅಪರಿಚಿತರೆನಿಸುವುದಿಲ್ಲ. ಬದಲಿಗೆ ಅವರ ಸೇವೆಯನ್ನು, ಸಾಧನೆಗಳನ್ನು ಅರಿತು ಸ್ಫೂರ್ತಿ ಪಡೆದು ನಾವೂ ಏನನ್ನಾದರೂ ಸಾಧಿಸಬೇಕೆಂಬ ಕಿಚ್ಚು ಮೂಡುತ್ತದೆ.
-ಎಸ್. ಸುಧಾಕರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement