ನೋಕಿಯಾ ಎಂಬ ಗೆಳೆಯನ ಕಳೆದುಕೊಂಡ ಫಿನ್ಲೆಂಡ್!
ನೋಕಿಯಾ ಹ್ಯಾಂಡ್ಸೆಟ್ ಉದ್ಯಮ, ಮೈಕ್ರೋಸಾಫ್ಟ್ನ ತೆಕ್ಕೆಗೆ ಹೋದದ್ದನ್ನು...
ಫಾರ್ಮುಲಾ ಒನ್ ಚಾಂಪಿಯನ್ಗಳಾದ ಮಿಕಾ ಹಕಿನೆನ್ ಮತ್ತು ಕಿಮಿ ರಾಯ್ಕೊನನ್ಗಿರುವಷ್ಟೇ ಅಭಿಮಾನಿಗಳು ನೋಕಿಯಾ ಕಂಪನಿಗಿದ್ದರು. ಉದ್ಯಮವೊಂದು ದೇಶದೊಂದಿಗೆ ಇಷ್ಟೊಂದು ಆಪ್ತವಾಗಿರುವುದನ್ನು ನೀವು ಬೇರೆಲ್ಲೂ ಕಾಣಲಾರಿರಿ.
ನೋಕಿಯಾ ಹ್ಯಾಂಡ್ಸೆಟ್ ಉದ್ಯಮ, ಮೈಕ್ರೋಸಾಫ್ಟ್ನ ತೆಕ್ಕೆಗೆ ಹೋದದ್ದನ್ನು ನೋಡಿ ಫಿನ್ಲೆಂಡ್ ಜನತೆ ನಿಜಕ್ಕೂ ಆಘಾತಗೊಂಡಿದ್ದಾರೆ. ಫಿನ್ಲೆಂಡ್ನ ಅತಿದೊಡ್ಡ ಕಾರ್ಪೋರೇಟ್ ಯಶಸ್ವಿ ಕಥನ ಈಗ ಕೊನೆಯಾಗಿದೆ.ಈ ಸತ್ಯವನ್ನು ಅರಗಿಸಿಕೊಳ್ಳಲು ಅಲ್ಲಿನ ಜನತೆಗೆ ಸಾಧ್ಯವಾಗುತ್ತಿಲ್ಲ. ದೇಶದ ಹೆಮ್ಮೆಯ ಗುರುತಾಗಿದ್ದ ನೋಕಿಯಾ, ಫಿನ್ಲೆಂಡಿಗರ ಜೀವನದಲ್ಲಿ ಎಷ್ಟು ಹಾಸುಹೊಕ್ಕಿತ್ತೆಂದರೆ, ಅಲ್ಲಿ 90 ಪ್ರತಿಶತ ಜನರ ಬಳಿ ಆ ಕಂಪನಿಯ ಒಂದಲ್ಲ ಒಂದು ಹ್ಯಾಂಡ್ಸೆಟ್ ಇರುತ್ತಿತ್ತು/ಇದೆ! ವಿದೇಶಗಳಿಗೆ ಹೋದಾಗಲೆಲ್ಲ ಅವರು, ತಮ್ಮ ದೇಶದ ಪರಿಚಯವನ್ನು 'ನೋಕಿಯಾ ಕಂಪನಿಯ ತವರೂರು' ಎನ್ನುವ ಮೂಲಕವೇ ಮಾಡುತ್ತಿದ್ದುದು. 3 ದಶಕದ ಹಿಂದೆ ಫಿನ್ಲೆಂಡ್ನಲ್ಲಿ ತನ್ನ ಮೊದಲ ಹ್ಯಾಂಡ್ಸೆಟ್ ಅನ್ನು ಪರಿಚಯಿಸಿದ ನೋಕಿಯಾ, ನೋಡನೋಡುತ್ತಿದ್ದಂತೆ ಆ ದೇಶದ ಅತಿದೊಡ್ಡ ಜಾಗತಿಕ ಕಂಪನಿಯಾಗಿ ಬೆಳೆಯಿತು. ಪ್ರಪಂಚದ ಉಳಿದ ಮೊಬೈಲ್ ಕಂಪನಿಗಳಿಗೆ ಸಡ್ಡುಹೊಡೆದು, ಇಡೀ ದೇಶವನ್ನೇ ತಂತ್ರಜ್ಞಾನ ಆಧರಿತ ಆರ್ಥಿಕತೆಯ ವಾಹಿನಿಗೆ ತಂದು ನಿಲ್ಲಿಸಿತು!
1990ರ ವೇಳೆಗೆ ಪ್ರಪಂಚದ ಅತಿ ದೊಡ್ಡ ಮೊಬೈಲ್ ಉತ್ಪಾದನಾ ಕಂಪನಿಯಾಗಿ ಬೃಹತ್ ಬದಲಾವಣೆ ಕಂಡಿತು ನೋಕಿಯಾ. ಆ ಫೋನಿನೊಂದಿಗೆ ಆ ದೇಶದ ಹೆಸರೂ ಪ್ರಪಂಚದಾದ್ಯಂತ ವ್ಯಾಪಿಸಿತು ಎನ್ನುವುದು ಸುಳ್ಳಲ್ಲ. 13 ವರ್ಷಗಳ ಹಿಂದೆ ಫಿನ್ಲೆಂಡ್ನ ಸಮಗ್ರ ದೇಶೀಯ ಉತ್ಪನ್ನದಲ್ಲಿ(ಜಿಡಿಪಿ) 4 ಪ್ರತಿಶತ ಪಾಲು ಹೊಂದಿತ್ತು ನೋಕಿಯಾ. ಆದರೆ 2012ರ ವೇಳೆಗೆ ಜಿಡಿಪಿಯಲ್ಲಿನ ಅದರ ಪಾಲು ಕೇವಲ 0.2 ಪ್ರತಿಶತಕ್ಕೆ ಕುಸಿಯಿತು! 'ನೋಕಿಯಾ ಯಾವ ಪರಿಯಲ್ಲಿ ನಷ್ಟ ಅನುಭವಿಸಿತೆಂದರೆ, ಸ್ವಂತ ಬಲದ ಮೇಲೆ ಎದ್ದು ನಿಲ್ಲಲು ಅದಕ್ಕೆ ಸಾಧ್ಯವೇ ಇರಲಿಲ್ಲ. ಆದರೆ ಸಂಕಷ್ಟಕ್ಕೆ ಸಿಲುಕಿದಾಗಲೂ, ಅದನ್ನು ಆ ದೇಶದ ಅತ್ಯುತ್ಕೃಷ್ಟ ಕಂಪನಿ ಎಂದೇ ನೋಡಲಾಯಿತು. ಈ ಆಘಾತದಿಂದ ಚೇತರಿಸಿಕೊಳ್ಳಲು ಫಿನ್ಲೆಂಡ್ಗೆ ತುಸು ಸಮಯ ಹಿಡಿಯಲಿದೆ. ಜನರು ಹೊಸ ನೋಕಿಯಾವನ್ನು ಮೊದಲಿನ ಉತ್ಸಾಹದಿಂದಲೇ ಸ್ವೀಕರಿಸುತ್ತಾರೆ ಎನ್ನುವ ವಿಶ್ವಾಸವಿದೆ' ಎನ್ನುತ್ತಾರೆ ಹೆಲ್ಸಿಂಕಿ ಮೂಲದ ಆರ್ಥಿಕ ಪರಿಣತ ಜೈರ್ಕಿ ಅಲಿ. ಮೈಕ್ರೋಸಾಫ್ಟ್ನೊಂದಿಗಿನ ಒಪ್ಪಂದದಿಂದಾಗಿ ಮುಂದಿನ ವರ್ಷದ ವೇಳೆಗೆ ಅದು 0.3 ಪ್ರತಿಶತದಷ್ಟು ಜಿಡಿಪಿ ಉತ್ಪಾದಿಸಬಹುದು ಎಂದು ಅಂದಾಜಿಸಲಾಗುತ್ತಿದೆ.
1865ರಲ್ಲಿ ಚಿಕ್ಕ ಪೇಪರ್ ಕಂಪನಿಯಾಗಿ ತನ್ನ ವ್ಯಾಪಾರವನ್ನು ಆರಂಭಿಸಿದ ನೋಕಿಯಾ, ನಂತರದ ವರ್ಷಗಳಲ್ಲಿ ರಬ್ಬರ್, ಇಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯುನಿಕೇಷನ್ ವಲಯಕ್ಕೆ ಕಾಲಿಟ್ಟಿತು. ಒಂದೊಮ್ಮೆ ಪ್ರಪಂಚದ ಅತಿದೊಡ್ಡ ಸ್ಮಾರ್ಟ್ಫೋನ್ ತಯಾರಕನಾಗಿದ್ದ ಈ ಕಂಪನಿ ಟೆಲಿಕಮ್ಯುನಿಕೇಷನ್ ವಲಯದಲ್ಲಿ 50 ಪ್ರತಿಷತದಷ್ಟು ಮಾರುಕಟ್ಟೆ ಷೇರುಗಳನ್ನು ಹೊಂದಿತ್ತು! ಆದರೆ 6 ವರ್ಷದ ಹಿಂದೆ ಯಾವಾಗ ಆ್ಯಪಲ್ ಮತ್ತು ಗೂಗಲ್ ಕಂಪನಿಗಳು ಆ್ಯಂಡ್ರಾಯಿಡ್ ಫೋನ್ಗಳನ್ನು ಮಾರುಕಟ್ಟೆಗೆ ತಂದವೋ ಅಂದಿನಿಂದ ನೋಕಿಯಾದ ನಸೀಬು ಕೈಕೊಡತೊಡಗಿತು. ಅದು ಯಾವ ಸ್ಥಿತಿಗೆ ತಲುಪಿತೆಂದರೆ, ಕಳೆದೊಂದು ವರ್ಷದಲ್ಲಿ ಪ್ರಪಂಚದ 5 ಪ್ರಮುಖ ಸ್ಮಾರ್ಟ್ಫೋನ್ ತಯಾರಕ ಕಂಪನಿಗಳ ಪಟ್ಟಿಯಲ್ಲಿ ಅದರ ಹೆಸರು ಇರಲಿಲ್ಲ!
'ನೋಕಿಯಾ ಫಿನ್ಲ್ಯಾಂಡ್ನ ಅತಿ ಯಶಸ್ವಿ ಕಂಪನಿಗಳಲ್ಲಿ ಪ್ರಮುಖ ಸ್ಥಾನದಲ್ಲಿತ್ತು. ಇದರಿಂದಾಗಿ ಆ ಕಂಪನಿಗಷ್ಟೇ ಅಲ್ಲದೆ, ಇಡೀ ದೇಶಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಲಾಭವಾಗುತ್ತಿತ್ತು. ಫಿನ್ಲೆಂಡ್ ವಾಸಿಗಳ ಆತ್ಮವಿಶ್ವಾಸ ಹೆಚ್ಚಿಸುವಲ್ಲಿ ಈ ಕಂಪನಿಯ ಪಾಲು ಎಲ್ಲದಕ್ಕಿಂತಲೂ ಅಧಿಕವಿದೆ' ಎನ್ನುತ್ತಾರೆ ವಿತ್ತ ಸಚಿವ ಜಾನ್ವೆಪಾವ್ವೋರಿ.
ನೋಕಿಯಾದ ಈ ದುರವಸ್ಥೆಗೆ ಹಲವಾರು ಕಾರಣಗಳನ್ನು ಕೊಡಲಾಗುತ್ತದೆ. ಆದರೆ ಮಾಧ್ಯಮಗಳು ಹೇಳುವುದೇ ಬೇರೆ. 3 ವರ್ಷದ ಹಿಂದೆ ಮೈಕ್ರೋಸಾಫ್ಟ್ನ ಮಾಜಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಸ್ಟೀಫನ್ ಎಲಾಪ್ ನೋಕಿಯಾ ಕಂಪನಿಗೆ ಬಂದು ಕೂತಾಗಲೇ ಹಲವಾರು ಅನುಮಾನಗಳು ಭುಗಿಲೆದ್ದಿದ್ದವು. ಅವರು ಈ ರೀತಿ ತಮ್ಮ ಕಂಪನಿಯನ್ನು ಬದಲಿಸಿದ್ದರ ಹಿಂದೆ ಏನೋ ಮುಖ್ಯ ಉದ್ದೇಶವಿದೆ, ಅವರು ನೋಕಿಯಾದಲ್ಲಿದ್ದುಕೊಂಡೇ ಮೈಕ್ರೋಸಾಫ್ಟ್ಗೆ ಪ್ರಮುಖ ಮಾಹಿತಿಗಳನ್ನು ಒದಗಿಸುತ್ತಿದ್ದಾರೆ ಎನ್ನುವ ಅನುಮಾನವನ್ನು ಗಿಲ್ಟಾ ಸನ್ಮೋಟ್ ಎಂಬ ಟ್ಯಾಬ್ಲಾಯ್ಡ್ ಪತ್ರಿಕೆ ಮೂರು ವರ್ಷಗಳ ಹಿಂದೆಯೇ ವರದಿ ಮಾಡಿತ್ತು. ಇದೇನೇ ಇದ್ದರೂ ಈಗ ಎಲಾಪ್ ಮತ್ತೆ ಮೈಕ್ರೋಸಾಫ್ಟ್ಗೆ ಮರಳುತ್ತಿರುವುದರಿಂದ, ನೋಕಿಯಾದ ಪತನದ ಹಿಂದೆ ದೊಡ್ಡ ಷಡ್ಯಂತ್ರವೂ ನಡೆದಿರಬಹುದಾದ ಸಾಧ್ಯತೆಗಳಿವೆ. ಆದರೆ ಮೈಕ್ರೋಸಾಫ್ಟ್ ಮಾತ್ರ ಈ ಆಪಾದನೆಗಳನ್ನೆಲ್ಲ ತಳ್ಳಿಹಾಕುತ್ತಿದೆ.
"ನೋಕಿಯಾವನ್ನು ಹಳ್ಳ ಹಿಡಿಸಿ ನಂತರ ಅದನ್ನು ಅತಿ ಕಡಿಮೆ ದರದಲ್ಲಿ ಖರೀದಿಸುವ ಪ್ಲಾನ್ ಮೈಕ್ರೋಸಾಫ್ಟ್ಗಿತ್ತೇ? ಬಹುಷಃ ಇದೆಲ್ಲ ಕಣ್ಣಿಗೆ ಕಾಣಿಸುವಷ್ಟು ಸರಳವಾಗಿಲ್ಲ' ಎನ್ನುತ್ತಾರೆ ಹೆಲ್ಸಿಂಕಿಯ ವ್ಯಾಪಾರಿಯೊಬ್ಬ.
ನೋಕಿಯಾ-ಫಿನ್ಲೆಂಡ್ನ ಭಾವನಾತ್ಮಕ ಸಂಬಂಧಕ್ಕೆ ಕಾರಣವಿಲ್ಲವೆಂದಲ್ಲ. 1980ರಲ್ಲಿ ಆ ದೇಶ ಆರ್ಥಿಕ ಸಂಕಷ್ಟದಿಂದ ಬಳಲತೊಡಗಿತ್ತು. ಬ್ಯಾಂಕಿಂಗ್ ಕ್ಷೇತ್ರದ ಬಣ್ಣ ಮಾಸಿತ್ತು, ಸೋವಿಯತ್ ಒಕ್ಕೂಟದ ಪತನದಿಂದಾಗಿ ರಫ್ತು ವಹಿವಾಟು ತನ್ನ ಮುಖ್ಯ ಮಾರುಕಟ್ಟೆಯನ್ನು ಕಳೆದುಕೊಂಡು ತತ್ತರಿಸುತ್ತಿತ್ತು. ಆ ಸಮಯದಲ್ಲಿ ದೇಶದ ಸಹಾಯಕ್ಕೆ ಬಂದದ್ದು ನೋಕಿಯಾ! 1991ರಲ್ಲಿ ದೇಶದ ಆರ್ಥಿಕ ಪ್ರಗತಿ 6 ಪ್ರತಿಶತಕ್ಕೇರಿದ್ದಕ್ಕೆ ಮತ್ತು 1994ರಿಂದ ಮುಂದಿನ ಆರು ವರ್ಷಗಳವರೆಗೂ ಆರ್ಥಿಕ ಅಭಿವೃದ್ಧಿಯ ಸರಾಸರಿ ಪ್ರಮಾಣ 4.5 ಪ್ರತಿಶತದಷ್ಟಿತ್ತು ಎಂಬುದಕ್ಕೆ ಮುಖ್ಯ ಕಾರಣ ನೋಕಿಯಾ. ಈ ಬೆಳವಣಿಗೆಯಲ್ಲಿ ಆ ಕಂಪನಿಯ ಪಾತ್ರವೇ ಎಲ್ಲಕ್ಕಿಂತಲೂ ಹೆಚ್ಚಾಗಿತ್ತು.
'ಟೆಕ್ನಿಕಾ' ನಿಯತಕಾಲಿಕದ ಪ್ರಧಾನ ಸಂಪಾದಕ ಜಿರ್ಕಿ ಅಲ್ಕಿಯೋ ಈ ಕುರಿತು ಹೇಳುವುದು ಹೀಗೆ-
'ಕಳೆದ 150 ವರ್ಷಗಳಿಂದ ನೋಕಿಯಾ ಫಿನ್ಲೆಂಡಿಗರ ಆತ್ಮವಿಶ್ವಾಸ, ಶಕ್ತಿ ಮತ್ತು ಸ್ಫೂರ್ತಿಯ ಕೇಂದ್ರವಾಗಿದೆ ಎನ್ನುವುದು ನಿಜ. ಆದರೆ ಇತ್ತೀಚಿನ ವರ್ಷಗಳಲ್ಲಿ ಜನರು ಅದರೊಂದಿಗಿನ ಭಾವನಾತ್ಮಕ ಸಂಬಂಧ ಕಳೆದುಕೊಂಡಿದ್ದು, ಆ ಕಂಪನಿ ಮಾರುಕಟ್ಟೆಯಲ್ಲಿ ಅಧಿಪತ್ಯ ಕಳೆದುಕೊಳ್ಳಲು ಕಾರಣವಿರಬಹುದು. ಒಂದು ವೇಳೆ ಇದೆಲ್ಲ 3 ವರ್ಷಗಳ ಹಿಂದೆ ನಡೆದಿದ್ದರೆ ನಮಗೆ ವರ್ಣಿಸಲಾಗದಷ್ಟು ಆಘಾತವಾಗುತ್ತಿತ್ತು. ಆದರೆ ಕಳೆದ ಮೂರು ವರ್ಷಗಳಿಂದ ನಾವು ಈ ಸಮಯ ಎದುರಾಗುತ್ತದೆಂದು ಮಾನಸಿಕ ಸಿದ್ಧತೆ ನಡೆಸಿಕೊಂಡು ಬಂದಿದ್ದೇವೆ. ಫಾರ್ಮುಲಾ ಒನ್ ಚಾಂಪಿಯನ್ಗಳಾದ ಮಿಕಾ ಹಕಿನೆನ್ ಮತ್ತು ಕಿಮಿ ರೈಕೋನೆನ್ಗಿರುವಷ್ಟೇ ಅಭಿಮಾನಿಗಳು ನೋಕಿಯಾ ಕಂಪನಿಗಿದ್ದರು. ಉದ್ಯಮವೊಂದು ದೇಶದೊಂದಿಗೆ ಇಷ್ಟೊಂದು ಆಪ್ತವಾಗಿರುವುದನ್ನು ನೀವು ಬೇರೆಲ್ಲೂ ಕಾಣಲಾರಿರಿ. ಇತ್ತೀಚಿನ ವರ್ಷಗಳಲ್ಲಿ ಫಿನ್ಲೆಂಡ್ಗೆ ಪರ್ಯಾಯ ಪದವಾಗಿತ್ತು ನೋಕಿಯಾ. ನಮ್ಮ ದೇಶದ ಇಂಜಿನಿಯರಿಂಗ್ ಸಾಮರ್ಥ್ಯವನ್ನು ಕಡೆಗಣಿಸಬೇಡಿ, ಮುಂದಿನ ಕೆಲವೇ ವರ್ಷಗಳಲ್ಲಿ ಮತ್ತೆ ತಂತ್ರಜ್ಞಾನ ಕ್ಷೇತ್ರದಲ್ಲಿ ನಾವು ಹೆಸರು ಮಾಡಲಿದ್ದೇವೆ!'
-----
ಈಗ ಫಿನ್ಲೆಂಡ್ ಹೊಸ ಡಾಟಾ ಸೆಂಟರ್ಗಳನ್ನು ತೆರೆಯಲು ಬೃಹತ್ ಕಂಪನಿಗಳನ್ನು ತನ್ನ ದೇಶಕ್ಕೆ ಸೆಳೆಯತೊಡಗಿದೆ. ಮೈಕ್ರೋಸಾಫ್ಟ್ ಕೂಡ ಸುಮಾರು 250 ಮಿಲಿಯನ್ ಯೂರೋಗಳನ್ನು ಫಿನ್ಲೆಂಡ್ನಲ್ಲಿನ ಹೊಸ ಡಾಟಾ ಸೆಂಟರ್ಗಾಗಿ ಹೂಡಿಕೆ ಮಾಡುವುದಾಗಿ ಹೇಳಿದೆ. ಅದಾಗಲೇ ಗೂಗಲ್, ಇಂಟರ್ನ್ಯಾಷನಲ್ ಬಿಸ್ನಸ್ ಮಷಿನ್ ಕಾರ್ಪೊರೇಷನ್ ಮತ್ತು ರಷ್ಯಾದ ಯ್ಯಾಂಡೆಕ್ಸ್ ಕಂಪನಿಗಳು ಫಿನ್ಲೆಂಡ್ನಲ್ಲಿ ಹೂಡಿಕೆ ಮಾಡಿವೆ.
ಫಿನ್ಲೆಂಡ್ನ ಪ್ರಮುಖ ವೀಡಿಯೋ ಗೇಮ್ ಕಂಪನಿ ಸೂಪರ್ಸೆಲ್ನ ಮುಖ್ಯಸ್ಥ ಗಕಾ ಪಾನೆನ್ ಈ ಬದಲಾವಣೆಯನ್ನು ಸ್ವಾಗತಿಸುತ್ತಾರೆ. ಈ ಕುರಿತು ಟ್ವಿಟರ್ನಲ್ಲಿ ಬರೆಯುತ್ತಾ ಅವರು- "ನಿದ್ದೆ ಮಾಡಿದ್ದು ಸಾಕು, ಕೆಲಸ ಮಾಡುವ ಸಮಯ ಶುರುವಾಗಿದೆ. ಫಿನ್ಲೆಂಡ್ನ ತುಂಬಾ ಹೊಸ ಅವಕಾಶದ ಅಲೆಗಳು ಹರಿದುಬರುತ್ತಿವೆ" ಎನ್ನುತ್ತಾರೆ.
(ಲೈವ್ ಮಿಂಟ್ನಲ್ಲಿ ಪ್ರಕಟವಾದ ಲೇಖನ)
- ಲೈವ್ ಮಿಂಟ್ ವರದಿ
anisikeprabha@gmail.com