ಆಧುನಿಕ ಮಹಾತ್ಮಾ ಗಾಂಧಿ ಎಂದು ಜನರಿಂದ ಕರೆಸಿಕೊಂಡ ಅಣ್ಣಾ ಹಜಾರೆ ನೆನಪಿದ್ದಾರೆಯೇ? ಕೆಲವು ವರ್ಷದ ಹಿಂದೆ ಅವರು ಭ್ರಷ್ಟಾಚಾರದ ವಿರುದ್ಧ ಕದನ ಘೋಷಿಸಿದಾಗ ಇಡೀ ರಾಷ್ಟ್ರವೇ ಅವರನ್ನು ಹಿಂಬಾಲಿಸಿತ್ತು. ಜನತೆಯಿಂದ ಅಣ್ಣಾ ಹಜಾರೆಯವರ ಚಳವಳಿಗೆ ದೊರೆತ ಬೆಂಬಲ ನೋಡಿ ರಾಜಕೀಯ ವರ್ಗದ ಬೆನ್ನ ಹುರಿಯಲ್ಲಿ ನಡುಕ ಹುಟ್ಟಿತ್ತು. ದೇಶದ ಆರ್ಥಿಕತೆಯನ್ನು ನಾಶ ಮಾಡುತ್ತಿರುವ ಪಿಡುಗಿನ ವಿರುದ್ಧ ಅಷ್ಟೊಂದು ಪ್ರಮಾಣದಲ್ಲಿ ಜನ ಬೀದಿಗಿಳಿದಿದ್ದನ್ನು ಸ್ವತಂತ್ರ ಭಾರತ ನೋಡಿರಲಿಲ್ಲ. ಆದರೆ ಯಾವಾಗ ಅವರ ಕೆಲವು ಆಪ್ತರು, ಅವರ ಇಚ್ಛೆಗೆ ವಿರುದ್ಧವಾಗಿ ರಾಜಕೀಯ ಪಕ್ಷವೊಂದನ್ನು ಸ್ಥಾಪಿಸಲು ಮುಂದಾದರೋ, ಆಗ ಹಲವಾರು ಟೀಕೆಗಳು ಕೇಳಿಬಂದವು. ಈ ಹೊಸ ಪಕ್ಷ ಈಗ ಅಸ್ತಿತ್ವದಲ್ಲಿರುವ ಉಳಿದ ಪಕ್ಷಗಳಿಗಿಂತ ಹೇಗೆ ಭಿನ್ನವಾಗಿರಲಿದೆ? ಉಳಿದ ಪಕ್ಷಗಳು ನಡೆದ ಹಾದಿಯನ್ನೇ ಈ ಪಕ್ಷವೂ ಹಿಡಿಯುವುದಿಲ್ಲ ಎನ್ನುವುದಕ್ಕೆ ಖಾತರಿ ಏನು? ಅದು ತಾನು ಹೇಳುವ ಬದಲಾವಣೆಗಳನ್ನು ವ್ಯವಸ್ಥೆಯಲ್ಲಿ ತರಲು ಸಫಲವಾಗುವುದೇ? ಉಳಿದ ಪಕ್ಷಗಳಲ್ಲಿರುವ ಹಣ ಮತ್ತು ಅಧಿಕಾರಕ್ಕೆ ಸಡ್ಡು ಹೊಡೆಯಬಲ್ಲ ಶಕ್ತಿ ಅದಕ್ಕಿದೆಯೇ? ಎನ್ನುವ ಪ್ರಶ್ನೆಗಳೆಲ್ಲ ಎದ್ದವು.
ದೆಹಲಿಯಲ್ಲಿ ಮುಂಬರುವ ದಿನಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ ಆಮ್ ಆದ್ಮಿ ಪಕ್ಷಕ್ಕೆ ಅಗ್ನಿ ಪರೀಕ್ಷೆಯಾಗಲಿದೆ. ಸಾಮಾಜಿಕ ಹೋರಾಟಗಾರನಿಂದ ರಾಜಕಾರಣಿಯಾಗಿ ಬದಲಾಗಿರುವ ಆ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್, "ದೊಡ್ಡ ಪಕ್ಷಗಳ ಹತ್ತಿರ ಹಣವಿರಬಹುದು, ಆದರೆ ನಮ್ಮ ಬಳಿ ಜನ ಬೆಂಬಲವಿದೆ" ಎನ್ನುತ್ತಿದ್ದಾರೆ. ಅವರ ಪ್ರಕಾರ, ಆಮ್ ಆದ್ಮಿ ಪಕ್ಷಕ್ಕೆ ಅಣ್ಣಾ ಹಜಾರೆಯವರ ಆಶೀರ್ವಾದವಿದ್ದು, ಆಮ್ ಆದ್ಮಿ(ಸಾಮಾನ್ಯ ಜನತೆ) ಅವರನ್ನು ಬೆಂಬಲಿಸುತ್ತಾರಂತೆ. ಆದರೆ ಅಣ್ಣಾ ಅವರಂತೆ ರಾಜಕೀಯದ ಹೊರಗಿದ್ದುಕೊಂಡೇ ಅವರು ಹೋರಾಡಬಹುದಿತ್ತೇ? ಆದರೆ ಇದು ಕಷ್ಟ ಅನ್ನುತ್ತಾರೆ ಕೇಜ್ರಿವಾಲ್. ಚುನಾವಣೆ ಗೆದ್ದು, ಸಂಸತ್ತಿನ ಒಳಹೊಕ್ಕು ಅಲ್ಲಿಂದಲೇ ಬದಲಾವಣೆ ಮಾಡಬೇಕು ಎನ್ನುವುದು ಅವರ ವಾದ. ಅವರ ಮಾತೇನೋ ಸರಿಯಿರಬಹುದು. ಆದರೆ ಹೇಳುವುದು ಸುಲಭ, ಮಾಡುವುದು ಕಷ್ಟ.
ಬಹುಮತ ಪಡೆದು ದೆಹಲಿಯಲ್ಲಿ ತಮ್ಮ ಪಕ್ಷ ಸರ್ಕಾರ ರಚಿಸುತ್ತದೆ ಎನ್ನುವ ವಿಶ್ವಾಸದಲ್ಲಿ ಕೇಜ್ರಿವಾಲ್ ಇದ್ದಾರೆ. ಅವರು ಹೇಳುತ್ತಿರುವುದೇನೋ ನಿಜ. ಅವರ ಪಕ್ಷಕ್ಕೆ ಅಮೋಘ ಜನ ಬೆಂಬಲವಿದೆ. ಆದರೆ ಆ ಬೆಂಬಲ ಮತಗಳಾಗಿ ಪರಿವರ್ತನೆಗೊಳ್ಳುತ್ತದಾ? ಜನ ಬೆಂಬಲವಿದ್ದರೂ ಸೋತವರ ಸಂಖ್ಯೆ ಬಹಳಷ್ಟಿದೆ.
ಇದಕ್ಕೆ ಉದಾಹರಣೆಯಾಗಿ ನಮ್ಮ ಬೆಂಗಳೂರನ್ನೇ ತೆಗೆದುಕೊಳ್ಳಬಹುದು. ಅಣ್ಣಾ ಹಜಾರೆಯವರಿಗೆ ಭಾರೀ ಬೆಂಬಲ ಕೊಟ್ಟ ನಗರಗಳಲ್ಲಿ ಬೆಂಗಳೂರೂ ಒಂದು. ವಿದ್ಯಾರ್ಥಿಗಳು, ಶಿಕ್ಷಕರು, ವಕೀಲರು, ಇಂಜಿನಿಯರ್‌ಳೆಲ್ಲ ರಸ್ತೆಗಿಳಿದು ಅಣ್ಣಾ ಮತ್ತು ಅವರ ಹೋರಾಟಕ್ಕೆ ಬೆಂಬಲ ನೀಡಿದ್ದರು. ಈ ಬೆಂಬಲವನ್ನು ನೋಡಿದ ಕೆಲವು ಉತ್ಸಾಹಿಗಳು, ಲೋಕಸತ್ತಾ ಪಕ್ಷದಿಂದ ಚುನಾವಣೆಗಳಿಗೆ ಸ್ಪರ್ಧಿಸಿದರು. ಲೋಕಸತ್ತಾ ಮತ್ತು ಅಣ್ಣಾ ಹಜಾರೆಯವರ ಹೋರಾಟದ ಉದ್ದೇಶ ಒಂದೇ ಆಗಿರುವುದರಿಂದ ಈ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ ಎಂದೇ ಎಣಿಸಲಾಗಿತ್ತು. ವಿದ್ಯಾವಂತ ಯುವ ಮತದಾರರು ತಮಗೆ ಮತ ನೀಡುತ್ತಾರೆ ಎಂದು ಅಭ್ಯರ್ಥಿಗಳು ಭಾವಿಸಿದರು. ಆದರೆ ಫಲಿತಾಂಶ ಹೊರಬಿದ್ದಾಗ ಅವರಿಗೆ ಆಘಾತ ಕಾದಿತ್ತು. ಅವರಲ್ಲಿ ಒಬ್ಬರಿಗೂ ಕೂಡ ಗೆಲ್ಲಲಾಗಲಿಲ್ಲ. ಅವೇ ಸಾಂಪ್ರದಾಯಿಕ ಪಕ್ಷಗಳಿಗೇ ಜನರು ಮತ ನೀಡಿದ್ದರು.
ಹಾಗಿದ್ದರೆ ದೆಹಲಿ ತಾನು ಬೆಂಗಳೂರಿಗಿಂತ ಭಿನ್ನ ಎಂದು ರುಜುವಾತು ಮಾಡಬಲ್ಲದೇ? ಹಾಗೇನಾದರೂ ಆದರೆ ಭಾರತದ ರಾಜಕೀಯ ಇತಿಹಾಸದಲ್ಲಿ ಅದನ್ನೊಂದು ಮೈಲಿಗಲ್ಲೆಂದೇ ಪರಿಗಣಿಸಲಾಗುವುದು. ಕೊನೆ ಪಕ್ಷ ಕಿಂಗ್ ಮೇಕರ್ ಆಗಿ ಬದಲಾಗಲು ಅಥವಾ ಅತಂತ್ರ ವಿಧಾನಸಭೆಗೆ ಕಾರಣವಾಗಬಲ್ಲದೇ ಆ ಪಕ್ಷ? ಅದೆಲ್ಲ ಸಾಧ್ಯವೇ ಎನ್ನುವುದೇ ದೇಶದ ಮುಂದಿರುವ ಪ್ರಶ್ನೆ. ಈ ಬದಲಾವಣೆ ಸಾಧ್ಯವಾಗಬೇಕಾದರೆ ಮತದಾರರ ಮನಸ್ಥಿತಿಯೂ ಬದಲಾಗಬೇಕು. ಯಾರಿಗೆ ಗೊತ್ತು ದೆಹಲಿಯಲ್ಲಿ ಜಾದೂ ನಡೆದರೂ ನಡೆದೀತು!
'ಆಧಾರ್'ಖ್ಯಾತಿಯ ನಂದನ್ ನೀಲೆಕಣಿ ಅವರನ್ನೇ ತೆಗೆದುಕೊಳ್ಳಿ. ಅವರು ಈ ಬಾರಿ ಕಾಂಗ್ರೆಸ್ ಟಿಕೆಟ್‌ನ ಮೇಲೆ ದಕ್ಷಿಣ ಬೆಂಗಳೂರು ಕ್ಷೇತ್ರದಿಂದ ಚುನಾವಣೆ ಎದುರಿಸಬಹುದು. ಅದಾಗ್ಯೂ ನಂದನ್ ಇದುವರೆಗೂ ಈ ಬಗ್ಗೆ 'ಹೂಂ' ಅಥವಾ 'ಊಹೂಂ' ಎಂದು ಸ್ಪಷ್ಟವಾಗಿ ಹೇಳಿಲ್ಲವಾದರೂ, ಅವರಂತೂ ಗೆಲ್ಲುವ ಕುದುರೆಯೆಂದೇ ಹೇಳಬೇಕು. ಏಕೆಂದರೆ ಆ ಕ್ಷೇತ್ರದಲ್ಲಿ ವಿದ್ಯಾವಂತ ಮತದಾರರ ಸಂಖ್ಯೆ ಬಹಳಷ್ಟಿದೆ. ಹಾಗಾಗೆ ಭಾರಿ ಬಹುಮತದಿಂದ ಅವರು ಗೆಲುವು ಸಾಧಿಸಬಹುದು. ಆದರೂ ರಾಜಕೀಯೇತರ ವ್ಯಕ್ತಿಗಳು ಚುನಾವಣೆಗಳಲ್ಲಿ ಸೋತ ಉದಾಹರಣೆಗಳೇ ಹೆಚ್ಚಲ್ಲವೇ?
ನಂದನ್ ನೀಲೆಕಣಿ ಅವರ ವಿಷಯ ತುಸು ಭಿನ್ನ. ಅದಕ್ಕೆ ಕಾರಣಗಳು ಹಲವಾರು. ಒಂದು, ಅವರು ಅತಿ ಗೌರವಾನ್ವಿತ ಕನ್ನಡಿಗ ಮತ್ತು ವಿದ್ಯಾವಂತ ಸಮೂಹ ಅವರನ್ನು ಇಷ್ಟಪಡುತ್ತದೆ ಎಂಬುದು. ಎರಡು, ಅವರನ್ನು ಅಖಾಡಕ್ಕಿಳಿಸಲು ಕಾಂಗ್ರೆಸ್‌ನಂಥ ದೊಡ್ಡ ಪಕ್ಷವೊಂದು ಮನಸ್ಸು ಮಾಡಿದೆ ಎಂಬುದು. ಮೂರು, ಕಾಂಗ್ರೆಸ್ ರಾಜ್ಯದಲ್ಲಿ ಗೆಲ್ಲುವ ಸಾಧ್ಯತೆಗಳು ಹೆಚ್ಚಿರುವುದರಿಂದ, ಅವರ ಗೆಲುವಿನ ಸಾಧ್ಯತೆಗಳೂ ಹೆಚ್ಚಾಗುತ್ತದೆ ಎಂಬುದು.
ಹಾಗಾಗೇ ಈಗ ಸಮಂಜಸ ಪ್ರಶ್ನೆಯೊಂದು ಉದ್ಭವವಾಗುತ್ತದೆ. ಸ್ವತಂತ್ರ ಅಭ್ಯರ್ಥಿಯಾಗಿ ಅಥವಾ ಹೊಸ ರಾಜಕೀಯ ಪಕ್ಷದ ಅಭ್ಯರ್ಥಿಯಾಗಿ ಚುನಾವಣೆ ಎದುರಿಸುವ ಬದಲು ದೊಡ್ಡ ಪಕ್ಷಗಳನ್ನು ಸೇರಿ, ಟಿಕೆಟ್ ಪಡೆದು ಅಖಾಡಕ್ಕಿಳಿಯುವುದು ಒಳ್ಳೆಯದಲ್ಲವೇ? ಮತದಾರರು ಪರೀಕ್ಷೆಗೊಳಪಡದ ವ್ಯಕ್ತಿ/ ಪಕ್ಷಕ್ಕೆ ಮಣೆ ಹಾಕುವುದು ಕಷ್ಟವಾದ್ದರಿಂದ ಈ ಆಯ್ಕೆಯೇ ಸಮಂಜಸ ಎನಿಸುತ್ತದೆ. ಹೀಗೆ ಮಾಡುವ ಮೂಲಕ ಅವರು ಆ ದೊಡ್ಡ ಪಕ್ಷಗಳಲ್ಲಿ ಉತ್ತಮ ಸ್ಥಾನ ಪಡೆದು, ಆ ಪಕ್ಷದ ಮನವೊಲಿಸಿ ಸಮಾಜದಲ್ಲಿ ಸುಧಾರಣೆ ತರಬಹುದು. ರಾಜಕೀಯ ಪಕ್ಷಗಳಿಗೆ ಉತ್ತಮ ಅಭ್ಯರ್ಥಿಗಳ ಅವಶ್ಯಕತೆಯಿದೆ. ಉತ್ತಮ ಅಭ್ಯರ್ಥಿಗಳ ಅಭಾವದಿಂದಾಗಿಯೇ ಇಂದು ಅನರ್ಹ ವ್ಯಕ್ತಿಗಳು ಟಿಕೆಟ್ ಪಡೆದು ಅಟ್ಟಹಾಸಗೈಯುತ್ತಿದ್ದಾರೆ.
ಈಗ ಇದೆಲ್ಲವೂ ಆಮ್ ಆದ್ಮಿ ಪಕ್ಷದ ಸೋಲು ಗೆಲುವಿನ ಮೇಲೆ ಅವಲಂಬಿತವಾಗಲಿದೆ. ಒಂದು ವೇಳೆ ಅದು ಯಶಸ್ವಿಯಾದರೆ, ಸಾಂಪ್ರದಾಯಿಕ ಪಕ್ಷಗಳೆಲ್ಲ ತಮ್ಮ ಕಾರ್ಯವೈಖರಿಯನ್ನು ಬದಲಾಯಿಸಿಕೊಂಡು, ಉತ್ತಮ ಅಭ್ಯರ್ಥಿಗಳನ್ನು ಆರಿಸುವ ಕೆಲಸಕ್ಕೆ ಮುಂದಾಗುತ್ತವೆ. ಆಮ್ ಆದ್ಮಿ ಪಕ್ಷ ಯಾವ ಸುಧಾರಣೆಗಳ ಬಗ್ಗೆ ಮಾತನಾಡುತ್ತಿದೆಯೋ, ಅದೆಲ್ಲವನ್ನೂ ಅನುಷ್ಠಾನಕ್ಕೆ ತರುವುದು ಸುಲಭವಾಗುತ್ತದೆ. ಈಗ ಎಲ್ಲರ ನಜರು ದೆಹಲಿ ಮತ್ತು ಆಮ್ ಆದ್ಮಿ ಪಕ್ಷದ ಮೇಲಿದೆ.
ಕೊನೆಯ ಗುಟುಕು: ನಾಸಾ ಸಂಸ್ಥೆ, ನಿಮಗೆ ಒಂದು ತಿಂಗಳಿಗೆ 5000 ಡಾಲರ್‌ಗಿಂತಲೂ ಹೆಚ್ಚು ಹಣವನ್ನು ನೀಡಲು ಮುಂದಾಗಿದೆ. ಏನು ಕೆಲಸ ಮಾಡಬೇಕೆಂದಿರಾ? ಏನೂ ಮಾಡಬಾರದು! ಕೇವಲ 70 ದಿನ ಹಾಸಿಗೆಯ ಮೇಲೆ ಮಲಗಿರಬೇಕು. ಆದರೆ ಆ 70 ದಿನಗಳೂ ಸಮತಲವಾಗಿ ಮಲಗಬೇಕು. ಮೈಕ್ರೋಗ್ರ್ಯಾವಿಟಿಗೆ ಹೆಚ್ಚು ತೆರೆದುಕೊಂಡರೆ ವ್ಯಕ್ತಿಯಲ್ಲೇನು ಬದಲಾವಣೆಯಾಗುತ್ತದೆ ಎನ್ನುವುದನ್ನು ಪತ್ತೆ ಹಚ್ಚಲು ಈ ಕೆಲಸ(ಸವಾಲು?) ನೀಡಲು ಮುಂದಾಗಿದೆ ಅಮೆರಿಕದ ಈ ಬಾಹ್ಯಾಕಾಶ ಸಂಸ್ಥೆ. ಆದರೂ ಇದರಲ್ಲೊಂದು ಟ್ವಿಸ್ಟ್ ಇದೆ. ಇದರಲ್ಲಿ ಭಾಗವಹಿಸುವವರು ಅಮೆರಿಕದ ಪ್ರಜೆಗಳಾಗಿರಬೇಕು! ನಿಸ್ಸಂಶಯವಾಗಿಯೂ ಬಹಳಷ್ಟು ಭಾರತೀಯರು ಈ 'ಡ್ರೀಮ್ ಜಾಬ್‌ಗೆ' ಅರ್ಜಿ ಸಲ್ಲಿಸುತ್ತಿದ್ದರೇನೋ? ಆದರೆ ಅದು ಸಾಧ್ಯವಿಲ್ಲವಲ್ಲ....!
- ಎಚ್.ಎಸ್. ಬಲರಾಮ್
hsbalram@gmail.com