ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಹುದ್ದೆ ಖಾಲಿ ಇಡುವುದು ಜನಕ್ಕೆ ಮಾಡುವ ದ್ರೋಹ

Mainashree
Updated On : 4 Sept 2013, 12:04 pm

ಇತ್ತೀಚೆಗೆ ಕನ್ನಡಪ್ರಭ ದಿನಪತ್ರಿಕೆಯಲ್ಲಿ ಒಂದು ರೋಚಕ ಸುದ್ದಿ ಪ್ರಕಟವಾಗಿತ್ತು. ಕರ್ನಾಟಕದಲ್ಲಿ ಸುಮಾರು 1.25ಲಕ್ಷ ಸರಕಾರಿ ಹುದ್ದೆಗಳು ಖಾಲಿ ಬಿದ್ದಿವೆ ಎಂದು. ಸುದ್ದಿ ರೋಚಕವೂ ಆಘಾತಕಾರಿಯೂ ಹೌದು. ಯಾಕೆಂದರೆ ಒಟ್ಟು ಹುದ್ದೆಗಳ ಶೇಕಡಾ 20ಕ್ಕಿಂತಲೂ ತುಸು ಹೆಚ್ಚು ಸಂಖ್ಯೆಯ ಹುದ್ದೆಗಳು ಖಾಲಿ ಇವೆ. ದೀರ್ಘಕಾಲ ಹುದ್ದೆ ಖಾಲಿ ಇರುವುದರಿಂದ ನೈಜ ಉಳಿತಾಯವಾಗುತ್ತದೆಯೇ ಅಥವಾ ಸಾರ್ವಜನಿಕರಿಗೆ ವಂಚನೆಯಾಗುತ್ತದೆಯೇ ಎಂಬ ವಿಮರ್ಶೆ ಅಗತ್ಯ. ಆರ್ಥಿಕ ಮುಗ್ಗಟ್ಟು ಕಾಡಿದಾಗ ಸರ್ಕಾರ ಆರ್ಥಿಕ ಸಂಯಮ ಅರ್ಥಾತ್ ವೆಚ್ಚ ಕಡಿಮೆ ಮಾಡುವ (austirity measures) ಕ್ರಮ ಅನುಸರಿಸುವುದು ವಾಡಿಕೆ. ಇಂಥ ಕ್ರಮಗಳಲ್ಲಿ ಸರಕಾರದ ಮೊದಲ ಆಯ್ಕೆ ಇರುವುದು ಹುದ್ದೆ ಭರ್ತಿ ಮಾಡದೆ ಇರುವುದರಲ್ಲಿ. ಹೀಗೆ ಉಳಿತಾಯವಾದ ಹಣವನ್ನು ಅಭಿವೃದ್ಧಿಯ ಹೆಸರಲ್ಲಿ ಸೇತುವೆ ನಿರ್ಮಾಣಕ್ಕೋ ಅಥವಾ ಇತರೇ ಕಾಮಗಾರಿಗೋ ಹರಿಸಿ ಆಯವ್ಯಯದಲ್ಲಿ ಮರು ಹೊಂದಾಣಿಕೆ ಮಾಡಿಕೊಂಡು ಆಡಳಿತ ನಡೆಸುವುದು ಈಗ ಚಾಲ್ತಿಯಲ್ಲಿದೆ. ಆದರೆ ಈ ಕ್ರಮ ಸಾರ್ವಜನಿಕ ಹಿತಾಸಕ್ತಿಗೆ ಪೂರಕವಾಗದೆ ಮಾರಕವಾಗುತ್ತದೆ ಎನ್ನುವುದು ವಿಷಾದನೀಯ.
ಸಾರ್ವಜನಿಕ ಬದುಕಿಗೆ ಅನುಕೂಲಕರವಾದ ವ್ಯವಸ್ಥೆಯನ್ನು ಒದಗಿಸುವುದು ಪ್ರಜಾಸತ್ತೆಯಲ್ಲಿ ಸರ್ಕಾರದ ಕರ್ತವ್ಯ. ಸರ್ಕಾರ ತನ್ನ ದಿನನಿತ್ಯದ ಆಡಳಿತದಲ್ಲಿ ಈ ವ್ಯವಸ್ಥೆ ಅಬಾಧಿತವಾಗಿರಬೇಕೆಂಬುದು ಆಶಯ. ಅದಕ್ಕಾಗಿ ಅಗತ್ಯವುಳ್ಳ ನೌಕರಶಾಹಿಯನ್ನು ನಿಯೋಜಿಸಿಕೊಳ್ಳಲು ಸಂವಿಧಾನದ ಪರಿಚ್ಛೇದ 309ರಲ್ಲಿ ಅವಕಾಶ ಕಲ್ಪಿಸಲಾಗಿದೆ. ಈ ನಿಯೋಜನೆಗೆ ಸರಕಾರ ಮೊದಲು ಹುದ್ದೆಗಳನ್ನು ಸ್ಥಾಪನೆ ಮಾಡಿಕೊಂಡು ಬಳಿಕ ನೌಕರರನ್ನು ನೇಮಿಸಿಕೊಳ್ಳಬೇಕೆಂದಾಯ್ತು. ಹೀಗೆ ಹುದ್ದೆಗಳನ್ನು ಸೃಷ್ಟಿಸುವಾಗ ಸಾರ್ವಜನಿಕ ಹಿತಾಸಕ್ತಿ ಪ್ರಮುಖ ಪಾತ್ರ ವಹಿಸುತ್ತದೆ. ಹುದ್ದೆ ನಿರ್ವಹಿಸಬೇಕಾದ ಸೇವೆಯ ಅಗತ್ಯತೆ, ಕೆಲಸದ ಪ್ರಮಾಣ, ಶಿಕ್ಷಣಾರ್ಹತೆ, ವೇತನ, ವೇತನ ಪಾವತಿಗೆ ಆಯವ್ಯಯದಲ್ಲಿ ಹೊಂದಾಣಿಕೆ ಇತ್ಯಾದಿ ಆಡಳಿತಾತ್ಮಕ ವಿಚಾರಗಳನ್ನೆಲ್ಲಾ ಕೂಲಂಕುಷವಾಗಿ ಚರ್ಚಿಸಿ, ವಿವೇಚಿಸಿ, ಸಾರ್ವಜನಿಕ ಹಿತದೃಷ್ಟಿಯಿಂದ ಹುದ್ದೆ ಅಗತ್ಯವೆಂಬ ತೀರ್ಮಾನಕ್ಕೆ ಬಂದ ನಂತರ ಸರ್ಕಾರ ಮಂಜೂರಾತಿ ನೀಡುತ್ತದೆ. ಹಾಗೆ ಸೃಜಿಸಿದ ಹುದ್ದೆ ಯಾವತ್ತೂ ಭತರ್‌ಯಾಗಿದ್ದು ನಿರ್ವಹಣಾ ಸ್ಥಿತಿಯಲ್ಲಿದ್ದರೆ ಉದ್ದೇಶ ಅರ್ಥಪೂರ್ಣವಾದೀತು. ಹುದ್ದೆ ಖಾಲಿ ಇದ್ದರೆ ಸಾರ್ವಜನಿಕ ಹಿತಾಸಕ್ತಿ ತತ್ವಕ್ಕೆ ವಿರೋಧವೆಂದು ಬೇರೆ ಹೇಳಬೇಕಾಗಿಲ್ಲ.
ಈಗ ಸರ್ಕಾರದಲ್ಲಿ ಅಪಾರ ಸಂಖ್ಯೆಯ ಹುದ್ದೆಗಳು ಖಾಲಿ ಇವೆ. ಇದರಿಂದ ಸರಕಾರ ತನ್ನ ದಿನನಿತ್ಯದ ಆಡಳಿತವನ್ನು ಪರಿಣಾಮಕಾರಿಯಾಗಿ ನಡೆಸಲು ಸಾಧ್ಯವಾಗುತ್ತಿಲ್ಲ. ಸಾರ್ವಜನಿಕರ ಬೇಕುಗಳು ಕ್ಲಪ್ತ ಕಾಲದಲ್ಲಿ ಈಡೇರುತ್ತಿಲ್ಲ. ಅದಕ್ಕಾಗಿ ಜನ ಸಾಮಾನ್ಯರು ಪರದಾಡುವ ಸ್ಥಿತಿ ಪ್ರಾಪ್ತವಾಗಿದೆ. ಇದು ಸಾರ್ವಜನಿಕರ ಹಕ್ಕಿನ ವಂಚನೆ ಎಂದರೆ ತಪ್ಪಾದೀತೇ? ಈ ಮಾತನ್ನು ಪುಷ್ಟೀಕರಿಸಲು ಜನ ಸಾಮಾನ್ಯರಿಗೆ ಯಾವತ್ತೂ ಅಗತ್ಯವುಳ್ಳ ಕಂದಾಯ ಇಲಾಖೆ ಹಾಗೂ ಅವಶ್ಯಕ ಸೇವೆಗಳಡಿ ಬರುವ ಆರೋಗ್ಯ ಇಲಾಖೆಯ ಕಾರ್ಯವೈಖರಿಯ ಉದಾಹರಣೆ ಪ್ರಸ್ತುತವೆನಿಸುತ್ತದೆ. ಪ್ರತಿ ಕಂದಾಯ ಗ್ರಾಮಕ್ಕೆ ಒಂದು ಗ್ರಾಮಕರಣಿಕರ ಹುದ್ದೆ ಮಂಜೂರು ಇದೆ. ಅವಿಭಜಿತ ದಕ್ಷಣಕನ್ನಡ ಜಿಲ್ಲೆಯಲ್ಲಿ ಸದ್ಯ ಅಧಿಕ ಸಂಖ್ಯೆಯ ಹುದ್ದೆ ಖಾಲಿ ಇದೆ. ಇದೇ ಪರಿಸ್ಥಿತಿ ಕರ್ನಾಟಕದ ಇತರೇ ಭಾಗದಲ್ಲಿಯೂ ಇರಬಹುದು. ಒಬ್ಬ ಕರಣಿಕನಿಗೆ ಸುಮಾರು ಮೂರ್ನಾಲ್ಕು ಗ್ರಾಮಗಳ ಉಸ್ತುವಾರಿ ವಹಿಸಿಕೊಡಲಾಗಿದೆ. ಆತ ದಿನಕ್ಕೊಂದು ಗ್ರಾಮದಲ್ಲಿ ಮೊಕ್ಕಾಂ ಮಾಡಬೇಕಾದ ಸ್ಥಿತಿ ಇದೆ. ಕಾರಣಾಂತರದಿಂದ ನಿಗದಿತ ದಿನದಂದು ಮೊಕ್ಕಾಂ ಹೂಡಲು ತೊಂದರೆಯಾದರೆ ಮುಂದಿನ ವಾರ ಅದೇ ದಿನಕ್ಕಾಗಿ ಕಾಯಬೇಕು. ಆ ದಿನ ಅಕಸ್ಮಾತ್ ನೌಕರನಿಗೆ ಸೌಖ್ಯವಿಲ್ಲ ಅಥವಾ ತಾಲೂಕಿನಿಂದ ಬಂದ ಕರೆಯ ನಿಮಿತ್ತ ನಿಗದಿತ ಗ್ರಾಮಕ್ಕೆ ಬರಲಾಗದಿದ್ದರೆ ಅರ್ಜಿದಾರರು ಮತ್ತೊಂದು ವಾರದ ತನಕ ಕಾಯಬೇಕು.
ಕರ್ನಾಟಕ ಸರ್ಕಾರದಲ್ಲಿ ಈಗ ಸಕಾಲ ಯೋಜನೆ ಅನುಷ್ಠಾನದಲ್ಲಿದೆ. ಇದು ದಾಖಲೆಗಳ ಪ್ರತಿ ನೀಡಲು ಮಾತ್ರಯೋಗ್ಯ. ಕೆಲವು ಅರ್ಜಿಗಳ ವಿಲೇವಾರಿಗೆ ಅಧಿಕಾರಿಗಳು ಸ್ಥಳ ತನಿಖೆ ನಡೆಸಬೇಕಾಗುತ್ತದೆ. ಅಂಥ ಸ್ಥಿತಿಯನ್ನು ಕಲ್ಪಿಸಿಕೊಂಡಾಗ ಈ ಪ್ರಭಾರ ಅಧಿಕಾರಿಗಳಿಂದ ಯಾವ ವೇಗದಲ್ಲಿ ಸೇವೆ ಪಡೆಯಬಹುದೆಂಬುದರ ಅರಿವಾದೀತು. ಈ ನಡುವೆ ಅರ್ಜಿದಾರರು ಅಧಿಕಾರಿ- ನೌಕರರ ಸಂಪರ್ಕಕ್ಕಾಗಿ ಅಲೆದಾಟ, ದುಡಿತದ ಸಮಯ ನಷ್ಟ. ಕೈಯಲ್ಲಿರುವ ಬಿಡಿಕಾಸು ಕೂಡ ಈ ಓಡಾಟದ ಕಾಲದಲ್ಲಿ ವ್ಯಯವಾಗುತ್ತದೆ. ಇದು ಕಂದಾಯ ಇಲಾಖೆಯಲ್ಲಿನ ಸಿಬ್ಬಂದಿ ಕೊರತೆಯ ಪರಿಣಾಮ.
ಇನ್ನು ಆರೋಗ್ಯ ಇಲಾಖೆಯ ಸಿಬ್ಬಂದಿ ಸ್ಥಿತಿಗತಿ ಅವಲೋಕಿಸುವ. ಇದು ಅವಶ್ಯಕ ಸೇವೆ  (essential service) ಅಡಿ ಬರುವ ಇಲಾಖೆ. ಸುಮಾರು 75,700 ಒಟ್ಟು ಮಂಜೂರಾದ (sanctioned) ಹುದ್ದೆಗಳಿವೆ. ಈಗ 2535 ಅಧಿಕಾರಿಗಳ ಹಾಗೂ 11640 ನೌಕರರ ಒಟ್ಟು 19175 ಹುದ್ದೆಗಳು ಖಾಲಿ ಇವೆ ಎನ್ನುವುದು ಅಧಿಕೃತ ವರದಿ. ಅಂದರೆ ಶೇಕಡಾ 25ರಷ್ಟು ಹುದ್ದೆ ಖಾಲಿ. ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಮಲೇರಿಯಾ ಹಾಗೂ ಡೆಂಗ್ಯೂ ಪೀಡಿತರ ಮತ್ತವರಲ್ಲಿ ಕೆಲವರು ಮೃತಪಟ್ಟಿರುವ ವರದಿಗಳನ್ನು ಪತ್ರಿಕೆಗಳಲ್ಲಿ ಓದುತ್ತೇವೆ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ವೀಕ್ಷಿಸುತ್ತೇವೆ. ಈ ರೋಗಗಳ ಮುಖ್ಯ ಲಕ್ಷಣ ಜ್ವರ ಮತ್ತು ಇದು ಸೊಳ್ಳೆಗಳ ಮೂಲಕ ಹರಡುತ್ತದೆ. ರೋಗಿಯನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡುವ ಕಾರ್ಯ ಹಾಗೂ ರೋಗ ಹರಡಿಸಬಲ್ಲ ವಾಹಕ ಸೊಳ್ಳೆಗಳನ್ನು ನಿಯಂತ್ರಿಸುವ ಕೆಲಸ ಜತೆ ಜತೆಯಾಗಿ ಸಾಗಬೇಕಾದ ಯೋಜನೆ. ಸೊಳ್ಳೆಗಳ ಸಂಪೂರ್ಣ ನಿರ್ಮೂಲನೆ ಅಸಾಧ್ಯವಾದರೂ ನಿಯಂತ್ರಣದ ಕೆಲಸ ನಿರಂತರ ನಡೆಯಬೇಕು. ಆದರೆ ರೋಗಪತ್ತೆ ಮಾಡಿ ಚಿಕಿತ್ಸೆ ನೀಡುವುದು ಸುಲಭ ಸಾಧ್ಯ. ಅದಕ್ಕೆ ಬೇಕಾಗಿರುವುದು ನಿಯತಕಾಲಿಕ ಸರ್ವೇಕ್ಷಣೆ (surveillance). ರೋಗ ಬೇಗ ಪತ್ತೆ ಮಾಡಿ ತಕ್ಷಣ ಚಿಕಿತ್ಸೆ ನೀಡಿದರೆ ಆತನಿಗೆ ರೋಗವಾಸಿಯಾಗುವುದಲ್ಲದೆ ಆತ ಇನ್ನೊಬ್ಬರಿಗೂ ಅಪಾಯಕಾರಿಯಾಗಲಾರ. ಪತ್ತೆ ಹಚ್ಚುವ ಕಾರ್ಯ ನಿಯತಕಾಲಿಕ ಸರ್ವೆಲೆನ್ಸ್‌ನಿಂದ ಮಾತ್ರ ಸಾಧ್ಯ. ಈ ಬಗ್ಗೆ ಸಿಬ್ಬಂದಿ ಬೇಕು, ಮಂಜೂರಾದ ಹುದ್ದೆಗಳೆಲ್ಲ ಭರ್ತಿ ಸ್ಥಿತಿಯಲ್ಲಿದ್ದು ನಿರ್ವಹಣೆ ಸಾಧ್ಯವಾದರೆ ಯೋಜನೆ ಯಶಸ್ವಿಯಾಗುವುದರಲ್ಲಿ ಅನುಮಾನವಿಲ್ಲ. ಆದರೆ ಹೆಚ್ಚಿನ ಹುದ್ದೆಗಳು ಖಾಲಿ. ಪರಿಣಾಮ ಸ್ವಯಂ ವಿವರಣಾತ್ಮಕವಾಗಿದೆ.
ಈ ಪರಿ ಹುದ್ದೆಗಳನ್ನು ಖಾಲಿ ಇರಿಸಿಕೊಂಡು ಅದರಿಂದ ಉಳಿಯಬಹುದಾದ ಹಣದಿಂದ ಅಭಿವೃದ್ಧಿಯ ಹೆಸರಲ್ಲಿ ಸೇತುವೆ ನಿರ್ಮಾಣ ಮಾಡುವುದು ಯಾವ ಪುರುಷಾರ್ಥಕ್ಕೆ? ಸರಕಾರದ ದಿನನಿತ್ಯದ ಆಡಳಿತ ಉತ್ತಮವಿರಬೇಕೆಂಬುದು ಜನ ಸಾಮಾನ್ಯರ ಬಯಕೆ. ಸಿಬ್ಬಂದಿ ಕೊರತೆಯಿಂದ ಆಡಳಿತ ಅಸ್ತವ್ಯಸ್ತವಾದರೆ ಸಾರ್ವಜನಿಕರಿಗೆ ಸಿಗಬೇಕಾದ ತುರ್ತು ಅಗತ್ಯ ಸೇವೆಗಳು ದೊರಕುವುದಿಲ್ಲ. ಅದು ಅವರ ಹಕ್ಕಿನ ವಂಚನೆಗೆ ಸಮ. ಒಂದು ಪ್ರಗತಿ ಪರ ಸರಕಾರ ಆರ್ಥಿಕ ಸಂಯಮ ಅನುಸರಿಸುವ ಉದ್ದೇಶದಿಂದ ಹುದ್ದೆಗಳನ್ನು ದೀರ್ಘಕಾಲ ಖಾಲಿ ಇರಿಸಿಕೊಳ್ಳುವುದು ಸರಿಯಾದ ಕ್ರಮವಲ್ಲ. ಆರ್ಥಿಕ ಸಂಯಮವನ್ನು ಆಡಳಿತದ ಬೇರೆ ಬೇರೆ ಕ್ಷೇತ್ರದಲ್ಲಿ ಪಾಲಿಸಬಹುದು. ಮುಖ್ಯವಾಗಿ ಚುನಾಯಿತ ಪ್ರತಿನಿಧಿಗಳು ಮಾದರಿಯಾಗಬೇಕು. ರಾಜಕಾರಣವೆಂದರೆ ಸೇವಾಕ್ಷೇತ್ರ. ಸಾರ್ವಜನಿಕರ ಸೇವೆಗಾಗಿ ತಮ್ಮನ್ನು ಅರ್ಪಿಸಿಕೊಂಡವರು. ಸಾಮಾನ್ಯ ನೌಕರರಂಥಲ್ಲ. ಒಬ್ಬ ವ್ಯಕ್ತಿ ನೌಕರಿಯನ್ನು ಅವಲಂಬಿಸುವುದೇ ತನ್ನ ಉದರ ನಿಮಿತ್ತಕ್ಕಾಗಿ. ಆದರೆ ರಾಜಕಾರಣಿಗಳು ಹಾಗಲ್ಲ. ತನ್ನೂರಿಗೆ, ತನ್ನ ದೇಶಕ್ಕೆ ಎಷ್ಟಾದರೂ ಸೇವೆ ಸಲ್ಲಿಸಬೇಕೆಂಬ ಗುರಿಹೊತ್ತವರು. ಅವರು ದೇಶ ಆರ್ಥಿಕ ಸಂಕಷ್ಟಕ್ಕೊಳಗಾದಾಗ ಯಾವ ರೀತಿಯ ಸಂಭಾವನೆಯನ್ನೂ ಸ್ವೀಕರಿಸಬಾರದು. ಸರ್ಕಾರಿ ವಾಹನ ಬಳಸುವಾಗಲೂ ಮಿತಿ ಇರಬೇಕು. ಸರ್ಕಾರಿ ಬಂಗ್ಲೆಯಲ್ಲಿ ವಾಸಿಸುವಾಗ ಸರಳತೆಯನ್ನು ಪಾಲಿಸಬೇಕು. ಸಾರ್ವಜನಿಕರಿಗೆ ಮಾದರಿಯಾಗಿರಬೇಕು.
ವಿಪರ್ಯಾಸವೆಂದರೆ ನಮ್ಮ ಚುನಾಯಿತ ಪ್ರತಿನಿಧಿಗಳು ಪುಷ್ಪಕ ವಿಮಾನದಲ್ಲಿ ವಿಹರಿಸುತ್ತಾರೆ. ಯಾವುದು ಬಿಟ್ಟರೂ ವಿದೇಶ ಪ್ರವಾಸ ತ್ಯಜಿಸಿವುದಿಲ್ಲ. ಬೆಂಗಳೂರಿನಲ್ಲಿ ನಡೆಯುವ ಅಧಿವೇಶನಕ್ಕೆ ಒಂದು ದಿನ ಚಕ್ಕರ್ ಕೊಟ್ಟು ವಿಮಾನದಲ್ಲಿ ಬಂದು ಮಂಗಳೂರಿನಲ್ಲಿ ಭೂತದ ಕೋಲದಲ್ಲಿ ಭಾಗವಹಿಸುತ್ತಾರೆ. ಬರಪೀಡಿತ ಪ್ರದೇಶ ವೀಕ್ಷಣೆಗೆ ಹೆಲಿಕಾಪ್ಟರ್‌ನಲ್ಲಿ ಸಂಚರಿಸುತ್ತಾರೆ. ಇವರಿಗೆ ಲಕ್ಸುರಿ ಬಸ್‌ನಲ್ಲಿ ಹಾಗೂ ಹವಾನಿಯಂತ್ರಿತ ರೈಲಿನಲ್ಲಿ ಪ್ರವಾಸ ಉಚಿತ. ಇವರ ಹೆಂಡಿರು ಮಕ್ಕಳಿಗೂ ಸಹಾ. ಇತ್ತ ಒಂದು ರುಪಾಯಿಗೆ ಒಂದು ಕೆ.ಜಿ. ಅಕ್ಕಿ ಕೊಟ್ಟು ಓಟ್ ಗಿಟ್ಟಿಸಿಕೊಳ್ಳುತ್ತಾರೆ. ಈ ರಹಸ್ಯ ಸಾರ್ವಜನಿಕರಿಗೆ ಅರ್ಥವಾಗುತ್ತಿದೆ ಎಂಬ ಸತ್ಯವನ್ನು ನಮ್ಮ ರಾಜಕಾರಣಿಗಳು ಅರ್ಥ ಮಾಡಿಕೊಳ್ಳಲಿ.

- ಬೇಳೂರು ರಾಘವ ಶೆಟ್ಟಿ, ಉಡುಪಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement