ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಕೊಲೆಗಡುಕರ ಚಿತ್ರ ನೋಡೋದಕ್ಕೆ ಬೇಜಾರು

Mainashree
Updated On : 7 Sept 2013, 11:28 am

ಆಗಸ್ಟ್ 28ರ 'ದೇಶ ವಿದೇಶ'ದಲ್ಲಿ ಮೂಡಿ ಬಂದ ಜೈಪುರದ ಶ್ರೀ ಕೃಷ್ಣ ಪಾತ್ರಧಾರಿ ಮುಸ್ಲಿಂ ಬಾಲಕನ ಫೋಟೋ ತುಂಬಾ ಸುಂದರವಾಗಿದೆ. ಬಾಲಕನಿಗೆ ವೇಷ ಭೂಷಣ ತೊಡಿಸಲು ವಹಿಸಿದ ಆಸ್ಥೆ ನೋಡಿದರೆ, ಇಂದು ಸಾಕಷ್ಟು ಜನ ಪರಧರ್ಮ ಸಹಿಷ್ಣುಗಳು ಇದ್ದಾರೆಂಬುದು ಸಾಬೀತಾಗುತ್ತೆ. ಕೆಲವೇ ಜನ ಮತಾಂಧರಿಂದಾಗಿ ವಿಷ ಬೀಜಾರೋಪಣೆ ನಡೆಯುತ್ತಿದೆ.
ನಾವು ಯಾವ ರಾಜ್ಯದಲ್ಲಿರುತ್ತೇವೆಯೋ ಅಲ್ಲಿಯ ಭಾಷೆಯನ್ನು ಗೌರವಿಸುವಂತೆ, ಯಾವ ದೇಶದಲ್ಲಿರುತ್ತೇವೋ ಆ ಧರ್ಮವನ್ನು ಆದರಿಸುವುದೂ ಅಷ್ಟೇ ಮಹತ್ವದ್ದಾಗಿರುತ್ತೆ. ಈ ಸಂದರ್ಭದಲ್ಲಿ ನಮ್ಮ ಉತ್ತರ ಕರ್ನಾಟಕದ ಕೆಲವು ಹಳ್ಳಿಗಳನ್ನು ನೆನಪಿಸಿಕೊಳ್ಳಲೇ ಬೇಕು. ಎರಡೂ ಧರ್ಮದವರು ಒಟ್ಟಾಗಿ ಹಬ್ಬಗಳನ್ನು ಆಚರಿಸುತ್ತಾರೆ. ಎಲ್ಲೆಲ್ಲೂ ಫೋಟೋದಲ್ಲಿರುವಂತಹ ವಾತಾವರಣವಿದ್ದರೆ, ಎಷ್ಟು ಚೆನ್ನಾಗಿರುತ್ತಿತ್ತಲ್ಲವೆ? ಫೋಟೋ ಪರಧರ್ಮ ಸದ್ಭಾವನೆಗೆ ಹಿಡಿದ ಕನ್ನಡಿಯಾಗಿದ್ದು, ಮತಾಂಧರ ಕಣ್ಣು ತೆರೆಸುವಂತಾಗಲಿ. ಕನ್ನಡಪ್ರಭದ ಈ ಶ್ರದ್ಧೆಗೆ ಧನ್ಯವಾದಗಳು.
-ಜಿ.ಎಂ. ಕುಲಕರ್ಣಿ, ಹೂಟಗಳ್ಳಿ, ಮೈಸೂರು

ಪ್ರತಿ ಶುಕ್ರವಾರ ಬರುವ ಚಿತ್ರಪ್ರಭಕ್ಕೆ ಸಿನಿಮಾ ಪ್ರೇಮಿಯಾದ ನಾನು ಕಾಯುತ್ತ ಇರುತ್ತೇನೆ. 'ಚಿತ್ರಪ್ರಭ' ಸೊಗಸಾಗಿ ಮೂಡಿ ಬರುತ್ತಿದೆ. ಅಂದರೆ ಇನ್ನೂ ಹೆಚ್ಚಾಗಿ ಸಿನಿಮಾ ಸುದ್ದಿಗಳು ನಟ, ನಟಿಯರ ಸಂದರ್ಶನ, ತಾರಾ ಪ್ರಶ್ನೋತ್ತರಗಳು, ಸಿನಿಬಂಧ, ಸಿನಿಕ್ವೀಜ್ ಹಾಗೂ ಕನ್ನಡ ಚಲನಚಿತ್ರಗಳ ಬಗ್ಗೆ ಮಾಹಿತಿ ನೀಡುವ ಸಂಗ್ರಹ ಯೋಗ್ಯವಾದ ಚಿತ್ರ ಮಾಹಿತಿ ಹೆಚ್ಚಾಗಿ ಮೂಡಿಬರಲೆಂದು ಆಶಿಸುತ್ತೇನೆ.
-ರವಿಕುಮಾರ್ ಜಿ.ಬಿ.,  ಶ್ರೀವಿನಾಯಕ ಕಾಂಡಿಮೆಂಟ್ಸ್, ನಂ.82, 1ನೇ ಮುಖ್ಯರಸ್ತೆ, ಶೇಷಾದ್ರಿಪುರಂ, ಬೆಂಗಳೂರು, ಮೊ. 944 966 9897

ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಆತ್ಮಚರಿತ್ರೆ 'ಮೈ ಜರ್ನಿಯ' ಕನ್ನಡಾನುವಾದ "ನನ್ನ ಪಯಣ"ದ ಆಯ್ದ ಭಾಗವನ್ನು ಸಾಪ್ತಾಹಿಕ ಪ್ರಭದಲ್ಲಿ ಓದಿ, ಆ ಕೃತಿಯನ್ನು ಪೂರ್ತಿ ಓದಲೇಬೇಕೆಂಬ ಹಂಬಲ ತೀವ್ರವಾಯಿತು.
ನಮ್ಮ ನಡುವೆಯೇ ಇರುವ ಸಂತನೋರ್ವನನ್ನು ಮುಖತಃ ಭೆಟ್ಟಿಯಾಗಲು ಸಾಧ್ಯವಾಗದಿದ್ದರೂ ಅವರ ಬದುಕನ್ನಾದರೂ ಓದಿ ತಿಳಿದುಕೊಳ್ಳುವ ಭಾಗ್ಯವಿದೆಯಲ್ಲ ಎಂದು ಖುಷಿ ಪಡುವೆ.
-ಆನಂದ ರಾಮತೀರ್ಥ, ಶ್ರೀ ವಾಸೇಶ್ವರಿ ಕೃಪ, ಗಿರೀಶನಗರ, ಜಮಖಂಡಿ, ಬಾಗಲಕೋಟೆ ಜಿಲ್ಲೆ, ಮೊ. 7259 670989

ವಿಶ್ವೇಶ್ವರಭಟ್ ಮತ್ತು ಪ್ರತಾಪಸಿಂಹರ ಲೇಖನಿಯ ಹರಿತ ಕಡಿಮೆಯಾಗಿದೆ. ದಯವಿಟ್ಟು ದೇಶದ್ರೋಹಿ, ಅತ್ಯಾಚಾರಿ ಮತ್ತು ಕೊಲೆಗಡುಕರ ಫೋಟೋ ಮುಖಪುಟದಲ್ಲಿ ಹಾಕಬೇಡಿ. ತಾ. 31.08.13ರ ಪ್ರತಾಪಸಿಂಹರ ಅಂಕಣದಲ್ಲಿ ಯಾಸಿನ್ ಭಟ್ಕಳ್‌ನ ಫೋಟೋ ಹಾಕುವ ಆವಶ್ಯಕತೆ ಏನಿತ್ತು. ಆ ದೇಶದ್ರೋಹಿಯ ಫೋಟೋಕ್ಕೆ ಮಸಿ ಬಳಿದು ಅಂಕಣ ಓದುವ ಪರಿಸ್ಥಿತಿ ಉಂಟಾಯಿತು.
-ಎನ್.ಎಸ್. ಶೆಟ್ಟಿ, ಬೆಳಗಾವಿ, ಮೊ. 9481 403407

ಸಪ್ಟೆಂಬರ್ 1ರ ಸಾಪ್ತಾಹಿಕ ಪ್ರಭದಲ್ಲಿ ಬಿ.ಆರ್. ಲಕ್ಷ್ಮಣರಾವ್ ಅವರ ಅಂಕಣ "ಕವಿ(ತೆ)ಯ ಕತೆ"ಯಲ್ಲಿ ಕವಿ ಬಿ.ಆರ್. ಲಕ್ಷ್ಮಣರಾವ್ ಅವರ ಬದುಕಿನ "ಪ್ರೇಮ್‌ಕಹಾನಿ" ಓದಿ ರೋಮಾಂಚನವಾಯ್ತು. ಹರೆಯ ಎನ್ನುವುದೇ ಅಂಥದ್ದು. ಎಲ್ಲೋ-ಹೇಗೋ ಪರಿಚಯವಾಗುವ ಹುಡುಗಿಯ ಮಾತುಗಳು, ಸೌಂದರ್ಯ, ಅವಳ ಹಾವ-ಭಾವ, ತುಂಟ ಕಣ್ಣೋಟ, ಹಂಸ ನಡಿಗೆ, ಹೀಗೇ ಹತ್ತು ಹಲವು ಪ್ರೇಮಕೋನಗಳಿಂದ ಆಕರ್ಷಿತನಾಗುವ ಹುಡುಗ ಆ ಚೆಲುವೆಯ ಬಗ್ಗೆ ಆಸೆಗಳನ್ನು ನಿರೀಕ್ಷೆಗಳನ್ನು ಬಯಸುವುದು ಸಹಜ. ಪ್ರೀತಿ ಕೆಲವರ ಬದುಕಿನಲ್ಲಿ ಸಿಹಿ ಜೇನಾದರೆ, ಕೆಲವರ ಬದುಕಿನಲ್ಲಿ ಕಹಿಬೇವು. ಪ್ರೀತಿಸಿ ಮದುವೆಯಾಗಲು ಸಾಧ್ಯವಾಗದೆ ವಿರಹಿ ಆದವರ ಸಾಲಿನಲ್ಲಿ ನನ್ನ ಮೆಚ್ಚಿನ ಪ್ರೇಮಕವಿ ಬಿ.ಆರ್. ಲಕ್ಷ್ಮಣರಾವ್ ಅವರೂ ಇರುವುದನ್ನು ಓದಿ ಆಶ್ಚರ್ಯವಾಯ್ತು.
-ಫ್ಯಾಷನ್ ಡಿಸೈನರ್ ಮಧು, ಹಾಸನ, 99457- 37427

ರೀ ಭಟ್ರೇ! ಬೈಟು ಕಾಫಿ ರೂಪಾನೇ ಬದಲಾಯಿಸ್ತೀನಿ 'ನೋಡ್ತಾ ಇರಿ' ಎಂಬ ಸಂದೇಶದಂತೆ ವಿನ್ಯಾಸಗಳನ್ನೇನೋ ಅಲ್ಲಿಂದಲ್ಲಿಗೆ, ಇಲ್ಲಿಂದಲ್ಲಿಗೆ ಎತ್ತಿ ಹಾಕಿದಿರಿ ಇರ್ಲಿ ಬಿಡಿ. ಬೇಸರವಿಲ್ಲ. ಬೈ2 ಕಾಫಿ ಜತೆ ಕರ್ರಂಕುರ್ರಂ ಲಿಜ್ಜತ್ ಪಾಪಡ್ ಯಾಕೆ? ಕಿವಿಗೆ ದಾಸವಾಳ ಇಡ್ತಿದ್ದೀರಿ ಬಿಡಿ! ಕಿವಿಯಲ್ಲಿ ಪಾಪಡ್ ಇಟ್ಟು ಜಾಹೀರಾತು ಮಾಡ್ತೀರಾ? ಆಯುರ್ವಿನ್, ಹೇರ್‌ಗ್ರೋ ಳಿಗೆ ಮೊದಲ ಪುಟ ಖತಂ! ನಾಲ್ಕನೇ ಪುಟದಲ್ಲಿ ಕೀಲುನೋವು, ಮೂಲವ್ಯಾಧಿ, ಚರ್ಮರೋಗ! ಜಾಹೀರಾತಿನ ಹೊರೆಯಿಂದ ಬೈಟುಕಾಫಿಗೆ ಬಿಳಿಮಚ್ಚೆಗಳುಂಟಾಗದಿರಲಿ! ನರೆಗೂದಲೋ ಕೂದಲುದುರುವ ರೋಗವೋ ಬಾರದಿರಲಿ! ಸ್ಮರಣಶಕ್ತಿ ಅಡ್ಡಪರಿಣಾಮಗಳಿಲ್ಲದೆ ಹೆಚ್ಚಲಿ ಎಂದು ವಿನಂತಿ!
-ಕೊಕ್ಕಡ ವೆಂಕಟ್ರಮಣಭಟ್, ಮಂಡ್ಯ, ಮೊ.9972 448183

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement