ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಕೇವಲ ಸಾಮಾಜಿಕ ತಾಣಗಳಿಂದ ಬದಲಾವಣೆ ಸಾಧ್ಯವೇ?

ಇಂಟರ್ನೆಟ್ ಯುಗಾರಂಭ ಎಂಬುದು ದಶಕದ ಹಿಂದಿನ ಮಾತಾದರು ಆ ಮಾತಿಗೆ ನೈಜ ಅರ್ಥ ಸಿಕ್ಕಿದ್ದು ಮಾತ್ರ ಸಾಮಾಜಿಕ...

Rashmi Kasaragodu
Updated On : 3 Sept 2013, 12:13 pm

ಇಂಟರ್ನೆಟ್ ಯುಗಾರಂಭ ಎಂಬುದು ದಶಕದ ಹಿಂದಿನ ಮಾತಾದರು ಆ ಮಾತಿಗೆ ನೈಜ ಅರ್ಥ ಸಿಕ್ಕಿದ್ದು ಮಾತ್ರ ಸಾಮಾಜಿಕ ತಾಣಗಳ ಪ್ರಭಾವ ಹೆಚ್ಚಿದ ಅನಂತರ. ಬಳಕೆದಾರ ಹೆಚ್ಚಳದಿಂದ ಸಾಮಾಜಿಕ ಮಾಧ್ಯಮ ಇಂದು ಭಾರತದಲ್ಲಿ ಅತ್ಯಂತ ಪ್ರಭಾವಶಾಲಿ ಮಾಧ್ಯಮ ಎಂದರೆ ಖಂಡಿತ ತಪ್ಪಾಗಲಾರದು. ಪ್ರಸ್ತುತ ಸಂಧರ್ಭದಲ್ಲಿ ಪತ್ರಿಕಾ ಮಾಧ್ಯಮಗಳು, ಟಿವಿ ಮಾಧ್ಯಮಗಳು ಕೂಡ ತಮ್ಮ ತಮ್ಮ ಪ್ರಭಾವವನ್ನು ಉಳಿಸಿಕೊಳ್ಳಬೇಕಾದರೆ, ಸಾಮಾಜಿಕ ಮಾಧ್ಯಮವನ್ನು ಬೆಂಬಿಡದೆ ಅನುಸರಿಸಬೇಕಿದೆ, ಅನುಸರಿಸುತ್ತಲೂ ಇದೆ. ಫೇಸ್‌ಬುಕ್, ಟ್ವಿಟರ್, ಯೂಟ್ಯೂಬ್, ವಾಟ್ಸ್-ಆಪ್  ಮುಂತಾದ ಕೆಲ ಮುಂಚೂಣಿ ತಾಣಗಳಲ್ಲಿ ಖಾತೆ ಹೊಂದಿರದ ಅಂತರ್ಜಾಲ ಬಳಕೆದಾರರ ಸಂಖ್ಯೆ ತೀರಾ ಕಡಿಮೆ. ಈ ಸಾಮಾಜಿಕ ತಾಣಗಳ ಪ್ರಭಾವದಿಂದ ಹೋರಾಟಗಳು ರೂಪುಗೊಂಡ, ಕ್ರಾಂತಿಗಳಾದ, ರಾಜಕೀಯ ಬದಲಾವಣೆಗಳಾದ ಉದಾಹರಣೆಗಳು ಕಾಣಸಿಗುತ್ತವೆ. ಅಂತಹುದೇ ಒಂದು ಕ್ರಾಂತಿಗೆ, ರಾಜಕೀಯ ಬದಲಾವಣೆಗೆ ಭಾರತ ಕೂಡ ಪ್ರಸ್ತುತ ಕಾದು ಕುಳಿತಿದೆ. ಆದರೆ ಕೇವಲ ಈ ತಾಣಗಳ ಪ್ರಭಾವದಿಂದ ಭಾರತದಂತಹ ರಾಷ್ಟ್ರದಲ್ಲಿ ಬದಲಾವಣೆಯೊಂದು ಜರುಗಿಬಿಡಲು ಸಾಧ್ಯವಿದೆಯೇ ಎಂಬುದು ಯಕ್ಷ ಪ್ರಶ್ನೆಯೇ ಸರಿ. ಖಂಡಿತ ಸಾಧ್ಯವಿಲ್ಲವೆಂಬುದಕ್ಕೆ ಮೂಲೆಗುಂಪಾದ ಅಣ್ಣಾ ಹಜಾರೆ ಆಂದೋಲನವೇ ಪರ್ವತಸಾಕ್ಷಿಯಂತೆ ನಮ್ಮ ಎದುರಿಗಿದೆ. ಅಣ್ಣಾ ಆಂದೋಲನ ಯಾಕೆ ವಿಫಲವಾಯಿತು ಎಂಬುದನ್ನು ಬದಿಗಿಟ್ಟು, ಕೇವಲ ಸಾಮಾಜಿಕ ತಾಣಗಳ ಪ್ರಭಾವದಿಂದ ಭಾರತದಲ್ಲಿ ಬದಲಾವಣೆ ಯಾಕೆ ಅಸಾಧ್ಯ ಎಂಬುದನ್ನು ನಾವು ಅರಿತುಕೊಳ್ಳಬೇಕಿದೆ. ಸಾಮಾಜಿಕ ತಾಣಗಳ ಬಳಕೆದಾರರ ಪೈಕಿ ಶೇ97ರಷ್ಟು ಬಳಕೆದಾರರು ಫೇಸ್‌ಬುಕ್‌ನಲ್ಲಿ ಖಾತೆ ಹೊಂದಿದ್ದಾರೆ. ಭಾರತದಲ್ಲಿ ಪ್ರಸ್ತುತ 8ಕೋಟಿ 20ಲಕ್ಷ ಫೇಸ್‌ಬುಕ್ ಬಳಕೆದಾರರಿದ್ದಾರೆ ಎಂಬುದು ಕೆಲ ದಿವಸಗಳ ಹಿಂದೆ ಬಿಡುಗಡೆಗೊಂಡಿರುವ ನೂತನ ವರದಿ.  ಈ ವರದಿಯ ಅನ್ವಯ ಭಾರತದ ಶೇ 6.5ರಷ್ಟು ಜನಸಂಖ್ಯೆ ಫೇಸ್‌ಬುಕ್‌ನ ಬಳಕೆದಾರರಾಗಿದ್ದಾರೆ. ಅಲ್ಲಿಗೆ ಇತರೆ ತಾಣಗಳ ಬಳಕೆದಾರರನ್ನು ಗ್ರಹಿಸಿಕೊಂಡರೆ ಹೆಚ್ಚು-ಕಡಿಮೆ ಶೇ7 ರಷ್ಟು ಭಾರತೀಯರು ಸಾಮಾಜಿಕ ತಾಣಗಳಲ್ಲಿ ಕ್ರಿಯಾಶೀಲರಾಗಿದ್ದಾರೆ ಎಂಬ ಸಾರಾಂಶಕ್ಕೆ ನಾವು ಬರಬಹುದು. ಯಾರು ಈ ಸಾಮಾಜಿಕ ತಾಣಗಳ 7 ಪ್ರತಿಶತ ಭಾರತೀಯರು? ಯಾರು ಉಳಿದ ಭಾರತೀಯರು?
ಕೇವಲ ಕಳೆದ ಒಂದೆರಡು ದಶಕಗಳಿಂದ ಹೆಚ್ಚಾಗಿ ಬಳಕೆಯಲ್ಲಿರುವ ಅಂತರ್ಜಾಲಕ್ಕೆ, ಭಾರತದ ಹಿರಿಯ ನಾಗರಿಕರ ಪರಿಚಯ ಕಡಿಮೆ. ಅಷ್ಟಕ್ಕೂ ಕಂಪ್ಯೂಟರ್‌ಗಳನ್ನು ಬಂಗಾರದ ವಿಗ್ರಹದಂತೆ ನೋಡಿಕೊಳ್ಳಲಾಗುತ್ತಿದ್ದ ಕಾಲದವರವರು. ಹೀಗಾಗಿ ಸಾಮಾಜಿಕ ತಾಣಗಳ ಬಳಕೆಯಲ್ಲಿ ಹಿರಿಯ ನಾಗರಿಕರ ಸಂಖ್ಯೆ ಸಹಜವಾಗಿಯೇ ಕ್ಷೀಣಸಿದೆ. ಯುವಕರು ಹಾಗೂ ಮಧ್ಯವಯಸ್ಕರಿಂದ ಕೂಡಿರುವ ಸರಿಸುಮಾರು 16 ರಿಂದ 45 ವರ್ಷ ಪ್ರಾಯದ ಬಹುತೇಕರು ಮಾತ್ರ ಪ್ರಸ್ತುತ ಸಾಮಾಜಿಕ ತಾಣಗಳ ಸಂಪರ್ಕದಲ್ಲಿದ್ದಾರೆ ಎನ್ನಬಹುದು. ಇನ್ನೂಸಾಕ್ಷರತೆ ಇಲ್ಲದಿರುವವರು ಅಂತರ್ಜಾಲ ಬಳಸುವುದೇ  ಅಸಾಧ್ಯ.  ಅಲ್ಲಿ ಕಾಣಸಿಗುವವರೆಲ್ಲರೂ ಅಪ್ಪಟ ಸಾಕ್ಷರಸ್ಥರೇ ಎಂಬುದನ್ನು ಒಪ್ಪಲೇಬೇಕು.  
ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಅಂತರ್ಜಾಲವನ್ನು ಇಸ್ಲಾಮಿಗೆ ಕಂಟಕವೆಂಬಂತೆ ಪರಿಗಣಿಸಲಾಗಿದೆ. ಮತಪ್ರಮುಖರು, ಮುಲ್ಲಾಗಳು, ಮೌಲ್ವಿಗಳು ಹಾಗೂ ಮುಖ್ರಿಗಳು ಹಲವಾರು ತಾಣಗಳನ್ನು ಬಳಸದಂತೆ ಕೆಲವು ರಾಷ್ಟ್ರಗಳಲ್ಲಿ ಫತ್ವಾಗಳನ್ನು ಹೊರಡಿಸಿರುವ ನಿದರ್ಶನಗಳು ಸಾಕಷ್ಟಿವೆ. ಭಾರತದಲ್ಲಿ ಶೇ 18ರಷ್ಟು ಮುಸಲ್ಮಾನರಿದ್ದಾರೆ ಎಂಬುದಾಗಿ ಅಂದಾಜಿಸಲಾಗಿದೆ. ಆ ದೇಶಗಳ ಪ್ರಭಾವ ಭಾರತದ ಬಹುತೇಕ ಮೂಲಭೂತವಾದಿ ಮುಸಲ್ಮಾನರ ಮೇಲೆ ಸಹಜವಾಗಿಯೇ ಬೀರಿರುವ ಪರಿಣಾಮ ಇಲ್ಲಿನವರು ಹೆಚ್ಚಾಗಿ ಅಂತರ್ಜಾಲವನ್ನೇ ಬಳಸುತ್ತಿಲ್ಲ. ಭಾರತದ ಮುಸ್ಲಿಂ ಜನಸಂಖ್ಯೆಗೆ ಅನುಗುಣವಾಗಿ ಸಾಮಾಜಿಕ ತಾಣಗಳಲ್ಲಿ ಅವರ ಉಪಸ್ಥಿತಿ ಇಲ್ಲವೆಂಬುದೇ ಇದಕ್ಕೆ ಸ್ಪಷ್ಟ ನಿದರ್ಶನ. ಸಾಮಾಜಿಕ ತಾಣಗಳಲ್ಲಿ ಮಹಾನಗರಗಳ, ನಗರಗಳ ಹಾಗೂ ಪಟ್ಟಣಗಳ ನಿವಾಸಿಗಳೇ ವಾಸಿಸುತಿದ್ದಾರೆ, ಹೀಗಿರುವಾಗ ಗ್ರಾಮವಾಸಿಗರ ಸಂಖ್ಯೆ ಈ ಏಳು ಪ್ರತಿಶತ ಭಾರತೀಯರಲ್ಲಿದ್ದೀತೆ?
ಇದೇನೇ ಇದ್ದರು, ಪ್ರಸ್ತುತ ಕೇಂದ್ರ ಸರ್ಕಾರದ ಹತ್ತು ವರ್ಷಗಳ ಭ್ರಷ್ಟಭರಿತ ದುರಾಡಳಿತದ ವಿರುದ್ಧ ಬೇಸತ್ತಿರುವ ಜನತೆಗೆ, ಇಂದು ಬದಲಾವಣೆಯ ಧ್ವನಿಯಾಗಿ, ಆಕ್ರೋಶಕ್ಕೆ ವೇದಿಕೆಯಾಗಿ ನಿಂತಿರುವುದು ಅಂತರ್ಜಾಲದ ಸಾಮಾಜಿಕ ತಾಣಗಳು. ಅಲ್ಲಿನ ಹೇಳಿಕೆಗಳು, ಬರಹಗಳು, ಭಾವಚಿತ್ರಗಳು, ಚರ್ಚೆಗಳು, ಪ್ರತಿಭಟನೆಗಳೆಲ್ಲವೂ ಎಲ್ಲಿಲ್ಲದ ಜಾಗೃತಿಯನ್ನು ಮೂಡಿಸುತ್ತಿವೆ. ಆದರೆ ಇಲ್ಲಿ ಮೂಡುವ ಜಾಗೃತಿಯು ಕೇವಲ ಏಳು ಪ್ರತಿಶತ ಭಾರತೀಯರಿಗಷ್ಟೆ. ಅಂದರೆ ಈಗಾಗಲೇ ಜಾಗೃತವಾಗಿರುವ ಸಮಾಜಕ್ಕಷ್ಟೇ ಸೀಮಿತವಾಗುತ್ತಿರುವುದು ದುರಂತ. ಒಂದು ಕೈಯಲ್ಲಿ ಚಪ್ಪಾಳೆ ಹೇಗೆ ಸಾಧ್ಯವಾಗುವುದಿಲ್ಲವೋ ಹಾಗೆಯೇ ಕೇವಲ ಈ ಒಂದು ವರ್ಗದ ಜಾಗೃತಿಯಿಂದ ರಾಜಕೀಯ ಬದಲಾವಣೆಯೂ ಸಾಧ್ಯವಿಲ್ಲ. ಮುಖ್ಯವಾಗಿ ಜಾಗೃತವಾಗಬೇಕಿರುವ ವರ್ಗವೇ ಬೇರೊಂದಿದೆ. ಸಾಮಾಜಿಕ ತಾಣವೆಂಬುದರ ಕಲ್ಪನೆಯಿಲ್ಲದ ಬಹುದೊಡ್ಡ ವರ್ಗವದು. ದೇಶಭಕ್ತರಾದರು ದೇಶದ ಆಗುಹೋಗುಗಳ ಬಗ್ಗೆ ಅರಿವಿಲ್ಲದೆ, ಕಾಲಾನುಸಾರ ರಾಜಕೀಯ ಪಕ್ಷಗಳ ಮತಬ್ಯಾಂಕಿಗೆ, ಹಣದ ಅನಿವಾರ್ಯತೆಗೆ ಹಾಗೂ ಕೆಲ ಕಪಟ ರಾಜಕೀಯ ಸಿದ್ಧಾಂತಕ್ಕೆ ಬಲಿಯಾಗಿರುವ ಅತ್ಯಂತ ಪ್ರಮುಖ ವರ್ಗವದು.
ಮುಸಲ್ಮಾನರು, ಗ್ರಾಮ ನಿವಾಸಿಗಳು, ಕಡುಬಡವರು ಹಾಗೂ ಅನಕ್ಷರಸ್ಥರ್ಯಾರೂ ಸಾಮಾಜಿಕ ತಾಣಗಳ ಸಂಪರ್ಕದಲಿಲ್ಲ ಎಂಬುದು ಸಾಮಾಜಿಕ ತಾಣಗಳಿಂದಲೇ ಸ್ಪಷ್ಟವಾಗುವ ಸಂಗತಿ. ಕೆಲವು ರಾಜಕೀಯ ಪಕ್ಷಗಳು ಸೆಕ್ಯುಲರ್‌ವಾದದ ಹೆಸರಿನಲ್ಲಿ ಮುಸಲ್ಮಾನರ ಮಾತಬ್ಯಾಂಕ್ ಸೃಷ್ಟಿಸಿಕೊಂಡು ಅವರನ್ನು  ಮುಖ್ಯವಾಹಿನಿಗೆ ಬಾರಲು ಬಿಡದೆ, ಉದ್ದೇಶಪೂರ್ವಕವಾಗಿ ಶಿಕ್ಷಣದಿಂದ ವಂಚಿಸುತ್ತಿವೆ ಎಂಬುದು ಜಗಜ್ಜಾಹೀರು. ಆದರೆ ಹೆಚ್ಚಾಗಿ ಮುಸಲ್ಮಾನರ್ಯಾರು ಕಾಣಿಸಿಕೊಳ್ಳದ ಸಾಮಾಜಿಕ ತಾಣಗಳಲ್ಲಿ ಮಾತ್ರ ಇಂಥ ವಿಷಯಗಳನ್ನು ಚರ್ಚಿಸಿದರೆ ಮುಸಲ್ಮಾನ ಸಮಾಜ ಜಾಗೃತವಾಗುವುದಾದರೂ ಹೇಗೆ? ಇದನ್ನೊಮ್ಮೆ ಯೋಚಿಸಬೇಕಲ್ಲವೇ? ಇನ್ನು ಮಾಹಿತಿಯ ಖನಿಜವಾಗಿರುವ ಅಂತರ್ಜಾಲದಂತಹ ಪ್ರಭಾವಶಾಲಿ ಮಾಧ್ಯಮಗಳು, ನಮ್ಮ ಬಹುತೇಕ ಗ್ರಾಮಗಳನ್ನು ಪ್ರವೇಶಿಸಲು ಯಾಕೆ ವಿಫಲವಾಗಿವೆ, ಗ್ರಾಮಗಳ ಮೇಲೆ, ಗ್ರಾಮಸ್ಥರ ಮೇಲೆ, ಕೃಷಿಯ ಮೇಲೆ  ಸರ್ಕಾರದ ನಿರ್ಲಕ್ಷ್ಯ ಎಷ್ಟರ ಮಟ್ಟಿಗಿದೆ ಎಂಬುದನ್ನೂ ಒಂದು ಕಿರುಚಿತ್ರದ ಮೂಲಕವೋ, ಪಿ.ಪಿ.ಟಿಯ ಮೂಲಕವೋ ಗ್ರಾಮ ಗ್ರಾಮಗಳಲ್ಲಿ ಪ್ರದರ್ಶಿಸಿದರೆ ದೇಶಭಕ್ತರೂ, ನೈಜ ಜಾತ್ಯತೀತರೂ ಆದ ಗ್ರಾಮನಿವಾಸಿಗಳು ಬದಲಾವಣೆ ಚಳುವಳಿಯ ಮುಂಚೂಣಿಯಲ್ಲಿರುತ್ತಾರೆ ಎಂಬುದಕ್ಕೆ ಯಾವ ಅನುಮಾನವೂ ಬೇಡ.
ಸಮಯಾನುಸಾರ ಮಾರಕ ಪಾಪ್ಯುಲಿಸ್ಟ್ ನೀತಿಗಳನ್ನು ಜಾರಿಗೊಳಿಸುತ್ತಾ, ಯಾವುದೇ ಕಾರಣಕ್ಕೂ  ಕಡುಬಡವರು ಸ್ವಾವಲಂಬಿಗಳಾಗದಂತೆ ನೋಡಿಕೊಂಡು, ತಮ್ಮ ಸ್ವಾರ್ಥಕ್ಕಾಗಿ, ಅವರನ್ನು ಜೀವನಪರ್ಯಂತ ಕಡುಬಡವರನ್ನಾಗಿಯೇ ಉಳಿಸಬೇಕೆಂಬ ಸರ್ಕಾರಗಳ ಹುನ್ನಾರವನ್ನು ಬಡವರ ಮುಂದೆ ತೆರೆದಿಡಬೇಕಿದೆ.  ಬಡವರ ಉದ್ಧಾರದಿಂದ ಮಾತ್ರ ದೇಶದ ಉದ್ಧಾರ ಸಾಧ್ಯವೆಂಬುದನ್ನು ಅವರಿಗೆ ಮನದಟ್ಟುಮಾಡಬೇಕಿದೆ,  ಸಾಮಾಜಿಕ ತಾಣಗಳಲ್ಲಿ ಸಕ್ರಿಯವಾಗಿರುವ ಜಾಗೃತ ಸಮಾಜ, ಈ ವರ್ಗದ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾದರೆ ಬದಲಾವಣೆಯ ಗಾಳಿಗೆ ಮತ್ತಷ್ಟು ವೇಗ ದೊರಕುವುದರಲ್ಲಿ ಸಂಶಯ ಬೇಡ.
ಯಾವುದೇ ರಾಜಕೀಯ ಪಕ್ಷದ ಕಾರ್ಯಕರ್ತನಾಗದೇ, ಬೆಂಬಲಿಗನಾಗದೆಯೇ ದೇಶವಿರೋಧಿ ಆಡಳಿತದ ವಿರುದ್ಧ ಸಾಮಾಜಿಕ ತಾಣಗಳಲ್ಲಿ  ಜಾಗೃತಿ ಮೂಡಿಸಿದಲ್ಲಿ, ಮತ್ತೊಂದು ವರ್ಗದ ಜನತೆಯೂ ಕೂಡ ಅದನ್ನು ಪ್ರಾಮಾಣಿಕವಾಗಿ ಸ್ವೀಕರಿಸಿ ಬದಲಾವಣೆಯೆಂಬ ಚಪ್ಪಾಳೆಗೆ ಕೈಜೋಡಿಸುತ್ತಾರೆ. ಈ ನಿಟ್ಟಿನಲ್ಲಿ ಅದಾಗಲೇ ಸಹಸ್ರಾರು ಸಂಖ್ಯೆಗಳಲ್ಲಿ ದೇಶಭಕ್ತರು ಸಂಘಟಿತರಾಗುತ್ತಿದ್ದಾರೆ. ವಿವಿಧ ಬ್ರಿಗೇಡ್‌ಗಳು, ಆರ್ಮಿಗಳು ಮುಂತಾದ ಹೆಸರುಗಳಲ್ಲಿ ಸಾಮಾಜಿಕ ತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಯಾವುದೇ ಪಕ್ಷದ ಬ್ಯಾನರ್ ಹಿಡಿಯದೆ ಯುವಜನ ಸಕ್ರಿಯರಾಗಿರುವುದು ನೂತನ ಕಾಂಗ್ರೆಸ್ ಮುಕ್ತ, ಭಾರತಪರ ಸರ್ಕಾರ ಬರುವುದರ ಮುನ್ಸೂಚನೆಯೆಂಬಂತೆ ತೋರುತ್ತಿದೆ.  ಆದರೆ, ಇದರ ವಿಸ್ತಾರ ಹೆಚ್ಚಾಗಬೇಕಿದೆ.

- ವಿಕಾಸ್ ಪುತ್ತೂರು
mails4vikas@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement