ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಬುದ್ಧಿಜೀವಿಗೆ ಸಿಗಲಿ ಸದ್ಬುದ್ಧಿ!

ನೀಲಿಚಿತ್ರದರಸಿ ಸನ್ನಿ ಲಿಯಾನ್- ಆದರ್ಶನಾರಿ, ಪತಿವೃತಾ ಶಿರೋಮಣಿ ಒಂದು ಸಂಶೋಧನಾ ಕೃತಿ, ಒಸಾಮಾ ಬಿನ್ ಲಾಡೆನ್...

Rashmi Kasaragodu
Updated On : 3 Sept 2013, 12:13 pm

ನೀಲಿಚಿತ್ರದರಸಿ ಸನ್ನಿ ಲಿಯಾನ್- ಆದರ್ಶನಾರಿ, ಪತಿವೃತಾ ಶಿರೋಮಣಿ ಒಂದು ಸಂಶೋಧನಾ ಕೃತಿ, ಒಸಾಮಾ ಬಿನ್ ಲಾಡೆನ್- ಮಹಾ ಮಾನತಾವಾದಿ: ಒಂದು ಹೊಸ ಬೆಳಕು, ಉಮೇಶ್ ರೆಡ್ಡಿ- ಅವನೊಳಗಿನ ದಿವ್ಯ ಹೆಣ್ಣು ಹೃದಯ., ಭಟ್ಕಳ್ ಬ್ರದರ್ಸ್- ಲೈಕ್ ನೋ ಅದರ್ಸ್, ಭಾರತೀಯ ಸನಾತನ ಸಂಸ್ಕೃತಿಯ ಉಳಿವು - ಬುದ್ಧಿಜೀವಿಗಳ ನಿಲುವು.
ಹೀಗೆ ಅಸಂಬದ್ಧ ಅವಿವೇಕಿ ಸಾಹಿತಿಗಳೆಂಬ ಸಮಾಜಘಾತಕರಿಂದ ಮೇಲೆ ಉದಾಹರಿಸಲಾದ ಕಾದಂಬರಿಗಳು, ಕೃತಿಗಳು ಕೆಲವೇ ದಿನಗಳಲ್ಲಿ ಲಭಿಸುವ ಭಾಗ್ಯ ಕರ್ನಾಟಕದ ಓದುಗರಿಗೆ ಪ್ರಾಪ್ತವಾದರೆ ಆಶ್ಚರ್ಯವಿಲ್ಲ. ಆಗ ಇಂದಿನ ಬುದ್ಧಿಜೀವಿಗಳೂ, 'ಮಹಾಪೀಠಸ್ಥರು' ಇಂತಹ ಲೇಖಕರನ್ನು ಅವರ ಪುಸ್ತಕವನ್ನು ತಲೆಯಮೇಲಿಟ್ಟುಕೊಂಡು ಪ್ರಜಾಪ್ರಭುತ್ವದಲ್ಲಿ ಮೆರೆಸುವುದೂ ಅಸಾಧ್ಯವಲ್ಲ. ಒಂದೊಮ್ಮೆ ಇಂತಹ ಪುಸ್ತಕಗಳು ವಿವೇಕವಂತರ ಪ್ರಜ್ಞೆಯಿಂದ ನಿಷೇಧಗೊಂಡರೆ ಅಥವಾ ಮುಟ್ಟುಗೋಲು ಹಾಕಿಕೊಂಡಾಗ ಅದು ಪ್ರಜಾಪ್ರಭುತ್ವದ ವಿರುದ್ಧ ಎಂದಾದರೆ, ಅದೇ ಅನೈತಿಕ ಪುಸ್ತಕಗಳಿಂದ ಅದೇ ಬಹುಸಂಖ್ಯಾತ ಹಿಂದೂ ಪ್ರಜೆಗಳ ಭಾವನೆಗಳಿಗೆ ದಕ್ಕೆ ತರುವುದೂ ಪ್ರಜಾಪ್ರಭುತ್ವದ ವಿರೋಧವೇ ಅಲ್ಲವೇ?
ಇಷ್ಟಕ್ಕೂ ಢುಂಢಿಯಂತಹ ತರಲೆ ಪುಸ್ತಕವನ್ನು ಮುಟ್ಟುಗೋಲು ಹಾಕಲು ಆದೇಶಿಸಿರುವುದು ಯಾವುದೇ ಜೀವಿಗಳಲ್ಲ. ಅದು ಪ್ರಜಾಪ್ರಭುತ್ವದ ಹಿತ ಕಾಯುವ ಘನ ನ್ಯಾಯಾಲಯ. ಅಂತಹ ನ್ಯಾಯಾಲಯದ ಆದೇಶವನ್ನೇ ಯಾರೇ ಆಗಲಿ ವಿರೋಧಿಸುವುದು ಪ್ರಜಾಪ್ರಭುತ್ವದಲ್ಲಿ ನೈತಿಕವಾದುದಲ್ಲ. ಈಗಾಗಲೇ ಏನುಬೇಕಾದರೂ ಹೇಗೆ ಬೇಕಾದರೂ ಎಂಬ ಮಾತು ರಾಜಕಾರಣ ಮತ್ತು ಸಿನಿಮಾರಂಗದಲ್ಲಿ ಚಾಲ್ತಿಗೊಂಡಿದೆ. ಈಗ ಸರಸ್ವತಿ ಪುತ್ರರ ಕ್ಷೇತ್ರವೆಂದು ಘನತೆ ಪಡೆದಿರುವ ಸಾಹಿತ್ಯವಲಯದಲ್ಲೂ ಮೇಲಿನ ಮಾತು ಇಣುಕುತ್ತಿರುವುದು ದೌರ್ಭಾಗ್ಯ.
ಒಂದು ವಂಶದಲ್ಲಿ ಮಗು ಬೆಳೆದು ಆತ ಎಷ್ಟೇ ಪ್ರಚಂಡ ಬುದ್ದಿವಂತನಾಗಲಿ ತಂತ್ರಜ್ಞನಾಗಲಿ ತನ್ನ ತಂದೆ ಈತನೇ ಅಥವಾ.. ಈಕೆಯೇ ತನ್ನ ತಾಯಿಯೇ ಎಂಬ ಅಪನಂಬಿಕೆಯಾಗಲಿ ಅನುಮಾನವಾಗಲಿ ಎಂದು ಉದ್ಭವವಾಗುವುದಿಲ್ಲ. ಹಾಗೆಯೇ ತ್ರಿಲೋಕಾದಿ ಪೂಜಿತನಾದ ಗಣೇಶ ದೈವವು ಜಗತ್ತಿನಾದ್ಯಾಂತ ಜಾತಿ ಭೇದಗಳಿಲ್ಲದೆ ಎಲ್ಲರ ಮನ ಮನೆಗಳಲ್ಲಿ ನಂಬಿಕೆಯ ದಿವ್ಯ ಭಗವಂತನಾಗಿ ಆವರಿಸಿಕೊಂಡಿದ್ದಾನೆ. ಅಂತಹ ನಂಬಿಕೆಯಿಂದಲೇ ತಮ್ಮ ಕಷ್ಟಕಾರ್ಪಣ್ಯಗಳನ್ನು ಆತನಿಗೆ ನಿವೇದಿಸಿಕೊಂಡು ತಾವು ಆರಂಭಿಸುವ ಪ್ರತೀ ಕಾರ್ಯಗಳಲ್ಲೂ ಆತನಿಗೆ ಪೂಜಿಸಿ ವಂದಿಸಿ ಆತ್ಮಸ್ಥೈರ್ಯವನ್ನು ಪಡೆದು ಮುನ್ನಡೆಯುತ್ತಾರೆ. ಹೀಗಿರುವಾಗ ಗಣೇಶನ ಕುರಿತು ಅಣಕು ಬರಹ ರಚಿಸುವ ಯಾವುದೋ ಕೃತಿಯನ್ನು ನಿಷೇಧಿಸಿದರೆ ಒಬ್ಬ ಅವಿವೇಕಿ ಮೂಲೆ ಸೇರುತ್ತಾನೆ. ಆದರೆ ಅದರಿಂದ ಕೋಟ್ಯಾಂತರ ಆಸ್ತಿಕರಿಗೆ ಆಗುವ ನೋವನ್ನು ನಿವಾರಿಸಿದಂತಾಗುತ್ತದೆ. ಇದೇ ನಿಜವಾದ ಪ್ರಜಾಪ್ರಭುತ್ವದ ಸಾರ್ಥಕ ಆಶಯ ಎಂಬುದು 'ಮಹಾಪೀಠಸ್ಥರು'ಗಳು ತಿಳಿದುಕೊಳ್ಳಬೇಕಿದೆ. ಒಂದು ವೃತ್ತಿಯಲ್ಲಿ ಒಬ್ಬರಿಗೊಬ್ಬರು ಬಿಟ್ಟುಕೊಡದೆ ಇರುವುದು ಒಳ್ಳೆಯದೇ. ಆದರೆ ಬಹುಸಂಖ್ಯಾತ ಸಮಾಜದಲ್ಲಿನ ನಂಬಿಕೆಗಳನ್ನು ಹಾಳುಗೆಡಲು ಯತ್ನಿಸುವ ವಿಕೃತಿಗಳ ಪರ ಮಾತನಾಡುವುದು, ಅವರನ್ನು ಬೆಂಬಲಿಸುವುದು ಅವರವರ ಒಂದೇ ವೃತ್ತಿ-ಪ್ರವೃತ್ತಿಯನ್ನು ಸಾಕ್ಷೀಕರಿಸುತ್ತದೆ ಅಲ್ಲವೇ?
ಇವರುಗಳ ಸವಾರಿ ಏನಿದ್ದರೂ ಬಹುಸಂಖ್ಯಾತ (ಭಾರತದಲ್ಲಿ ಮಾತ್ರ. ಜಗತ್ತಿನಲ್ಲಿ ಅಲ್ಪಸಂಖ್ಯಾತರೇ) ಹಿಂದೂಗಳ ಮೇಲೆ ಹೊರತು ಅನ್ಯಧರ್ಮೀಯರ ಮೇಲಲ್ಲ. ಹಾಗೇನಾದರು ಇಂತಹ ಯಡವಟ್ಟು ಬರಹಗಾರರು ಅನ್ಯಧರ್ಮೀಯರ ಭಾವನೆಗಳಿಗೆ ಧಕ್ಕೆ ತರುವಂತಹ ಕೆಲಸ ಮಾಡಿದರೆ ಅನ್ಯಧರ್ಮೀಯರು ಒತ್ತೊಟ್ಟಿಗಿರಲಿ ನಮ್ಮ ಬುದ್ಧಿಜೀವಿಗಳೇ ಆತನ್ನನ್ನು ಮಾನಸಿಕವಾಗಿ ಗಲ್ಲಿಗೇರಿಸುತ್ತಿದ್ದರು.

- ದೇ. ವಿ. ಮಹೇಶ್ವರ ಹಂಪಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement