ಹಿಂದುತ್ವ, ಜಾತ್ಯತೀತ ಬದುಕಿನ ಸುಂದರ ರಹದಾರಿ
ಯಾವುದು ಧಾರ್ಮಿಕ ಮತ್ತು ಯಾವುದು ಜಾತ್ಯತೀತವಲ್ಲ ಎಂಬ ಹೇಳಿಕೆಯನ್ನು...
ಹಿಂದುತ್ವ ಎಂಬುದನ್ನು ಕೋಮು ಭಾವನೆಯನ್ನು ಕೆರಳಿಸುವ ಪದ ಎಂದು ಸೆಕ್ಯೂಲರ್ ಜೀವಿ ಎಂಬ ಹಣೆಪಟ್ಟಿ ಅಂಟಿಸಿಕೊಂಡ ಜನ ಯಾವ ಆಧಾರದಲ್ಲಿ ಹೇಳುತ್ತಾರೆ? ವೋಟ್ ಬ್ಯಾಂಕ್ ಹೆಸರಲ್ಲಿ ದ್ವೇಷದ ವಾತಾವರಣ ಸೃಷ್ಟಿಯಾಗುವ ದುರ್ಭರ ಸಂದರ್ಭ ಖಂಡಿತ ಬರಬಾರದು
ಯಾವುದು ಧಾರ್ಮಿಕ ಮತ್ತು ಯಾವುದು ಜಾತ್ಯತೀತವಲ್ಲ ಎಂಬ ಹೇಳಿಕೆಯನ್ನು ಅಂಗೈಲಿ ಹಿಡಿದುಕೊಂಡೇ ಈ ವಿಷಯವಾಗಿ ಪರ-ವಿರೋಧದ ಹೇಳಿಕೆಗಳನ್ನು 'ಸೃಷ್ಟಿಸಿಕೊಂಡು' ತನ್ನ ಬೇಳೆ ಬೇಯಿಸಿಕೊಳ್ಳುವುದು ಕಾಂಗ್ರೆಸ್ ಪಕ್ಷದ ಜಾಯಮಾನ. ಈ ಕೆಲಸವನ್ನು ಅದು ದಶಕಗಳಿಂದಲೂ ತುಂಬ ಶ್ರದ್ಧೆಯಿಂದ ಮುಂದುವರಿಸಿಕೊಂಡು ಬಂದಿದೆ.
ವಾಸ್ತವ ಏನೆಂದರೆ, ಜಾತ್ಯತೀತವಾದ ಎಂಬುದು ಮತಗಳನ್ನು ಸೆಳೆಯಲು ಇರುವ ಒಂದು ಅಡ್ಡದಾರಿ ಖಂಡಿತ ಅಲ್ಲ. ಶತಮಾನದ ಹಿಂದೆ ಬ್ರಿಟಿಷರ ಚಕ್ರಾಧಿಪತ್ಯದ ವಿರುದ್ಧ ಭಾರತೀಯರು ತಿರುಗಿ ಬಿದ್ದಾಗ ಎಲ್ಲ ಜನಾಂಗದವರನ್ನೂ ಒಂದಾಗಿಸಲು ಬಳಕೆಯಾದ ಅಪರೂಪದ, ವಿಶಿಷ್ಟ ಪದವೇ ಜಾತ್ಯತೀತವಾದ. ಆದರೆ ಇವತ್ತಿನ ಸಂದರ್ಭದಲ್ಲಿ ಅದು ಕೆಲವೇ ವರ್ಗದವರನ್ನು ಓಲೈಸಲು, ಕೆಲವೇ ಲಕ್ಷ ಓಟುಗಳನ್ನು ಪಡೆಯಲು ಬಳಕೆಯಾಗುತ್ತಿದೆ ಎಂಬುದನ್ನು ಬೇಸರ ಮತ್ತು ನೋವಿನಿಂದ ಹೇಳಬೇಕಾಗಿದೆ. ಎಲ್ಲ ಸಮುದಾಯವನ್ನೂ ಸಂಕೇತಿಸುವಂತಿದ್ದ ಈ ಪದವನ್ನು ವೋಟ್ ಪಡೆಯುವ ಏಕೈಕ ಉದ್ದೇಶಕ್ಕಾಗಿ ಕೆಲವೇ ಜಾತಿ ಹಾಗೂ ಸಮುದಾಯವನ್ನು ಗುರುತಿಸುವ ಪದವನ್ನಾಗಿ ಬದಲಿಸಿದ್ದು ಕಾಂಗ್ರೆಸ್ ಪಕ್ಷದವರ ಮನಸ್ಥಿತಿಯ ಪ್ರದರ್ಶನಕ್ಕೆ ಸಾಕ್ಷಿಯಂತಿಲ್ಲವೇ?
ಇವತ್ತಿನ ಸಂದರ್ಭದಲ್ಲಿ, ಬಹುಸಂಖ್ಯೆಯಲ್ಲಿರುವ ಹಿಂದು ಮತಗಳನ್ನು ಒಡೆಯುವುದು ಒಂದು ಚಾಲೆಂಜ್ ಅಲ್ಲ. ಅದೊಂದು ಸಮಸ್ಯೆಯೂ ಅಲ್ಲ. ಏಕೆಂದರೆ, ಜಾತಿ ಆಧರಿಸಿದ ರಾಜಕಾರಣ ನೀತಿಯಿಂದಾಗಿ ಬಹುಸಂಖ್ಯಾತ ಹಿಂದು ಮತಗಳು ಒಡೆದು ಹೋಗಿವೆ. ತಳ ಸಮುದಾಯದವರು ಎಂದು ಗುರುತಿಸಲಾಗುವ ದಲಿತರು, ಹಿಂದುಳಿದ ವರ್ಗದವರು, ಪರಿಶಿಷ್ಟ ಪಂಗಡದವರು ಹಾಗೂ ಅಲ್ಪಸಂಖ್ಯಾತರನ್ನು ಬಣ್ಣದ ಮಾತುಗಳಿಂದ, ಸುಳ್ಳು ಸುಳ್ಳೇ ಆಶ್ವಾಸನೆಗಳಿಂದ ಓಲೈಸುವುದು, ಈ ಸಮುದಾಯಗಳ ಏಳಿಗೆ ಕಾಂಗ್ರೆಸ್ನಿಂದ ಮಾತ್ರ ಸಾಧ್ಯವೆಂದು ಅದೇ ಸಮುದಾಯಗಳ ಮುಖಂಡರಿಂದ ಹೇಳಿಸುವುದು... ಈ ಕೆಲಸವನ್ನು ಕಾಂಗ್ರೆಸ್ ಪಕ್ಷವು ದಶಕಗಳ ಕಾಲ ಮಾಡಿಕೊಂಡು ಬಂತು. ಅಷ್ಟೇ ಅಲ್ಲ, ಇಂಥ ಪೊಳ್ಳು ಭರವಸೆಗಳಿಂದಲೇ ಅಧಿಕಾರದ ಗದ್ದುಗೆಯನ್ನು ಅಲಂಕರಿಸಿತು. ಪುಣ್ಯಕ್ಕೆ, ನಂತರದ ದಿನಗಳಲ್ಲಿ ಕೆಲವು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಹುಟ್ಟಿಕೊಂಡವು. ಹಾಗೆಯೇ ಕೇಂದ್ರದಲ್ಲಿಯೂ ಪ್ರಬಲ ಪಕ್ಷಗಳು ಹುಟ್ಟಿಕೊಂಡು ಕಾಂಗ್ರೆಸ್ಗೆ ಸೆಡ್ಡು ಹೊಡೆದವು. ಅನಂತರದಲ್ಲಿ ಬಣ್ಣದ ಮಾತುಗಳನ್ನು ಆಡಿಕೊಂಡು ಹಿಂದುಳಿದವರ ಮತಬೇಟೆಯಲ್ಲಿ ತೊಡಗುತ್ತಿದ್ದ ಕಾಂಗ್ರೆಸ್ಸಿಗರ ಆಟಗಳಿಗೆ ಸ್ವಲ್ಪ ಮಟ್ಟಿಗಾದರೂ ಬ್ರೇಕ್ ಬಿತ್ತು.
ತಮ್ಮ ಏಕಸ್ವಾಮ್ಯ ರೀತಿ ನೀತಿಗೆ ತೀರಾ ಅನಿರೀಕ್ಷಿತವಾಗಿ ಪೆಟ್ಟು ಬಿದ್ದಾಗ ಕಾಂಗ್ರೆಸ್ಸಿಗರು ಸುಮ್ಮನಿರಲಿಲ್ಲ. ಅವರು ಹಿಂದುತ್ವ ಎಂಬ ಪದ ಮತ್ತು ಅದರ ಅರ್ಥವನ್ನೇ ತಿರುಚಿ, ಅದನ್ನು ತಮ್ಮ ವೋಟ್ ಬ್ಯಾಂಕ್ ರಾಜಕೀಯಕ್ಕೆ ಬಳಸಿಕೊಳ್ಳಲು ಮುಂದಾದರು. ಹಿಂದು ಎಂಬುದೇ ಬೇರೆ. ಹಿಂದುತ್ವವಾದವೇ ಬೇರೆ ಎಂದು ಕೂಗಾಡಲು ಆರಂಭಿಸಿದರು. ಸಂದರ್ಭ ಹೀಗಿರುವಾಗಲೇ -ಹಿಂದು ಎಂಬುದು, ಹಿಂದುತ್ವ ಎಂಬುದು ಹೇಗೆ ಬಳಕೆಗೆ ಬಂತು, ಅವೆರಡಕ್ಕೂ ಸಮಾನ ಅರ್ಥ ಕಾಣಿಸುವುದು ಯಾವಾಗ ಎಂದು ವಿವರಿಸುವುದು ನನ್ನ ಉದ್ದೇಶ.
1830ಕ್ಕೂ ಮೊದಲು ಹಿಂದುಯಿಸಂ ಎಂಬ ಪದವೇ ಬಳಕೆಯಲ್ಲಿ ಇರಲಿಲ್ಲ! ಎನ್ಸೈಕ್ಲೋಪೀಡಿಯಾ ಬ್ರಿಟಾನಿಕಾದಲ್ಲಿರುವ ಉಲ್ಲೇಖನವನ್ನು ಆಧರಿಸಿಯೇ ನಾನು ಈ ಮಾತುಗಳನ್ನು ಹೇಳುತ್ತಿದ್ದೇನೆ. ವೇದಗಳಲ್ಲಾಗಲಿ, ಪುರಾಣದಲ್ಲಾಗಲಿ ಹಿಂದುಯಿಸಂ ಎಂಬ ಪದ ಬಳಕೆಯಲ್ಲಿದ್ದಂತೆ ಕಾಣುವುದಿಲ್ಲ. ಅಷ್ಟೇ ಅಲ್ಲ, ಶತಮಾನಗಳ ಹಿಂದಿದ್ದ ರಾಜ ಮಹಾರಾಜರುಗಳು ಆಸ್ಥಾನಕ್ಕೆ 1830ಕ್ಕೂ ಮೊದಲು ಬಂದಿದ್ದ ವಿದೇಶಿ ಯಾತ್ರಿಕರೂ ತಮ್ಮ ಬರಹಗಳಲ್ಲಿ 'ಹಿಂದುಯಿಸಂ' ಎಂಬ ಪದವನ್ನು ಬಳಸಿಲ್ಲ. ಹಿಂದುಸ್ತಾನ್ ಎಂಬ ಪದವನ್ನು ಮೊದಲು ಬಳಸಿದ ವ್ಯಕ್ತಿ ಮಹಮ್ಮದ್ ಘೋರಿ ಆನಂತರದಲ್ಲಿ ಈ ದೇಶದ ಜನರನ್ನು ಹಿಂದುಗಳು ಎಂದು ಕರೆದವನೂ ಅವನೇ.
ಭಾರತದ ಪ್ರಾಚೀನ ಇತಿಹಾಸವನ್ನು ಅವಲೋಕಿಸಿದರೆ, ಹಿಂದು ಎಂಬ ಪದವು ಒಂದು ಧರ್ಮದ ಹೆಸರು ಸೂಚಿಸಲು ಖಂಡಿತ ಬಳಕೆಯಾಗಿಲ್ಲ. ಬದಲಿಗೆ ಒಂದು ಭೌಗೋಳಿಕ ಹಾಗೂ ಸಾಂಸ್ಕೃತಿಕ ಹಿನ್ನೆಲೆಯನ್ನು ವಿವರಿಸುವ ಪದವಾಗಿ ಮಾತ್ರ ಅದು ಬಳಕೆಯಾಗಿದೆ. ಈ ಪದವನ್ನು ಗ್ರೀಕರು, ಪರ್ಷಿಯನ್ನರು ಹಾಗೂ ಅರಬ್ಬರು ಬಳಸಿದ್ದಾರೆ. ಹಿಂದೂ ಎಂಬ ಪದ ಹೇಗೆ ಸೃಷ್ಟಿಯಾಯ್ತು ಎಂಬ ವಿಷಯವಾಗಿ ಮತ್ತೊಂದು ಕತೆಯೂ ಪ್ರಚಲಿತದಲ್ಲಿದೆ. ಏನೆಂದರೆ, ಶತಮಾನಗಳ ಹಿಂದೆ ನದಿಗಳು ಹರಿಯುವ ಸ್ಥಳ ಹಾಗೂ ನದಿಯ ಹೆಸರನ್ನು ಆಧರಿಸಿ ಒಂದು ದೇಶಕ್ಕೆ ಹೆಸರಿಡುತ್ತಿದ್ದರಂತೆ. ಭಾರತದ್ದು ಸಿಂಧೂ ಕಣಿವೆಯ ಮೂಲಕ ಆರಂಭವಾಗುವ ಇತಿಹಾಸ- ಈ ಕಾರಣದಿಂದ ಸಿಂಧೂ ತಟದ ಜನ ಎಂದೇ ಕರೆಯಲಾಗುತ್ತಿತ್ತಂತೆ. ಕಾಲಾಂತರದಲ್ಲಿ ಸಿಂಧೂ ಎಂಬ ಪದವೇ ಹಿಂದೂ ಎಂಬ ಪದವಾಗಿ ಮಾರ್ಪಾಡಾಯಿತಂತೆ!
ಆನಂತರದ ದಿನಗಳಲ್ಲಿ ಬೌದ್ಧರು, ಕ್ರಿಶ್ಚಿಯನ್ನರು, ಮುಸಲ್ಮಾನರು, ಜೈನರು,... ಹೀಗೆ ಬಹುಸಂಖ್ಯೆಯಲ್ಲಿ ವಿವಿಧ ಸಮುದಾಯದ ಜನರು ಈ ದೇಶಕ್ಕೆ ಸೇರ್ಪಡೆಯಾದರು. ಆನಂತರದಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಆಡಳಿತ ಶುರುವಾದಾಗ, ದೇಶದಲ್ಲಿರುವ ಜನ ಯಾವ್ಯಾವ ಸಮುದಾಯದವರು ಎಂದು ವಿಂಗಡಿಸುವ, ಗುರುತಿಸುವ ಕೆಲಸ ಶುರುವಾಯಿತು. ಆಗಲೇ ಇಂಗ್ಲೀಷ್ ಅಧಿಕಾರಿಗಳು 'ಹಿಂದುಯಿಸಂ' ಎಂಬ ಪದವನ್ನು ಹುಟ್ಟು ಹಾಕಿದರು. 1857ರಲ್ಲಿ ನಡೆದ ಸಿಪಾಯಿ ದಂಗೆಯ ನಂತರ, ರಾಜಕೀಯ, ಆಡಳಿತ ಹಾಗೂ ಬದುಕಿನ ಹಲವು ನೆಲೆಗಳಲ್ಲಿ ಭಾರತದಲ್ಲಿದ್ದ ಬಹುಸಂಖ್ಯಾತರು ಹಾಗೂ ಮುಸ್ಲಿಮರ ನಡುವೆ ಸಣ್ಣದಾಗಿ ಸಂಘರ್ಷ ಕಾಣಿಸಿಕೊಂಡಿತು.ಈ ಸಂದರ್ಭದಲ್ಲಿ ಮುಸ್ಲಿಮರಲ್ಲದ ಉಳಿದೆಲ್ಲ ಸಮುದಾಯಕ್ಕೆ ಸೇರಿಸಿ 'ಹಿಂದು' ಎಂದು ಕರೆಯಲು ಅದೇ ಬ್ರಿಟಿಷ್ ಅಧಿಕಾರಿಗಳು ಮುಂದಾದರು. ಅದರರ್ಥ - ಹಿಂದುಯಿಸಂ ಅಥವಾ ಹಿಂದು ಎಂಬುದು ಧರ್ಮಸೂಚಕವಲ್ಲ; ಅದು ಜಾತ್ಯತೀತ ಬದುಕಿನ ಒಂದು ಮಾರ್ಗ, ಅಷ್ಟೆ!
ಅನುಮಾನವೇ ಬೇಡ. ಹಿಂದು ಎಂಬ ಪದವನ್ನೂ 'ಧರ್ಮಸೂಚಕ' ಎಂದು ಬಿಂಬಿಸುವ ಯಾವುದೇ ಕೆಲಸವನ್ನು ಬ್ರಿಟಿಷರು ಮಾಡಲಿಲ್ಲ. ಹಿಂದುಗಳು ಎಂಬ ಪದವನ್ನು ಅವರು ವಿಶಾಲ ಅರ್ಥದಲ್ಲಿಯೇ ಗ್ರಹಿಸಿದರು. ದೇವರು ಎಲ್ಲೆಲ್ಲಿಯೂ ಇದ್ದಾನೆ. ದೇವರು ಹಲವು ರೀತಿಯಲ್ಲಿ ಕಾಣಿಸಿಕೊಳ್ಳುತ್ತಾನೆ. ದೇವರು ಎಲ್ಲರನ್ನೂ ಕಾಪಾಡುತ್ತಾನೆ ಎಂದೆಲ್ಲ ಭಾವಿಸುವ, ನಂಬುವ ಬಹುದೊಡ್ಡ ಸಮುದಾಯವೇ ಹಿಂದೂಗಳು ಎಂದಷ್ಟೇ ಅವರು ಹೇಳಿದರು.
ಎಲ್ಲ ವಿಷಯಗಳ ಕುರಿತಾಗಿಯೂ ವಸ್ತುನಿಷ್ಠ ಮಾಹಿತಿ ನೀಡುವ ಎನ್ಸೈಕ್ಲೋಪೀಡಿಯಾ ಆಫ್ ಬ್ರಿಟಾನಿಕಾ ಕೂಡ, ಹಿಂದುಯಿಸಂ ಎಂಬುದು ಹತ್ತಾರು ಧರ್ಮಗಳ ಸಮೂಹವನ್ನು ಸಂಕೇತಿಸುವ ಪದ ಎಂದು ಸ್ಪಷ್ಟವಾಗಿ ಹೇಳಿದೆ. ಹಿಂದು ಧರ್ಮಕ್ಕೆ ಇಂಥವನೇ ಸಂಸ್ಥಾಪಕ ಎಂಬ ಉಲ್ಲೇಖ ಎಲ್ಲಿಯೂ ಇಲ್ಲ. ಹಾಗಾಗಿ, ಹಿಂದುಯಿಸಂ ಎಂಬುದು ಹಲವು ಧರ್ಮಗಳಿಂದ ಕೂಡಿದ ಒಂದು ಒಕ್ಕೂಟ ಎಂದೂ ಎನ್ಸೈಕ್ಲೋಪೀಡಿಯಾ ಆಫ್ ಬ್ರಿಟಾನಿಕಾದಲ್ಲಿ ವಿವರಿಸಲಾಗಿದೆ.
ಈಗ ಹೇಳಿ. ವಾಸ್ತವ ಹೀಗಿರುವಾಗ, ಹಿಂದುತ್ವ ಎಂಬುದು ಒಂದು ಧರ್ಮವನ್ನು ಮಾತ್ರ ಸೂಚಿಸುತ್ತದೆ ಎಂದು ಬೊಬ್ಬೆ ಹೊಡೆಯುವ ಜನರನ್ನು ಏನೆಂದು ಕರೆಯಬೇಕು? ಸುವಿಶಾಲ ಅರ್ಥವನ್ನು ಧ್ವನಿಸುವ ಹಿಂದು, ಹಿಂದುತ್ವ ಎಂಬ ಪದವನ್ನು ಅದು ಕೇವಲ ಧರ್ಮಸೂಚಕ ಎಂದು ವಾದಿಸುವವರು ಸಂಕುಚಿತ ಮನಸ್ಸಿನ ಜನ ಅನಿಸುವುದಿಲ್ಲವೆ? ಈ ಸಂದರ್ಭದಲ್ಲಿ ಹಿಂದುತ್ವ ಎಂಬ ಪದವನ್ನು ಹೀಗೆ ವಿಶ್ಲೇಷಿಸಬಹುದು. ಹಿಂದುತ್ವ ಎಂಬುದು ಬದುಕಿನ ಒಂದು ಮಾರ್ಗ. ಹಿಂದತ್ವ ಎಂಬುದೊಂದು ಹೊಸತನ್ನು ತೋರುವ ಹಾದಿ. ಹಿಂದುತ್ವ ಎಂಬುದು ಈ ದೇಶದ ಬಹುಸಂಖ್ಯಾತರ ಬದುಕಿನ ಮೂಲದ್ರವ್ಯ.
ವಾಸ್ತವ ಹೀಗಿರುವಾಗ ಹಿಂದುತ್ವ ಎಂಬುದನ್ನು ಕೋಮು ಭಾವನೆಯನ್ನು ಕೆರಳಿಸುವ ಪದ ಎಂದು ಸೆಕ್ಯೂಲರ್ ಜೀವಿ ಎಂದು ಹಣೆಪಟ್ಟಿ ಅಂಟಿಸಿಕೊಂಡ ಜನ ಯಾವ ಆಧಾರದಲ್ಲಿ ಹೇಳುತ್ತಾರೆ? ವೋಟ್ ಬ್ಯಾಂಕ್ ರಾಜಕೀಯ ಮಾಡಬೇಕೆಂದು ಮುನ್ನುಗ್ಗುವ ಜನ ಹಿಂದುತ್ವ ಎಂದರೆ ಕೋಮುವಾದ ಎಂಬ ಘೋರ ಸುಳ್ಳನ್ನು ಹೇಗೆ ಹೇಳುತ್ತಾರೆ? ಅಂಥ ಮಹನೀಯರಲ್ಲಿ ನನ್ನ ವಿನಂತಿ ಏನೆಂದರೆ- 'ಹಿಂದು, ಹಿಂದುತ್ವ ಎಂದರೆ ಏನು ಅರ್ಥವಿದೆ? ಹಿಂದುತ್ವ ಎಂಬ ಪದ ಬಳಕೆಯ ವಿಷಯವಾಗಿ ಸುಪ್ರಿಂಕೋರ್ಟ್ ಏನು ಅಭಿಪ್ರಾಯಪಟ್ಟಿದೆ ಎಂಬುದನ್ನು ಮೊದಲು ಅರ್ಥಮಾಡಿಕೊಳ್ಳಿ. ಆನಂತರವೇ ಆ ವಿಷಯದ ಬಗ್ಗೆ ಮಾತಾಡಲು ಆರಂಭಿಸಿ...'
ಹಿಂದುತ್ವ ಎಂಬ ವಿಶಿಷ್ಟ ಪದದ ಅರ್ಥವನ್ನೇ ವಿರೂಪಗೊಳಿಸಿ, ಅದನ್ನು ಕೆಲವೇ ಲಕ್ಷ ಮಂದಿಗೆ ಅನ್ವಯಿಸುವಂತೆ ಮಾಡುವ ಮೂಲಕ ಹಿಂದುಗಳ ಮಧ್ಯೆಯೇ ಒಡಕು ಉಂಟು ಮಾಡುವ ಕೆಲಸವೀಗ ನಡೆಯುತ್ತಿದೆ. ಇದು ಅಕ್ಷಮ್ಯ. ವೋಟ್ ಬ್ಯಾಂಕ್ ರಾಜಕಾರಣದ ಹೆಸರಲ್ಲಿ ಇಡೀ ದೇಶದ ಸಮುದಾಯದ ಮಧ್ಯೆಯೇ ದ್ವೇಷದ ವಾತಾವರಣ ಸೃಷ್ಟಿಯಾಗುವ ದುರ್ಭರ ಸಂದರ್ಭ ಖಂಡಿತ ಬರಬಾರದು. ಈ ಹಂತದಲ್ಲಿ ಭಾರತೀಯ ಜನತಾ ಪಕ್ಷವು ಮಾಡಬೇಕಾದ ಮೊದಲ ಕೆಲಸವೆಂದರೆ -ಹಿಂದುತ್ವ ಎಂಬುದು ಕೇವಲ ಒಂದು ಧರ್ಮಸೂಚಕ ಪದವಲ್ಲ. ಅದು ಹಲವು ಸಮುದಾಯಗಳನ್ನು ಒಳಗೊಂಡ ಒಕ್ಕೂಟ. ಹಿಂದುತ್ವವೆಂದರೆ, ಜಾತ್ಯತೀತ ಬದುಕಿಗೆ ಇರುವ ಒಂದು ಸುಂದರ ರಹದಾರಿ ಎಂದು ಎಲ್ಲ ನಾಗರಿಕರಿಗೂ ತಿಳಿಸುವುದು. ಆ ಮೂಲಕ ಜನಜಾಗೃತಿ ಉಂಟು ಮಾಡುವುದು. ಹೀಗೆ ಮಾಡುವ ಸಂದರ್ಭದಲ್ಲಿ ಹಿಂದೂ, ಹಿಂದುತ್ವ ಎಂಬ ಪದಗಳು ಯಾರಿಂದ, ಎಷ್ಟೆಲ್ಲ ಅರ್ಥಗಳಲ್ಲಿ ಬಳಕೆಯಾಗಿವೆ ಎಂಬುದನ್ನೂ ವಿವರಿಸಿದರೆ, ಅದರಿಂದ ನಿಜವಾಗಿಯೂ ಒಂದು ಸಾಮಾಜಿಕ ಕ್ರಾಂತಿಯಾಗುತ್ತದೆ. ಅಷ್ಟೇ ಅಲ್ಲ, ಇಂಥದೊಂದು ಕೆಲಸದಿಂದ ಬಿಜೆಪಿಗೂ ಒಳ್ಳೆಯದಾಗುತ್ತದೆ.
ಅಂಥದೊಂದು ಕೆಲಸ ತುರ್ತಾಗಿ ಆಗಲಿ ಎಂಬುದಷ್ಟೇ ನನ್ನ ಸದಾಶಯ.
-ರಾಮ್ ಜೇಠ್ಮಲಾನಿ
anisikeprabha@gmail.com