ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಮುಸ್ಲಿಂ ಯುವಕರು ಮತ್ತು ಕೋಮುಗಲಭೆ

Mainashree
Updated On : 16 Sept 2013, 11:11 am

ಉತ್ತರಪ್ರದೇಶದ ಮುಜಫ್ಫರ್ ನಗರದ ದೊಡ್ಡ ಕೋಮುಗಲಭೆಯೇ ಇರಲಿ ಅಥವಾ ಬಿಹಾರ್‌ನ ನವಾಡಾದಲ್ಲಿನ ಚಿಕ್ಕ ಹೊಡೆದಾಟಗಳೇ ಇರಲಿ, ಅವುಗಳ ಬಗ್ಗೆ ಮುಸಲ್ಮಾನರು ಮತ್ತು ಮುಖ್ಯವಾಗಿ ಅದರ ನಾಯಕರು  ಆತ್ಮವಿಮರ್ಷೆ ಮಾಡಿಕೊಳ್ಳಬೇಕಾದ ಸಮಯ ಬಂದಿದೆ.  
ಕೆಲವರಂತೂ ಈ ಘಟನೆಯನ್ನು ಗುಜರಾತ್‌ನ ಕೋಮುಗಲಭೆಗೆ ಹೋಲಿಸತೊಡಗಿದ್ದಾರೆ ಮತ್ತು ಮುಲಾಯಂ ಅವರನ್ನು ಉತ್ತರಪ್ರದೇಶದ ನರೇಂದ್ರ ಮೋದಿ ಎನ್ನತೊಡಗಿದ್ದಾರೆ. ಆಲ್ ಇಂಡಿಯಾ ಮಜ್ಲಿಸ್-ಎ-ಮುಶಾವರಾತ್ 'ಅಖಿಲೇಶ್ ಸರ್ಕಾರವನ್ನು ಕಿತ್ತೆಸೆಯಬೇಕು' ಎಂದು ಅರಚಾಡುತ್ತಿದೆ(ಇದೇ ಸರಿಯಾದ ಪರಿಹಾರವೇನೋ ಎಂಬಂತೆ!).
ಆದರೆ ಇವರ್ಯಾರೂ ಕೂಡ ಕೆಲವು ಮುಖ್ಯ ಪ್ರಶ್ನೆಗಳಿಗೆ ಉತ್ತರಿಸುತ್ತಿಲ್ಲ. ಅದೇಕೆ ಮುಸಲ್ಮಾನ ಹುಡುಗರು/ಯುವಕರು ಈ ರೀತಿ ವಿಚಿತ್ರವಾಗಿ ವರ್ತಿಸುತ್ತಾರೆ? ಅದೇಕೆ ಮುಸ್ಲಿಂ ಯುವಕರು ಮಹಿಳೆಯರ ಮೇಲೆ ದೌರ್ಜನ್ಯ ಎಸಗುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ?(ಹೀಗೆಂದಾಕ್ಷಣ, ಹಿಂದೂ ಯುವಕರೂ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಎಸಗುತ್ತಾರೆ ಎನ್ನುವ ವಾದ ಮುಂದಿಡಲಾಗುತ್ತದೆ). ಲವ್ ಜಿಹಾದ್‌ನಂಥ ಘಟನೆಗಳಿಂದ ಸಮುದಾಯದ ಹೆಸರು ಕೆಡುತ್ತಿರುವಾಗಲೂ ಅವರು ಈ ರೀತಿ ಮಾಡುತ್ತಾರೆಂದರೆ ಏನರ್ಥ? ಲೈಂಗಿಕ ದೌರ್ಜನ್ಯ ಬಹುದೊಡ್ಡ ಸಾಮಾಜಿಕ ಕಂದಕವನ್ನು ಮೂಡಿಸಬಲ್ಲದು ಎನ್ನುವುದು ಮುಸ್ಲಿಂ ನಾಯಕರಿಗೆ ಗೊತ್ತಿದ್ದರೂ, ಅವರೇಕೆ ಈ ಬಗ್ಗೆ ಮಾತನಾಡುತ್ತಿಲ್ಲ? ಬಹುಶಃ ಹಾಗೆ ಮಾತನಾಡುವುದು ತಮ್ಮ ಕೆಲಸವಲ್ಲ ಎಂದವರು ಭಾವಿಸತೊಡಗಿದ್ದಾರೇನೋ?
ಬಿಹಾರ್‌ನ ನವಾಡಾದಲ್ಲಿನ ಘಟನೆಯನ್ನೇ ನೋಡಿ- ಕೆಲವು ಮುಸ್ಲಿಂ ಯುವಕರು ಈದ್ ದಿನದಂದು ಆ ಊರಿನ ಹೆದ್ದಾರಿಯಲ್ಲಿರುವ ಹೊಟೇಲ್ ಒಂದಕ್ಕೆ ಹೋಗಿ ಕುಡಿದು ಗಲಾಟೆ ಮಾಡಿದ್ದಾರೆ. ಪವಿತ್ರ ರಂಜಾನ್ ತಿಂಗಳು ಮುಗಿದ ನಂತರ ಬರುತ್ತದೆ ಈದ್. ಆ ಗಲಾಟೆಯ ಪರಿಣಾಮವೇನಾಯಿತು? ಅಲ್ಲಿ ಸಾವಿನ ಸಂಖ್ಯೆ ಕಡಿಮೆಯಿರಬಹುದಾದರೂ, ಹೆಚ್ಚು ಹಾನಿಯಾದದ್ದು ಮುಸ್ಲಿಂ ಆಸ್ತಿಗಳಿಗೇ! ಇದಕ್ಕೆ ಯಾರನ್ನು ಹೊಣೆಗಾರ ಎನ್ನುತ್ತೀರಿ? ಕೆಲವು ಮುಸಲ್ಮಾನರು ಈ ಕಥೆಯನ್ನು 'ಮಾಧ್ಯಮಗಳ ಸಂಚು' ಎಂದು ಬಣ್ಣಿಸಿದರು. ಕೊನೆಗೆ ಈ ಕೋಮು ದಳ್ಳುರಿಗೆ ತಮ್ಮ ಸಮುದಾಯದ ಯುವಕರೇ ತುಪ್ಪ ಸುರಿದರು ಎನ್ನುವುದನ್ನು ಮುಸ್ಲಿಂ ನಾಯಕತ್ವ ಒಪ್ಪಿಕೊಂಡಿತು.
ರಸ್ತೆಯಲ್ಲಿ ಸಂಗೀತ ಹಚ್ಚಿಕೊಂಡು ರಾತ್ರಿಯೆಲ್ಲ ಕುಡಿದು ಕುಣಿಯುವುದು(ಕೆಲವೊಮ್ಮೆ ಮಸೀದಿಯ ಮುಂದೆಯೇ) ಈಗ ಸಾಮಾನ್ಯವಾಗಿಬಿಟ್ಟಿದೆ. ಹೋಲಿ, ದೀಪಾವಳಿ ಮತ್ತು ಮುಹರ್ರಮ್‌ನಂದು ಸ್ಥಳೀಯ ಮದ್ಯದಂಗಡಿಗಳಲ್ಲಿ ವ್ಯಾಪಾರ ಅತಿ ಜೋರಾಗಿರುತ್ತದೆ. ಹೀಗೆ ಮೈಮರೆತು ಕುಡಿದು ತೂರಾಡುವವರಲ್ಲಿ ಅನಕ್ಷರಸ್ಥರಷ್ಟೇ ಅಲ್ಲ, ಅನಿವಾಸಿ ಭಾರತೀಯರ ಮತ್ತು ಶ್ರೀಮಂತರ ಮಕ್ಕಳೂ ಕೂಡ ಈ ಹುಚ್ಚಾಟದಲ್ಲಿ ಬಹುಸಂಖ್ಯೆಯಲ್ಲಿರುತ್ತಾರೆ. ಆದರೆ ಇವರಿಗೆಲ್ಲ ಬುದ್ಧಿ ಹೇಳುವುದಕ್ಕೆ ಮಾತ್ರ ನಮ್ಮ ಉಲೇಮಾಗಳು ಮುಂದಾಗುವುದಿಲ್ಲ.
ಶಬ್-ಎ-ಬಾರಾತ್‌ನ ರಾತ್ರಿಗಳಂದು ಮುಸ್ಲಿಂ ಹುಡುಗರು ರಸ್ತೆಯಲ್ಲೆಲ್ಲ ತಮ್ಮ ಬೈಕ್‌ಗಳನ್ನು ದೆವ್ವ ಹಿಡಿದವರಂತೆ ಓಡುಸುತ್ತಾರೆ. ಇದು ನಿಜಕ್ಕೂ ಖಂಡನಾರ್ಹ. ಇನ್ನೂ ವಿಚಿತ್ರವೆಂದರೆ, ಯಾರನ್ನಾದರೂ ಸಮಾಧಿ ಮಾಡಲು ಒಯ್ಯುವ ವೇಳೆ ಅಥವಾ ಸ್ಮಶಾನದಿಂದ ಬರುವ ವೇಳೆಯಲ್ಲೂ ಇವರುಗಳು ತಮ್ಮ ಗಾಡಿಯ ಹಾರ್ನ್ ಹೊಡೆಯುತ್ತಾ, ಜೋರಾಗಿ ಚೀರುತ್ತಾ ಓಡಾಡುತ್ತಾರೆ. ಮಧ್ಯರಾತ್ರಿಯಂದು ಸ್ಥಳೀಯರಲ್ಲಿ ಭಯದ ವಾತಾವರಣ ಸೃಷ್ಟಿಸಿಬಿಡುತ್ತಾರೆ. ಇಂಥ ಕೆಲಸಗಳು ಇಸ್ಲಾಂಗೆ ವಿರುದ್ಧವಾದವು, ಧರ್ಮವಿರೋಧಿಯಾದವು ಮತ್ತು ಹಿಂಸಾಚಾರಕ್ಕೆ ಮೂಲವಾಗಬಲ್ಲವು ಎನ್ನುವುದನ್ನು ನಾವು ನಮ್ಮ ಯುವಕರಿಗೆ ಹೇಳುವುದೇ ಇಲ್ಲ. ಮುಜಫ್ಫರ್‌ನಗರದಲ್ಲಿ ಸರಿಯಾದ ಸಮಯದಲ್ಲಿ ಕ್ರಮ ತೆಗೆದುಕೊಳ್ಳಬಹುದಾದ ಶಕ್ತಿ ಮುಸ್ಲಿಂ ನಾಯಕರಿಗಿತ್ತು. ಆದರೆ ಪರಿಸ್ಥಿತಿ ಕೈ ಜಾರಿಹೋಗುವವರೆಗೂ ಸುಮ್ಮನಿದ್ದು, ಈಗ ಅಖಿಲೇಶ್ ಯಾದವ್‌ರ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಅಖಿಲೇಶ್‌ಗಿಂತ ಮಾಯಾವತಿ ಸರ್ಕಾರವೇ ಚೆನ್ನಾಗಿತ್ತು ಎಂದು ಬಡಬಡಿಸುತ್ತಿದ್ದಾರೆ.
ಪ್ರಸಕ್ತ ಕೋಮು ಗಲಭೆಯಿಂದಾಗಿ ಮುಸ್ಲಿಂ ಮತ್ತು ಜಾಟ್ ಸಮುದಾಯದ ಮಧ್ಯೆ ಒಡಕು ಮೂಡಿದೆ. ಮುಸ್ಲಿಂ ನಾಯಕರು ಈಗಲಾದರೂ ಪ್ರಬುದ್ಧತೆ ತೋರಿಸದಿದ್ದರೆ ಪರಿಸ್ಥಿತಿ ಹೀಗೆ ಮುಂದುವರಿದು, ಮುಸ್ಲಿಂ ಮತ್ತು ಯಾದವ್‌ರ ಮಧ್ಯೆಯೂ ಒಡಕು ಮೂಡಲು ಶುರುವಾಗಬಹುದು.

- ಸುರೂರ್ ಅಹಮದ್, ಅಂಕಣಕಾರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement