ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಅಸದ್‌ಗೆ ಎಚ್ಚರಿಕೆಯ ಸಂದೇಶ ಕೊಡಲೇಬೇಕಿದೆ

Mainashree
Updated On : 7 Sept 2013, 11:27 am

ಸಿರಿಯಾದಲ್ಲಿನ ಸಂಘರ್ಷ ಹೆಚ್ಚಾಗುತ್ತಿರುವ ಸಮಯದಲ್ಲೇ, ಅಮೆರಿಕ ಆ ದೇಶದ ಮೇಲೆ ಸೇನಾ ಕಾರ್ಯಾಚರಣೆ ನಡೆಸಲಿದೆಯೇ ಎನ್ನುವ ಬಗ್ಗೆಯೂ ಪ್ರಪಂಚದಾದ್ಯಂತ ಚರ್ಚೆಯಾಗುತ್ತಿದೆ. ಈ ಕುರಿತು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ 'ಪಿಬಿಎಸ್ ನ್ಯೂಸ್‌ಅವರ್‌'ನ ಜ್ಯೂಡಿ ವುಡ್‌ರಫ್ ಮತ್ತು ಗ್ವೆನ್ ಇಫಿಲ್‌ರಿಗೆ ನೀಡಿದ ಸಂದರ್ಶನದಲ್ಲಿ, ತಮ್ಮ ಮುಂದಿನ ನಡೆಯೇನು ಎನ್ನುವುದರ ಬಗ್ಗೆ ಮಾತನಾಡಿದ್ದಾರೆ...

-    ಸಿರಿಯಾದಲ್ಲಿನ ಸಂಘರ್ಷ ಹೆಚ್ಚಾಗುತ್ತಲೇ ಇದೆ. ಅಮೆರಿಕ ಆ ದೇಶದ ಮೇಲೆ ದಾಳಿ ನಡೆಸಲಿದೆಯೇ? ಹಿಂದೆ ಅಫ್ಘಾನಿಸ್ತಾನ ಮತ್ತು ಇರಾಕ್‌ನ ಒಳಹೊಕ್ಕ ಅಮೆರಿಕ, ಅಲ್ಲಿನ ಯುದ್ಧಗಳಲ್ಲಿ ಸಿಕ್ಕಿಬಿದ್ದಿತ್ತು. ಈಗಲೂ ಅಂಥ ಸನ್ನಿವೇಶ ಎದುರಾಗದು ಎಂದು ಅಮೆರಿಕನ್ನರಿಗೆ ಖಾತ್ರಿಯಾಗಿ ಹೇಳಬಲ್ಲಿರಾ?
ಮೊದಲನೆಯದಾಗಿ, ನಾನಿನ್ನೂ ಯಾವ ನಿರ್ಧಾರಕ್ಕೂ ಬಂದಿಲ್ಲ. ಸೇನೆ ಮತ್ತು ರಾಷ್ಟ್ರೀಯ ಭದ್ರತಾ ತಂಡದೊಂದಿಗೆ ಈ ಕುರಿತು ಚರ್ಚಿಸಿದ್ದೇನೆ. ಅಸದ್ ಸರ್ಕಾರ ತನ್ನ ಜನತೆಯ ಮೇಲೇ ದೌರ್ಜನ್ಯವೆಸಗುತ್ತಿದೆ. ಕಳೆದ ಕೆಲವು ವರ್ಷಗಳಿಂದ ಸಾವಿರಾರು ಜನರ ಸಾವಿಗೆ ಅದು ಕಾರಣವಾಗಿದೆ. ಒಂದು ವಿಷಯ ಅರ್ಥ ಮಾಡಿಕೊಳ್ಳಿ, ನೇರವಾಗಿ ಮಿಲಿಟರಿ ದಾಳಿ ಮಾಡುವುದರಿಂದ ಅಥವಾ ಅಲ್ಲಿನ ನಾಗರಿಕ ಯುದ್ಧದಲ್ಲಿ ಭಾಗಿಯಾಗುವುದರಿಂದ ಸಿರಿಯಾದಲ್ಲಿನ ಪರಿಸ್ಥಿತಿ ಬದಲಾಗದು ಎಂದೇ ನಾನು ಹೇಳಿದ್ದೇನೆ. ಅಸದ್ ಅಧಿಕಾರದಿಂದ ಕೆಳಗಿಳಿಯಬೇಕು. ಪರ್ಯಾಯ ಪಕ್ಷವೊಂದು ಅಲ್ಲಿ ಅಧಿಕಾರಕ್ಕೆ ಬರಬೇಕು. ಅದಾಗ್ಯೂ ನಾವು ಮಾನವೀಯತೆಯ ದೃಷ್ಟಿಯಿಂದ, ಅಲ್ಲಿನ ಪ್ರಜೆಗಳಿಗೆ ಬೃಹತ್ ಮಟ್ಟದಲ್ಲಿ ಸಹಾಯ ಮಾಡುತ್ತಿದ್ದೇವೆ.
ಆದರೆ ಸಿರಿಯಾ ಅತಿಹೆಚ್ಚು ರಾಸಾಯನಿಕ ಅಸ್ತ್ರಗಳನ್ನು ಹೊಂದಿರುವ ರಾಷ್ಟ್ರ. ಈಗ ಅದನ್ನು ತನ್ನ ಜನತೆಯ ಮೇಲೆಯೇ ಪ್ರಯೋಗಿಸುತ್ತಿದೆ. ಹಾಗಾಗೆ ನಮ್ಮ ಲೆಕ್ಕಾಚಾರ, ಯೋಜನೆಗಳೂ ಬದಲಾಗುತ್ತಿವೆ. ಸಿರಿಯಾಕ್ಕೆ ಹೊಂದಿಕೊಂಡು ನಮ್ಮ ಕೆಲವು ಮಿತ್ರರಾಷ್ಟ್ರಗಳಿವೆ. ಟರ್ಕಿ ಮತ್ತು ಜೋರ್ಡಾನ್‌ನೊಂದಿಗೆ ನಮಗೆ ಒಳ್ಳೆಯ ಸಂಬಂಧವಿದೆ. ಇಸ್ರೇಲ್ ಕೂಡ ಹತ್ತಿರದಲ್ಲಿದೆ. ಸಿರಿಯಾ, ತನ್ನ ದೇಶವಾಸಿಗಳ ಮೇಲೆ ರಾಸಾಯನಿಕ ಅಸ್ತ್ರ ಬಳಸುತ್ತಿರುವುದು ಅಂತಾರಾಷ್ಟ್ರೀಯ ನಿಯಮಗಳ ಉಲ್ಲಂಘನೆಯಾಗಿದೆ.
ಆದರೆ ನಾನಿನ್ನೂ ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲ. ಮಿತ್ರರಾಷ್ಟ್ರಗಳೊಡನೆ, ಅಂತಾರಾಷ್ಟ್ರೀಯ ಸಮುದಾಯದೊಡನೆ ಈ ಕುರಿತು ಚರ್ಚಿಸುತ್ತಿದ್ದೇನೆ.

-  ಆದರೆ ಇದರಿಂದ ಏನು ಸಾಧಿಸಿದಂತಾಗುತ್ತದೆ? ಅಮೆರಿಕ, ಸೀಮಿತ ದಾಳಿಗಷ್ಟೇ ಮುಂದಾಗಲಿದೆ ಅಥವಾ ಸೀಮಿತ ಸಮಯದವರೆಗಷ್ಟೇ ದಾಳಿ ನಡೆಸಲಿದೆ ಎನ್ನುವ ಸಂದೇಶ ಹರಿದಾಡುತ್ತಿದೆ. ಒಂದು ವೇಳೆ ನಿಮ್ಮ ಪ್ರತಿಕ್ರಿಯೆಯಿಂದ ಅಸದ್ ಪ್ರಭುತ್ವಕ್ಕೆ ಹೆಚ್ಚು ತೊಂದರೆಯಾಗದು ಎಂದರೆ, ಇದರಿಂದ ಉಪಯೋಗವೇನು? ಬದಲಾಗುವುದೇನು?
ಒಂದು ವಿಷಯವನ್ನು ನೀವು ಅರ್ಥಮಾಡಿಕೊಳ್ಳುತ್ತಿಲ್ಲ. ಅಸದ್ ಪ್ರಭುತ್ವದ ಈ ಹುಚ್ಚಾಟಕ್ಕೆ ಪ್ರತಿಯಾಗಿ ನಾವು ಪ್ರಬಲ ಎಚ್ಚರಿಕೆಯ ಸಂದೇಶವನ್ನು ಕಳುಹಿಸಬೇಕು. ಇನ್ನೊಂದು ಬಾರಿ ಇಂಥ ಕೃತ್ಯವೆಸಗಬಾರದು ಎಂಬ ಎಚ್ಚರಿಕೆಯಾಗಿರಬೇಕದು. ಹಾಗಂತ ಇದರಿಂದಾಗಿ ಅಲ್ಲಿನ ಎಲ್ಲಾ ಸಮಸ್ಯೆಗಳೂ ಬಗೆಹರಿಯುತ್ತವೆ ಎಂದಲ್ಲ ಅಥವಾ ಅಮಾಯಕ ನಾಗರಿಕರ ಸಾವು ನಿಲ್ಲುತ್ತದೆಂದಲ್ಲ.
ಸಿರಿಯಾದಲ್ಲಿ ಪ್ರಬಲ ರಾಜಕೀಯ ಬದಲಾವಣೆಯೊಂದು ಆಗಲಿದೆ ಎನ್ನುವ ಆಶಾಭಾವ ನಮಗಿದೆ. ಇದಕ್ಕಾಗಿ ನಾವು ಯಾರೊಂದಿಗಾದರೂ(ರಷ್ಯಾ ಮತ್ತು ಇತರ ರಾಷ್ಟ್ರಗಳು) ಕೆಲಸ ಮಾಡಲು ಸಿದ್ಧ.
ಇನ್ನು ಈ ದಾಳಿಯನ್ನು ನಡೆಸಿದ್ದು ವಿರೋಧ ಪಕ್ಷಗಳು ಎಂದು ಅಸಾದ್ ಸರ್ಕಾರ ಹೇಳುತ್ತಿದೆ. ಆದರೆ ನಾವು
ಈ ಬಗ್ಗೆ ತನಿಖೆ ನಡೆಸಿದ್ದೇವೆ. ವಿರೋಧ ಪಕ್ಷಗಳ ಹಿಡಿತದಲ್ಲಿ ಯಾವುದೇ ಪರಮಾಣು ಅಸ್ತ್ರಗಳು ಅಥವಾ ರಾಸಾಯನಿಕ ಅಸ್ತ್ರಗಳು ಇಲ್ಲ ಎನ್ನುವುದಕ್ಕೆ ನಮ್ಮ ಬಳಿ ಸಾಕ್ಷಿಯಿದೆ.

-  ಮಧ್ಯಪ್ರಾಚ್ಯದಲ್ಲಿನ ಸಮಸ್ಯೆಗಳು...ಅಂದರೆ, ಮಿತ್ರರಾಷ್ಟ್ರಗಳಾದ ಇಸ್ರೇಲ್ ಮತ್ತು ಜೋರ್ಡನ್‌ನಲ್ಲಿನ ಸಮಸ್ಯೆಗಳು, ಗಡಿರೇಖೆಯಲ್ಲಿನ ನಿರಾಶ್ರಿತರ ಗೋಳು, ಸಿರಿಯಾದಲ್ಲಿನ ಸಂಘರ್ಷ ಮತ್ತು ಇಜಿಪ್ತ್ ಸರ್ಕಾರದ ಪತನವನ್ನೆಲ್ಲ ನೋಡಿದರೆ, ನಿಮ್ಮ ಆಡಳಿತ ಅರಬ್‌ಕ್ರಾಂತಿಯಿಂದ ಉಂಟಾಗಬಹುದಾದ ಪರಿಣಾಮಗಳನ್ನು ಕಡಿಮೆ ಅಂದಾಜು ಮಾಡಿತ್ತು ಅನಿಸುವುದಿಲ್ಲವೇ?
ಇವೆಲ್ಲದರ ಬಗ್ಗೆ ನಮಗೆ ಅರಿವಿರಲಿಲ್ಲ ಎಂದಲ್ಲ. ಏಕೆಂದರೆ, ದಶಕಗಳಿಂದ ಆ ಭಾಗದ ಜನರು ಸರ್ವಾಧಿಕಾರಿ ಆಡಳಿತದಿಂದಾಗಿ ನೊಂದಿದ್ದಾರೆ. ನಾಗರಿಕ ಸಮಾಜದ ಬಗೆಗಿನ ಕಾಳಜಿ ಅಲ್ಲಿರಲಿಲ್ಲ, ರಾಜಕೀಯ ಸ್ವಾತಂತ್ರ್ಯವಿರಲಿಲ್ಲ.  ಆದರೀಗ ಒಮ್ಮಿಂದೊಮ್ಮೆಲೆ ಜನತೆ ಆ ನಿರಂಕುಶ ವ್ಯವಸ್ಥೆಯ ವಿರುದ್ಧ ಸಿಡಿದೆದ್ದರು.
ದುರ್ದೈವವಶಾತ್ ಬಹುತೇಕರು ಸವಾರ್ಧಿಕಾರಿ ಆಡಳಿತಕ್ಕೆ ಪರ್ಯಾಯವಾಗಿ ಮೆಚ್ಚಿಕೊಂಡದ್ದು ಧಾರ್ಮಿಕ ಮೂಲಭೂತವಾದವನ್ನು. ಹಾಗಾಗೇ ಇದು ನಿಜಕ್ಕೂ ಕಠಿಣ ಹಾದಿಯಾಗಿರಲಿದೆ ಎನ್ನುವುದನ್ನು ನಾವು ಮೊದಲೇ ಅರಿತಿದ್ದೆವು. ನಮಗೆ ಆಶ್ಚರ್ಯವೇನೂ ಆಗಿಲ್ಲ.
 ಅಂದಹಾಗೆ ನಿಮ್ಮ ಪ್ರಶ್ನೆಯಲ್ಲಿ- ಈ ಸಮಸ್ಯೆಯನ್ನು ಬಗೆಹರಿಸಲು ಬೇರೆ ಮಾರ್ಗ ಅನುಸರಿಸಬಹುದಿತ್ತು ಎನ್ನುವ ಅಭಿಪ್ರಾಯ ಧ್ವನಿಸಿದೆಯೇ?

- ಹೌದು. ಬೇರೆ ಮಾರ್ಗಗಳೇ ಇರಲಿಲ್ಲವೇ?
ಯಾವ ಮಾರ್ಗವಿತ್ತು? ನಿರಂಕುಶಧಾರಿಗಳಿಗೆ ಬೆಂಬಲಕೊಟ್ಟು, ಅವರು ತಮ್ಮ ದೇಶದ ಶಾಂತಿಯುತ ಪ್ರತಿಭಟನಾಕಾರರನ್ನು, ಅಮಾಯಕ ಜನರನ್ನು ಕೊಲ್ಲುವುದನ್ನು ನೋಡುತ್ತಾ ನಿಲ್ಲಬೇಕಿತ್ತೇ? ಹಾಗೆ ಮಾಡಿದ್ದರೆ ನೀವೀಗ ನನಗೆ ಬೇರೆಯದ್ದೇ ಪ್ರಶ್ನೆ ಕೇಳುತ್ತಿದ್ದಿರಿ, ಅಲ್ಲವೇ!
ಆದರೆ ನನಗೆ ಸ್ಪಷ್ಟವಾಗಿ ತಿಳಿದಿರುವ ಸಂಗತಿಯೆಂದರೆ, ಅಮೆರಿಕ ತನ್ನ ಮೌಲ್ಯಗಳು ಮತ್ತು ಆಸಕ್ತಿಗಳಿಗೆ ಹೆಚ್ಚು ಮಹತ್ವ ಕೊಟ್ಟರೆ, ಇಸ್ರೇಲ್‌ನ ಭದ್ರತೆ ಮತ್ತು ಸುರಕ್ಷತೆಯತ್ತ ಹೆಚ್ಚು ಗಮನಹರಿಸಿದರೆ, ಅಲ್ಪಸಂಖ್ಯಾತರ, ಮಕ್ಕಳ ಮತ್ತು ಮಹಿಳೆಯರ ರಕ್ಷಣೆಗೆ ಕಂಕಣಬದ್ಧವಾಗಿದ್ದರೆ, ಸವಾರ್ಧಿಕಾರಿಗಳ ಬದಲು ಜನರ ಇಚ್ಛೆಯಂತೆ ನಡೆದುಕೊಳ್ಳುವ ಆಡಳಿತವನ್ನು ಕೊಟ್ಟರೆ, ನಿಸ್ಸಂಶಯವಾಗಿಯೂ ನಮ್ಮ ರಾಷ್ಟ್ರ ಇನ್ನಷ್ಟು ಏಳಿಗೆ ಹೊಂದುತ್ತದೆ ಎನ್ನುವುದು. ಹಾಗಂತ, ನಾವು ಅದನ್ನು ಸಾಧಿಸುವ ನಿಟ್ಟಿನಲ್ಲಿ ಮುಂದಡಿಯಿಟ್ಟಾಗ ಕಠಿಣ ಸಮಸ್ಯೆಗಳು ಎದುರಾಗುವುದಿಲ್ಲ ಎಂದು ಹೇಳುವಂತಿಲ್ಲ.

- ಒಂದು ವೇಳೆ ಪ್ರಜೆಗಳು, 'ಬೇರೆಯವರ ವಿಷಯದಲ್ಲೇಕೆ ನಾವು ಮೂಗು ತೂರಿಸುತ್ತಿದ್ದೇವೆ?' ಎಂದು ನಿಮ್ಮನ್ನು ಪ್ರಶ್ನಿಸಿದರೆ, ಆಗ ಯಾವ ಉತ್ತರಕೊಡುತ್ತೀರಿ? ಹೇಗೆ ನಿಮ್ಮ ನಡೆಯನ್ನು ಸಮರ್ಥಿಸಿಕೊಳ್ಳುತ್ತೀರಿ? ಸಿರಿಯಾ ರಾಸಾಯನಿಕ ಅಸ್ತ್ರಗಳನ್ನು ಬಳಸಿದ ಕಾರಣಕ್ಕಾಗಿಯೇ ನೀವೀಗ ಅಂತಾರಾಷ್ಟ್ರೀಯ ನಿಯಮಗಳ ಬಗ್ಗೆ ಮಾತನಾಡುತ್ತಿದ್ದೀರಿ ಎನ್ನುವುದು ಗೊತ್ತು. ಆದರೆ ಇದಕ್ಕೂ ಮುನ್ನ ಅಲ್ಲಿ 1 ಲಕ್ಷ ಜನರು ಆ ಪ್ರಭುತ್ವದಿಂದ ಸತ್ತಿದ್ದರಲ್ಲ, 20 ಲಕ್ಷ ಜನರು ಗಡಿ ದಾಟಿ ಹೋಗಿದ್ದಾರಲ್ಲ? ಆಗ ಏಕೆ ನೀವು ಈ ನಿಯಮಗಳ ಬಗ್ಗೆ ಮಾತನಾಡಲಿಲ್ಲ?
ಆ ಬಗ್ಗೆ ನನಗೆ ಸಹಾನುಭೂತಿಯಿದೆ. ಆದರೆ ಸಿರಿಯಾ ಪ್ರಪಂಚದಲ್ಲೇ ಅತಿ ಹೆಚ್ಚು ರಾಸಾಯನಿಕ ಶಸ್ತ್ರಗಳನ್ನು ಹೊಂದಿದ ದೇಶ. ನಮ್ಮ ದೇಶದ ಮೇಲೆ ದಾಳಿ ಮಾಡಿದ ಉಗ್ರ ಸಂಘಟನೆಗಳಿಗೆ ಅಸದ್ ಪ್ರಭುತ್ವ ಆಶ್ರಯ ಕೊಟ್ಟಿದೆ ಎನ್ನುವುದನ್ನು ಮರೆಯದಿರಿ. ಇದು ಹೀಗೇ ಮುಂದುವರಿದರೆ, ರಾಸಾಯನಿಕ ಶಸ್ತ್ರಗಳ ಮೇಲಿನ ಅವರ ಹಿಡಿತ ಇನ್ನಷ್ಟು ಬಲಿಷ್ಟವಾಗಬಹುದು. ಅವುಗಳ ದುಷ್ಪರಿಣಾಮವೇನು ಎನ್ನುವುದನ್ನು ನಾವೀಗ ನೋಡಿದ್ದೇವೆ. ಅವರ ಮುಂದಿನ ದಾಳಿ ನಮ್ಮತ್ತ ತಿರುಗಬಹುದು. ಅಥವಾ ನಮ್ಮ ಮಿತ್ರರಾಷ್ಟ್ರಗಳತ್ತ ತಿರುಗಬಹುದು. ಹಾಗಾಗದಂತೆ ಮುನ್ನೆಚ್ಚರಿಕೆ ವಹಿಸುವುದು ಅಮೆರಿಕದ ಅಧ್ಯಕ್ಷನಾಗಿ ನನ್ನ ಕರ್ತವ್ಯ.
ರಾಸಾಯನಿಕ ಅಸ್ತ್ರಗಳ ಬಳಕೆಗೆ ಅಂತಾರಾಷ್ಟ್ರೀಯ ನಿಯಮವಿರುವುದಕ್ಕೆ ಪ್ರಬಲ ಕಾರಣವಿದೆ, ಅವುಗಳ ಬಳಕೆಯಿಂದ ಜಿನಿವಾ ಒಪ್ಪಂದದ ಉಲ್ಲಂಘನೆ ಏಕೆ ಆಗುತ್ತದೆ ಎನ್ನುವುದಕ್ಕೂ ಕಾರಣವಿದೆ. ಹಾಗಾಗೇ ನಾವು ಎಚ್ಚರಿಕೆ ವಹಿಸುತ್ತಿರುವುದು. ಇರಾಕ್‌ನಲ್ಲಾದಂತೆ ಮತ್ತೆಲ್ಲಿ ದೀರ್ಘಕಾಲಿಕ ಬಿಕ್ಕಟ್ಟಿನಲ್ಲಿ ಸಿಕ್ಕಿಬೀಳುತ್ತೇವೋ ಎನ್ನುವ ಭಯ ಅಮೆರಿಕನ್ನರಿಗಿದೆ. ಆದರೆ ಹಾಗಾಗದಂತೆ, ನಮ್ಮ ರಾಷ್ಟ್ರೀಯ ಭದ್ರತೆಗೆ ಬಾಧೆಯಾಗದಂತೆ ಎಚ್ಚರಿಕೆಯಿಂದ ಹೆಜ್ಜೆಯಿಡುತ್ತೇವೆ. ಅವರು ನಮ್ಮ ವಿರುದ್ಧ ಯಾವುದೇ ರೀತಿಯಲ್ಲಾದರೂ ದಾಳಿ ಮಾಡುವುದಕ್ಕೂ ಮುನ್ನ ನಾವು ಅವರತ್ತ ತಿರುಗಿ ಎಚ್ಚರಿಸಬೇಕು- 'ನೋಡಿ, ನಿಮ್ಮ ಈ ನಡೆಯಿಂದಾಗಿ ನಮ್ಮ ರಾಷ್ಟ್ರೀಯ ಭದ್ರತೆಗೆ ಹಾನಿಯಾಗುತ್ತದೆ. ಹಾಗಾಗುವುದಕ್ಕೆ ನಾವು ಬಿಡೆವು' ಎಂದು.

-ಮಾರ್ಟಿನ್ ಲೂಥರ್ ಕಿಂಗ್ ಅವರ ಐತಿಹಾಸಿಕ ಭಾಷಣದ 50ನೇ ವಾರ್ಷಿಕೋತ್ಸವದಂದು ನೀವು ದೇಶವನ್ನು ಉದ್ದೇಶಿಸಿ ಮಾತನಾಡಿದಿರಿ....

ಪ್ರಾಮಾಣಿಕವಾಗಿ ಹೇಳುತ್ತೇನೆ, ನಾನು 'ಭಾಷಣ ಮಾಡದಿದ್ದರೂ ಪರವಾಗಿಲ್ಲ', ಆದರೆ ಈ ಆಚರಣೆಯ ಭಾಗಿಯಾಗಬೇಕೆಂದು ಮೊದಲೇ ನಿರ್ಧರಿಸಿದ್ದೆ. ನಮ್ಮನ್ನು ರಕ್ಷಿಸಲು ತಮ್ಮ ಜೀವನವನ್ನು ಬಲಿಕೊಟ್ಟವರ ಧೀರತನವನ್ನು ನೆನೆಯುವ ದಿನವದು. ಶತಮಾನದ ದಬ್ಬಾಳಿಕೆಯ ವಿರುದ್ಧ ಪ್ರತಿಭಟಿಸಿದ ಸಾಮಾನ್ಯ ಅಮೆರಿಕನ್ನರು ಅಂದು ಗೆಲುವು ಪಡೆದರು. ಇಂಥ ಉದಾಹರಣೆಗಳು ಅಮೆರಿಕದ ಇತಿಹಾಸದಲ್ಲಿ, ಅಷ್ಟೇ ಏಕೆ, ಪ್ರಪಂಚದ ಇತಿಹಾಸದಲ್ಲೂ ಹೆಚ್ಚಾಗಿ ಕಾಣಸಿಗುವುದಿಲ್ಲ. ಕೂಲಿಗಳು, ಮನೆಗೆಲಸದವರು, ಕಂಬಾರರು ಹೀಗೆ...ಸಮಾಜದ ಕೆಳಸ್ಥರದಲ್ಲಿರುವವರೆಲ್ಲ ಸೇರಿ, ಅಮೆರಿಕವನ್ನು ಪ್ರಪಂಚದ ಅತಿ ಬಲಿಷ್ಠ ರಾಷ್ಟ್ರವಾಗಿ ರೂಪಾಂತರವಾಗಲು ಸಹಾಯ ಮಾಡಿದ ದಿನವದು. ಅವರ ಆ ತ್ಯಾಗದಿಂದಲೇ ಅಮೆರಿಕ ಇಂದು ಇಷ್ಟೊಂದು ಬದಲಾಗಿದೆ. ಅವರ ಶ್ರಮಕ್ಕೆ ಗೌರವ ಸೂಚಿಸಲು ನಾವೆಲ್ಲರೂ ಸಾಧ್ಯವಾದಷ್ಟೂ ಪ್ರಯತ್ನಿಸಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement