ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಮದುವೆ ನೋಂದಣಿ ಮಾಡದೆ ನೋವನುಭವಿಸಿದವರ ಕಥೆ!

ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಮಹಿಳಾ ಆಯೋಗಗಳನ್ನು ಮಹಿಳೆಯರ ರಕ್ಷಣೆಗಾಗಿ...

Mainashree
Updated On : 10 Sept 2013, 2:30 am

ನಾನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿಯಾಗಿದ್ದಾಗ ಸ್ವಲ್ಪ ಸಮಯ ಮಹಿಳಾ ಆಯೋಗದ ಅಧ್ಯಕ್ಷೆಯಾಗಿಯೂ ಜವಾಬ್ದಾರಿಯನ್ನು ವಹಿಸಬೇಕಿತ್ತು, ಏಕೆಂದರೆ ಸರ್ಕಾರ ಬದಲಾವಣೆಯಾದುದರಿಂದ ಹೊಸ ಅಧ್ಯಕ್ಷರನ್ನು ಇನ್ನೂ ಆಯೋಗಕ್ಕೆ ನೇಮಿಸಿರಲಿಲ್ಲ. ಆಗ ನಾನು ವಾರಕ್ಕೆ ಎರಡು ದಿನ ಮಧ್ಯಾಹ್ನದ ಹೊತ್ತು ಆಯೋಗದಲ್ಲಿ ಇರುತ್ತಿದ್ದೆ.
ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಮಹಿಳಾ ಆಯೋಗಗಳನ್ನು ಮಹಿಳೆಯರ ರಕ್ಷಣೆಗಾಗಿ ಸ್ಥಾಪಿಸಲಾಗಿದೆ. ಮಹಿಳೆಯರು ಯಾವುದೇ ಶೋಷಣೆಗೆ ಬಲಿಯಾದಾಗ ಪೋಲೀಸರ ಹತ್ತಿರ ಹೋಗಲು ಹಿಂಜರಿಯುತ್ತಾರೆ. ಅದರಲ್ಲಿಯೂ ಎಲ್ಲಾ ಕಡೆ ಮಹಿಳಾ ಪೋಲೀಸ್ ಠಾಣೆ ಇರುವುದಿಲ್ಲ. ಮಹಿಳಾ ಮತ್ತು ಮಕ್ಕಳ ಇಲಾಖೆಗೆ ಹೋದರೆ, ಅವರಿಗೆ ಸಲಹೆ, ಸಹಕಾರ ನೀಡಲು ಮಾತ್ರ ಅವಕಾಶವಿರುತ್ತದೆ. ಆದರೆ ಕಾನೂನಿನ ಯಾವುದೇ ಅಧಿಕಾರವಿರುವುದಿಲ್ಲ. ಮಹಿಳಾ ಆಯೋಗಕ್ಕೆ ಭಾಗಶಃ ನ್ಯಾಯ ತೀರ್ಮಾನದ ಅಧಿಕಾರಗಳನ್ನು ಸಂವಿಧಾನದ ಮೂಲಕ ನೀಡಲಾಗುತ್ತದೆ. ಅವರು ನ್ಯಾಯಾಲಯ ನಡೆಸುವ ರೀತಿಯಲ್ಲಿ ಪ್ರಕರಣಗಳ ತನಿಖೆ ಮಾಡಿ, ಎರಡೂ ಪಕ್ಷಗಳನ್ನು ಸಮಜಾಯಿಸಿ, ತಮ್ಮ ತೀರ್ಪನ್ನು ನೀಡಬೇಕಾಗುತ್ತದೆ. ಅದನ್ನು ಸರಿ ಸಮವಾಗಿ ಎಲ್ಲಾ ಇಲಾಖೆಗಳೂ ಅನುಸರಿಸಬೇಕಾಗುತ್ತದೆ. ಮಾತ್ರವಲ್ಲ, ಆಯೋಗದಲ್ಲಿ ಕೆಲವು ನ್ಯಾಯವಾದಿಗಳು ಮತ್ತು ಸಲಹೆಗಾರರುಗಳನ್ನು ನೇಮಿಸಲಾಗುತ್ತದೆ. ಅವರು ಶೋಷಿತ ಮಹಿಳೆಯರಿಗೆ ಉಚಿತ ಸಲಹೆ ಹಾಗೂ ನ್ಯಾಯಾಲಯಗಳಲ್ಲಿ ಪ್ರಕರಣ ದಾಖಲಿಸಲು ಸಹಾಯ ಮಾಡುತ್ತಾರೆ. ಜಿಲ್ಲಾ ಮಟ್ಟದಲ್ಲಿ ಸಹ ಪ್ರತಿಯೊಂದು ನ್ಯಾಯಾಲಯದೊಂದಿಗೆ ಒಂದು ಮಹಿಳಾ ಸಹಾಯ ಕೇಂದ್ರವನ್ನು ಸ್ಥಾಪಿಸಲಾಗಿದೆ. ಆದರೂ ಆ ದಿನಗಳಲ್ಲಿ ನೂರಾರು ಮಹಿಳೆಯರು ತಮ್ಮ ಕಷ್ಟಗಳನ್ನು ಹೇಳಿಕೊಳ್ಳಲು ಆಯೋಗಕ್ಕೆ ಬರುತ್ತಿದ್ದರು. ಅವರಲ್ಲಿ ಬಹುತೇಕ ಮಹಿಳೆಯರ ಕಷ್ಟಗಳು ಗಂಡ ಮರು ಮದುವೆ ಮಾಡಿಕೊಂಡು ತಮ್ಮನ್ನು ಕಡೆಗಾಣಿಸುತ್ತಿದ್ದಾನೆ ಎಂಬುದಾಗಿತ್ತು.
ನಾನು ಹಳ್ಳಿಗಳಿಗೆ ಭೇಟಿ ಕೊಟ್ಟಾಗ ಅಲ್ಲಿ ಒಬ್ಬ ಗಂಡಸು ಎರಡು ಮದುವೆ ಮಾಡಿಕೊಳ್ಳುವುದು, ನಂತರ ಒಂದು ಸಂಸಾರವನ್ನು ಕಡೆಗಣಿಸುವುದನ್ನು ಬಹಳಷ್ಟು ಕಂಡಿದ್ದೆ. ಆದರೆ ಆ ಪಿಡುಗು ಕೇವಲ ಹಳ್ಳಿಗಳಿಗೆ ಮಾತ್ರ ಸೀಮಿತವಲ್ಲ, ನಗರಗಳಲ್ಲೂ ಅದು ವ್ಯಾಪಕವಾಗಿದೆ ಎನ್ನುವುದು ತಿಳಿಯಿತು. ಈ ಸಮಸ್ಯೆ ಕೇವಲ ಕೆಳವರ್ಗದ ಜನರಲ್ಲಿ ಮಾತ್ರವಲ್ಲದೆ ಎಲ್ಲಾ ವರ್ಗದ ಜನರಲ್ಲೂ ಇರುವುದನ್ನು ಕಂಡೆ. ಕುಟುಂಬಗಳ ನಡುವೆ ಹೊಡೆದಾಟ ಬಡಿದಾಟಗಳಾಗಿ, ಕೆಲವೊಮ್ಮೆ ಕೊಲೆಗಳೂ ನಡೆದು ಹೋಗುತ್ತಿತ್ತು.
ಒಂದು ದಿನ ಒಬ್ಬ ವಿದ್ಯಾವಂತ ಮಹಿಳೆ ತನ್ನ ಗಂಡನ ಬಗ್ಗೆ ಎರಡನೆ ಮದುವೆಯಾದುದರ ಬಗ್ಗೆ ದೂರು ಕೊಟ್ಟಳು. ಆ ದೂರನ್ನು ಪರಿಶೀಲಿಸಿದಾಗ ಆಕೆಯ ಗಂಡ ಅವಳನ್ನು ಮದುವೆಯಾಗಿ ಹತ್ತು ವರ್ಷಗಳಾಗಿತ್ತು ಮತ್ತು ಎರಡು ಮಕ್ಕಳೂ ಹುಟ್ಟಿದ್ದವು ಎನ್ನುವುದು ತಿಳಿಯಿತು. ಅವನು ತನ್ನ ಜೊತೆ ಕೆಲಸ ಮಾಡುವ ಒಬ್ಬ ಮಹಿಳೆಯನ್ನು ಒಂದು ವರ್ಷದ ಕೆಳಗೆ ಮದುವೆಯಾಗಿದ್ದ. ಮದುವೆಯಾದ ಹೊಸದರಲ್ಲಿ ತನಗೆ ಕೆಲಸದ ಒತ್ತಡ ಬಹಳವಿದೆ ಎಂದು ಹೇಳುತ್ತ ವಾರಕ್ಕೆ ಮೂರು ದಿನ ಮೊದಲ ಹೆಂಡತಿಯ ಮನೆಗೆ ಬರುತ್ತಿರಲಿಲ್ಲ. ನಂತರದ ದಿನಗಳಲ್ಲಿ ವಾರದ ಅಂತ್ಯದಲ್ಲಿ ಮನೆಯಲ್ಲಿರುತ್ತಿರಲಿಲ್ಲ. ಕಳೆದ ಒಂದು ತಿಂಗಳಿನಿಂದ ಮನೆಗೆ ಬರುವುದನ್ನು ಪೂರ್ತಿ ನಿಲ್ಲಿಸಿದ್ದ. ಆಗ ಮೊದಲ ಹೆಂಡತಿಗೆ ಅನುಮಾನ ಬಂದು ಅವನ ಸ್ನೇಹಿತರನ್ನು ಅವನ ಕಚೇರಿಯಲ್ಲಿ ವಿಚಾರಿಸಿದಾಗ ಆಕೆಗೆ ವಿಷಯ ತಿಳಿಯಿತು. ಅವಳಿಗೆ ಬಹಳ ಅವಮಾನ, ನೋವು ಉಂಟಾಯಿತು. ಹಾಗಾಗಿ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದಳು. ಎರಡನೆಯ ಹೆಂಡತಿಯನ್ನು ಕರೆದು ವಿಚಾರಿಸಿದಾಗ ಅವಳು ತನ್ನ ಮದುವೆಯನ್ನು ನೋಂದಣಿ ಮಾಡಿಸಿದ್ದೇನೆ, ತನ್ನ ಮದುವೆಯೇ ಅಧಿಕೃತ ಮದುವೆ, ತನ್ನ ಗಂಡನ ಮೊದಲನೆಯ ಮದುವೆ ನೋಂದಣಿ ಆಗಿಲ್ಲ ಎಂದಳು. ಗಂಡನನ್ನು ವಿಚಾರಿಸಿದಾಗ ಮೊದಲ ಹೆಂಡತಿ ಬಹಳ ಬಜಾರಿ, ತನಗೆ ಅವಳೊಡನೆ ಸಂಸಾರ ಮಾಡಲು ಇಷ್ಟವಿರಲಿಲ್ಲ, ಅವಳು ವಿಚ್ಛೇದನ ಕೊಡುತ್ತಿರಲಿಲ್ಲ, ಆದ್ದರಿಂದ ಅವಳಿಗೆ ತಿಳಿಯದಂತೆ ಎರಡನೆಯ ಮದುವೆ ಮಾಡಿಕೊಂಡೆ, ಈಗ ಆರಾಮವಾಗಿದ್ದೇನೆ, ಎಂದ. ಇದನ್ನು ಕೇಳಿ ಮೊದಲ ಹೆಂಡತಿ ಆಘಾತದಿಂದ ಕುಸಿದು ಹೋದಳು. ಅವಳ ಮದುವೆಯನ್ನು ಅವಳ ತಂದೆ ತಾಯಿ ನೂರಾರು ಜನರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಮಾಡಿದ್ದರು. ಆದರೆ ಮದುವೆ ನೋಂದಣಿ ಮಾಡಿಸಿರಲಿಲ್ಲ. ಕಾನೂನಿನ ಪ್ರಕಾರ ಎರಡನೆಯ ಮದುವೆ ನೋಂದಣಿ ಆಗಿರುವುದರಿಂದ ಅದು ಅಧಿಕೃತ. ಆದರೆ ಮೊದಲನೆಯ ಹೆಂಡತಿಯ ಮಕ್ಕಳು ಆತನ ಆಸ್ತಿಯಲ್ಲಿ ಹಕ್ಕುದಾರರಾಗುತ್ತಾರೆ. ಅದೂ ಮದುವೆ ಆಗಿದೆ ಎಂದು, ಮತ್ತು ಮಕ್ಕಳು ಅವನದೇ ಎಂದು ನ್ಯಾಯಾಲಯದಲ್ಲಿ ದೃಢಪಟ್ಟಾಗ ಮಾತ್ರ. ಆದರೆ ಅವಳಿಗೆ ನ್ಯಾಯವಾಗಿ ಸಿಗಬೇಕಾಗಿದ್ದ ಸ್ಥಾನಮಾನಗಳಾಗಲೀ, ಭದ್ರತೆಯಾಗಲೀ, ಹಕ್ಕಾಗಲೀ, ಕಡೆಯ ಪಕ್ಷ ಜೀವನಾಂಶವಾಗಲೀ ಸಿಗುವುದಿಲ್ಲ. ವಿದ್ಯಾವಂತೆಯಾಗಿದ್ದರೂ, ಉನ್ನತ ಸ್ಥಾನವನ್ನು ಒಂದು ಪ್ರತಿಷ್ಠಿತ ಸಂಸ್ಥೆಯಲ್ಲಿ ಅಲಂಕರಿಸಿದ್ದರೂ, ಮದುವೆ ನೋಂದಣಿಯ ಬಗ್ಗೆ ಜಾಗರೂಕಳಾಗಿಲ್ಲದಿದ್ದುದರಿಂದ ಮೊದಲನೆಯ ಹೆಂಡತಿ ಅನ್ಯಾಯವನ್ನು ಎದುರಿಸಬೇಕಾಯಿತು. ವಿದ್ಯಾವಂತರದೇ ಈ ಪಾಡಾದರೆ ಅವಿದ್ಯಾವಂತ ಮಹಿಳೆಯರ ಪಾಡನ್ನು ಹೇಳುವುದೇ ಬೇಡ. ಒಬ್ಬೊಬ್ಬರದು ಒಂದೊಂದು ನಿಟ್ಟುಸಿರಿನ ಕಥೆ.
ಅವರುಗಳೊಡನೆ ಮಾತನಾಡುವಾಗ ನನಗೆ ತಿಳಿದು ಬಂದದ್ದೇನೆಂದರೆ ಆ ಮಹಿಳೆಯರಾರಿಗೂ ತಮ್ಮ ಮದುವೆಯನ್ನು ಕಡ್ಡಾಯವಾಗಿ ನೋಂದಣಿ ಮಾಡಿಸಬೇಕು ಎಂಬ ಅರಿವೇ ಇಲ್ಲದಿರುವುದು. ನನ್ನ ಅಧಿಕಾರಾವಧಿಯಲ್ಲಿ ಕಡ್ಡಾಯವಾಗಿ ಮಹಿಳೆಯರು ಮದುವೆಗಳ ನೋಂದಣಿ ಮಾಡಿಸಬೇಕೆಂದು ಪತ್ರಿಕೆಗಳ ಮೂಲಕ, ಟಿ.ವಿ./ರೇಡಿಯೋಗಳ ಮೂಲಕ, ಕಾರ್ಯಾಗಾರಗಳನ್ನು ಏರ್ಪಡಿಸುವುದರ ಮೂಲಕ, ಬೀದಿ ನಾಟಕಗಳು, ದೊಡ್ಡ ದೊಡ್ಡ ಭಿತ್ತಿ ಚಿತ್ರಗಳನ್ನು ಸಂತೆ ಮತ್ತಿತರ ನೂರಾರು ಜನರು ಸೇರುವ ಜಾಗಗಳಲ್ಲಿ ಹಾಕುವುದರ ಮೂಲಕ ವ್ಯಾಪಕವಾಗಿ ಪ್ರಚಾರವನ್ನು ಮಾಡಲಾಯಿತು. ಸ್ವಲ್ಪ ಮಟ್ಟಿಗೆ ಅದು ಪರಿಣಾಮಕಾರಿಯಾಯಿತು ಎಂದು ಹೇಳಬಹುದು.
ಮೊದಲ ಹೆಂಡತಿ ಬದುಕಿದ್ದಾಗ ವಿಚ್ಛೇದನ ಪಡೆಯದೆ ಎರಡನೆಯ ಮದುವೆಯಾಗುವುದು ಹಿಂದೂ ವಿವಾಹ ಕಾಯ್ದೆಯ ಪರಿಚ್ಛೇದ 59ರ ಉಲ್ಲಂಘನೆ. ಆದರೆ, ಎರಡನೆಯ ಪತ್ನಿಯ ಮಕ್ಕಳು ಆಸ್ತಿ ಹಾಗೂ ಇತರ ಹಕ್ಕುಗಳಲ್ಲಿ ಪಾಲು ಕೇಳಲು ಸಂವಿಧಾನದಲ್ಲಿ ಅವಕಾಶವಿದೆ. ಆದರೆ ಮೊದಲ ಪತ್ನಿ ಜೀವಂತವಿರುವಾಗ, ಆಕೆಗೆ ಮಕ್ಕಳಿಲ್ಲದಿದ್ದರೂ, ಎರಡನೆಯ ಪತ್ನಿಯ ಮಕ್ಕಳಿಗೆ ಅನುಕಂಪದ ಆಧಾರದ ಮೇಲೆ ತಂದೆಯ ಉದ್ಯೋಗವನ್ನು ಕೋರಲು ಸಂವಿಧಾನದಲ್ಲಿ ಅವಕಾಶವಿಲ್ಲ ಎಂದು ಉಚ್ಛನ್ಯಾಯಾಲಯದ ಪೀಠ ಇತ್ತೀಚೆಗೆ ತೀರ್ಪನ್ನು ನೀಡಿದೆ.
ಸರ್ವೋಚ್ಚ ನ್ಯಾಯಾಲಯದ ತೀರ್ಪಿನಂತೆ 14-2-2006 ರಿಂದ ಮದುವೆಯನ್ನು ಎಲ್ಲಾ ಧರ್ಮದವರೂ ಮತ್ತು ಮತದವರೂ ಕಡ್ಡಾಯವಾಗಿ ನೋಂದಣಿ ಮಾಡಿಸಲೇಬೇಕು. ಮನೆಯಲ್ಲಿ, ದೇವಸ್ಥಾನಗಳಲ್ಲಿ, ಚರ್ಚುಗಳಲ್ಲಿ, ಜೈಲುಗಳಲ್ಲಿ, ರೆಸಾರ್ಟ್‌ಗಳಲ್ಲಿ, ವಿಮಾನಗಳಲ್ಲಿ, ಹಡಗುಗಳಲ್ಲಿ, ಆರ್ಯ ಸಮಾಜದಲ್ಲಿ, ಇನ್ನಿತರ ಸ್ಥಳಗಳಲ್ಲಿ, ಗಂಡು ಮತ್ತು ಹೆಣ್ಣು ಉಂಗುರ ಬದಲಾಯಿಸಿಕೊಂಡೋ, ತಾಳಿ ಕಟ್ಟಿಕೊಂಡೋ, ಹಾರ ಬದಲಾಯಿಸಿಕೊಂಡೋ, ಇನ್ನಿತರ ಸಂಪ್ರದಾಯಗಳಂತೆ ಮದುವೆ ಮಾಡಿಕೊಳ್ಳುವುದನ್ನು ನಾವು ಕಾಣುತ್ತೇವೆ. ಯಾವ ಬಗೆಯ ಮದುವೆ ಮಾಡಿಕೊಂಡರು ಎಂಬುದು ಮುಖ್ಯವಾಗುವುದಿಲ್ಲ. ಮದುವೆಯನ್ನು ನೋಂದಣಿ ಮಾಡುವುದು ಬಹಳ ಮುಖ್ಯವಾಗುತ್ತದೆ.
ನೋಂದಣಿಯಾಗದ ಮದುವೆಯನ್ನು ನ್ಯಾಯಾಲಯವು ಪರಿಗಣಿಸುವುದೇ ಇಲ್ಲ. ಗಂಡ ಹೊರ ದೇಶದಲ್ಲಿ ದುಡಿಯುತ್ತಿದ್ದರೆ, ಮದುವೆ ನೋಂದಣಿ ಪತ್ರ ಇಲ್ಲದೆ ಪತ್ನಿ ಹೊರದೇಶಕ್ಕೆ ಹೋಗಿ ಪತಿಯನ್ನು ಸೇರುವುದು ಕೂಡ ಸಾಧ್ಯವಿಲ್ಲ. ಆದುದರಿಂದ ಮಹಿಳೆಯರು ಅತ್ಯಂತ ಜಾಗರೂಕರಾಗಿ ತಮ್ಮ ವಿವಾಹವನ್ನು ನೋಂದಣಿ ಮಾಡಿಸಿಕೊಂಡು ಸುರಕ್ಷಿತರಾಗಬೇಕು. ಮದುವೆಯಾಗಿ ಮಕ್ಕಳಾದ ಮೇಲೂ ನೋಂದಣಿ ಮಾಡಿಸಬಹುದು. ಆಗ ಮಕ್ಕಳ ಹೆಸರನ್ನೂ ಸಹ ನೋಂದಣಿ ಪತ್ರದಲ್ಲಿ ನಮೂದಿಸಲಾಗುತ್ತದೆ. ಆದರೆ ಮದುವೆಯಾದ ಕೂಡಲೇ ನೋಂದಣಿ ಮಾಡಿಸುವುದು ಅತ್ಯುತ್ತಮ.
ಮದುವೆ ನೋಂದಣಿ ಮಾಡಿಸುವುದು ಬಹಳ ಸರಳ. ರಾಜ್ಯ ಮಟ್ಟದಲ್ಲಿ ಇನ್ಸ್‌ಪೆಕ್ಟರ್ ಜನರಲ್ ಆಫ್ ರಿಜಿಸ್ಟ್ರೇಷನ್ ಮತ್ತು ಕಮೀಷನರ್ ಆಫ್ ಸ್ಟ್ಯಾಂಪ್ಸ್, ಕಂದಾಯ ಇಲಾಖೆ, ಇವರ ಸಮ್ಮುಖದಲ್ಲಿ, ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ರಿಜಿಸ್ಟ್ರಾರ್ ಆಫ್ ಸ್ಟ್ಯಾಂಪ್ಸ್ ಮತ್ತು ರಿಜಿಸ್ಟ್ರೇಷನ್, ಇವರ ಸಮ್ಮುಖದಲ್ಲಿ, ಹಳ್ಳಿಗಳಲ್ಲಿ ಗ್ರಾಮ ಲೆಕ್ಕಿಗರ ಸಮ್ಮುಖದಲ್ಲಿ ಮದುವೆಯನ್ನು ನೋಂದಣಿ ಮಾಡಿಸಲು ಅರ್ಜಿಗಳು ಲಭ್ಯವಿವೆ. ಮದುವೆಯಾದ ಮೂವತ್ತು ದಿನಗಳೊಳಗಾಗಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಅರ್ಜಿ ಸಲ್ಲಿಸಿದ ನಂತರ, ಈ ಬಗ್ಗೆ ಸಾರ್ವಜನಿಕರ ಗಮನಕ್ಕಾಗಿ ನೋಟೀಸನ್ನು ಜಾರಿ ಮಾಡಲಾಗುತ್ತದೆ. ನೋಟೀಸು ಜಾರಿಯಾದ ಮೂವತ್ತು ದಿನಗಳಲ್ಲಿ ಯಾವುದೇ ವಿಧದ ತಕರಾರು ಬರದಿದ್ದಲ್ಲಿ ಅರ್ಜಿದಾರ ದಂಪತಿವಿವಾಹವನ್ನು ರಿಜಿಸ್ಟ್ರಾರ್‌ರವರು ನೋಂದಾಯಿಸಿ ದೃಢೀಕರಣ ಪತ್ರವನ್ನು ಅವರಿಗೆ ಕೊಡುತ್ತಾರೆ.
ಮಹಿಳೆಯರು ತಮ್ಮ ಹಕ್ಕುಗಳನ್ನು ತಿಳಿಯಬೇಕು. ಜನನ ಮತ್ತು ಮರಣಗಳನ್ನು ನೋಂದಣಿ ಮಾಡಿಸುವಂತೆ ವಿವಾಹವನ್ನೂ ಕಡ್ಡಾಯವಾಗಿ ನೋಂದಣಿ ಮಾಡಿಸಬೇಕು. ಆದುದರಿಂದ ಮುಂದೆ ನಡೆಯಬಹುದಾದ ಅಪಾಯಗಳಿಂದ ಪಾರಾಗಬಹುದು. ಪ್ರೀತಿ ಮತ್ತು ನಂಬಿಕೆಗೆ ಒಂದು ಸುರಕ್ಷತೆ ಸಿಗಬೇಕು. ನೀವು ಯಾವುದೇ ವಿವಾಹ ಸಮಾರಂಭಕ್ಕೆ ಹೋದರೂ ಅವರ ಮದುವೆ ನೋಂದಣಿ ಮಾಡಿಸಲು ಕ್ರಮ ತೆಗೆದುಕೊಂಡಿದ್ದಾರಾ ಎಂಬುದನ್ನು ದಯವಿಟ್ಟು ವಿಚಾರಿಸಿ. ಅವರಿಗೆ ಅದರ ಬಗ್ಗೆ ಅರಿವಿಲ್ಲದಿದ್ದರೆ, ಅರಿವು ಮೂಡಿಸುವುದು ನೀವು ಕೊಡುವ ದೊಡ್ಡ, ಅತ್ಯಂತ ಬೆಲೆಬಾಳುವ ಉಡುಗೊರೆಯಾಗುತ್ತದೆ.

(ಮುಂದುವರೆಯುವುದು)

- ಶಾಲಿನಿ ರಜನೀಶ್, ಐಎಎಸ್
anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement