ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಅವರಿಗೇಕೆ, ಇವರಿಗೂ ಗೋಮಾಂಸ ಆಗುತ್ತಿರಲಿಲ್ಲ!

ಆ ಮಾಂಸ ಈ ಮಾಂಸ ತಿನ್ನಿರಿ ಎಂದು ಯಾವ ಧರ್ಮದಲ್ಲೂ ಉಲ್ಲೇಖವಿಲ್ಲ. ಸಮಯದ ಜೊತೆಗೆ ಆಹಾರ ಪದ್ಧತಿಯೂ ಬದಲಾಗುತ್ತಾ ಹೋಗುತ್ತದೆ...

Vishwanath S
Updated On : 27 Sept 2013, 12:06 pm

ಆ ಮಾಂಸ ಈ ಮಾಂಸ ತಿನ್ನಿರಿ ಎಂದು ಯಾವ ಧರ್ಮದಲ್ಲೂ ಉಲ್ಲೇಖವಿಲ್ಲ. ಸಮಯದ ಜೊತೆಗೆ ಆಹಾರ ಪದ್ಧತಿಯೂ ಬದಲಾಗುತ್ತಾ ಹೋಗುತ್ತದೆ

"ನರೇಂದ್ರಮೋದಿ ಪ್ರಧಾನಿಯಾದರೆ ನಾನು ಬದುಕಿರಲಾರೆ" ಎಂದಿದ್ದ ಯು.ಆರ್. ಅನಂತಮೂರ್ತಿಯುವರು ಈಗ "ನರೇಂದ್ರ ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುತ್ತೇನೆ ಎಂದೇನಿಲ್ಲ. ಆದರೆ ಅವರು(ಮೋದಿ) ಕೋಮುವಾದಿ. ಗುಜರಾತಿನಲ್ಲಿ ನರಮೇಧ ನಡೆಯಲು ಕಾರಣಕರ್ತರು. ಒಬ್ಬ ಲೇಖಕನಾಗಿ ಆ ಬಗ್ಗೆ ಮಾತನಾಡಲು ನಾನು ಅರ್ಹನಲ್ಲವೆ?" ಎಂದಿದ್ದಾರೆ. ಅಭಿಪ್ರಾಯವನ್ನು ತಿಳಿಸುವ ಅಧಿಕಾರ ಅವರಿಗಿದೆ. ಇಲ್ಲವೆಂದು ಯಾರೂ ಹೇಳುತ್ತಿಲ್ಲ. ಆದರೆ ಅವರ ಅಭಿಪ್ರಾಯ ಕ್ಷಣಕ್ಕೊಮ್ಮೆ ಬದಲಾಗುತ್ತದಲ್ಲ? ಜ್ಞಾನಪೀಠದಂತಹ ಸನ್ಮಾನಕ್ಕೆ ಪಾತ್ರರಾಗಿರುವ ಮೂರ್ತಿಯವರು ದಿನಕ್ಕೊಂದು ಗೊಂದಲಮಯ ಹೇಳಿಕೆ ನೀಡುತ್ತಿರುವುದು ಎಷ್ಟರಮಟ್ಟಿಗೆ ಸರಿ?ಸ್ವಾತಂತ್ರ್ಯಾ ನಂತರ ನಮ್ಮ ಸಾಹಿತ್ಯ ವಲಯ ಕೂಡ ಬದಲಾಗುತ್ತಾ ಹೋಯಿತು. ಕೆಲವರು ದೇಶದಲ್ಲಿ ನಡೆಯುವ ಸಮಾಜದ್ರೋಹಿ ಕೃತ್ಯಗಳನ್ನು, ಆಗು ಹೋಗುಗಳನ್ನು ಎತ್ತಿ ಹಿಡಿಯುವ ಕೆಲಸ ಮಾಡಿದರು. ಇನ್ನೂ ಕೆಲವರು ರಾಜಕೀಯ ಆಮಿಷಕ್ಕೆ ಒಳಗಾಗಿ,  ಸಮಯಕ್ಕೆ ತಕ್ಕಂತೆ ಕುಣಿದು ತಮ್ಮ ಬೇಳೆ ಬೇಯಿಸಿಕೊಂಡರು.ಅನಂತಮೂರ್ತಿಯವರು ಯಾವ ಗುಂಪಿಗೆ ಸೇರಿದವರು?
 ಸಾಹಿತಿಗಳಿಂದ ಸಮಾಜಕ್ಕೆ ಹಿತವಾಗಬೇಕೇ ವಿನಃ ಗೊಂದಲವಾಗಬಾರದು. ಒಂದು ಬಾರಿ ನರೇಂದ್ರ ಮೋದಿ ಬೇಡ ಅಂತೀರಿ. ಈಗ ರಾಹುಲ್ ಬೇಡ ಅಂದರೂ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಿದ್ದೀರಿ. ಮೂರ್ತಿಯವರು ಕಾಂಗ್ರೆಸ್ ವಕ್ತಾರರೇನೋ ಎನ್ನುವ ಅನುಮಾನ ಮೂಡುತ್ತಿದೆ. ಯಾವೊಬ್ಬ ಸಾಹಿತಿಯೇ ಆಗಲಿ ಆತ ರಾಜಕೀಯ ಆಮಿಷಕ್ಕೆ ಒಳಗಾಗಬಾರದು. ಸಾಹಿತಿಗಳಿಗೆ ಸರಿ ತಪ್ಪುಗಳ ಬಗ್ಗೆ ಜ್ಞಾನವಿರುತ್ತದೆ ಎಂದು ಜನ ನಂಬುತ್ತಾರೆ. ಅವರು ತೋರುವ ಹಾದಿ ಸರಿಯಾದುದು ಎಂದು ಭಾವಿಸುತ್ತಾರೆ. ಆದರೆ ಇದನ್ನೇ ಬಂಡವಾಳವಾಗಿಟ್ಟುಕೊಂಡು ತಮಗೆ ಅನುಕೂಲಕರವಾಗಿರುವ ಹಾದಿಯೇ ಸರಿ, ಅಲ್ಲೇ ನೀವೂ ನಡಿಯಿರಿ ಎಂದು ಜನರನ್ನು ಕೊಂಡೊಯ್ಯುವ ಪ್ರಯತ್ನ ಮಾಡುತ್ತಾರೆ ಕೆಲ ಬುದ್ಧಿಜೀವಿಗಳು. ಅದಾಗ್ಯೂ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಿಗೆ ತಮ್ಮದೇ ಆದ ಹಕ್ಕಿದೆ. ಸರಿ, ತಪ್ಪುಗಳ ವಿಮರ್ಶೆ ಮಾಡುವ ಅಧಿಕಾರ/ ಪ್ರಜ್ಞೆ ಅವರಿಗಿದೆ. ಅದು ಅವರಿಗೆ ಬಿಟ್ಟ ವಿಚಾರ. ಆದರೆ ಅನಂತಮೂರ್ತಿಯವರು ತಾವು ತೋರಿಸಿದ ಹಾದಿಯಲ್ಲೇ ಜನ ನಡೆಯಬೇಕು ಎನ್ನುವ ಧಾಟಿಯಲ್ಲಿ ಮಾತನಾಡುತ್ತಿದ್ದಾರೆ.
"ಬ್ರಾಹ್ಮಣರು ಗೋಮಾಂಸವನ್ನು ತಿನ್ನುತ್ತಿದ್ದರು ಎಂದು ವೇದಗಳಲ್ಲಿ ಹೇಳಲಾಗಿದೆ" ಎನ್ನುತ್ತಾರೆ ಮೂರ್ತಿಯವರು. ಅವರು ಏಕಾಗಿ ಈಗ ಈ ಮಾತನ್ನು ಹೇಳುತ್ತಿದ್ದಾರೆ? ಅಂದರೆ ಗೋಮಾಂಸ ತಿನ್ನಬೇಕೆಂದು/ತಿಂದರೆ ತಪ್ಪಿಲ್ಲ ಎಂದು ಅವರು ಪ್ರೇರಣೆ ನೀಡುತ್ತಿದ್ದಾರಾ? ಇದೇನೇ ಇದ್ದರೂ, ಒಂದು ವಿಷಯವನ್ನು ಅವರ ಗಮನಕ್ಕೆ ತರಲು ಬಯಸುತ್ತೇನೆ. ದನ ತಿನ್ನೋದು ತಪ್ಪೆಂದು ನಮ್ಮ ಪೈಗಂಬರರು ಕೂಡಾ ತಿಳಿಹೇಳಿದ್ದಾರೆ. ಪ್ರವಾದಿ ಪೈಗಂಬರರು ಒಟ್ಟು ಒಂದು ಲಕ್ಷ ಎಂಭತ್ತು ಸಾವಿರ (1,80,000) ಇದ್ದರು. ಅವರೆಲ್ಲರೂ ದನದ ಮಾಂಸ ಭಕ್ಷಿಸುವುದು ತಪ್ಪೆಂದಿದ್ದಾರೆ. ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಗಂಡಿಹಳ್ಳಿಮಠದಲ್ಲಿ ಹಜರತ್ ಬುಡೇನ್‌ಷಾವಲಿ ದರ್ಗಾ ಇದೆ. ಅಲ್ಲಿ ಈಗಲೂ ಗೊಲ್ಲ ಜನಾಂಗದವರೇ ಬುದೇನ್‌ಷಾವಲಿಗೆ ಪೂಜೆ ಮಾಡುತ್ತಾರೆ. ದರ್ಗಾ ಒಳಗೆ ಗೊಲ್ಲರು ಸಂಜೆ ನೈವೇದ್ಯ ಮಾಡುತ್ತಾರೆ. ದರ್ಗಾದಲ್ಲಿ ಗೊಲ್ಲರೇಕೆ ಪೂಜೆ ಮಾಡುತ್ತಾರೆಂದರೆ, ಬುಡೇನ್‌ಷಾವಲಿಗೆ ಗೊಲ್ಲನೊಬ್ಪ ಬಹಳ ನಿಷ್ಠೆಯಿಂದ ಪೂಜೆ ಮಾಡುತ್ತಿದ್ದನಂತೆ. ಆಗ ಅವನಿಗೆ ಒಲಿದಿದ್ದರಂತೆ ಬುಡೇನ್‌ಷಾವಲಿ! ಇದನ್ನರಿತ ಕೆಲವು ಮುಸ್ಲಿಮರು ಅವನನ್ನು ಪರೀಕ್ಷಿಸಲೆಂದೇ ಒಂದು ಭೋಜನ ಕೂಟ ಇಟ್ಟರಂತೆ. ಆತನ ಮುಂದೆ ದನದ ಮಾಂಸದ ತುಂಡುಗಳನ್ನು ಇಟ್ಟು ಅದನ್ನು ತಿನ್ನಲು ಹೇಳಿದರಂತೆ. ಗೊಲ್ಲನು ಬುಡೇನ್‌ಷಾವಲಿ ಹೆಸರು ಸ್ಮರಿಸಿ ಅದನ್ನು ಮುಟ್ಟಿದ ತಕ್ಷಣವೇ ಆ ತಟ್ಟೆಯಲ್ಲಿನ ಸಂಪೂರ್ಣ ಆಹಾರ ಮಲ್ಲಿಗೆ ಹೂವಾಗಿ ಬದಲಾಯಿತಂತೆ. ಅಂದಿನಿಂದ ಮುಸಲ್ಮಾನರು ಗೊಲ್ಲರಿಗೆ ಆ ದೇವಾಲಯದಲ್ಲಿ ಪೂಜೆ ನಡೆಸಲು ಅನುವು ಮಾಡಿಕೊಟ್ಟರಂತೆ.  ಹಾಗಾಗಿ ಈಗಲೂ ಅಲ್ಲಿ ಗೊಲ್ಲರೇ ಪೂಜೆ ಮಾಡುತ್ತಾರೆ.
ದಾವಣಗೆರೆ ಜಿಲ್ಲೆ ಬಾತಿಯಲ್ಲಿರುವ "ಚಮನಷಾವಲಿ" ದರ್ಗಾದಲ್ಲೂ ಕೂಡ ದನದ ಮಾಂಸದ ನೈವೇದ್ಯ ನಡೆಯೋಲ್ಲ. ದತ್ತ ಪೀಠವಾಗಿರುವ ಚಿಕ್ಕಮಗಳೂರಿನ ಬಾಬಾಬುಡನ್‌ಗಿರಿ, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹಣಗೆರೆಕಟ್ಟೆಯ "ಹಜರತ್ ಸೈಯದ್ ಸಾದತ್‌" ದರ್ಗಾ, ದುರ್ಗದ ಅಬ್ದುಲ್ ಷಾವಲಿ, ಗುಲ್ಬರ್ಗಾದ ಖಾಜಾಬಂದೇ ನವಾಜ್ ಷಾವಲಿ...ಇಲ್ಲೆಲ್ಲ ಕೇವಲ ಕುರಿ ಕೋಳಿಯ ನೈವೇದ್ಯ ಮಾತ್ರ. ಹೀಗೆ ಬರೆಯುತ್ತಾ ಹೋದರೆ ಕರ್ನಾಟಕದಲ್ಲಿ ಮಾತ್ರವಲ್ಲದೇ ದೇಶದ್ಯಾಂತ ಇರುವ ಪ್ರವಾದಿ ಪೈಗಂಬರರ ದರ್ಗಾಗಳಲ್ಲಿ ಕೇವಲ ಕೋಳಿ ಕುರಿ ಮಾತ್ರ ಭಕ್ಷಿಸುತ್ತಾರೆ. ಪ್ರವಾದಿ ಪೈಗಂಬರರನ್ನು ಪೂಜಿಸುವ ಮುಸಲ್ಮಾನರು ಈಗಲೂ ದನದ ಮಾಂಸ ಭಕ್ಷಿಸುವುದಿಲ್ಲ. ಈ ರೀತಿ ಆಗಲು ಮುಸ್ಲಿಂ ಪ್ರವಾದಿಗಳ ಪ್ರವಚನಗಳೇ ಕಾರಣವಿದ್ದಿರಬಹುದು.  ಇದು ನಂಬಿಕೆಗೆ ಸಂಬಂಧಪಟ್ಟ ವಿಚಾರ. ಇದರಲ್ಲಿ ಗೋಮಾತೆಗೆ ಅವರುಗಳಿಗಿದ್ದ ಗೌರವ ಕಾಣಿಸುತ್ತದಲ್ಲವೇ? ಹಾಗೆಯೇ ಹಿಂದುಗಳಿಗೂ ಒಂದು ನಂಬಿಕೆಯಿದೆ. ಅವರು ಆ ಪ್ರಾಣಿಯನ್ನು ತಾಯಿಯಂತೆ ಕಾಣುತ್ತಾರೆ. ಹಜರತ್ ರಸೂಲುಲ್ಲಾ, ಸಲ್ಲಲೇಹು ಸಲ್ಲಂ ಕೂಡ ದನ ತಿಂದಿಲ್ಲ.  ಆ ಮಾಂಸ ಈ ಮಾಂಸ ತಿನ್ನಿರಿ ಎಂದು ಯಾವ ಧರ್ಮದಲ್ಲೂ ಉಲ್ಲೇಖವಿಲ್ಲ. ಸಮಯದ ಜೊತೆಗೆ ಆಹಾರ ಪದ್ಧತಿಯೂ ಬದಲಾಗುತ್ತಾ ಹೋಗುತ್ತದೆ. ವೇದ ಕಾಲ, ಶಿಲಾಯುಗದ ಕಾಲದಿಂದಲೂ ಅಂದರೆ ಮನುಕುಲ ಹುಟ್ಟಿದ್ದಾಗಿನಿಂದಲೂ ಆಹಾರ ಪದ್ಧತಿ ಬದಲಾಗುತ್ತಾ ಹೋಗಿದೆ. ಮೊದ ಮೊದಲು ಮಾಂಸವನ್ನು ಹೇರಳವಾಗಿ ಬಳಸಲಾಗುತ್ತಿತ್ತು, ಕಾಲಕ್ರಮೇಣ ಸಮಾಜ ಸರಿಯಾದ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳುತ್ತಾ ಸಾಗಿತು. ಹಿಂದೆ ಯಾರೋ ಏನೋ ತಿಂದರು ಎನ್ನುವ ಕಾರಣಕ್ಕೆ ಈಗಲೂ ಅದೇ ಸರಿ ಎನ್ನುವ ವಾದಕ್ಕೆ ಅರ್ಥವಿದೆಯೇ? ಹಿಂದೆ ಶಿಲಾಯುಗದಲ್ಲಿ ಮನುಷ್ಯ ಮನುಷ್ಯನನ್ನೇ ತಿನ್ನುತ್ತಿದ್ದನಲ್ಲ?
ನಿಮ್ಮ ಮಾತಿನ ಅರ್ಥವೇನೋ ತಿಳಿಯುತ್ತಿಲ್ಲ. ನಮ್ಮ ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ ಎನ್ನುವ ಕಾರಣಕ್ಕೆ ಮನಸ್ಸಿಗೆ ಬಂದಂತೆ ಮಾತನಾಡಬೇಡಿ. ನಿಮ್ಮ ಸಿದ್ಧಾಂತಗಳನ್ನು, ನಂಬಿಕೆಗಳನ್ನು ದಯವಿಟ್ಟು ಜನರ ಮೇಲೆ ಹೇರಬೇಡಿ. ನೀವು ಹೇಳಿದ್ದೇ ಸರಿ ಎನ್ನುವ ಧೋರಣೆ ಬೇಡ. ಜನರಿಗೆ ಏನು ಇಷ್ಟವೋ ಅದನ್ನು ಮಾಡುತ್ತಾರೆ ಬಿಡಿ ಮೂರ್ತಿಗಳೇ...

- ಬಿ ಮೊಹಿದ್ದೀನ್‌ಖಾನ್, ಚಿತ್ರದುರ್ಗ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement