ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಗುರುಕುಲವೆಂಬುದು ಈಗ ಇಂಡಸ್ಟ್ರಿ ಅನ್‌ಲಿಮಿಟೆಡ್!

Mainashree
Updated On : 5 Sept 2013, 12:48 pm

ಇಂದು ಶಿಕ್ಷಕರ ದಿನಾಚರಣೆ. ಓದು, ಬರಹ, ಬದುಕು, ಹಿರಿಯರನ್ನ ಗೌರವಿಸುವ ಸಂಸ್ಕಾರವನ್ನ ಕೊಟ್ಟು, ಮಣ್ಣಿನ ಮುದ್ದೆಯಂತಿದ್ದ ಮಕ್ಕಳನ್ನ ತಿದ್ದಿ ತೀಡಿ ಒಂದು ರೂಪ ಕೊಟ್ಟು, ಸುಂದರ ಮೂರ್ತಿಗಳನ್ನಾಗಿ ಮಾಡುವ ಕಲಾವಿದರು ಅವರು. ಮಕ್ಕಳನ್ನ ಯಾವ ದಿಕ್ಕಿನಲ್ಲಿ ಬೇಕಾದರೂ ತೆಗೆದುಕೊಂಡು ಹೋಗುವ ಶಕ್ತಿ ನಮ್ಮ ಶಿಕ್ಷಕರಿಗೆ ಇದೆ. ಅಂದು ಶಾಲಾ ಕೊಠಡಿಗಳಿಲ್ಲದೆ, ಮರಗಳ ಕೆಳಗೆ, ಗುರುಗಳು ಪಾಠಗಳನ್ನು ಮಾಡುತ್ತಿದ್ದರು. ಕೇವಲ ಸಂಬಳಕ್ಕಾಗಿ ಕೆಲಸ ಮಾಡದೆ ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಮಾಡುತ್ತಿದ್ದರು. ಇದನ್ನು ಬಹಳ ಚನ್ನಾಗಿ ಅರಿತಿದ್ದರು ಅಂದಿನ ಶಿಕ್ಷಕರು. ನಾನು ಎಸ್.ಎಸ್.ಎಲ್.ಸಿ, ಪಿ,ಯು.ಸಿ ಮುಗಿಸಿ, ಬಿ.ಎ.ಗೆ ಬೆಂಗಳೂರಿನ ಮಹಾರಾಣಿ ಮಹಿಳಾ ಕಾಲೇಜಿನಲ್ಲಿ, ಕನ್ನಡ ಐಚ್ಛಿಕ ವಿಷಯ ತೆಗೆದುಕೊಂಡು ಪ್ರವೇಶ ಪಡೆದೆ. ಅಲ್ಲಿ ನನಗೆ ಕನ್ನಡಕ್ಕೆ ಅಧ್ಯಾಪಕರಾಗಿ ನಾಡೋಜ ಡಾ. ಕಮಲಾ ಹಂಪನ ಹಾಗೂ ಪ್ರೊ ಅ.ರಾ.ಮಿತ್ರರವರು ಗುರುಗಳಾಗಿ ದೊರೆತದ್ದು, ನನ್ನ ಅದೃಷ್ಟವೇ ಸರಿ. ಇದು ನನಗೆ ಬಹಳ ಹೆಮ್ಮೆಯ ವಿಷಯ.
ಆದರೆ ಇಂದಿನ ಶಿಕ್ಷಣಕ್ಕೂ, ಶಿಕ್ಷಕರಿಗೂ ಅಜಗಜಾಂತರ ವ್ಯತ್ಯಾಸವಿದೆ. ಈಗ ಶಿಕ್ಷಣವನ್ನೇ ವ್ಯಾಪಾರ ಮಾಡಿಕೊಂಡಿರುವ ಶಿಕ್ಷಣ ಸಂಸ್ಥೆಗಳು ದಿನೆ ದಿನೆ ಹೆಚ್ಚುತ್ತಿವೆ. ಇಡೀ ಶಿಕ್ಷಣ ವ್ಯವಸ್ಥೆಯೇ ಇಂದು ಭ್ರಷ್ಟತೆಯಲ್ಲಿ ಮುಳುಗಿದೆ. ಈ ಕ್ಷೇತ್ರ ಇಂದು ಬಹು ದೊಡ್ಡ ಉದ್ಯಮವಾಗಿದೆ. ಶಿಕ್ಷಣ ಇಂದು ಉಳ್ಳವರ ಸ್ವತ್ತಾಗಿಬಿಟ್ಟಿದೆ. ಖಾಸಗಿ ಶಾಲೆಗಳು ಡೊನೇಷನ್ ಮೂಲಕ ದೊಡ್ಡ ಮೊತ್ತದ ಹಣವನ್ನು ದೋಚುತ್ತಾ ದೊಡ್ಡ ದಂಧೆಗಳನ್ನು ಮಾಡಲಾರಂಭಿಸಿವೆ. ಇಂದಿನ ಹಾಗೆ ಮನೆ ಪಾಠದ ಅವಶ್ಯಕತೆಯೇ ಅಂದು ನಮಗಿರಲಿಲ್ಲ. ಈಗ ಆ ಮೂಲಕ ಹಣ ಮಾಡುವ ಶಿಕ್ಷಕರ ದೊಡ್ಡ ಗುಂಪೇ ಇದೆ. ನಾವು ಶಾಲೆಯಲ್ಲಿ ಒಮ್ಮೆ ಪಾಠ ಕೇಳಿದರೆ ಸಾಕು ಮತ್ತೆ ಮನೆಯಲ್ಲಿ ಓದುವ ಅಗತ್ಯವೆ ನಮಗಿರುತ್ತಿರಲಿಲ್ಲ. ಮನೆಗೆ ಬಂದ ನಂತರ ಅಪ್ಪ-ಅಮ್ಮನಿಗೆ ಕೆಲಸದಲ್ಲಿ ಸಹಾಯ ಮಾಡುತ್ತಾ, ಹಳ್ಳಿಯ ಆಟಗಳನ್ನ ಆಡುತ್ತಾ, ದನ, ಕರುಗಳ ಜೊತೆ ಕಾಲ ಕಳೆಯುತ್ತಿದ್ದೆವು. ಆ ಬಾಲ್ಯದ ನೆನೆಪಿನ ಬುತ್ತಿಯನ್ನೂ ಆಗಾಗ ಬಿಚ್ಚಿಟ್ಟುಕೊಂಡು ಈಗಲೂ ಖುಷಿ ಪಡುತ್ತೇವೆ. ಇಂದಿನ ಹೆಚ್ಚಿನ ಶಿಕ್ಷಕರಿಗೆ ಪ್ರಧಾನ ಮಂತ್ರಿ ಯಾರು? ರಾಷ್ಟ್ರಪತಿ ಯಾರು? ಶಿಕ್ಷಣ ಸಚಿವರಾರು ಎಂಬುದನ್ನು ತಿಳಿಸಿಕೊಡುವುದೆಲ್ಲ ಆದ್ಯತೆ ಅಲ್ಲ. ಸಾಹಿತ್ಯದ ಬಗ್ಗೆಯಾಗಲಿ, ಸಾಹಿತ್ಯಕ್ಕೆ ಕೊಡುಗೆ ನೀಡಿದ ಕವಿಗಳ ಬಗ್ಗೆಯೂ ತಿಳಿದಿರುವುದಿಲ್ಲ. ಕಾರಣ ಇಂಗ್ಲಿಷ್ ವ್ಯಾಮೋಹ ಅಷ್ಟು ಬಲವಾಗಿ ಬೇರು ಬಿಟ್ಟಿದೆ. ಹೀಗಿರುವಾಗ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಲು ಸಾಧ್ಯವೆ? ನಮ್ಮ ಪುಟ್ಟ ಮುಗ್ಧ ಮನಸ್ಸಿನ ಹೆಣ್ಣು ಮಕ್ಕಳನ್ನು ಅತ್ಯಾಚಾರಕ್ಕೆ ಬಳಸಿಕೊಳ್ಳುತ್ತಿರುವ ಪ್ರಕರಣಗಳಂತೂ ಕರುಳು ಹಿಂಡುತ್ತವೆ.
ಗುರುಗಳ ವರ್ತನೆಗಳು ಮಕ್ಕಳಿಗೆ ಆದರ್ಶವಾಗಬೇಕು. ಆಗ ಮಾತ್ರ ಶಿಕ್ಷಣಕ್ಕಿರುವ ಗುಣ ಮಟ್ಟ ಕಾಪಾಡಿಕೊಳ್ಳಲು ಸಾಧ್ಯ. ಮಕ್ಕಳಲ್ಲಿರುವ ವ್ಯಕ್ತಿತ್ವವನ್ನ ಗುರುತಿಸಿ, ಅವರಿಗೆ ಸರಿಯಾದ ರೀತಿಯಲ್ಲಿ ತರಬೇತಿ ನೀಡಬೇಕು. ಈ ಕರ್ತವ್ಯ ಕೇವಲ ಶಿಕ್ಷಕರಿಂದ ಆಗಬೇಕಿದೆ. ಮನೆಯೆ 'ಮೊದಲ ಪಾಠ ಶಾಲೆ ಜನನಿ ತಾನೆ ಮೊದಲ ಗುರು' ಆದರೆ ತಾಯಿ ಎಷ್ಟು ಕಲಿಸಬಹುದೋ ಅಷ್ಟನ್ನು ಮಾತ್ರ ಕಲಿಸುತ್ತಾಳೆ. ಗುರುವಿನ ಸ್ಥಾನ ತುಂಬಲು ಸಾಧ್ಯವಿಲ್ಲ. ಹೆಣ್ಣು ಸಹ ಗಂಡಿನಂತೆ ಸಮಾನಳೆಂಬ ಕೂಗು ಮಾತ್ರ ಕೇಳಿಬರುತ್ತಿದೆ. ಆದರೆ ಹೆಣ್ಣನ್ನು ಪುಟ್ಟ ವಯಸ್ಸಿನಲ್ಲಿಯೇ ಅಬಲೆ ಎಂದು ಬಿಂಬಿಸಲು ಹೀಗಿನ ಶಿಕ್ಷಕರು ಕಾರಣರಾಗುತ್ತಿದ್ದಾರೆ. ಈ ವಯಸ್ಸಿನಿಂದಲೆ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಶುರುವಾಗುತ್ತಿದೆ. ಇನ್ನೆಲ್ಲಿ ಅವಳಿಗೆ ಭದ್ರ ನೆಲೆ? ಹೆಣ್ಣನ್ನು ನದಿ, ಭೂಮಿಗೆ ಹೋಲಿಸುವುದೆಲ್ಲ ಇಂದು ಪುಸ್ತಕಕ್ಕೆ ಮಾತ್ರ ಸೀಮಿತವಾಗಿದೆ. ಅವಳಿಗೆ ಆ ಪೂಜ್ಯ ಸ್ಥಾನ ಸಿಗುತ್ತಿಲ್ಲ. ಆದರೆ ಶಿಕ್ಷಣದಿಂದಲಾದರೂ ಈ ಪರಿಸ್ಥಿತಿಗಳು ಸುಧಾರಿಸಬಹುದೆಂದರೆ, ಅದೂ ಸಹ ಸುಳ್ಳಾಗುತ್ತಿದೆ. ಈ ದೇಶಕ್ಕೆ ಉತ್ತಮ ಪ್ರಜೆಗಳನ್ನ ಕೊಡುವುದು ನಮ್ಮ ಶಿಕ್ಷಕರ ಕೆಲಸ. ಆದರೆ ತಮ್ಮ ಜವಾಬ್ದಾರಿಯನ್ನೆ ಮರೆತು ವರ್ತಿಸುವ ಶಿಕ್ಷಕರ ಗುಂಪೇ ಹೆಚ್ಚಾಗಿದೆ. ಇದೆಲ್ಲ ನಿಂತು ಉತ್ತಮ ಸಮಾಜದ ನಿರ್ಮಾಣವಾಗಬೇಕಿದೆ. ಈ ಶಕ್ತಿ ನಮ್ಮ ಗುರುಗಳಿಗೆ ಮಾತ್ರವಿದೆ. ಯಾರೂ ಕದಿಯದಂತಹ ವಿದ್ಯೆಯೆಂಬ ಸ್ವತ್ತನ್ನು ಕೊಡುವ ಗುರುಗಳು ಬೇಕು. ಶಿಕ್ಷಕರ ಸ್ಥಾನ ಬಹಳ ಪವಿತ್ರವಾದದ್ದು. ಇದನ್ನು ಅರಿತು ನಡೆಯುವ ಶಿಕ್ಷಕರು ಇಂದಿನ ಸಮಾಜಕ್ಕೆ ಬೇಕಾಗಿದ್ದಾರೆ.

-  ಸುಜಾತಾ ವಿಶ್ವನಾಥ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement