ಅಂಕಣಗಳು

ಈ ಜಗತ್ತು ಯಾರ ಕನಸಿನ ಊಳಿಗದಲ್ಲಿದೆ?

ಕಣ್ಣು-ಕಿವಿ ಬಿಟ್ಟು ಸುದ್ದಿ ಜಗತ್ತಿನ ಕಂಪನಗಳನ್ನು ಹೀರಿಕೊಳ್ಳುವುದಕ್ಕೆ ಹೊರಟವರನ್ನು ಹತ್ತೆಂಟು...

ಕಣ್ಣು- ಕಿವಿ ಬಿಟ್ಟು ಸುದ್ದಿ ಜಗತ್ತಿನ ಕಂಪನಗಳನ್ನು ಹೀರಿಕೊಳ್ಳುವುದಕ್ಕೆ ಹೊರಟವರನ್ನು ಹತ್ತೆಂಟು ಬಗೆಯ ಗದ್ದಲದ ತರಂಗಗಳು ತಾಕುತ್ತಿವೆ. ಬಿಡಿ, ಕೇಂದ್ರದ ರಾಜಕೀಯ ನಾಯಕತ್ವ ಬದಲಾಗದ ಹೊರತೂ ರುಪಾಯಿಯಾಗಲೀ, ಭಾರತದ ಆರ್ಥಿಕತೆಯಾಗಲೀ ಚೇತರಿಸಿಕೊಳ್ಳುವ ಛಾನ್ಸೇ ಇಲ್ಲ ಎಂಬ ಹತಾಶೆ. ಯಾವಾಗೆಂದರೆ ಆವಾಗ ಏರಲು ಹೂಂಕರಿಸುತ್ತಿರುವ ತೈಲದ ರೇಟು. ಆ ಬೆನ್ನಿಗೇ ದರ ಏರಿಸಲು ಕಾದು ಕುಳಿತಂತಿರುವ ಸಾರಿಗೆ ಸಂಸ್ಥೆಗಳು. ಕೆಲವೊಮ್ಮೆ ಕೊಳ್ಳುವವರಿಲ್ಲದೆ ರಸ್ತೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಟೊಮೆಟೊ ಇನ್ನೊಮ್ಮೆ ಆಗಸಕ್ಕೆ ನೆಗೆದು ಕೈಗೆ ಸಿಗದೇ ಗೇಲಿ ಮಾಡುವುದರ ಹಿಂದಿನ ಗಣಿತವನ್ನು ಬಿಡಿಸುವುದಕ್ಕೆ ಹೋಗಿ ಸಿಕ್ಕಿಬಿದ್ದಂತಿರುವ ಶ್ರೀಸಾಮಾನ್ಯ. ಟ್ರಾಫಿಕ್‌ನಲ್ಲಿ ಅಡ್ಡ ಬಂದವನನ್ನು ಸಿಗಿದುಹಾಕಿಯೇ ಸಿದ್ಧ ಎಂದು ಪಿತ್ತ ನೆತ್ತಿಗೇರಿಸಿಕೊಂಡಷ್ಟೇ ಸಹಜವಾಗಿ, ಸಿರಿಯಾವನ್ನು ಬಡಿದು ಹಾಕುತ್ತೇನೆ ಅಂತ ಅಬ್ಬರಿಸಿ ಮೆತ್ತಗಾದ ಅಮೆರಿಕ. ಇವೆಲ್ಲದರ ನಡುವೆಯೇ ವ್ಯಕ್ತಿತ್ವ ವಿಕಸನದ ಕ್ಲಾಸು- ಪುಸ್ತಕಗಳಲ್ಲಿ 'ಹೌ ಟು ಬಿಕಮ್ ಸಕ್ಸಸ್‌ಫುಲ್‌', 'ಹೌ ಟು ಬಿಕಮ್ ರಿಚ್‌' ಎಂದು ಹುಡುಕಾಟಕ್ಕೆ ಬಿದ್ದಿರುವ ಹುಡುಗ-ಹುಡುಗಿಯರು. ಇಂಥ ನೂರೆಂಟು ದೈನಿಕದ ಚಿತ್ರಗಳನ್ನು ಒಟ್ಟಿಗಿಟ್ಟು ನೋಡಿದಾಗಲೆಲ್ಲ ಅನ್ನಿಸುವುದುಂಟು; ಯಾವುದೋ ಮುಚ್ಚಿದ ರೆಪ್ಪೆಯೊಳಗೆ ಜಾರಿಯಲ್ಲಿರುವ ಮಹಾ ಕನಸೊಂದರ ಪುಡಿ ಪಾತ್ರಗಳಂತೆ ಇದ್ದೇವಲ್ಲ ನಾವು ಎಂದು. ನಿಜ, ನಿಜ, ಜಗತ್ತು ಸಾಗುತ್ತಿರುವುದು ದೇವರ ಕನಸಿನ ಜಾಡಿನಲ್ಲಿ ಅಂತ ಸಮಾಧಾನಪಟ್ಟುಕೊಳ್ಳುತ್ತೀರಾದರೆ ಬಲ್ಲಮೂಲಗಳಿಂದ ಬಂದ ಬ್ರೇಕಿಂಗ್ ನ್ಯೂಸ್ ಒಂದಿದೆ. ದೇವರ ಸ್ವಪ್ನದೊಳಗೆ ಗುಮ್ಮನೊಬ್ಬನಿದ್ದಾನೆ. ಆ ಗುಮ್ಮನೂ ಕನಸುತ್ತಿದ್ದಾನೆ. ಅವನ ಕನಸಿನಲ್ಲಿ ನಾವೆಲ್ಲ ಇದ್ದೇವೆ ಹಾಗೂ ನಮ್ಮೆಲ್ಲರನ್ನೂ ಅನವರತ ಬೆನ್ನಟ್ಟಿಕೊಂಡು ಬಂದಿದೆ ದುಃಸ್ವಪ್ನ... ಇವೆಲ್ಲ ಫಿಲಾಸಫಿಯ ಕೊರೆತ ಎನ್ನಿಸುತ್ತಿದೆಯಾದರೆ ನೇರ ಪ್ರಶ್ನೆಗೆ ಬರೋಣ. ಇಷ್ಟಕ್ಕೂ ಈ ದುನಿಯಾ ಯಾರ ದರ್ದಿನಲ್ಲಿ ಸಾಗುತ್ತಿದೆ? ಉತ್ತರವನ್ನು ತತ್ತ್ವದಲ್ಲಲ್ಲದೇ ಇತಿಹಾಸದಲ್ಲಿ ಹುಡುಕುವುದಾದರೆ....
---
ಮೊನ್ನೆ ಸೆಪ್ಟೆಂಬರ್ 15ಕ್ಕೆ ಕರಾಳ ನೆನಪೊಂದು ತನ್ನ ಐದನೇ ವಾರ್ಷಿಕ ದಿನವನ್ನು ಪೂರೈಸಿತು. ಐದು ವರ್ಷಗಳ ಹಿಂದೆ ಇದೇ ದಿನಾಂಕದಲ್ಲಿ ಅಮೆರಿಕದ ದೈತ್ಯ ಇನ್‌ವೆಸ್ಟ್‌ಮೆಂಟ್ ಬ್ಯಾಂಕ್ ಲೆಹಮನ್ ಬ್ರದರ್ಸ್ ದಿವಾಳಿ ಘೋಷಿಸಿಕೊಂಡಿತು. ಇದರ ಜತೆಯಲ್ಲೇ ವಿಮಾಕ್ಷೇತ್ರದ ದೈತ್ಯ ಎಐಜಿ ಕೂಡ ಕುಸಿದುಬಿದ್ದಾಗ ಅದರ ಪರಿಣಾಮ ಅಮೆರಿಕಕ್ಕಷ್ಟೇ ಸೀಮಿತವಾಗಿರದೇ ಜಾಗತಿಕ ಅರ್ಥವ್ಯವಸ್ಥೆಗೆ ಹೊಡೆಯಿತು ರಿಸೆಷನ್ ಎಂಬ ಲಕ್ವ.  ಸರ್ಕಾರದಿಂದ ಅನಿಯಂತ್ರಿತವಾಗಿರಬೇಕು ಎಂಬ ಜಪವನ್ನೇ ನಿರಂತರವಾಗಿ ಮಾಡಿಕೊಂಡು ಬಂದಿದ್ದ, ತಮ್ಮ ಲಾಬಿಗಳಿಂದ ಅಂಥ ಆಕಾಂಕ್ಷೆಯನ್ನು ಎಲ್ಲ ರೀತಿಯಿಂದಲೂ ನೆರವೇರಿಸಿಕೊಂಡು ಆನೆ ನಡೆದದ್ದೇ ದಾರಿ ಎಂಬಂತೆ ತಾವು ರೂಪಿಸಿದ ಆರ್ಥಿಕ ಸಾಧನ (ಡಿರೇವೆಟಿವ್ಸ್)ಗಳ ಮೂಲಕ ಅರ್ಥವ್ಯವಸ್ಥೆಯನ್ನು ಅಕ್ಷರಶಃ ಜೂಜಿನ ಅಡ್ಡೆಯಾಗಿಸಿದ ಕಾರ್ಪೋರೇಟ್ ಜಗತ್ತನ್ನು ಕೊನೆಗೆ ಅಮೆರಿಕದ ಸಾಮಾನ್ಯ ಜನರ ತೆರಿಗೆ ಹಣದಿಂದ ಬೇಲ್‌ಔಟ್ ಮಾಡಲಾಯಿತು. ಹೀಗೆ ವೆಚ್ಚ ತೂಗಿಸಿಕೊಳ್ಳುವ ಸರ್ಕಸ್ಸಿನಲ್ಲಿ ಸಹಸ್ರಾರು ಫ್ಯಾಕ್ಟರಿ ಕೆಲಸಗಾರರೆಲ್ಲರ ಕೆಲಸಕ್ಕೆ ಕುತ್ತು ತರಲಾಯಿತು.
ತಮ್ಮ ಮೂಲದ್ರವ್ಯಕ್ಕಿಂತ ಹಲವು ಪಟ್ಟು ಹೆಚ್ಚಿನ ಸಾಲಗಳನ್ನು ನೀಡುತ್ತ ಹೋದ ಈ ಬ್ಯಾಂಕರ್‌ಗಳಿಗೆ ತಾವು ನಿರ್ಮಿಸುತ್ತಿರುವುದು ಭ್ರಮೆಯ ಗುಳ್ಳೆ ಹಾಗೂ ಅದರೊಳಗೆ ಹಲವರ ಭವಿಷ್ಯವಿತ್ತು ಎಂಬುದು ಗೊತ್ತಿತ್ತು ಎಂದೇ ಹಣಕಾಸು ಪರಿಣತರು ವಾದಿಸುತ್ತಾರೆ. ಆದರೆ ವಾಲ್‌ಸ್ಟ್ರೀಟ್‌ನ ಈ ಸರದಾರರೆಲ್ಲ ಹಣ, ಅಧಿಕಾರ, ಇವುಗಳೊಂದಿಗೆ ಆತುಕೊಂಡಿರುವ ಸೆಕ್ಸ್- ಮಾದಕಗಳ ಅಮಲು ಇಂಥವೇ ಸಂಗತಿಗಳಲ್ಲಿ ಕಳೆದುಹೋಗಿದ್ದರು. ಹಾಗೆಂದೇ, ಈ ಆಧುನಿಕ ಹುಚ್ಚಾಟದ ಆರ್ಥಿಕ ಸಾಧನಗಳನ್ನು ತಹಬಂದಿಗೆ ತರುವ ಪ್ರಯತ್ನಗಳು ನಡೆದಾಗಲೆಲ್ಲ ಅದಕ್ಕೆ ಲಾಬಿದಾರರ ಪ್ರತಿರೋಧ ಎದುರಾಗಿ, 'ಕಮಾಡಿಟಿ ಫ್ಯೂಚರ್ಸ್ ಮಾಡರ್ನೈಸೇಷನ್ ಆ್ಯಕ್ಟ್ 2000'ದ ಮಸೂದೆಯನ್ನೇ ಜಾರಿ ಮಾಡಿಸಿಕೊಂಡರು. ಇವೆಲ್ಲದರ ಪರಿಣಾಮ ಅಖಾಡದಲ್ಲಿ ಪ್ರಬಲವಾಗಿ ಉಳಿದುಕೊಂಡವರೆಂದರೆ ಐದು ಇನ್‌ವೆಸ್ಟ್‌ಮೆಂಟ್ ಬ್ಯಾಂಕ್‌ಗಳು, ಮೂರು ಇನ್‌ಶ್ಯೂರೆನ್ಸ್ ಕಂಪನಿಗಳು ಹಾಗೂ ಮೂರು ರೇಟಿಂಗ್ ಏಜೆನ್ಸಿಗಳು. ಇವೆಲ್ಲ ಒಂದಕ್ಕೊಂದು ಪೂರಕವಾಗಿ ಹಣಕಾಸು ಪ್ರಪಂಚವನ್ನು ಹೇಗೆ ಜೂಜನ್ನಾಗಿಸಿದವು, ರೇಟಿಂಗ್ ಏಜೆನ್ಸಿಗಳು ಸುಳ್ಳೇ ಚಿತ್ರಣವನ್ನು ಕಟ್ಟಿಟ್ಟು ಎಲ್ಲರನ್ನೂ ಜೂಜಿಗೆ ಬೀಳಿಸಿದ್ದು ಹೇಗೆ, ಮಾಜಿ ಬ್ಯಾಂಕರ್‌ಗಳು ರಾಜಕಾರಣಿಗಳಾದರು ಹೇಗೆ, ಅರ್ಥ ಪರಿಣತರು ಎಂಬ ಹೆಸರಿನಲ್ಲಿ ಈ ದೈತ್ಯ ಹಣಕಾಸು ಸಂಸ್ಥೆಗಳಿಂದ ಕನ್ಸಲ್ಟಿಂಗ್ ಫೀಸು ಪಡೆದು ಜನರ ಕಣ್ಣಿಗೆ ಮಣ್ಣೆರಚಿದವರು ಯಾರೆಲ್ಲ ಎಂಬ ಕಳವಳಕಾರಿ ಸಂಗತಿಗಳನ್ನೆಲ್ಲ ಎಳೆ-ಎಳೆಯಾಗಿ ಬಿಚ್ಚಿಡುತ್ತದೆ ಚಾರ್ಲ್ಸ್ ಫರ್ಗ್ಯುಸನ್ ನಿರ್ದೇಶನದ 'ಇನ್‌ಸೈಡ್ ಜಾಬ್‌' ಎಂಬ 2010ರ ಪ್ರಶಸ್ತಿ ವಿಜೇತ ಸಾಕ್ಷ್ಯಚಿತ್ರ.
ಗಮನಿಸಬೇಕಾದ ಸಂಗತಿಯೆಂದರೆ ಈ ಜೂಜು ಹುಟ್ಟುಹಾಕಿದ ಆರ್ಥಿಕ ಬಿಕ್ಕಟ್ಟಿಗೆ ನಲುಗಿದವರು ಮಾತ್ರ ಬೇರೆಯವರು. ದೈತ್ಯ ಕಂಪನಿಗಳ ಆಯಕಟ್ಟಿನ ಹುದ್ದೆಯಲ್ಲಿದ್ದವರೆಲ್ಲ ತಮ್ಮ ಇಡುಗಂಟನ್ನು ಅಂಥ ಬಿಕ್ಕಟ್ಟಿನ ಪರಿಸ್ಥಿತಿಯಲ್ಲೂ ಚೆನ್ನಾಗಿಯೇ ಇಟ್ಟುಕೊಂಡರು. ಪ್ರೈವೇಟ್ ಜೆಟ್‌ಗಳು, ಖಾಸಗಿ ನೌಕೆಗಳು, ದ್ವೀಪಗಳಲ್ಲಿ ನಿರ್ಮಿಸಿಕೊಂಡಿರುವ ಐಷಾರಾಮಿ ಮನೆಗಳು ಇವ್ಯಾವುದಕ್ಕೂ ಕುತ್ತು ಒದಗಲಿಲ್ಲ. ಅವರಿಗೆ ಶಿಕ್ಷೆಯಾಗುವುದು ಹಾಗಿರಲಿ, ಕೆಲವರು ಒಬಾಮಾ ಆಡಳಿತದಲ್ಲಿ ಉನ್ನತ ಹುದ್ದೆ ಪಡೆದು ಆರಾಮಾಗಿದ್ದಾರೆ!
---
ಹೀಗೆ ಸಾಮಾನ್ಯರ ವಾಸ್ತವಗಳನ್ನು ಅಡವಿಟ್ಟುಕೊಂಡುಪ್ರತಿಯಾಗಿ ಕನಸಿನ ಪೊಟ್ಟಣದಲ್ಲಿ ದುಃಸ್ವಪ್ನಗಳನ್ನು ಮಾರುವುದು ಈ ಮೇಲಿನ ವಿದ್ಯಮಾನದಲ್ಲಿ ಕಾಣುವ ಇತ್ತೀಚಿನ ಬೆಳವಣಿಗೆ ಏನಲ್ಲ. ಈ ಸಾಮ್ರಾಜ್ಯ ಲಾಗಾಯ್ತಿನಿಂದ ಅಸ್ತಿತ್ವದಲ್ಲಿದೆ. ಜನರು ಈ ಬಗ್ಗೆ ಎಚ್ಚರಾಗದ ಹೊರತೂ ಈ ಸಾಮ್ರಾಜ್ಯವು ಬೇರೆಬೇರೆ ರೂಪಗಳಲ್ಲಿ ಆಟವಾಡುತ್ತಲೇ ಇರುತ್ತದೆ. ಯಾರದ್ದೋ ಆತಂಕ, ಇನ್ಯಾರದ್ದೋ ಅಸ್ಥಿರತೆ, ಬಹುಪಾಲು ಮಂದಿಯ ಹತಾಶ ಹಪಾಹಪಿ ಇವೆಲ್ಲವನ್ನೂ ಈ ಸಾಮ್ರಾಜ್ಯ ನೋಡನೋಡುತ್ತಲೇ ನಗದಾಗಿಸಿಕೊಳ್ಳುತ್ತದೆ. ಈ ಉನ್ಮಾದಿತ ಆಟದ ಉದ್ದೇಶ ಜಗತ್ತಿನ ಯಕಶ್ಚಿತ್ ಪ್ರಮಾಣದ ಗುಂಪೊಂದನ್ನು ಸಮೃದ್ಧವಾಗಿಡುವುದು. ಈ ಗುಂಪು ನಿರ್ದಿಷ್ಟ ದೇಶವಲ್ಲ, ಸರ್ಕಾರವಲ್ಲ ಅದೊಂದು ಹಿತಾಸಕ್ತಿ. ದಿನವೂ ದುಬಾರಿಯಾಗುತ್ತಿರುವ, ಅನಿಶ್ಚಿತ ಎನ್ನಿಸುತ್ತಿರುವ ಬದುಕನ್ನು ಹಳಿಯುತ್ತ, 'ದುಡ್ಡಿದ್ರೆ ಮಾತ್ರ ದುನಿಯಾ ಗುರೂ' ಎನ್ನುತ್ತೇವೆ. ಇದಕ್ಕೆಲ್ಲ ಕಾರಣರ್ಯಾರು ಎಂಬುದನ್ನು ಜಾಗತಿಕ ಪರಿಭಾಷೆಯಲ್ಲಿ ಅರ್ಥಮಾಡಿಕೊಳ್ಳುವುದಕ್ಕೆ ಬಳಕೆಯಾಗುವ ಪದ 'ಇಕನಾಮಿಕ್ ಹಿಟ್‌ಮ್ಯಾನ್‌'!
ಜಗತ್ತನ್ನು ಅದಕ್ಕರಿವಿಲ್ಲದಂತೆ ಯಾರದೋ ಕನಸಿನ ಜೀತಕ್ಕಿರಿಸುವ ಏಜೆಂಟ್ ಈತ. ಆತ ಅರ್ಥಶಾಸ್ತ್ರಜ್ಞನಾಗಿ, ವಿಷಯ ಪರಿಣತನಾಗಿ, ಅಭಿಪ್ರಾಯ ನಿರೂಪಕನಾಗಿ ನಮ್ಮ ನಡುವೆಯೇ ಇರುವವನು. ಈ ಪರಿಕಲ್ಪನೆ ಮೊಳಕೆಯೊಡೆದ ಪ್ರಾರಂಭದ ಹಂತದಲ್ಲಿ ಇಂಥದೊಂದು ಪಾತ್ರ ನಿರ್ವಹಿಸಿದವರು ಅಮೆರಿಕದ ಜಾನ್ ಪರ್ಕಿನ್ಸ್. ಅಮೆರಿಕದ ಉದ್ಯಮ ಸಾಮ್ರಾಜ್ಯವನ್ನು ಜಾಗತಿಕವಾಗಿ ವಿಸ್ತರಿಸುವ ತಂತ್ರಕ್ಕಾಗಿ ದುಡಿದು, ನಂತರ ಅದರ ಪರಿಣಾಮಗಳನ್ನು ಗಮನಿಸುತ್ತ ಬೆಚ್ಚಿಬಿದ್ದು 2004ರಲ್ಲಿ ಪರ್ಕಿನ್ಸ್ ಹೊರತಂದ ಪುಸ್ತಕ, 'ಕನ್‌ಫೆಶನ್ ಆಫ್ ಆ್ಯನ್ ಇಕನಾಮಿಕ್ ಹಿಟ್‌ಮ್ಯಾನ್‌'. ಕೇವಲ ಊಹಾತ್ಮಕ ವಾದಗಳಿಂದಲೇ ಹೆಣೆದಿರುವ ಕಟ್ಟುಕತೆ ಇದು ಅಂತ ಈ ಪುಸ್ತಕವನ್ನು ಜರೆದಿರುವವರ ಸಂಖ್ಯೆ ದೊಡ್ಡದಿದೆ. 'ನಾನು ಉಲ್ಲೇಖಿಸಿರುವ ಘಟನೆಗಳು ಇತಿಹಾಸದಲ್ಲಿ ದಾಖಲಾಗಿರುವಂಥವು. ನನ್ನ ಪಾಸ್‌ಪೋರ್ಟ್ ನೋಡಿದರೆ ಆ ಕಾಲಘಟ್ಟದಲ್ಲಿ ಆ ಎಲ್ಲ ದೇಶಗಳಲ್ಲಿ ನಾನಿದ್ದೆ ಎಂಬುದು ತಿಳಿಯುತ್ತದೆ. ಸೂಕ್ಷ್ಮವಾಗಿ ಗಮನಿಸುವ ಎಲ್ಲರಿಗೂ ನಾನು ಸತ್ಯ ಹೇಳುತ್ತಿದ್ದೇನೆ ಎಂಬುದು ಅರಿವಾಗುತ್ತದೆ' ಎನ್ನುವ ಪರ್ಕಿನ್ಸ್, ಇಕನಾಮಿಕ್ ಹಿಟ್‌ಮ್ಯಾನ್ ಆಯಾಮವನ್ನು ಬಿಚ್ಚಿಡುತ್ತ ಹೋಗುತ್ತಾರೆ.

'ಬಹುಶಃ ಮೊದಲ ಇಕನಾಮಿಕ್ ಹಿಟ್‌ಮ್ಯಾನ್ ಕೆಲಸ ನಿರ್ವಹಿಸಿದ್ದು ಟೆಡ್ಡಿ ರೂಸ್‌ವೆಲ್ಟ್‌ನ ಮೊಮ್ಮಗ ಕೆರ್ಮಿಟ್ ರೂಸ್‌ವೆಲ್ಟ್, 1950ರಲ್ಲಿ. ಅಮೆರಿಕದ ಕಂಪನಿಗಳಿಗೆ ಸೊಪ್ಪು ಹಾಕದ ಇರಾನ್‌ನ ಮೊಸ್ಸಾದೆಗ್‌ನ ಚುನಾಯಿತ ಸರ್ಕಾರವನ್ನು ಅಲ್ಲಿನ ಶಾಗಳನ್ನು ಎತ್ತಿಕಟ್ಟಿ ಬದಲಿಸುವ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡುಅದರಲ್ಲಿ ಯಶಸ್ವಿಯಾದ. ಮಿಲಿಟರಿ ನುಗ್ಗಿಸದೆ, ರಕ್ತಪಾತವಿಲ್ಲದೇ ಮಿಲಿಯನ್‌ಗಟ್ಟಲೇ ಡಾಲರ್ ಖರ್ಚುಮಾಡಿ ತನ್ನ ಹಿತಾಸಕ್ತಿ ಸಾಧಿಸಿಕೊಂಡ ಈ ರಹಸ್ಯ ಕಾರ್ಯಾಚರಣೆ ಅಮೆರಿಕಕ್ಕೆ ಈ ಹಿಟ್‌ಮ್ಯಾನ್ ಪರಿಕಲ್ಪನೆಯನ್ನು ಆಪ್ಯಾಯವಾಗಿಸಿತು. ರೂಸ್‌ವೆಲ್ಟ್ ಸಿಐಎ ಏಜೆಂಟ್ ಆಗಿ ಈ ಕೆಲಸ ಮಾಡಿದ್ದ. ಅಕಸ್ಮಾತ್ ಸಿಕ್ಕಿಬಿದ್ದಿದ್ದರೆ ದೇಶ ಉತ್ತರ ಹೇಳಬೇಕಾಗಿತ್ತು. ಹಾಗೆಂದೇ ಇದರ ಸುಧಾರಿತ ರೂಪವನ್ನು ಆವಿಷ್ಕರಿಸಲಾಯಿತು. ನಂತರ ನೇಮಕವಾದ ನನ್ನಂಥ ಇಕನಾಮಿಕ್ ಹಿಟ್‌ಮ್ಯಾನ್‌ಗಳನ್ನು ಸರ್ಕಾರದ ಪ್ರತಿನಿಧಿಯಾಗಿಸದೇ ಪ್ರಮುಖ ಕಂಪನಿಗಳಲ್ಲಿ 'ಚೀಫ್ ಇಕನಾಮಿಸ್ಟ್‌' ಎಂಬಂಥ ಹುದ್ದೆಗಳನ್ನು ನೀಡಿ ತೃತೀಯ ಜಗತ್ತಿನ ರಾಷ್ಟ್ರಗಳಿಗೆ ಕಳುಹಿಸಲಾಯಿತು. ನಮ್ಮ ಕೆಲಸ ಆ ರಾಷ್ಟ್ರಗಳೊಂದಿಗೆ ಡೀಲ್ ಕುದುರಿಸುವುದು. ಮೂಲ ಸೌಕರ್ಯ ಅಭಿವೃದ್ಧಿಗೆ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಹಾಗೂ ಅಮೆರಿಕದಿಂದ ಭಾರಿ ಮೊತ್ತದ ಹಣವನ್ನು ಸಾಲ ಪಡೆದುಕೊಳ್ಳುವಂತೆ ಆಮಿಷ ಒಡ್ಡುವುದು. ಹೀಗೆ ಸಾಲ ನೀಡುವಾಗ ವಿಧಿಸುತ್ತಿದ್ದ ಪ್ರಮುಖ ಷರತ್ತು ಎಂದರೆ ನಿರ್ಮಾಣ ಕಾಮಗಾರಿಗಳನ್ನು ಹ್ಯಾಲಿಬರ್ಟನ್, ಬೆಕೆಲ್‌ನಂಥ ಅಮೆರಿಕನ್ ದೈತ್ಯ ಕಂಪನಿಗಳಿಗೇ ನೀಡಬೇಕು ಅನ್ನೋದು. ಇಕ್ವೆಡಾರ್, ಇಂಡೋನೇಷ್ಯದಂಥ ದೇಶಗಳಿಗೆ ಹೋಗಿ ನಾವು ಡೀಲ್ ಕುದುರಿಸಿಕೊಂಡು ಬರುತ್ತಿದ್ದೆವು. ಇವುಗಳಿಗೆಲ್ಲ ಅವಕ್ಕೆ ತೀರಿಸಲಾಗದ ಮೊತ್ತದ ಸಾಲವನ್ನೇ ನೀಡಲಾಗುತ್ತಿತ್ತು. ಬೆಕೆಲ್‌ನಂಥ ಕಂಪನಿಗಳು ಹೋಗಿ ಬಂದರನ್ನೋ, ಹೆದ್ದಾರಿಯನ್ನೋ ಮಾಡಿ ಬರುತ್ತಿದ್ದವು. ಆ ಮೂಲಕ ಅಮೆರಿಕದಿಂದ ಹೋದ ಹಣ ಮತ್ತೆ ಅಲ್ಲಿಗೇ ಬಂದು ಸೇರಿದಂತಾಯಿತು. ಈ ಯೋಜನೆಗಳು ಅಲ್ಲಿನ ಕೆಲವೇ ಅನುಕೂಲಸ್ಥ ಕುಟುಂಬಕ್ಕೆ ಒದಗುವಂಥವು. ಆ ದೇಶದ ಬಡಜನರ ಮೇಲೆ ಬೀಳುತ್ತಿದ್ದದ್ದು ಎಂದೂ ತೀರಿಸಲಾಗದ ಸಾಲ! ಇವತ್ತಿಗೂ ಇಕ್ವೆಡಾರ್ ತನ್ನ ಆಯವ್ಯಯದ ಅರ್ಧಭಾಗವನ್ನು ಸಾಲ ತುಂಬುವುದಕ್ಕೇ ವ್ಯಯಿಸುತ್ತಿದೆ. ಸಾಲಕ್ಕೆ ಕೊಟ್ಟ ಹೆಚ್ಚಿನ ಹಣವನ್ನೆಲ್ಲ ಅಮೆರಿಕನ್ ಕಂಪನಿಗಳೇ ಬಾಚಿಕೊಂಡು ಬಂದವಾದ್ದರಿಂದ ಅದಕ್ಕೆ ಅವಲಂಬನೆ ಬಿಟ್ಟರೆ ಬೇರೆ ದಾರಿ ಇಲ್ಲವಾಯಿತು. ಈಗೇನಾಗಿದೆ ಎಂದರೆ ನಮಗೆ ತೈಲ ಬೇಕಾದಾಗಲೆಲ್ಲ ಇಕ್ವೆಡಾರ್ ಮೇಲೆ ಸವಾರಿ ಮಾಡುತ್ತೇವೆ. 'ನೋಡು, ನೀನು ಸಾಲ ತೀರಿಸಿಲ್ಲ. ನಿನ್ನ ತೈಲ ನನಗೆ ಕೊಡು. ಸಂಪದ್ಭರಿತ ಅಮೆಜಾನ್ ಕಾಡುಗಳನ್ನು ನನ್ನ ಕಂಪನಿಗಳ ತೆಕ್ಕೆಗೆ ಬಿಡು' ಎಂದು ಜಬರ್ದಸ್ತು ಮಾಡುತ್ತಿದ್ದೇವೆ. ಅವರು ಅಕ್ಷರಶಃ ಈ ಸಾಮ್ರಾಜ್ಯದ ಜೀತದಾಳುಗಳಾಗಿದ್ದಾರೆ....

ಅದೊಮ್ಮೆ 'ಒಪೆಕ್‌' ರಾಷ್ಟ್ರಗಳು ತೈಲ ಪೂರೈಕೆ ನಿಲ್ಲಿಸಿ ಅಮೆರಿಕವನ್ನು ಕಂಗೆಡಿಸಿದ್ದವು. ಅದು ಮತ್ತೆ ಮರುಕಳಿಸಬಾರದೆಂಬ ಸಂಕಲ್ಪ ಹೊತ್ತೇ ಇಕನಾಮಿಕ್ ಹಿಟ್‌ಮ್ಯಾನ್‌ಗಳಾದ ನಾವು 70ರ ದಶಕದಲ್ಲಿ ಸೌದಿ ಅರೇಬಿಯಾಕ್ಕೆ ಹೋಗಿ ಅಲ್ಲಿನ ರಾಜಮನೆತನದೊಂದಿಗೆ ಡೀಲ್ ಕುದುರಿಸಿದೆವು. ಪೆಟ್ರೊ ಡಾಲರ್‌ಗಳನ್ನು ಅಮೆರಿಕಕ್ಕೆ ಹಿಂತಿರುಗಿಸಿ ಅವನ್ನು ಅಮೆರಿಕ ಸರ್ಕಾರದ ಸೆಕ್ಯುರಿಟಿ ಬಾಂಡ್‌ಗಳಲ್ಲಿ ವ್ಯಯಿಸುವುದಕ್ಕೆ ಅವರು ಒಪ್ಪಿಕೊಂಡರು. ಈ ಸೆಕ್ಯುರಿಟಿಯ ಬಡ್ಡಿಹಣವನ್ನು ಅಮೆರಿಕದ ಕಂಪನಿಗಳಿಗೆ ಕೊಟ್ಟು ಮೂಲ ಸೌಕರ್ಯ ನಿರ್ಮಾಣ ಮಾಡಿಸಿಕೊಳ್ಳುವುದಕ್ಕೂ ಅವರು ಒಪ್ಪಿದರು. ಸೌದಿ ರಾಜಮನೆತನದವರು ಅಮೆರಿಕಕ್ಕೆ ವಿನಾಯಿತಿ ದರದಲ್ಲಿ ತೈಲ ಪೂರೈಸುತ್ತಿದ್ದಾರೆ. ಪ್ರತಿಯಾಗಿ ನಾವು ಅವರನ್ನು ಅಧಿಕಾರದಲ್ಲಿ ಮುಂದುವರಿಯುವಂತೆ ನೋಡಿಕೊಂಡಿದ್ದೇವೆ. ಇದೇ ಡೀಲ್ ಅನ್ನು ಇರಾಕ್‌ನಲ್ಲಿ ಯಶಸ್ವಿಯಾಗಿಸುವುದಕ್ಕೆ ಇಕನಾಮಿಕ್ ಹಿಟ್‌ಮ್ಯಾನ್‌ಗಳು ಸೋತೆವು. ಇಕನಾಮಿಕ್ ಹಿಟ್‌ಮ್ಯಾನ್‌ಗಳು ಸೋತಾಗ ಅಖಾಡಕ್ಕೆ ಇಳಿಯುವವರು 'ಜ್ಯಾಕಾಲ್‌'ಗಳು. ನಮ್ಮ ಹಿತಾಸಕ್ತಿಗೆ ಒಪ್ಪದ ಅಧಿಕಾರ ವ್ಯವಸ್ಥೆಯನ್ನು ಆಂತರಿಕ ಕ್ಷಿಪ್ರಕ್ರಾಂತಿಗೆ ನೀರೆರೆದು ಬದಲಿಸುವುದು ಇಲ್ಲವೇ ವ್ಯವಸ್ಥೆಯ ಪ್ರಮುಖನನ್ನು ಹತ್ಯೆ ಮಾಡುವ ಹೊಣೆಯನ್ನು ಸಿಐಎನ ಜ್ಯಾಕಾಲ್‌ಗಳು ಹೊರುತ್ತಾರೆ. ಆದರೆ ಅತ್ಯುತ್ತಮ ಬಾಡಿಗಾರ್ಡ್‌ಗಳು ಹಾಗೂ ತನ್ನ ಪ್ರತಿರೂಪದ ಜಾಲವನ್ನೆಲ್ಲ ನಿರ್ಮಿಸಿಕೊಂಡಿದ್ದ ಸದ್ದಾಂ ಹುಸೇನ್‌ನನ್ನು ಮುಗಿಸುವುದು ಅಮೆರಿಕಕ್ಕೆ ಸಾಧ್ಯವಾಗಲಿಲ್ಲ. ಇಂಥ ಸಂದರ್ಭಗಳಲ್ಲಿ ಉಪಯೋಗಿಸುವ ಅಂತಿಮ ಅಸ್ತ್ರ ಮಿಲಿಟರಿ ಬಲಪ್ರಯೋಗ.. ಇರಾಕ್‌ನಲ್ಲಾಗಿದ್ದು ಇದೇ.'
---
ಇವೆಲ್ಲ ಜಾನ್ ಪರ್ಕಿನ್ಸ್ ತೆರೆದಿಟ್ಟ ತಲ್ಲಣಗಳ ತುಣುಕಷ್ಟೆ. ಇಕ್ವೆಡಾರ್,ಪನಾಮಾ, ಹೊಂಡುರಾಸ್ ಇತ್ಯಾದಿಗಳಲ್ಲೆಲ್ಲ ಈ ಅನರ್ಥ ಸಾಮ್ರಾಜ್ಯ ನುಗ್ಗಿದ್ದು ಹೇಗೆಂದು ವಿವರಿಸಿದ್ದಾರೆ. ಆ ಎಲ್ಲ ಚುಕ್ಕಿಗಳನ್ನು ಇತಿಹಾಸದ ಬೇರೆ ಆಕರಗಳ ನೆರವಿನೊಂದಿಗೆ ಸೇರಿಸುತ್ತ ಹೋದಾಗ ಆಕೃತಿಯೊಂದು ಗಹಗಹಿಸುತ್ತದೆ. ನಾವೆಲ್ಲ ಯಾರ ಕನಸುಗಳಲ್ಲಿ ಜೀತಕ್ಕಿದ್ದೇವೆಂದು ಪಕ್ಕಾ ಮಾಡಿಕೊಳ್ಳಬೇಕಾದರೆ ಆಗಾಗ ಹೀಗೆಲ್ಲ ಅಗೆದಾಟ, ಕೆದಕಾಟಗಳು ಜಾರಿಯಲ್ಲಿರಬೇಕಾಗುತ್ತವೆ.

- ಚೈತನ್ಯ ಹೆಗಡೆ
cchegde@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!