ಪಶು ವೈದ್ಯಕೀಯ ವಿದ್ಯಾರ್ಥಿಗಳ ಭವಿಷ್ಯ ಜೂಜಿಗೆ!
ಸರ್ಕಾರವೊಂದು ನಿರ್ಲಕ್ಷ್ಯತನ ಪ್ರದರ್ಶಿಸಿದರೆ ಏನೆಲ್ಲಾ ಅನಾಹುತವಾಗುತ್ತದೆ ಎಂಬುದಕ್ಕೆ ಇದೊಂದು ಸ್ಪಷ್ಟ ನಿದರ್ಶನ. ರಾಜ್ಯದ ಮೂರು...
ಸರ್ಕಾರವೊಂದು ನಿರ್ಲಕ್ಷ್ಯತನ ಪ್ರದರ್ಶಿಸಿದರೆ ಏನೆಲ್ಲಾ ಅನಾಹುತವಾಗುತ್ತದೆ ಎಂಬುದಕ್ಕೆ ಇದೊಂದು ಸ್ಪಷ್ಟ ನಿದರ್ಶನ. ರಾಜ್ಯದ ಮೂರು ಪಶು ವೈದ್ಯಕೀಯ ಕಾಲೇಜುಗಳ ನೂರಾರು ವಿದ್ಯಾರ್ಥಿಗಳ ಭವಿಷ್ಯ ಭಗ್ನವಾಗುತ್ತಿದೆ. ಪಶು ವೈದ್ಯ ಪದವಿ ಪಡೆದು ತಮ್ಮ ಭವಿಷ್ಯದ ಜೊತೆಗೆ ಪ್ರಾಣಿ ಲೋಕಕ್ಕೆ ಸಾಧ್ಯವಾದಷ್ಟು ಸೇವೆ ಸಲ್ಲಿಸಬೇಕೆಂಬ ಅವರ ಬಯಕೆ ನುಚ್ಚು ನೂರಾಗುತ್ತಿದ್ದು, ಅತಂತ್ರತೆಯ ಆತಂಕವನ್ನು ಎದುರಿಸಬೇಕಾಗಿದೆ. ಇದಕ್ಕೆ ಕಾರಣ ರಾಜ್ಯ ಸರ್ಕಾರದ ನಿರ್ಲಕ್ಷ್ಯತನ. ಶಿವಮೊಗ್ಗ, ಹಾಸನ ಮತ್ತು ಬೀದರ್‌ನಲ್ಲಿ ಇರುವ ಪಶು ವೈದ್ಯಕೀಯ ಕಾಲೇಜುಗಳಿಗೆ ಕರ್ನಾಟಕ ವೈದ್ಯಕೀಯ ಮಂಡಳಿ (ಕೆವಿಸಿ) ಮಾನ್ಯತೆ ಸಿಕ್ಕಿಲ್ಲ.
ಇದರಿಂದ ಮೂರು ಕಾಲೇಜುಗಳಲ್ಲಿ 5 ವರ್ಷಗಳ ಶ್ರಮಪೂರ್ಣ ವ್ಯಾಸಂಗ ಮಾಡಿ ಪದವಿ ಮುಗಿಸಿರುವ 500 ವಿದ್ಯಾರ್ಥಿಗಳು ಮತ್ತು ಪ್ರಸಕ್ತ ಸಾಲಿನಲ್ಲಿ ಪದವಿ ಪಡೆದು ಹೊರ ಹೋಗುತ್ತಿರುವ 250 ವಿದ್ಯಾರ್ಥಿಗಳು ಕಾನೂನುಬದ್ಧವಾಗಿ ಪದವಿ ಪಡೆದು ಉದ್ಯೋಗ ಪಡೆದು ಸುಂದರ ಬದುಕನ್ನು ಕಟ್ಟಿಕೊಳ್ಳುವ ಅವಕಾಶದಿಂದ ವಂಚಿತರಾಗಿದ್ದಾರೆ. ಇರುವ ಮೂರು ಕಾಲೇಜುಗಳಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸದೆ ಕೆವಿಸಿ ಮಾನ್ಯತೆ ಪಡೆಯಲಾಗದ ರಾಜ್ಯ ಸರ್ಕಾರ ಮತ್ತೇ ಗದಗ್, ಅಥಣಿ ಮತ್ತು ಪುತ್ತೂರಿನಲ್ಲಿ ವೈದ್ಯಕೀಯ ಕಾಲೇಜುಗಳನ್ನು ತೆರೆಯಲು ಹೊರಟಿರುವುದು ವಿವೇಚನಾರಹಿತ ನಡವಳಿಕೆಯೇ ಸರಿ. ಕೆವಿಸಿ ಮಾನ್ಯತೆ ಪಡೆಯದಿದ್ದರೇ ಡಿಗ್ರಿಯನ್ನು ಪರಿಗಣಿಸಲಾಗುವುದಿಲ್ಲ.
ಪಶು ಸಂಗೋಪನಾ ಸಚಿವರಾದ ಟಿ.ಬಿ. ಜಯಚಂದ್ರ ಅವರು, ವಿಧಾನಸಭೆಯೊಳಗೆ ಪಶು ವೈದ್ಯಕೀಯ ಕಾಲೇಜುಗಳಿಗೆ ಸದ್ಯದಲ್ಲೇ ಮಾನ್ಯತೆ ದೊರಕಿಸಿಕೊಳ್ಳಲಾಗುವುದು ಎಂದು ಹೇಳಿಯೇ ಒಂದೂವರೆ ತಿಂಗಳಾಯಿತು. ಇನ್ನೂ ಮಾನ್ಯತೆ ಸಿಕ್ಕಿಲ್ಲ. ಸರ್ಕಾರ ಮಾನ್ಯತೆ ದೊರಕಿಸಿಕೊಡುವಲ್ಲಿ ವಿಫಲವಾಗಿದೆ ಎಂದು ಖಂಡಿಸಿ ಪಶು ವೈದ್ಯ ವಿದ್ಯಾರ್ಥಿಗಳು ಪ್ರತಿಭಟನೆ ಹಾದಿ ಹಿಡಿದಿದ್ದಾರೆ. ಭಾರತೀಯ ಪಶು ವೈದ್ಯಕೀಯ ಪರಿಷತ್ತಿನ ಅಧೀನ ಸಂಸ್ಥೆಯಾದ ಕರ್ನಾಟಕ ಪಶು ವೈದ್ಯಕೀಯ ಮಂಡಳಿ ಸದಸ್ಯರು ಮೂರು ಕಾಲೇಜುಗಳಿಗೆ ಭೇಟಿ ನೀಡಿದಾಗ ನಿಗದಿಪಡಿಸಿದ ಪ್ರಮಾಣದಲ್ಲಿ ಅಧ್ಯಾಪಕರು, ಪ್ರಯೋಗಾಲಯ, ಕಟ್ಟಡ ಮತ್ತಿತರ ಅಗತ್ಯ ಸೌಲಭ್ಯಗಳು ಇರಲಿಲ್ಲ. ಇದರಿಂದ ಮಾನ್ಯತೆ ನೀಡಲು ನಿರಾಕರಿಸಲಾಗಿದೆ.
ಶಿವಮೊಗ್ಗ ಮತ್ತು ಹಾಸನದ ಕಾಲೇಜುಗಳು ಹೊಸವು. ಆದರೆ ಮಾನ್ಯತೆ ಪಡೆದುಕೊಂಡಿದ್ದ ಬೀದರ್ ಕಾಲೇಜಿನಲ್ಲಿ ಮೂಲ ಸೌಲಭ್ಯಗಳಿಲ್ಲ ಎಂದು ನೀಡಿದ್ದ ಮಾನ್ಯತೆಯನ್ನು ಕೂಡ ಇತ್ತೀಚೆಗೆ ರದ್ದುಪಡಿಸಲಾಗಿದೆ. ಸಚಿವರು ಮಾನ್ಯತೆ ದೊರಕಿಸಿಕೊಡಲಾಗುವುದು ಎಂದು ಹೇಳಲಾರಂಭಿಸಿದ ನಂತರ ಬೀದರ್ ಕಾಲೇಜಿನ ಮಾನ್ಯತೆಯನ್ನು ರದ್ದುಪಡಿಸಲಾಗಿದೆ. ಇದು ವಿದ್ಯಾರ್ಥಿಗಳಲ್ಲಿ ಆತಂಕವನ್ನು ಉಂಟು ಮಾಡಿದೆ. ಕಾಲೇಜುಗಳಿಗೆ ಪ್ರವೇಶ ಪ್ರಕ್ರಿಯೆ ನಡೆಸುವ ವೇಳೆ ಮಾನ್ಯತೆ ಪಡೆದುಕೊಂಡಿರುವ ಬಗ್ಗೆಯಾಗಲಿ ಅಥವಾ ಮಾನ್ಯತೆ ಪಡೆದುಕೊಳ್ಳದಿದ್ದರೇ ಆಗುವ ತೊಂದರೆಗಳು ಏನು, ಎಂಬಿತ್ಯಾದಿ ವಿಷಯಗಳನ್ನು ತಿಳಿಸಲಿಲ್ಲ. 5 ವರ್ಷಗಳಾದರೂ ಮಾನ್ಯತೆ ಪಡೆದುಕೊಳ್ಳಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಇದು ದುರಂತ ಎಂದು ಅತಂತ್ರ ಪರಿಸ್ಥಿತಿಯನ್ನು ಎದುರಿಸುತ್ತಿರುವ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಹಾಲು ಮಹಾಮಂಡಳದಡಿ ಇರುವ ರಾಜ್ಯಾದ್ಯಂತ ಇರುವ 11 ಒಕ್ಕೂಟಗಳಲ್ಲಿ ಪಶು ವೈದ್ಯರ ಕೊರತೆ ಸಿಕ್ಕಾಪಟ್ಟೆ ಇದೆ. ಇದರಿಂದ ಜಾನುವಾರುಗಳಿಗೆ ಸೂಕ್ತ ಕಾಲದಲ್ಲಿ ಚಿಕಿತ್ಸೆ ದೊರೆಯುತ್ತಿಲ್ಲ. ಒಕ್ಕೂಟಗಳು ತಮಿಳುನಾಡು ಮತ್ತಿತರ ಕಡೆಯ ಪಶು ವೈದ್ಯರನ್ನು ಕಾಡಿಬೇಡಿ ಕರೆ ತರುವಂತ ಪರಿಸ್ಥಿತಿ ಇದೆ. ರಾಜ್ಯದ ಪಶು ಆಸ್ಪತ್ರೆಗಳಲ್ಲೂ ವೈದ್ಯರ ಕೊರತೆ ಇದೆ. ಈ ಸಂಗತಿ ಕರ್ನಾಟಕ ಸರ್ಕಾರಕ್ಕೆ ಗೊತ್ತಿರದ ವಿಷಯವೇನೂ ಅಲ್ಲ. ಆದರೂ ಪಶು ವೈದ್ಯಕೀಯ ಕಾಲೇಜುಗಳಿಗೆ ತ್ವರಿತವಾಗಿ ಮಾನ್ಯತೆ ದೊರಕಿಸಿ ಕೊಡದೇ ಇರುವುದು ವಿಪರ್ಯಾಸದ ಸಂಗತಿ.
ಕಾಲೇಜುಗಳಿಗೆ ಮೂಲ ಸೌಲಭ್ಯಗಳನ್ನು ಕಲ್ಪಿಸದೇ ಕೇಂದ್ರದ ಕೃಷಿ ಸಚಿವರು ಮತ್ತಿತರನ್ನು ಭೇಟಿ ಮಾಡಿ ಮಾನ್ಯತೆ ನೀಡಬೇಕು ಎಂದು ರಾಜ್ಯ ಸಚಿವರು ಮನವಿ ಸಲ್ಲಿಸಿದರೆ ಪ್ರಯೋಜನವಾಗುವುದಿಲ್ಲ. ಹಾಸನ ಮತ್ತು ಶಿವಮೊಗ್ಗದಲ್ಲಿ ಪಶು ವೈದ್ಯಕೀಯ ಮಹಾ ವಿದ್ಯಾಲಯವನ್ನು 2007 ರಲ್ಲಿ ಆರಂಭಿಸಿದ್ದು, ಈ ಕಾಲೇಜುಗಳಿಗೆ ಸ್ವಂತ ಕಟ್ಟಡ ಹಾಗೂ ಮೂಲಭೂತ ಸೌಕರ್ಯಗಳ ಕೊರತೆಯಿಂದ ತಾತ್ಕಾಲಿಕವಾಗಿ ಬೇರೆಡೆ ನಡೆಸಲಾಗುತ್ತಿದೆ.
ಈಗಾಗಲೇ ಈ ಕಾಲೇಜುಗಳಿಂದ ಎರಡು ಬ್ಯಾಚ್‌ಗಳು ತಮ್ಮ ಪದವಿಯನ್ನು ಮುಗಿಸಿದ್ದು, ಕಾಲೇಜಿಗೆ ಮಾನ್ಯತೆ ಇಲ್ಲದ ಕಾರಣ ಅವರೆಲ್ಲರ ಭವಿಷ್ಯ ಅತಂತ್ರವಾಗಿದೆ. ಇಲ್ಲಿ ಯಾವುದೇ ತರಹದ ಮೂಲಭೂತ ಸೌಕರ್ಯಗಳು ಇಲ್ಲದೆ ಇದ್ದರೂ ಸಹ ವ್ಯಾಸಂಗ ಮಾಡಿದ ರೈತ, ಹಿಂದುಳಿದ ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳು ತೊಂದರೆಗೆ ಸಿಲುಕಿಕೊಂಡಿದ್ದಾರೆ.
ವೈದ್ಯಕೀಯ ಕಾಲೇಜು ನಡೆಸಲು ಬೇಕಾದ ಮೂಲಭೂತ ಸೌಕರ್ಯಗಳನ್ನು 7 ವರ್ಷಗಳಿಂದ ಒದಗಿಸುವಲ್ಲಿ ಸರ್ಕಾರ ವಿಫಲಗೊಂಡಿದೆ. ವೈದ್ಯಕೀಯ ಮಂಡಳಿ ನಿಗದಿ ಪಡಿಸಿದಂತೆ ಕಾಲೇಜುಗಳಿಗೆ ಸ್ವಂತ ಆಡಳಿತ ಕಟ್ಟಡಗಳಿಲ್ಲ. ಚಿಕಿತ್ಸಾ ಸಂಕೀರ್ಣದ ಕಟ್ಟಡ ಕಾಲೇಜಿನ ಆಡಳಿತಕ್ಕೆ ವರ್ಗಾವಣೆಗೊಂಡಿರುವುದಿಲ್ಲ. ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರ ವಸತಿ ನಿಲಯ ಕಟ್ಟಡಗಳ ಕಾಮಗಾರಿ ಪೂರ್ಣಗೊಂಡಿರುವುದಿಲ್ಲ. ವಿಭಾಗವಾರು ಸೌಲಭ್ಯ ಹಾಗೂ ಉಪಕರಣಗಳಿಲ್ಲ. ಚಿಕಿತ್ಸಾ ಸಂಕೀರ್ಣಕ್ಕೆ ಕನಿಷ್ಠ ಸಂಖ್ಯೆಯ ರೋಗಿಗಳು (ಪ್ರಾಣಿಗಳು) ಬರುವ ವ್ಯವಸ್ಥೆ ಇಲ್ಲ.
ಜಾನುವಾರು ಶೈಕ್ಷಣಿಕ ತರಬೇತಿ ಸಂಕೀರ್ಣದಲ್ಲಿ ಇಲ್ಲಿಯವರೆಗೂ ಕೇವಲ ಹಂದಿ ಫಾರಂ ಮಾತ್ರ ಇದ್ದು, ಅವಶ್ಯಕವಾಗಿ ಬೇಕಾಗಿರುವ ಹಸುಗಳು, ಎಮ್ಮೆ, ಕುದುರೆ, ಮೇಕೆ, ಕುರಿ, ಕೋಳಿ ಫಾರಂಗಳು ಹಾಗೂ ಅದಕ್ಕೆ ಬೇಕಾಗಿರುವ ಕಟ್ಟಡಗಳ ಕಾಮಗಾರಿಗಳನ್ನು 7 ವರ್ಷಗಳಾದರೂ ಪ್ರಾರಂಭಿಸಿರುವುದಿಲ್ಲ ಹಾಗೂ ಅಗತ್ಯ ಸಂಖ್ಯೆಯಲ್ಲಿ ಪ್ರಾಣಿಗಳು ಇರುವುದಿಲ್ಲ.
ಈ ನ್ಯೂನತೆಗಳನ್ನು ಸರಿಪಡಿಸುವುದು ಸರ್ಕಾರದ ಕರ್ತವ್ಯ. ಈ ಸೌಲಭ್ಯಗಳನ್ನು ಒದಗಿಸಲು 15 ದಿನಗಳಿಗಿಂತ ಹೆಚ್ಚು ಕಾಲಾವಕಾಶ ಬೇಕಾಗಿರುವುದಿಲ್ಲ. ಅಲ್ಲದೇ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಕೊರತೆ ನೀಗಿಸಬೇಕಾಗಿದೆ. ಭಾರತೀಯ ಪಶು ವೈದ್ಯಕೀಯ ಪರಿಷತ್ತು ಹಿಂದೆಯೇ ಈ ನ್ಯೂನತೆಗಳನ್ನು ಸರಿಪಡಿಸಲು ಸೂಚಿಸಿತ್ತು. ಸಂಬಂಧಪಟ್ಟವರು ಇನ್ನೂ ಪೂರೈಸಿರುವುದಿಲ್ಲ.
ಕೆವಿಸಿ ನಿಗದಿಪಡಿಸಿದ ಸೌಲಭ್ಯಗಳನ್ನು ಒದಗಿಸಲು ಬಹಳ ಹಣ ಬೇಕಾಗಿಲ್ಲ. ಮೂರು ಕಾಲೇಜುಗಳಿಗೆ ತಲಾ 30 ಕೋಟಿ ರು. ನೀಡಿದರೆ ಸಾಕು. ಕಾಲೇಜುಗಳಿಗೆ ಮಾನ್ಯತೆ ದೊರಕಿಸಿ ಕೊಡುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಗಮನಹರಿಸಬೇಕಾಗಿದೆ. ಇಲ್ಲದಿದ್ದರೇ ರಾಜ್ಯದಲ್ಲಿ ಪಶು ವೈದ್ಯರ ಕೊರತೆ ನೀಗುವುದಿಲ್ಲ. ಹಳ್ಳಿಗಾಡಿನ ಲಕ್ಷಾಂತರ ರೈತ ಮಹಿಳೆಯರ ಆಶಾಕಿರಣವಾಗಿರುವ ಜಾನುವಾರುಗಳು ಹೆಚ್ಚಿನ ಪ್ರಮಾಣದಲ್ಲಿ ರೋಗಗ್ರಸ್ಥವಾಗುತ್ತವೆ. ರಾಜ್ಯದಲ್ಲಿ ಹಾಲು ಉತ್ಪಾದನೆ ಕುಂಠಿತವಾಗುತ್ತದೆ. ಇದರಿಂದ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ಕೊಟ್ಟರೂ ಒಂದೇ ಕೊಡದಿದ್ದರೂ ಒಂದೇ ಎಂಬಂತೆ ಆಗುತ್ತದೆ.
- ದಯಾಶಂಕರ ಮೈಲಿ
ಕನ್ನಡಪ್ರಭ