ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಸಾವರ್ಕರ್ ಕುರಿತು ಅಂಬೇಡ್ಕರ್ ಧೋರಣೆ ಏನಿತ್ತು?

ಸ್ವಾತಂತ್ರ್ಯವೀರ ಸಾವರ್ಕರ್ ಅವರ ಫೋಟೊ ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಮೊದಲ ಬಾರಿಗೆ ಪ್ರತಿಷ್ಠಾಪನೆಗೊಂಡಿದ್ದು ಫೆಬ್ರವರಿ 2003ರಲ್ಲಿ.

Mainashree
Updated On : 14 Sept 2013, 12:00 pm

ಇವರು ದೂರವಾಣಿ ಇವರು ಕೊಠಡಿಗೆ ಹೋಗಿ ಎತ್ತಿಟ್ಟಿದ್ದ ರಿಸಿವರ್ ಕಿವಿಗಾನಿಸಿ ತಮ್ಮ ವಿವರ ಹೇಳಿಕೊಳ್ಳುತ್ತಿದ್ದಂತೆ ಅತ್ತ ಕಡೆಯ ವ್ಯಕ್ತಿ ತಮ್ಮನ್ನು ಡಾ. ಭೀಮರಾವ್ ಅಂಬೇಡ್ಕರ್ ಎಂದು ಪರಿಚಯಿಸಿಕೊಳ್ಳುತ್ತಾರೆ. ಅವರು ಹೇಳಿದ್ದಿಷ್ಟೆ: ಈ ಸಂಜೆ ಮಥುರಾ ರಸ್ತೆಯ ಆರನೇ ಮೈಲಿಗಲ್ಲಿನ ಬಳಿಬಂದು ನನ್ನನ್ನು ಭೇಟಿಯಾಗಿ...


ಸ್ವಾತಂತ್ರ್ಯವೀರ ಸಾವರ್ಕರ್ ಅವರ ಫೋಟೊ ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಮೊದಲ ಬಾರಿಗೆ ಪ್ರತಿಷ್ಠಾಪನೆಗೊಂಡಿದ್ದು ಫೆಬ್ರವರಿ 2003ರಲ್ಲಿ. ಆಗ ಎನ್‌ಡಿಎ ಸರ್ಕಾರ ಅಧಿಕಾರದಲ್ಲಿತ್ತು. ಅಂದಿನ ಪ್ರಧಾನಿ ವಾಜಪೇಯಿ, ಲೋಕಸಭೆ ಸ್ಪೀಕರ್ ಮನೋಹರ ಜೋಶಿ. ಸಾವರ್ಕರ್ ಭಾವಚಿತ್ರವನ್ನು ಅಂದಿನ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಅವರು ಅನಾವರಣ ಮಾಡಿದ್ದರು.
ಸಂಸದೀಯ ಇತಿಹಾಸದಲ್ಲೇ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷವು ರಾಷ್ಟ್ರಪತಿಯವರ ಕಾರ್ಯಕ್ರಮದಿಂದ ಹೊರಗುಳಿಯಿತು. ಅವತ್ತಿನಿಂದ ಈವರೆಗೆ, ಪ್ರತಿ ಮೇ 28ರಂದು ಸಾವರ್ಕರ್ ಅವರ ಜನ್ಮದಿನ ನೆನಕೆಯ ಪ್ರಯುಕ್ತ ಸೆಂಟ್ರಲ್ ಹಾಲ್‌ನಲ್ಲಿ ಸಂಸದರು ಪುಷ್ಪಗುಚ್ಛ ಸಮರ್ಪಣೆ ಹಮ್ಮಿಕೊಂಡಾಗಲೆಲ್ಲ ಕಾಂಗ್ರೆಸ್‌ನ ಸಂಸದರು ಅದರಿಂದ ದೂರ ಉಳಿಯುತ್ತ ಬಂದಿದ್ದಾರೆ. ತನ್ನ ಈ ವರ್ತನೆಗೆ ಕಾಂಗ್ರೆಸ್ ಪಕ್ಷವು ಯಾವತ್ತೂ ಸಾರ್ವಜನಿಕ ವಿವರಣೆಯೊಂದನ್ನು ನೀಡಿದ್ದಿಲ್ಲ. ಆದರೆ ಅವರು ಹೇಳದೇ ಇರುವ ಮಾತೆಂದರೆ ಸಾವರ್ಕರ್ ಅವರು ಗಾಂಧಿ ಹತ್ಯೆಯ ಆರೋಪಿಗಳಲ್ಲಿ ಒಬ್ಬರಾಗಿದ್ದರು ಎಂಬುದು. ಆದರೆ ಈ ಅಭಿಪ್ರಾಯ ಹೊಂದಿರುವ ಆ ಪಕ್ಷವು ವಾಸ್ತವವೊಂದನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಅದೆಂದರೆ ಗಾಂಧಿಹತ್ಯೆ ಪ್ರಕರಣದಲ್ಲಿ ಇಬ್ಬರಿಗೆ ಗಲ್ಲಾಯಿತು ಹಾಗೂ ಇತರ ಹಲವರಿಗೆ ಬೇರೆ ಬೇರೆ ಅವಧಿಯ ಜೈಲುಶಿಕ್ಷೆ ಆಯಿತು. ಆದರೆ ಸಾವರ್ಕರ್ ಅವರನ್ನು ಅದೇ ನ್ಯಾಯಾಲಯ ತಪ್ಪಿತಸ್ಥರಲ್ಲ ಎಂದು ಹೇಳಿತು.
ಗಾಂಧಿಹತ್ಯೆಯ ದಶಕದ ನಂತರ ಖ್ಯಾತ ಬರಹಗಾರ ಮನೋಹರ್ ಮಳಗಾಂವ್‌ಕರ್ ಅವರು ಭಾರತೀಯ ಇತಿಹಾಸದ ಈ ದುಃಖಮಯ ಘಟನೆ ಬಗ್ಗೆ ಬೆಳಕು ಚೆಲ್ಲುವ ಪುಸ್ತಕ ಬರೆಯುವುದಕ್ಕೆ ನಿರ್ಧರಿಸಿದರು. ತಪ್ಪಿತಸ್ಥರೆಂದು ಜೈಲುಶಿಕ್ಷೆ ಅನುಭವಿಸಿ ಹೊರಬಂದವರು ಹಾಗೂ ಸರ್ಕಾರಿ ಸಾಕ್ಷಿಯಾಗಿ ಕ್ಷಮೆ ಪಡೆದವರು ಇವರೆಲ್ಲರೊಂದಿಗಿನ ವೈಯಕ್ತಿಕ ಸಂದರ್ಶನವನ್ನು ಆಧರಿಸಿ ಅವರು ಪುಸ್ತಕ ಬರೆದರು. ಈ ಕತೆ ಪುಸ್ತಕವಾಗಿ ಹೊರಬರುವುದಕ್ಕೂ ಮುಂಚೆಯೇ ಆ ಕಾಲದ ಅಂತಾರಾಷ್ಟ್ರೀಯ ಪ್ರಸಿದ್ಧ ನಿಯತಕಾಲಿಕ 'ಲೈಫ್‌'ಗೆ ಇದನ್ನು ನೀಡಿದರು ಮಳಗಾಂವ್‌ಕರ್. ಪೆಭ್ರುವರಿ 1968ರ ಸಂಚಿಕೆಯಲ್ಲಿ ಮಳಗಾಂವ್‌ಕರ್ ಅವರು ಸಂದರ್ಶಿಸಿದ ವ್ಯಕ್ತಿಗಳ ಮಾತು ಹಾಗೂ ಭಾವಚಿತ್ರಗಳು ಪ್ರಕಟವಾಗಿವೆ.
ಗಾಂಧಿಹತ್ಯೆ ಜಗತ್ತನ್ನು ತಲ್ಲಣಿಸಿ ಸುಮಾರು 30 ವರ್ಷಗಳೇ ಕಳೆದ ಮೇಲೆ 1977ರಲ್ಲಿ ಲಂಡನ್‌ನ ಮ್ಯಾಕ್‌ಮಿಲನ್ ಸಂಸ್ಥೆಯು ಮಳಗಾಂವ್‌ಕರ್ ಅವರ ಆಳ ಅಧ್ಯಯನದ ಕೃತಿ, 'ದ ಮೆನ್ ಹು ಕಿಲ್ಡ್ ಗಾಂಧಿ' ಕೃತಿಯನ್ನು ಮುದ್ರಿಸಿತು. ಅದಾಗಿ ಕೆಲದಿನಗಳಲ್ಲೇ ನಾನು ಆ ಕೃತಿಯನ್ನು ಓದಿದ್ದೆ. ಇದೀಗ ದೆಹಲಿಯ ರೋಲಿ ಬುಕ್ಸ್ ಪ್ರಕಟಿಸಿರುವ ಆ ಪುಸ್ತಕದ 13ನೇ ಆವೃತ್ತಿ ನನ್ನ ಮುಂದಿದೆ. ಕೆಲ ಹೆಚ್ಚುವರಿ ವಿವರಗಳನ್ನೂ ಈ ಪುಸ್ತಕ ಹೊಂದಿದೆ. ಪುಸ್ತಕ ಪ್ರವೇಶದಲ್ಲಿ ಕೃತಿಕಾರ ಮಳಗಾಂವ್‌ಕರ್ ಹೀಗೆ ಬರೆಯುತ್ತಾರೆ- 'ಗಾಂಧಿ ಹತ್ಯೆಯ ಅಪರಾಧದಲ್ಲಿ ತೊಡಗಿಕೊಂಡಿದ್ದವರಲ್ಲಿ ಕೆಲವರು 1960ರ ಸಮಯದಲ್ಲಿ ಹೇಳಿಕೊಂಡ ಪ್ರಕಾರ, ಮುಂಬೈನಲ್ಲಿ ಆಯಕಟ್ಟಿನ ಸ್ಥಾನದಲ್ಲಿರುವ ಹಲವರಿಗೆ ಈ ಕೊಲೆ ಯೋಜನೆ ಬಗ್ಗೆ ಮೊದಲೇ ಅರಿವಿದ್ದರೂ ಅವರು ಪೊಲೀಸರಿಗೆ ಮಾಹಿತಿ ನೀಡುವುದಕ್ಕೆ ಮುಂದಾಗಲಿಲ್ಲ. ಇಂಥದೊಂದು ಆರೋಪದ ಸತ್ಯಾಸತ್ಯತೆ ತಿಳಿದುಕೊಳ್ಳುವುದಕ್ಕೆ ಜಸ್ಟೀಸ್ ಕೆ. ಎಲ್. ಕಪೂರ್ ಅವರ ನೇತೃತ್ವದ ಏಕಸದಸ್ಯ ಸಮಿತಿಯೊಂದನ್ನು ಸರ್ಕಾರ ನೇಮಿಸಿತು. ಆ ವರದಿಯನ್ನು ನನ್ನ ಸ್ನೇಹಿತರೊಬ್ಬರು ನನಗೆ ಕಳುಹಿಸಿಕೊಟ್ಟರು. ಇದೀಗ ನನ್ನೆದುರು ತೆರೆದುಕೊಂಡಿದ್ದ ಸತ್ಯಗಳು ಹಾಗೂ ಜಸ್ಟೀಸ್ ಕಪೂರ್ ಅವರ ವರದಿಯಲ್ಲಿರುವ ಅಂಶಗಳಲ್ಲಿ ವಿಶ್ವಾಸಾರ್ಹವಾದದ್ದು ಯಾವುದೆಂದು ವಿಮರ್ಶೆಗೊಳಪಡಿಸುವುದು ನನ್ನ ಮೇಲಿರುವ ಹೊಣೆ. ಇದಿಲ್ಲದೆಯೂ ನನ್ನ ಪುಸ್ತಕ ಪೂರ್ಣವಾಗುತ್ತಿತ್ತು. ಆದರೆ ವರದಿಯ ಅಂಶಗಳನ್ನು ಜತೆ ಸೇರಿಸಿರುವುದರಿಂದ 'ದ ಮೆನ್ ಹು ಕಿಲ್ಡ್ ಗಾಂಧಿ' ಪುಸ್ತಕ ಮತ್ತಷ್ಟು ಪ್ರಖರವಾದಂತೆ ಆಗಿದೆ.
ಈ ಪುಸ್ತಕ ಮೊದಲು ಹೊರಬಂದಿದ್ದು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ. ಆಗ ಪುಸ್ತಕಗಳನ್ನು ಅತಿ ಕ್ರೂರ ಬಗೆಯ ಸೆನ್ಸಾರ್‌ಶಿಪ್‌ಗೆ ಒಳಪಡಿಸಲಾಗಿತ್ತು. ಹೀಗಾಗಿಯೇ ಕೆಲ ಸತ್ಯಗಳನ್ನು ಆ ಸಮಯದಲ್ಲಿ ಉಲ್ಲೇಖಿಸಲಾಗದ ಅನಿವಾರ್ಯತೆ ನನ್ನದಾಗಿತ್ತು. ಉದಾಹರಣೆಗೆ, ಡಾ. ಭೀಮ್‌ರಾವ್ ಅಂಬೇಡ್ಕರ್ ಅವರು ಸಾವರ್ಕರ್ ಅವರ ವಕೀಲರಾದ ಎಲ್. ಬಿ. ಭೊಪಟ್ಕರ್ ಅವರಿಗೆ- ಸಾವರ್ಕರ್ ಅವರನ್ನು ಸಿನಿಮೀಯ ಆಧಾರಗಳಲ್ಲಿ ಕೊಲೆ ಆರೋಪಿ ಎಂದು ಕಟಕಟೆಯಲ್ಲಿ ನಿಲ್ಲಿಸಲಾಗಿದೆ ಎಂಬ ಭರವಸೆಯ ಮಾತು ಹೇಳಿದ್ದರು. ಅಂತೆಯೇ, ಆರೋಪಿಯ ಹೇಳಿಕೆಯನ್ನು ದಾಖಲಿಸಿಕೊಳ್ಳಬೇಕಾದ ಹೊಣೆಯ ಮ್ಯಾಜಿಸ್ಟ್ರೇಟ್ ಒಬ್ಬರು ಅದನ್ನು ತಿರುಚುವುದಕ್ಕೆ ಯತ್ನಿಸಿದ್ದು ನಂತರದ ದಿನದಲ್ಲಿ ಬೆಳಕಿಗೆ ಬಂತು.
ಇಂಥ ಹಲವು ಅಂಶಗಳನ್ನು ಸೇರಿಸಿರುವುದರಿಂದ ಈ ಪುಸ್ತಕವು ಗಾಂಧಿಹತ್ಯೆಯ ಸಂಚನ್ನು ವಿಸ್ತೃತವಾಗಿ ತೆರೆದಿಡುವ ಏಕಮೇವ ದಾಖಲೆಯಾಗಿದೆ ಎಂಬ ವಿಶ್ವಾಸ ನನ್ನದು.'  
ಈ ಪುಸ್ತಕ ಪರಿಚಯದ ಮಾತನ್ನು ಓದುವ ಯಾರಿಗೇ ಆದರೂ ಸಾವರ್ಕರ್‌ರ ವಕೀಲ ಭೊಪಟ್ಕರ್ ಅವರಿಗೆ ಹೇಳಿದ ಅಂಶ ಆಸಕ್ತಿದಾಯಕವಾಗಿರುತ್ತದೆ. ಸಾವರ್ಕರ್ ಬಗ್ಗೆ ಚರ್ಚಿಸುವ ಆ ಪುಸ್ತಕದ ಭಾಗವನ್ನು ಇಲ್ಲಿ ಉಲ್ಲೇಖಿಸುವೆ.
'ಸಾವರ್ಕರ್ ಅವರನ್ನು ಅಪರಾಧಿ ಎಂದು ಬಿಂಬಿಸುವುದಕ್ಕೆ ಪೊಲೀಸರೇಕೆ ಅಷ್ಟೊಂದು ಉತ್ಸುಕರಾಗಿದ್ದಾರೆ? ಗಾಂಧಿಯವರನ್ನು ಕೊಲ್ಲುವುದಕ್ಕೂ ಮುಂಚೆಯೇ ನಾಥೂರಾಮ್ ಅವರನ್ನು ಬಂಧಿಸಲಾಗದ ತಮ್ಮ ವೈಫಲ್ಯವನ್ನು ಮುಚ್ಚಿಟ್ಟುಕೊಳ್ಳುವುದಕ್ಕೆ ಹಾಗೂ ತಮ್ಮ ಮುಖ ಉಳಿಸಿಕೊಳ್ಳುವುದಕ್ಕೆ ಈ ಪ್ರಕರಣದಲ್ಲಿ ರೋಚಕತೆ ತುಂಬುವುದಕ್ಕೆ ಅವರು ಯತ್ನಿಸುತ್ತಿದ್ದಾರೆಯೇ? ಈ ನಿಟ್ಟಿನಲ್ಲಿ ಇಂದಿನ ಸರ್ಕಾರದ ಬಗ್ಗೆ ಕಟು ಧೋರಣೆ ಹೊಂದಿರುವ ಪ್ರಮುಖ ನಾಯಕನನ್ನು ಈ ಪ್ರಕರಣದಲ್ಲಿ ಎಳೆದು ತರುವ ಕೆಲಸಕ್ಕೆ ಮುಂದಾದರೇ? ಅಥವಾ ಸರ್ಕಾರ ಇಲ್ಲವೇ ಪ್ರಭಾವಿ ಗುಂಪೊಂದು ರಾಜಿ ಮನೋಭಾವವಿಲ್ಲದ ನಾಯಕನನ್ನು ಹೊಂದಿರುವ ಎದುರಾಳಿ ರಾಜಕೀಯ ಸಂಘಟನೆಯನ್ನು ಈ ಮೂಲಕ ಇಲ್ಲವಾಗಿಸುವುದಕ್ಕೆ ಮುಂದಾಗಿದೆಯೇ? ಇದ್ಯಾವುದೂ ಅಲ್ಲದೇ ಭಾರತಕ್ಕೆ ಧಾರ್ಮಿಕ, ಜನಾಂಗೀಯ, ಭಾಷಿಕ ಇಲ್ಲವೇ ಪ್ರಾಂತೀಯ ನೆಲೆಯಲ್ಲಿ ರೂಢಿಯಾಗಿಬಿಟ್ಟಿರುವ ಫೋಬಿಯಾ ಒಂದು ಸಾವರ್ಕರ್ ಅವರನ್ನು ಸಹಜ ಗುರಿಯಾಗಿಸಿ ಸಮಾಜದ ಒಂದು ವರ್ಗದಲ್ಲಿ ಜಮೆಯಾಗಿರುವ ವಿಷವನ್ನು ಹೊರಸೂಸುತ್ತಿದೆಯೇ?'
ಇವೇನೇ ಇದ್ದರೂ ಅಧಿಕಾರಸ್ಥರು ತಮ್ಮನ್ನು ನಾಥೂರಾಮ್ ಸಹಚರನನ್ನಾಗಿಸಿ ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲಿಸಲಿದ್ದಾರೆ ಎಂಬುದು ಸಾವರ್ಕರ್ ಅವರಿಗೆ ತಿಳಿದಿತ್ತು. ಗಾಂಧಿಹತ್ಯೆಯ ಐದುದಿನಗಳ ನಂತರ ಪೊಲೀಸರು ಅವರ ಮನೆ ಪ್ರವೇಶಿಸಿದಾಗ 'ಓಹ್, ನೀವು ಗಾಂಧಿಹತ್ಯೆ ಸಂಬಂಧ ನನ್ನನ್ನು ಬಂಧಿಸುವುದಕ್ಕೆ ಬಂದಿದ್ದೀರೇನು?' ಎಂದು ಕೇಳಿದ್ದರು.
ದೆಹಲಿಯಲ್ಲಿ ವಿಚಾರಣೆ ನಡೆಯುತ್ತಿರುವಾಗ ಭೊಪಟ್ಕರ್ ಅವರು ಹಿಂದೂ ಮಹಾಸಭಾದ ಕಚೇರಿಯಲ್ಲಿ ತಂಗಿದ್ದರು. ಆರೋಪಿಗಳಾಗಿರುವ ಇತರರೆಲ್ಲರ ವಿರುದ್ಧವೂ ನಿರ್ದಿಷ್ಟ ಆರೋಪಗಳನ್ನು ಹೊರಿಸಲಾಗಿದ್ದರೆ ತಮ್ಮ ಕಕ್ಷಿದಾರ ಸಾವರ್ಕರ್ ವಿರುದ್ಧ ಮಾತ್ರ ಅಂಥ ಸ್ಪಷ್ಟ ಆರೋಪಗಳ್ಯಾವುವೂ ಇಲ್ಲದಿದ್ದರೂ ಕಟಕಟೆಯಲ್ಲಿ ನಿಲ್ಲಿಸಲಾಗಿತ್ತು. ನ್ಯಾಯಾಲಯದಲ್ಲಿ ವಾದ ಮಾಡುವುದಕ್ಕೆ ಅಧ್ಯಯನ ಮಾಡುತ್ತಿದ್ದ ಅವರಿಗೆ ಒಂದು ಬೆಳಗ್ಗೆ ದೂರವಾಣಿ ಕರೆ ಬಂದ ವಿಷಯ ತಿಳಿಸಲಾಗುತ್ತದೆ. ಇವರು ದೂರವಾಣಿ ಇಟ್ಟಿರುವ ಕೊಠಡಿಗೆ ಹೋಗಿ ಎತ್ತಿಟ್ಟಿದ್ದ ರಿಸಿವರ್ ಕಿವಿಗಾನಿಸಿ ತಮ್ಮ ವಿವರ ಹೇಳಿಕೊಳ್ಳುತ್ತಿದ್ದಂತೆ ಅತ್ತ ಕಡೆಯ ವ್ಯಕ್ತಿ ತಮ್ಮನ್ನು ಡಾ. ಭೀಮರಾವ್ ಅಂಬೇಡ್ಕರ್ ಎಂದು ಪರಿಚಯಿಸಿಕೊಳ್ಳುತ್ತಾರೆ. ಅವರು ಹೇಳಿದ್ದಿಷ್ಟೆ: 'ಈ ಸಂಜೆ ಮಥುರಾ ರಸ್ತೆಯ ಆರನೇ ಮೈಲಿಗಲ್ಲಿನ ಬಳಿಬಂದು ನನ್ನನ್ನು ಭೇಟಿಯಾಗಿ.' ಭೊಪಟ್ಕರ್ ಪ್ರತಿಕ್ರಿಯಿಸುವುದಕ್ಕೂ ಮೊದಲೇ ಅವರು ಫೋನಿಟ್ಟಿದ್ದರು.
ಸಾಯಂಕಾಲ ಅಲ್ಲಿಗೆ ಹೋದಾಗ ಅಂಬೇಡ್ಕರ್ ಆಗಲೇ ಆಗಮಿಸಿ ಇವರಿಗಾಗಿ ಕಾಯುತ್ತಿದ್ದರು. ಅಂಬೇಡ್ಕರ್ ಸ್ವತಃ ಚಲಾಯಿಸುತ್ತಿದ್ದ ಕಾರಿನೊಳಗೆ ಭೊಪಟ್ಕರ್ ಹೋಗಿ ಕುಳಿತರು. ಕೆಲ ನಿಮಿಷಗಳ ನಂತರ ಕಾರು ನಿಲ್ಲಿಸಿದ ಅಂಬೇಡ್ಕರ್ ಹೇಳಿದರು: 'ನಿಮ್ಮ ಕಕ್ಷಿದಾರರ ವಿರುದ್ಧ ನಿಜವಾದ ಪ್ರಕರಣವೇ ಇಲ್ಲ. ಕೆಲಸಕ್ಕೆ ಬಾರದ ಸಾಕ್ಷ್ಯವನ್ನು ಮುಂದಿರಿಸಲಾಗಿದೆ. ಸಂಪುಟದ ಹಲವು ಸದಸ್ಯರು ಈ ನಡೆಯ ವಿರುದ್ಧವಾಗಿದ್ದರು. ಆದರೆ ಏನೂ ಮಾಡಲಾಗಲಿಲ್ಲ. ಈ ಆದೇಶದ ವಿರುದ್ಧ ಧ್ವನಿ ಎತ್ತುವುದಕ್ಕೆ ಸರ್ದಾರ್ ಪಟೇಲರಿಗೂ ಸಾಧ್ಯವಾಗಲಿಲ್ಲ. ಆದರೆ ನಾನು ಹೇಳ್ತಿದೀನಿ ಕೇಳಿ. ಮೊಕದ್ದಮೆಯೇ ಇಲ್ಲ, ನೀವು ಗೆಲ್ಲುತ್ತೀರಿ.'
ಅಂಬೇಡ್ಕರ್ ಮಾತಿನ ಪ್ರಕಾರ ಅಂಥ ಆದೇಶಕ್ಕೆ ಕಾರಣವಾದವರು ಯಾರು? ಜವಹಾರ್‌ಲಾಲ್ ನೆಹರು? ಯಾಕಾಗಿ?
-----
ಸಾವರ್ಕರ್ ಕುರಿತ ಕಾಂಗ್ರೆಸ್ ಪಕ್ಷದ ನಿರ್ಧಾರದ ಹೊರತಾಗಿಯೂ ಲೋಕಸಭೆ ಸ್ಪೀಕರ್ ಮೀರಾ ಕುಮಾರ್ ಅವರು ಕ್ರಾಂತಿಕಾರಿ ಸಾವರ್ಕರ್ ಅವರಿಗೆ ಪುಷ್ಪನಮನ ಸಲ್ಲಿಸುವ ಹಲವು ಕಾರ್ಯಕ್ರಮಗಳಲ್ಲಿ ಹಾಜರಿದ್ದರು. ಕಾಂಗ್ರೆಸ್ ತನ್ನ ಧೋರಣೆಯನ್ನು ಮರು ವಿಮರ್ಶಿಸಿಕೊಳ್ಳಬೇಕು.
------
ಕೊನೆತುತ್ತು: ಈ ಪುಸ್ತಕವನ್ನು ಓದುವುದಕ್ಕೂ ಮುಂಚೆ ನನಗೆ ಸಾವರ್ಕರ್ ಬಂಧನವಾಗಿದ್ದು 'ಪ್ರಿವೆಂಟಿವ್ ಡಿಟೆನ್ಶನ್ ಆ್ಯಕ್ಟ್‌' ಪ್ರಕಾರ ಎಂದು ತಿಳಿದಿರಲಿಲ್ಲ. ಇದು ಬ್ರಿಟಿಷರು ಭಾರತವನ್ನು ಆಳುವಾಗ ತಮ್ಮ ಕೈ ಬಲಪಡಿಸಿಕೊಳ್ಳಲು ತಂದಿದ್ದ ಪೈಶಾಚಿಕ ಕಾಯ್ದೆ.
ಶಿವಾಜಿ ಪಾರ್ಕ್ ಬಳಿಯ ಸಾವರ್ಕರ್ ನಿವಾಸದ ಮೇಲೆ ದಾಳಿ ಮಾಡಿದ ಪೊಲೀಸರು ಅವರ ಎಲ್ಲ ದಾಖಲೆಗಳನ್ನೂ ವಶಪಡಿಸಿಕೊಂಡರು. 143 ಕಡತಗಳು ಹಾಗೂ 10 ಸಾವಿರ ಪತ್ರಗಳಿದ್ದವು.
ಈ ಬಗ್ಗೆ ಮಳಗಾಂವ್‌ಕರ್ ಬರೆಯುತ್ತಾರೆ- 'ಸಾವರ್ಕರ್ ವಿರುದ್ಧ ಸಾಕ್ಷ್ಯಗಳೇ ಇರಲಿಲ್ಲ. ವಶಪಡಿಸಿಕೊಂಡ ದಾಖಲೆಗಳಿಂದ ತಿಳಿದು ಬಂದಿದ್ದೆಂದರೆ ಗಾಂಧಿಹತ್ಯೆ ಸಂಚು ರೂಪಿಸಿದವರಿಗೆ ಹಿಂದೂ ಮಹಾಸಭಾದೊಂದಿಗೆ ಸಂಬಂಧವಿತ್ತು ಹಾಗೂ ಅವರೆಲ್ಲ ಸಾವರ್ಕರ್ ಬಗ್ಗೆ ಪೂಜ್ಯಭಾವ ಹೊಂದಿದ್ದರು ಎಂಬುದಷ್ಟೆ. ಬಂಧನವಾದಾಗ ಅವರ ವಯಸ್ಸು 64. ಒಂದು ವರ್ಷದಿಂದ ಅನಾರೋಗ್ಯ ಪೀಡಿತರಾಗಿದ್ದರು. 1948ರ ಫೆಬ್ರವರಿ 6ರಂದು ಬಂಧಿಸಲಾದ ಅವರನ್ನು ತನಿಖೆ- ವಿಚಾರಣೆಗಳ ಉದ್ದಕ್ಕೂ ಜೈಲಿನಲ್ಲಿಟ್ಟು 1949ರ ಫೆಬ್ರವರಿ 10ರಂದು ನಿರ್ದೋಷಿ ಎಂದು ಬಿಡಲಾಯಿತು. ಸ್ವಾತಂತ್ರ್ಯ ಹೋರಾಟಕ್ಕಾಗಿ ಬ್ರಿಟಿಷರಿಂದ 26 ವರ್ಷಗಳ ಸೆರೆವಾಸ ಅನುಭವಿಸಿದ್ದ ಸಾವರ್ಕರ್ ಅವರನ್ನು ಸ್ವಾತಂತ್ರ್ಯ ಬರುತ್ತಲೇ ಮತ್ತೊಂದು ವರ್ಷ ಜೈಲಿನಲ್ಲಿ ಕೊಳೆಸಲಾಯಿತು.'

- ಎಲ್. ಕೆ. ಆಡ್ವಾಣಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement