ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ವ್ಯಕ್ತಿತ್ವ V/s ಸಿದ್ಧಾಂತವೆಂಬ ಅನಗತ್ಯ ವಾದ

Mainashree
Updated On : 12 Sept 2013, 1:12 am

ಇತಿಹಾಸದ ಉದ್ದಕ್ಕೂ ಜಗತ್ತಿನ ಚಹರೆಯನ್ನು ಬದಲಿಸುತ್ತ ಬಂದಿದ್ದು ಐಡಿಯಾಗಳೇ. ಇವು ಸಮಾಜದ ಮನೋಭೂಮಿಕೆಯನ್ನು ಆಕ್ರಮಿಸುವುದಕ್ಕೆ ಈ ಐಡಿಯಾಗಳನ್ನು ಕೆಲ ಬುದ್ಧಿವಂತ ಪರಾಕ್ರಮಿಗಳು ಸಮೂಹದೆಡೆಗೆ ಮುನ್ನುಗ್ಗಿಸಿದ್ದೇ ಕಾರಣ.
ಯಾವುದೇ ಐಡಿಯಾ ಸ್ವೀಕಾರಾರ್ಹವಾಗಬೇಕಾದರೆ ಅದನ್ನು ರಸವತ್ತಾಗಿ ಹಾಗೂ ವಿವರವಾಗಿ ಕಟ್ಟಿಕೊಡುವಿಕೆ ಬಹಳ ಮಹತ್ವದ ಪಾತ್ರವನ್ನು ವಹಿಸುತ್ತದೆ. ಹೀಗಾಗಿ ಒಂದು ರಾಜಕೀಯ ವಿಚಾರದ ಯಶಸ್ಸೂ ಅದನ್ನು ಯಾರು, ಹೇಗೆ ಕಟ್ಟಿಕೊಡುತ್ತಾರೆ ಎಂಬುದನ್ನು ಅವಲಂಬಿಸಿರುತ್ತದೆ. ಸಿದ್ಧಾಂತಗಳು ಎಷ್ಟೇ ಆದರ್ಶಮಯವಾಗಿದ್ದರೂ ಅವು ಹಾಗೆಯೇ ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರುವುದಿಲ್ಲ. ಆ ಸಿದ್ಧಾಂತಗಳ ಪ್ಯಾಕೇಜಿಂಗ್ ಮಾತ್ರವೇ ಫಲಿತಾಂಶವನ್ನು ಪ್ರಭಾವಿಸುತ್ತದೆ. ರಾಜಕೀಯ ಪಕ್ಷದ ಕಾಲಾಳುವು ಜನರ ನಾಡಿಮಿಡಿತವನ್ನು ಅರಿಯುವುದಕ್ಕೆ ಅವರ ಬಳಿ ಹೋದಾಗ ತಿಳಿಯುವುದೇನೆಂದರೆ, ಆ ಜನ ಎರಡು ಅಂಶಗಳತ್ತ ಆಸಕ್ತರಾಗಿದ್ದಾರೆ ಎಂಬುದು. ತಮ್ಮ ದೈನಂದಿನ ಬದುಕು ಅವರ ಪ್ರಥಮ ಕಾಳಜಿ. ನಂತರ ಅವರು ಗ್ರಹಿಸುವುದು ತಮ್ಮ ರಾಜಕೀಯ ಪಕ್ಷದ ಸ್ಥಳೀಯ ಇಲ್ಲವೇ ರಾಷ್ಟ್ರೀಯ ಸ್ಥರದ ಮುಖ ಯಾವುದು ಎಂಬುದನ್ನು. ಹೀಗಾಗಿ ಇಂಥ ಜನಗಳಿಗೆ ವಿಚಾರವು ಮುಟ್ಟುವಂತೆ ಮಾಡುವುದಕ್ಕೆ ಅನುಸರಿಸಬಹುದಾದ ಏಕೈಕ ಮಾರ್ಗವೆಂದರೆ ಇಂಥ ವಿಚಾರ ಹಾಗೂ ಸಿದ್ಧಾಂತವನ್ನು ಪ್ರೇರಣಾದಾಯಿಯಾಗಿ ಹೇಳಬಲ್ಲ ವ್ಯಕ್ತಿಯ ಪ್ರಭೆ ವೃದ್ಧಿಸುವಂತೆ ನೋಡಿಕೊಳ್ಳುವುದು.  
ಈ ಪ್ರಕ್ರಿಯೆಯಲ್ಲಿ ಸಿದ್ಧಾಂತವು ಜನರನ್ನು ತಲುಪುವುದರೊಂದಿಗೆ ಅದನ್ನು ವಿವರಿಸುವುದಕ್ಕೆ ಮುಂಚೂಣಿಯಲ್ಲಿ ನಿಂತಿರುವ ವ್ಯಕ್ತಿಯೂ ಅಷ್ಟೇ ಪ್ರಾಮುಖ್ಯ ಪಡೆಯುತ್ತಾನೆ. ಸಂದೇಶವಾಹಕನೇ ಸಂದೇಶದ ಜಾಗದಲ್ಲಿ ನಿಲ್ಲುತ್ತಾನೆ. ಇಂಥ ವ್ಯಕ್ತಿಗಳು ಉದಯಿಸುವುದು ಅಪರೂಪ. ಸಿಕ್ಕಿದಾಗ ಇವರನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. ಏಕೆಂದರೆ ಇಡೀ ಸಮೂಹವನ್ನು ಸ್ಪರ್ಶಿಸಬಲ್ಲವರು ಇವರೇ ಆಗಿರುತ್ತಾರೆ.
ದೇಶದ ಸ್ಮೃತಿಯಲ್ಲಿ ಅನೇಕ ಸಾರ್ವಜನಿಕ ವ್ಯಕ್ತಿಗಳು ಐಡಿಯಾ ಒಂದರ ಬಿಂಬವಾಗಿ ನಿಂತಿರುವುದು ಕಂಡುಬರುತ್ತದೆ. ಅದು ಸ್ವಾಭಾವಿಕವೋ, ಸೃಷ್ಟಿಸಿಕೊಂಡಿದ್ದೋ ಎಂಬ ಚರ್ಚೆ ಬೇರೆ. ನೆಹರು ಅವರ ಸುತ್ತಲಿನ ಪ್ರಭೆ ಜಾಗರೂಕವಾಗಿ ಸೃಷ್ಟಿಸಿಕೊಂಡಿದ್ದಾದರೆ, ಗಾಂಧೀಜಿ ಅವರ ವ್ಯಕ್ತಿತ್ವದ ಬಲದಿಂದಲೇ ಪ್ರಭೆ ನಿರ್ಮಾಣವಾಯಿತು. ದೇಶದ ಚಿತ್ತಭಿತ್ತಿಯನ್ನು ಗಾಂಧಿ ಎಷ್ಟರಮಟ್ಟಿಗೆ ಆವರಿಸಿಕೊಂಡಿದ್ದಾರೆಂಬುದಕ್ಕೆ ಕೇವಲ ಅವರ ಹೆಸರಿನ ಬಲದಿಂದಲೇ ಇಂದಿಗೂ ಕೆಲವರು ಸೀಮಿತ ಚುನಾವಣಾ ಲಾಭವನ್ನು ಪಡೆಯುವುದಕ್ಕೆ ಸಾಧ್ಯವಾಗುತ್ತಿದೆ.
ನರೇಂದ್ರ ಮೋದಿಯವರ ವಿಷಯಕ್ಕೆ ಬಂದರೆ ಹಿಂಜರಿಕೆಯಿಲ್ಲದ ಹಿಂದೂ ಹಾಗೂ ಅಭಿವೃದ್ಧಿ ಹರಿಕಾರ ಎಂಬ ಇಮೇಜ್‌ಗಳು ಅವರ ವ್ಯಕ್ತಿತ್ವವನ್ನು ಬೆಸೆದುಕೊಂಡಿವೆ. ವಿರೋಧಿಗಳು ಬೇರೆಯದೇ ರೀತಿಯಲ್ಲಿ, ತಮ್ಮ ಹಿತಾಸಕ್ತಿಗೆ ಪೂರಕವಾಗಿ ಅವರ ಇಮೇಜ್ ವ್ಯಾಖ್ಯಾನಿಸುತ್ತಾರೆ. ಸೋನಿಯಾ ಗಾಂಧಿ ಹಾಗೂ ಮನಮೋಹನ ಸಿಂಗ್ ವಿಷಯದಲ್ಲಿ ಬಿಜೆಪಿಯ ಇತರರು ತೋರಿಸುತ್ತಿರುವ ಅನಗತ್ಯ ವಿನಮ್ರತೆ ಮೋದಿಯಲ್ಲಿ ಇಲ್ಲದಿರುವುದು ಅವರ ವ್ಯಕ್ತಿತ್ವವನ್ನು ಪ್ರಮುಖವಾಗಿಸಿದೆ. ದೆಹಲಿ ಗಾದಿಯನ್ನು ತಲುಪಿದರೆ ಈ ವ್ಯಕ್ತಿತ್ವದಲ್ಲಿ ಬದಲಾವಣೆಗಳಾಗುತ್ತವೋ ಎಂಬ ಕುತೂಹಲವಿದ್ದರೂ ಸದ್ಯಕ್ಕೆ ಮೋದಿ ವ್ಯಕ್ತಿತ್ವವು ಎರಡು ವಾದಗಳನ್ನು ಹುಟ್ಟುಹಾಕಿದೆ. ಬಿಜೆಪಿಯಲ್ಲಿ ಉಳಿದೆಲ್ಲ ನಾಯಕರು ಮಾರಾಟವಾಗಿದ್ದಾರೆ ಎಂಬ ಆಕ್ರೋಶ ಹೊತ್ತ ಮೋದಿ ಬೆಂಬಲಿಗರು ಒಂದೆಡೆಯಾದರೆ, ಮೋದಿ ಭಕ್ತರು ಅವರನ್ನು ಸಿದ್ಧಾಂತಕ್ಕಿಂತ ದೊಡ್ಡವರನ್ನಾಗಿಸಿದ್ದಾರೆ ಎಂದು ದೂರುವವರ ಪಡೆ ಇನ್ನೊಂದೆಡೆ.
ವಾಸ್ತವ ಏನೆಂದರೆ ನಮ್ಮ ಬಹುದೊಡ್ಡ ಜನವರ್ಗವು ಆರ್ಥಿಕ ನೀತಿ, ಸೈದ್ಧಾಂತಿಕ ಸರಿ- ತಪ್ಪುಗಳನ್ನು ಗಣನೆಗೆ ತೆಗೆದುಕೊಂಡು ಮತ ಹಾಕುವ ಸ್ಥಿತಿ ತಲುಪಿಲ್ಲ. ಜನರನ್ನು ಮರುಳಾಗಿಸುವ ತೋರಿಕೆಗಳಲ್ಲಿ ದೀರ್ಘಾವಧಿ ಅಧಿಕಾರಕ್ಕೆ ಅಂಟಿಕೊಂಡವರನ್ನು ಕೆಳಗಿಳಿಸಬೇಕೆಂದರೆ, ಸೈದ್ಧಾಂತಿಕ ತತ್ವಗಳನ್ನು ವಿವರಣೆಗಳಲ್ಲಿ ವಿಜೃಂಭಿಸುವ ಸಂದೇಶವಾಹಕನೊಬ್ಬ ಅನಿವಾರ್ಯ. ಶಕ್ತಿಯುತ ರಾಷ್ಟ್ರ, ಸುಸ್ಥಿರ ಆಡಳಿತ ಇವೆಲ್ಲ ಉದಾತ್ತ ಸಿದ್ಧಾಂತಗಳೇ ಆದರೂ ಸಾಮಾನ್ಯ ಮತದಾರ ಇದರ ವ್ಯಾಪ್ತಿಯನ್ನು ಏಕಾಏಕಿ ಅರ್ಥಮಾಡಿಕೊಳ್ಳಲಾರ. ಹೀಗಾಗಿ ಈ ಸಂದೇಶದ ಪ್ಯಾಕೇಜಿಂಗ್ ಮತ್ತು ಅದನ್ನು ಬಿತ್ತರಿಸುವ ವ್ಯಕ್ತಿಯ ವೈಭವ ಚಿತ್ರಣ ಅತ್ಯಗತ್ಯ.
ಸಂದೇಶವಾಹಕನೇ ಸಂದೇಶವನ್ನು ಮೀರಿ ನಿಲ್ಲುತ್ತಾನೆ ಎಂಬ ಬೊಬ್ಬೆಯಾಗಲೀ, ಇದಕ್ಕೆ ವ್ಯತಿರಿಕ್ತವಾದದ್ದು ಸರಿ ಎಂಬುದಾಗಲೀ ಚುನಾವಣೆ ದೃಷ್ಟಿಯಿಂದ ಪ್ರಾಯೋಗಿಕವಲ್ಲ. ಇವೆರಡೂ ಅಂಶಗಳು ಒಂದಕ್ಕೊಂದು ಪೂರಕವಾಗಿದ್ದು ಯಾವ ಅಂಶವೂ ಇನ್ನೊಂದನ್ನು ಮೀರಲಾರದು.

ಸುಹಾಸ್ ಅಂಬಳೆ, ತಂತ್ರಜ್ಞ
centerright.in

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement